Connect with us

Uncategorized

🚨 ಮಂಗಳೂರಿನಲ್ಲಿ ಸಿನೆಮಾ ಶೈಲಿಯ ಭೀಕರ ದರೋಡೆ: ಕೇರಳ ಉದ್ಯಮಿಯ ಕಾರು ಅಡ್ಡಗಟ್ಟಿ ಹೆಂಡತಿ-ಮಗನ ಅಪಹರಣ, ಚಿನ್ನಾಭರಣ ಲೂಟಿ!

Published

on

ಮಂಗಳೂರು, ಜೂನ್ 29: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿ ಸೋಮವಾರ ಬೆಳಗ್ಗಿನ ಜಾವ ಭೀಕರ ಹಾಗೂ ಸಿನೆಮಾ ಶೈಲಿಯ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ 7-8 ಮಂದಿ ದರೋಡೆಕೋರರ ತಂಡ, ಉದ್ಯಮಿಯ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, ಚಿನ್ನಾಭರಣ ದೋಚಿ ಅವರನ್ನು ರಸ್ತೆಯಲ್ಲಿಯೇ ತೊರೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಕೇರಳದ ಪಯ್ಯನ್ನೂರು ನಿವಾಸಿ, ಉದ್ಯಮಿ ವಿಕಾಸ್ ದರೋಡೆಗೊಳಗಾದವರು. ಇವರು ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈಯ ಸಾಂಗ್ಲಿಯಲ್ಲಿ ನಡೆದ ಸ್ನೇಹಿತರೊಬ್ಬರ ಮದುವೆ ಸಮಾರಂಭ ಮುಗಿಸಿ ಕಾರಿನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.

ನಡೆದಿದ್ದೇನು?: ಸೋಮವಾರ ಬೆಳಗ್ಗಿನ ಜಾವ ಸುಮಾರು 2:30ರ ವೇಳೆಗೆ ವಿಕಾಸ್ ಅವರು ಚಲಾಯಿಸುತ್ತಿದ್ದ ಕಾರು ಬೈಕಂಪಾಡಿಯ ದ್ವಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ, KA03 G 8210 KL13 BB 1841 ಸಂಖ್ಯೆಯ ಎರಡು ಇನ್ನೋವಾ ಕಾರುಗಳು ಮತ್ತು KL11 BE 4104 ನಂಬರಿನ ಮಾರುತಿ ಶಿಫ್ಟ್‌ ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದ 7 ರಿಂದ 8 ಮಂದಿ ದರೋಡೆಕೋರರು ವಿಕಾಸ್ ಅವರ ಕಾರನ್ನು ಬಲವಂತವಾಗಿ ಅಡ್ಡಗಟ್ಟಿದ್ದಾರೆ. ತಕ್ಷಣ ಕಾರಿನಿಂದ ವಿಕಾಸ್ ಅವರನ್ನು ಕೆಳಗಿಳಿಸಿದ ದುಷ್ಕರ್ಮಿಗಳು, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ.

ಬಳಿಕ ಪಣಂಬೂರು ಬೀಚ್ ರಸ್ತೆ ಬಳಿ ಕಾರನ್ನು ನಿಲ್ಲಿಸಿದ ದರೋಡೆಕೋರರು, ವಿಕಾಸ್ ಅವರ ಪತ್ನಿ ಮತ್ತು ಮಗನ ಧರಿಸಿದ್ದ ಹಾಗೂ ಬ್ಯಾಗ್‌ಗಳಲ್ಲಿದ್ದ 180ಗ್ರಾಂ ಚಿನ್ನ ಮತ್ತು ನಗದು ಸಹಿತ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ನಂತರ ತಾಯಿ-ಮಗನನ್ನು ಅಸಹಾಯಕ ಸ್ಥಿತಿಯಲ್ಲಿ ರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ದೂರು ದಾಖಲು: ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಉದ್ಯಮಿ ವಿಕಾಸ್ ಅವರು ತಕ್ಷಣ ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ದರೋಡೆಕೋರರ ಪತ್ತೆಗಾಗಿ ಜಾಲ ಬೀಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ನಡುರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರುಗಳನ್ನು ಅಡ್ಡಗಟ್ಟಿ, ಕುಟುಂಬ ಸಮೇತ ಅಪಹರಿಸಿ ದರೋಡೆ ನಡೆಸಿರುವ ಈ ಘಟನೆ ಕರಾವಳಿಯ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

75 ವರ್ಷಗಳ ರಸ್ತೆ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು – ಉಕ್ಕುಡ ಕಲ್ಲಜರಿಯಲ್ಲಿ ಅಕ್ರಮ ಗೇಟ್ ತೆರವು.

Published

on

​ವಿಟ್ಲ : ಕಸಬಾ ಗ್ರಾಮದ ಉಕ್ಕುಡ ಕಲ್ಲಜರಿ ಪ್ರದೇಶದಲ್ಲಿ ಕಳೆದ 75 ವರ್ಷಗಳಿಂದ ಸಂಪರ್ಕ ರಸ್ತೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಮೂರು ಬಡ ಕುಟುಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಸರ್ಕಾರಿ ಜಮೀನಿನಲ್ಲಿ ಹಾದುಹೋಗುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಗೇಟ್ ಅಳವಡಿಸಿ ತಡೆಯೊಡ್ಡಿದ್ದ ಗೇಟನ್ನು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. ​ದೂರಿನ ಹಿನ್ನೆಲೆ:​ಸ್ಥಳೀಯ ನಿವಾಸಿ ಶ್ರೀಮತಿ ಜಯಂತಿ ಎಂಬುವರು ಈ ಅಕ್ರಮ ತಡೆಯ ತೆರವಿಗಾಗಿ ವಿಟ್ಲ ಪಟ್ಟಣ ಪಂಚಾಯತಿಗೆ ಅಗತ್ಯ ದಾಖಲೆಗಳ ಸಹಿತ ದೂರು ನೀಡಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿದ ಪಟ್ಟಣ ಪಂಚಾಯತ್ ಆಡಳಿತವು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ವಿನಂತಿಸಿತ್ತು.

​ತಹಶೀಲ್ದಾರ್ ಆದೇಶ ಮತ್ತು ಪರಿಶೀಲನೆ:​ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಅಕ್ರಮ ಗೇಟ್ ತೆರವುಗೊಳಿಸುವಂತೆ ವಿಟ್ಲ ಕಂದಾಯ ನಿರೀಕ್ಷಕರಿಗೆ ಹಾಗೂ ಭೂ ಮಾಪಕರಿಗೆ ಅಧಿಕೃತ ಆದೇಶ ನೀಡಿದ್ದರು. ​ಅಧಿಕಾರಿಗಳು ನಡೆಸಿದ ಸಮೀಕ್ಷೆ ಹಾಗೂ ಕಂದಾಯ ನಿರೀಕ್ಷಕರ ವರದಿಯ ಪ್ರಕಾರ, ಸರ್ವೇ ನಂ. 727/1ರಲ್ಲಿ ಬರುವ ರಸ್ತೆಯು ಸರ್ಕಾರಿ ಜಮೀನಿನಲ್ಲಿದೆ ಎಂಬುದು ದೃಢಪಟ್ಟಿದೆ. ​ರಸ್ತೆ ಅಭಿವೃದ್ಧಿಗೆ ಮಾತ್ರ ಅವಕಾಶ:​ಈ ಜಮೀನನ್ನು ರಸ್ತೆಯನ್ನು ಅಭಿವೃದ್ಧಿಪಡಿಸಲು ಮತ್ತು ಸಾರ್ವಜನಿಕರ ರಸ್ತೆ ಸಂಪರ್ಕಕ್ಕಾಗಿ ಮಾತ್ರ ಬಳಸಿಕೊಳ್ಳಲು ತಹಶೀಲ್ದಾರ್ ಕಚೇರಿಯಿಂದ ಸ್ಪಷ್ಟ ಆದೇಶ ನೀಡಲಾಗಿದೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಈ ಸರ್ಕಾರಿ ಜಮೀನನ್ನು ಬಳಸಲು ಅವಕಾಶವಿರುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ​

ಅಕ್ರಮ ಗೇಟ್ ತೆರವು – ಕುಟುಂಬಗಳ ಕೃತಜ್ಞತೆ:​ತಹಶೀಲ್ದಾರ್ ಆದೇಶದಂತೆ ಇಂದು ಕಂದಾಯ ಅಧಿಕಾರಿಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಅರ್ಜಿದಾರರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ​ದಶಕಗಳಿಂದ ಅನುಭವಿಸುತ್ತಿದ್ದ ನರಕಯಾತನೆಗೆ ಮುಕ್ತಿ ದೊರೆತಿದ್ದರಿಂದ ಹರ್ಷ ವ್ಯಕ್ತಪಡಿಸಿರುವ ಬಡ ಕುಟುಂಬಗಳು, ಸಕಾಲದಲ್ಲಿ ಸ್ಪಂದಿಸಿ ನ್ಯಾಯ ಒದಗಿಸಿದ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಆಡಳಿತಕ್ಕೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿವೆ.

Continue Reading

Belthangady

ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ

Published

on

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ತಿದ್ದುಪಡಿ ಆದೇಶದ ಪ್ರಕಾರ:

  1. ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
  2. ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ

ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.

Continue Reading

complaint

ವಿಟ್ಲ: ಪರವಾನಿಗೆ ಇಲ್ಲದೆ ವಸತಿ ಪ್ರದೇಶದಲ್ಲಿ ಹೋಟೆಲ್ ನಿರ್ಮಾಣ; ಪಟ್ಟಣ ಪಂಚಾಯತ್‌ನಿಂದ ಕಟ್ಟುನಿಟ್ಟಿನ ನೋಟೀಸ್ ಜಾರಿ! ಮುಂದುವರಿಯುತ್ತಿರುವ ಕಾಮಗಾರಿ ?

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ, ವಸತಿ ಉದ್ದೇಶದ ಜಮೀನಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶೀಟ್ ಅಳವಡಿಸಿ ಹೋಟೆಲ್ ನಿರ್ಮಾಣ ಮಾಡುತ್ತಿರುವ ಅನಧಿಕೃತ ಕಾಮಗಾರಿಯ ವಿರುದ್ಧ ಪಟ್ಟಣ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾಮಗಾರಿ ಮಾತ್ರ ಸದ್ದಿಲ್ಲದೆ ನಡೆಯುತ್ತಲೇ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಘಟನೆಯ ವಿವರ:

ವಿಟ್ಲದ ಅಡ್ಡದಬೀದಿ ನಿವಾಸಿ ಶ್ರೀ ಸಂತೋಷ್ ಕುಮಾರ್ ಅವರು ತಮ್ಮ ಮನೆಯ ಹತ್ತಿರ ವಸತಿ ಉದ್ದೇಶದ ಜಮೀನಿನಲ್ಲಿ ಶೀಟ್ ಅಳವಡಿಸಿ ಹೋಟೆಲ್ ಹಾಗೂ ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರಿಂದ ಸದರಿ ಪ್ರದೇಶ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಾದ ಶ್ರೀ ಅಬ್ದುಲ್ ರವರು 2026ರ ಆಗಸ್ಟ್ 04 ರಂದು ವಿಟ್ಲ ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಎಚ್ಚೆತ್ತ ಪಂಚಾಯತ್ ಆಡಳಿತವು, ತಮ್ಮ ಕಚೇರಿಯ ಕಿರಿಯ ಅಭಿಯಂತರರಿಂದ ಸ್ಥಳ ಪರಿಶೀಲನೆ ನಡೆಸಿ 2026ರ ಸೆಪ್ಟೆಂಬರ್ 01 ರಂದು ವರದಿ ಪಡೆದುಕೊಂಡಿದೆ.

ಪಂಚಾಯತ್‌ನಿಂದ ಎಚ್ಚರಿಕೆ ಹಾಗೂ ಸೂಚನೆ:

ವರದಿಯ ಆಧಾರದ ಮೇಲೆ ಶ್ರೀ ಸಂತೋಷ್ ಕುಮಾರ್ ಅವರಿಗೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯು ನೋಟೀಸ್ ಜಾರಿ ಮಾಡಿದ್ದು, ಕೂಡಲೇ ಶೀಟ್ ಅಳವಡಿಸುವ ಹಾಗೂ ನಿರ್ಮಾಣ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್‌ ಕೃಪಾಕಟಾಕ್ಷದಲ್ಲಿ ಕಾಮಗಾರಿ ನಡೆಯುತ್ತಲೇ ಇದೆ ಎಂದು ದೂರುದಾರರು ಆಕ್ರೋಶಿತರಾಗಿದ್ದಾರೆ.

ಯಾವುದೇ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ಕಚೇರಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ, 1964ರ ಪುರಸಭಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್‌ನಲ್ಲಿ ಕಟ್ಟು ನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!