Connect with us

CONGRESS

ವಿಶೇಷ ವರದಿ: ಕರಾವಳಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಹವಾ – ಬಿಜೆಪಿಯ ಭದ್ರಕೋಟೆಗೆ ಎದುರಾದ ಸವಾಲುಗಳು

Published

on

ಬಿಜೆಪಿ ಮತ್ತು ಸಂಘ ಪರಿವಾರದ ದಶಕಗಳ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ (ಅವಳಿ) ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯವೈಖರಿ ಮತ್ತು ತಂತ್ರಗಾರಿಕೆ ಹೊಸ ಸಂಚಲನ ಮೂಡಿಸಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗದೆ, ಕರಾವಳಿ ಭಾಗದ ಮೇಲೆ ಅವರು ಇಟ್ಟಿರುವ ವಿಶೇಷ ಗಮನವು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳು ಕಳೆದ ಮೂರು ದಶಕಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಯೋಗಶಾಲೆ. ಹಿಂದುತ್ತ್ವ, ರಾಷ್ಟ್ರೀಯತೆ ಮತ್ತು ಮೋದಿ ಅಲೆ ಈ ಭಾಗದಲ್ಲಿ ಬಿಜೆಪಿಗೆ 13ರಲ್ಲಿ 11 ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಿತ್ತು. ಅಂತಹ ನೆಲದಲ್ಲೇ ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರಂತರ ಓಡಾಟ, ನಿರ್ಧಾರಗಳು ಮತ್ತು ಸಾಫ್ಟ್ ಹಿಂದುತ್ವದ ನಡೆಗಳು ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿದೆ.

ಹಲವು ವರ್ಷಗಳ ಕನಸಿನ ನಂತರ ಸಿಎಂ ಕುರ್ಚಿ ಏರಿರುವ ಡಿಕೆಶಿ, ಸಿಕ್ಕಿರುವ ಅಲ್ಪಾವಧಿಯನ್ನು 2028ರ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಚಾಣಾಕ್ಷ್ಯತನದಿಂದ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಪಕ್ಷದ ಒಳಗಿನ ಮಾತು. ಬೆಂಗಳೂರು-ವಿಧಾನಸೌಧಕ್ಕೆ ಸೀಮಿತವಾಗದೆ ರಾಜ್ಯಾದ್ಯಂತ ಸಂಚರಿಸುವ ಅವರ ಶೈಲಿ ಈಗ ಕರಾವಳಿಯತ್ತ ತಿರುಗಿದೆ.

ಡಿಕೆಶಿ ಕರಾವಳಿ ಅಸ್ತ್ರಗಳು – ಜನರ ಮನ ಗೆದ್ದ ಮೂರು ನಿರ್ಧಾರ

ಕಳೆದ ವಾರ ಮಂಗಳೂರಿನಲ್ಲಿ ನಡೆದ ಇತಿಹಾಸದಲ್ಲೇ ಮೊದಲ ಸಚಿವ ಸಂಪುಟ ಸಭೆ ಕೇವಲ ಸಭೆಯಾಗಿರಲಿಲ್ಲ, ಅದು ಒಂದು ಸಂದೇಶವಾಗಿತ್ತು.

1. ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಬೇಡಿಕೆಯಾಗಿದ್ದ ತುಳುವಿಗೆ ಅಧಿಕೃತ ಮಾನ್ಯತೆ ಘೋಷಣೆ. ಇದಕ್ಕೆ ಬಿಜೆಪಿ ನಾಯಕರೂ ಕೂಡ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಇದು ಕೇವಲ ಭಾಷೆಯ ಪ್ರಶ್ನೆಯಲ್ಲ, ತುಳುನಾಡಿನ ಅಸ್ಮಿತೆಯ ಪ್ರಶ್ನೆ. ಈ ಮೂಲಕ ಕಾಂಗ್ರೆಸ್ ತುಳು ಮತದಾರರ ಭಾವನಾತ್ಮಕ ನಂಟನ್ನು ಗಟ್ಟಿ ಮಾಡಿಕೊಂಡಿದೆ.

2. ದಕ್ಷಿಣ ಕನ್ನಡ ಜಿಲ್ಲೆಯ ಮರುನಾಮಕರಣ: ಜಿಲ್ಲೆಯ ಹೆಸರನ್ನು ‘ಮಂಗಳೂರು’ ಜಿಲ್ಲೆ ಎಂದು ಬದಲಿಸುವ ಪ್ರಸ್ತಾಪ. ಇದು ಸ್ಥಳೀಯ ವರ್ತಕರು, ಉದ್ಯಮಿಗಳು ಮತ್ತು ಯುವಜನತೆಯ ಬಹುದಿನದ ಬೇಡಿಕೆ. ಮಂಗಳೂರು ಬ್ರ್ಯಾಂಡ್ ಗೆ ಜಾಗತಿಕ ಮನ್ನಣೆ ಇದೆ ಎಂಬ ವಾದಕ್ಕೆ ಡಿಕೆಶಿ ಮನ್ನಣೆ ನೀಡಿದ್ದಾರೆ.

3. ಮೀನುಗಾರರು ಮತ್ತು ಧಾರ್ಮಿಕ ಕೇಂದ್ರಗಳಿಗೆ ಸ್ಪರ್ಶ: ಮಂಗಳೂರು ಹಾರ್ಬರ್ ನಲ್ಲಿ ಮೀನುಗಾರರನ್ನು ಖುದ್ದು ಭೇಟಿಯಾಗಿ ಸಮಸ್ಯೆ ಆಲಿಸಿದ್ದು, ಜಿಲ್ಲೆಯ ಪ್ರಮುಖ ದೇವಸ್ಥಾನ, ದೈವಸ್ಥಾನಗಳಿಗೆ ವಿಶೇಷ ಅನುದಾನ ಘೋಷಿಸಿದ್ದು ಮತ್ತು ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನು ಭೇಟಿಯಾಗಿದ್ದು ಹಳೆಯ ಕಾಂಗ್ರೆಸಿಗರಲ್ಲಿ ಹೊಸ ಉತ್ಸಾಹ ತುಂಬಿದೆ.

ಇದರ ಜೊತೆಗೆ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಹೆಬ್ರಿ, ತೀರ್ಥಹಳ್ಳಿ, ಬಾಳೆಹೊನ್ನೂರು, ಸಕಲೇಶಪುರದಲ್ಲಿ ರೈತರ ಜೊತೆ ನೇರ ಸಂವಾದ ನಡೆಸಿದ್ದು, ಪಶ್ಚಿಮ ಘಟ್ಟದ ಜನರ ಆತಂಕಕ್ಕೆ ಸ್ಪಂದಿಸಿದಂತೆ ಕಂಡುಬಂದಿದೆ.

ಸಾಫ್ಟ್ ಹಿಂದುತ್ವವೇ ಬಿಜೆಪಿಗೆ ನಡುಕ ಹುಟ್ಟಿಸಿದ್ದು?

ಡಿಕೆ ಶಿವಕುಮಾರ್ ಅವರ ರಾಜಕೀಯ ಶೈಲಿಯನ್ನು ಕರಾವಳಿಯ ಜನರು ಬೇರೆ ದೃಷ್ಟಿಯಿಂದ ನೋಡುತ್ತಿದ್ದಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ trouble shooter ಎಂದೇ ಜನಜನಿತರಾಗಿರುವ ಡಿಕೆಶಿಯ ನಡೆಯ ಬಗ್ಗೆ ಕೇಸರಿ ಪಾಳಯದಲ್ಲಿ ಚರ್ಚೆಗಳು ಆರಂಭವಾಗಿರುವುದು ಸತ್ಯ.

ಅವರು ಸ್ವತಃ ದೊಡ್ಡ ದೈವಭಕ್ತರು. ಕುಂಭಮೇಳದಲ್ಲಿ ಮಿಂದೆದ್ದದ್ದು, ಶಿವರಾತ್ರಿ ವೇದಿಕೆಯಲ್ಲಿ ಅಮಿತ್ ಶಾ ಜೊತೆ ಕಾಣಿಸಿಕೊಂಡದ್ದು, ದೇವಸ್ಥಾನಗಳಿಗೆ ಭೇಟಿ ನೀಡುವಾಗ ಪಾಲಿಸುವ ಸಂಪ್ರದಾಯ – ಇವೆಲ್ಲವೂ ಕರಾವಳಿಯ ಧಾರ್ಮಿಕ ಮನಸ್ಥಿತಿಗೆ ಹತ್ತಿರವಾಗುವಂತದ್ದು.

ಕಳೆದ ಒಂದು ದಶಕದಿಂದ ಕರಾವಳಿಯಲ್ಲಿ ನಡೆದ ಕೋಮು ಗಲಭೆ, ಜಾತಿ ತಿಕ್ಕಾಟದಲ್ಲಿ ಅದೆಷ್ಟೋ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಅಭಿವೃದ್ಧಿ ಮರೆತು ಕೇವಲ ಧರ್ಮದ ಆಧಾರದಲ್ಲಿ ಮತ ಕೇಳುವ ರಾಜಕೀಯದಿಂದ ಜನರು ಬೇಸತ್ತಿದ್ದಾರೆ ಎಂಬ ಮಾತು ಯುವಜನತೆಯಲ್ಲಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರು “ಅಭಿವೃದ್ಧಿ + ಹಿಂದುತ್ವದ ಗೌರವ” ಎಂಬ ಸೂತ್ರವನ್ನು ಮುಂದಿಟ್ಟಿದ್ದಾರೆ.

ಇದು ಬಿಜೆಪಿಯ ಏಕಸ್ವಾಮ್ಯದ ಹಿಂದುತ್ವ ನರೇಟಿವ್ ಗೆ ನೇರ ಸವಾಲಾಗಿದೆ. ಮುಖ್ಯಮಂತ್ರಿಯೇ ಹಿಂದು ಸಂಪ್ರದಾಯವನ್ನು ಗೌರವಿಸಿದಾಗ, ಬಿಜೆಪಿಗೆ ಕೇವಲ “ಹಿಂದು ವಿರೋಧಿ ಕಾಂಗ್ರೆಸ್” ಎಂದು ಹಣೆಪಟ್ಟಿ ಕಟ್ಟಿ ಮತ ಕೇಳುವುದು ಕಷ್ಟವಾಗುತ್ತದೆ.

ಸ್ಥಳೀಯ ಕಾಂಗ್ರೆಸ್ ನಾಯಕತ್ವಕ್ಕೆ ಬಲ

ಡಿಕೆಶಿ ಹಾಕಿಕೊಟ್ಟಿರುವ ಈ ಹಾದಿ ಸ್ಥಳೀಯ ನಾಯಕರಿಗೆ ವರದಾನವಾಗಿದೆ. ಕರಾವಳಿಯಲ್ಲಿ ಇದುವರೆಗೆ ಬಿಜೆಪಿ ಕೇವಲ ಹಿಂದುತ್ವದ ಭಾವನಾತ್ಮಕ ವಿಚಾರಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿತ್ತು. ಆದರೆ, ಡಿ.ಕೆ. ಶಿವಕುಮಾರ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರಾದ ಅಶೋಕ್ ರೈ, ಪದ್ಮರಾಜ್, ಮಿಥುನ್ ರೈ ಮುಂತಾದವರ ಸಾಂಪ್ರದಾಯಿಕ ಹಾಗೂ ಹಿಂದೂ ಆಚರಣೆಗಳ ನಿಲುವು ಬಿಜೆಪಿಯ ಏಕೈಕ ಮೊಗಸಾಲೆಯನ್ನು ಸವಾಲಿಗೆ ಒಡ್ಡಿದೆ.

ಸಚಿವ ಯು.ಟಿ. ಖಾದರ್ – ಎಂದೂ ಜಾತಿಗೆ ಸೀಮಿತರಾಗದ ನಾಯಕ. ದೇವಸ್ಥಾನದಲ್ಲಿ ಪ್ರಸಾದ, ತೀರ್ಥ ಸ್ವೀಕರಿಸುವ ಅವರ ರೀತಿಯನ್ನು ಸ್ವತಃ ಬಿಜೆಪಿ ಕಾರ್ಯಕರ್ತರೂ ಮೆಚ್ಚುತ್ತಾರೆ. ಸಚಿವ ಯು.ಟಿ. ಖಾದರ್ ಅವರು ಎಲ್ಲ ಸಮುದಾಯಗಳ ಜೊತೆ ಬೆರೆಯುವ ಮತ್ತು ದೇವಸ್ಥಾನ-ದೈವಸ್ಥಾನಗಳ ಸಂಪ್ರದಾಯ ಗೌರವಿಸುವ ಶೈಲಿ ಕಾಂಗ್ರೆಸ್‌ಗೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ.

ಹೀಗಾಗಿ, ಮೇಲಿನ ನಾಯಕತ್ವ ಸಾಫ್ಟ್ ಹಿಂದುತ್ವದ ದಾರಿ ತೋರಿಸಿದರೆ, ಕೆಳಗಿನ ನಾಯಕತ್ವ ಅದನ್ನು ಜನರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಮುಂದೇನು? ಬಿಜೆಪಿಗೆ ನಿಜಕ್ಕೂ ಮುಳುವಾಗುತ್ತಾ?

ಡಿಕೆಶಿಯವರ ಈ ನಡೆಗಳು ತಕ್ಷಣಕ್ಕೆ ಬಿಜೆಪಿಯ ಭದ್ರಕೋಟೆಯನ್ನು ಉರುಳಿಸುತ್ತದೆ ಎಂದು ಹೇಳಲಾಗದು. ಅವಳಿ ಜಿಲ್ಲೆಯಲ್ಲಿ ಸಂಘ ಪರಿವಾರದ ಬೇರು ಬಹಳ ಆಳವಾಗಿದೆ. ಆದರೆ, ಬಿಜೆಪಿಯ ರಣತಂತ್ರವನ್ನು ಬದಲಿಸುವಂತೆ ಮಾಡಿರುವುದು ನಿಜ.

ಇನ್ನು ಮುಂದೆ ಕೇವಲ ಮೋದಿ, ಹಿಂದುತ್ವದ ಹೆಸರಿನಲ್ಲಿ ಮತ ಕೇಳಿದರೆ ಸಾಲದು, ಅಭಿವೃದ್ಧಿ, ಪ್ರವಾಸೋದ್ಯಮ, ಮೀನುಗಾರರ ಸಮಸ್ಯೆ, ತುಳು ಅಸ್ಮಿತೆಯ ಬಗ್ಗೆ ಮಾತನಾಡಲೇಬೇಕು ಎಂಬ ಒತ್ತಡ ಬಿಜೆಪಿ ಮೇಲೆ ಬೀಳಬಹುದು.

ಕಾಂಗ್ರೆಸ್ ವಲಯದಲ್ಲಿ ಮಂಕಾಗಿದ್ದ ಕಾರ್ಯಕರ್ತರಿಗೆ ಇದು ಸಂಜೀವಿನಿಯಾಗಿದೆ. ಕ್ರೆಡಿಟ್ ವಾರ್ ಶುರುವಾಗಿದ್ದರೂ, ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ.

    ಒಟ್ಟಿನಲ್ಲಿ, ಡಿ.ಕೆ. ಶಿವಕುಮಾರ್ ಅವರ ಕರಾವಳಿ ಪ್ರವಾಸ ಕೇವಲ ಪ್ರವಾಸವಲ್ಲ, ಅದು 2028ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಕೋಟೆಗೆ ಹಾಕುತ್ತಿರುವ ಮೊದಲ ಕನ್ನ. ಇದು ಮುಳುವಾಗುತ್ತಾ ಅಥವಾ ತಾತ್ಕಾಲಿಕ ಹವಾ ಆಗಿ ಉಳಿಯುತ್ತಾ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    BJP

    ಮಂಗಳೂರಿನಲ್ಲಿ ಬಿಜೆಪಿ–ಕಾಂಗ್ರೆಸ್ ಪ್ರತ್ಯೇಕ ಪ್ರತಿಭಟನೆ: ‘ವೋಟ್ ಚೋರಿ’ ವಿರುದ್ಧ ಕಾಂಗ್ರೆಸ್ ಆಕ್ರೋಶ; ಬೆಲೆ ಏರಿಕೆ ವಿರುದ್ಧ ಕಮಲ ಪಡೆ ಕಿಡಿ!

    Published

    on

    ಎಸ್‌ಐಆರ್ ಮೂಲಕ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ | ಬಸ್ ದರ, ಹಾಲಿನ ಬೆಲೆ ಏರಿಕೆ ಹಿಂಪಡೆಯಲು ಬಿಜೆಪಿ ಆಗ್ರಹ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರಾಜಕೀಯ ಪ್ರತಿಭಟನೆಗಳ ಕಾವು ಜೋರಾಗಿತ್ತು. ಒಂದೆಡೆ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಹಾಗೂ ಮತದಾನದ ಹಕ್ಕಿನ ರಕ್ಷಣೆ ಹೆಸರಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ‘ವೋಟ್ ಬಚಾವೋ–ದೇಶ್ ಬಚಾವೋ’ ಜನಾಂದೋಲನದಡಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಮತ್ತು ಹಾಲಿನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದರು. ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪಗಳ ಸುರಿಮಳೆಗೈದರು.

    ಎಸ್‌ಐಆರ್ ಮೂಲಕ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ

    ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಉದ್ದೇಶದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ದೇಶವ್ಯಾಪಿ ಹಮ್ಮಿಕೊಂಡಿರುವ ‘ವೋಟ್ ಬಚಾವೋ–ದೇಶ್ ಬಚಾವೋ’ ಬೃಹತ್ ಜನಾಂದೋಲನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ದೇಶದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಮೂಲಕ ಬಿಜೆಪಿ ಮತ ಕಳ್ಳತನದ ಹಾದಿ ಹಿಡಿದಿರುವುದು ಜಗಜ್ಜಾಹೀರಾಗಿದೆ. ಈ ಪ್ರಕ್ರಿಯೆಯ ಗಂಭೀರತೆಯನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಲ್ಲಿನ ರಾಜಕೀಯ ಬೆಳವಣಿಗೆಗಳಲ್ಲಿ ಹಿನ್ನಡೆಯಾಗಿದ್ದು, ಅದೇ ರೀತಿಯ ಪರಿಸ್ಥಿತಿ ಭಾರತದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮಗಳು ಗೋಚರಿಸಲಿವೆ ಎಂದು ಅಭಿಪ್ರಾಯಪಟ್ಟರು.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಜನಸಾಮಾನ್ಯರ ಅತ್ಯಂತ ಪ್ರಬಲ ಅಸ್ತ್ರವಾಗಿದೆ. ಆದರೆ ಮತದಾರರ ಈ ಹಕ್ಕನ್ನು ಕಸಿದುಕೊಂಡು ಬಿಜೆಪಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಯುತ್ತಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು ಎದ್ದಿದ್ದು, ಜನರ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

    ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯುಕ್ತರ ಆಯ್ಕೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ತನಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸಿದೆ. ಇದೊಂದು ‘ವೋಟ್ ಚೋರಿ’ ಷಡ್ಯಂತ್ರ ಎಂದು ಆರೋಪಿಸಿದರು.

    ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಗಳಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ತೆರಿಗೆ, ಸೇವಾ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಹೆಚ್ಚಿಸುತ್ತಿದ್ದರೆ, ಕೇಂದ್ರದ ನೀತಿಗಳಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು.

    ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಆಡಳಿತಾತ್ಮಕ ಹಿನ್ನಡೆ ಕಂಡುಬರುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಪರ್ಯಾಯ ರಾಜಕೀಯ ವ್ಯವಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

    ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಅಪ್ಪಿ ಎಸ್., ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ, ಶಾಹುಲ್ ಹಮೀದ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ವಿನಯರಾಜ್ ಎ.ಸಿ., ನವೀನ್ ಡಿ. ಸೋಜ, ಅಬ್ಬಾಸ್ ಅಲಿ, ಲುಕ್ಮಾನ್ ಬಂಟ್ವಾಳ, ಇಬ್ರಾಹೀಂ ನವಾಝ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

    ಬಸ್ ದರ, ಹಾಲಿನ ಬೆಲೆ ಏರಿಕೆ ವಿರುದ್ಧ ಬಿಜೆಪಿ ಆಕ್ರೋಶ

    ಇನ್ನೊಂದೆಡೆ, ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹಾಗೂ ಹಾಲಿನ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಪಿವಿಎಸ್ ವೃತ್ತದ ಸಮೀಪದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಚಟುವಟಿಕೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಜನಸಾಮಾನ್ಯರ ಮೇಲೆ ನಿರಂತರ ಆರ್ಥಿಕ ಹೊರೆ ಹೇರುತ್ತಿದೆ ಎಂದು ಆರೋಪಿಸಿದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿತ್ತು. ಇದೀಗ ಮತ್ತೆ ಶೇ.25ರಿಂದ 40ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.

    ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕಿಸಿದರು. ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು.

    ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾದ ಕರಾವಳಿ

    ಒಂದೆಡೆ ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ನಡೆಸಿದರೆ, ಮತ್ತೊಂದೆಡೆ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಬೆಲೆ ಏರಿಕೆಯ ಹೊರೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಎರಡೂ ಪಕ್ಷಗಳ ಪ್ರತ್ಯೇಕ ಪ್ರತಿಭಟನೆಗಳು ಮಂಗಳೂರಿನಲ್ಲಿ ರಾಜಕೀಯ ಕಾವನ್ನು ಹೆಚ್ಚಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ಬಹಿರಂಗವಾಗಿ ಪ್ರದರ್ಶನಗೊಂಡಿತು.

    Continue Reading

    CONGRESS

    ಎಸ್‌ಐಆರ್‌ ಅಕ್ರಮ ಆರೋಪ: ದೆಹಲಿಯಲ್ಲಿ ಇಂಡಿಯಾ ಕೂಟ ಬೃಹತ್‌ ಪ್ರತಿಭಟನೆ, ಮೋದಿ-ಜ್ಞಾನೇಶ್‌ ವಿರುದ್ಧ ನಾಯಕರ ತೀವ್ರ ವಾಗ್ದಾಳಿ

    Published

    on

    ನವದೆಹಲಿ:ಎಸ್‌ಐಆರ್‌ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ‘ಚಲೋ ದೆಹಲಿ’ ಪ್ರತಿಭಟನೆ ನಡೆಸಿತು.

    ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಆರ್‌ಜೆಡಿ ಸೇರಿದಂತೆ ಹಲವು ವಿಪಕ್ಷಗಳ ಮುಖಂಡರು ಒಂದಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಜ್ಞಾನೇಶ್‌ ಕುಮಾರ್ ಜೈಲಿಗೆ ಹೋಗಲಿದ್ದಾರೆ: ರಾಹುಲ್ ಗಾಂಧಿ

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, “ಜ್ಞಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸುವುದು ಖಚಿತ. ಅವರು ಎಸಗಿರುವ ದೇಶದ್ರೋಹದ ಕೆಲಸಕ್ಕೆ ಜೈಲು ಸೇರಲಿದ್ದಾರೆ. ಮತಚೋರಿಗಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಅವರಿಬ್ಬರೂ ಕಾನೂನು ಕ್ರಮ ಎದುರಿಸಲೇಬೇಕು. ಜ್ಞಾನೇಶ್ ಕುಮಾರ್ ಅವರ ನಂತರ ನಾವು ಮೋದಿ ಮತ್ತು ಶಾ ವಿರುದ್ಧ ನಿಯಮಾನುಸಾರ ಹೋರಾಟ ಮುಂದುವರಿಸುತ್ತೇವೆ,” ಎಂದು ಎಚ್ಚರಿಸಿದರು.

    ‘ಚೋರಿ’ ಸರ್ಕಾರಗಳನ್ನು ಕಿತ್ತೊಗೆಯುತ್ತೇವೆ: ಮಲ್ಲಿಕಾರ್ಜುನ ಖರ್ಗೆ

    ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದ ಸರ್ಕಾರಗಳು ‘ಮತ ಚೋರಿ’ ಸರ್ಕಾರಗಳಾಗಿವೆ. ದಲಿತರು, ಯುವಕರು ಮತ್ತು ಮಹಿಳೆಯರ ಮತಗಳನ್ನು ಕಸಿಯಲು ಮೋದಿ ಅವರು ಜ್ಞಾನೇಶ್‌ ಕುಮಾರ್‌ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಅನೈತಿಕ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದು ಗುಡುಗಿದರು.

    ಇದು ‘ವೋಟರ್ಸ್‌ vs ಚೀಟರ್ಸ್‌’ ನಡುವಿನ ಹೋರಾಟ: ತೇಜಸ್ವಿ ಯಾದವ್‌

    ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, “ಪ್ರಧಾನಿ ಮೋದಿಯವರೇ, ನೀವು ದೇಶ ಮತ್ತು ಜ್ಞಾನೇಶ್‌ ಕುಮಾರ್‌ ನಡುವೆ ಒಬ್ಬರನ್ನು ಆರಿಸಿಕೊಳ್ಳಿ. ಈ ಹೋರಾಟವು ದೇಶದ ನಿಜವಾದ ಮತದಾರರು ಮತ್ತು ವಂಚಕರ (ವೋಟರ್ಸ್‌ ಹಾಗೂ ಚೀಟರ್ಸ್‌) ನಡುವಿನ ಯುದ್ಧವಾಗಿದೆ. ಕೇಂದ್ರದ್ದು ದೋ ನಂಬರಿ ಸರ್ಕಾರ,” ಎಂದು ವ್ಯಂಗ್ಯವಾಡಿದರು.

    ಪ್ರಾಣ ಪಣಕ್ಕಿಟ್ಟು ಪ್ರಜಾಪ್ರಭುತ್ವ ರಕ್ಷಣೆ: ಮಮತಾ ಬ್ಯಾನರ್ಜಿ

    ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಮಾತನಾಡಿ, “ಎಸ್‌ಐಆರ್‌ಗೆ ಬಂಗಾಳ ಬಲಿಯಾಗಿದೆ. ನಾವು ಕೇಂದ್ರ ಸರ್ಕಾರ ಮತ್ತು ಜ್ಞಾನೇಶ್‌ ಕುಮಾರ್‌ ಅವರನ್ನು ಬಿಡುವುದಿಲ್ಲ. ಪ್ರಾಣವನ್ನೇ ಪಣಕ್ಕಿಟ್ಟಾದರೂ ಪ್ರಜಾಪ್ರಭುತ್ವವನ್ನು ಮರಳಿ ತರುತ್ತೇವೆ,” ಎಂದರು.

    ಯುಪಿಯಲ್ಲೂ ಮತಗಳ್ಳತನ ನಡೆದಿತ್ತು: ಅಖಿಲೇಶ್‌ ಯಾದವ್‌

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಮಾತನಾಡಿ, “ವಿಶ್ವಗುರು ಎಂದು ಬಡಾಯಿ ಕೊಚ್ಚಿಕೊಳ್ಳುವವರು ಈಗ ಮತಪಟ್ಟಿ ತಿರುಚುವ ಕೆಲಸದಲ್ಲಿ ನಿರತರಾಗಿದ್ದಾರೆ. 2022ರಲ್ಲಿ ಯುಪಿಯಲ್ಲೂ ಮತಗಳ್ಳತನದ ಮೂಲಕವೇ ನಮಗೆ ಸರ್ಕಾರ ರಚಿಸಲು ಬಿಡಲಿಲ್ಲ. ಉತ್ತರ ಪ್ರದೇಶದ ಮೂಲಕ ಅಧಿಕಾರಕ್ಕೆ ಬಂದವರನ್ನು ಅಲ್ಲಿನ ಜನರೇ ಬೀಳ್ಕೊಡಲಿದ್ದಾರೆ,” ಎಂದು ಆಕ್ರೋಶ ಹೊರಹಾಕಿದರು

    Continue Reading

    CONGRESS

    ​ ಪುತ್ತೂರಿನಲ್ಲಿ ನವೆಂಬರ್ 22ಕ್ಕೆ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನ “ಅಶೋಕ ಜನಮನ” ಕಾರ್ಯಕ್ರಮ – ಶಾಸಕ ಅಶೋಕ್ ಕುಮಾರ್ ರೈ.

    Published

    on

    ​ ಪುತ್ತೂರು : ಅಶೋಕ್ ನೇತೃತ್ವದ ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ವರ್ಷದಂತೆ ಆಯೋಜಿಸಲಾಗುವ ಬೃಹತ್ ವಸ್ತ್ರ ವಿತರಣಾ ಕಾರ್ಯಕ್ರಮ “ಅಶೋಕ ಜನಮನ” ಈ ಬಾರಿ ನವೆಂಬರ್ 22 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

    ಪುತ್ತೂರಿನ ಅಶ್ವಿನಿ ಹೋಟೇಲಿನ ಸಭಾಂಗಣದಲ್ಲಿ ​ಶನಿವಾರ ಅಶೋಕ ಜನಮನ ಕಾರ್ಯಕ್ರಮ ಸಂಬಂಧ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಷಯದ ಬಗ್ಗೆ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳ ಜೊತೆ ಹಂಚಿಕೊಂಡರು.​

    ದಿನಾಂಕ ಬದಲಾವಣೆ:

    ​ಹವಾಮಾನ ವೈಪರೀತ್ಯ ಹಾಗೂ ಮಳೆಯ ಮುನ್ಸೂಚನೆ ಇದ್ದುದರಿಂದ, ಈ ಮೊದಲು ನವೆಂಬರ್ 8 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 22 ಕ್ಕೆ ಮುಂದೂಡಲಾಗಿದೆ. ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದರು.​

    ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು.

    ​₹4 ಕೋಟಿ ವೆಚ್ಚದಲ್ಲಿ 1 ಲಕ್ಷ ಜನರಿಗೆ ಕೊಡುಗೆ.

    ಈ ಬಾರಿ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಒಟ್ಟು 4 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೀಪಾವಳಿ ವಸ್ತ್ರಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ಬೃಹತ್ ಗುರಿ ಹೊಂದಲಾಗಿದೆ.

    ​ಉಡುಗೊರೆ ಆಯ್ಕೆಯ ಅವಕಾಶ:

    ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆ ನೀಡಲಾಗುವುದು. ಈ ಬಾರಿ ಸಾರ್ವಜನಿಕರ ಆಯ್ಕೆಗೆ ಮೂರು ಬಗೆಯ ಉಡುಗೊರೆಗಳನ್ನು ನೀಡಲಾಗುತ್ತಿದ್ದು; ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳಲ್ಲಿ ಯಾವುದಾದರೂ ಒಂದನ್ನು ಪಡೆದುಕೊಳ್ಳಬಹುದು.​

    ಪಕ್ಷಾತೀತ ಕಾರ್ಯಕ್ರಮ:

    ಇದು ಯಾವುದೇ ಕಾಂಗ್ರೆಸ್ ಪಕ್ಷದ ಸಮಾವೇಶವಲ್ಲ, ಬದಲಿಗೆ ಇದು ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ. ಇದಕ್ಕೆ ಎಲ್ಲಾ ಪಕ್ಷದವರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಎಲ್ಲರೂ ಭಾಗವಹಿಸಬಹುದು” ಎಂದು ಶಾಸಕರು ಮನವಿ ಮಾಡಿದರು.​

    ಮನೆ ಮನೆಗೆ ಆಹ್ವಾನ:

    ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಮನೆಗೂ ಟ್ರಸ್ಟ್‌ನ ಸದಸ್ಯರು ಖುದ್ದಾಗಿ ತೆರಳಿ ಆಮಂತ್ರಣ ನೀಡಲಿದ್ದಾರೆ.​ಉಚಿತ ಆಹಾರ ವ್ಯವಸ್ಥೆ (1 ಲಕ್ಷ ದೋಸೆ & ಊಟ): ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬಿಸಿಬಿಸಿ ದೋಸೆಗಳನ್ನು ವಿತರಿಸಲಾಗುವುದು (1 ಲಕ್ಷಕ್ಕೂ ಹೆಚ್ಚು ದೋಸೆಗಳ ಗುರಿ). ಅಲ್ಲದೆ, ಮಧ್ಯಾಹ್ನ 12:30 ರಿಂದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.​

    ವಿಶೇಷ ಆಕರ್ಷಣೆಗಳು:

    ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಇದರೊಂದಿಗೆ ಗೂಡುದೀಪ ಸ್ಪರ್ಧೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಕ್ರೀಡಾಂಗಣದಲ್ಲಿ ನೆರವೇರಲಿದ ಎಂದು ಸ್ಪಷ್ಟಪಡಿಸಿದರು. ​

    Continue Reading

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)

    Trending

    Copyright © 2025 Deevatige

    error: Content is protected !!