Article
ದೀಪಾವಳಿ ಸಂಭ್ರಮ: ನ.8ರಂದು ಪುತ್ತೂರಿನಲ್ಲಿ ಬೃಹತ್ ‘ಅಶೋಕ ಜನಮನ-2026’ ಕಾರ್ಯಕ್ರಮ
- ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಳೆಗಟ್ಟಿದ ಪೂರ್ವಭಾವಿ ಸಭೆ
- ಉಡುಗೊರೆ ಆಯ್ಕೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ: ತಟ್ಟೆ, ಸೀರೆ ಅಥವಾ ಬೆಡ್‌ಶೀಟ್ ಪಡೆಯಬಹುದು
- ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಜನಪ್ರಿಯ ಕಾರ್ಯಕ್ರಮ
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನವೆಂಬರ್ 8ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅತಿ ವಿಜೃಂಭಣೆಯಿಂದ ‘ಅಶೋಕ ಜನಮನ-2026’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶಾಸಕರ ಕಚೇರಿ ಸಭಾ ಭವನದಲ್ಲಿ ಸೋಮವಾರ ಶಾಸಕರ ನೇತೃತ್ವದಲ್ಲಿ ನಡೆದ ಟ್ರಸ್ಟ್‌ನ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಲಾಯಿತು.
ಮುಖ್ಯಾಂಶಗಳು:
ಉಡುಗೊರೆಗಳ ವೈವಿಧ್ಯತೆ ಹಾಗೂ ಆಯ್ಕೆ ಸ್ವಾತಂತ್ರ್ಯ: ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. ವಿಶೇಷವೆಂದರೆ, ಸಾರ್ವಜನಿಕರು ತಮಗೆ ಇಷ್ಟವಾದ ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳು ಲಭ್ಯವಿದ್ದು, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು.
ಮನೆಮನೆಗೂ ಆಮಂತ್ರಣ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಖುದ್ದಾಗಿ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಟ್ರಸ್ಟ್‌ನ ಸದಸ್ಯರು ಗ್ರಾಮಗಳಿಗೆ ತೆರಳಿ ಪ್ರತಿಯೊಬ್ಬರಿಗೂ ಗೌರವಪೂರ್ವಕ ಆಹ್ವಾನ ನೀಡಲಿದ್ದಾರೆ.
ಜಾತಿ-ಮತ-ಪಕ್ಷಾತೀತ ಸಮಾರಂಭ: ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಭೇದಭಾವವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಹಬ್ಬವನ್ನು ಆಚರಿಸಬೇಕು ಎಂದು ಶಾಸಕ ಅಶೋಕ್ ರೈ ಸಾರ್ವಜನಿಕರಲ್ಲಿ ಸೌಹಾರ್ದತೆಯ ಮನವಿ ಮಾಡಿದರು.
14 ವರ್ಷಗಳ ಸಾರ್ಥಕ ಸೇವೆ ಮತ್ತು ಜನಮೆಚ್ಚುಗೆ
ಕಳೆದ 14 ವರ್ಷಗಳಿಂದ ನಿರಂತರವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈ ಎಸ್ಟೇಟ್ಸ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಜನಪರ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗಿದೆ. ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಈ ನೇರ ಸೇವಾ ಕಾರ್ಯಕ್ರಮ, ಇಂದು ಲಕ್ಷಾಂತರ ಮಂದಿ ಜನಸ್ತೋಮ ಸೇರುವ ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಸಾಂಸ್ಕೃತಿಕ ಹಾಗೂ ಹಬ್ಬದ ಕೂಟವಾಗಿ ಬೆಳೆದು ನಿಂತಿರುವುದು ಶಾಸಕರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ.
ಗ್ರಾಮ ಸಮಿತಿಗಳ ರಚನೆ ಹಾಗೂ ವ್ಯಾಪಕ ಪ್ರಚಾರ
ಕಾರ್ಯಕ್ರಮದ ಯಶಸ್ಸಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಸಮಿತಿಗಳು ಹಾಗೂ ಮಹಿಳಾ ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಲ್ಲದೆ, ಪಕ್ಷಭೇದ ಮರೆತು ಸ್ಥಳೀಯ ಗ್ರಾಮಸ್ಥರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ಅಲ್ಲದೆ, ಪ್ರತಿಯೊಂದು ದೇವಸ್ಥಾನ, ದೈವಸ್ಥಾನ, ಮಸೀದಿ ಮತ್ತು ಚರ್ಚ್‌ಗಳ ವ್ಯಾಪ್ತಿಯಲ್ಲೂ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್‌ನ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಪದ್ಮನಾಭ ಪೂಜಾರಿ ಸಣ್ಣಗುತ್ತು, ನಿಹಾಲ್ ಪಿ. ಶೆಟ್ಟಿ, ಡಾ. ರಾಜರಾಮ್ ಕೆ.ಬಿ., ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರು, ರಾಮಣ್ಣ ಪಿಳಿಂಜ, ಯೋಗೀಶ್ ಸಾಮಾನಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Article
ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ
ಕಲ್ಲಡ್ಕ ಪ್ರಭಾಕರ ಭಟ್ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.
ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.
ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.
ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Article
ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ದುಸ್ಥಿತಿ: ಹೆಸರಿಗಷ್ಟೇ ತಾಲೂಕು ಆಸ್ಪತ್ರೆ, ಆಧುನಿಕ ಶೈತ್ಯಾಗಾರ, ಮೂಲಭೂತ ಸೌಕರ್ಯಗಳೇ ಇಲ್ಲದ ಶವಾಗಾರ.!
ಬಂಟ್ವಾಳ: ಹೆಸರಿಗೇನೋ ತಾಲೂಕು ಸರ್ಕಾರಿ ಆಸ್ಪತ್ರೆ, ಆದರೆ ಮೂಲಭೂತ ಸೌಕರ್ಯವಿಲ್ಲದೇ ಮೃತರ ವಾರಸುದಾರರು, ಪೊಲೀಸ್ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿರುವ ದುಸ್ಥಿತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ್ದು.
ಪ್ರತಿನಿತ್ಯ ಅಪಘಾತ, ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಯುವುದು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿಯೇ. ಆದರೆ ಇಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ವರದಿ ಬರೆಯಲು ಕುಳಿತುಕೊಳ್ಳಲು ಒಂದು ಬೆಂಚ್ ಕೂಡ ಇಲ್ಲ. ಮೃತರ ಸಂಬಂಧಿಕರು ಗಂಟೆಗಟ್ಟಲೆ ನಿಂತುಕೊಂಡೇ ಕಾಲಹರಣ ಮಾಡಬೇಕಾದ ಸ್ಥಿತಿ.
ಪೊಲೀಸರು ವರದಿ ಬರೆಯಬೇಕಾದರೆ ನೆಲದಲ್ಲಿ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ಸಹೋದ್ಯೋಗಿಯ ಬೆನ್ನ ಮೇಲೆ ಫೈಲ್ ಇಟ್ಟು ಬರೆಯುವ ಅನಿವಾರ್ಯತೆ ಇದೆ. ಗ್ರಾಮೀಣ ಆಸ್ಪತ್ರೆಗಳ ಶವಾಗಾರದ ಮುಂದೆ ಕನಿಷ್ಠ ತಗಡಿನ ಮೇಲ್ಛಾವಣಿ, ಕಲ್ಲಿನ ಬೆಂಚ್ ಆದರೂ ಇರುತ್ತದೆ. ಆದರೆ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಅದೂ ಇಲ್ಲ ಎಂದು ಮೃತರ ಸಂಬಂಧಿಕರು ಶಾಸಕರು, ವೈದ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ಹುಲ್ಲು, ಗಿಡ-ಪೊದೆಗಳು ಬೆಳೆದು ಇದೇನು ಸಫಾರಿಗೆ ಹೋಗುವ ಮೃಗಾಲಯವೋ ಆಥವಾ ತಾಲೂಕು ಸರ್ಕಾರಿ ಆಸ್ಪತ್ರೆಯೋ ಎಂಬುದು ಅರ್ಥವಾಗುತ್ತಿಲ್ಲ. ಡ್ರೈನೇಜ್ ಕಚಳಚೆ ನೀರು ರಸ್ತೆಯ ಮೇಲೆಯೇ ಬಂದು ಬೀಳುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದು ವೈದ್ಯರೋ ಅಥವಾ ಅನಕ್ಷರಸ್ಥರೋ ಎಂಬುದು ಪ್ರಶ್ನಿಸುವಂತಾಗಿದೆ.
ಇಂತಹ ಅವ್ಯವಸ್ಥೆಯ ಬಗ್ಗೆ ಈವರೆಗೆ ಬೆಳಕು ಚೆಲ್ಲದ ಮಾಧ್ಯಮಗಳ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ತಾಲೂಕು ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶವಾಗಾರದ ಮುಂದೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುತ್ತಾರೋ ಕಾದು ನೋಡಬೇಕಾಗಿದೆ
Article
ವಿಶೇಷ ವರದಿ: ನಿಯಂತ್ರಣವಿಲ್ಲದೆ ಸಾಗುತ್ತಿರುವ ಗಡಿ ಮಾಫಿಯಾ ಅಟ್ಟಹಾಸ: ಬಂಟ್ವಾಳದ ಕನ್ಯಾನದಲ್ಲಿ ಮತ್ತೊಂದು ಬಳ್ಳಾರಿ ಮಾದರಿ?
ಕರ್ನಾಟಕ-ಕೇರಳ ಗಡಿಭಾಗದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕನ್ಯಾನ-ಪೈವಳಿಕೆ ಗ್ರಾಮಗಳಲ್ಲಿ ಪ್ರಕೃತಿಯ ಮೇಲಿನ ಲೂಟಿ ಮುಂದುವರಿದಿದೆ. ಕಳೆದ 5-6 ವರ್ಷಗಳಿಂದ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಬಾಕ್ಸೈಟ್ ಮತ್ತು ಕೆಂಪು ಕಲ್ಲು ಗಣಿಗಾರಿಕೆ ಈಗ ಗಡಿ ಭಾಗದ ಭದ್ರತೆ ಹಾಗೂ ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕೇವಲ ಕೃಷಿ ಭೂಮಿ ಸಮತಟ್ಟು ಮಾಡುವ ಮರೆಯಲ್ಲಿ ನಡೆದಿದೆ ಎನ್ನಲಾದ ಈ ದಂಧೆ, ಇಂದು ಅಂತರರಾಜ್ಯ ಗಣಿ ಮಾಫಿಯಾದ ಸ್ವರೂಪ ಪಡೆದುಕೊಂಡಿದ್ದು, ‘ಬಳ್ಳಾರಿ ಮಾದರಿ’ಯ ವಿನಾಶವನ್ನು ನೆನಪಿಸುತ್ತಿದೆ.

ಅಕ್ರಮದ ಸ್ವರೂಪ: ಕೃಷಿ ಮುಖವಾಡದಡಿ ಗುಡ್ಡ ಲೂಟಿ!
ಪರವಾನಗಿ ದುರ್ಬಳಕೆ: ಕೃಷಿ ಉದ್ದೇಶಕ್ಕಾಗಿ ಜಮೀನು ಸಮತಟ್ಟು ಮಾಡಲು 1.30 ರಿಂದ 1.80 ಎಕರೆಗೆ ಮಾತ್ರ ಅನುಮತಿ ಪಡೆಯಲಾಗಿದೆ. ಆದರೆ ಇದರ ಮರೆಯಲ್ಲಿ ಹಿಟಾಚಿ ಮತ್ತು ಜೆಸಿಬಿ ಬಳಸಿ 40 ಅಡಿಗೂ ಅಧಿಕ ಆಳಕ್ಕೆ ಗುಡ್ಡವನ್ನೇ ಬಗೆಯಲಾಗಿದೆ.
ಅಂತರರಾಜ್ಯ ಕಳ್ಳಸಾಗಾಟ ಜಾಲ: ಕೇರಳ ಗಡಿ ಭಾಗದಿಂದ ಅಕ್ರಮವಾಗಿ ಅಗೆಯಲಾದ ಬಾಕ್ಸೈಟ್ ಹಾಗೂ ಕೆಂಪು ಕಲ್ಲುಗಳನ್ನು ಕರ್ನಾಟಕದ ಪರವಾನಗಿ ನೆಪದಲ್ಲಿ ವಿಟ್ಲ ಮಾರ್ಗವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಇದರಿಂದ ಉಭಯ ರಾಜ್ಯಗಳ ಗಣಿ ಇಲಾಖೆಗೆ ಕೋಟ್ಯಂತರ ರೂಪಾಯಿ ರಾಯಧನ ನಷ್ಟವಾಗಿದೆ.
ಪರಿಸರ ಹಾಗೂ ಜೀವವೈವಿಧ್ಯ ನಾಶ: ಗುಡ್ಡಗಳನ್ನು ಬುಡ ಸಮೇತ ಅಗೆಯುತ್ತಿರುವುದರಿಂದ ಈ ಭಾಗದ ನೈಸರ್ಗಿಕ ನೀರಿನ ಮೂಲಗಳು ಬತ್ತಿಹೋಗಿದ್ದು, ಭಾರಿ ಪ್ರಮಾಣದ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಪ್ರಭಾವಿಗಳ ಕೈವಾಡ ಮತ್ತು ಬೆದರಿಕೆ ರಾಜಕಾರಣ?
ಈ ಬೃಹತ್ ಗಣಿ ಮಾಫಿಯಾದ ಹಿಂದೆ ಸುರತ್ಕಲ್ ಮೂಲದ, ಪ್ರಮುಖ ರಾಜಕೀಯ ಪಕ್ಷವೊಂದರ (ತೆನೆ ಹೊತ್ತ ಮಹಿಳೆಯ ಚಿಹ್ನೆಯ ಪಕ್ಷ) ಪ್ರಭಾವಿ ಪುಢಾರಿಯೊಬ್ಬರ ಕೈವಾಡವಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಧಿಕಾರ ಹಾಗೂ ರಾಜಕೀಯ ಪ್ರಭಾವದ ಬಲದಿಂದ ಸ್ಥಳೀಯ ಅಧಿಕಾರಿಗಳನ್ನು ಹತ್ತಿಕ್ಕಲಾಗುತ್ತಿದ್ದು, ಅಕ್ರಮವನ್ನು ಪ್ರಶ್ನಿಸುವ ಸಾರ್ವಜನಿಕರು ಹಾಗೂ ಪತ್ರಕರ್ತರಿಗೆ ಭೂಗತ ಗೂಂಡಾಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಪರಿಸರ ಹಾಗೂ ಆರ್ಥಿಕತೆಯ ಮೇಲೆ ಗಧಾಪ್ರಹಾರ
ಪರಿಸರ ನಷ್ಟ: ಸೂಕ್ಷ್ಮ ಪರಿಸರ ವಲಯಕ್ಕೆ ಹತ್ತಿರವಿರುವ ಪಾದೆಕಲ್ಲು, ಪಿಲಿಪಂಜರ, ಮೇರೋಟ್ಟು ಮತ್ತು ಪೆರೋಡಿ ಸರವು ಗುಡ್ಡ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೃಷಿ ಭೂಮಿಯಲ್ಲಿ ಬಿರುಕುಗಳು ಮೂಡಿವೆ.
ಸರ್ಕಾರಕ್ಕೆ ಖಜಾನೆ ಖಾಲಿ: ತೆರಿಗೆ ಹಾಗೂ ರಾಯಧನ ವಂಚನೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಸಾರ್ವಜನಿಕ ಸಂಕಷ್ಟ: ರಾತ್ರಿ-ಹಗಲೆನ್ನದೆ ಓಡಾಡುವ ನೂರಾರು ಅತಿಭಾರದ ಲಾರಿಗಳಿಂದ ಗ್ರಾಮೀಣ ರಸ್ತೆಗಳು ಹಳ್ಳ-ಗುಂಡಿಗಳಾಗಿ ಮಾರ್ಪಟ್ಟಿವೆ. ಧೂಳಿನ ಬಾಧೆಯಿಂದ ಸ್ಥಳೀಯರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಅಧಿಕಾರಿಗಳ ಕಣ್ಣುಮುಚ್ಚಾಲೆ ಹಾಗೂ ಜಂಟಿ ತನಿಖೆಯ ಆಶಾಕಿರಣ
ಈ ವ್ಯಾಪಕ ಅಕ್ರಮವು ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೆ ನಡೆಯಲು ಸಾಧ್ಯವಿಲ್ಲ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಅಥವಾ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಇತ್ತೀಚೆಗೆ ವಿಷಯ ಸ್ಫೋಟಗೊಳ್ಳುತ್ತಿದ್ದಂತೆ ಕರ್ನಾಟಕ ಮತ್ತು ಕೇರಳದ ಗಣಿ, ಭೂಮಾಪನ ಹಾಗೂ ಪೊಲೀಸ್ ಇಲಾಖೆಯ ಜಂಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಾತ್ಕಾಲಿಕವಾಗಿ ಲಾರಿ ಸಂಚಾರವನ್ನು ಸ್ತಬ್ಧಗೊಳಿಸಲಾಗಿದ್ದು, ನಿಖರ ಅಳತೆಗಾಗಿ ಡ್ರೋನ್ ಸಮೀಕ್ಷೆಗೆ ಸಿದ್ಧತೆ ನಡೆಸಿರುವುದು ಸಮಾಧಾನಕರ ಸಂಗತಿ.
ವರದಿಯ ಪ್ರಮುಖ ಶಿಫಾರಸುಗಳು
- ಡ್ರೋನ್ ಮತ್ತು ಸ್ಯಾಟಲೈಟ್ ಸರ್ವೆ: ಕಳೆದ 6 ವರ್ಷಗಳ ಗೂಗಲ್ ಅರ್ಥ್ ಇಮೇಜ್ ಹಾಗೂ ಪ್ರಸ್ತುತ ಡ್ರೋನ್ ವರದಿಯನ್ನು ತಾಳೆ ಮಾಡಿ, ಎಷ್ಟು ಪ್ರಮಾಣದ ಖನಿಜ ಲೂಟಿಯಾಗಿದೆ ಎಂಬುದನ್ನು ಅಂದಾಜು ಮಾಡಬೇಕು.
- ಪರವಾನಗಿ ಆಡಿಟ್: ಕನ್ಯಾನ ಮತ್ತು ಪೈವಳಿಕೆ ವ್ಯಾಪ್ತಿಯಲ್ಲಿ ನೀಡಿರುವ ಎಲ್ಲಾ ಕೃಷಿ ಜಮೀನು ಸಮತಟ್ಟು ಪರವಾನಗಿಗಳ ಸಮಗ್ರ ತನಿಖೆಯಾಗಬೇಕು.
- ಜಿಪಿಎಸ್ ಹಾಗೂ ಟೋಲ್ ಡೇಟಾ ಪರಿಶೀಲನೆ: ವಿಟ್ಲ ಮಾರ್ಗವಾಗಿ ಸಾಗಿದ ಲಾರಿಗಳ ಟೋಲ್ ರಶೀದಿ ಹಾಗೂ ಗಣಿ ಇಲಾಖೆಯ ಎಂಡಿಪಿ (MDP) ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.
- ಉನ್ನತ ಮಟ್ಟದ ಜಂಟಿ ತನಿಖೆ: ಇದು ಅಂತರರಾಜ್ಯ ದಂಧೆಯಾಗಿರುವುದರಿಂದ ಕರ್ನಾಟಕ ಹಾಗೂ ಕೇರಳದ ಜಂಟಿ ಅಥವಾ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು.
ಕೊನೆಯ ಮಾತು: ಇದು ಕೇವಲ ಮಣ್ಣು ಕಳ್ಳತನದ ಪ್ರಕರಣವಲ್ಲ; ಗಡಿ ಭಾಗದ ಮಣ್ಣು, ನೀರು ಹಾಗೂ ನೆಮ್ಮದಿಯ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಲೂಟಿ. ಅಧಿಕಾರಿಗಳು ಕೇವಲ ತಾತ್ಕಾಲಿಕ ತಡೆಗೆ ಸೀಮಿತವಾಗದೆ, ಡ್ರೋನ್ ವರದಿಯನ್ನು ಬಹಿರಂಗಪಡಿಸಿ, ತೆರೆಮರೆಯ ಪ್ರಭಾವಿಗಳೂ ಸೇರಿದಂತೆ ಎಲ್ಲ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕು.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala9 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident5 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
