BJP
ಸಿಇಸಿ ಗ್ಯಾನೇಶ್ ಕುಮಾರ್ ‘ಏಕವ್ಯಕ್ತಿ ಸರ್ವಾಧಿಕಾರಿ’: ಮುಖ್ಯ ಚುನಾವಣೆ ಆಯುಕ್ತರ ವಜಾಕ್ಕೆ ವಿಪಕ್ಷಗಳ ಒಕ್ಕೊರಲ ಆಗ್ರಹ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ಚುನಾವಣಾ ಆಯೋಗವು “ಏಕವ್ಯಕ್ತಿ ಸರ್ವಾಧಿಕಾರ”ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರನ್ನು ಮಹಾಭಿಯೋಗದ ಮೂಲಕ ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ತೀವ್ರ ಆಗ್ರಹಿಸಿವೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್’ ತನಿಖಾ ವರದಿಯ ಪ್ರಕಾರ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮನ್ನು ಕತ್ತಲಲ್ಲಿಟ್ಟು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಹೊಸ ಮತದಾರರ ಸೇರ್ಪಡೆ, ಹೆಸರುಗಳ ಬಿಡುವು/ತೆಗೆದುಹಾಕುವಿಕೆ ಹಾಗೂ ಮತದಾರರ ಡೇಟಾಬೇಸ್ ಅನ್ನು ದೆಹಲಿಗೆ ಕೇಂದ್ರಿಕೃತಗೊಳಿಸಿರುವ ಕ್ರಮಗಳು ‘ಅನಧಿಕೃತ ಮತ್ತು ಕಾನೂನುಬಹಿರ’ ಎಂದು ಆ ಇಬ್ಬರು ಆಯುಕ್ತರು ಅಸಮಾಧಾನ ಹೊರಹಾಕಿದ್ದರು
ಏನಿದು ವಿವಾದ?
ರಾಷ್ಟ್ರೀಯ ಪತ್ರಿಕೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ತನಿಖಾ ವರದಿಯೇ ಈ ಸಂಚಲನಕ್ಕೆ ಕಾರಣ. ವರದಿಯ ಪ್ರಕಾರ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಇತರ ಆಡಳಿತಾತ್ಮಕ ನಿರ್ಧಾರಗಳಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿ ಆಯುಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಕಳೆದ 10 ತಿಂಗಳುಗಳಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಅಧಿಕೃತವಾಗಿ ತಮ್ಮ ಬಲವಾದ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಹೊಸ ಮತದಾರರ ಸೇರ್ಪಡೆ, ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕುವುದು (Deletion) ಮತ್ತು ಫಾರ್ಮ್-6 ಬದಲಾವಣೆಗಳನ್ನು ಇಬ್ಬರು ಆಯುಕ್ತರು ‘ಅನಧಿಕೃತ ಮತ್ತು ಕಾನೂನುಬಾಹಿರ’ ಎಂದು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಈ ವರದಿ ಹೊರಬೀಳುತ್ತಿದ್ದಂತೆ ಇಡೀ ವಿಪಕ್ಷ ಒಕ್ಕೊರಲಿನಿಂದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮುಗಿಬಿದ್ದಿದೆ.
ವಿಪಕ್ಷ ನಾಯಕರ ಆಕ್ರೋಶ:
1. ಜಾನ್ ಬ್ರಿಟ್ಟಾಸ್ (ಸಿಪಿಐಎಂ ರಾಜ್ಯಸಭಾ ಸಂಸದ):
“ಇದು ಇನ್ಮುಂದೆ ಚುನಾವಣಾ ಆಯೋಗವಾಗಿ ಉಳಿದಿಲ್ಲ. ಸಿಇಸಿ ಗ್ಯಾನೇಶ್ ಕುಮಾರ್ ಅವರ ಅಡಿಯಲ್ಲಿ ‘ಏಕವ್ಯಕ್ತಿ ಸರ್ವಾಧಿಕಾರ’ವಾಗಿ ಬದಲಾಗಿದೆ. ಆಯೋಗದ ಇತರ ಇಬ್ಬರು ಆಯುಕ್ತರೇ ಈ ನಿರ್ಧಾರಗಳು ಅಕ್ರಮ ಎಂದ ಮೇಲೆ ಸಂಸತ್ತು ತಕ್ಷಣವೇ ಸಿಇಸಿ ವಜಾ ಪ್ರಕ್ರಿಯೆಯನ್ನು ಆರಂಭಿಸಬೇಕು. ಸುಪ್ರೀಂ ಕೋರ್ಟ್ ತಕ್ಷಣವೇ ಈ SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
2. ಡೆರೆಕ್ ಒಬ್ರಿಯನ್ (ಟಿಎಂಸಿ ರಾಜ್ಯಸಭಾ ಸಂಸದ):
“ಅಂದಾಜು 5 ತಿಂಗಳ ಹಿಂದೆಯೇ 60ಕ್ಕೂ ಹೆಚ್ಚು ರಾಜ್ಯಸಭಾ ಸಂಸದರು ಸಿಇಸಿ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು ನೋಟಿಸ್ ನೀಡಿದ್ದರು. ಈಗ ಇಬ್ಬರು ಆಯುಕ್ತರೇ ವಿರೋಧ ವ್ಯಕ್ತಪಡಿಸಿರುವುದು ಬಹಿರಂಗವಾಗಿರುವುದರಿಂದ, ಪ್ರಜಾಪ್ರಭುತ್ವವನ್ನು ಉಳಿಸಲು ಈ ನೋಟಿಸ್ ಆಧರಿಸಿ ವಜಾ ಪ್ರಕ್ರಿಯೆಯನ್ನು ಜಾರಿಗೆ ತರುವ ಸಮಯ ಬಂದಿದೆ” ಎಂದಿದ್ದಾರೆ.
3. ಜೈರಾಮ್ ರಮೇಶ್ (ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ):
“ರಾಷ್ಟ್ರೀಯ ಪತ್ರಿಕೆಯ ವರದಿಯು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ನೈತಿಕತೆಯನ್ನು ಸಿಇಸಿ ಹೇಗೆ ಸಂಪೂರ್ಣವಾಗಿ ನಾಶಪಡಿಸಿದ್ದಾರೆ ಎಂಬುದನ್ನು ಬಯಲು ಮಾಡಿದೆ. ಈ ಆಘಾತಕಾರಿ ಸಂಗತಿಗಳ ಕುರಿತು ಪಕ್ಷದ ಪರವಾಗಿ ಅಭಿಷೇಕ್ ಸಿಂಘ್ವಿ ಅವರು ವಿವರವಾಗಿ ಮಾತನಾಡಲಿದ್ದಾರೆ” ಎಂದು ಹೇಳಿದ್ದಾರೆ.
4. ಮನೀಷ್ ತಿವಾರಿ (ಕಾಂಗ್ರೆಸ್ ಲೋಕಸಭಾ ಸಂಸದ):
“ವರದಿಯಲ್ಲಿರುವ ಅಂಶಗಳು ನಿಜವಾಗಿದ್ದರೆ, ಚುನಾವಣಾ ಆಯೋಗವನ್ನು ಹಿಂಬಾಗಿಲಿನಿಂದ ನಡೆಸಲು ‘ಅದೃಶ್ಯ ಹಸ್ತ’ವೊಂದು ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಹುಮತವಿಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ತೆಗೆದುಕೊಂಡ ನಿರ್ಧಾರಗಳು ಅಕ್ರಮ. ಇದು ಸಿಇಸಿ ವಿರುದ್ಧ ಮಹಾಭಿಯೋಗ ನಡೆಸಲು ಸೂಕ್ತವಾದ ಪ್ರಕರಣವಾಗಿದೆ” ಎಂದಿದ್ದಾರೆ.
5. ರಾಹುಲ್ ಗಾಂಧಿ (ಲೋಕಸಭೆ ವಿಪಕ್ಷ ನಾಯಕ):
“ಮತ ಕಳ್ಳತನವು ಭಾರತೀಯ ಜನತೆಯ ವಿರುದ್ಧ ಎಸಗಿರುವ ಅಪರಾಧ ಮತ್ತು ಸಂವಿಧಾನದ ಮೇಲಿನ ನೇರ ದಾಳಿ. ಬಿಜೆಪಿ, ಆರ್ಎಸ್ಎಸ್ ಮತ್ತು ಚುನಾವಣಾ ಆಯೋಗವು ಸೇರಿ ದೇಶದ್ರೋಹದ ಕೃತ್ಯ ಎಸಗಿವೆ” ಎಂದು ತೀವ್ರವಾಗಿ ಖಂಡಿಸಿದ್ದಾರೆ.
6. ಸಂಜಯ್ ರಾವುತ್ (ಶಿವಸೇನಾ UBT):
“ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತ್ತು ತಂತ್ರಾಂಶ ಬದಲಾವಣೆ ಮಾಡಲು ಕೇಂದ್ರ ಸರ್ಕಾರದ ಒತ್ತಡವಿತ್ತು. ಇದು ಮತ ಕಳ್ಳತನವಲ್ಲ, ಬದಲಿಗೆ ಮತಗಳ ದರೋಡೆ” ಎಂದು ಆರೋಪಿಸಿದ್ದಾರೆ.
7. ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ) ಮತ್ತು ಎಂ.ಕೆ. ಸ್ಟಾಲಿನ್ (ಡಿಎಂಕೆ):
ಚುನಾವಣಾ ಆಯೋಗವು ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ಇಡೀ SIR ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಗ್ಯಾನೇಶ್ ಕುಮಾರ್ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿದ್ದಾರೆ.
8. ಗ್ಯಾನೇಶ್ ಕುಮಾರ್ ಬಂಧನ: ಚುನಾವಣಾ ಆಯೋಗದ ನಿಯಮಗಳನ್ನು ಮೀರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ, ಮತದಾರರ ಪಟ್ಟಿ ಪರಿಷ್ಕರಣೆಯಂತಹ ಸೂಕ್ಷ್ಮ ವಿಚಾರದಲ್ಲಿ ಆಯೋಗದೊಳಗೇ ಭಿನ್ನಮತ ಸ್ಫೋಟಗೊಂಡಿರುವುದು ಭಾರತದ ರಾಜಕೀಯ ಮತ್ತು ಸಾಂವಿಧಾನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಷಯ ಭಾರೀ ಪ್ರಹಸನಕ್ಕೆ ಕಾರಣವಾಗುವ ಸಾಧ್ಯತೆ ಇದೆ
ಚುನಾವಣಾ ಆಯೋಗ (ECI) ಮತ್ತು ಆಡಳಿತ ಪಕ್ಷದ ಪ್ರತಿಕ್ರಿಯೆ:
ಸರ್ವಾನುಮತದ ನಿರ್ಧಾರಗಳ ಸಮರ್ಥನೆ: ವಿರೋಧ ಪಕ್ಷಗಳ ತೀವ್ರ ಆಕ್ರೋಶದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗದ ಮೂಲಗಳು, ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಆಯೋಗ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಸರ್ವಾನುಮತದಿಂದ (Unanimous) ಕೂಡಿವೆ ಎಂದು ಸ್ಪಷ್ಟಪಡಿಸಿವೆ.
ದೈನಂದಿನ ಆಡಳಿತಾತ್ಮಕ ಚರ್ಚೆಗಳು ಅಷ್ಟೇ: ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕರಡು ಹಂತದಲ್ಲಿ ಕೆಲವು ತಾಂತ್ರಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ದಾಖಲಿಸಿರುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯ ಭಾಗವೇ ಹೊರತು, ಅಂತಿಮ ನಿರ್ಧಾರಗಳ ವಿರುದ್ಧ ಯಾವುದೇ ಭಿನ್ನಮತವಿರಲಿಲ್ಲ ಎಂದು ಆಯೋಗ ತಿಳಿಸಿದೆ.
BJP
ಮಂಗಳೂರಿನಲ್ಲಿ ಬಿಜೆಪಿ–ಕಾಂಗ್ರೆಸ್ ಪ್ರತ್ಯೇಕ ಪ್ರತಿಭಟನೆ: ‘ವೋಟ್ ಚೋರಿ’ ವಿರುದ್ಧ ಕಾಂಗ್ರೆಸ್ ಆಕ್ರೋಶ; ಬೆಲೆ ಏರಿಕೆ ವಿರುದ್ಧ ಕಮಲ ಪಡೆ ಕಿಡಿ!
ಎಸ್‌ಐಆರ್ ಮೂಲಕ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ | ಬಸ್ ದರ, ಹಾಲಿನ ಬೆಲೆ ಏರಿಕೆ ಹಿಂಪಡೆಯಲು ಬಿಜೆಪಿ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರಾಜಕೀಯ ಪ್ರತಿಭಟನೆಗಳ ಕಾವು ಜೋರಾಗಿತ್ತು. ಒಂದೆಡೆ ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಹಾಗೂ ಮತದಾನದ ಹಕ್ಕಿನ ರಕ್ಷಣೆ ಹೆಸರಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ‘ವೋಟ್ ಬಚಾವೋ–ದೇಶ್ ಬಚಾವೋ’ ಜನಾಂದೋಲನದಡಿ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಮತ್ತು ಹಾಲಿನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದರು. ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪಗಳ ಸುರಿಮಳೆಗೈದರು.
ಎಸ್‌ಐಆರ್ ಮೂಲಕ ಮತ ಕಳ್ಳತನದ ಹಾದಿ ಜಗಜ್ಜಾಹೀರು: ರಮಾನಾಥ ರೈ
ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಉದ್ದೇಶದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ದೇಶವ್ಯಾಪಿ ಹಮ್ಮಿಕೊಂಡಿರುವ ‘ವೋಟ್ ಬಚಾವೋ–ದೇಶ್ ಬಚಾವೋ’ ಬೃಹತ್ ಜನಾಂದೋಲನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ದೇಶದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಮೂಲಕ ಬಿಜೆಪಿ ಮತ ಕಳ್ಳತನದ ಹಾದಿ ಹಿಡಿದಿರುವುದು ಜಗಜ್ಜಾಹೀರಾಗಿದೆ. ಈ ಪ್ರಕ್ರಿಯೆಯ ಗಂಭೀರತೆಯನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಲ್ಲಿನ ರಾಜಕೀಯ ಬೆಳವಣಿಗೆಗಳಲ್ಲಿ ಹಿನ್ನಡೆಯಾಗಿದ್ದು, ಅದೇ ರೀತಿಯ ಪರಿಸ್ಥಿತಿ ಭಾರತದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮಗಳು ಗೋಚರಿಸಲಿವೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಜನಸಾಮಾನ್ಯರ ಅತ್ಯಂತ ಪ್ರಬಲ ಅಸ್ತ್ರವಾಗಿದೆ. ಆದರೆ ಮತದಾರರ ಈ ಹಕ್ಕನ್ನು ಕಸಿದುಕೊಂಡು ಬಿಜೆಪಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಯುತ್ತಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು ಎದ್ದಿದ್ದು, ಜನರ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯುಕ್ತರ ಆಯ್ಕೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದಂತೆ ತನಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸಿದೆ. ಇದೊಂದು ‘ವೋಟ್ ಚೋರಿ’ ಷಡ್ಯಂತ್ರ ಎಂದು ಆರೋಪಿಸಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಗಳಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ತೆರಿಗೆ, ಸೇವಾ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಹೆಚ್ಚಿಸುತ್ತಿದ್ದರೆ, ಕೇಂದ್ರದ ನೀತಿಗಳಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಟೀಕಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಆಡಳಿತಾತ್ಮಕ ಹಿನ್ನಡೆ ಕಂಡುಬರುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಪರ್ಯಾಯ ರಾಜಕೀಯ ವ್ಯವಸ್ಥೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಅಪ್ಪಿ ಎಸ್., ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ, ಶಾಹುಲ್ ಹಮೀದ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ವಿನಯರಾಜ್ ಎ.ಸಿ., ನವೀನ್ ಡಿ. ಸೋಜ, ಅಬ್ಬಾಸ್ ಅಲಿ, ಲುಕ್ಮಾನ್ ಬಂಟ್ವಾಳ, ಇಬ್ರಾಹೀಂ ನವಾಝ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಸ್ ದರ, ಹಾಲಿನ ಬೆಲೆ ಏರಿಕೆ ವಿರುದ್ಧ ಬಿಜೆಪಿ ಆಕ್ರೋಶ
ಇನ್ನೊಂದೆಡೆ, ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹಾಗೂ ಹಾಲಿನ ಬೆಲೆಯನ್ನು ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಪಿವಿಎಸ್ ವೃತ್ತದ ಸಮೀಪದ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಚಟುವಟಿಕೆಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಜನಸಾಮಾನ್ಯರ ಮೇಲೆ ನಿರಂತರ ಆರ್ಥಿಕ ಹೊರೆ ಹೇರುತ್ತಿದೆ ಎಂದು ಆರೋಪಿಸಿದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಿತ್ತು. ಇದೀಗ ಮತ್ತೆ ಶೇ.25ರಿಂದ 40ರಷ್ಟು ದರ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.
ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಟೀಕಿಸಿದರು. ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು.
ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾದ ಕರಾವಳಿ
ಒಂದೆಡೆ ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ನಡೆಸಿದರೆ, ಮತ್ತೊಂದೆಡೆ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಬೆಲೆ ಏರಿಕೆಯ ಹೊರೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಎರಡೂ ಪಕ್ಷಗಳ ಪ್ರತ್ಯೇಕ ಪ್ರತಿಭಟನೆಗಳು ಮಂಗಳೂರಿನಲ್ಲಿ ರಾಜಕೀಯ ಕಾವನ್ನು ಹೆಚ್ಚಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ಬಹಿರಂಗವಾಗಿ ಪ್ರದರ್ಶನಗೊಂಡಿತು.
BJP
ರಾಜ್ಯ ಬಿಜೆಪಿಯಲ್ಲಿ ‘ತ್ರಿಬಲ್ ಸರ್ಜರಿ’ಗೆ ಮುಹೂರ್ತ ಫಿಕ್ಸ್: ವಿಜಯೇಂದ್ರ ಔಟ್, ಸೋಮಣ್ಣ ಇನ್? ಬಿಎಸ್ ವೈಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ !
ಬೆಂಗಳೂರು: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿರುವಾಗಲೇ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಸಾಂಸ್ಥಿಕ ಹಾಗೂ ನಾಯಕತ್ವ ಬದಲಾವಣೆಗಳಿಗೆ ಹೈಕಮಾಂಡ್ ವೇದಿಕೆ ಸಜ್ಜುಗೊಳಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕೀಯ ಚರ್ಚೆಗಳ ಪ್ರಕಾರ, ನವೆಂಬರ್ ಮಾಸಾಂತ್ಯದೊಳಗೆ ರಾಜ್ಯ ಬಿಜೆಪಿಯಲ್ಲಿ ಮೂರು ಪ್ರಮುಖ ‘ಮೇಜರ್ ಸರ್ಜರಿ’ಗಳು ನಡೆಯುವುದು ಬಹುತೇಕ ಖಚಿತವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಸುತ್ತಲೇ ಸುತ್ತುತ್ತಿರುವ ಈ ಬೆಳವಣಿಗೆಯಲ್ಲಿ, ಅವರ ಒಬ್ಬ ಪುತ್ರ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರೆ, ಇನ್ನೊಬ್ಬ ಪುತ್ರನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಸುದೃಢಗೊಳಿಸುವುದು ಹಾಗೂ ಪಕ್ಷದ ಭಿನ್ನಮತೀಯರನ್ನು ತಣ್ಣಗಾಗಿಸಿ ಮುಂಬರುವ ಸವಾಲುಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು ಹೈಕಮಾಂಡ್‌ನ ಮುಖ್ಯ ಉದ್ದೇಶವಾಗಿದೆ.
ರಾಜ್ಯ ಬಿಜೆಪಿಯಲ್ಲಿ ಸಂಭವಿಸಲಿರುವ ಆ 3 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:
1. ಬಿ.ವೈ. ವಿಜಯೇಂದ್ರ ಔಟ್ – ವಿ. ಸೋಮಣ್ಣಗೆ ರಾಜ್ಯ ಬಿಜೆಪಿ ಸಾರಥ್ಯ?
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 3 ವರ್ಷಗಳ ಅವಧಿ ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಲಿದೆ. ಪಕ್ಷದಿಂದ ಉಚ್ಚಾಟಿತರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷಕ್ಕೆ ವಾಪಸ್ ಬರಲು “ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು” ಎಂಬ ಷರತ್ತು ವಿಧಿಸಿದ್ದರು. ಈ ಷರತ್ತಿಗೆ ವಿಜಯೇಂದ್ರ ಕೂಡ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಪ್ರಸ್ತುತ ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ಫೈನಲ್ ಮಾಡಿದೆ ಎನ್ನಲಾಗುತ್ತಿದೆ. ಸೋಮಣ್ಣ ಅವರ ನೇಮಕಕ್ಕೆ ಯತ್ನಾಳ್ ಸೇರಿದಂತೆ ಬಿಜೆಪಿಯ ಯಾವುದೇ ಭಿನ್ನಮತೀಯ ನಾಯಕರ ತಕರಾರಿಲ್ಲದಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
2. ವಿಧಾನಸಭೆ ವಿಪಕ್ಷ ನಾಯಕ ಬದಲು: ಸುನಿಲ್ ಕುಮಾರ್ ಮುಂಚೂಣಿಗೆ!
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಅವಧಿಯೂ ನವೆಂಬರ್ 17ಕ್ಕೆ 3 ವರ್ಷ ಪೂರೈಸಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನಿರಂತರ ಹೋರಾಟ ನಡೆಸುತ್ತಿದ್ದರೂ, ಪಕ್ಷದ ಒಳಗಿನ ನಾಯಕರೇ ಅವರ ವಿರುದ್ಧ “ಹೊಂದಾಣಿಕೆ ರಾಜಕೀಯ”ದ ಆರೋಪಗಳನ್ನು ಮಾಡುತ್ತಿದ್ದರು.
ಹೀಗಾಗಿ, ಕರಾವಳಿ ಭಾಗದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ನೂತನ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲು ವರಿಷ್ಠರು ಒಲವು ತೋರಿದ್ದಾರೆ. ಕಳೆದ ಶಾಸನಸಭೆ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಯಶಸ್ವಿಯಾಗಿ ಎತ್ತಿಹಿಡಿದು ಗಮನಸೆಳೆದಿದ್ದ ಸುನಿಲ್ ಕುಮಾರ್ ಅವರಿಗೆ ಈ ಜವಾಬ್ದಾರಿ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.
3. ಬಿ.ವೈ. ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನ?
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವುದರಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಸರವಾಗದಂತೆ ನೋಡಿಕೊಳ್ಳಲು ಹೈಕಮಾಂಡ್ ಹೊಸ ಪ್ರಪೋಸಲ್ ಒಂದನ್ನು ಮುಂದಿಟ್ಟಿದೆ.
ಇದರ ಪ್ರಕಾರ, ಕೇಂದ್ರ ಸಚಿವ ಸ್ಥಾನದಲ್ಲಿದ್ದ ವಿ. ಸೋಮಣ್ಣ ರಾಜ್ಯ ರಾಜಕಾರಣಕ್ಕೆ (ರಾಜ್ಯಾಧ್ಯಕ್ಷರಾಗಿ) ಮರಳಿದರೆ, ತೆರವಾಗುವ ‘ಕರ್ನಾಟಕ ಕೋಟಾ’ದ ಕೇಂದ್ರ ಸಚಿವ ಸ್ಥಾನವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಮೂರು ಬಾರಿ ಸಂಸದರಾಗಿ ಸತತವಾಗಿ ಗೆದ್ದು ಬಂದಿರುವ ರಾಘವೇಂದ್ರ ಅವರಿಗೆ ಈ ಮೂಲಕ ಸೂಕ್ತ ಸ್ಥಾನಮಾನ ಕಲ್ಪಿಸಲು ಯಡಿಯೂರಪ್ಪ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕುಮಾರ್ ಬಂಗಾರಪ್ಪ ಹೇಳಿಕೆಯಿಂದ ಹೆಚ್ಚಿದ ಕಾವು
ವಿಜಯೇಂದ್ರ ಅವರ ಸ್ಥಾನಕ್ಕೆ ಹೊಸಬರ ಆಯ್ಕೆಯಾಗುವುದು ಶೇ. 99ರಷ್ಟು ಪಕ್ಕಾ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನೀಡಿದ ಹೇಳಿಕೆ ಈ ಎಲ್ಲಾ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಈ ಮೂರು ಮೇಜರ್ ಸರ್ಜರಿಗಳ ಮೂಲಕ ಯತ್ನಾಳ್ ಹಾಗೂ ಈಶ್ವರಪ್ಪ ಅವರಂತಹ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದು, ಭಿನ್ನಮತ ಶಮನಗೊಳಿಸಿ 2028ರ ಚುನಾವಣೆಗೆ ಈಗಿನಿಂದಲೇ ಕಮಲ ಪಡೆಯನ್ನು ಸಜ್ಜುಗೊಳಿಸಲು ಕೇಂದ್ರ ನಾಯಕತ್ವ ಗ್ರೀನ್ ಸಿಗ್ನಲ್ ನೀಡಿದೆ.
BJP
ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಪ್ರಶಾಂತ್ ಭೂಷಣ್ ಆಗ್ರಹ
ಹೊಸದೆಹಲಿ: ಸುಪ್ರೀಂ ಕೋರ್ಟ್‌ಗೆ ಸುಳ್ಳು ಅಫಿಡವಿಟ್ ಸಲ್ಲಿಸಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗ (ಇಸಿ) ಕೈಗೊಂಡ ಎಲ್ಲಾ ನಿರ್ಧಾರಗಳಿಗೂ ಸಂಪೂರ್ಣ ಆಯೋಗದ (ಮೂವರೂ ಆಯುಕ್ತರ) ಅನುಮೋದನೆ ಇತ್ತು ಎಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಪ್ರಮಾಣಪತ್ರ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿ ಆರೋಪ
“ಅಫಿಡವಿಟ್‌ನಲ್ಲಿ ಚುನಾವಣಾ ಆಯೋಗ ಹೇಳಿರುವುದು ಸಂಪೂರ್ಣ ಅಸತ್ಯ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆ ಬಹಿರಂಗಪಡಿಸಿರುವ ವರದಿಯ ಪ್ರಕಾರ, ಇತರ ಚುನಾವಣಾ ಆಯುಕ್ತರು ದಾಖಲಿಸಿರುವ ಭಿನ್ನಾಭಿಪ್ರಾಯದ ಟಿಪ್ಪಣಿಗಳು ಹಾಗೂ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಸಲ್ಲಿಸಿರುವ ದೂರುಗಳೇ ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗದ ಸಮರ್ಥನೆ
ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಅವರು ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸೋಮವಾರ (ಅಕ್ಟೋಬರ್ 26) ಉತ್ತರಿಸಿದ ಆಯೋಗವು, “ಎಲ್ಲಾ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಮೂವರು ಆಯುಕ್ತರ ಒಮ್ಮತದ ತೀರ್ಮಾನದಿಂದಲೇ ತೆಗೆದುಕೊಳ್ಳಲಾಗಿದೆ” ಎಂದು ಪ್ರಮಾಣಪತ್ರ ಸಲ್ಲಿಸಿತ್ತು.
ಅಲ್ಲದೆ, “ಆಯುಕ್ತರು ವ್ಯಕ್ತಪಡಿಸುವ ಅವಲೋಕನಗಳು, ಸಲಹೆಗಳು ಮತ್ತು ಪ್ರಶ್ನೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಹೊರತು, ಅವು ಆಯೋಗದ ಅಂತಿಮ ನಿರ್ಧಾರಗಳಲ್ಲ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕಾನೂನುಬದ್ಧವಾಗಿದ್ದು, ಅರ್ಜಿದಾರರ ಆರೋಪಗಳು ತಪ್ಪು ತಿಳುವಳಿಕೆಯಿಂದ ಕೂಡಿವೆ” ಎಂದು ಆಯೋಗ ವಾದಿಸಿತ್ತು.
10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದ ಆಯುಕ್ತರು
ಆದರೆ, ಮಾಧ್ಯಮ ವರದಿಗಳ ಪ್ರಕಾರ, ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ ಆಯೋಗದ ಹೆಸರಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಕ್ಷೇಪಿಸಿ ಸುಮಾರು 14 ಬಾರಿ ಆಕ್ಷೇಪಣಾ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರಶಾಂತ್ ಭೂಷಣ್ ಅವರು ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
