Connect with us

Bantawala

ಹೆದ್ದಾರಿ ಪ್ರಾಧಿಕಾರದ ವಿರುದ್ಧ ಜನಾಕ್ರೋಶ: ಏಪ್ರಿಲ್ 28 ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ‘ಜನಾಂದೋಲನ ನಡಿಗೆ’

Published

on

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವ ಟೋಲ್ ವಸೂಲಿ ಹಾಗೂ ಹೊಸ ಟೋಲ್ ಗೇಟ್‌ಗಳ ಸ್ಥಾಪನೆಯನ್ನು ವಿರೋಧಿಸಿ, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ. ಈ ‘ಜನಾಂದೋಲನ ನಡಿಗೆ’ಯು ಏಪ್ರಿಲ್ 28, 2026 ರ ಮಂಗಳವಾರ ಸಂಜೆ 4:00 ಗಂಟೆಗೆ ಬಿ.ಸಿ. ರೋಡ್ ನಾರಾಯಣ ಗುರು ವೃತ್ತದಿಂದ ಆರಂಭವಾಗಿ ಬ್ರಹ್ಮರಕೂಟ್ಲು ಟೋಲ್ ಗೇಟ್ ವರೆಗೆ ಸಾಗಲಿದೆ.

ಅಂತರದ ನಿಯಮ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಹಲವು ಕಾನೂನುಗಳನ್ನು ಉಲ್ಲಂಘಿಸಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಕಾರ್ಯಾಚರಿಸುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಟೋಲ್ ಸಂಗ್ರಹ ಆರಂಭವಾಗಿ ಬರೋಬ್ಬರಿ 23 ವರ್ಷಗಳು ಕಳೆದಿದ್ದರೂ, ವಸೂಲಿಯನ್ನು ನಿಲ್ಲಿಸದೆ ಮುಂದುವರಿಸಲು ಹಠ ಹಿಡಿಯಲಾಗುತ್ತಿದೆ. ಅಲ್ಲದೆ, ಆರಂಭದ ವರ್ಷಗಳಲ್ಲಿ ಸ್ಥಳೀಯ ವಾಹನಗಳಿಗೆ ನೀಡಲಾಗುತ್ತಿದ್ದ ಉಚಿತ ಓಡಾಟದ ಅವಕಾಶವನ್ನು ಫಾಸ್ಟ್ ಟ್ಯಾಗ್ ಜಾರಿಯಾದ ನಂತರ ರದ್ದುಗೊಳಿಸಲಾಗಿದೆ. ಇದನ್ನು ಪ್ರಶ್ನಿಸುವ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಇಷ್ಟೇ ಅಲ್ಲದೆ, ವಳಾಲು, ಪಣಕಜೆ ಮತ್ತು ಗಂಜಿಮಠಗಳಲ್ಲಿ ಹೊಸ ಟೋಲ್ ಬೂತ್‌ಗಳನ್ನು ತೆರೆಯಲು ಸಿದ್ಧತೆಗಳು ನಡೆಯುತ್ತಿವೆ. ಇವು ಕಾರ್ಯಾರಂಭ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್ ಗೇಟ್‌ಗಳ ಸಂಖ್ಯೆ 6ಕ್ಕೆ ಏರಲಿದ್ದು, ಪ್ರತಿ 30 ಕಿ.ಮೀ ಅಂತರದಲ್ಲಿ ವಾಹನ ಸವಾರರು ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಎರಡು ಟೋಲ್ ನಡುವೆ 60 ಕಿ.ಮೀ ಅಂತರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವಾಗ, ನಮ್ಮ ಜಿಲ್ಲೆಯಲ್ಲಿ ಮಾತ್ರ ಈ ರೀತಿ ನಿಯಮ ಮೀರಿ ಸುಲಿಗೆ ಮಾಡುತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತಕ್ಷಣ ತೆರವಾಗಬೇಕು ಮತ್ತು ಹೊಸ ಟೋಲ್ ಸ್ಥಾಪನೆಯ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಈ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಈ ಹೋರಾಟಕ್ಕೆ ಕೈಜೋಡಿಸಿವೆ. ನ್ಯಾಯಯುತವಾದ ಈ ಬೇಡಿಕೆಯನ್ನು ಈಡೇರಿಸಲು ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೋರಾಟ ಸಮಿತಿ ವಿನಂತಿಸಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಬಂಟ್ವಾಳ: ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷದ ನೂತನ ಕಟ್ಟಡ ಮಂಜೂರು

Published

on

ಬಂಟ್ವಾಳ: ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕೊಳ್ನಾಡು ಗ್ರಾಮದ ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಮಂಜೂರಾಗಿದೆ.

ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಮಾಜಿ ಅಧ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಬೇಡಿಕೆಗೆ ಸ್ಪಂದಿಸಿ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಗ್ರಾಮೀಣ ಭಾಗದ ಜನರಿಗೆ ಸಮೀಪದಲ್ಲೇ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅನುಮೋದನೆಯೊಂದಿಗೆ ಕಟ್ಟಡವನ್ನು ಅಧಿಕೃತ ಪಟ್ಟಿಗೆ ಸೇರಿಸಲಾಗಿದೆ. ನೂತನ ಕಟ್ಟಡದಿಂದ ತಾಯಿ-ಮಗು ಆರೈಕೆ, ಲಸಿಕಾ ಕಾರ್ಯಕ್ರಮಗಳು, ಮೂಲಭೂತ ತಪಾಸಣೆ ಮತ್ತು ತುರ್ತು ಸೇವೆಗಳ ವಿಸ್ತರಣೆಗೆ ಅನುಕೂಲವಾಗಲಿದೆ. ಸ್ಥಳೀಯರಿಗೆ ಸುಲಭ ಪ್ರವೇಶ, ಸಮಯೋಚಿತ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಸುಧಾರಿಸುವ ಇರಾದೆ ಹೊಂದಲಾಗಿದೆ.

ಉಪಕೇಂದ್ರಕ್ಕಾಗಿ ಸ್ಥಳ ಗುರುತಿಸುವ ಹಂತದಲ್ಲೇ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ವಹಿಸಿದ ಮುಂದಾಳತ್ವ, ಸಮನ್ವಯ ಮತ್ತು ಜನಪರ ದೃಷ್ಟಿಕೋನವನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. ಅವರ ದೂರದೃಷ್ಟಿ ಹಾಗೂ ನಿರಂತರ ಮೂಲಭೂತ ಸೌಕರ್ಯಗಳ ಹೋರಾಟದ ಫಲವಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದರೊಂದಿಗೆ ಕೊಳ್ನಾಡು ಗ್ರಾಮ ಪಂಚಾಯತ್ ಬಳಿ ಹಾಗೂ ಸುರಿಬೈಲ್ ಉಪಕೇಂದ್ರ ಕಟ್ಟಡಕ್ಕೂ ತಲಾ ₹65 ಲಕ್ಷ ರೂ.ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದಿಸಿದ್ದು, ಗ್ರಾಮೀಣ ಭಾಗದ ಆರೋಗ್ಯ ಸೇವೆ ಬಲವರ್ಧನೆಗೆ ಸಹಕಾರಿಯಾಗಲಿದೆ.

Continue Reading

accident

ಅಜ್ಜ ಪುತ್ತಾಕನ ಕಣ್ಮುಂದೆಯೇ ವಿದ್ಯುತ್ ತಂತಿ ತಗುಲಿ ಮೊಮ್ಮಗ ದಾರುಣ ಸಾವು; ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತೇ ಎಳೆಯ ಜೀವ?

Published

on

ಬಂಟ್ವಾಳ: ತೆಂಗಿನಕಾಯಿ ಕೀಳಲೆಂದು ದೋಂಟಿ ಹಿಡಿದು ತೋಟಕ್ಕಿಳಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾದ ಘೋರ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್‌ನ ಬಾಡಿಗೆ ಮನೆಯಲ್ಲಿ ವಾಸವಿರುವ ಮಹಮ್ಮದ್ ಶರೀಫ್ ಅವರ ಪುತ್ರ, ಪುತ್ತೂರು ಮೌಂಟೇನ್ ವ್ಯೂ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಹೀರ್ (15) ಮೃತಪಟ್ಟ ದುರ್ದೈವಿ. ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ ಬಾಲಕ ಇಂದು ಬೆಳಿಗ್ಗೆ ತನ್ನ ಅಜ್ಜ ಪುತ್ತಾಕ (ಮಾಯಬ್ಬ) ಅವರ ಮನೆಗೆ ಬಂದಿದ್ದ ಸಂದರ್ಭ ಈ ದುರಂತ ನಡೆದಿದೆ.

ಘಟನೆಯ ವಿವರ:

ಅಜ್ಜ ಪುತ್ತಾಕ ಅವರು ತನ್ನ ಮನೆಯ ಮುಂಭಾಗದಲ್ಲಿರುವ ‌ ಬಂಟ್ವಾಳದ ಅಬ್ಬಾಸ್ ಎಂಬವರ ಜಮೀನಿನಲ್ಲಿ ತೆಂಗಿನಕಾಯಿ ಕೀಳಲು ಕೂಲಿಯಾಳನ್ನು ಕರೆತರುವಂತೆ ಮೊಮ್ಮಗ ಶಹೀರ್‌ಗೆ ತಿಳಿಸಿದ್ದರು. ಅಜ್ಜನ ಮಾತಿನಂತೆ ಕೂಲಿಯಾಳನ್ನು ಕರೆತಂದ ಶಹೀರ್, ಉತ್ಸಾಹದಿಂದ ತಾನೂ ಕಾಯಿ ಕೀಳಲು ನೆರವಾಗಲೆಂದು ನೆರೆಮನೆಯಿಂದ ವಿದ್ಯುತ್ ಪ್ರವಾಹಕ ದೋಂಟಿಯನ್ನು (Iron/Conducting Rod) ಹಿಡಿದುಕೊಂಡು ಜಮೀನಿಗೆ ಹೋಗಿದ್ದಾನೆ. ಕೂಲಿಯಾಳು ಮರ ಹತ್ತುತ್ತಿರುವಾಗಲೇ, ಶಹೀರ್ ಸಣ್ಣ ಮರವೊಂದರಿಂದ ಕಾಯಿ ಕೀಳಲು ದೋಂಟಿ ಎತ್ತಿದ್ದಾನೆ. ಈ ವೇಳೆ ಮರದ ತೀರಾ ಸಮೀಪದಲ್ಲೇ ಹಾದುಹೋಗಿದ್ದ ಹೈಟೆನ್ಷನ್ (HT) ವಿದ್ಯುತ್ ಲೈನ್‌ಗೆ ದೋಂಟಿ ಸ್ಪರ್ಶಿಸಿದೆ. ತಕ್ಷಣವೇ ತೀವ್ರಗತಿಯ ವಿದ್ಯುತ್ ಆಘಾತಕ್ಕೊಳಗಾದ ಬಾಲಕನ ದೇಹವು ದೋಂಟಿ ಹಿಡಿತದೊಂದಿಗೆ ಸ್ಥಳದಲ್ಲೇ ಸುಟ್ಟು ಕರಟಿಹೋಗಿದೆ.

ಸ್ಥಳೀಯ ಸಮಾಜ ಸೇವಕ ಇಕ್ಬಾಲ್ ಮತ್ತು ಇತರರು ಇತರರು ತಕ್ಷಣ ಧಾವಿಸಿ, ಮತ್ತಷ್ಟು ಕರಟುತ್ತಿದ್ದ ಮೃತದೇಹವನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಯ ಪ್ರಕ್ರಿಯೆಗಳನ್ನು ಮುಗಿಸಿ, ಗಡಿಯಾರಕ್ಕೆ ತಂದು ಸಾರ್ವಜನಿಕ ವೀಕ್ಷಣೆಯ ಬಳಿಕ ಮೃತದೇಹವನ್ನು ದಫನ ಸಂಸ್ಕಾರಕ್ಕಾಗಿ ಅವರ ತಂದೆಯ ಜಮಾತ್‌ ಇರುವ ಮೂಲ ನಿವಾಸವಾದ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆಗೆ ಕೊಂಡೊಯ್ಯಲಾಗಿದೆ.

ಇಲಾಖೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:

ಈ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೆದ್ದಾರಿ ಕಾಮಗಾರಿಯ ವೇಳೆ ತೆಗೆದ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿತ್ತು. ಇದರಿಂದಾಗಿ ನೆಲದ ಮಟ್ಟ ಏರಿಕೆಯಾಗಿ, ಬಹಳ ಎತ್ತರದಲ್ಲಿದ್ದ ಅಪಾಯಕಾರಿ ಹೈಟೆನ್ಷನ್ ತಂತಿಗಳು (H T Line ) ಈಗ ತೀರಾ ಹತ್ತಿರಕ್ಕೆ ಬಂದಿವೆ. ಈ ಬಗ್ಗೆ ಅಪಾಯವನ್ನು ಅರಿತ ಸ್ಥಳೀಯರು ಅಪಾಯಕಾರಿ ಹೈಟೆನ್ಷನ್ ತಂತಿಗಳು ಹಾದುಹೋಗುವ ಕಂಬವನ್ನು ನಿಯಮಾನುಸಾರವಾಗಿ ಏರಿಸಬೇಕು ಅಂದರೆ ಎತ್ತರದ ಕಂಬವನ್ನು ಹಾಕಬೇಕು ಎಂದು ಅದೆಷ್ಟೋ ಬಾರಿ ಕೇಳಿ ಕೊಂಡಿದ್ದಾರೆ. ಹೆದ್ದಾರಿ ಏರಿಸಿರುವುದರಿಂದ ತಂತಿಗಳು ಕೆಳಗೆ ಬಂದಿವೆ, ಹೆದ್ದಾರಿ ಪ್ರಾಧಿಕಾರದವರು ಆ ಕೆಲಸವನ್ನು ಮಾಡಬೇಕು ಎಂದು ಕರೆಂಟ್ ಇಲಾಖೆಯವರು ಶಾಕ್‌ ನೀಡಿದರೆ ವಿದ್ಯುತ್‌ ಇಲಾಖೆಯ ಕಾರ್ಯ ನಿರ್ವಹಣೆ ನಮಗೆ ಬರುವುದಿಲ್ಲ ಎಂಬುವುದು ಹೆದ್ದಾರಿ ದೊಡ್ಡವರ ವಾದ . ಅಂತೂ ಇಂತೂ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಲಾಖೆಗಳ ಈ ‘ಕಣ್ಣುಮುಚ್ಚಾಲೆ’ ಆಟಕ್ಕೆ ಇಂದು ಅಮಾಯಕ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಪುತ್ತಾಕ ಕುಟುಂಬಕ್ಕೆ ಆಘಾತದ ಮೇಲೆ ಆಘಾತ:

ಗಡಿಯಾರ ಪುತ್ತಾಕ ಅವರು ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸುವ ಹೆಸರಾಂತ ಸಮಾಜ ಸೇವಕ. ಆದರೆ ವಿಧಿಯ ಆಟ ಮಾತ್ರ ಕ್ರೂರವಾಗಿದೆ. 13 ವರ್ಷಗಳ ಹಿಂದೆ ಪೇರಮೊಗರು ಎಂಬಲ್ಲಿ ನಡೆದ ಲಾರಿ ಅಪಘಾತದಲ್ಲಿ ಪುತ್ತಾಕ ಅವರು ತಮ್ಮ ಇಬ್ಬರು ಪುತ್ರರಾದ ಆಶಿಕ್ ಮತ್ತು ಶಫೀಕ್ ಅವರನ್ನು ಕಳೆದುಕೊಂಡಿದ್ದರು. ಅಂದು ಅಪಘಾತದ ಜಾಗದಿಂದ ಮಕ್ಕಳ ಶವವನ್ನು ಹೊರತೆಗೆದಿದ್ದ ಅಜ್ಜ, ಇಂದು ತನ್ನ ಕಣ್ಮುಂದೆಯೇ ತನ್ನ ಪ್ರೀತಿಯ ಮೊಮ್ಮಗ ವಿದ್ಯುತ್ ಆಘಾತಕ್ಕೆ ಬಲಿಯಾದುದನ್ನು ಕಂಡು ಕಂಗಾಲಾಗಿದ್ದಾರೆ. ಪತ್ನಿ ಕೂಡ ಕಳೆದ ಹಲವು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಈ ಕುಟುಂಬಕ್ಕೆ ದುಃಖದ ಮೇಲೆ ದುಃಖ ಮಳೆಗರೆದಂತಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Continue Reading

Bantawala

ವಿಟ್ಲ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆಗೆ ಭರ್ಜರಿ ಫಲಿತಾಂಶ; ಐವರು ವಿದ್ಯಾರ್ಥಿಗಳಿಂದ 600ಕ್ಕೂ ಅಧಿಕ ಅಂಕಗಳ ದಾಖಲೆ!

Published

on

ವಿಟ್ಲ: 2025-26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಟ್ಲದ ಪಿಎಂ ಶ್ರೀ ಸರಕಾರಿ ಪ್ರೌಢಶಾಲೆ (ಆರ್‌ಎಂಎಸ್ ಎ) ಅತ್ಯುತ್ತಮ ಸಾಧನೆ ಮಾಡಿದ್ದು, ಶೇ. 99.2 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 122 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸರಕಾರಿ ಶಾಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳು:

ಶಾಲೆಯ ಒಟ್ಟು ಐವರು ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ:

ಶ್ರೇಯಾ: 625ರಲ್ಲಿ 612 ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕಂಬಳಬೆಟ್ಟಿನ ಶ್ರೀಕೃಪಾ ಮತ್ತು ಮಹೇಶ್ ದಂಪತಿಯ ಪುತ್ರಿ.

ಸಾನ್ವಿ ರೈ: ಬಾಕ್ರಬೈಲ್ ಸದಾಶಿವಶೆಟ್ಟಿ ಹಾಗೂ ಪ್ರತಿಮಾ ದಂಪತಿಯ ಪುತ್ರಿಯಾದ ಇವರು 611 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಮಹ್ನಾ ಖತೀಜಾ ಖಾದರ್: ಒಕ್ಕೆತ್ತೂರಿನ ಅಬ್ದುಲ್ ಖಾದರ್ ಮತ್ತು ರಶೀದಾ ದಂಪತಿಗಳ ಪುತ್ರಿಯಾದ ಇವರು 609 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ತ್ರಿಶಾ: ಕಬ್ಬಿಣಹಿತ್ಲು ನಿವಾಸಿಗಳಾದ ಸುರೇಶ್ ಮತ್ತು ಶೋಭಾ ದಂಪತಿಯ ಪುತ್ರಿಯಾದ ಇವರು 607 ಅಂಕಗಳನ್ನು ಪಡೆದಿದ್ದಾರೆ.

ಮನಸ್ವಿ ಕೆ. ಆರ್: ಕೂಜಪಾಡಿಯ ರಾಧಾಕೃಷ್ಣ ಮತ್ತು ಮೋಹಿನಿ ದಂಪತಿಯ ಪುತ್ರಿಯಾದ ಇವರು 605 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೇಣಿವಾರು ಫಲಿತಾಂಶ:

ಶಾಲೆಯ ಒಟ್ಟು ಫಲಿತಾಂಶದಲ್ಲಿ ಗುಣಮಟ್ಟದ ಸಾಧನೆ ಎದ್ದು ಕಾಣುತ್ತಿದ್ದು, ಶ್ರೇಣಿವಾರು ವಿವರ ಹೀಗಿದೆ:

ಉನ್ನತ ಶ್ರೇಣಿ (Distinction): 33 ವಿದ್ಯಾರ್ಥಿಗಳು

ಪ್ರಥಮ ಶ್ರೇಣಿ: 54 ವಿದ್ಯಾರ್ಥಿಗಳು

ದ್ವಿತೀಯ ಶ್ರೇಣಿ: 18 ವಿದ್ಯಾರ್ಥಿಗಳು

ತೃತೀಯ ಶ್ರೇಣಿ: 16 ವಿದ್ಯಾರ್ಥಿಗಳು

ಸರಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಂಕ ಗಳಿಸಿರುವುದು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರ ಹರ್ಷಕ್ಕೆ ಕಾರಣವಾಗಿದೆ. ಸಾಧಕ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಅಭಿನಂದಿಸಲಾಗಿದೆ.

Continue Reading

Trending

Copyright © 2025 Deevatige

error: Content is protected !!