Connect with us

Belthangady

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಯುವಕ ಸಾವು; ವೈದ್ಯಕೀಯ ನಿರ್ಲಕ್ಷ್ಯ ಆರೋಪಿಸಿ ಪೊಲೀಸ್‌ಗೆ ದೂರು

Published

on

ಉಪ್ಪಿನಂಗಡಿ/ಬೆಳ್ತಂಗಡಿ: ಹೊಟ್ಟೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಗೇರುಕಟ್ಟೆಯ ಯುವಕ ಮಹಮ್ಮದ್ ಶರೀಫ್ (35) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ಪೊಲೀಸ್ ದಾಖಲೆ ವಿವರ:

ಮೃತರ ಸಹೋದರ, ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ನಾಸಿರುದ್ದೀನ್.ಪಿ. ಬಿನ್ ಸೂಫಿ ಬ್ಯಾರಿ (36) ಅವರು ಪೊಲೀಸರಿಗೆ ದೂರು ನೀಡಿದ್ದು, ದಿನಾಂಕ 14.05.2026 ರಂದು ರಾತ್ರಿ ಮಹಮ್ಮದ್‌ ಶರೀಫ್‌ ಅವರಿಗೆ ಮನೆಯಲ್ಲಿದ್ದ ಹೋರಿ ಹಾಯ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸದ್ರಿ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದರಿಂದ ಗಾಯಾಳು ಮಹಮ್ಮದ್‌ ಶರೀಫ್‌ ರವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.

ಬಳಿಕ ಅವರನ್ನು ದಿನಾಂಕ 16.05.2026 ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಹಮ್ಮದ್ ಶರೀಫ್ ರವರು ದಿನಾಂಕ 20.05.2026 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ.

ಕರುಳಿಗೆ ತೂತಾದ ಗಂಭೀರ ಆರೋಪ:

ಕುಟುಂಬದವರು ಆರೋಪಿಸುವ ಪ್ರಕಾರ, ಸೂರ್ಯ ಆಸ್ಪತ್ರೆಯಲ್ಲಿ ನಡೆಸಿದ ಚಿಕಿತ್ಸೆ ವೇಳೆ ದೊಡ್ಡ ಕರುಳಿಗೆ ತೂತಾಗಿ (Perforation), ಮಲವು ಹೊಟ್ಟೆಯೊಳಗೆ ಸೇರಿಕೊಂಡು ಸ್ಥಿತಿ ಗಂಭೀರವಾಗಿತ್ತು. ಆ ಬಳಿಕವಷ್ಟೇ ಆಸ್ಪತ್ರೆಯವರೇ ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ರವಾನಿಸಿದ್ದರು. ಆದರೆ ಅಷ್ಟರಲ್ಲಾಗಲೇ ದೇಹದಾದ್ಯಂತ ಸೋಂಕು (Infection) ಉಲ್ಬಣಗೊಂಡಿದ್ದರಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.

ಬಿ.ಎನ್.ಎಸ್.ಎಸ್ ಅಡಿ ಪ್ರಕರಣ ದಾಖಲು:

ನಾಸಿರುದ್ದೀನ್ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ (UDR) ಸಂಖ್ಯೆ: 28/2026, ಕಲಂ: 194(3) (iv)‌ ಬಿ.ಎನ್.ಎಸ್.ಎಸ್ (BNSS) 2023 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈದ್ಯಕೀಯ ತಂಡದ ರಚನೆಗೆ ಪೊಲೀಸ್ ಪತ್ರವ್ಯವಹಾರ:

ಪೊಲೀಸ್ ಇಲಾಖೆಯ ಪ್ರಮುಖ ಹೇಳಿಕೆ: “ಸದ್ರಿ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಪರಿಶೀಲಿಸಿ ಅಧಿಕೃತ ವರದಿ ನೀಡುವ ಸಲುವಾಗಿ, ತಜ್ಞ ವೈದ್ಯರ ತಂಡವನ್ನು (Medical Team) ರಚಿಸುವಂತೆ ಸಂಬಂಧಪಟ್ಟ ಆರೋಗ್ಯ ಇಲಾಖೆಯೊಂದಿಗೆ ಈಗಾಗಲೇ ಪತ್ರವ್ಯವಹಾರ ನಡೆಸಲಾಗಿದೆ. ವೈದ್ಯಕೀಯ ತಂಡದಿಂದ ವರದಿ ಬಂದ ಬಳಿಕ ಮುಂದಿನ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.” — ಬೆಳ್ತಂಗಡಿ ಪೊಲೀಸ್ ಇಲಾಖೆ

ಅನಾಥವಾಯಿತು ಬಡ ಕುಟುಂಬ:

ಮೃತ ಮಹಮ್ಮದ್ ಶರೀಫ್ ಅವರು ಗೇರುಕಟ್ಟೆ ಪರಪ್ಪು ನಿವಾಸಿಯಾಗಿದ್ದು, ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಅವರಿಗೆ 10 ವರ್ಷದೊಳಗಿನ ಮೂವರು ಚಿಕ್ಕ ಮಕ್ಕಳಿದ್ದು, ತಂದೆಯ ಹಠಾತ್ ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿದೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ:

ಈ ಘಟನೆಯ ನಂತರ ಸೂರ್ಯ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಕಾರ್ಯಕರ್ತರಾದ ರಿಯಾಝ್ ಹರೇಕಳ ಅವರು ಪ್ರತಿಕ್ರಿಯಿಸಿ, “ಬೀದಿ ಬದಿ ವ್ಯಾಪಾರಿ ಶರೀಫ್ ಅವರ ಸಾವಿನ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮೃತರ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ಇದು ಪೊಲೀಸ್ ಎಫ್.ಐ.ಆರ್ ಹಾಗೂ ಮೃತರ ಕುಟುಂಬಸ್ಥರು ನೀಡಿರುವ ಮಾಹಿತಿಯಾಗಿದೆ. ವೈದ್ಯಕೀಯ ತಂಡದ ತನಿಖಾ ವರದಿ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.





ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Published

on

ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

Belthangady

ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ

Published

on

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ತಿದ್ದುಪಡಿ ಆದೇಶದ ಪ್ರಕಾರ:

  1. ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
  2. ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ

ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.

Continue Reading

Belthangady

ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!

Published

on

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.

ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.

ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್‌ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!