Connect with us

crime

ರೌಡಿಶೀಟರ್‌ಗಳೊಂದಿಗೆ ಬಾರ್‌ನಲ್ಲಿ ಪಾರ್ಟಿ: ಸಖರಾಯಪಟ್ಟಣ ಎಎಸ್‌ಐ ವೀರೇಂದ್ರ ಅಮಾನತು

Published

on

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ರೌಡಿಶೀಟರ್‌ಗಳೊಂದಿಗೆ ಸೇರಿ ಬಾರ್‌ನಲ್ಲಿ ರಾತ್ರಿಯಿಡೀ ಕುಡಿದು ಕುಣಿದು ಪಾರ್ಟಿ ನಡೆಸಿದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ASI) ವೀರೇಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕರ್ತವ್ಯಲೋಪ ಎಸಗಿ, ಸಾರ್ವಜನಿಕ ಸ್ಥಳದಲ್ಲಿ ರೌಡಿಶೀಟರ್‌ಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು, ರಾತ್ರಿ ವೇಳೆ ಜೋರು ಧ್ವನಿಯಲ್ಲಿ ಹಾಡು ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಅವರು ಈ ಕಟ್ಟುನಿಟ್ಟಿನ ಅಮಾನತು ಆದೇಶ ಹೊರಡಿಸಿದ್ದಾರೆ.

ವರದಿ ವಿವರ

ರೌಡಿಶೀಟರ್‌ಗಳ ಜೊತೆ ಸೇರಿ ಬಾರ್‌ನಲ್ಲಿ ರಾತ್ರಿಯಿಡೀ ಕುಡಿದು ಕುಣಿದು ‘ಎಣ್ಣೆ ಪಾರ್ಟಿ’ ನಡೆಸಿದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ASI) ವೀರೇಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಎಎಸ್‌ಐ ವೀರೇಂದ್ರ ಅವರು ಸ್ವತಃ ಮುತುವರ್ಜಿ ವಹಿಸಿ ಸ್ಥಳೀಯ ಬಾರ್‌ನಲ್ಲಿ ರೌಡಿಶೀಟರ್‌ಗಳು ಹಾಗೂ ಆಪ್ತರೊಂದಿಗೆ ಪಾರ್ಟಿ ಆಯೋಜಿಸಿದ್ದರು. ಬಾರ್‌ನೊಳಗೆ ಸೌಂಡ್ ಸಿಸ್ಟಮ್‌ನಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ರಾತ್ರಿಯಿಡೀ ರಂಪಾಟ ನಡೆಸಲಾಗಿತ್ತು.

ಗ್ರಾಮಸ್ಥರ ಬೃಹತ್ ಪ್ರತಿಭಟನೆ: ರಾತ್ರಿ ವೇಳೆಯೂ ಸೌಂಡ್ ಕಿರಿಕಿರಿಯಿಂದ ರೋಸಿಹೋದ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಬಾರ್ ಮುಂದೆ ರಾತ್ರೋರಾತ್ರಿ ನೆರೆದು ಬೃಹತ್ ಪ್ರತಿಭಟನೆ ನಡೆಸಿದ್ದರು. ಕೂಡಲೇ ಬಾರ್ ಅನ್ನು ಬಂದ್ ಮಾಡುವಂತೆ ಆಗ್ರಹಿಸಿ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಜವಾಬ್ದಾರಿಯುತ ಅಧಿಕಾರಿಯೇ ಅಪರಾಧ ಹಿನ್ನೆಲೆಯುಳ್ಳವರೊಂದಿಗೆ ಸೇರಿ ಇಂತಹ ವರ್ತನೆ ತೋರಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಎಎಸ್‌ಐ ವಿರುದ್ಧ ಸರಣಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿ, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಈ ಅಮಾನತು ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಲಾಖಾ ಮಟ್ಟದ ತನಿಖೆ ಮುಂದುವರಿಯುವ ಸಾಧ್ಯತೆಯಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಸುರತ್ಕಲ್: 2018ರ ಕೊಲೆ ಯತ್ನ ಪ್ರಕರಣ – ಆರೋಪಿ ಪ್ರಶಾಂತ್ ಭಂಡಾರಿ ದೋಷಮುಕ್ತ

Published

on

ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬಹುಚರ್ಚಿತ ಕೊಲೆ ಯತ್ನ ಪ್ರಕರಣವೊಂದರಲ್ಲಿ, ಆರೋಪಿಯನ್ನು ಮಾನ್ಯ 2ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2018ರಂತೆ ಭಾರತೀಯ ದಂಡ ಸಂಹಿತೆ (IPC) ಕಲಂ 341, 323, 324, 504, 506 ಹಾಗೂ 307ರ ಅಡಿಯಲ್ಲಿ ಪ್ರಶಾಂತ್ ಭಂಡಾರಿ ಎಂಬವರ ಮೇಲೆ ದಾಖಲಾಗಿದ್ದ ಈ ಪ್ರಕರಣದಲ್ಲಿ, ಎಸ್‌ಸಿ ಸಂಖ್ಯೆ 108/21ರಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಆರೋಪಿ ಪರವಾಗಿ ಹೈಕೋರ್ಟ್/ವಿಶೇಷ ವಕೀಲರಾದ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಮತ್ತು ವಿವರ:

ದೂರುದಾರರಾದ ಗಂಗಾಧರ ಪೂಜಾರಿ ಎಂಬವರು ನೀಡಿದ ದೂರಿನನ್ವಯ, 2018ರ ಮಾರ್ಚ್ 10ರಂದು ರಾತ್ರಿ ಸುಮಾರು 7:45 ಗಂಟೆಯ ವೇಳೆಗೆ ತಮ್ಮ ಮನೆಯಿಂದ ಬೊಂದೇಲ್ ಕಡೆಗೆ ತೆರಳುತ್ತಿದ್ದರು. ಅವರು 5ನೇ ಬ್ಲಾಕ್‌ನಿಂದ 9ನೇ ಬ್ಲಾಕ್ಸ್‌ಗೆ ಹೋಗುವ ಒಳರಸ್ತೆಗೆ ತಲುಪಿದಾಗ, ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಪ್ರಶಾಂತ್ ಭಂಡಾರಿ ದಾರಿ ತಡೆದು ನಿಲ್ಲಿಸಿದ್ದನು.

ನಂತರ ಅಸ್ಯುಯೆಯಿಂದ ಅವಾಚ್ಯ ಶಬ್ದಗಳಿಂದ ಬೈದು, ತಾನು ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಗಂಗಾಧರ ಪೂಜಾರಿ ಅವರ ಬಲಗೈ ತೋಳು, ಬಲ ಭುಜ, ಎಡ ಕಿಬ್ಬೊಟ್ಟೆ, ಬೆನ್ನಿನ ಮಧ್ಯಭಾಗ ಹಾಗೂ ಬೆನ್ನಿನ ಎಡ ಬದಿಗೆ ತಿವಿದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇವರ ನಡುವೆ ನಡೆದಿದ್ದ ಹಿಂದಿನ ಗಲಾಟೆಯೇ ಈ ಹಲ್ಲೆಗೆ ಕಾರಣ ಎಂದು ದೂರುದಾರರು ಆರೋಪಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿಯಾದ ಗೋಪಾಲ್ ಜೋಗಲೇಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:

ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಒಟ್ಟು 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ವಿಚಾರಣೆಯ ಸಮಯದಲ್ಲಿ ಆರೋಪಿಯ ಮೇಲಿನ ಕೃತ್ಯವು ಸಾಕ್ಷ್ಯಾಧಾರಗಳ ಕೊರತೆಯಿಂದ ದೃಢಪಡದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಲಯವು ಆರೋಪಿ ಪ್ರಶಾಂತ್ ಭಂಡಾರಿಯನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ. ಆರೋಪಿ ಪರವಾಗಿ ಹಿರಿಯ ವಕೀಲ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ ಅವರು ಸಮರ್ಥವಾಗಿ ವಾದ ಮಂಡಿಸಿ ನ್ಯಾಯಾಲಯದಿಂದ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.





Continue Reading

court

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: 14 ವರ್ಷಗಳ ನಂತರವೂ ಆರಿ ಹೋಗದ ಸಾಕ್ಷ್ಯ: ಸೌಜನ್ಯ ಮೈಮೇಲಿನ ಆ ‘ಅಪರಿಚಿತ ಕೂದಲು’ ಬಿಚ್ಚಲಿದೆ ಮರ್ತ್ಯದ ರಹಸ್ಯ!

Published

on

ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇಡೀ ದೇಶದ ಗಮನ ಸೆಳೆದಿದೆ. ಇದು ಕೇವಲ ಮರುತನಿಖೆಗೆ ಆದೇಶಿಸಿದ ತೀರ್ಪಷ್ಟೇ ಅಲ್ಲ, ಬದಲಿಗೆ ಕಳೆದ 14 ವರ್ಷಗಳಿಂದ (2012ರಿಂದ) ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ದಾಖಲೆಗಳ ಸಹಿತ ಎತ್ತಿಹಿಡಿದಿರುವ ಐತಿಹಾಸಿಕ ತೀರ್ಪಾಗಿದೆ.

ಈ ಮಹತ್ವದ ತೀರ್ಪಿನ ಪ್ರಮುಖ ಮತ್ತು ಸ್ಫೋಟಕ ಅಂಶಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ:

1. 14 ವರ್ಷಗಳ ಬಳಿಕವೂ ಜೀವಂತವಿರುವ ಡಿಎನ್ಎ (DNA) ಸಾಕ್ಷ್ಯ!

ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿಯಾಗಿ ಬಿಡುಗಡೆಯಾದ ಬಳಿಕ “ನಿಜವಾದ ಅಪರಾಧಿಗಳು ಯಾರು?” ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ಅಂಶವನ್ನು ಹೊರಹಾಕಿದೆ:

ಅಪರಿಚಿತನ ಕೂದಲು: ಸೌಜನ್ಯ ಧರಿಸಿದ್ದ ಚೂಡಿದಾರ್‌ನಲ್ಲಿ ಸಂತೋಷ್ ರಾವ್ ಅವರಲ್ಲದ, ಇನ್ನೊಬ್ಬ ಅಪರಿಚಿತ ಪುರುಷನ ಕೂದಲು ಪತ್ತೆಯಾಗಿದೆ (Material Object No. 15).

ಡಿಎನ್ಎ ಪರೀಕ್ಷೆಗೆ ಅವಕಾಶ: ಎಫ್‌ಎಸ್‌ಎಲ್ (FSL) ವಿಜ್ಞಾನಿ PW-18 ವಿನೋದ್ ಜೆ. ಲಕ್ಕಪ್ಪನ್ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುತ್ತಾ, ಶಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರ ರಕ್ತದ ಮಾದರಿ ಸಂಗ್ರಹಿಸಿದರೆ, ಚೂಡಿದಾರ್‌ನಲ್ಲಿರುವ ಅಪರಿಚಿತ ಕೂದಲಿನ ಡಿಎನ್ಎ ಜೊತೆ ಈಗಲೂ ಹೋಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ಹೈಕೋರ್ಟ್ ತೀರ್ಪಿಗೆ ತಡೆ: 2024ರಲ್ಲಿ ಕರ್ನಾಟಕ ಹೈಕೋರ್ಟ್ “ಬಹಳ ತಡವಾಗಿರುವುದರಿಂದ ಹೊಸ ಸಾಕ್ಷ್ಯ ಸಿಗುವುದು ಅನುಮಾನ” ಎಂದಿದ್ದನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಇದು “ಸ್ಪಷ್ಟವಾಗಿ ದೋಷಪೂರಿತವಾಗಿದೆ” (clearly erroneous) ಎಂದು ತೀರ್ಪಿನಲ್ಲಿ ಉಲ್ಲೇಖಿಸಿ, ವೈಜ್ಞಾನಿಕ ತನಿಖೆಗೆ ದಾರಿ ಸಂಪೂರ್ಣ ಮುಚ್ಚಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

2. ಮೂರು ವಾರದಲ್ಲಿ ಸಿಕ್ಕ 8 ಸಾಕ್ಷಿಗಳು: ತನಿಖಾ ಸಂಸ್ಥೆಗಳ ವೈಫಲ್ಯಕ್ಕೆ ಚಾಟಿ

ಸುಪ್ರೀಂಕೋರ್ಟ್ ತೀರ್ಪಿನ ಪ್ಯಾರಾ 47ರಲ್ಲಿ ಅತ್ಯಂತ ಗಂಭೀರ ಪ್ರಶ್ನೆಯನ್ನು ಎತ್ತಲಾಗಿದೆ:

ಸರ್ಕಾರದ ಕ್ಷಿಪ್ರ ಕಾರ್ಯಾಚರಣೆ: ಸುಪ್ರೀಂಕೋರ್ಟ್ ಸೂಚನೆಯಂತೆ (2026 ಏಪ್ರಿಲ್ 29), ಸೌಜನ್ಯ ಕುಟುಂಬದ ಅಫಿಡವಿಟ್‌ನಲ್ಲಿದ್ದ 8 ಸಂಭಾವ್ಯ ಸಾಕ್ಷಿಗಳಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ನೀಡಿ, ಕೇವಲ ಮೂರು ವಾರಗಳೊಳಗೆ ಆ ಎಲ್ಲ ಸಾಕ್ಷಿಗಳನ್ನು ಪತ್ತೆಹಚ್ಚಿತು.

ನ್ಯಾಯಾಲಯದ ಪ್ರಶ್ನೆ: ಮೂರು ತನಿಖಾ ಸಂಸ್ಥೆಗಳಿಗೆ (ಪೊಲೀಸ್, CID, CBI) 14 ವರ್ಷಗಳಲ್ಲಿ ಸಿಗದ ಸಾಕ್ಷಿಗಳು ರಾಜ್ಯ ಸರ್ಕಾರಕ್ಕೆ ಕೇವಲ ಮೂರು ವಾರಗಳಲ್ಲಿ ಹೇಗೆ ಸಿಕ್ಕವು? ಆರಂಭದಲ್ಲೇ ತನಿಖಾಧಿಕಾರಿಗಳು ಈ ಸುಳಿವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.

3. ತನಿಖೆಯ ದಿಕ್ಕಿನಲ್ಲೇ ಇದ್ದ ಗಂಭೀರ ಲೋಪಗಳು

ಸೆಷನ್ಸ್‌ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ದಾಖಲಿಸಿರುವ ಪ್ರಮುಖ ತನಿಖಾ ವೈಫಲ್ಯಗಳು ಇಲ್ಲಿವೆ:

ಸಾಕ್ಷ್ಯಗಳ ನಾಶ ಹಾಗೂ ನಿರ್ಲಕ್ಷ್ಯ: ಮೊಬೈಲ್ ಟವರ್ ಡೆಂಪ್ (Tower Dump) ಮಾಹಿತಿ ಮುಂದಿನ ಅಧಿಕಾರಿಗೆ ಹಸ್ತಾಂತರಿಸಿಲ್ಲ. ಪ್ರಮುಖ ರಸ್ತೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಲ್ಲ. ಸ್ಥಳದಲ್ಲಿ ಸಿಕ್ಕ ಚೀಟಿಯನ್ನು ಕೈಬರಹ ತಜ್ಞರ ಪರೀಕ್ಷೆಗೆ ಒಳಪಡಿಸಿಲ್ಲ. ಮರಣೋತ್ತರ ಪರೀಕ್ಷೆಯನ್ನು ವೀಡಿಯೊ ರೆಕಾರ್ಡ್ ಮಾಡಿಲ್ಲ.

ಸ್ಥಳ ಮಹಜರು ದೋಷ: ಮೃತದೇಹ ಪತ್ತೆಯಾದ ಸ್ಥಳದಲ್ಲಿ ಶಾಲಾ ಬ್ಯಾಗ್ ಹಾಗೂ ಪುಸ್ತಕಗಳು ಇದ್ದರೂ, ಅಂದು ಭಾರಿ ಮಳೆಯಾಗಿದ್ದರೂ ಅವು ಒದ್ದೆಯಾಗಿರಲಿಲ್ಲ. ಇದರಿಂದ ಅಪರಾಧ ನಡೆದ ಸ್ಥಳವೇ ಬೇರೆ ಇರಬಹುದು ಮತ್ತು ಶವವನ್ನು ನಂತರ ಅಲ್ಲಿಗೆ ತಂದು ಹಾಕಿರಬಹುದು ಎಂಬ ಶಂಕೆಯನ್ನು ಸೆಷನ್ಸ್‌ ಕೋರ್ಟ್ ವ್ಯಕ್ತಪಡಿಸಿತ್ತು.

ವೈಜ್ಞಾನಿಕ ಸಾಕ್ಷ್ಯ ನಾಶ: ಸೌಜನ್ಯಳ ವಜೈನಲ್ ಸ್ವಾಬ್ (Vaginal swab) ಸರಿಯಾಗಿ ಸಂರಕ್ಷಿಸದ ಕಾರಣ ಅದರಲ್ಲಿ ಶಿಲೀಂಧ್ರ (Fungus) ಬೆಳೆದು ಡಿಎನ್ಎ ಫಲಿತಾಂಶ ಸಿಗದಂತೆ ಮಾಡಲಾಗಿತ್ತು. ಅತ್ಯಾಚಾರದಂತಹ ಗಂಭೀರ ಪ್ರಕರಣದಲ್ಲಿ ಅತ್ಯಂತ ಪ್ರಮುಖವಾಗಬೇಕಿದ್ದ ವೈಜ್ಞಾನಿಕ ಸಾಕ್ಷಿಯೇ ಆರಂಭದಲ್ಲಿ ಕಳೆದುಹೋಗಿತ್ತು.

4. ಸಂತೋಷ್ ರಾವ್ ವಿರುದ್ಧ ಬಲವಾದ ಸಾಕ್ಷ್ಯಗಳಿರಲಿಲ್ಲ

ಸಂತೋಷ್ ರಾವ್ ಅವರನ್ನು ಘಟನೆ ನಡೆದ ಸ್ಥಳದಲ್ಲಾಗಲಿ ಅಥವಾ ಸೌಜನ್ಯಳೊಂದಿಗೆ ಕೊನೆಯ ಬಾರಿಗೆ ಯಾರೂ ನೋಡಿರಲಿಲ್ಲ (‘Last seen theory’ ಇರಲಿಲ್ಲ).

ಅವರ ಬಟ್ಟೆಗಳಲ್ಲಿ ರಕ್ತ ಅಥವಾ ವೀರ್ಯದ ಕಲೆಗಳಿರಲಿಲ್ಲ ಹಾಗೂ ಸೌಜನ್ಯಳ ಉಗುರುಗಳಲ್ಲಿ ಇವರ ಚರ್ಮದ ತುಣುಕುಗಳು ಸಿಕ್ಕಿರಲಿಲ್ಲ.

ಸೌಜನ್ಯಳ ದೇಹದ ಸ್ಥಿತಿ ಮತ್ತು ವೈದ್ಯಕೀಯ ಸಾಕ್ಷಿಯನ್ನು ಗಮನಿಸಿದಾಗ, ಈ ಕೃತ್ಯವನ್ನು ಒಬ್ಬ ವ್ಯಕ್ತಿ ಮಾತ್ರ ಮಾಡಲು ಸಾಧ್ಯವೇ? ಎಂಬ ಗಂಭೀರ ಅನುಮಾನವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ತೀರ್ಪಿನ ಸಾರಾಂಶ ಮತ್ತು ಮುಂದೇನು?

ಈ ತೀರ್ಪಿನ ಮೂಲಕ ಕೇವಲ ವ್ಯಕ್ತಿಯೊಬ್ಬರ ಖುಲಾಸೆಯಷ್ಟೇ ಅಲ್ಲ, ಬದಲಿಗೆ ಇಡೀ ತನಿಖಾ ವ್ಯವಸ್ಥೆಯ ಲೋಪಗಳು ಬಟಾ ಬಯಲಾಗಿವೆ. ಸೌಜನ್ಯಳ ಚೂಡಿದಾರ್‌ನಲ್ಲಿ ಸಿಕ್ಕಿರುವ ಅಪರಿಚಿತ ಕೂದಲಿನ ಡಿಎನ್ಎ ಪರೀಕ್ಷೆ ಮತ್ತು ಹೊಸದಾಗಿ ಪತ್ತೆಯಾಗಿರುವ ಸಾಕ್ಷಿಗಳ ಮರುವಿಚಾರಣೆಯು ಈಗ ರಚನೆಯಾಗಲಿರುವ ಎಸ್‌ಐಟಿ (SIT) ಮುಂದಿರುವ ಪ್ರಮುಖ ಸವಾಲುಗಳಾಗಿವೆ.

14 ವರ್ಷಗಳ ನಂತರವಾದರೂ ನ್ಯಾಯ ಸಿಗುವ ಭರವಸೆಯನ್ನು ಈ ತೀರ್ಪು ಸೌಜನ್ಯ ಕುಟುಂಬ ಹಾಗೂ ನ್ಯಾಯಪರ ಚಿಂತಕರಿಗೆ ನೀಡಿದೆ.




Continue Reading

arrest

ವಿಟ್ಲ: ಪರವಾನಿಗೆ ಇಲ್ಲದೆ ಕೆಂಪುಕಲ್ಲು ಸಾಗಿಸುತ್ತಿದ್ದ ಎರಡು ಲಾರಿಗಳು ವಶಕ್ಕೆ; ಇಬ್ಬರು ಚಾಲಕರ ಬಂಧನ

Published

on

ವಿಟ್ಲ: ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ಕರೋಪಾಡಿ ಗ್ರಾಮದ ಆನೆಕಲ್ಲು ಸೇತುವೆಯ ಗಡಿಭಾಗದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ-ಕೇರಳ ಗಡಿ ಭಾಗದ ಕುರುಡಪದವು ಕೊಮ್ಮಂಗಳ ಎಂಬಲ್ಲಿಂದ ಈ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಘಟನೆಯ ವಿವರ: ಖಚಿತ ಮಾಹಿತಿ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸರು ಕರೋಪಾಡಿ ಗ್ರಾಮದ ಆನೆಕಲ್ಲು ಸೇತುವೆ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ, ಕಲ್ಲು ಸಾಗಾಟದ ಎರಡು ಲಾರಿಗಳನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಾರಿ ಚಾಲಕರು ಕಲ್ಲು ಸಾಗಾಟಕ್ಕೆ ಯಾವುದೇ ರೀತಿಯ ಅಧಿಕೃತ ಪರವಾನಿಗೆ ಅಥವಾ ದಾಖಲೆಗಳನ್ನು ಹೊಂದಿಲ್ಲದಿರುವುದು ದೃಢಪಟ್ಟಿದೆ.

ಬಂಧಿತರು: ಅನಧಿಕೃತ ಕಲ್ಲು ಸಾಗಾಟಕ್ಕೆ ಬಳಸಲಾದ ಎರಡು ಲಾರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಾಹನಗಳ ಚಾಲಕರಾದ ಹರೀಶ್ ಮತ್ತು ಸತೀಶ್ ಎಂಬಿಬ್ಬರನ್ನು ಬಂಧಿಸಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!