Connect with us

manglore police

ಸಾವಿನ ದವಡೆಯಿಂದ ವ್ಯಕ್ತಿಯನ್ನು ಕಾಪಾಡಿದ ಪಣಂಬೂರು ಪೊಲೀಸರ ಸಮಯಪ್ರಜ್ಞೆ

Published

on

ಮಂಗಳೂರು : ಆತ್ಮಹತ್ಯೆ ಮಾಡಿಕೊಳ್ಳಲು ಫಲ್ಗುಣಿ ನದಿಗೆ ಹಾರಲು ಮುಂದಾಗಿದ್ದ ಹಾಸನ ಮೂಲದ ಕೃಷಿಕನೋರ್ವನನ್ನು ಪಣಂಬೂರು ಪೊಲೀಸರು ತಮ್ಮ ತ್ವರಿತ ಕ್ರಮ ಮತ್ತು ಮಾನವೀಯತೆಯಿಂದ ಸಾವಿನ ದವಡೆಯಿಂದ ಕಾಪಾಡಿದ್ದಾರೆ.

ಘಟನೆಯ ವಿವರ:
ದಿನಾಂಕ 22-05-2026 ಸಂಜೆ ಸುಮಾರು 7:00 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣ ಬೆಳಗೊಳ ಸಮೀಪದ ಹಳ್ಳಿಯ ನಿವಾಸಿ ಕೃಷಿಕ. ಆರೋಗ್ಯ ಸಮಸ್ಯೆ ಮತ್ತು ಸಣ್ಣ ಮಟ್ಟಿನ ಹಣಕಾಸು ಸಮಸ್ಯೆಯಿಂದ ಮನನೊಂದಿದ್ದ ಈ ವ್ಯಕ್ತಿ ಬೆಳಿಗ್ಗೆ ಮನೆಯವರಿಗೆ ಹೇಳದೆ ಮನೆ ಬಿಟ್ಟು ಬಂದಿದ್ದರು. ಮೊಬೈಲ್ ಮಾತ್ರ ಆನ್‌ನಲ್ಲಿಟ್ಟಿದ್ದ ಅವರು, ಮನೆಯವರು ಮತ್ತು ಸಂಬಂಧಿಕರು ಸಂಪರ್ಕಿಸಿದರೂ “ತಾನು ಸಾಯುತ್ತೇನೆ” ಎಂದು ಮಾತ್ರ ಹೇಳಿ ತನ್ನ ಇರುವಿಕೆ ತಿಳಿಸಿರಲಿಲ್ಲ.

ಪೊಲೀಸರ ರಕ್ಷಣಾ ಕಾರ್ಯಾಚರಣೆ:
ಸಂಜೆ 5:30ಕ್ಕೆ ವ್ಯಕ್ತಿ ಪಣಂಬೂರು ಬೀಚ್ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು, ನಿವೃತ್ತ ಪೊಲೀಸ್ ಅಧಿಕಾರಿಯ ಮೂಲಕ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿದರು.

ಕೂಡಲೇ ಇನ್ಸ್‌ಪೆಕ್ಟರ್ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದ ಸಹಾಯದೊಂದಿಗೆ ಶೋಧ ಕಾರ್ಯ ಆರಂಭಿಸಿದರು. ಮೊದಲು ಫೋನ್ ಮೂಲಕ ಕೌನ್ಸೆಲಿಂಗ್ ಮಾಡಿದರೂ ವ್ಯಕ್ತಿ ಸ್ಪಂದಿಸಲಿಲ್ಲ. ನಿರಂತರ ಒಂದೂವರೆ ಗಂಟೆ ಹುಡುಕಾಟದ ಬಳಿಕ ಸಂಜೆ 7 ಗಂಟೆಗೆ ಕೂಳೂರು ಸೇತುವೆ ಬಳಿ ನದಿಗೆ ಹಾರಲು ಸಿದ್ಧನಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಯಿತು.

ಪತ್ತೆಯಾದ ಸ್ಥಳ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ, ಒಂದು ಅಮೂಲ್ಯ ಜೀವ ಉಳಿಸುವ ಸದುದ್ದೇಶದಿಂದ ಪಣಂಬೂರು ಪೊಲೀಸರು ಸರಹದ್ದಿನ ಬಗ್ಗೆ ಚಿಂತಿಸದೆ ವ್ಯಕ್ತಿಯನ್ನು ತಮ್ಮ ಠಾಣೆಗೆ ಕರೆತಂದು ನೀರು, ಆಹಾರ ನೀಡಿ ಕೌನ್ಸೆಲಿಂಗ್ ನಡೆಸಿದರು. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬ ಬುದ್ಧಿಮಾತು ಹೇಳಿ ಆತ್ಮವಿಶ್ವಾಸ ತುಂಬಿದರು. ಕೊನೆಗೆ ಊರಿನಿಂದ ಬಂದ ಸಂಬಂಧಿಕರ ಜೊತೆ ಅವರನ್ನು ಮನೆಗೆ ಕಳುಹಿಸಲಾಯಿತು.

ಸಂಬಂಧಿಕರ ಕೃತಜ್ಞತೆ, ಮೇಲಾಧಿಕಾರಿಗಳ ಶ್ಲಾಘನೆ
ತಮ್ಮವರ ಪ್ರಾಣ ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಮೇಲಾಧಿಕಾರಿಗಳೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ತಣ್ಣೀರು ಬಾವಿ ಬೀಚ್‌ನಲ್ಲಿ ತನ್ನ 4 ವರ್ಷದ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ವಿಡಿಯೋ ಹರಿಬಿಟ್ಟು, ನಂತರ ಮನೆಯಲ್ಲಿ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದ ತಂದೆ-ಮಗಳ ಪ್ರಾಣವನ್ನೂ ಪಣಂಬೂರು ಪೊಲೀಸರು ರಕ್ಷಿಸಿದ್ದರು. ಆರು ತಿಂಗಳಲ್ಲಿ ಇದು ಪೊಲೀಸರು ಉಳಿಸಿದ ಮೂರನೇ ಜೀವವಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು: ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣಬಸವ, ಅನ್ವರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ಧರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷ ಮೌಲ್ಯದ 100 LSD ಸ್ಟ್ರಿಪ್‌ಗಳ ವಶ, ಇಬ್ಬರ ಬಂಧನ

Published

on

ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಲ್‌ಎಸ್‌ಡಿ (LSD – Lysergic Acid Diethylamide) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು ₹3,00,000 ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್‌ಗಳು ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಒಟ್ಟು ಸ್ವತ್ತಿನ ಮೌಲ್ಯ ₹3,35,000 ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಿಂದ ಸರಬರಾಜು, ಪಡೀಲ್‌ನಲ್ಲಿ ಸೆರೆ

ಆರೋಪಿಗಳು ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಖರೀದಿಸಿ ತಂದು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ 2026ರ ನವೆಂಬರ್ 3ರಂದು ಮಧ್ಯಾಹ್ನ ಮಂಗಳೂರಿನ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ದಾಳಿ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳ ವಿವರ:

  1. ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30 ವರ್ಷ) – ವಾಸ: ತುಂಬೆ ಪ್ಲಾಜಾ, ಅಳಪೆ, ಪಡೀಲ್, ಮಂಗಳೂರು.
  2. ಸಿದ್ದಾರ್ಥ ಶೆಟ್ಟಿ (35 ವರ್ಷ) – ವಾಸ: ಈಮಿಲೇ ಮ್ಯಾನ್ಷನ್ ಅಪಾರ್ಟ್‌ಮೆಂಟ್, ದಡ್ಡಲ್‌ಕಾಡ್, ಉರ್ವಸ್ಟೋರ್, ಮಂಗಳೂರು.

ಹಳೆಯ ಅಪರಾಧ ಹಿನ್ನೆಲೆ:

ಬಂಧಿತ ಆರೋಪಿಗಳ ಪೈಕಿ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿತ್ತು. ಮತ್ತೊಬ್ಬ ಆರೋಪಿ ಸಿದ್ದಾರ್ಥ ಶೆಟ್ಟಿ ವಿರುದ್ಧ ನಗರದ ಬರ್ಕೆ ಹಾಗೂ ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಮತ್ತು ಗಾಂಜಾ ಮಾರಾಟ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.

ತನಿಖೆ ಮುಂದುವರಿಕೆ

ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಲ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಭರದಿಂದ ಸಾಗಿದೆ.

Continue Reading

crime

ಮಂಗಳೂರಿನಲ್ಲಿ ಫಿಲ್ಮಿ ದರೋಡೆ: ಬಸ್ ಇಳಿದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ₹1.15 ಕೋಟಿ ದರೋಡೆ!

Published

on

ಮಂಗಳೂರು, ಅ.29: ಶಿವಮೊಗ್ಗದಿಂದ ಮಂಗಳೂರಿಗೆ ತರಲಾಗುತ್ತಿದ್ದ ₹1.15 ಕೋಟಿ ನಗದು ಹಣವನ್ನು ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಇಳಿದ ಕೂಡಲೇ ವ್ಯಕ್ತಿಯನ್ನು ಅಪಹರಿಸಿ ನಗರದಾದ್ಯಂತ ಸುತ್ತಾಡಿಸಿ ಹಣ ಕಿತ್ತುಕೊಂಡು ಕಾವೂರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವರ ಕೆಲಸದಾಳು ಸತ್ಯನಾರಾಯಣ ಅವರು ಅ.23ರಂದು 2 ಬ್ಯಾಗ್‌ಗಳಲ್ಲಿ ₹1 ಕೋಟಿ 15 ಲಕ್ಷ ಹಣವನ್ನು ಮಂಗಳೂರಿಗೆ ತರಲು ದಾವಣಗೆರೆಯಿಂದ ಹೊರಟಿದ್ದರು. ಅ.27ರ ರಾತ್ರಿ ದಾವಣಗೆರೆಯಿಂದ ಬಸ್ ಹತ್ತಿದ್ದ ಅವರು, ಅ.28ರ ಬೆಳಿಗ್ಗೆ 6 ಗಂಟೆಗೆ ಲಾಲ್‌ಬಾಗ್ ಬಳಿ ಬಸ್ ಇಳಿದಿದ್ದಾರೆ.

ಈ ವೇಳೆ ಕಪ್ಪು ಕಾರಿನಲ್ಲಿ ಮುಖಕ್ಕೆ ಮಫ್ಲರ್ ಕಟ್ಟಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಅಪಹರಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮಂಗಳೂರು ನಗರದಾದ್ಯಂತ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿ ಇದ್ದ 2 ಬ್ಯಾಗ್ ಹಣ ಮತ್ತು 2 ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.

ನಂತರ ಬೆಳಿಗ್ಗೆ 8 ಗಂಟೆಗೆ ಕಾವೂರು ಬಸ್ ನಿಲ್ದಾಣದ ಬಳಿಯ ಗುಡ್ಡದ ಮೇಲೆ ಅವರನ್ನು ತಳ್ಳಿ, “ಪೊಲೀಸರಿಗೆ ಹೇಳಿದರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಈ ಸಂಬಂಧ ಮಂಗಳೂರು ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಅಪಹರಣ, ದರೋಡೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಕಪ್ಪು ಕಾರು ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈ ದೊಡ್ಡ ಮೊತ್ತದ ಹಣದ ಸಾಗಾಟದ ಮಾಹಿತಿ ದರೋಡೆಕೋರರಿಗೆ ಮೊದಲೇ ಹೇಗೆ ಗೊತ್ತಾಯಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

arrest

ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಪ್ರಕಟಿಸಿದ ಮಂಗಳೂರು ನ್ಯಾಯಾಲಯ

Published

on

ಮಂಗಳೂರು: ಪ್ರೀತಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ: 2019ರ ಜನವರಿ 3ರಂದು ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿ ಈ ಘಟನೆ ನಡೆದಿತ್ತು. ಪ್ರಕರಣದ 1ನೇ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಕೌಟಿ ಎಂಬುವವನ ತಂಗಿಯನ್ನು ರಾಕೇಶ್ ಎಂಬ ಯುವಕ ಪ್ರೀತಿಸುತ್ತಿದ್ದನೆಂಬ ದ್ವೇಷದಿಂದ, ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿಕೊಂಡು ರಾಕೇಶನ್‌ನನ್ನು ತಲವಾರ್‌ಗಳಿಂದ ಭೀಕರವಾಗಿ ಕೊಲೆ ಮಾಡಿದ್ದರು.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ 02/2019) ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್. ನಾಯ್ಕ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು: ಸುದೀರ್ಘ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ರಾಜೇಶ್ ಮಾರುತಿ ಕಮಟೆ ಅವರು ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ್ದಾರೆ.

1ರಿಂದ 3ನೇ ಆರೋಪಿಗಳಿಗೆ: ಕಲಂ 302, 120(ಬಿ) ಜೊತೆಗೆ 34 ಐ.ಪಿ.ಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

1ರಿಂದ 4ನೇ ಆರೋಪಿಗಳಿಗೆ: ಸಾಕ್ಷ್ಯ ನಾಶಪಡಿಸಿದ (ಕಲಂ 201 ರ/ವಿ 34 ಐ.ಪಿ.ಸಿ) ಆರೋಪಕ್ಕೆ 3 ವರ್ಷಗಳ ಕಾರಾವಾಸ ಹಾಗೂ ತಲಾ ₹5,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 1 ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.

4ನೇ ಆರೋಪಿಗೆ: ಆರೋಪಿಗಳಿಗೆ ಆಶ್ರಯ ನೀಡಿದ (ಕಲಂ 212 ರ/ವಿ 34 ಐ.ಪಿ.ಸಿ) ಆರೋಪಕ್ಕಾಗಿ 3 ವರ್ಷಗಳ ಕಾರಾವಾಸ ಮತ್ತು ₹5,000 ದಂಡ (ಪಾವತಿಸದಿದ್ದಲ್ಲಿ 1 ತಿಂಗಳು ಹೆಚ್ಚುವರಿ ಶಿಕ್ಷೆ) ವಿಧಿಸಲಾಗಿದೆ.

ಆರೋಪಿಗಳಿಂದ ವಸೂಲಾಗುವ ಒಟ್ಟು ₹70,000 ದಂಡದ ಮೊತ್ತದಲ್ಲಿ ₹20,000 ಸರ್ಕಾರಕ್ಕೆ ಹಾಗೂ ₹50,000 ಹಣವನ್ನು ಮೃತ ರಾಕೇಶನ್ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಶ್ರೀ ಮೋತೀಲಾಲ್ ಚೌದರಿ ಅವರು ವಾದ ಮಂಡಿಸಿದ್ದರು.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!