Connect with us

crime

ಉಪ್ಪಿನಂಗಡಿ: ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ ಆರೋಪ; ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅಮಾನತು

Published

on

ಉಪ್ಪಿನಂಗಡಿ: ಸಾರ್ವಜನಿಕ ಸೇವೆಯಲ್ಲಿ ವಿಳಂಬ, ಭ್ರಷ್ಟಾಚಾರ, ಲಂಚದ ಬೇಡಿಕೆ ಹಾಗೂ ವಿವಿಧ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾ.ಪಂ.ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

ಲೋಕಾಯುಕ್ತ ಭೇಟಿ ಮತ್ತು ಸಾರ್ವಜನಿಕರ ದೂರು: ಸೆಪ್ಟೆಂಬರ್ 9 ರಂದು ಉಪ್ಪಿನಂಗಡಿ ಗ್ರಾ.ಪಂ. ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಕಡತ ಪರಿಶೀಲನೆಗೆ ಆಗಮಿಸಿದಾಗ, ಸಾರ್ವಜನಿಕರಿಂದ ಪಿಡಿಒ ವಿರುದ್ಧ ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದವು.

ಪ್ರಮುಖ ದೂರುದಾರರು: ಅಬ್ದುಲ್ ರಹಿಮಾನ್ ಪಿ.ಎ., ಸಂಜೀವ ಪೂಜಾರಿ, ಅಶ್ರಫ್ ಪೆರಿಯಡ್ಕ, ಶ್ರೀಮತಿ ಖೈಜಮ್ಮ ಪೆರಿಯಡ್ಕ, ಅತುಲ್ ಕಶ್ಯಪ್ ಟಿ.ಪಂಜಳ, ಮಾಜಿ ಪಂಚಾಯತ್ ಸದಸ್ಯ ವಿನಾಯಕ ಪೈ, ಶ್ರೀಮತಿ ಲಲಿತಾ, ಉಪ್ಪಿನಂಗಡಿ ಪೇಟೆಯ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಎಸ್.ರವಿ ಹಿರ್ತಡ್ಕ, ಅನಿಲ್ ಕುಮಾರ್ ಜೈನ್, ಶ್ರೀಮತಿ ಶಾಂತ ಕುಮಾರಿ, ಸಂದೇಶ್ ಕೆ. ಕಜೆಕ್ಕಾರು, ಮೊಯ್ದೀನ್ ಕುಟ್ಟಿ ಹಿರೇಬಂಡಾಡಿ, ಅಬ್ದುಲ್ಲಾ ಇಬ್ನು ಮುಬಾರಕ್ ಇವರುಗಳು ಪಿಡಿಒ ವಿರುದ್ಧ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಪ್ರಮುಖ ಆರೋಪಗಳು:

  • 18 ಮಂದಿಯ ವ್ಯಾಪಾರ ಪರವಾನಗಿ ಅರ್ಜಿಗಳನ್ನು ವಿಳಂಬಗೊಳಿಸಿ ಬಾಕಿ ಉಳಿಸಿರುವುದು.
  • ಕೆಎಸ್ಆರ್ಟಿಸಿ ಹಾಗೂ ಪೊಲೀಸ್ ಇಲಾಖಾ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ಮುಜುಗರ ಸೃಷ್ಟಿಸುವುದು.
  • ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾ ಮಾಹಿತಿ ನೀಡದೆ ಅಸಹಕಾರ ತೋರುವುದು.
  • ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಹಾಗೂ ಬೆದರಿಕೆ ಹಾಕಿರುವುದು.
  • ನಡತೆ ನಿಯಮ ಉಲ್ಲಂಘನೆ: ಪಿಡಿಒ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳು-2021ರ ನಿಯಮ (3)ರ ಉಲ್ಲಂಘನೆಯಾಗಿದೆ ಎಂದು ಶಿಸ್ತು ಪ್ರಾಧಿಕಾರ ತಿಳಿಸಿದೆ.
  • ಇಲಾಖಾ ವಿಚಾರಣೆ ಬಾಕಿ: ಸಮರ್ಪಕ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮ 1957ರನ್ವಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
  • ಕೆಡಿಪಿ ಸಭೆಯಲ್ಲಿ ಆಕ್ಷೇಪ: ಸೆಪ್ಟೆಂಬರ್ 15ರಂದು ನಡೆದ ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಅವರು ಪಿಡಿಒ ಅವರ ವರ್ತನೆ ಹಾಗೂ ಪ್ರಭಾರ ಮುಂದುವರಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವರ್ಗಾವಣೆಗೆ ಆಗ್ರಹಿಸಿದ್ದರು.
  • ಹೊಸ ಜವಾಬ್ದಾರಿ: ಅಮಾನತು ಆದೇಶದ ಬೆನ್ನಲ್ಲೇ, 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ರವಿಚಂದ್ರ ಅವರಿಗೆ ಉಪ್ಪಿನಂಗಡಿ ಗ್ರಾ.ಪಂ.ನ ಪ್ರಭಾರ ಪಿಡಿಒ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಾರ್ವಜನಿಕ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ, ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಮುಂತಾದ ಆರೋಪಗಳ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಈ ಮೂಲಕ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳು-2021ರ ನಿಯಮ (3) ಉಲ್ಲಂಘಿಸಿದ ಬಗ್ಗೆ ವಿವರಣೆ ನೀಡುವಂತೆ ಪಿಡಿಒಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಆರೋಪ ನಿರಾಕರಿಸಿದ ಪಿಡಿಒ:
ಶೋಕಾಸ್ ನೋಟಿಸ್‌ಗೆ ಲಿಖಿತ ಸಮಜಾಯಿಷಿ ನೀಡಿದ್ದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಣೆ ಮಾಡಿದ್ದರು. ಆದರೆ ಅವರು ಸಲ್ಲಿಸಿದ್ದ ಲಿಖಿತ ಸಮಜಾಯಿಷಿಯನ್ನು ಪರಿಶೀಲಿಸಿದಾಗ, ಆಪಾದನೆಗಳನ್ನು ನಿರಾಕರಿಸಲು ಸಮರ್ಥನೀಯವಾದ ಮತ್ತು ಸಮರ್ಪಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಮತ್ತು ಅವರ ಮೇಲಿನ ದೂರುಗಳು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದ್ದು ತನ್ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮ 1957ರ ಪ್ರಕಾರ, ಅವರ ವಿರುದ್ಧದ ಆರೋಪಗಳ ಮೇಲಿನ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ತೀರ್ಮಾನಿಸಿ, ಶಿಸ್ತು ಪ್ರಾಧಿಕಾರಿಯೂ ಆಗಿರುವ ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಅವರು ಆದೇಶ ಮಾಡಿದ್ದಾರೆ.

ಅಮಾನತು ಆದೇಶ ಹೊರಬರುತ್ತಿದ್ದಂತೆ ಉಪ್ಪಿನಂಗಡಿಯಲ್ಲಿ ಪಿಡಿಒ ಅವರ ಕಿರುಕುಳ ಹಾಗೂ ಶೋಷಣೆಯಿಂದ ನೊಂದಿದ್ದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧವೂ ಪರೋಕ್ಷ ಬೆಂಬಲ ನೀಡಿದ ಆರೋಪದಡಿ ಸರ್ಕಾರದ ಮಟ್ಟದಲ್ಲಿ ದೂರು ಸಲ್ಲಿಕೆಯಾಗಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಜೂರುಪಂಜ ದೇವಸ್ಯ ಬಳಿ ಅಕ್ಟೋಬರ್ 5 ರಂದು ಬೆಳಕಿಗೆ ಬಂದಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿತನಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆಯನ್ನು ನಿಯಮಾನುಸಾರ ಜಪ್ತಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:

ದಿನಾಂಕ 05.10.2026 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಕುಂಜೂರುಪಂಜ ದೇವಸ್ಯ ಬಳಿಯಿಂದ ಬುಳೇರಿಕಟ್ಟೆ ಮಾರ್ಗವಾಗಿ ಕೇರಳಕ್ಕೆ ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅತ್ಯಂತ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 11 ಗೋವುಗಳನ್ನು ರಕ್ಷಿಸಿದ್ದರು.

ವಾಹನದಲ್ಲಿ ಗೋವುಗಳ ಕಾಲುಗಳನ್ನು ಹಗ್ಗದಿಂದ ಬಿಗಿದು, ಯಾವುದೇ ಮುಕ್ತ ಅವಕಾಶವಿಲ್ಲದೆ ಅತ್ಯಂತ ಹಿಂಸಾತ್ಮಕ ಮತ್ತು ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ತುರುಕಿಸಿ ಸಾಗಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಪೊಲೀಸರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ, ಕತ್ತಲಲ್ಲಿ ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸದ್ರಿ ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೇ ಮಾರಾಟ ಮಾಡಿದ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.

ಕಾನೂನು ಕ್ರಮ – ಮನೆ ಮತ್ತು ಕೊಟ್ಟಿಗೆ ಜಪ್ತಿ:

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅ.ಕ್ರ: 125/2026 ರ ಈ ಪ್ರಕರಣದಲ್ಲಿ, ತನಿಖೆ ಮುಂದುವರೆಸುತ್ತಾ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿತ ಶಿವಪ್ರಸಾದ್ ರವರಿಗೆ ಸೇರಿದ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಅಧಿಕಾರಿಗಳು ದಿನಾಂಕ: 08.10.2026 ರಂದು ನಿಯಮಾನುಸಾರ ಜಪ್ತಿ ಮಾಡಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತನಿಖೆ ತೀವ್ರಗೊಂಡಿದೆ.

Continue Reading

crime

ನಾನಾ ಪಾಟೇಕರ್ ಸಾವಿನಲ್ಲಿ ಬಿಗ್ ಟ್ವಿಸ್ಟ್: ಅಸಹಜ ಸಾವು (UD) ಪ್ರಕರಣ ದಾಖಲು, ತನಿಖೆ ಆರಂಭ!

Published

on

ಭಾರತೀಯ ಚಿತ್ರರಂಗದ ಪ್ರತಿಭಾವಂತ ಹಿರಿಯ ನಟ, ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಾನಾ ಪಾಟೇಕರ್ (75) ಅವರ ಹಠಾತ್ ನಿಧನವು ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿಯಲಾಗಿತ್ತು. ಆದರೆ, ಅವರ ಸಾವಿನ ಬಳಿಕ ಗೋವಾ ಪೊಲೀಸರು ನೀಡಿರುವ ಒಂದು ಹೆಜ್ಜೆಯು ಈ ಸಾವಿನ ಸುತ್ತ ಹೊಸ ಅನುಮಾನಗಳಿಗೆ ಹಾಗೂ ಚರ್ಚೆಗಳಿಗೆ ಕಾರಣವಾಗಿದೆ.

ಪೊಲೀಸರಿಂದ ಯುಡಿ (UD) ಕೇಸ್ ದಾಖಲು:

ನಾನಾ ಪಾಟೇಕರ್ ಅವರ ಸಾವು ಸಹಜವಾದುದಲ್ಲ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪಣಜಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು (Unnatural Death – UD) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ PSI ನಿತಿನ್ ನಾಯಕ್ ನೇತೃತ್ವದಲ್ಲಿ ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪ್ರಕರಣ ದಾಖಲಿಸಿದ್ದು ಯಾಕೆ? (ಅಸಲಿ ಕಾರಣ):

ಇದು ಯಾವುದೇ ಕ್ರಿಮಿನಲ್ ಹಿನ್ನೆಲೆಯ ಪ್ರಕರಣವಲ್ಲ ಬದಲಿಗೆ ಇದೊಂದು ತನಿಖಾ ಪ್ರಕ್ರಿಯೆಯ ಕಾನೂನು ಕ್ರಮವಷ್ಟೇ ಎಂದು ಮೂಲಗಳು ತಿಳಿಸಿವೆ. ಹಿರಿಯ ನಟ ನಾನಾ ಪಾಟೇಕರ್ ಅವರು ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಥವಾ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾರೆ.

ಯಾವುದೇ ವ್ಯಕ್ತಿ ಮನೆಯಲ್ಲಿ ಒಂಟಿಯಾಗಿರುವಾಗ ಅಥವಾ ಅನಿರೀಕ್ಷಿತವಾಗಿ ಸಾವನ್ನಪ್ಪಿದಾಗ, ಭವಿಷ್ಯದಲ್ಲಿ ಯಾವುದೇ ಕಾನೂನು ತೊಡಕುಗಳು ಅಥವಾ ಅನುಮಾನಗಳು ಬಾರದಂತೆ ಎಚ್ಚರಿಕೆ ವಹಿಸಲು ಪೊಲೀಸರು ಇಂತಹ ಸಂದರ್ಭಗಳಲ್ಲಿ ಮೆಡಿಕೋ-ಲೀಗಲ್ ಕೇಸ್ (MLC) ಅಥವಾ ಯುಡಿ (UD) ಪ್ರಕರಣವನ್ನು ದಾಖಲಿಸುವುದು ವಾಡಿಕೆ. ಮಣಿಪಾಲ್ ಆಸ್ಪತ್ರೆಯಿಂದ ಸಲ್ಲಿಕೆಯಾದ ವರದಿಯ ಆಧಾರದ ಮೇರೆಗೆ ಗೋವಾ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ವೈದ್ಯರ ಸ್ಪಷ್ಟನೆ:

ಗೋವಾದ ಬಂಬೋಲಿಮ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ನಾನಾ ಪಾಟೇಕರ್ ಅವರನ್ನು ಕರೆತಂದಾಗ ನಡೆದ ಘಟನೆಗಳ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ತೀವ್ರವಾದ ಹೃದಯಾಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ತರಲಾಗಿತ್ತು. ವೈದ್ಯಕೀಯ ತಂಡವು ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಸತತವಾಗಿ ಸಿಪಿಆರ್ (CPR) ನೀಡಿ ಜೀವ ಉಳಿಸಲು ಹರಸಾಹಸ ಪಟ್ಟಿತಾದರೂ, ದುರದೃಷ್ಟವಶಾತ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ (GMC) ರವಾನಿಸಲಾಗಿದ್ದು, ಅಂತಿಮ ವಿಧಿವಿಧಾನಗಳನ್ನು ಪುಣೆಯ ದೋಂಜೆ ಗ್ರಾಮದಲ್ಲಿರುವ ಅವರ ತೋಟದ ಮನೆಯಲ್ಲಿ ಪೂರ್ಣಗೊಳಿಸಲಾಗಿದೆ.

Continue Reading

arrest

ಮಂಗಳೂರು: ಕೋರಿಯರ್ ಮೂಲಕ ಎಂಡಿಎಂಎ ಸಾಗಾಟ; ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ, ಮೂವರ ಬಂಧನ!

Published

on

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಸಂಚು ರೂಪಿಸಿದ್ದ ದೊಡ್ಡ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ₹1.58 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಪ್ರಮಾಣದ ಎಂಡಿಎಂಎ (MDMA) ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯ ವಿವರ:

ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು, ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅಕ್ಟೋಬರ್ 08, 2026ರ ರಾತ್ರಿ 10:00 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ (D-Mart) ಬಳಿ ದಾಳಿ ನಡೆಸಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳ ವಿವರ:

ಅಪರಾಧ ವಸ್ತು: 1 ಕೆಜಿ 796.96 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹ 1,58,34,000/-)

ಇತರೆ ವಸ್ತುಗಳು: 3 ಮೊಬೈಲ್ ಫೋನ್‌ಗಳು, ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಬಾಕ್ಸ್ ಮತ್ತು ವಾಟರ್ ಪ್ಯೂರಿಫೈಯರ್.

ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ: ₹ 1,63,84,000/-

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಅಬ್ದುಲ್ ಹಾಪೀಲ್ (25 ವರ್ಷ): ಅನೀಸಾ ಮಂಜಿಲ್, ಬೈದಲಾ ಪೋಸ್ಟ್, ಮಂಗಳ್ಪಾಡಿ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. (ಈತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣ ದಾಖಲಾಗಿದೆ).

ಜಿಯಾವುಲ್ ಹಕ್ (30 ವರ್ಷ): ವಾಸ: # 1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು. (ಈತನ ವಿರುದ್ಧ ದುಬೈ ದೇಶದ ರಸ್-ಅಲ್-ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸಾಗಿರುವ ಹಿನ್ನೆಲೆಯಿದೆ).

ಅಲ್ತಾಫ್ (28 ವರ್ಷ): ಹಾಲಿ ವಾಸ: ಫ್ಲ್ಯಾಟ್ ನಂ. 201, ಆಯಿಷಾ ಅಪಾರ್ಟಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು (ಸ್ವಂತ ವಿಳಾಸ: ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್ ಗ್ರಾಮ, ಜಲ್ಲಿಗುಡ್ಡೆ ಪೋಸ್ಟ್, ಮಂಗಳೂರು). (ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣವಿದೆ).

    ವಿನೂತನ ಕೃತ್ಯ – ಪಂಜಾಬ್‌ನಿಂದ ವಾಟರ್ ಪ್ಯೂರಿಫೈಯರ್ ಒಳಗೆ ಸಾಗಾಟ!

    ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸುತ್ತಿದ್ದರು. ಸಿಕ್ಕಿಬೀಳದಂತೆ ತಡೆಯಲು, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹವಾಗುವ ಒಳಭಾಗದಲ್ಲಿ ಎಂಡಿಎಂಎ ಅನ್ನು ಅತ್ಯಂತ ಸುರಕ್ಷಿತವಾಗಿ ಭದ್ರಪಡಿಸಿ, ಬಳಿಕ ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸುತ್ತಿದ್ದರು.

    ನಂತರ ಈ ಮಾದಕವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ, ಪೊಲೀಸರು ಆರಂಭಿಕ ಹಂತದಲ್ಲೇ ಕಾರ್ಯಾಚರಣೆ ನಡೆಸಿ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    Continue Reading

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)

    Trending

    Copyright © 2025 Deevatige

    error: Content is protected !!