Connect with us

INCIDENT

ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು; ಆತಂಕದಲ್ಲಿ ಸಂಬಂಧಿಕರು, ಪೊಲೀಸರಿಂದ ತೀವ್ರ ಶೋಧ!

Published

on

ಶಿವಮೊಗ್ಗ: ನಗರದ ಬುದ್ಧನಗರ ಪ್ರದೇಶದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಹಾಗೂ ಸಂಬಂಧಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಮತ್ತು ಮೊಹಮ್ಮದ್ ಆದಿಲ್ (32) ಕಾಣೆಯಾಗಿರುವ ದುರದೃಷ್ಟಕರ ಕುಟುಂಬದ ಸದಸ್ಯರಾಗಿದ್ದಾರೆ.

ಘಟನೆಯ ವಿವರ: ಈ ನಾಲ್ವರ ಕುಟುಂಬವು ಕಳೆದ ಏಪ್ರಿಲ್ 15ರಿಂದಲೇ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದೆ. ಆರಂಭದಲ್ಲಿ ಸಂಬಂಧಿಕರು “ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ” ಎಂದು ಕಾಯುತ್ತಿದ್ದರು. ಆದರೆ ದಿನಗಳು ಉರುಳಿದರೂ ಅವರ ಯಾವುದೇ ಸುಳಿವು ಸಿಗಲಿಲ್ಲ. ಸಂಬಂಧಿಕರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೊನೆಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ನಾಪತ್ತೆಯಾದವರ ಚಹರೆ ವಿವರಗಳು: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದವರ ಪತ್ತೆಗಾಗಿ ಪ್ರಕಟಣೆ ಹೊರಡಿಸಿದ್ದು, ಅವರ ಚಹರೆ ವಿವರಗಳನ್ನು ನೀಡಿದ್ದಾರೆ:

ಮೊದಲನೆಯದಾಗಿ, 62 ವರ್ಷದ ಮೋಹಮ್ಮದ್ ಇಕ್ಬಾಲ್ ಅವರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದಾರೆ. ಇವರೊಂದಿಗೆ 54 ವರ್ಷದ ನಸ್ರತ್ ಬಾನು ಅವರು ನಾಪತ್ತೆಯಾಗಿದ್ದು, ಇವರು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತನ್ನು ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ಕುಟುಂಬದ ಯುವಕರಾದ 35 ವರ್ಷದ ಮೋಹಮ್ಮದ್ ಫಾಜಿಲ್ (5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಇರುವಿಕೆ) ಮತ್ತು 32 ವರ್ಷದ ಮೊಹಮ್ಮದ್ ಆದಿಲ್ (5.4 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ) ಇಬ್ಬರೂ ಸಹ ಅದೇ ದಿನದಿಂದ ಕಾಣೆಯಾಗಿದ್ದಾರೆ.

ಪೊಲೀಸರಿಂದ ತೀವ್ರ ತನಿಖೆ: ಒಂದೇ ಕುಟುಂಬದ ನಾಲ್ವರು ಒಟ್ಟಿಗೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರು ಸ್ವಯಂಪ್ರೇರಿತರಾಗಿ ಎಲ್ಲಾದರೂ ತೆರಳಿದ್ದಾರೆಯೇ? ಅಥವಾ ಬೇರೆನಾದರೂ ಅನಾಹುತ ಸಂಭವಿಸಿದೆಯೇ? ಎಂಬ ಆಯಾಮಗಳಲ್ಲಿ ದೊಡ್ಡಪೇಟೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಮಾಹಿತಿ ನೀಡಲು ಮನವಿ: ನಾಪತ್ತೆಯಾಗಿರುವ ಈ ನಾಲ್ವರ ಕುರಿತು ಸಾರ್ವಜನಿಕರಲ್ಲಿ ಯಾರಿಗಾದಈ ನಾಲ್ಕೂ ಜನ ಕಾಣೆಯಾದವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯ ಆದಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414, 9972426144, 9480803345 ಅಥವಾ 6264571710 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಪ್ರಕಟಣೆ ಹೊರಡಿಸಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

AWARNESS

ಗೋಕರ್ಣ ಬೀಚಿನಲ್ಲಿ ರಜೆಯ ಮೋಜು..ಬೆಂಗಳೂರಿನ ಮೂವರು ಟೆಕ್ಕಿಗಳ ದುರ್ಮರಣ..

Published

on

ಉತ್ತರ ಕನ್ನಡ :
ಗೋಕರ್ಣದ ದುಬ್ಬಣಶಶಿ (ಡಬ್ಬನಶಶಿ) ಕಡಲತೀರದಲ್ಲಿ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪನಿಯ ಮೂವರು ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತರ ವಿವರ:
ಮೃತರನ್ನು ಬೆಂಗಳೂರಿನ ಬೆಳ್ಳಂದೂರಿನ ‘ಅಲೋರಿಕಾ’ ಕಂಪನಿಯ ಉದ್ಯೋಗಿಗಳಾದ ಶೋಭಾ ದಾಸ್ (22) (ಮೂಲತಃ ಜಾರ್ಖಂಡ್), ಮಹಮ್ಮದ್ ಅಕ್ರಮ್ (27) ಮತ್ತು ಸಮುದ್ರದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ವಿಶ್ವೇಶ್ ಎ.ಕೆ. (24) ಎಂದು ಗುರುತಿಸಲಾಗಿದೆ. ಸೋಮವಾರದ ಹುಡುಕಾಟದ ಬಳಿಕ ವಿಶ್ವೇಶ್ ಅವರ ಮೃತದೇಹವೂ ಪತ್ತೆಯಾಗಿದೆ.

ಘಟನೆ ನಡೆದ ಹಿನ್ನೆಲೆ.
ಕಂಪನಿಯಿಂದ ಸಿಕ್ಕ ಬೋನಸ್ ಪಾರ್ಟಿ ಆಚರಿಸಲು ಈ ತಂಡ ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ಭಾನುವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ತಂಡದ ಐವರು ಸದಸ್ಯರು ಸಮುದ್ರದಲ್ಲಿ ಈಜಲು ಇಳಿದಾಗ ಏಕಾಏಕಿ ಅಪ್ಪಳಿಸಿದ ಬಲವಾದ ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ರಕ್ಷಣೆ ಮತ್ತು ಚಿಕಿತ್ಸೆ:
ಘಟನೆಯನ್ನು ಗಮನಿಸಿದ ರೆಸಾರ್ಟ್‌ನ ಜೀವರಕ್ಷಕ (ಲೈಫ್‌ಗಾರ್ಡ್) ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ತಂದಿದ್ದರು. ಆದರೆ ಶೋಭಾ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಬದುಕುಳಿದವರು.
ಇದೇ ಘಟನೆಯಲ್ಲಿ ಸಿಲುಕಿದ್ದ ನಿಶಾಂತ್ ಡಿ.ವಿ. (26) ಮತ್ತು ಮಹಮದ್ ಖಾಸಿಂ ಎಂಬ ಇಬ್ಬರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading

BANGALORE

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:

ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

Continue Reading

CONGRESS

ಕಸ್ತೂರಿ ರಂಗನ್ ವರದಿ: ಜನರ ಆತಂಕ ಸಂಸದರ ಗಮನಕ್ಕೆ ತರದಿರುವುದು ಕಳವಳಕಾರಿ – ಎಂ. ವೆಂಕಪ್ಪ ಗೌಡ

Published

on

ಸುಳ್ಯ: ಕಸ್ತೂರಿ ರಂಗನ್ ವರದಿಯಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜನರ ಬದುಕಿನ ಅಳಿವು-ಉಳಿವಿನ ಈ ಗಂಭೀರ ವಿಚಾರವನ್ನು ಸಂಬಂಧಪಟ್ಟ ಸಂಸದರ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ.

ವರದಿಯಿಂದ ಬಾಧಿತವಾಗಿರುವ ಪ್ರದೇಶಗಳ ಜನರು ಹಲವು ವರ್ಷಗಳಿಂದ ಭಯದಲ್ಲೇ ಜೀವನ ನಡೆಸುತ್ತಿದ್ದು, ಇದರ ವಿರುದ್ಧ ಈಗಾಗಲೇ ಹಲವು ಹಂತದ ಹೋರಾಟಗಳು ನಡೆದಿವೆ. ಜನರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಏಳು ಬಾರಿ ತಿರಸ್ಕರಿಸಿ ವಾಪಸ್ ಕಳುಹಿಸಿದೆ. ಆದರೆ, ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರುವುದರಿಂದ, ಬಾಧಿತ ಗ್ರಾಮಗಳ ಜನರ ಭವಿಷ್ಯ ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ. ಆದ್ದರಿಂದ, ಸ್ಥಳೀಯ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಇತ್ತೀಚೆಗೆ ಸುಳ್ಯ ತಾಲೂಕಿಗೆ ಆಗಮಿಸಿದ್ದ ಸಂಸದರು ವರದಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಸ್ಥಳದಲ್ಲಿದ್ದ ಹೋರಾಟಗಾರರು ಅವರಿಗೆ ಜನರ ಸಮಸ್ಯೆಗಳನ್ನು ವಿವರಿಸುವ ಮನವಿ ಸಲ್ಲಿಸದಿರುವುದು ಮತ್ತು ಒತ್ತಡ ಹೇರದಿರುವುದು ಬೇಸರದ ಸಂಗತಿ. ಈ ಹೋರಾಟ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಸ್ತೂರಿ ರಂಗನ್ ವರದಿಯ ವಿಷಯವು ಕೇಂದ್ರ ప్రభుత్వದ ನಿರ್ಧಾರಕ್ಕೆ ಸಂಬಂಧಿಸಿದ ಮಹತ್ವದ ವಿಚಾರವಾಗಿರುವುದರಿಂದ, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೇಂದ್ರದ ಮೇಲೆಯೂ ಒತ್ತಡ ತರಬೇಕು. ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!