Connect with us

Belthangady

ಸೌಜನ್ಯ ಪ್ರಕರಣ: ತನಿಖೆ ತೀವ್ರಗೊಳಿಸಿದ ಎಸ್‌ಐಟಿ..12ಕ್ಕೂ ಹೆಚ್ಚು ಶಂಕಿತರ ಗೌಪ್ಯ ಪಟ್ಟಿ ಸಿದ್ಧ..

Published

on

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಅತ್ಯಂತ ಮಹತ್ವದ ಹಂತ ತಲುಪಿದೆ. ಈ ಹಿಂದಿನ ತನಿಖಾ ತಂಡಗಳು ಕಡೆಗಣಿಸಿದ್ದ ಹಾಗೂ ಕೈಬಿಟ್ಟಿದ್ದ ಹಲವು ಆಯಾಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ, ಕೃತ್ಯದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಶಂಕೆಯಿರುವ 12ಕ್ಕೂ ಹೆಚ್ಚು ಆರೋಪಿಗಳ ಗೌಪ್ಯ ಪಟ್ಟಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.

ವಿವಿಧ ಆಯಾಮಗಳ ಪ್ರಾಥಮಿಕ ತನಿಖೆಯ ಮೂಲಕ ಸಿಕ್ಕಿರುವ ಸುಳಿವುಗಳ ಆಧಾರದಲ್ಲಿ ಎಸ್‌ಐಟಿ ಸಿದ್ಧಪಡಿಸಿರುವ ಈ ಶಂಕಿತ ಪಟ್ಟಿಯಲ್ಲಿರುವ ಹೆಸರುಗಳನ್ನು ಗೌಪ್ಯವಾಗಿಟ್ಟು ತನಿಖೆ ಮುಂದುವರಿಸಿದ್ದು, ಸದ್ಯದಲ್ಲೇ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಪಟ್ಟಿಯಲ್ಲಿರುವ ಎಲ್ಲಾ ಶಂಕಿತರನ್ನು ವಿಚಾರಣೆಗೊಳಪಡಿಸಿ, ತನಿಖೆಯ ಮುಖ್ಯ ಭಾಗವಾಗಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ನಿರೀಕ್ಷೆ ಹೆಚ್ಚಾಗಿದೆ. ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯೊಬ್ಬರಿಗೂ ನೋಟಿಸ್ ಜಾರಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಶಂಕಿತರ ಪಟ್ಟಿಯಲ್ಲಿ ಸೌಜನ್ಯ ಕುಟುಂಬ ಹಾಗೂ ಹೋರಾಟಗಾರರು 2012ರಿಂದ ಉಲ್ಲೇಖಿಸುತ್ತಿದ್ದ ಮೂರು ಹೆಸರುಗಳು ಮಾತ್ರವಲ್ಲದೆ ಇತರ ಹೊಸ ಹೆಸರುಗಳು ಸೇರ್ಪಡೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಚಿನ್ನಯ್ಯ ವಿಚಾರಣೆ ಸಾಧ್ಯತೆ:
2012ರಲ್ಲಿ ಕೃತ್ಯ ನಡೆದ ಬಳಿಕ ಅಪ್ರಾಪ್ತ ಬಾಲಕಿಯ ಶವವನ್ನು ವಿಲೇವಾರಿ ಮಾಡಿರುವ ಶಂಕೆ ವ್ಯಕ್ತವಾಗಿರುವುದರಿಂದ, ಧರ್ಮಸ್ಥಳದ ಮಾಜಿ ಸ್ವಚ್ಛತಾ ಸಿಬ್ಬಂದಿ ಹಾಗೂ ಸಮೂಹ ಸಮಾಧಿ ಪ್ರಕರಣದ ಸಾಕ್ಷಿದೂರುದಾರ ಸಿ.ಎನ್. ಚಿನ್ನಯ್ಯ ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ (36/2025) ಸಾಕ್ಷಿದೂರುದಾರ ಮತ್ತು ಆರೋಪಿಯಾಗಿರುವ ಚಿನ್ನಯ್ಯ, ಪ್ರಕರಣದ ದಿಕ್ಕನ್ನೇ ಬದಲಿಸಲು ಕಾರಣನಾಗಿದ್ದ ಎಂಬ ಅಂಶ ಗಮನಾರ್ಹವಾಗಿದೆ. ಈಗಾಗಲೇ ಸೌಜನ್ಯ ಪ್ರಕರಣದ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಬಹುತೇಕ ಪೊಲೀಸ್ ಅಧಿಕಾರಿಗಳಿಗೆ ಎಸ್‌ಐಟಿ ನೋಟಿಸ್ ನೀಡಿ ವಿಚಾರಣೆ ನಡೆಸಿದೆ.

ಹೈದರಾಬಾದ್ ಎಫ್‌ಎಸ್‌ಎಲ್‌ಗೆ ಮರುಪರೀಕ್ಷೆ ಮಾದರಿ:
ಇನ್ನೊಂದೆಡೆ, 14 ವರ್ಷಗಳ ಹಿಂದೆ ಸೌಜನ್ಯ ಮೃತದೇಹದಿಂದ ಸಂಗ್ರಹಿಸಲಾಗಿದ್ದ ಯೋನಿ ದ್ರವದ ಮಾದರಿಯನ್ನು ಹೈದರಾಬಾದ್‌ನ ಸುಧಾರಿತ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಮರುಪರಿಶೀಲನೆಗಾಗಿ ಕಳುಹಿಸಲಾಗಿದೆ. ಪ್ರಕರಣದ ರಹಸ್ಯ ಭೇದಿಸಿ ತನಿಖೆಯನ್ನು ಚುರುಕುಗೊಳಿಸಲು ಅಗತ್ಯವಾಗಿರುವ ಈ ವಿಧಿವಿಜ್ಞಾನ ಪರೀಕ್ಷಾ ವರದಿಯ ನಿರೀಕ್ಷೆಯಲ್ಲಿ ತನಿಖಾ ತಂಡವಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Published

on

ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

Belthangady

ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ

Published

on

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ತಿದ್ದುಪಡಿ ಆದೇಶದ ಪ್ರಕಾರ:

  1. ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
  2. ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ

ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.

Continue Reading

Belthangady

ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!

Published

on

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.

ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.

ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್‌ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!