Connect with us

Belthangady

ಧರ್ಮಸ್ಥಳದ ಅಸಹಜ ಸಾವುಗಳು – ಮುಂದೇನು ಆಗಲಿದೆ ? ಮತ್ತೆ ಬಂಗ್ಲೆ ಗುಡ್ಡೆಯಿಂದ ಶವ ಹೊರ ತೆಗೆಯುವ ಕಾರ್ಯಾಚರಣೆ ಆರಂಭ ?

Published

on

74 ಅಸಹಜ ಸಾವಿನ ಸಂಬಂಧ ವರದಿ ಕೊಡಿ ಎಂದು ಹೈಕೋರ್ಟ್ ಸರಕಾರಕ್ಕೆ ಆದೇಶ
ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವಿನ ಸಂಬಂಧ ವರದಿ ಕೊಡಿ ಎಂದು ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ. ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಕುರಿತು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.


ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಅಡ್ವಕೆಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಅರ್ಜಿಯು 74 ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ. ಇದುವರೆಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ನೀಡಲಾಗುತ್ತದೆ'' ಎಂದರು. ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಬಾಲನ್,ಎಲ್ಲ 74 ಪ್ರಕರಣಗಳು ಗಂಭೀರ ಸ್ವರೂಪದ ಪ್ರಕರಣಗಳಾಗಿದೆ. ತನಿಖೆ ನಡೆಯಬೇಕಿದೆ” ಎಂದರು. ಪ್ರತಿಕ್ರಿಯಿಸಿದ ಪೀಠ, ಅದಕ್ಕೂ ಮೊದಲು ಸರ್ಕಾರದಿಂದ ಮಾಹಿತಿ ಬರಲಿ ಎಂದಿತು. ನಂತರ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು

ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನ
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನವಾಗಿದ್ದು, ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಕೋರ್ಟ್ (ಜೆಎಂಎಫ್‌ಸಿ) ಇಂದು ವಿಶೇಷ ತನಿಖಾ ತಂಡದ (SIT) ಸಲ್ಲಿಸಿದ್ದ ವರದಿಯ ಮೇಲೆ ಆದೇಶ ಹೊರಡಿಸಲಿದೆ. SIT ನವೆಂಬರ್ 20ರಂದು ಸುಮಾರು 3,923 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. SIT ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್, ವಿಠಲ ಗೌಡ, ಸುಜಾತ ಭಟ್ ಮತ್ತು ಮಾಸ್ಕ್‌ಮ್ಯಾನ್ ಚಿನ್ನಯ್ಯ ಸೇರಿ ಆರು ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಈ ವರದಿ ಸುಳ್ಳು ಆರೋಪಗಳು ಮತ್ತು ಷಡ್ಯಂತ್ರದ ಮೇಲೆ ಆಧಾರಿತವಾಗಿದ್ದು, ಧರ್ಮಸ್ಥಳದ ಮಾನಹಾನಿಗೆ ಕಾರಣವಾದ ಸುಳ್ಳು ಸಾಕ್ಷ್ಯ ನೀಡಿದ್ದಾರೆ ಎಂಬ ಆರೋಪವಿದೆ.

ಕೋರ್ಟ್ ಇಂದು ವರದಿಯನ್ನು ಸ್ವೀಕರಿಸಿ ಕೇಸ್ ದಾಖಲಿಸುವುದೇ ಅಥವಾ ಹೆಚ್ಚುವರಿ ತನಿಖೆಗೆ ನಿರ್ದೇಶನ ನೀಡುವುದೇ ಎಂಬುದು ನಿರ್ಧಾರವಾಗಲಿದೆ. ಈ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಧರ್ಮಸ್ಥಳದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಧರ್ಮಸ್ಥಳ ಆಡಳಿತ ಈಗ ಸಂತೋಷ ವ್ಯಕ್ತಪಡಿಸಿದ್ದು, ಸತ್ಯ ಬಯಲಾಗಿದೆ ಎಂದಿದೆ. ಆರೋಪಿಗಳ ಪರ ವಕೀಲರು ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಘಟನೆ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ, ಸುಳ್ಳು ಆರೋಪಗಳ ಪರಿಣಾಮ ಮತ್ತು ಧಾರ್ಮಿಕ ಕ್ಷೇತ್ರಗಳ ಮಾನಹಾನಿ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕೋರ್ಟ್ ಆದೇಶದ ಬಳಿಕ ಪ್ರಕರಣ ಮತ್ತೊಂದು ದಿಕ್ಕಿಗೆ ತಿರುಗಬಹುದು ಎಂಬ ನಿರೀಕ್ಷೆ ಇದೆ.

ಮತ್ತೆ ಬಂಗ್ಲೆ ಗುಡ್ಡೆಯಿಂದ ಶವ ಹೊರತೆಗೆಯುವ ಕಾರ್ಯಾಚರಣೆ ಆರಂಭ ?
ಈ ಮದ್ಯೆ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳದ ಅಸಹಜ ಸಾವುಗಳು ಮತ್ತು ಸಮೂಹ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಮತ್ತೊಂದು ಸುತ್ತಿನ ಶವ ಹೊರತೆಗೆಯುವ ಕಾರ್ಯಾಚರಣೆ ನಡೆಸಲು ಗಂಭೀರ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ನಡೆದ ಶೋಧ ಕಾರ್ಯಗಳ ವೇಳೆ ಇಲ್ಲಿ ಕೆಲವು ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಈ ಅರಣ್ಯ ಪ್ರದೇಶದ ಆಳದಲ್ಲಿ ಮತ್ತಷ್ಟು ಸಾಕ್ಷ್ಯಗಳು ಅಡಗಿರಬಹುದು ಎಂಬ ಸಂಶಯದ ಮೇಲೆ ಎಸ್‌ಐಟಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೌಜನ್ಯಾ ಪ್ರಕರಣದ ಸಾಕ್ಷಿ ವಿಠಲ ಗೌಡ ಅವರು ನೀಡಿದ್ದ ಮಾಹಿತಿಯಂತೆ ಬಂಗ್ಲೆ ಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದಾಗ ಒಂಬತ್ತು ವಿವಿಧ ಸ್ಥಳಗಳಲ್ಲಿ ಮಾನವ ಶೇಷಗಳು ಪತ್ತೆಯಾಗಿದ್ದವು. ಆಗ ಸುಮಾರು ಆರು ತಲೆಬುರುಡೆಗಳು ಮತ್ತು ಎಲುಬಿನ ತುಣುಕುಗಳನ್ನು ಎಸ್‌ಐಟಿ ವಶಪಡಿಸಿಕೊಂಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ದೂರುದಾರರ ಹೇಳಿಕೆಗಳು ಪರಸ್ಪರ ವ್ಯತಿರಿಕ್ತವಾಗಿದ್ದರಿಂದ ಮತ್ತು ಕೆಲವು ಸಾಕ್ಷ್ಯಗಳು ಉದ್ದೇಶಪೂರ್ವಕವಾಗಿ ಪ್ಲಾಂಟ್’ ಮಾಡಲಾದವು ಎಂಬ ಆರೋಪ ಕೇಳಿಬಂದಿದ್ದರಿಂದ ತನಿಖೆ ಜಟಿಲಗೊಂಡಿತ್ತು. ಇದೀಗ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದ ತಂಡವು ವೈಜ್ಞಾನಿಕವಾಗಿ ಈ ಪ್ರದೇಶವನ್ನು ಮರು ಪರಿಶೀಲಿಸಲು ಮುಂದಾಗಿದೆ.


ಬಂಗ್ಲೆ ಗುಡ್ಡೆಯಲ್ಲಿ ಪತ್ತೆಯಾದ ಎಲುಬುಗಳ ಡಿಎನ್‌ಎ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಬೇಕಿದೆ. ಈ ಪ್ರದೇಶದಲ್ಲಿ ಈ ಹಿಂದೆ ಮಾಟ-ಮಂತ್ರ ಅಥವಾ ಅನಾಮಧೇಯ ಶವಗಳ ದಫನ ನಡೆದಿರುವ ಸಾಧ್ಯತೆಗಳ ಬಗ್ಗೆಯೂ ಎಸ್‌ಐಟಿ ಗಮನಹರಿಸಿದೆ. ನಾವು ಯಾವುದೇ ಪೂರ್ವಾಗ್ರಹವಿಲ್ಲದೆ ತನಿಖೆ ನಡೆಸುತ್ತಿದ್ದೇವೆ. ಬಂಗ್ಲೆ ಗುಡ್ಡೆಯಲ್ಲಿ ಲಭ್ಯವಿರುವ ಪ್ರತಿಯೊಂದು ಸುಳಿವನ್ನೂ ಪರಿಶೀಲಿಸುವುದು ನಮ್ಮ ಗುರಿ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ
ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಈ ಹೊಸ ಕಾರ್ಯಾಚರಣೆಯು ಈ ದಶಕಗಳ ಹಳೆಯ ರಹಸ್ಯದ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು – ಕಾರ್ಮಿಕರ ಮೇಲೆ ಅನುಮಾನ

Published

on

ಬೆಳ್ತಂಗಡಿ: ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.

ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.

ಘಟನೆಯ ವಿವರ:
ಅವರು ನೀಡಿದ ದೂರಿನಂತೆ ಸೆ. 13 ರಂದು ಮಧ್ಯಾಹ್ನ ಸುಮಾರು 1.45ಕ್ಕೆ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಗುರುವಾಯನಕೆರೆಗೆ ಕಳುಹಿಸಿದ ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.

ಸೆ.14 ರಂದು ಫಾಲ್ಸ್ ಸೀಲಿಂಗ್ ವೈರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಮನೆಗೆ ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿದ್ದರು. ಈ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರು.

ಅದೇ ದಿನ ರಾತ್ರಿ ಸುಮಾರು 8.30ಕ್ಕೆ ನೌಫಾಲ್ ಕುಟುಂಬದೊಂದಿಗೆ ಮನೆಗೆ ವಾಪಸ್ ಬಂದಾಗ, ಬೆಡ್‌ರೂಂನ ಗೋದ್ರೇಜ್‌ನಲ್ಲಿ ಇಟ್ಟಿದ್ದ ಚಿನ್ನದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಪರಿಶೀಲನೆ ನಡೆಸಿದಾಗ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರೇಸ್ಲೆಟ್ ಸೇರಿದಂತೆ 15 ಲಕ್ಷ 82 ಸಾವಿರ ರೂ. ಮೌಲ್ಯದ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

ಇದಲ್ಲದೆ ನೌಫಾಲ್ ಅವರ ತಾಯಿಯ ಗೋದ್ರೇಜ್‌ನಲ್ಲಿದ್ದ ಒಟ್ಟು 7 ಗ್ರಾಂ ತೂಕದ ಮೂರು ಉಂಗುರಗಳೂ ಕಾಣೆಯಾಗಿರುವುದು ಪತ್ತೆಯಾಗಿದೆ.

ಮನೆಯ ಗೋದ್ರೇಜ್‌ನ ಕೀ ಗೋದ್ರೇಜ್‌ನಲ್ಲಿಯೇ ಇದ್ದು, ಮನೆಯವರು ಹೊರಗಿದ್ದ ಅವಧಿಯಲ್ಲಿ ಯಾರೋ ಮನೆಗೆ ಪ್ರವೇಶಿಸಿ ಗೋದ್ರೇಜ್ ತೆರೆದು ಕಳವು ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ವೈರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.15 ರಂದು ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

arrest

ಬೆಳ್ತಂಗಡಿ: ದಲಿತ ಕುಟುಂಬದ ಜಮೀನಿಗೆ ಅಕ್ರಮ ಪ್ರವೇಶಿಸಿ ಅಶ್ಲೀಲ ಪ್ರದರ್ಶನ – ಆರೋಪಿ ಬಂಧನ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿ ಕೃತ್ಯವೆಸಗಿ, ದಲಿತ ಕುಟುಂಬದ ಮಹಿಳೆಯರ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಟ್ಟಾಡಿ ಮನೆಯ ಅಬ್ದುಲ್ ಹನೀಫ್ ಹುಸೇನ್ (50) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬದ ಸ್ವಾಧೀನದ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿ ಹಾಕಿ ಕುಟುಂಬ ಕೃಷಿ ಕಾರ್ಯದಲ್ಲಿ ತೊಡಗಿತ್ತು.

ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಏಕಾಏಕಿ ಆ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಡ ಕುಟುಂಬ ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಯನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯರು ದಾಂಧಲೆಯ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆರೋಪಿ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆಯನ್ನು ಎತ್ತಿ ಒಳ ಉಡುಪನ್ನು ಜಾರಿಸಿ ತನ್ನ ಗುಪ್ತಾಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದಿದ್ದಾನೆ. “ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ, ಈ ಜಾಗ ಬಿಟ್ಟು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಮತ್ತು ಬಂಧನ:

ಈತನ ವಿಕೃತಿಯಿಂದ ಭಯಗೊಂಡ ಬಡ ಕುಟುಂಬವು ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣದ ದೃಶ್ಯಾವಳಿ ಸಾಕ್ಷ್ಯಾಧಾರಗಳೊಂದಿಗೆ ಸೆ.8 ರಂದು ದೂರು ನೀಡಿದೆ.

ದೂರಿನ ಅನ್ವಯ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ಎಸ್ 329(3), 352, 351(2), 75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

40 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಬಡ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದ್ದು, ಈ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

accident

ಬೆಳ್ತಂಗಡಿ: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ; ಕಾರು ಚಾಲಕನಿಗೆ ಗಂಭೀರ ಗಾಯ

Published

on

ಕೊಕ್ಕಡ: ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಕಾರು ಹಾಗೂ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿರುವ ಘಟನೆ ಸೆ. 12ರ ಶನಿವಾರ ಕೊಕ್ಕಡ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದ ಹಲವರು ಗಾಯಗೊಂಡಿದ್ದು, ಈ ವೇಳೆ ಕಾರು ಚಾಲಕನ ಕೈ ಮುರಿತವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!