Connect with us

manglore police

ನೀಟ್ ಪರೀಕ್ಷೆ: ಮಂಗಳೂರಿನ 12 ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಣೆ, ಜೆರಾಕ್ಸ್ ಅಂಗಡಿ ಬಂದ್ ಮಾಡಲು ಆದೇಶ

Published

on

ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 21-06-2026 ರಂದು ನಡೆಯಲಿರುವ ನೀಟ್ (NEET UG-2026) ಪರೀಕ್ಷೆಯು ಸುಗಮವಾಗಿ, ನ್ಯಾಯಯುತವಾಗಿ ಮತ್ತು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮಂಗಳೂರು ನಗರದ ಒಟ್ಟು 12 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.

ಈ ಕುರಿತು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು (DCP) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀ ಕೆ. ರವಿಶಂಕರ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಮುಂಜಾಗ್ರತಾ ಕ್ರಮಗಳು ಮತ್ತು ನಿರ್ಬಂಧಗಳು:

  • ಜೆರಾಕ್ಸ್, ಕಂಪ್ಯೂಟರ್ ಅಂಗಡಿಗಳು ಬಂದ್: ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿರುವ ಎಲ್ಲಾ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಗುಂಪು ಸೇರುವಿಕೆಗೆ ನಿಷೇಧ: ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕರು ಐದು ಅಥವಾ ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತ ತಿರುಗಾಡುವುದನ್ನು ನಿಷೇಧಿಸಲಾಗಿದೆ.
  • ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧ: ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ದೂರವಾಣಿ, ಬ್ಲೂಟೂತ್, ಪೇಜರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಸಂಪರ್ಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
  • ನಕಲು ಹಾಗೂ ಅಕ್ರಮಗಳಿಗೆ ತಡೆ: ನಿಷೇಧಿತ ವಲಯದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು/ರವಾನಿಸುವುದು ಹಾಗೂ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಿಗಾಗಿ ಸಂಜ್ಞೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
  • ಆಯುಧಗಳ ಸಾಗಾಟ ನಿಷೇಧ: ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ಷಾರಕ (ಆಸಿಡ್), ಸ್ಫೋಟಕ ವಸ್ತುಗಳು ಅಥವಾ ಇನ್ನಿತರ ಮಾರಕ ಆಯುಧಗಳನ್ನು ಕೊಂಡುಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಗಮನಿಸಿ: ಈ ನಿಷೇಧಾಜ್ಞೆಯು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕ್ ಭದ್ರತಾ ಸಿಬ್ಬಂದಿಯ ಭದ್ರತಾ ಉಪಕರಣಗಳ ಬಳಕೆಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವ 12 ಪರೀಕ್ಷಾ ಕೇಂದ್ರಗಳು:

  1. ಗೌರ್ಮೆಂಟ್ ಪಿಯು ಕಾಲೇಜ್ ಫಾರ್ ಗರ್ಲ್ಸ್, ಬಲ್ಮಠ, ಮಂಗಳೂರು
  2. ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್ ಫಾರ್ ವುಮೆನ್, ಬಲ್ಮಠ, ಮಂಗಳೂರು
  3. ಸೆಂಟ್ ಆಗ್ನೆಸ್ ಪಿಯು ಕಾಲೇಜ್, ಬೆಂದೂರ್, ಮಂಗಳೂರು
  4. ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಎಲ್.ಹೆಚ್.ಹೆಚ್ ರೋಡ್, ಮಂಗಳೂರು
  5. ಡಾ. ದಯಾನಂದ ಪೈ-ಸತೀಶ್ ಪೈ ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್, ರಥಬೀದಿ, ಮಂಗಳೂರು
  6. ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-A), ಕೊಡಿಯಾಲ್‌ಬೈಲ್, ಮಂಗಳೂರು
  7. ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-B), ಕೊಡಿಯಾಲ್‌ಬೈಲ್, ಮಂಗಳೂರು
  8. ವಿದ್ಯಾಡಾಯಿನಿ ಹೈಸ್ಕೂಲ್, ಸುರತ್ಕಲ್
  9. ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-2, ಎಕ್ಕೂರು, ಮಂಗಳೂರು
  10. ಯೂನಿವರ್ಸಿಟಿ ಕಾಲೇಜ್, ಯು.ಪಿ. ಮಲ್ಯ ರೋಡ್, ಹಂಪನಕಟ್ಟೆ, ಮಂಗಳೂರು
  11. ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-1, ಪಣಂಬೂರು, ಮಂಗಳೂರು
  12. ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ, ಮುಡಿಪು, ಕುರ್ನಾಡು, ದಕ್ಷಿಣ ಕನ್ನಡ

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಆಯಾ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ: ಮಂಗಳೂರು ಪೊಲೀಸರ ಕಾರ್ಯಾಚರಣೆ

Published

on

ಮಂಗಳೂರು: ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 30ಕ್ಕೂ ಹೆಚ್ಚು ವಾರಂಟ್ ಹಾಗೂ 13ಕ್ಕೂ ಅಧಿಕ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ಪಡೆ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲ ತಾಲೂಕಿನ ಮಾರ್ಗತಲೆ ಮೂಲದ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಡಪ್ಪು ನಿವಾಸಿ ಉಮ್ಮರ್ ನವಾಫ್ (33) ಬಂಧಿತ ಆರೋಪಿ.

30ಕ್ಕೂ ಹೆಚ್ಚು ವಾರಂಟ್, ಪ್ರೋಕ್ಲಮೇಷನ್ ಜಾರಿ

ಬಂಧಿತ ಉಮ್ಮರ್ ನವಾಫ್ ವಿರುದ್ಧ ಕೊಲೆ ಯತ್ನ, ಅಪಹರಣ, ದರೋಡೆ, ಹಫ್ತಾ ವಸೂಲಿ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಉಳ್ಳಾಲ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಘನ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಹೊರಡಿಸಿತ್ತು. ಅಲ್ಲದೆ, ಉಳ್ಳಾಲ ಠಾಣೆಯ ಮೂರು ಪ್ರಕರಣಗಳಲ್ಲಿ ಈತನ ವಿರುದ್ಧ ನ್ಯಾಯಾಲಯದ ಆದೇಶದಂತೆ ‘ಪ್ರೋಕ್ಲಮೇಷನ್’ ಜಾರಿಗೊಳಿಸಲಾಗಿತ್ತು ಹಾಗೂ ಒಂದು ಪ್ರಕರಣದಲ್ಲಿ ಎಲ್.ಪಿ.ಸಿ (LPC) ಮಾಡಲಾಗಿತ್ತು.

ಆರೋಪಿ ಉಮ್ಮರ್ ನವಾಫ್ ಮೇಲಿರುವ ಪ್ರಕರಣಗಳ ವಿವರಗಳು:

  1. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 222/17):
    • ಕಲಂಗಳು: 143, 147, 148 (ಕಾನೂನುಬಾಹಿರ ಗುಂಪುಗಾರಿಕೆ, ಗಲಭೆ), 341 (ಅಕ್ರಮ ತಡೆ), 504, 506 (ಶಾಂತಿ ಭಂಗ, ಜೀವ ಬೆದರಿಕೆ), 324 (ಹಾಕಾಹಾಕಿ/ಹೊಡೆದಾಟ) ಮತ್ತು 307 (ಕೊಲೆ ಯತ್ನ).
  2. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 23/17):
    • ಕಲಂಗಳು: 427 IPC (ಆಸ್ತಿಗೆ ಹಾನಿ) ಮತ್ತು KPDLP ಕಾಯ್ದೆಯ 2(a), 2(b) (ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ).
  3. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 247/14):
    • ಕಲಂಗಳು: 448 (ಅಕ್ರಮ ಪ್ರವೇಶ) ಮತ್ತು 395 (ದರೋಡೆ).
  4. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 289/17):
    • ಕಲಂಗಳು: 504, 506, 364(a) (ಅಪಹರಣ ಮತ್ತು ಕಪ್ಪಕ್ಕೆ ಬೇಡಿಕೆ), 387 (ಹಫ್ತಾ ವಸೂಲಿಗೆ ಬೆದರಿಕೆ), 395 (ದರೋಡೆ), 149 IPC.
  5. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 276/15) – (ನ್ಯಾಯಾಲಯದಿಂದ LPC ಮಾಡಲಾದ ಪ್ರಕರಣ):
    • ಕಲಂಗಳು: 143, 144, 148, 448, 451, 452 (ಅಕ್ರಮ ಮನೆ ಪ್ರವೇಶ), 326, 307 (ಕೊಲೆ ಯತ್ನ), 397 (ಮಾರಕ ಆಯುಧದೊಂದಿಗೆ ದರೋಡೆ/ಕಳವು), 506, 149 IPC.
  6. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 206/2012) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 143, 147, 148, 323, 427, 504, 506, 149 IPC.
  7. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 27/2017) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 387 IPC (ಭಯ ಹುಟ್ಟಿಸಿ ಹಣ/ಆಸ್ತಿ ವಸೂಲಿ ಮಾಡುವುದು).
  8. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 103/2021):
    • ಕಲಂಗಳು: 364 IPC (ಕೊಲೆ ಮಾಡುವ ಉದ್ದೇಶದಿಂದ ಅಪಹರಣ).
  9. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 71/23):
    • ಕಲಂಗಳು: 504, 506, 307 (ಕೊಲೆ ಯತ್ನ), 324, 427 IPC.
  10. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 183/17) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 143, 147, 148, 448, 504, 324, 323, 506, 427 R/w 149 IPC.
  11. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 159/23):
    • ಕಲಂಗಳು: 341, 394 (ಕಳವು ಮಾಡುವಾಗ ಗಾಯಗೊಳಿಸುವುದು), 307 (ಕೊಲೆ ಯತ್ನ) R/w 34 IPC.
  12. ಪಣಂಬೂರು ಪೊಲೀಸ್ ಠಾಣೆ (PNB ಮೊ.ನಂ 158/2012):
    • ಕಲಂಗಳು: 379 IPC (ಕಳವು).
  13. ಬರ್ಕೆ ಪೊಲೀಸ್ ಠಾಣೆ (ಮೊ.ನಂ 04/15):
    • ಕಲಂಗಳು: 353 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ), 427 R/w 34 IPC.

ಪೊಲೀಸರ ಸಕಾಲಿಕ ಕಾರ್ಯಾಚರಣೆ

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ಮಾರ್ಗದರ್ಶನದಲ್ಲಿ, ದಕ್ಷಿಣ ಉಪವಿಭಾಗ ಕಚೇರಿಯ ವಿಶೇಷ ಕರ್ತವ್ಯ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಾಂಕ 02-08-2026 ರಂದು ಸುಳಿವು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Continue Reading

arrest

ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ: ಪೊಲೀಸ್ ಇಲಾಖೆಯ ವಿವಿಧ ಪ್ರಮುಖ ಕಾರ್ಯಾಚರಣೆಗಳು – ಮೂವರು ಆರೋಪಿಗಳ ಬಂಧನ, ಪ್ರಕರಣಗಳಲ್ಲಿ ಮಹತ್ವದ ಬೆಳವಣಿಗೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮೂರು ಪ್ರಮುಖ ಕಾರ್ಯಾಚರಣೆಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ, 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯ ಬಂಧನ ಹಾಗೂ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಘಟನೆಗಳು ನಡೆದಿವೆ.

ವರದಿಗಳ ವಿವರ ಇಲ್ಲಿದೆ:

1. ಬೆಳ್ತಂಗಡಿಯಲ್ಲಿ 7.60 ಲಕ್ಷ ರೂ. ಮೌಲ್ಯದ ಎಂಡಿಎಂಎ, ಗಾಂಜಾ ಜಪ್ತಿ: ಓರ್ವನ ಬಂಧನ

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಜುಲೈ 29ರ ರಾತ್ರಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಆನಂದ ಎಂ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಅನುಮಾನಾಸ್ಪದವಾಗಿ ಆಟೋ ರಿಕ್ಷಾ (KA18 A 7203) ಬಳಿ ನಿಂತಿದ್ದ ಬೆಳ್ತಂಗಡಿ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್‌ (21) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆತನ ತಪಾಸಣೆ ನಡೆಸಿದಾಗ 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಪತ್ತೆಯಾಗಿದೆ. ಸ್ಥಳದಲ್ಲಿದ್ದ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ ಸುಮಾರು 7,60,000 ರೂಪಾಯಿ ಮೌಲ್ಯದ 76.59 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ MDMA (ಎಂಡಿಎಂಎ) ಪತ್ತೆಯಾಗಿದೆ. ಮಾದಕ ವಸ್ತು ಸರಬರಾಜು ಮಾಡಲು ಬಂದಿದ್ದ ಮತ್ತೋರ್ವ ಆರೋಪಿ ಅಮ್ಜತ್‌ ಖರಾರ್‌ ಎಂಬಾತ ತನ್ನ KA21 MA 4990 ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ (ಅಕ್ರ 82/2026) ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2. 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ

ಮಂಗಳೂರು: 2015ರಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ (307) ಪ್ರಕರಣದಲ್ಲಿ ಭಾಗಿಯಾಗಿ, ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (34) ಎಂದು ಗುರುತಿಸಲಾಗಿದೆ. ಈತನು 2015ರಲ್ಲಿ ಮಂಗಳೂರಿನ ಆಕಾಶಭವನದಲ್ಲಿ ನಡೆದ ಮದುವೆಯೊಂದರ ಮದುರಂಗಿ ಶಾಸ್ತ್ರದ ವೇಳೆ ನಡೆದ ಗಲಾಟೆಯಲ್ಲಿ ಅಶೋಕ ಕುಮಾರ ಕೊಟ್ಟಾರಿ ಎಂಬುವರ ಮೇಲೆ ಇತರ ಆರೋಪಿಗಳೊಂದಿಗೆ ಸೇರಿ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದನು (ಕಾವೂರು ಠಾಣೆ ಅ.ಕ್ರ 135/2015).

ಪ್ರಕರಣ ದಾಖಲಾದ ದಿನದಿಂದ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ಎಲ್ಪಿಸಿ (LPC) ವಾರಂಟ್ (25/2025) ಹೊರಡಿಸಿತ್ತು. ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜುಲೈ 29, 2026 ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ಈತನನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

3. ಅಪ್ರಾಪ್ತೆಯ ಮೇಲಿನ ದೌರ್ಜನ್ಯ, ನಗ್ನ ವಿಡಿಯೋ ಸ್ಕ್ರೀನ್‌ಶಾಟ್ ಇಟ್ಟು ಬೆದರಿಕೆ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದ (ಅ.ಕ್ರ. 130/2025) ಆರೋಪಿಗೆ ಮಂಗಳೂರಿನ ಎಫ್‌ಟಿಎಸ್‌ಸಿ-2 (FTSC-2) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುಂಜತ್ತಬೈಲ್ ದೇವಿ ನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಶಿಕ್ಷೆಗೆ ಒಳಗಾದ ಆರೋಪಿ. ಈತನು 2024ರಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ನಂಬಿಸಿ, ಶಕ್ತಿನಗರ ಹಾಗೂ ಅಳಪೆ ಗ್ರಾಮದ ಮನೆಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ಅಲ್ಲದೆ, ಬಾಲಕಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಕಾಲ್ ಮಾಡಿ ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡು, ದೈಹಿಕ ಸಂಪರ್ಕಕ್ಕೆ ಬರದಿದ್ದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು.

ಕಂಕನಾಡಿ ನಗರ ಠಾಣೆಯ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾ ದೇವಿ ಸರ್ಕಾರದ ಪರ ವಾದ ಮಂಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಾಧೀಶರಾದ ಮಾನು ಕೆ.ಎಸ್. ರವರು ಆರೋಪಿಗೆ:

ಪೋಕ್ಸೋ ಕಲಂ 6 ಹಾಗೂ BNS ಕಲಂ 64(2)(m) ಅಡಿಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ,

BNS ಕಲಂ 77, ಪೋಕ್ಸೋ ಕಲಂ 15 ಹಾಗೂ IT ಕಾಯ್ದೆಯ ಕಲಂ 66(E) ಅಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Continue Reading

drugs

ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ.

Published

on

ಮಂಗಳೂರಿನಲ್ಲಿ ಮಾದಕ ವಸ್ತುಗಳ ವೈಜ್ಞಾನಿಕ ವಿಲೇವಾರಿ

ಮಂಗ‌ಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ವಿವಿಧ ಪ್ರಮುಖ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು ₹82 ಕೋಟಿ ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಬುಧವಾರ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಲಾಯಿತು.

ನ್ಯಾಯಾಲಯದ ಅನುಮತಿಯೊಂದಿಗೆ ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ‘ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಲಿಮಿಟೆಡ್’ (Ramky Energy and Environment Ltd.) ಸಂಸ್ಥೆಯ ಆವರಣದಲ್ಲಿ ‘ಡ್ರಗ್ ಡಿಸ್ಪೋಸಲ್ ಸಮಿತಿ’ಯ (Drug Disposal Committee) ನೇರ ಸಮ್ಮುಖದಲ್ಲಿ ಈ ವಿಲೇವಾರಿ ಪ್ರಕ್ರಿಯೆ ನಡೆಯಿತು.

16 ಠಾಣೆಗಳು, 59 ಪ್ರಕರಣಗಳ ಸರಕು ನಾಶ:

ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 59 ಎನ್‌ಡಿಪಿಎಸ್‌ (NDPS) ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ವಿವಿಧ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ಸುಟ್ಟು ವಿಲೇವಾರಿ ಮಾಡಲಾಗಿದೆ. ನಾಶಪಡಿಸಲಾದ ವಸ್ತುಗಳ ವಿವರ ಹೀಗಿದೆ:

  • ಗಾಂಜಾ: 450 ಕೆ.ಜಿ.
  • ಎಂ.ಡಿ.ಎಂ.ಎ. (MDMA): 43 ಕೆ.ಜಿ. 260 ಗ್ರಾಂ.
  • ಹೈಡ್ರೋ ವೀಡ್ ಗಾಂಜಾ: 880 ಗ್ರಾಂ.
  • ಭಾಂಗ್: 1 ಕೆ.ಜಿ. 200 ಗ್ರಾಂ.
  • ಚರಸ್: 80 ಗ್ರಾಂ.

ಪ್ರಮುಖ ಪ್ರಕರಣಗಳ ಜಪ್ತಿಗಳು:

ನಾಶಪಡಿಸಲಾದ ವಸ್ತುಗಳಲ್ಲಿ ಅತ್ಯಂತ ದೊಡ್ಡ ಮೊತ್ತದ ಜಪ್ತಿ ಎಂದರೆ, 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ₹75 ಕೋಟಿ ಮೌಲ್ಯದ 37 ಕೆ.ಜಿ. ಎಂ.ಡಿ.ಎಂ.ಎ.. ಇದರೊಂದಿಗೆ 2025ರಲ್ಲಿ ಮುಲ್ಕಿ ಠಾಣೆಯಲ್ಲಿ ವಶಪಡಿಸಿಕೊಂಡಿದ್ದ ₹4.47 ಕೋಟಿ ಮೌಲ್ಯದ 4 ಕೆ.ಜಿ. ಎಂ.ಡಿ.ಎಂ.ಎ., ಕೊಣಾಜೆ ಠಾಣೆಯ ₹20 ಲಕ್ಷ ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡಬಿದ್ರೆ ಠಾಣೆಯ ₹36 ಲಕ್ಷ ಮೌಲ್ಯದ 111 ಕೆ.ಜಿ. ಗಾಂಜಾ ಪ್ರಮುಖವಾಗಿವೆ.

2026ರ ಸಾಲಿನಲ್ಲಿ ತೀವ್ರಗೊಂಡ ಕಾರ್ಯಾಚರಣೆ:

ಚಾಲ್ತಿ ಸಾಲಿನಲ್ಲಿಯೂ ಡ್ರಗ್ಸ್ ವಿರುದ್ಧ ಮಂಗಳೂರು ನಗರ ಪೊಲೀಸರು ಸಮರ ಮುಂದುವರಿಸಿದ್ದು, ಇದುವರೆಗೆ 87 ಎನ್‌ಡಿಪಿಎಸ್‌ ಪ್ರಕರಣಗಳನ್ನು ದಾಖಲಿಸಿಕೊಂಡು 157 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗಳ ವೇಳೆ ₹8.18 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು (148 ಕೆ.ಜಿ. ಗಾಂಜಾ, 7 ಕೆ.ಜಿ. MDMA, 1.7 ಕೆ.ಜಿ. ಹೈಡ್ರೋ ವೀಡ್) ಜಪ್ತಿ ಮಾಡಲಾಗಿದೆ. ಅಲ್ಲದೆ, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಾರ್ವಜನಿಕರಿಗೆ ಮಾಹಿತಿ ನೀಡಲು ಕರೆ:

ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮಾರಾಟ, ಸಾಗಾಟ ಅಥವಾ ಬಳಕೆಯ ಕುರಿತು ಯಾವುದೇ ಸುಳಿವು ಸಿಕ್ಕಲ್ಲಿ ಇಲಾಖೆ ಸೃಜಿಸಿರುವ ಕ್ಯೂಆರ್ (QR) ಕೋಡ್ ಮೂಲಕ, ತುರ್ತು ಸಂಖ್ಯೆ 112 ಅಥವಾ 9480802321 ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!