Connect with us

arrest

ಬೆಂಗಳೂರಿನಲ್ಲಿ ಭೀಕರ ಸರಣಿ ಹತ್ಯಾಕಾಂಡ: ಕೌಟುಂಬಿಕ ಕಲಹಕ್ಕೆ ಪತ್ನಿ ಸೇರಿ ಏಳು ಮಂದಿಯ ಬಲಿ ಪಡೆದ ಕ್ಯಾಬ್ ಚಾಲಕ!

Published

on

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ತಲೆಬಾಗಿಸುವಂತಹ ಭೀಕರ ಹಾಗೂ ದುರಂತಮಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಮನಸ್ತಾಪ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ನಡೆದಿರುವ ಈ ಸರಣಿ ಹತ್ಯಾಕಾಂಡ ನಗರದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ದುರ್ದೈವಿಗಳು:

ಶ್ರೀರಾಮಪುರದ ನಿವಾಸಿಗಳಾದ:

  1. ರೂಪವತಿ (ಅತ್ತೆ)
  2. ಸುನೀತಾ (ಪತ್ನಿ)
  3. ಶಿವಕುಮಾರ್‌ (ಭಾವ)
  4. ಶಂಕರ್‌ (ಭಾವ)
  5. ದಿವ್ಯಾ (ಶಿವಕುಮಾರ್ ಪತ್ನಿ/ಸೊಸೆ)
  6. ನಳಿನಿ (ಶಂಕರ್ ಪತ್ನಿ/ಸೊಸೆ)
  7. ಪುನೀತ್‌ (ಮೊಮ್ಮಗ)

ದುರಂತದ ಹಿನ್ನೆಲೆ: ತವರು ಮನೆಯ ಒಡನಾಟವೇ ಕೊಲೆಗೆ ಕಾರಣ?

ಸುಮಾರು 20 ವರ್ಷಗಳ ಹಿಂದೆ ಇಂದುಶೇಖರ್ ಮತ್ತು ಸುನೀತಾ ಅವರ ವಿವಾಹವಾಗಿತ್ತು. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ಈ ದಂಪತಿ ವಾಸವಾಗಿದ್ದರು. ಆರಂಭದಲ್ಲಿ ಚನ್ನಾಗಿದ್ದ ಸಂಸಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು.

ಸುನೀತಾ ಅವರು ತಮ್ಮ ತಾಯಿ ರೂಪಾವತಿ ಹಾಗೂ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಜೊತೆ ಹೆಚ್ಚು ನಿಕಟ ಬಾಂಧವ್ಯ ಹೊಂದಿದ್ದರು. ತವರು ಮನೆಗೆ ಆಗಾಗ್ಗೆ ತೆರಳುತ್ತಿದ್ದ ಪತ್ನಿಯ ನಡವಳಿಕೆಗೆ ಇಂದುಶೇಖರ್ ನಿರ್ಬಂಧ ವಿಧಿಸಿದ್ದ. ಆದಾಗ್ಯೂ ಸುನೀತಾ ತವರಿನೊಂದಿಗಿನ ಸಂಬಂಧವನ್ನು ಕಡಿದುಕೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ, ತನ್ನ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪತ್ನಿಯ ತವರು ಮನೆಯವರೇ ಕಾರಣ ಎಂದು ನಂಬಿ, ಇಡೀ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಹಂತ ಹಂತವಾಗಿ ನಡೆದ ಭೀಕರ ಹತ್ಯಾಕಾಂಡ:

ಪತ್ನಿಯ ಕೊಲೆ ಹಾಗೂ ಶವ ವಿಲೇವಾರಿ:ಮೊದಲು ಪತ್ನಿ ಸುನೀತಾಳ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ ಆರೋಪಿ, ಶವವನ್ನು ತನ್ನ ಕಾರಿನಲ್ಲಿ ಸಾಗಿಸಿ ನಂದಿ ಬೆಟ್ಟದ ತಪ್ಪಲಿನಲ್ಲಿ ಎಸೆದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ “ಆಕೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ” ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಿ, ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.

ಮದ್ಯದ ಪಾರ್ಟಿ ನೆಪದಲ್ಲಿ ಇಬ್ಬರ ಹತ್ಯೆ:ತನ್ನ ಸಂಚಿನ ಎರಡನೇ ಹಂತವಾಗಿ ಪತ್ನಿಯ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿಕೊಂಡು ಮದ್ಯದ ಪಾರ್ಟಿ ಏರ್ಪಡಿಸಿದ್ದ. ಕುಡಿತದ ಅಮಲಿನಲ್ಲಿದ್ದಾಗ ಅವರಿಬ್ಬರನ್ನೂ ಅದೇ ರುಬ್ಬುಗುಂಡಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಸೊಸೆಯಂದಿರು, ಅತ್ತೆ ಮತ್ತು ಮಗುವಿನ ಬಲಿ:ಬಳಿಕ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಅವರ ಸಣ್ಣ ಮಗ ಪುನೀತ್‌ನನ್ನು ಒಬ್ಬೊಬ್ಬರಾಗಿ ಮನೆಗೆ ಕರೆಸಿಕೊಂಡು ಅತ್ಯಂತ ಪಾತಕ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ.

ಸಾಕ್ಷ್ಯ ನಾಶಕ್ಕೆ ಕಠಿಣ ಪ್ರಯತ್ನ:ಕೊಲೆಯ ಬಳಿಕ ಏಳೂ ಮೃತದೇಹಗಳನ್ನು ಒಂದೇ ಸ್ಥಳದಲ್ಲಿ ಇರಿಸದೆ, ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾನೆ. ಮನೆಗೆ ಮರಳಿ ರಕ್ತದ ಕಲೆಗಳನ್ನು ತಳೆದು ಶುಚಿಗೊಳಿಸಿದ್ದಲ್ಲದೆ, ಕೃತ್ಯಕ್ಕೆ ಬಳಸಿದ್ದ ರುಬ್ಬುಗುಂಡನ್ನು ಕೆಮಿಕಲ್ ಬಳಸಿ ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

    ಮಗಳು ನಳಿನಿ ದಿಢೀರನೆ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಇಂದುಶೇಖರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಅಸಲಿ ಭೀಕರ ಸರಣಿ ಹತ್ಯೆಯ ಕರಾಳ ಮುಖ ಅನಾವರಣಗೊಂಡಿದೆ.

    ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಚುರುಕು:

    ಪ್ರಸ್ತುತ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ನಂದಿ ಬೆಟ್ಟ ಸೇರಿದಂತೆ ಹಲವು ಕಡೆ ಶೋಧ ನಡೆಸಲಾಗಿದ್ದು, ಮಗು ಪುನೀತ್‌ನ ಮೃತದೇಹ ಪತ್ತೆಯಾಗಿದೆ.

    ಉಳಿದ ಆರು ಮಂದಿಯ ಮೃತದೇಹಗಳ ಪತ್ತೆಗಾಗಿ ಉತ್ತರ ವಿಭಾಗದ ಮೂವರು ಎಸಿಪಿಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ. ಹತ್ಯೆ ನಡೆದ ಸ್ಥಳ, ಶವ ಸಾಗಿಸಿದ ಮಾರ್ಗ ಹಾಗೂ ಸಾಕ್ಷ್ಯ ನಾಶದ ಪ್ರಯತ್ನಗಳ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    arrest

    ಮಂಗಳೂರು: 3.8 ಕೆ.ಜಿ. ಗಾಂಜಾ ಸಹಿತ ಪುತ್ತೂರಿನ ಯುವಕ ಅರೆಸ್ಟ್!

    Published

    on

    ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತೂರು ತಾಲೂಕಿನ 23 ವರ್ಷದ ಯುವಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ, ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

    ನವೆಂಬರ್ 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಗಾಂಜಾ ಮಾರಾಟಕ್ಕೆ ತಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪವಿಭಾಗದ ಎಸಿಪಿ ತಂಡ ಹಾಗೂ ಪಣಂಬೂರು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು.

    ಈ ವೇಳೆ ಪುತ್ತೂರು ತಾಲೂಕಿನ ಪಡ್ನೂರು ಅಂಚೆ ವ್ಯಾಪ್ತಿಯ ಪಡ್ಡಾಯೂರ್ ಹೌಸ್ ನಿವಾಸಿ ಮೊಹಮ್ಮದ್ ನಿಸಾರ್ (23) ಎಂಬಾತನನ್ನು ಬಂಧಿಸಲಾಯಿತು. ಆತನ ಬಳಿಯಿದ್ದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹1.90 ಲಕ್ಷ), ₹4 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು (ಅಂದಾಜು ಮೌಲ್ಯ ₹2 ಲಕ್ಷ) ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಕೂಡ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಶಪಡಿಸಿಕೊಂಡ ಗಾಂಜಾ, ಮೊಬೈಲ್ ಹಾಗೂ ಕಾರಿನ ಒಟ್ಟು ಅಂದಾಜು ಮೌಲ್ಯ ₹3.94 ಲಕ್ಷವಾಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

    Continue Reading

    arrest

    ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷ ಮೌಲ್ಯದ 100 LSD ಸ್ಟ್ರಿಪ್‌ಗಳ ವಶ, ಇಬ್ಬರ ಬಂಧನ

    Published

    on

    ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಲ್‌ಎಸ್‌ಡಿ (LSD – Lysergic Acid Diethylamide) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಿಂದ ಸುಮಾರು ₹3,00,000 ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳು ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಒಟ್ಟು ಸ್ವತ್ತಿನ ಮೌಲ್ಯ ₹3,35,000 ಎಂದು ಅಂದಾಜಿಸಲಾಗಿದೆ.

    ಬೆಂಗಳೂರಿನಿಂದ ಸರಬರಾಜು, ಪಡೀಲ್‌ನಲ್ಲಿ ಸೆರೆ

    ಆರೋಪಿಗಳು ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಖರೀದಿಸಿ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ 2026ರ ನವೆಂಬರ್ 3ರಂದು ಮಧ್ಯಾಹ್ನ ಮಂಗಳೂರಿನ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ದಾಳಿ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

    ಬಂಧಿತ ಆರೋಪಿಗಳ ವಿವರ:

    1. ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30 ವರ್ಷ) – ವಾಸ: ತುಂಬೆ ಪ್ಲಾಜಾ, ಅಳಪೆ, ಪಡೀಲ್, ಮಂಗಳೂರು.
    2. ಸಿದ್ದಾರ್ಥ ಶೆಟ್ಟಿ (35 ವರ್ಷ) – ವಾಸ: ಈಮಿಲೇ ಮ್ಯಾನ್ಷನ್ ಅಪಾರ್ಟ್‌ಮೆಂಟ್, ದಡ್ಡಲ್‌ಕಾಡ್, ಉರ್ವಸ್ಟೋರ್, ಮಂಗಳೂರು.

    ಹಳೆಯ ಅಪರಾಧ ಹಿನ್ನೆಲೆ:

    ಬಂಧಿತ ಆರೋಪಿಗಳ ಪೈಕಿ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿತ್ತು. ಮತ್ತೊಬ್ಬ ಆರೋಪಿ ಸಿದ್ದಾರ್ಥ ಶೆಟ್ಟಿ ವಿರುದ್ಧ ನಗರದ ಬರ್ಕೆ ಹಾಗೂ ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಮತ್ತು ಗಾಂಜಾ ಮಾರಾಟ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.

    ತನಿಖೆ ಮುಂದುವರಿಕೆ

    ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಲ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಭರದಿಂದ ಸಾಗಿದೆ.

    Continue Reading

    arrest

    ಪೆರ್ಡೂರು ಪ್ರದೀಪ್ ಪೂಜಾರಿ ಹಲ್ಲೆ, ಆತ್ಮಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಮಧ್ಯಪ್ರದೇಶದಲ್ಲಿ ಬಂಧನ..

    Published

    on

    ​ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ (28) ಅವರ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ​

    ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು, ವಶಕ್ಕೆ ಪಡೆದಿರುವ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದೆ. ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಪಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ​

    ಪ್ರಕರಣದ ಹಿನ್ನೆಲೆ:​

    ಪೆರ್ಡೂರಿನ ಪ್ರದೀಪ್ ಪೂಜಾರಿ ಅವರ ಮೇಲೆ ಅಕ್ಟೋಬರ್ 27ರ ರಾತ್ರಿ ಶ್ರಾವ್ಯಾ ಶೆಟ್ಟಿ ಕುಟುಂಬದವರು ಮೂರು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಭೀಕರವಾಗಿ ಹಲ್ಲೆ ನಡೆಸಿದ್ದರು ಎಂದು ಪ್ರದೀಪ್ ಅವರ ಸಹೋದರ ದಿಲೀಪ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಪ್ರದೀಪ್ ಅಕ್ಟೋಬರ್ 28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಕ್ಟೋಬರ್ 30ರ ಸಂಜೆ 5:30ರ ಸುಮಾರಿಗೆ ಆಸ್ಪತ್ರೆಯ ಶೌಚಾಲಯದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ​ಈ ಘಟನೆಗೆ ಸಂಬಂಧಿಸಿದಂತೆ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.

    ವಿಶೇಷ ತಂಡಗಳ ರಚನೆ:

    ಪ್ರಕರಣದ ತನಿಖೆಗಾಗಿ ಹಾಗೂ ಆರೋಪಿಗಳ ಪತ್ತೆಗೆ ಎಸ್‌ಪಿ ಅವರು 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ​ಅಧಿಕಾರಿ ಅಮಾನತು: ಪ್ರದೀಪ್ ಅವರ ಮೇಲೆ ಹಲ್ಲೆ ನಡೆದಾಗ ಆರಂಭದಲ್ಲಿ ಎಫ್‌ಐಆ‌ರ್ (FIR) ದಾಖಲಿಸದೆ ಕೇವಲ ಎನ್‌ಸಿ (NC) ದಾಖಲಿಸಿದ್ದ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಕರ್ತವ್ಯದಿಂದ ತೆರವುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ​ಪೂರ್ವ ದೂರುಗಳು ಹಾಗೂ ಚಾರ್ಜ್‌ಶೀಟ್:​ಇನ್ನೊಂದೆಡೆ, ಮೃತ ಪ್ರದೀಪ್ ಪೂಜಾರಿ ವಿರುದ್ಧವೂ ಯುವತಿ ಈ ಹಿಂದೆ 3 ಬಾರಿ ದೂರು ನೀಡಿದ್ದರು: ​2025 ನವೆಂಬರ್ 10: ಬೆದರಿಕೆ ಕರೆ ಹಾಕಿದ ಆರೋಪ. ​ನವೆಂಬರ್ 29: ಅತ್ಯಾಚಾರ ಆರೋಪ. ​ಅಕ್ಟೋಬರ್ 28: ಖಾರದ ಪುಡಿ ಎರಚಿ ಕೊಲೆಯತ್ನ ನಡೆಸಿದ ಆರೋಪ. ​ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ​ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.​

    Continue Reading

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)

    Trending

    Copyright © 2025 Deevatige

    error: Content is protected !!