Connect with us

Dakshina Kannada

ಸರಕಾರಿ ಆರೋಗ್ಯ ವ್ಯವಸ್ಥೆ ಖಾಸಗೀಕರಣ: ಜನರ ಹಕ್ಕುಗಳ ಮೇಲಿನ ದಾಳಿ – ರಾಮಣ್ಣ ವಿಟ್ಲ ಆಕ್ರೋಶ

Published

on

ಮಂಗಳೂರು : ಸರಕಾರಿ ಆಸ್ಪತ್ರೆಗಳ ನ್ನು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಭಾರತ ಕಮ್ಯೂನಿಸ್ಟ್‌ ಪಕ್ಷ( ಮಾರ್ಕ್ಸ್ ವಾದಿ ಲೆನಿನ್ ವಾದಿ) ಲಿಬರೇಶನ್ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸರ್ಕಾರದ ನಿರ್ಧಾರ ಜನರ ಹಕ್ಕುಗಳ ಮೇಲೆ ದಾಳಿ ಯಾಗಿದೆ ಎಂದು ಆರೋಪಿಸಿದರು


ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸಬೇಕಾದ ಸರ್ಕಾರವೇ ಇಂದು ಖಾಸಗಿ ಆಸ್ಪತ್ರೆಗಳ ಲಾಭದಾಸೆಗೆ ತಲೆಬಾಗುತ್ತಿದ್ದು, ಸರಕಾರಿ ಆಸ್ಪತ್ರೆಗಳನ್ನೇ ಹಂತ ಹಂತವಾಗಿ ಖಾಸಗೀಕರಣದ ಹಾದಿಗೆ ಒಯ್ಯುತ್ತಿದೆ. ಇದು ಬಡಜನರ ಬದುಕಿನ ಮೇಲೆ ನಡೆಸುತ್ತಿರುವ ದಾಳಿ ಯಾಗಿದ್ದು ಈ ಒಪ್ಪಂದ ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.ಚಿಕಿತ್ಸೆ ಎಂಬ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆಗೆ ಈಗ ಸರ್ಕಾರವೇ ಕಾನೂನುಬದ್ಧ ಬಲ ನೀಡುತ್ತಿದೆ.
ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಸರ್ಕಾರದ ಮೊದಲ ಕರ್ತವ್ಯ. ಆದರೆ ಅದನ್ನು ಬಿಟ್ಟು ಖಾಸಗೀಕರಣದ ದಾರಿಗೆ ಹೋಗುವುದು ಎಂದರೆ, ಬಡವರನ್ನು ಆರೋಗ್ಯ ಸೇವೆಯಿಂದ ದೂರ ತಳ್ಳುವುದು ಅನ್ಯಾಯವಾಗಿದ್ದು ,
ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಬಹುಕಾಲದಿಂದ ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಅದನ್ನು ಕಡೆಗಣಿಸಿ ಇರುವ ವ್ಯವಸ್ಥೆಯನ್ನೇ ಕುಸಿತಗೊಳಿಸುತ್ತಿದೆ. ಇದು ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದು ಆರೋಪಿಸಿದರು.

ಸಿ.ಪಿ.ಐ.ಎಂ.ಎಲ್.ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಮೋಹನ್ ಕೊಡಗು ಮಾತನಾಡಿ
ಸರಕಾರಿ ಆಸ್ಪತ್ರೆಗಳು ಜನರ ಹಕ್ಕು ಅದು ಸಂವಿಧಾನಿಕ ಹಕ್ಕು. ಆದರೆ, ಆ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.

ಆಲ್ ಇ‌ಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ ( AILAJ) ಮುಖಂಡರಾದ ಅಡ್ವಕೇಟ್ ಮಹಮ್ಮದ್ ಲುಕ್ಮಾನ್ ಮಾತನಾಡಿ “ಸೌಲಭ್ಯಗಳ ಕೊರತೆ” ಎಂಬ ನೆಪದಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಎಂದರೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ ಯಾಗಿದೆ ಹಾಗೂ ಇದು ಸರಕಾರದ ಜನಪರ ನೀತಿಯಲ್ಲ ಬದಲಾಗಿ ಬಂಡವಾಳ ಶಾಹಿ ಗಳ ಪರ ನೀತಿಯಾಗಿದೆ ಎಂದು ಆರೋಪಿಸಿದರು


ಸಿ.ಪಿ.ಐ.ಎಂ.ಎಲ್.ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರಾದ ಅಡ್ವಕೇಟ್ ತುಳಸೀದಾಸ್.ಆರ್ ಮಾತನಾಡಿ ಸರಕಾರಿ ಆಸ್ಪತ್ರೆಗಳಿಗೆ ಸೂಕ್ತ ಸೌಲಭ್ಯಗಳನ್ನು ನೀಡಬೇಕಾದ ಸರಕಾರ ಖಾಸಗಿಯವರ ಲಾಬಿಗೆ ಮಣಿದಿದ್ದು ಇದನ್ನು ವಿರೋಧಿಸಬೇಕಾದ ವಿರೋಧ ಪಕ್ಷಗಳು‌ ಕೂಡಾ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ಕಾರ್ಮಿಕ ಮುಖಂಡರಾದ ಮಹಮ್ಮದ್ ‌ಅನ್ಸಾರ್ ಬಜಾಲ್ ಮಾತನಾಡಿ
ಬೆಳ್ತಂಗಡಿ, ಮೂಡಬಿದ್ರೆ, ಬಂಟ್ವಾಳ, ವಿಟ್ಲ ಪ್ರದೇಶಗಳಲ್ಲಿನ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಗಳಿಗೆ ವಹಿಸಿರುವುದರಿಂದ ಲಾಭವಾಗುವುದು ಜನರಿಗೆ ಅಲ್ಲ, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ,ಇಂದು ಖಾಸಗಿ ಆಸ್ಪತ್ರೆಗಳು ಹೇಗೆ ಜನರನ್ನು ಸುಲಿಗೆ ಮಾಡುತ್ತಿವೆ ಎಂಬುದಕ್ಕೆ ನಿದರ್ಶನ ವಾಗಿದೆ ಎಂದರು.


ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡರಾದ ‌ಸುಧಾ ರಾವ್ ಬೆಳ್ತಂಗಡಿ, ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಸಿ.ಪಿ.ಐ.ಎಂ.ಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ರಾದ ಮೋಹನ್ ಕೆ.ಇ ಪ್ರಾಸ್ತವಿಕ ವಾಗಿ ಮಾತನಾಡಿ ಸ್ವಾಗತಿಸಿ ಈ ಹೋರಾಟ ವನ್ನು ಜಿಲ್ಲಾದ್ಯಂತ ನಡೆಸಬೇಕಾಗಿ ಕರೆ ನೀಡಿದರು.
ಪ್ರತಿಭಟನೆ ಯಲ್ಲಿ ಮುಖಂಡರುಗಳಾದ ಸಂಜೀವ ಬೆಳ್ತಂಗಡಿ, ವಿದ್ಯಾರ್ಥಿ ಮುಖಂಡರಾದ ಪ್ರಜ್ವಲ್ , ರವಿ ಕೊಡಗು, ವಿಲ್ಲಿ ವಿಲ್ಸನ್, ಸರಸ್ವತಿ ಕಡೇಶಿವಾಲಯ, ಜಿಲಾನಿ ಮಂಗಳೂರು, ದೀಕ್ಷಾ ಬಜಾಲ್,ಸುಹೈಲ್, ಶೇಖರ ಪುತ್ತೂರು, ಸುಧಾ‌.ಜಿ.ರಾವ್ ಬೆಳ್ತಂಗಡಿ, ಕುಸುಮಾವತಿ ಬೆಳ್ತಂಗಡಿ
ಅಚ್ಯುತ ಕಟ್ಟೆ, ಬದ್ರುದ್ದೀನ್, ಅಝೀಂ, ಇಬ್ರಾಹಿಂ, ಹರೀಶ್ ಮುಂತಾದವರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

Published

on


​ಮಂಗಳೂರು: ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
​ಕಾರ್ಯಾಚರಣೆಯ ವಿವರ:
​ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಒಟ್ಟು ₹25,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
​ಈ ಪೈಕಿ ಈಗಾಗಲೇ ₹15,000 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಬಳಿಕ ಹೆಚ್ಚುವರಿಯಾಗಿ ಮತ್ತೊಮ್ಮೆ ₹5,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಬೇಸತ್ತ ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.
​ದೂರಿನ ಅನ್ವಯ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.


​ಹಿನ್ನೆಲೆ ಮತ್ತು ಹಳೆಯ ಆರೋಪಗಳು:
​ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರ ಮೇಲೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು:
​ಕಳ್ಳತನ ಪ್ರಕರಣದಲ್ಲಿ ಲಂಚ: ಉಳ್ಳಾಲದ ಮನೆಯೊಂದರಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಳ್ಳುವಾಗಲೂ ಲಂಚ ಪಡೆದ ಆರೋಪವಿತ್ತು.

​ ಪ್ರಕರಣ ಮುಚ್ಚಿಹಾಕಲು ದಂಧೆ:
ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಿಂದ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ರೂಪಾಯಿ ಪೀಕಿಸಿದ್ದಲ್ಲದೆ, ಮಗನ ಚಿನ್ನಾಭರಣ ಎಗರಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಅಂದಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಗ, ಇಲಾಖಾ ವಿಚಾರಣೆ ವೇಳೆ ದೂರುದಾರ ಮಹಿಳೆಗೆ ₹4.5 ಲಕ್ಷ ರೂಪಾಯಿ ನೀಡಿ ಕೇಸ್ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.


​ವರ್ಗಾವಣೆ ನಾಟಕ: ಉಳ್ಳಾಲದ ಮರಳು ದಂಧೆಕೋರರ ಸಾಲಿಗೆ ಸಿಲುಕಿ ವರ್ಗಾವಣೆಯಾಗಿದ್ದ ಇವರು, ಬಳಿಕ ಪಾಂಡೇಶ್ವರ ಮಹಿಳಾ ಠಾಣೆಗೆ ಸೇರಿ, ಪ್ರಸ್ತುತ ಬಜ್ಜೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮುಖ್ಯಮಂತ್ರಿ ಪದಕದ ವಿವಾದ.! ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇತರೆ ತಂಡಗಳು ಶ್ರಮವಹಿಸಿ ಆರೋಪಿಗಳನ್ನು ಬಂಧಿಸಿದ್ದರೂ, ಅದರ ನೆಪದಲ್ಲಿ ಅಂದಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Continue Reading

award

ಮುಂಬೈನಲ್ಲಿ ಸಾರ್ವಜನಿಕ ಸೇವೆ ಮತ್ತು ಫಿಟ್ನೆಸ್ ಸಾಧನೆಯ ಹೈರಾಕ್ಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಯಶಸ್ಸು

Published

on

ಮುಂಬೈ: ಆಡಳಿತದ ಬಿಡುವಿಲ್ಲದ ಜವಾಬ್ದಾರಿಗಳ ನಡುವೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ‘ಹೈರಾಕ್ಸ್’ (HYROX) ಫಿಟ್ನೆಸ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

ಮುಂಬೈನ ಎನ್‌ಇಎಸ್‌ಸಿಒ (NESCO) ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಈ ಕಠಿಣ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ಸಾವಿರಾರು ಫಿಟ್ನೆಸ್ ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಾಹಸಮಯ ರೇಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಂಗಳೂರಿನ ಖ್ಯಾತ ಫಿಟ್ನೆಸ್ ತರಬೇತುದಾರ ಹಾಗೂ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಕೂಡ ಸಾಥ್ ನೀಡಿ ಯಶಸ್ಸು ಸಾಧಿಸಿದ್ದಾರೆ.

ಏನಿದು ಹೈರಾಕ್ಸ್ (HYROX)?

ವಿಶ್ವದ ಅತಿದೊಡ್ಡ ಫಿಟ್ನೆಸ್ ರೇಸ್ ಎಂದು ಖ್ಯಾತಿ ಪಡೆದಿರುವ ಹೈರಾಕ್ಸ್, ಅತ್ಯಂತ ಕಠಿಣ ಹಾಗೂ ಸವಾಲಿನ ಸ್ಪರ್ಧೆಯಾಗಿದೆ. ಇದು ಒಟ್ಟು 8 ಕಿ.ಮೀ. ಓಟ ಮತ್ತು 8 ವಿವಿಧ ಫಂಕ್ಷನಲ್ ವರ್ಕೌಟ್ ಸ್ಟೇಷನ್‌ಗಳನ್ನು ಒಳಗೊಂಡಿರುತ್ತದೆ.

ಈ ಸವಾಲಿನಲ್ಲಿ ಸ್ಪರ್ಧಾಳುಗಳು ಸ್ಕೀ ಎರ್ಗ್ (SkiErg), ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪಿ ಬ್ರಾಡ್ ಜಂಪ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲುಂಜಸ್ ಮತ್ತು ವಾಲ್ ಬಾಲ್‌ನಂತಹ ಕಠಿಣ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಂಡಿರುವ ಈ ರೇಸ್, 2025ರ ಮೇ ತಿಂಗಳಲ್ಲಿ ಮುಂಬೈ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿತ್ತು.

ಆಡಳಿತದ ಜೊತೆ ಫಿಟ್ನೆಸ್‌ಗೆ ಒತ್ತು

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ದರ್ಶನ್ ಎಚ್.ವಿ. ಅವರು 2025ರ ಜೂನ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ 134ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ದೈನಂದಿನ ಕಚೇರಿ ಕೆಲಸಗಳು, ಸಾರ್ವಜನಿಕ ಸಮಸ್ಯೆಗಳ ನಿವಾರಣೆ ಹಾಗೂ ಆಡಳಿತಾತ್ಮಕ ಬಿಡುವಿಲ್ಲದ ಒತ್ತಡದ ನಡುವೆಯೂ ಫಿಟ್ನೆಸ್ ಕಾಯ್ದುಕೊಂಡಿರುವ ಇವರ ಹೈರಾಕ್ಸ್ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಇವರೊಂದಿಗೆ ಹೆಜ್ಜೆಹಾಕಿದ ಪ್ರದೀಪ್ ಕುಮಾರ್ ಆಚಾರ್ಯ ಅವರು ಮಂಗಳೂರಿನ ಹೆಸರಾಂತ ಪವರ್‌ಲಿಫ್ಟರ್ ಆಗಿದ್ದು, ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಪ್ರಸ್ತುತ ಮಂಗಳೂರಿನಲ್ಲಿ ನೂರಾರು ಯುವಕರಿಗೆ ಫಿಟ್ನೆಸ್ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಜಿಲ್ಲಾ ಆಡಳಿತದ ಚುಕ್ಕಾಣಿ ಹಿಡಿದು ಆರೋಗ್ಯಕರ ಬದುಕಿಗೆ ಮುಂಚೂಣಿಯಲ್ಲಿ ನಿಂತಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಈ ಸಾಧನೆ, ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆಗೆ ಫಿಟ್ನೆಸ್ ಮತ್ತು ಶಿಸ್ತಿನ ಬಗ್ಗೆ ದೊಡ್ಡ ಮಟ್ಟದ ಪ್ರೇರಣೆ ನೀಡಿದೆ

Continue Reading

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

Trending

Copyright © 2025 Deevatige