Connect with us

Politics

ರಾಜೇಗೌಡ ಶಾಸಕ ಸ್ಥಾನ ಮರುಸ್ಥಾಪನೆ‌ : ಶೃಂಗೇರಿ ಕ್ಷೇತ್ರದಲ್ಲಿ ಬಿಗ್ ಟ್ವಿಸ್ಟ್: ಮರು ಮತ ಎಣಿಕೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

Published

on

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಹಗ್ಗಜಗ್ಗಾಟ ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಅಂಚೆ ಮತಗಳ ಮರು ಮತ ಎಣಿಕೆ ಫಲಿತಾಂಶಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನವನ್ನು ಮರುಸ್ಥಾಪಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಅಂಚೆ ಮತಗಳ ಮರು ಮತ ಎಣಿಕೆಯಲ್ಲಿ ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆಂದು ಘೋಷಿಸಲಾಗಿತ್ತು. ಚುನಾವಣಾ ಆಯೋಗವು ಅವರಿಗೆ ಗೆಲುವಿನ ಪ್ರಮಾಣಪತ್ರವನ್ನೂ ನೀಡಿತ್ತು.

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಜೇಗೌಡ: ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಿವಿಲ್ ಮೇಲ್ಮನವಿ ಸಲ್ಲಿಸಿದ್ದರು. “ಹಿಂದೆ ಸಿಂಧುವಾಗಿದ್ದ ಮತಗಳು ಮರು ಎಣಿಕೆಯಲ್ಲಿ ಅಸಿಂಧುವಾಗಿವೆ ಹಾಗೂ ಮತಪತ್ರಗಳಿದ್ದ ಕವರ್‌ಗಳ ಸೀಲ್ ಒಡೆಯಲಾಗಿತ್ತು” ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದರು.

ನ್ಯಾಯಾಲಯದ ಆದೇಶ: ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ವಿನೋದ್ ಚಂದ್ರ ಅವರಿದ್ದ ಪೀಠ, ಡಿ.ಎನ್. ಜೀವರಾಜ್ ಅವರನ್ನು ಶಾಸಕರನ್ನಾಗಿ ಘೋಷಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಅಷ್ಟೇ ಅಲ್ಲದೆ, ಹಾಲಿ ಶಾಸಕರಾಗಿದ್ದ ರಾಜೇಗೌಡ ಅವರ ಸ್ಥಾನವನ್ನು ಮರುಸ್ಥಾಪಿಸಿ ಆದೇಶ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ.

ಸತ್ಯಕ್ಕೆ ಜಯ ಸಿಗಲಿದೆ – ಕಾಂಗ್ರೆಸ್ ವಿಶ್ವಾಸ: ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮರೊಳ್ಳಿ, “ಮರು ಮತ ಎಣಿಕೆಯಲ್ಲಿ ನಮಗೆ ಅನ್ಯಾಯವಾಗಿತ್ತು. ಬಿಜೆಪಿ ಅಭ್ಯರ್ಥಿ ಮತ್ತು ಅವರ ಸಹಚರರು ಅಕ್ರಮ ಎಸಗಿದ್ದರು. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ

Published

on

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.

ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.

ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.

Continue Reading

CONGRESS

ಮಂಗಳೂರು ಸಚಿವ ಸಂಪುಟ ಸಭೆ: ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಬಿಗಿ ಭದ್ರತೆ

Published

on

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಶುಕ್ರವಾರ (ಸೆಪ್ಟೆಂಬರ್ 18) ಆಯೋಜಿಸಲಾದ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಆಗಮಿಸಿದ ವೇಳೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಅಬ್ದುಲ್ ರಹೀಮಾನ್ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಕಪ್ಪುಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ, ಜೈಲ್ ಜಾಮರ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಕೀಲರನ್ನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಿ.ಪಿ.ಐ.ಎಂ. ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ತುಳು ಸಂಘಟನೆಯವರು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ‌ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಡೀಲ್‌ನಲ್ಲಿರುವ ಪ್ರಜ್ಞಾಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 33 ಮಂದಿ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಯಾ ಸಭಾಂಗಣದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಸಭೆ ಸ್ವಲ್ಪ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Continue Reading

CONGRESS

ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯ ವಿಶೇಷ ಸಚಿವ ಸಂಪುಟ ಸಭೆ: ಸಿಎಂ ಹಾಗೂ ಸಚಿವರ ಭೇಟಿ ಮತ್ತು ಕಾರ್ಯಕ್ರಮಗಳ ವರದಿ

Published

on

ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ರಾಜ್ಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಗಮಿಸಿದ್ದು, ನಗರದಲ್ಲಿ ಬಿರುಸಿನ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಿವೆ.

ಕದ್ರಿ ದೇವಸ್ಥಾನ ಭೇಟಿ ಮತ್ತು ಗಾಂಧೀಜಿ ಸ್ಮರಣೆ

ಪ್ರವಾಸದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳು ಐತಿಹಾಸಿಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, 1934ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಐತಿಹಾಸಿಕ ಮನೆಯ ಸಮೀಪವಿರುವ ಗಾಂಧಿ ಸ್ಕ್ವೇರ್ ಕೆಫೆಗೆ ತೆರಳಿದರು.

ಯುವ ಕಂಟೆಂಟ್‌ ಕ್ರಿಯೇಟರ್ಸ್‌ ಜೊತೆ ಉಪಾಹಾರ ಹಾಗೂ ಸಂವಾದ

ಮಂಗಳೂರಿನ ಯುವ ಸೋಶಿಯಲ್ ಮೀಡಿಯಾ ಕಂಟೆಂಟ್‌ ಕ್ರಿಯೇಟರ್‌ಗಳೊಂದಿಗೆ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಿಎಂ ಸಂವಾದ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ವಿಶಿಷ್ಟ ಉಪಾಹಾರಗಳನ್ನು ಸವಿದ ಅವರು, “ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಜನರ ಬದುಕು ಮುಖ್ಯ – ಸಿಎಂ ಸ್ಪಷ್ಟನೆ

ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.

ಸಂಪುಟ ಸಭೆಗೆ ಭರ್ಜರಿ ಸ್ವಾಗತ ಮತ್ತು ಸಿದ್ಧತೆ

ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್‌ವೆಲ್‌ನಿಂದ ಪಡೀಲ್ ವರೆಗೆ ಚೆಂಡೆ ಬ್ಯಾಂಡ್‌ಗಳು ಹಾಗೂ ವಿವಿಧ ವೇಷಧಾರಿಗಳ ಸಾಂಸ್ಕೃತಿಕ ತಂಡಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮುಖ್ಯಮಂತ್ರಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆ ಬದಿ ಕಾದು ನಿಂತಿದ್ದಾರೆ.

Continue Reading

Trending

Copyright © 2025 Deevatige

error: Content is protected !!