Connect with us

manglore police

ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸ್ ಕಮೀಷನರ್ ಬೇಸರ; ಕಾನ್ಸ್‌ಟೇಬಲ್‌ಗಳ ವರ್ಗಾವಣೆ ವಿಳಂಬದ ಬಗ್ಗೆ ಅಂಕಿಅಂಶಗಳ ಸಮೇತ ಸ್ಪಷ್ಟನೆ

Published

on

ಮಂಗಳೂರು: ಇಂದು ವೆಬ್‌ ಮೀಡಿಯಾವೊಂದರಲ್ಲಿ ಪ್ರಕಟವಾದ ಕಾನ್ಸ್‌ಟೇಬಲ್‌ಗಳ ವರ್ಗಾವಣೆ ಕುರಿತಾದ ವರದಿಗೆ ಮಂಗಳೂರು ಪೊಲೀಸ್ ಕಮೀಷನರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವರದಿಯಲ್ಲಿನ ಕೆಲವು ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡದಂತೆ ಅವರು ಮನವಿ ಮಾಡಿದ್ದಾರೆ.

ವರ್ಗಾವಣೆ ವಿಳಂಬಕ್ಕೆ ತಾಂತ್ರಿಕ ಕಾರಣಗಳೇನು?

ಸರ್ಕಾರದ ನಿಯಮಾವಳಿಗಳ ಪ್ರಕಾರ, ಒಂದು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಪ್ರಮಾಣವು ನಿಗದಿತ ಮಿತಿಯನ್ನು ಮೀರಿದರೆ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕಮೀಷನರ್ ಅವರು ನೀಡಿರುವ ಅಂಕಿಅಂಶಗಳು ಹೀಗಿವೆ:

ಒಟ್ಟು ಅನುಮೋದಿತ ಹುದ್ದೆಗಳು (CPC): 801

ಪ್ರಸ್ತುತ ಇರುವ ಸಿಬ್ಬಂದಿ: 685

ಖಾಲಿ ಇರುವ ಹುದ್ದೆಗಳು: 116 (ಶೇ. 14.4)

ಒಂದು ವೇಳೆ ವರ್ಗಾವಣೆಗೊಂಡಿರುವ 63 ಕಾನ್ಸ್‌ಟೇಬಲ್‌ಗಳನ್ನು ಈಗಲೇ ಬಿಡುಗಡೆ ಮಾಡಿದರೆ, ಖಾಲಿ ಹುದ್ದೆಗಳ ಪ್ರಮಾಣವು ಶೇ. 22.1ಕ್ಕೆ ಏರುತ್ತದೆ. ನಿಯಮದ ಪ್ರಕಾರ ಖಾಲಿ ಹುದ್ದೆಗಳ ಪ್ರಮಾಣ ಶೇ. 15ನ್ನು ಮೀರುವಂತಿಲ್ಲ. ಇದೇ ಕಾರಣಕ್ಕೆ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವುದೇ ಹುದ್ದೆಗಳ ಕೊರತೆ ಇಲ್ಲದ ಕಾರಣ ವರ್ಗಾವಣೆಗೊಂಡ ಎಲ್ಲಾ APC (Armed Police Constables) ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ರಜೆ ನಿರಾಕರಣೆಯ ಆರೋಪಕ್ಕೆ ಉತ್ತರ

ಲೇಖನದಲ್ಲಿ ಉಲ್ಲೇಖಿಸಲಾದ “ರಜೆ ನಿರಾಕರಣೆ” ವಿಚಾರವನ್ನು ಕಮೀಷನರ್ ಕಟುವಾಗಿ ಅಲ್ಲಗಳೆದಿದ್ದಾರೆ. “ನನ್ನ ಸಂಪೂರ್ಣ ಸೇವಾ ಅವಧಿಯಲ್ಲಿ ಯಾವುದೇ ಒಬ್ಬ ಕಾನ್ಸ್‌ಟೇಬಲ್‌ನ ಇ.ಎಲ್ (Earned Leave) ಅರ್ಜಿಯನ್ನು ನಾನು ತಿರಸ್ಕರಿಸಿಲ್ಲ. ವರದಿಗಾರರು ಜವಾಬ್ದಾರಿಯುತವಾಗಿ ಸತ್ಯವನ್ನು ಬರೆಯಬೇಕು” ಎಂದು ಅವರು ತಿಳಿಸಿದ್ದಾರೆ.

ಸಿಬ್ಬಂದಿ ಕ್ಷೇಮ ಮತ್ತು ನಗರದ ಭದ್ರತೆ

ಮಂಗಳೂರಿನಂತಹ ವಿದ್ಯಾವಂತ ಮತ್ತು ಜನನಿಬಿಡ ನಗರದಲ್ಲಿ ಪೊಲೀಸರ ಮೇಲೆ ನಿರೀಕ್ಷೆಗಳು ಹೆಚ್ಚು. ಟ್ರಾಫಿಕ್ ನಿರ್ವಹಣೆ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟಲು ಸಾಕಷ್ಟು ಸಿಬ್ಬಂದಿಯ ಅಗತ್ಯವಿದೆ.

ಕಾನ್ಸ್‌ಟೇಬಲ್‌ಗಳ ನೋವು ನಮಗೆ ಇತರರಿಗಿಂತ ಚೆನ್ನಾಗಿ ಅರ್ಥವಾಗುತ್ತದೆ. ಅವರು ತಮ್ಮ ವರ್ಗಾವಣೆಗಾಗಿ ಬಡ್ತಿಯನ್ನೇ ತ್ಯಜಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಲ್ಯಾಣ ಮತ್ತು ನಗರದ ಭದ್ರತೆ ಎರಡನ್ನೂ ಸಮತೋಲನ ಮಾಡುವುದು ನಮ್ಮ ಜವಾಬ್ದಾರಿ,” ಎಂದು ಕಮೀಷನರ್ ಹೇಳಿದ್ದಾರೆ.

ಏಕಪಕ್ಷೀಯ ವರದಿಗಳ ವಿರುದ್ಧ ಅಸಮಾಧಾನ

ಪೊಲೀಸ್ ಸಿಬ್ಬಂದಿಯ ಮೇಲೆ ನಡೆಯುವ ದಾಳಿಗಳ ಬಗ್ಗೆ ಮೌನ ವಹಿಸಿ, ಇಂತಹ ಆಡಳಿತಾತ್ಮಕ ವಿಷಯಗಳನ್ನು ತಪ್ಪಾಗಿ ಬಿಂಬಿಸುವ ಮನಸ್ಥಿತಿಯ ಬಗ್ಗೆ ಕಮೀಷನರ್ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಟ್ರಾಫಿಕ್ ಪೊಲೀಸರ ಮೇಲೆ ನಡೆದ ದಾಳಿ ಅಥವಾ ರೌಡಿ ಶೀಟರ್‌ಗಳಿಂದ ಎಎಸ್‌ಐ ಮೇಲೆ ನಡೆದ ಹಲ್ಲೆಯಂತಹ ಪ್ರಕರಣಗಳ ಸಂದರ್ಭದಲ್ಲಿಯೂ ಮಾಧ್ಯಮಗಳು ಇದೇ ರೀತಿಯ ಆಸಕ್ತಿ ತೋರಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

manglore police

ಸಾವಿನ ದವಡೆಯಿಂದ ವ್ಯಕ್ತಿಯನ್ನು ಕಾಪಾಡಿದ ಪಣಂಬೂರು ಪೊಲೀಸರ ಸಮಯಪ್ರಜ್ಞೆ

Published

on

ಮಂಗಳೂರು : ಆತ್ಮಹತ್ಯೆ ಮಾಡಿಕೊಳ್ಳಲು ಫಲ್ಗುಣಿ ನದಿಗೆ ಹಾರಲು ಮುಂದಾಗಿದ್ದ ಹಾಸನ ಮೂಲದ ಕೃಷಿಕನೋರ್ವನನ್ನು ಪಣಂಬೂರು ಪೊಲೀಸರು ತಮ್ಮ ತ್ವರಿತ ಕ್ರಮ ಮತ್ತು ಮಾನವೀಯತೆಯಿಂದ ಸಾವಿನ ದವಡೆಯಿಂದ ಕಾಪಾಡಿದ್ದಾರೆ.

ಘಟನೆಯ ವಿವರ:
ದಿನಾಂಕ 22-05-2026 ಸಂಜೆ ಸುಮಾರು 7:00 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣ ಬೆಳಗೊಳ ಸಮೀಪದ ಹಳ್ಳಿಯ ನಿವಾಸಿ ಕೃಷಿಕ. ಆರೋಗ್ಯ ಸಮಸ್ಯೆ ಮತ್ತು ಸಣ್ಣ ಮಟ್ಟಿನ ಹಣಕಾಸು ಸಮಸ್ಯೆಯಿಂದ ಮನನೊಂದಿದ್ದ ಈ ವ್ಯಕ್ತಿ ಬೆಳಿಗ್ಗೆ ಮನೆಯವರಿಗೆ ಹೇಳದೆ ಮನೆ ಬಿಟ್ಟು ಬಂದಿದ್ದರು. ಮೊಬೈಲ್ ಮಾತ್ರ ಆನ್‌ನಲ್ಲಿಟ್ಟಿದ್ದ ಅವರು, ಮನೆಯವರು ಮತ್ತು ಸಂಬಂಧಿಕರು ಸಂಪರ್ಕಿಸಿದರೂ “ತಾನು ಸಾಯುತ್ತೇನೆ” ಎಂದು ಮಾತ್ರ ಹೇಳಿ ತನ್ನ ಇರುವಿಕೆ ತಿಳಿಸಿರಲಿಲ್ಲ.

ಪೊಲೀಸರ ರಕ್ಷಣಾ ಕಾರ್ಯಾಚರಣೆ:
ಸಂಜೆ 5:30ಕ್ಕೆ ವ್ಯಕ್ತಿ ಪಣಂಬೂರು ಬೀಚ್ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು, ನಿವೃತ್ತ ಪೊಲೀಸ್ ಅಧಿಕಾರಿಯ ಮೂಲಕ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿದರು.

ಕೂಡಲೇ ಇನ್ಸ್‌ಪೆಕ್ಟರ್ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದ ಸಹಾಯದೊಂದಿಗೆ ಶೋಧ ಕಾರ್ಯ ಆರಂಭಿಸಿದರು. ಮೊದಲು ಫೋನ್ ಮೂಲಕ ಕೌನ್ಸೆಲಿಂಗ್ ಮಾಡಿದರೂ ವ್ಯಕ್ತಿ ಸ್ಪಂದಿಸಲಿಲ್ಲ. ನಿರಂತರ ಒಂದೂವರೆ ಗಂಟೆ ಹುಡುಕಾಟದ ಬಳಿಕ ಸಂಜೆ 7 ಗಂಟೆಗೆ ಕೂಳೂರು ಸೇತುವೆ ಬಳಿ ನದಿಗೆ ಹಾರಲು ಸಿದ್ಧನಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಯಿತು.

ಪತ್ತೆಯಾದ ಸ್ಥಳ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ, ಒಂದು ಅಮೂಲ್ಯ ಜೀವ ಉಳಿಸುವ ಸದುದ್ದೇಶದಿಂದ ಪಣಂಬೂರು ಪೊಲೀಸರು ಸರಹದ್ದಿನ ಬಗ್ಗೆ ಚಿಂತಿಸದೆ ವ್ಯಕ್ತಿಯನ್ನು ತಮ್ಮ ಠಾಣೆಗೆ ಕರೆತಂದು ನೀರು, ಆಹಾರ ನೀಡಿ ಕೌನ್ಸೆಲಿಂಗ್ ನಡೆಸಿದರು. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬ ಬುದ್ಧಿಮಾತು ಹೇಳಿ ಆತ್ಮವಿಶ್ವಾಸ ತುಂಬಿದರು. ಕೊನೆಗೆ ಊರಿನಿಂದ ಬಂದ ಸಂಬಂಧಿಕರ ಜೊತೆ ಅವರನ್ನು ಮನೆಗೆ ಕಳುಹಿಸಲಾಯಿತು.

ಸಂಬಂಧಿಕರ ಕೃತಜ್ಞತೆ, ಮೇಲಾಧಿಕಾರಿಗಳ ಶ್ಲಾಘನೆ
ತಮ್ಮವರ ಪ್ರಾಣ ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಮೇಲಾಧಿಕಾರಿಗಳೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ತಣ್ಣೀರು ಬಾವಿ ಬೀಚ್‌ನಲ್ಲಿ ತನ್ನ 4 ವರ್ಷದ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ವಿಡಿಯೋ ಹರಿಬಿಟ್ಟು, ನಂತರ ಮನೆಯಲ್ಲಿ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದ ತಂದೆ-ಮಗಳ ಪ್ರಾಣವನ್ನೂ ಪಣಂಬೂರು ಪೊಲೀಸರು ರಕ್ಷಿಸಿದ್ದರು. ಆರು ತಿಂಗಳಲ್ಲಿ ಇದು ಪೊಲೀಸರು ಉಳಿಸಿದ ಮೂರನೇ ಜೀವವಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು: ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣಬಸವ, ಅನ್ವರ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ಧರು.

Continue Reading

manglore police

ಬೆಳ್ತಂಗಡಿ, ಉಪ್ಪಿನಂಗಡಿ ಸರಣಿ ಕಳ್ಳತನ: ಶಂಕಿತ ಕೇರಳ ಮೂಲದ ಆರೋಪಿಯ ಪತ್ತೆಗೆ ಪೊಲೀಸರ ಜಾಲ – ಮಾಹಿತಿ ಇದ್ದರೆ ಕರೆ ಮಾಡಿ

Published

on

ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಸುತ್ತಮುತ್ತಲಿನ ಪರಿಸರದಲ್ಲಿ ನಡೆದಿರುವ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಕೃತ್ಯಗಳಲ್ಲಿ ಕೇರಳ ಮೂಲದ ಹಳೇ ಕಳ್ಳನೊಬ್ಬ ಭಾಗಿಯಾಗಿರುವ ಬಲವಾದ ಸಂಶಯ ವ್ಯಕ್ತವಾಗಿದ್ದು, ಆತನ ಪತ್ತೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಕಣ್ಣೂರು ಮೂಲದ ತಂಗಚ್ಚ ಶಂಕಿತ!

ಕೇರಳದ ಕಣ್ಣೂರು ತಳಿಪರಂಬು ನಿವಾಸಿಯಾಗಿರುವ ತಂಗಚ್ಚ @ ಮ್ಯಾಥ್ಯೂ @ ಬಶೀರ್ ಎಂಬಾತನೇ ಪ್ರಮುಖ ಶಂಕಿತ ಆಸಾಮಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಜಾಮೀನುರಹಿತ ದಸ್ತಗಿರಿ ವಾರೆಂಟ್‌ (NBW) ಜಾರಿಯಾಗಲು ಬಾಕಿಯಿರುತ್ತದೆ. ಪ್ರಸ್ತುತ ಈತ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪರಿಸರದ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಹಿತಿ ನೀಡಲು ಕೋರಿಕೆ:

ಸದ್ರಿ ಶಂಕಿತ ಆಸಾಮಿಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಕೆಳಗಿನ ಪೊಲೀಸ್ ಅಧಿಕಾರಿಗಳು ಹಾಗೂ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ದ.ಕ ಜಿಲ್ಲಾ ಎಸ್‌ಪಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು.

ಸಂಪರ್ಕಿಸಬೇಕಾದ ಸಂಖ್ಯೆಗಳು:

  • ಉಪ್ಪಿನಂಗಡಿ ಪೊಲೀಸ್ ಠಾಣೆ: 08251-251055, 9480805362
  • ಬೆಳ್ತಂಗಡಿ ಪೊಲೀಸ್‌ ಠಾಣೆ: 08256-232093, 9480805370
  • ಪುತ್ತೂರು ಪೊಲೀಸ್ ಠಾಣಾ ಉಪನಿರೀಕ್ಷಕರು: 08251-230555, 9480805361
  • ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ: 9480805300 / 0824-2220500

ವಿಶೇಷ ಸೂಚನೆ: ನಿಮ್ಮ ಸುತ್ತಮುತ್ತ ಯಾವುದೇ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಅಲರ್ಟ್ ಆಗಿರಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿ. ಈ ಸುದ್ದಿಯನ್ನು ಗರಿಷ್ಠ ಮಟ್ಟದಲ್ಲಿ ಶೇರ್ ಮಾಡುವ ಮೂಲಕ ಕಳ್ಳನನ್ನು ಹಿಡಿಯಲು ಸಹಕರಿಸಿ

Continue Reading

crime

ಮಂಗಳೂರು: ಜಪ್ಪಿನಮೊಗರು ಬಳಿ ಅಕ್ರಮ ಕೋಣ ಸಾಗಾಟ ಪತ್ತೆ; 27 ಕೋಣಗಳ ರಕ್ಷಣೆ; ನಾಲ್ವರ ಬಂಧನ

Published

on

ಮಂಗಳೂರು: ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಲಾರಿಯೊಂದರಲ್ಲಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಸಾಗಿಸಲಾಗುತ್ತಿದ್ದ 27 ಕೋಣಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಅಕ್ರಮ ಸಾಗಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆಯ ವಿವರ: ದಿನಾಂಕ 16-05-2026ರಂದು ಮುಂಜಾವಿನ ಜಾವ 6:00 ಗಂಟೆಯ ಸುಮಾರಿಗೆ, ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಈಚರ್ ಲಾರಿಯಲ್ಲಿ ಕೋಣಗಳನ್ನು ಸಾಗಿಸಲಾಗುತ್ತಿತ್ತು. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗೆರಿನ ಇಂಡಿಯಾನ ಹಾಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಮತ್ತು ಮುಂಜಾನೆ ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ. ವಾಹನದಲ್ಲಿದ್ದ 27 ಕೋಣಗಳನ್ನು ರಕ್ಷಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಈಚರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ದಸ್ತಗಿರಿಯಾದ ಆರೋಪಿಗಳ ವಿವರ:

ಸಯ್ಯದ್ ಮೆಹಬೂಬ್ ಅಲಿ (28 ವರ್ಷ), ತಂದೆ: ರಾಜೇಸಾಬ, ವಾಸ: ಡೋರ್ ನಂ. 81, ಆಶ್ರಯ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ.

ಅರುಣ ಚಂದ್ರಪ್ಪ ಜಾವಳಿ (32 ವರ್ಷ), ತಂದೆ: ಚಂದ್ರಪ್ಪ, ವಾಸ: ನಿಟ್ಟೂರು ಅಡವಿ, ಮಾಡ್ಲುರು ಅಂಚೆ, ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ.

ಹಿರಿಯಣ್ಣ ಗೌಡ (46 ವರ್ಷ), ತಂದೆ: ರಂಗಸ್ವಾಮಿ, ವಾಸ: ಮಾದೇವರಳ್ಳಿ ಗ್ರಾಮ, ಅರಸಿಕೇರೆ ತಾಲೂಕು, ಹಾಸನ ಜಿಲ್ಲೆ.

ಸುನೀಲ್ ಲಕ್ಷ್ಮಪ್ಪ ಜಾವಳ್ಳಿ (24 ವರ್ಷ), ತಂದೆ: ಲಕ್ಷ್ಮಪ್ಪ, ವಾಸ: ನಿಟ್ಟೂರು ಅಡವಿ, ನಿಟ್ಟೂರು ಗ್ರಾಮ, ಮಡ್ಲೂರು ಅಂಚೆ, ಹಿರೆಕೇರೂರು ತಾಲೂಕು, ಹಾವೇರಿ ಜಿಲ್ಲೆ.

ಕಾನೂನು ಕ್ರಮ: ಈ ಅಕ್ರಮ ಸಾಗಾಟದ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ (ಅ.ಕ್ರ) 59/2026 ರಂತೆ, ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ 11(A), 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರ ಕಲಂ 6 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಕ್ಷಿಸಲಾದ ಕೋಣಗಳನ್ನು ನ್ಯಾಯಾಲಯದ ಆದೇಶದಂತೆ ಸುರಕ್ಷಿತವಾಗಿ ಗೋಶಾಲೆಯ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Continue Reading

Trending

Copyright © 2025 Deevatige

error: Content is protected !!