Connect with us

Article

ನಾಗ ದೇವರ ನಂಬಿಕೆಗೆ ಕನ್ನ: ಕೆಲಿಂಜದ ನಗ್ರಿಮೂಲೆಯಲ್ಲಿ ಧರ್ಮದ ಹೆಸರಿನಲ್ಲಿ ಭಕ್ತರಿಗೆ ವಂಚನೆ! ಸಾವಿರಗಟ್ಟಲೆ ಹಣ ದೋಚಿದ ʼಮರಿವಂಚಕರುʼ

Published

on

ವಿಟ್ಲ: ಧರ್ಮ ಎಂಬುದು ಮನುಷ್ಯನಿಗೆ ನೈತಿಕತೆ, ಶಾಂತಿ ಮತ್ತು ಸಮಾಧಾನವನ್ನು ನೀಡುವ ಪರಮ ಶಕ್ತಿಯಾಗಿದೆ. ಕರಾವಳಿ ಭಾಗದಲ್ಲಂತೂ ನಾಗ ದೇವರನ್ನು ಅತ್ಯಂತ ಭಕ್ತಿ-ಭಾವದಿಂದ ಆರಾಧಿಸಲಾಗುತ್ತದೆ. ನಾಗನ ಮರಣವಾದರೆ ಸೂತಕದ ಆಚರಣೆ ನಡೆಸಿ, ಪುರೋಹಿತರ ಮುಖೇನ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ಇಲ್ಲಿ ನಡೆದುಕೊಂಡು ಬಂದಿರುವ ಧಾರ್ಮಿಕ ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಇದೇ ಧಾರ್ಮಿಕತೆಯ ಹೆಸರಿನಲ್ಲಿ ಜನರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು, ಆರ್ಥಿಕ ಹಾಗೂ ಮಾನಸಿಕವಾಗಿ ದೋಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹುದೇ ಒಂದು ಸದ್ದಿಲ್ಲದ ವಂಚನಾ ಜಾಲದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ-ಕಲ್ಲಡ್ಕ ಮಾರ್ಗದ ಕೆಲಿಂಜ ಸಮೀಪದ ನಗ್ರಿಮೂಲೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದು ಹೋಗಿದೆ.

ಘಟನೆಯ ಹಿನ್ನೆಲೆ: ನಾಗನ ಹೆಸರಿನಲ್ಲಿ ಸತ್ತ ಕೇರೆ ಮುಂದಿಟ್ಟು ವಸೂಲಿ

ಇಂದು ಬೆಳಿಗ್ಗೆ ಸುಮಾರು 7.00 ರ ವೇಳೆಗೆ ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಜನ ಸಂಚರಿಸುವ ಸಮಯದಲ್ಲಿ, ನಗ್ರಿಮೂಲೆಯ ರಸ್ತೆ ಬದಿಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದರು. ಅವರ ಹತ್ತಿರದಲ್ಲಿಯೇ ರಸ್ತೆ ಬದಿಯಲ್ಲಿ ಒಂದು ಬಿಳಿ ಬಟ್ಟೆಯನ್ನು ಹಾಸಲಾಗಿತ್ತು. ಆ ಬಟ್ಟೆಯ ಮೇಲೆ ವಿಪರೀತ ವಾಸನೆ ಬರುತ್ತಿದ್ದ ಸತ್ತ ಹಾವಿನ (ಕೇರೆ ಹಾವು ) ಕಳೇಬರವೊಂದನ್ನು ಇಡಲಾಗಿತ್ತು.

ದಾರಿಯಲ್ಲಿ ಹೋಗುವ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದ್ದ ಈ ಇಬ್ಬರು ಖದೀಮರು, “ನಾವು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ನಾಗರಹಾವು ಮರಣ ಹೊಂದಿರುವುದು ಕಂಡುಬಂತು. ಹಿಂದೂಗಳಾದ ನಾವು ನಾಗನ ಕಳೇಬರವನ್ನು ನೋಡಿ ಹಾಗೆಯೇ ಮುಂದೆ ಹೋಗುವಂತಿಲ್ಲ. ಅದಕ್ಕೆ ಸಮರ್ಪಕವಾದ ಅಂತ್ಯಸಂಸ್ಕಾರ ಮಾಡಿಯೇ ಹೋಗಬೇಕು ಎಂದು ತೀರ್ಮಾನಿಸಿದ್ದೇವೆ. ಆದ್ದರಿಂದ ಸಂಸ್ಕಾರಕ್ಕೆ ತಗಲುವ ವೆಚ್ಚವನ್ನು ಭಕ್ತರಿಂದ ಅಪೇಕ್ಷಿಸುತ್ತಿದ್ದೇವೆ” ಎಂದು ನಂಬಿಸುವಂತೆ ನಾಟಕವಾಡಿದ್ದಾರೆ.

ಭಯಭಕ್ತಿಯಿಂದ ಹಣ ಸುರಿದ ಭಕ್ತರು

ನಾಗನ ಭೂಮಿಯಾದ ತುಳುನಾಡಿನಲ್ಲಿ ನಾಗದೋಷ ಹಾಗೂ ನಾಗನ ಶಾಪದ ಬಗ್ಗೆ ಜನರಲ್ಲಿ ಅಪಾರ ಭಯ ಮತ್ತು ಭಕ್ತಿಯಿದೆ. ಹಾವಿನ ಕಳೇಬರವನ್ನು ಕಂಡರೆ ಅಂತ್ಯಸಂಸ್ಕಾರ ಮಾಡದೆ ಹೋಗಬಾರದು ಎಂಬ ವಾಡಿಕೆಯೂ ಇರುವುದರಿಂದ, ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಗಾಡಿಗಳನ್ನು ನಿಲ್ಲಿಸಿ ಆ ಬಿಳಿ ಬಟ್ಟೆಯ ಮೇಲೆ ಹಣವನ್ನು ಸುರಿಯಲಾರಂಭಿಸಿದರು. ಬೆಳಿಗ್ಗೆ 6:30ರಿಂದ ಸುಮಾರು 8 ಗಂಟೆಯವರೆಗೂ ಈ ಸುದ್ದಿ ಜನರಿಂದ ಜನರಿಗೆ ಹರಡಿ, ಬೇರೆ ಬೇರೆ ಕಡೆಯಿಂದಲೂ ಜನರು ಬಂದು ಹಣ ಹಾಕಿ ಹೋಗಿದ್ದಾರೆ. ಈ ತುಳುನಾಡಿನಲ್ಲಿ ಎಲ್ಲಿ ನಾಗನ ಮರಣವಾದರೂ ಅದರ ಸಂಸ್ಕಾರದಲ್ಲಿ ಪಾಲ್ಗೊಂಡರೆ ಯಾವುದೇ ನಾಗದೋಷಗಳ ಪರಿಹಾರವಾಗುತ್ತದೆ, ಮತ್ತು ಈ ಬಗ್ಗೆ ನಿರ್ಲಕ್ಷ ಮಾಡಿದರೆ ಸಮಸ್ಯೆಗಳು ಕಾಡುತ್ತವೆ ಎಂದು ನಂಬಿದ ಜನ ಇಷ್ಟೊಂದು ನಾಗನ ಮರಣದ ಬಗ್ಗೆ ಹೇಳಿದಾಗ ಕೇಳಿಸಿಕೊಂಡು ಹೋಗುವುದೇ ಇಲ್ಲ. ತನ್ನ ಶಕ್ತಿಯಾನುಸಾರ ಅದರ ಸಂಸ್ಕಾರಕ್ಕೆ ಹಣ ನೀಡಿಯೇ ನೀಡುತ್ತಾನೆ. ಜನ ಗಾಡಿ ನಿಲ್ಲಿಸಿ ಹಣವನ್ನು ಬಿಳಿ ಬಟ್ಟೆಯ ಮೇಲೆ ನಾಗನ ಕಲೆಬರವನ್ನೂ ನೋಡದೆ ಸುರಿದಿದ್ದಾರೆ.

ವಂಚನೆ ಬಯಲಿಗೆಳೆದ ಸ್ಥಳೀಯರ ಪ್ರಶ್ನೆಗಳು

ಆದರೆ, ಅಲ್ಲಿಗೆ ಬಂದ ಕೆಲವು ಸ್ಥಳೀಯ ಹಿರಿಯರು ಮತ್ತು ಜಾಗೃತ ನಾಗರಿಕರು ಇವರ ವರ್ತನೆಯನ್ನು ಕಂಡು ಪ್ರಶ್ನಿಸಲು ಆರಂಭಿಸಿದಾಗ ವಂಚಕರ ಅಸಲಿ ಮುಖವಾಡ ಕಳಚಲಾರಂಭಿಸಿತು ಆದರೆ ಅವರನ್ನು ರೆಡ್‌ ಹ್ಯಾಂಡಾಗಿ ಹಿಡಿಯಲು ನಾಗನ ಕಳೇಬರದ ಬಗ್ಗೆ ಮಾಹಿತಿ ಇಲ್ಲದೆ ಭಯವಾಗಿತ್ತು.

ಸ್ಥಳೀಯ ಹಿರಿಯರ ಪ್ರಶ್ನೆ: “ಈ ಹಾವನ್ನು ಎಲ್ಲಿ ಸಂಸ್ಕಾರ ಮಾಡುತ್ತೀರಿ? ಯಾವ ಪುರೋಹಿತರನ್ನು ಮಾತನಾಡಿಸಿದ್ದೀರಿ?” ಎಂದು ಹಿರಿಯರೊಬ್ಬರು ಪ್ರಶ್ನಿಸಿದಾಗ, ವಂಚಕರು ಮುಖಭಂಗ ಅನುಭವಿಸಿ, “ನಾವು ಇಲ್ಲಿ ಮಾಡುವುದಿಲ್ಲ, ಸುರತ್ಕಲ್‌ನಲ್ಲಿ ಕಡಿಮೆ ಖರ್ಚಿಗೆ ನಾಗನ ಅಂತ್ಯಸಂಸ್ಕಾರ ಮಾಡುತ್ತಾರೆ, ಅಲ್ಲಿಗೇ ತೆಗೆದುಕೊಂಡು ಹೋಗುತ್ತೇವೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಆಗ ಆ ಹಿರಿಯರು “ಇಲ್ಲಿಯೂ ಕಡಿಮೆ ಖರ್ಚಿನಲ್ಲಿ ಮಾಡಿಕೊಡುತ್ತಾರೆ” ಎಂದು ಹೇಳಿದವರೇ ತನ್ನ ಪಾಲಿನ ದೋಷದ ಹಣ ನೀಡಿ ತೆರಳಿದ್ದಾರೆ.

ಸ್ಥಳೀಯ ಮುಸ್ಲಿಂ ರಿಕ್ಷಾ ಚಾಲಕರ ವೀಕ್ಷಣೆ: ಮತ್ತೊಬ್ಬ ಸ್ಥಳೀಯ ಮುಸ್ಲಿಂ ಸಮುದಾಯದ ರಿಕ್ಷಾ ಚಾಲಕರು ಇವರನ್ನು ತರಾಟೆಗೆ ತೆಗೆದುಕೊಂಡು, “ನೀವು ಬೇರೆ ಕಡೆಯವರು ಬಂದು ಇಲ್ಲಿ ಯಾಕೆ ಹಾವಿನ ಸಂಸ್ಕಾರಕ್ಕೆ ತೊಡಗಿದ್ದೀರಿ? ನಮ್ಮ ಊರಿನವರಿಗೆ ಹೇಳಿದ್ದರೆ ನಾವೆಲ್ಲರೂ ಸೇರಿ ಮಾಡುತ್ತಿದ್ದೆವು” ಎಂದಾಗ, ವಂಚಕರ ಮಾತಿನಲ್ಲಿ ವಂಚನೆ ಬಯಲಾಗುವ ಭಯ ಎದ್ದು ಕಾಣುತ್ತಿತ್ತು ಅವರನ್ನು ಮುಂದೆ ಪ್ರಶ್ನಿಸಲು ನಮಗೆ ಧರ್ಮದ ಮದ್ಯೆ ಭಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಾಗೃತ ಭಕ್ತನ ಸಾಹಸ: ಅಷ್ಟರಲ್ಲಿ ₹500 ಹಣ ಹಾಕಿದ ಮತ್ತೊಬ್ಬ ವ್ಯಕ್ತಿ, “ಇದು ಇಂದು ಸತ್ತ ಕಳೇಬರ ಅಲ್ಲ, ವಿಪರೀತ ವಾಸನೆ ಬರುತ್ತಿದೆ. ಇದು ನಾಗರಹಾವು ಹೌದೇ ಅಲ್ಲವೇ ಎಂದು ಜಾಲಿಕಟ್ಟವನ್ನು ನೋಡಲು ಹೊಟ್ಟೆಯ ಕೆಳಭಾಗವನ್ನು ತಿರುಗಿಸಲು ಯತ್ನಿಸಿದಾಗ”, ಕಲೆಕ್ಷನ್‌ಗೆ ನಿಂತಿದ್ದ ಖದೀಮರು “ಅದನ್ನು ಮುಟ್ಟಬೇಡಿ” ಎಂದು ಜೋರು ಮಾಡಿ ತಡೆಯೊಡ್ಡಿದ್ದಾರೆ.

10 ಸಾವಿರಕ್ಕೂ ಮಿಕ್ಕಿ ಹಣ ದೋಚಿ ಪರಾರಿ!

ಊರಿನ ಹಲವರಲ್ಲಿ ಕೆಲವರು ಒಟ್ಟಾಗಿ “ನಮ್ಮ ಊರಿನಲ್ಲಿ ಆಗಿರುವುದಕ್ಕೆ ಇವರೇಕೆ ಹಣ ವಸೂಲಿ ಮಾಡಬೇಕು, ನಾವೇ ಎಲ್ಲ ಸೇರಿ ಸಂಸ್ಕಾರ ಮಾಡಬಹುದಿತ್ತು” ಎಂದು ಮಾತನಾಡಿ ಕೊಳ್ಳುವಷ್ಟರಲ್ಲಿಯೇ, ಅಂದರೆ ಸುಮಾರು ಬೆಳಿಗ್ಗೆ 9 ಗಂಟೆಯ ವೇಳೆಗೆ ಒಂದು ಅಚ್ಚರಿಯ ಸುದ್ದಿ ಪ್ರದೇಶದಲ್ಲಿ ಹರಿದಾಡಿದೆ. ಬಿಳಿಬಟ್ಟೆ ಹಣ ಮತ್ತು ಕಲೆಕ್ಷನ್‌ ಮಾಡುವವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಅವರ ಮೇಲಿನ ಸಂಶಯಗಳು ಒಂದೊಂದಾಗಿ ಊರಿಡಿ ಹರಿಯಲಾರಂಭಿಸಿದೆ. . ಕೊನೆಗೂ ಧಾರ್ಮಿಕತೆಯ ಭಯ ಮೂಡಿಸಿ ಕೇವಲ ಎರಡೂವರೆ ಗಂಟೆಗಳಲ್ಲಿ ಅಮಾಯಕ ಭಕ್ತರಿಂದ ಸುಮಾರು ₹10,000ಕ್ಕೂ ಮಿಕ್ಕಿದ ಹಣವನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ ಎಂದು ತಿಳಿದು ಸಾರ್ವಜನಿಕರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಮಾಧ್ಯಮದ ಕಳಕಳಿಯ ವಿನಂತಿ ಮತ್ತು ಎಚ್ಚರಿಕೆ:

ಇಂದಿನ ದಿನಗಳಲ್ಲಿ ದೇವಸ್ಥಾನ, ಮಠ, ಬ್ರಹ್ಮಕಲಶೋತ್ಸವ, ವಿಶೇಷ ಪೂಜೆಗಳು, ಹುಂಡಿ ಹಣ, ದೇಣಿಗೆ ಅಥವಾ ದೋಷ ನಿವಾರಣೆಯ ಹೆಸರಿನಲ್ಲಿ ಅಮಾಯಕ ಭಕ್ತರ ಭಯ ಹಾಗೂ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಹಣ ನುಂಗಿ ನೀರು ಕುಡಿಯುವ ಮಹಾವಂಚಕರ ಮಧ್ಯೆ, ಇಂತಹ ‘ಮರಿ ವಂಚಕರು’ ಕೂಡ ಹುಟ್ಟಿಕೊಳ್ಳುತ್ತಿರುವುದು ಖೇದಕರ.ಧರ್ಮದ ಹೆಸರಿನಲ್ಲಿ ಯಾರಾದರೂ ಇಂತಹ ಮೋಸ, ಬೆದರಿಕೆ ಅಥವಾ ಆರ್ಥಿಕ ಶೋಷಣೆ ಮಾಡಲು ಮುಂದಾದರೆ, ಸಾರ್ವಜನಿಕರು ತಕ್ಷಣವೇ ಜಾಗೃತರಾಗಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ನಮ್ಮ ಮಾಧ್ಯಮವು ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ ಮಾಡುತ್ತದೆ. ಅಂಧಶ್ರದ್ಧೆಗೆ ಬೀಳದೆ, ಜಾಗೃತವಾಗಿರುವುದೇ ಇಂತಹ ಖದೀಮರಿಗೆ ನೀಡುವ ಸರಿಯಾದ ಉತ್ತರ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಮಾನಸಿಕ ಅಸ್ವಸ್ಥ ಅನಾಥ ವ್ಯಕ್ತಿಯ ರಕ್ಷಿಸಿದ ಕುಂಬಳೆ ಪೊಲೀಸರು.ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲು.

Published

on

​ಕುಂಬಳೆ: ರಾತ್ರಿ ಹೊತ್ತು ಕುಂಬಳೆ ಬಸ್ ನಿಲ್ದಾಣ ಸಮೀಪದ ಮುಖ್ಯ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೊಂದಿಗೆ ರಸ್ತೆಯಲ್ಲಿ ಮಲಗಿಕೊಂಡಿದ್ದ ಅನಾಥ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.​ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಪಂದಿಸಿದ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್‌ ಹಾಗೂ ಅವರ ತಂಡದವರು ಮಾನವೀಯತೆಯ ಆಧಾರದ ಮೇಲೆ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನಂತರ ಅದೇ ರಾತ್ರಿ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಆತನನ್ನು ಸುರಕ್ಷಿತವಾಗಿ ದಾಖಲಿಸಲಾಗಿದೆ. ಪ್ರಸ್ತುತ ಆಶ್ರಮದಲ್ಲಿ ಅವರಿಗೆ ಅಗತ್ಯವಿರುವ ಆರೈಕೆ, ವಸತಿ ಮತ್ತು ಆರೋಗ್ಯಾಧಾರಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ವ್ಯಕ್ತಿಯ ವಿವರಗಳು.

​ಹೆಸರು: ಗುರುವಾಯೂರಪ್ಪ ​ತಂದೆಯ ಹೆಸರು: ಸುಬ್ರಹ್ಮಣ್ಯ ​ಊರು: ಕಾಸರಗೋಡು, ಮಲ್ಲ ​ಸಂಪರ್ಕ ಮಾಹಿತಿ:​ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಿದ್ದರೆ, ಅಥವಾ ಅವರ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರು ಕಂಡುಬಂದಲ್ಲಿ ದಯವಿಟ್ಟು ಕೆಳಗಿನ ಫೋನ್ ಸಂಖ್ಯೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.​

📞 ಸಂಪರ್ಕ ಸಂಖ್ಯೆ: 94486 26500 ​

ಆಪತ್ತಿನಲ್ಲಿದ್ದ ವ್ಯಕ್ತಿಯನ್ನು ತಕ್ಷಣ ರಕ್ಷಿಸಿ ಆಶ್ರಮಕ್ಕೆ ತಲುಪಿಸಿದ ಕುಂಬಳೆ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಸಾಯಿ ನಿಕೇತನ ಸೇವಾಶ್ರಮದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.

Continue Reading

Article

20 ವರ್ಷಗಳ ‘ನರಕಯಾತನೆ’ಗೆ ಕೊನೆಗೂ ಮುಕ್ತಿ! ಕುದುರೆಮುಖ ದಟ್ಟ ಕಾಡಿನಿಂದ ಹೊರಬಂದ ಮೂವರು ವೃದ್ಧರು

Published

on

ದಟ್ಟ ಅರಣ್ಯ, ಕಾಡುಪ್ರಾಣಿಗಳ ನಿರಂತರ ಭಯ, ಮೂಲಭೂತ ಸೌಕರ್ಯಗಳಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಪುಟ್ಟ ಮನೆ… ಹೀಗೆ ಬರೋಬ್ಬರಿ 20 ವರ್ಷಗಳ ಕಾಲ ಅರಣ್ಯದೊಳಗೆ ನರಕಯಾತನೆ ಅನುಭವಿಸುತ್ತಿದ್ದ ಮೂವರು ವೃದ್ಧರಿಗೆ ಕೊನೆಗೂ ಅರಣ್ಯದ ಸಂಕಷ್ಟದಿಂದ ಮುಕ್ತಿ ದೊರೆತಿದೆ. ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

ಹಿನ್ನೆಲೆ ಏನು?

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುನ್ನಿಹಳ್ಳ ಗ್ರಾಮದಲ್ಲಿ ಈ ವೃದ್ಧರು ಬದುಕು ಸಾಗಿಸುತ್ತಿದ್ದರು. 2003-04ರಲ್ಲಿ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಸರ್ಕಾರ ಘೋಷಿಸಿದಾಗ, ಅಲ್ಲಿದ್ದ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಆದರೆ, ಸೂಕ್ತ ದಾಖಲೆಗಳ ಕೊರತೆಯಿಂದಾಗಿ 73 ವರ್ಷದ ಶ್ಯಾಮಲಾ ದೇವಿ, 75 ವರ್ಷದ ನಾಗರತ್ನ ಮತ್ತು 58 ವರ್ಷದ ದೇವರಾಜ್ ಅವರು ಕಾಡಿನೊಳಗೇ ಉಳಿದುಕೊಳ್ಳುವಂತಾಯಿತು.

ಕಾಡಿನಲ್ಲೇ ಕಳೆದವು 20 ಭೀಕರ ವರ್ಷಗಳು

ಗ್ರಾಮಸ್ಥರೆಲ್ಲಾ ತೆರಳಿದ ಮೇಲೆ ಈ ಮೂವರು ವೃದ್ಧರು ಕುಸಿಯುವ ಹಂತದಲ್ಲಿದ್ದ ಮನೆಯಲ್ಲೇ ದಿನದೂಡುತ್ತಿದ್ದರು. ಕಾಡುಪ್ರಾಣಿಗಳ ಹಾವಳಿಯ ನಡುವೆಯೇ ಜೀವ ಕೈಯಲ್ಲಿಡಿದು ಬದುಕಬೇಕಿತ್ತು. ತಮ್ಮ ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಆಡಳಿತ ಕಚೇರಿಗಳನ್ನು ತಲುಪಲು ನೂರಾರು ಕಿಲೋಮೀಟರ್ ದೂರ ಪಯಣಿಸಬೇಕಾದ ಅನಿವಾರ್ಯತೆ ಇವರಿಗಿತ್ತು. ತಮ್ಮ ಸಂಕಷ್ಟವನ್ನು ಕೇಳುವವರಿಲ್ಲದೆ ಈ ಹಿರಿಯರು ದಶಕಗಳ ಕಾಲ ಕಣ್ಣೀರಿಟ್ಟಿದ್ದರು.

ಮಾದ್ಯಮ ವರದಿಗೆ ಸ್ಪಂದಿಸಿದ ಸರ್ಕಾರ!

ಈ ವೃದ್ಧರ ಕಣ್ಣೀರಿನ ಕಥೆ ಮತ್ತು ಅರಣ್ಯರೋಧನದ ಕುರಿತು ಸುದ್ದಿವಾಹಿನಿ ವಿಶೇಷ ವರದಿ ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ರಾಜ್ಯ ಸರ್ಕಾರದ ಅಧಿಕಾರಿಗಳು ಪರಿ ಪರಿಶೀಲನೆ ನಡೆಸಿದರು.

ಬಿಕರಿ ದಾಖಲೆಗಳ ಕೊರತೆಯಿದ್ದರೂ ಮಾನವೀಯತೆಯ ಆಧಾರದ ಮೇಲೆ ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ಧನ ಮಂಜೂರು ಮಾಡಿ, ಕಾಡಿನಿಂದ ಹೊರಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊನೆಗೂ ಮೊಗದಲ್ಲಿ ನಗು!

20 ವರ್ಷಗಳ ಸುದೀರ್ಘ ಹೋರಾಟ ಮತ್ತು ಕಷ್ಟದ ನಂತರ ಕೊನೆಗೂ ಪರಿಹಾರ ಹಾಗೂ ಸುರಕ್ಷಿತ ಆಸರೆ ಸಿಕ್ಕಿರುವುದಕ್ಕೆ ವೃದ್ಧರು ಹರ್ಷ ವ್ಯಕ್ತಪಡಿಸಿದ್ದಾರೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟ ಸರ್ಕಾರ ಹಾಗೂ ತಮ್ಮ ಧ್ವನಿಯಾದ ಮಾಧ್ಯಮಕ್ಕೆ ವೃದ್ಧರು ಧನ್ಯವಾದ ಅರ್ಪಿಸಿದ್ದಾರೆ.

Continue Reading

Article

ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ

Published

on

ಕಲ್ಲಡ್ಕ ಪ್ರಭಾಕರ ಭಟ್‌ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.

ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.

ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.

ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್‌ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!