Connect with us

Article

ಪಠ್ಯಪುಸ್ತಕ ಹಂಚಿಕೆ ಹಗರಣ; ಇಲಾಖೆಯ ಬೇಜವಾಬ್ದಾರಿಗೆ ಮಾಧ್ಯಮದ ಜಾಗೃತಿ

Published

on

ಪೋಷಕರು ಓದಲೇ ಬೇಕಾದ ವರದಿ : ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳಾಗುತ್ತಾ ಬಂದರೂ ರಾಜ್ಯದಾದ್ಯಂತ ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮರ್ಪಕವಾಗಿ ಪಠ್ಯಪುಸ್ತಕಗಳು ತಲುಪದೆ ಇರುವುದು ಶಿಕ್ಷಣ ಇಲಾಖೆಯ ತೀವ್ರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಪೋಷಕರು ಅನುಭವಿಸುತ್ತಿದ್ದ ಆತಂಕ ಹಾಗೂ ಮಕ್ಕಳ ಭವಿಷ್ಯದ ಕುರಿತಾದ ಕಾಳಜಿಯನ್ನು ಮನಗಂಡು ‘ದೀವಟಿಗೆ ಡಿಜಿಟಲ್ ಮೀಡಿಯಾ’ ಈ ಕುರಿತು ನಡೆಸಿದ ಸವಿಸ್ತಾರವಾದ ತನಿಖಾ ವರದಿ ಇಡೀ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಬಂಟ್ವಾಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳ ತೀವ್ರ ಕೊರತೆ ಇರುವುದನ್ನು ಮಾಧ್ಯಮವು ಸಾಕ್ಷ್ಯಸಮೇತ ಜಗತ್ತಿನ ಮುಂದೆ ಇಟ್ಟಿತ್ತು.

ಮಾಧ್ಯಮದ ವರದಿಗೆ ಬೆದರಿದ ಅಧಿಕಾರಿಗಳು ಮತ್ತು ಸತ್ಯ ಮುಚ್ಚಿಡುವ ಪ್ರಯತ್ನ!

‘ದೀವಟಿಗೆ ಡಿಜಿಟಲ್ ಮೀಡಿಯಾ’ದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸಂಬಂಧಪಟ್ಟ ಅಧಿಕಾರಿಗಳು, ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಮಾಧ್ಯಮ ಸಂಸ್ಥೆಗೆ ಫೋನ್ ಕರೆಗಳ ಮೂಲಕ ಸಮರ್ಥನೆ ನೀಡಲು ಮುಂದಾದರು. ಇಷ್ಟಕ್ಕೇ ನಿಲ್ಲದೆ, ತಮ್ಮ ಹುದ್ದೆಗಳಿಗೆ ಸಂಚಕಾರ ಬರಬಹುದೆಂಬ ಭೀತಿಯಿಂದ ಕ್ಲಸ್ಟರ್ ಅಧಿಕಾರಿಗಳು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ ವಾಟ್ಸಾಪ್‌ ಹಾಗೂ ಇತರ ಮಾಧ್ಯಮಗಳ ಮೂಲಕ ತುರ್ತು ಸಂದೇಶ ರವಾನಿಸಿ, “ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆಯಲ್ಲಿ ಯಾವುದೇ ಲೋಪದೋಷಗಳಾಗಿಲ್ಲ” ಎಂದು ಬಲವಂತದ ದೃಢೀಕರಣ ನೀಡುವಂತೆ ತೀವ್ರ ಒತ್ತಡ ಹೇರಿದ್ದರು ಎಂಬ ಆಘಾತಕಾರಿ ಸತ್ಯವೂ ಬೆಳಕಿಗೆ ಬಂದಿದೆ

ಆದರೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದು ಎಂಬ ಸದುದ್ದೇಶದಿಂದ ಮಾಧ್ಯಮವು ಈ ದೂರನ್ನು ತಾಲೂಕು ಅಧಿಕಾರಿಗಳಿಂದ ಹಿಡಿದು, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳವರೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಮಾಧ್ಯಮದ ಈ ನಿರಂತರ ಹೋರಾಟದ ಫಲವಾಗಿ ಇಂದು ಇಲಾಖೆಯು ತನ್ನ ತಪ್ಪನ್ನು ಒಪ್ಪಿಕೊಂಡು ತುರ್ತು ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘದ ತುರ್ತು ಸುತ್ತೋಲೆ (ದಿನಾಂಕ: 19.06.2026): ಪ್ರಮುಖ ಅಂಶಗಳು

ಮಾಧ್ಯಮದ ವರದಿ ಹಾಗೂ ಸಾರ್ವಜನಿಕರ ದೂರಿನ ತೀವ್ರತೆಗೆ ಮಣಿದ ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 19.06.2026 ರಂದು ಅತ್ಯಂತ ತುರ್ತು ಸುತ್ತೋಲೆಯನ್ನು (ಸಂಖ್ಯೆ: E-81501A3/KTBS/ADM/TBTR/11/2025-26) ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಮುಂದಿನ ಪರಿಹಾರ ಕ್ರಮಗಳ ಕುರಿತು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ:

ಕೊರತೆಯ ಒಪ್ಪಿಗೆ: ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿಗಳೊಂದಿಗೆ ನಡೆಸಿದ ಆನ್‌ಲೈನ್ ಸಭೆಗಳಲ್ಲಿ ಕೆಲವು ತರಗತಿಗಳ ಶೀರ್ಷಿಕೆಗಳ ಕೊರತೆ ಇರುವುದು ಹಾಗೂ ವಿದ್ಯಾರ್ಥಿಗಳ ಹೆಚ್ಚುವರಿ ದಾಖಲಾತಿಯಿಂದ ಪಠ್ಯಪುಸ್ತಕಗಳ ಕೊರತೆಯಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಳ್ಳಲಾಗಿದೆ.

ಕ್ಲಸ್ಟರ್ ಹಂತದಲ್ಲಿ ಮರುಹೊಂದಾಣಿಕೆ: ಆಯಾ ತಾಲೂಕಿನ ಸಿ.ಆರ್.ಪಿ (CRP) ಗಳ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ಪುಸ್ತಕಗಳು ವಿತರಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಹೆಚ್ಚುವರಿ ಇರುವ ಶಾಲೆಗಳಿಂದ ಕೊರತೆಯಿರುವ ಶಾಲೆಗಳಿಗೆ ತಕ್ಷಣವೇ ಮರುಹೊಂದಾಣಿಕೆ ಮಾಡಲು ಸೂಚಿಸಲಾಗಿದೆ.

ಜಿಲ್ಲಾ ಹಂತದ ಕ್ರಮ: ತಾಲೂಕು ಹಂತದಲ್ಲೂ ಪುಸ್ತಕಗಳು ಲಭ್ಯವಿಲ್ಲದಿದ್ದರೆ, ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು ಇತರೆ ತಾಲೂಕುಗಳಿಂದ ಮರುಹೊಂದಾಣಿಕೆ ಮಾಡಿಕೊಡಲು ಕ್ರಮವಹಿಸಬೇಕು.

ಕಟ್ಟುನಿಟ್ಟಿನ ಗಡುವು: ಈ ಸಂಪೂರ್ಣ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ದಿನಾಂಕ 24.06.2026 ರೊಳಗೆ ಮುಗಿಸಿ ರಾಜ್ಯ ಹಂತಕ್ಕೆ ಕಡ್ಡಾಯವಾಗಿ ದೃಢೀಕರಣ ಸಲ್ಲಿಸಬೇಕು ಎಂದು ಕಠಿಣ ಗಡುವು ವಿಧಿಸಲಾಗಿದೆ.

ಮಾಧ್ಯಮಗಳ ವರದಿಗೆ ಬ್ರೇಕ್ ಹಾಕುವ ತಂತ್ರ: “ಯಾವುದೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಕೊರತೆ ಉಂಟಾಗದಂತೆ ಹಾಗೂ ಈ ರೀತಿಯ ವ್ಯತ್ಯಯಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗದಂತೆ ಕ್ರಮವಹಿಸಬೇಕು” ಎಂದು ಸುತ್ತೋಲೆಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ಇಲಾಖೆಯು ಮಾಧ್ಯಮಗಳ ಚಾಟಿ ಏಟಿಗೆ ಎಷ್ಟು ಹೆದರಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಉನ್ನತ ಅಧಿಕಾರಿಗಳ ನಿರಂತರ ನಿಗಾ: ಈ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಆಯುಕ್ತರು ಪ್ರತಿದಿನ ಅವಲೋಕಿಸುತ್ತಿದ್ದು, ಇದರಲ್ಲಿ ಯಾವುದೇ ವ್ಯತ್ಯಯ ಉಂಟಾದಲ್ಲಿ ಸಂಬಂಧಿಸಿದವರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.

    ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ ಎಲ್ಲಿದೆ?

    ಮುಂಚಿತ ಯೋಜನೆಯ ಕೊರತೆ: ಶೈಕ್ಷಣಿಕ ವರ್ಷ ಆರಂಭವಾಗುವ ಕನಿಷ್ಠ 2 ತಿಂಗಳ ಮೊದಲೇ ದಾಖಲಾತಿಗಳ ಅಂದಾಜು ಇಲಾಖೆಯ ಬಳಿ ಇರುತ್ತದೆ. ಆದಾಗ್ಯೂ ಶಾಲೆ ಆರಂಭವಾಗಿ ತಿಂಗಳಾದರೂ ಪುಸ್ತಕ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲಾಖೆಯ ಆಡಳಿತಾತ್ಮಕ ವೈಫಲ್ಯ.

    ಡಿಜಿಟಲ್ ತಂತ್ರಜ್ಞಾನದ ದುರ್ಬಳಕೆ (SATS ಒತ್ತಡ): ಅಧಿಕಾರಿಗಳು ತಳಮಟ್ಟದ ವಾಸ್ತವವನ್ನು ಅರಿಯದೆ, ಕೇವಲ SATS ತಂತ್ರಾಂಶದಲ್ಲಿ 100% ಪ್ರಗತಿ ತೋರಿಸಲು ಶಾಲೆಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ‘ರಿಸೀವ್’ ಮಾಡಿಕೊಳ್ಳುವಂತೆ ಶಾಲೆಗಳಿಗೆ ಆದೇಶಿಸುವುದು ವಿದ್ಯಾರ್ಥಿಗಳಿಗೆ ಮಾಡುವ ದ್ರೋಹವಾಗಿದೆ.

    ಸತ್ಯವನ್ನು ಮುಚ್ಚಿಡುವ ಪ್ರವೃತ್ತಿ: ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು, ಮಾಧ್ಯಮಗಳ ವಿರುದ್ಧ ಮುಗಿಬೀಳುವುದು ಹಾಗೂ ಕೆಳಹಂತದ ಸಿಬ್ಬಂದಿಗಳಿಂದ ಸುಳ್ಳು ವರದಿಗಳನ್ನು ತರಿಸಿಕೊಳ್ಳಲು ಯತ್ನಿಸುವುದು ಇಲಾಖೆಯ ಅಪಕ್ವತೆಯನ್ನು ತೋರಿಸುತ್ತದೆ.

    ಮುಂದಕ್ಕೆ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳು

    ಮುಂಚಿತ ಉಗ್ರಾಣ ವ್ಯವಸ್ಥೆ (Advanced Stocking): ಪ್ರತಿ ವರ್ಷ ಏಪ್ರಿಲ್ ತಿಂಗಳ ಅಂತ್ಯದೊಳಗಾಗಿ ತಾಲೂಕು ಕೇಂದ್ರಗಳಿಗೆ 100% ಪಠ್ಯಪುಸ್ತಕಗಳ ಪೂರೈಕೆ ಪೂರ್ಣಗೊಳ್ಳಬೇಕು.

    ನೈಜ ಸಮಯದ ಬೇಡಿಕೆ ಸಲ್ಲಿಕೆ (Real-time Indent): ಕೇವಲ ಹಳೆಯ ದಾಖಲಾತಿಗಳ ಆಧಾರದ ಮೇಲಲ್ಲದೆ, ಮೇ ತಿಂಗಳಲ್ಲೇ ತಾತ್ಕಾಲಿಕ ದಾಖಲಾತಿ ಪ್ರಕ್ರಿಯೆ ಮುಗಿಸಿ ಹೆಚ್ಚುವರಿ ಪುಸ್ತಕಗಳ ಬೇಡಿಕೆಯನ್ನು ಮೊದಲ ವಾರದಲ್ಲೇ ಸಲ್ಲಿಕೆ ಮಾಡಿಕೊಳ್ಳಬೇಕು.

    ಹೊಣೆಗಾರಿಕೆ ನಿಗದಿ (Accountability): ಪುಸ್ತಕ ಪೂರೈಕೆಯಲ್ಲಿ ವಿಳಂಬ ಮಾಡುವ ಮುದ್ರಕರು ಹಾಗೂ ಅದನ್ನು ವಿತರಿಸಲು ವಿಫಲರಾಗುವ ನೋಡಲ್ ಅಧಿಕಾರಿಗಳ ಮೇಲೆ ಕಠಿಣ ಶಿಸ್ತುಕ್ರಮ ಮತ್ತು ದಂಡ ವಿಧಿಸಬೇಕು.

    ಪಾರದರ್ಶಕ ಆಡಿಟ್: ಮಾಧ್ಯಮಗಳು ಅಥವಾ ಸಾರ್ವಜನಿಕರು ದೂರು ನೀಡುವ ಮುನ್ನವೇ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಜಾಗೃತ ದಳವು ಪ್ರತಿ ತಾಲೂಕಿಗೆ ಭೇಟಿ ನೀಡಿ ಪುಸ್ತಕ ವಿತರಣೆಯ ಆಡಿಟ್ ನಡೆಸಬೇಕು.

      ಸರ್ಕಾರದ ಈ ಇತ್ತೀಚಿನ ತುರ್ತು ಸುತ್ತೋಲೆಯಿಂದಾಗಿ ಸದ್ಯಕ್ಕೆ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳು ಸಿಗುವಂತಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಈ ಬದಲಾವಣೆಯ ಹಿಂದೆ ‘ದೀವಟಿಗೆ ಡಿಜಿಟಲ್ ಮೀಡಿಯಾ’ದ ಪ್ರಾಮಾಣಿಕ ಮತ್ತು ತನಿಖಾತ್ಮಕ ಪತ್ರಿಕೋದ್ಯಮದ ಶ್ರಮವಿದೆ. ಮುಂದಿನ ದಿನಗಳಲ್ಲಾದರೂ ಶಿಕ್ಷಣ ಇಲಾಖೆಯು ಇಂತಹ ಬೇಜವಾಬ್ದಾರಿತನದಿಂದ ಹೊರಬಂದು, ಶೈಕ್ಷಣಿಕ ವರ್ಷದ ಮೊದಲ ದಿನವೇ ಪ್ರತಿ ಮಗುವಿನ ಕೈಗೆ ಪಠ್ಯಪುಸ್ತಕ ಸಿಗುವಂತೆ ನೋಡಿಕೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯ.

      ಈ ವರದಿಯನ್ನು ಸಿದ್ದಪಡಿಸುವ ವೇಳೆಗೆ ಇನ್ನೊಂದು ಬೆಚ್ಚಿ ಬೀಳಿಸುವ ವಿಷಯವೊಂದು ಬಹಿರಂಗವಾಗುತ್ತಿದೆ. ಪಠ್ಯ ಪುಸ್ತಕ ವಿತರಣೆಯಲ್ಲಿನ ಅವ್ಯವಸ್ಥೆ, ಗೊಂದಲಗಳ ಸರಿಪರಿಪಡಿಸಿ ಪುಸ್ತಕ ದೊರೆಯದ ಶಾಲೆಗಳಿಗೆ ವಿತರಣೆ ಮಾಡಬೇಕಾಗಿದ್ದ ಅಧಿಕಾರಿಗಳು ತಮ್ಮ ಲೊಪದೋಷಗಳ ಮರೆಮಾಚಲು ಮಾದ್ಯಮದವರಿಗೆ ಇಲಾಖೆಯ ಒಳಗಿನ ಮಾಹಿತಿ ನೀಡಿದವರು ಯಾರೆಂಬುದರ ಬಗ್ಗೆ ಶಿಕ್ಷಕರ ವಿಚಾರಣೆಯಲ್ಲಿ ತೊಡಗಿದ್ದಾರೆ. ಹೂ! ವ್ಯವಸ್ಥೆಯೊಳಗಿನ ಅವ್ಯವಸ್ಥೆ ಎಂದರೆ ಇದುವೇ ಇರಬೇಕು.. ಇವರನ್ನು ಸರಿ ಮಾಡಲು ದೇವರೇ ಬರಬೇಕು !!!

      2 ದಿನಗಳ ಹಿಂದೆ ಪಠ್ಯಪುಸ್ತಕ ವಿತರಣೆಯಲ್ಲಾದ ಲೋಪದ ಬಗ್ಗೆ ಮಾಡಿದ ನ್ಯೂಸ್‌ ನೋಡಿ



      ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
      Advertisement

      Article

      ಮಾನಸಿಕ ಅಸ್ವಸ್ಥ ಅನಾಥ ವ್ಯಕ್ತಿಯ ರಕ್ಷಿಸಿದ ಕುಂಬಳೆ ಪೊಲೀಸರು.ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ದಾಖಲು.

      Published

      on

      ​ಕುಂಬಳೆ: ರಾತ್ರಿ ಹೊತ್ತು ಕುಂಬಳೆ ಬಸ್ ನಿಲ್ದಾಣ ಸಮೀಪದ ಮುಖ್ಯ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೊಂದಿಗೆ ರಸ್ತೆಯಲ್ಲಿ ಮಲಗಿಕೊಂಡಿದ್ದ ಅನಾಥ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.​ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಪಂದಿಸಿದ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್‌ ಹಾಗೂ ಅವರ ತಂಡದವರು ಮಾನವೀಯತೆಯ ಆಧಾರದ ಮೇಲೆ ಆ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನಂತರ ಅದೇ ರಾತ್ರಿ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಆತನನ್ನು ಸುರಕ್ಷಿತವಾಗಿ ದಾಖಲಿಸಲಾಗಿದೆ. ಪ್ರಸ್ತುತ ಆಶ್ರಮದಲ್ಲಿ ಅವರಿಗೆ ಅಗತ್ಯವಿರುವ ಆರೈಕೆ, ವಸತಿ ಮತ್ತು ಆರೋಗ್ಯಾಧಾರಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

      ವ್ಯಕ್ತಿಯ ವಿವರಗಳು.

      ​ಹೆಸರು: ಗುರುವಾಯೂರಪ್ಪ ​ತಂದೆಯ ಹೆಸರು: ಸುಬ್ರಹ್ಮಣ್ಯ ​ಊರು: ಕಾಸರಗೋಡು, ಮಲ್ಲ ​ಸಂಪರ್ಕ ಮಾಹಿತಿ:​ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಿದ್ದರೆ, ಅಥವಾ ಅವರ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರು ಕಂಡುಬಂದಲ್ಲಿ ದಯವಿಟ್ಟು ಕೆಳಗಿನ ಫೋನ್ ಸಂಖ್ಯೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.​

      📞 ಸಂಪರ್ಕ ಸಂಖ್ಯೆ: 94486 26500 ​

      ಆಪತ್ತಿನಲ್ಲಿದ್ದ ವ್ಯಕ್ತಿಯನ್ನು ತಕ್ಷಣ ರಕ್ಷಿಸಿ ಆಶ್ರಮಕ್ಕೆ ತಲುಪಿಸಿದ ಕುಂಬಳೆ ಪೊಲೀಸ್ ಇಲಾಖೆಯ ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯಕ್ಕೆ ಸಾಯಿ ನಿಕೇತನ ಸೇವಾಶ್ರಮದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ.

      Continue Reading

      Article

      20 ವರ್ಷಗಳ ‘ನರಕಯಾತನೆ’ಗೆ ಕೊನೆಗೂ ಮುಕ್ತಿ! ಕುದುರೆಮುಖ ದಟ್ಟ ಕಾಡಿನಿಂದ ಹೊರಬಂದ ಮೂವರು ವೃದ್ಧರು

      Published

      on

      ದಟ್ಟ ಅರಣ್ಯ, ಕಾಡುಪ್ರಾಣಿಗಳ ನಿರಂತರ ಭಯ, ಮೂಲಭೂತ ಸೌಕರ್ಯಗಳಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಪುಟ್ಟ ಮನೆ… ಹೀಗೆ ಬರೋಬ್ಬರಿ 20 ವರ್ಷಗಳ ಕಾಲ ಅರಣ್ಯದೊಳಗೆ ನರಕಯಾತನೆ ಅನುಭವಿಸುತ್ತಿದ್ದ ಮೂವರು ವೃದ್ಧರಿಗೆ ಕೊನೆಗೂ ಅರಣ್ಯದ ಸಂಕಷ್ಟದಿಂದ ಮುಕ್ತಿ ದೊರೆತಿದೆ. ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

      ಹಿನ್ನೆಲೆ ಏನು?

      ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುನ್ನಿಹಳ್ಳ ಗ್ರಾಮದಲ್ಲಿ ಈ ವೃದ್ಧರು ಬದುಕು ಸಾಗಿಸುತ್ತಿದ್ದರು. 2003-04ರಲ್ಲಿ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಸರ್ಕಾರ ಘೋಷಿಸಿದಾಗ, ಅಲ್ಲಿದ್ದ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

      ಆದರೆ, ಸೂಕ್ತ ದಾಖಲೆಗಳ ಕೊರತೆಯಿಂದಾಗಿ 73 ವರ್ಷದ ಶ್ಯಾಮಲಾ ದೇವಿ, 75 ವರ್ಷದ ನಾಗರತ್ನ ಮತ್ತು 58 ವರ್ಷದ ದೇವರಾಜ್ ಅವರು ಕಾಡಿನೊಳಗೇ ಉಳಿದುಕೊಳ್ಳುವಂತಾಯಿತು.

      ಕಾಡಿನಲ್ಲೇ ಕಳೆದವು 20 ಭೀಕರ ವರ್ಷಗಳು

      ಗ್ರಾಮಸ್ಥರೆಲ್ಲಾ ತೆರಳಿದ ಮೇಲೆ ಈ ಮೂವರು ವೃದ್ಧರು ಕುಸಿಯುವ ಹಂತದಲ್ಲಿದ್ದ ಮನೆಯಲ್ಲೇ ದಿನದೂಡುತ್ತಿದ್ದರು. ಕಾಡುಪ್ರಾಣಿಗಳ ಹಾವಳಿಯ ನಡುವೆಯೇ ಜೀವ ಕೈಯಲ್ಲಿಡಿದು ಬದುಕಬೇಕಿತ್ತು. ತಮ್ಮ ಸಣ್ಣಪುಟ್ಟ ಕೆಲಸಗಳಿಗೆ ಅಥವಾ ಆಡಳಿತ ಕಚೇರಿಗಳನ್ನು ತಲುಪಲು ನೂರಾರು ಕಿಲೋಮೀಟರ್ ದೂರ ಪಯಣಿಸಬೇಕಾದ ಅನಿವಾರ್ಯತೆ ಇವರಿಗಿತ್ತು. ತಮ್ಮ ಸಂಕಷ್ಟವನ್ನು ಕೇಳುವವರಿಲ್ಲದೆ ಈ ಹಿರಿಯರು ದಶಕಗಳ ಕಾಲ ಕಣ್ಣೀರಿಟ್ಟಿದ್ದರು.

      ಮಾದ್ಯಮ ವರದಿಗೆ ಸ್ಪಂದಿಸಿದ ಸರ್ಕಾರ!

      ಈ ವೃದ್ಧರ ಕಣ್ಣೀರಿನ ಕಥೆ ಮತ್ತು ಅರಣ್ಯರೋಧನದ ಕುರಿತು ಸುದ್ದಿವಾಹಿನಿ ವಿಶೇಷ ವರದಿ ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ರಾಜ್ಯ ಸರ್ಕಾರದ ಅಧಿಕಾರಿಗಳು ಪರಿ ಪರಿಶೀಲನೆ ನಡೆಸಿದರು.

      ಬಿಕರಿ ದಾಖಲೆಗಳ ಕೊರತೆಯಿದ್ದರೂ ಮಾನವೀಯತೆಯ ಆಧಾರದ ಮೇಲೆ ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮೂವರಿಗೂ ತಲಾ 9 ಲಕ್ಷ ರೂಪಾಯಿ ಪರಿಹಾರ ಧನ ಮಂಜೂರು ಮಾಡಿ, ಕಾಡಿನಿಂದ ಹೊರಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

      ಕೊನೆಗೂ ಮೊಗದಲ್ಲಿ ನಗು!

      20 ವರ್ಷಗಳ ಸುದೀರ್ಘ ಹೋರಾಟ ಮತ್ತು ಕಷ್ಟದ ನಂತರ ಕೊನೆಗೂ ಪರಿಹಾರ ಹಾಗೂ ಸುರಕ್ಷಿತ ಆಸರೆ ಸಿಕ್ಕಿರುವುದಕ್ಕೆ ವೃದ್ಧರು ಹರ್ಷ ವ್ಯಕ್ತಪಡಿಸಿದ್ದಾರೆ. ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ನಡೆಸಲು ದಾರಿ ಮಾಡಿಕೊಟ್ಟ ಸರ್ಕಾರ ಹಾಗೂ ತಮ್ಮ ಧ್ವನಿಯಾದ ಮಾಧ್ಯಮಕ್ಕೆ ವೃದ್ಧರು ಧನ್ಯವಾದ ಅರ್ಪಿಸಿದ್ದಾರೆ.

      Continue Reading

      Article

      ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ

      Published

      on

      ಕಲ್ಲಡ್ಕ ಪ್ರಭಾಕರ ಭಟ್‌ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಸೌಜನ್ಯ ಮನೆ ಮತ್ತು ತಿಮರೋಡಿ ಮನೆಗೆ ಭೇಟಿ ನೀಡಿ ಸೌಜನ್ಯ ಹೋರಾಟಕ್ಕೆ ಧ್ವನಿಯೆತ್ತಿ ಬೆಂಬಲ ಘೋಷಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ
      ಮಂಗಳೂರು: ಕರ್ನಾಟಕದ ಕರಾವಳಿ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಸಂಘ ಪರಿವಾರದ ಪ್ರಮುಖ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ವೈರಲ್ ಆಡಿಯೋ ಒಂದು ತೀವ್ರ ಚರ್ಚೆಗೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಬಂಟ್ವಾಳದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳದಿಂದ ನಡೆದ ಪ್ರತಿಭಟನಾ ಸಭೆಯು ಈ ಎಲ್ಲಾ ಬೆಳವಣಿಗೆಗಳಿಗೆ ನಾಂದಿ ಹಾಡಿತು. ಈ ಹಿನ್ನೆಲೆಯಲ್ಲಿ, ಕರಾವಳಿ ರಾಜಕೀಯದ ಪ್ರಮುಖ ಮುಖಂಡರಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ರಾಜಕೀಯ ಮತ್ತು ಸಾಂಸ್ಥಿಕ ಹಿನ್ನೆಲೆ ಏನು, ಈ ವಿವಾದ ಸೃಷ್ಟಿಯಾಗಲು ಕಾರಣವಾದ ಅಂಶಗಳೇನು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರು ಎತ್ತಿರುವ ಗಂಭೀರ ಪ್ರಶ್ನೆಗಳೇನು ? ಅವರು ಪ್ರಶ್ನಿಸಲು ಸಮರ್ಥರೇ ? ಪಕ್ಷದಲ್ಲಿ ಅವರು ಏನು ? ಎಂಬ ಸಂಪೂರ್ಣ ನೋಟ ಇಲ್ಲಿದೆ.

      ಈ ವಿವಾದದ ಕೇಂದ್ರಬಿಂದುವಾಗಿರುವ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ಪಕ್ಷ ಹಾಗೂ ಸಂಘ ಪರಿವಾರಕ್ಕಾಗಿ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವ ಧೀಮಂತ ವ್ಯಕ್ತಿಯಾಗಿದ್ದಾರೆ. 1989ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶಾಖಾ ಶಿಕ್ಷಕರಾಗಿ ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ ಇವರು, 1990ರ ಅಯೋಧ್ಯೆ ರಾಮಜನ್ಮ ಭೂಮಿ ಮುಕ್ತಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತರ ಪ್ರದೇಶದಲ್ಲಿ 15 ದಿನಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದಾರೆ. 1991-92ರಲ್ಲಿ ಕುರ್ನಾಡು ಮಂಡಲದಲ್ಲಿ ಸಂಘದ ವಿಸ್ತಾರಕನಾಗಿ, 1992ರ ಅಯೋಧ್ಯೆ ಕರಸೇವೆಯಲ್ಲಿ, ಮತ್ತು 1992-93ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಗೋಳ್ತಮಜಲು ಮಂಡಲ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ 1993-94ರಲ್ಲಿ ಬಾಳ್ತಿಲ ಗ್ರಾಮ ಬಿಜೆಪಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಾಗಿಯೂ, 2022ರಿಂದ 3 ವರ್ಷಗಳ ಕಾಲ ಕೇಂದ್ರ ಸರಕಾರದ ದಿಶಾ ಸಮಿತಿಯ ಸದಸ್ಯರಾಗಿಯೂ ಜನ ಸೇವೆಗೈದಿದ್ದಾರೆ.

      ಮಾಜಿ ಶಾಸಕ ರುಕ್ಮಯ ಪೂಜಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿದ್ದ ರಾಧಕೃಷ್ಣ ಅಡ್ಯಂತಾಯರು, ದಿವಂಗತ ಕಲ್ಲಡ್ಕ ರಾಮಪ್ಪ ಪೂಜಾರಿ ಏಳ್ತಿಮಾರ್‌, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರವರೆಗಿನ ಎಲ್ಲರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸಂಚಾಲಕರಾಗಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ಅನುಯಾಯಿಯಾಗಿರುವ ಇವರು, ನೇರ ನಡೆನುಡಿಗೆ ಹೆಸರಾಗಿದ್ದಾರೆ.

      ಈ ವಿವಾದ ಪ್ರಸ್ತಾವವಾಗಲು ಮತ್ತು ಕಲ್ಲಡ್ಕ ಅವರ ಆಡಿಯೋ ವೈರಲ್ ಆಗಲು ಬಂಟ್ವಾಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಡೆದ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಳವಣಿಗೆಗಳೇ ಪ್ರಮುಖ ಕಾರಣವಾಗಿವೆ. ಸದರಿ ಸಭೆಯಲ್ಲಿ ಭಾಗವಹಿಸಿದ್ದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, “ಕರಾವಳಿ ತೀರದವರು ಅವಲಕ್ಕಿ ಪ್ರಿಯರು. ನಮ್ಮ ಬಾಯಲ್ಲಿ ಅವಲಕ್ಕಿ ಇಟ್ಟಂತೆ ನಮ್ಮ ಶಾಸಕರು ಮತ್ತು ಸಂಸದರೂ ಬಾಯಲ್ಲಿ ಅವಲಕ್ಕಿ ತುಂಬಿಕೊಂಡಿದ್ದಾರೆ” ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಕಟುವಾಗಿ ಟೀಕಿಸಿದ್ದರು. ಕರಾವಳಿ ಭಾಗದ ನಾಯಕರ ವಿರುದ್ಧ ಹೊರಗಿನಿಂದ ಬಂದು ಪಾಠ ಮಾಡುವುದನ್ನು ಖಂಡಿಸಿದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಇಷ್ಟು ವರ್ಷಗಳಿಂದ ಸಂಘಪರಿವಾರಕ್ಕಾಗಿ ದುಡಿದ ನಳಿನ್ ಕುಮಾರ್ ಕಟೀಲ್, ಸತ್ಯಜಿತ್ ಹಾಗೂ ಅರುಣ್ ಕುಮಾರ್ ಪುತ್ತಿಲರಂತಹ ನಾಯಕರನ್ನು ಕಡೆಗಣಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಮುಂದುವರಿದು, ಕಲ್ಲಡ್ಕ ಪ್ರಭಾಕರ ಭಟ್‌ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಗ್ರಹ ಮಾಡಿದ ಬೆನ್ನಲ್ಲೇ ಕೆಲದಿನಗಳ ಹಿಂದೆ ಧರ್ಮಸ್ಥಳದ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಅವರ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ನ್ಯಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

      ಈ ಎಲ್ಲಾ ಬೆಳವಣಿಗೆಗಳ ಮುಂದುವರಿದ ಭಾಗವಾಗಿ, ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರು ವೈರಲ್ ಆಗಿರುವ ಆಡಿಯೋ ಮೂಲಕ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಕರಾವಳಿ ನಾಯಕರನ್ನು ಹಗುರವಾಗಿ ಮಾತನಾಡಿರುವ ಬಗ್ಗೆ ನನಗೆ ನೋವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಮುಖಂಡರ ಮೂಲಕ ಬಗೆಹರಿಸಿ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ನೋಡಿಕೊಂಡಿರುವ ಕಲ್ಲಡ್ಕ ಅವರ ಈ ನೇರ ಎಚ್ಚರಿಕೆಯು, ಕರಾವಳಿ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕುವ ಮತ್ತು ಹೊರಗಿನವರ ಹಸ್ತಕ್ಷೇಪವನ್ನು ಸಹಿಸದ ಆಕ್ರೋಶದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

      Continue Reading

      ads (2)
      ads (3)
      ads (4)
      ads (5)
      ads (6)
      ads (1)
      ads (8)
      ads (7)

      Trending

      Copyright © 2025 Deevatige

      error: Content is protected !!