Connect with us

Article

2 ಕೋಟಿ ವೆಚ್ಚದಲ್ಲಿ ಹೊಸ ಅಣೆಕಟ್ಟು ಕಾಮಗಾರಿ ಪ್ರಾರಂಭ- ಅಶೋಕ್ ರೈ; ಒಳಮೊಗ್ರು ಗ್ರಾಮದ ಎರ್ಮೆಟ್ಟಿಯ ಕಿಂಡಿ ಅಣೆಕಟ್ಟು ವೀಕ್ಷಣೆ ಮಾಡಿದ ಶಾಸಕರು; ಈಗಾಗಲೇ ಕಿಂಡಿಅಣೆಕಟ್ಟಿಗೆ 2 ಕೋಟಿ ರೂ ಪ್ರಸ್ತಾವನೆ

Published

on

ಪುತ್ತೂರು : ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ ನೀರುಪಾಲಾಗಿ ಇತಿಹಾಸದ ಪುಟ ಸೇರುವ ಮುನ್ನ ಎಚ್ಚೆತ್ತುಕೊಂಡ ಜನಪ್ರಿಯ ಶಾಸಕರಾದ ಆಶೋಕ್ ಕುಮಾರ್ ರೈ ಯವರು ಈ ಭಾಗದ ಕೃಷಿಕರ ಜೀವನಾಡಿ ಮಿಡಿತವನ್ನು ಅರಿತುಕೊಂಡು ಕಿಂಡಿ ಅಣೆಕಟ್ಟು ವೀಕ್ಷಣೆ ಮಾಡಿ ಈಗಾಗಲೇ ಕೃಷಿಕರಿಗೆ ಶಾಶ್ವತವಾದ ನೀರಿನ ಆಶ್ರಯವನ್ನು ನಿರ್ಮಿಸಲು ಈ ಕಿಂಡಿಅಣೆಕಟ್ಟಿಗೆ ಎರಡು ಕೋಟಿ ರೂ ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ವರ್ಷ ಹೊಸ ಅಣೆಕಟ್ಟು ಕಾಮಗಾರಿ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು .

ಈ ಮೂಲಕ ಈ ಭಾಗದ ಕೃಷಿಕರ ಬಹು ಸಮಯಗಳ ಬೇಡಿಕೆಯೊಂದು ಕ್ಷೇತ್ರದ ಶಾಸಕರ ಮುತುವರ್ಜಿಯಲ್ಲಿ ಸಾಕಾರಗೊಂಡಿದ್ದು, ದೀವಟಿಗೆ ಡಿಜಿಟಲ್ ಮೀಡಿಯಾವೊಂದರಲ್ಲಿ ಡಿ.31ರಂದು ತಮ್ಮ ನೀರಿನ ಬವಣೆಗಳನ್ನು ಕೃಷಿಕರು ಹೇಳಿಕೊಂಡಿದ್ದು, ತಮ್ಮ ಸಂಕಷ್ಟಗಳಿಗೆ ತಕ್ಷಣವಾಗಿ ಸ್ಪಂದಿಸಿದ ಶಾಸಕರ ಕಾರ್ಯನಡೆಯನ್ನು ಕೃಷಿಕರು ಅಭಿನಂದಿಸಿದ್ದಾರೆ.

ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ
ಕಳೆದ ಆರು ವರ್ಷಗಳಿಂದ ಮರಳು ತುಂಬಿದ ಗೋಣಿಗಳ ಸಹಾಯದಿಂದ ಸ್ಥಳೀಯರೇ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವ ಮೂಲಕ ತಮ್ಮ ಕೃಷಿ ನೀರಿನ ಬವಣೆಯನ್ನು ನಿವಾರಿಸುತ್ತಿದ್ದರು.
ಅಣೆಕಟ್ಟು ನಿರ್ವಹಣೆ ಮಾಡಿಸುವಂತೆ ಇಪ್ಪತ್ತೈದಕ್ಕೂ ಹೆಚ್ಚು ಬಡ ಕೃಷಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಭರವಸೆ ನೀಡುತ್ತಿದ್ದ ಜನಪ್ರತಿನಿಧಿಗಳು ಚುನಾವಣೆ ಕಳೆದ ಬಳಿಕ ದುರಸ್ತಿ ಮಾಡಿಸುವುದು ಬಿಡಿ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಿಲ್ಲ ಎಂಬುದು ಬಡ ಕೃಷಿಕರ ನೋವಿನ ಮಾತಾಗಿತ್ತು.

ಜನಪ್ರತಿನಿಧಿಗಳ/ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮನನೊಂದ ಇಪ್ಪತೈದಕ್ಕೂ ಹೆಚ್ಚು ಅಣೆಕಟ್ಟು ನೀರಿನ ಫಲಾನುಭವಿಗಳು ಸ್ಥಳೀಯ ನಿವಾಸಿ ನೀರ್ಪಾಡಿ ಸತೀಶ್ ರೈ ನೇತೃತ್ವದಲ್ಲಿ ಅಣೆಕಟ್ಟು ನೀರಿನ ಫಲಾನುಭವಿ ಕೃಷಿಕರ ಸಹಕಾರದಲ್ಲಿ ಸುಮಾರು 4.5 ಲಕ್ಷ ವೆಚ್ಚದಲ್ಲಿ ಮರದ ಹಲಗೆ ಉಪಯೋಗಿಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡಿ ತಮ್ಮ ಕೃಷಿಗೆ ಬೇಕಾದ ಜೀವಜಲದ ಶೇಖರಣೆಯನ್ನು ಮಾಡುವಲ್ಲಿ ಯಶಸ್ವಿಯಾಗುವುದರ ಜೊತೆಗೆ ದೀವಟಿಗೆ ನ್ಯೂಸ್.ಕಾಮ್ ಡಿಜಿಟಲ್ ಮೀಡಿಯಾದ ಮೂಲಕ ತಮ್ಮ ನೀರಿನ ಸಂಕಷ್ಟದ ಗೋಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಶಾಶ್ವತವಾದ ಪರಿಹಾರಕ್ಕಾಗಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರು.

ಈ ಬಗ್ಗೆ ವಿವರವಾಗಿ ‘50ವರ್ಷಗಳ ಹಿಂದಿನ ಓಬಿರಾಯನ ಕಾಲದ ಕಿಂಡಿ ಅಣೆಕಟ್ಟು.. ಜನನಾಯಕರಿಂದ ನಿರ್ಲಕ್ಷ್ಯಕ್ಕೊಳಗಾದ ಕೃಷಿಕರ ಜೀವನಾಡಿ ಕಿಂಡಿ ಅಣೆಕಟ್ಟು.’ ಎಂಬ ಶೀರ್ಷಿಕೆಯಡಿಯಲ್ಲಿ ಡಿ.31ರಂದು ತಮ್ಮ ಡಿಜಿಟಲ್ ಮೀಡಿಯಾದಲ್ಲಿ ವರದಿ ಪ್ರಸಾರ ಮಾಡಿತ್ತು.

ನಿಷ್ಕ್ರಿಯ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಸಡ್ಡು ಹೊಡೆದ ಕೃಷಿಕರೇ ಇದೀಗ ಜೀವನಾಡಿಯಾದ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಪೊಳ್ಳು ಭರವಸೆ ನೀಡುವ ಪುಢಾರಿಗಳಿಗೆ, ಬಾಲಂಗೋಚಿಯಾಗಿರುವ ಅಧಿಕಾರಿಗಳಿಗೆ ನಾಚಿಕೆಯಿಲ್ಲವೇ? ಎಂದು ಜನಪ್ರತಿನಿಧಿಗಳ ಕಾರ್ಯದಕ್ಷತೆಯ ಬಗ್ಗೆ ಮೀಡಿಯಾ ಪ್ರಶ್ನಿಸಿದ್ದು, ತನ್ನ ಕ್ಷೇತ್ರದ ಜನರ ನೋವು ಅರ್ಥೈಸಿಕೊಂಡು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಾ ಜನಪ್ರಿಯರಾಗಿರುವ ಕ್ಷೇತ್ರದ ಶಾಸಕರು ತಕ್ಷಣವೇ ಕೃಷಿಕರ ಜೀವನಾಡಿಯಾಗಿರುವ ಎರ್ಮೆಟ್ಟಿ ಹೊಳೆಯ ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆಗಳ ಬಗ್ಗೆ ಸ್ಪಂದಿಸಬೇಕಾಗಿದೆ ಎಂದೂ ಕೃಷಿಕರ ಪರವಾಗಿ ವಿನಂತಿ ಮಾಡಿತ್ತು.


ಜನವರಿ18 ರಂದು ಒಳಮೊಗ್ರು ಗ್ರಾಮದ ಎರ್ಮೆಟ್ಟಿಯ ಕಿಂಡಿ ಅಣೆಕಟ್ಟು ವೀಕ್ಷಣೆ ಮಾಡಿದ ಶಾಸಕ ಅಶೋಕ್ ರೈಯವರು ಈ ಕಿಂಡಿಅಣೆಕಟ್ಟಿಗೆ ಎರಡು ಕೋಟಿ ರೂ ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ವರ್ಷ ಹೊಸ ಅಣೆಕಟ್ಟು ಕಾಮಗಾರಿ ಪ್ರಾರಂಭವಾಗಲಿದೆ ಎಂದು ಭರವಸೆ ನೀಡುವ ಮೂಲಕ ಈ ಭಾಗದ ಕೃಷಿಕರು ಉದ್ಯಮಿಗಳು ಆಗಿರುವ ಸತೀಶ್ ರೈ ನೀರ್ಪಾಡಿ ಮತ್ತು ನೊಂದ ಕೃಷಿಕರ ಬಹುಸಮಯಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದಿಸುವ ಜನಪ್ರತಿನಿಧಿಗಳು ಇಲ್ಲವೇ ಇಲ್ಲ ಎಂಬ ಬೇಸರದಲ್ಲಿದ ಜನರಿಗೆ ಶಾಸಕ ಆಶೋಕ್ ಕುಮಾರ್ ರೈ ಸಂಕಷ್ಟ ನಿವಾರಕನಾಗಿ ಬಂದಿದ್ದು, ನಾವೂ ಕೂಡಾ ಅವರೊಂದಿಗೆ ಸದಾ ಇದ್ದೇವೆ ಎಂದು ಮೀಡಿಯಾಗೆ ತಿಳಿಸಿದ್ದಾರೆ.

‘50ವರ್ಷಗಳ ಹಿಂದಿನ ಓಬಿರಾಯನ ಕಾಲದ ಕಿಂಡಿ ಅಣೆಕಟ್ಟು.. ಜನನಾಯಕರಿಂದ ನಿರ್ಲಕ್ಷ್ಯಕ್ಕೊಳಗಾದ ಕೃಷಿಕರ ಜೀವನಾಡಿ ಕಿಂಡಿ ಅಣೆಕಟ್ಟು.’ ಎಂಬ ಶೀರ್ಷಿಕೆಯಡಿಯಲ್ಲಿ ಡಿ.31ರಂದು ತಮ್ಮ ದೀವಟಿಗೆ ನ್ಯೂಸ್.ಕಾಮ್ ಡಿಜಿಟಲ್ ಮೀಡಿಯಾದಲ್ಲಿ ವರದಿ ಪ್ರಸಾರ

Continue Reading
Advertisement

Article

ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

Published

on

ಚೈತ್ರ ಮಾಸದ ಆಗಮನ, ಪ್ರಕೃತಿಯಲ್ಲಿ ಹೊಸ ಚಿಗುರು, ಕೋಗಿಲೆಯ ಗಾಯನ… ಇವೆಲ್ಲವೂ ಹೊತ್ತು ತರುವುದು ಸೌರಮಾನ ಯುಗಾದಿಯ ಸಂಭ್ರಮವನ್ನು. ಈ ಶುಭ ಸಂದರ್ಭದಲ್ಲಿ ‘ದೀವಟಿಗೆ ನ್ಯೂಸ್’ ತನ್ನೆಲ್ಲಾ ಪ್ರೀತಿಯ ಓದುಗರಿಗೆ ಹಾಗೂ ಜಾಹೀರಾತುದಾರರಿಗೆ ಕ್ರೋಧಿ ನಾಮ ಸಂವತ್ಸರದ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದ

ಬೆಳಕಿನ ಹಾದಿಯಲ್ಲಿ ‘ದೀವಟಿಗೆ’ಯ ಪಯಣ

ಹೆಸರೇ ಸೂಚಿಸುವಂತೆ, ಕತ್ತಲೆಯನ್ನು ದೂರಮಾಡಿ ಸತ್ಯದ ಬೆಳಕನ್ನು ಪಸರಿಸುವ ಉದ್ದೇಶದೊಂದಿಗೆ ಆರಂಭವಾದ ನಮ್ಮ ‘ದೀವಟಿಗೆ ನ್ಯೂಸ್’ ಇಂದು ಓದುಗರ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆದು ನಿಂತಿರುವುದು ನಮ್ಮ ಹೆಮ್ಮೆ. ವೇಗವಾಗಿ ಸುದ್ದಿ ನೀಡುವುದರ ಜೊತೆಗೆ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ನಿಮಗೆ ತಲುಪಿಸುತ್ತಿದ್ದೇವೆ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ನಾವು ಸದಾ ಮುಂದು. ಅಲ್ಪ ಅವಧಿಯಲ್ಲಿಯೇ ಸಾವಿರಾರು ಓದುಗರನ್ನು ತಲುಪಿರುವ ನಮ್ಮ ಈ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹವೇ ಅಡಿಪಾಯ.

“ಬೆಲ್ಲದ ಸಿಹಿ, ಬೇವಿನ ಕಹಿ ಎರಡನ್ನೂ ಸಮನಾಗಿ ಸ್ವೀಕರಿಸುವಂತೆ ಪ್ರೇರೇಪಿಸುವ ಯುಗಾದಿಯು, ನಿಮ್ಮ ಜೀವನದಲ್ಲಿ ಬರೀ ಸುಖ-ಸಂತೋಷವನ್ನೇ ತುಂಬಲಿ.”

ಜೀವನವೆಂದರೆ ಸುಖ-ದುಃಖಗಳ ಸಮ್ಮಿಶ್ರಣ. ಈ ಯುಗಾದಿಯು ನಿಮ್ಮ ಬದುಕಿನ ಕಷ್ಟಗಳನ್ನೆಲ್ಲಾ ದೂರ ಮಾಡಿ, ಯಶಸ್ಸಿನ ಸಿಹಿಯನ್ನು ಉಣಿಸಲಿ. ಕೃಷಿ, ವ್ಯಾಪಾರ, ಶಿಕ್ಷಣ ಹಾಗೂ ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿರುವ ನಮ್ಮ ಓದುಗರಿಗೆ ಈ ವರ್ಷ ಅದೃಷ್ಟದ ವರ್ಷವಾಗಲಿ ಎಂದು ಆಶಿಸುತ್ತೇವೆ.

ನಿಮ್ಮ ನೆಚ್ಚಿನ ದೀವಟಿಗೆ ನ್ಯೂಸ್, ಮುಂದಿನ ದಿನಗಳಲ್ಲಿ ಇನ್ನು ಹತ್ತು ಹಲವು ಹೊಸ ಬದಲಾವಣೆಗಳೊಂದಿಗೆ, ತಂತ್ರಜ್ಞಾನದ ಸುಧಾರಣೆಯೊಂದಿಗೆ ನಿಮ್ಮ ಮನೆಮನಗಳನ್ನು ತಲುಪಲು ಸಜ್ಜಾಗಿದೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರಿಯಲಿ ಮತ್ತೊಮ್ಮೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!

Continue Reading

Article

ಸಂಚಾರ ನಿಯಮ ಉಲ್ಲಂಘನೆ: ಸುಳ್ಯದ ಯುವಕನಿಗೆ 15 ದಿನಗಳ ‘ಸಮುದಾಯ ಸೇವೆ’ಯ ವಿನೂತನ ಶಿಕ್ಷೆ!

Published

on

ಸಂಚಾರ ನಿಯಮಗಳನ್ನು ಪದೇ ಪದೇ ಗಾಳಿಗೆ ತೂರುವವರಿಗೆ ಸುಳ್ಯದ ನ್ಯಾಯಾಲಯವು ಒಂದು ಕಠಿಣ ಹಾಗೂ ಸಮಾಜಮುಖಿ ಸಂದೇಶ ರವಾನಿಸಿದೆ. ಸಂಚಾರ ನಿಯಮ ಉಲ್ಲಂಘಿಸಿದ ಯುವಕನೊಬ್ಬನಿಗೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಸಾರ್ವಜನಿಕವಾಗಿ ನಿಂತು ‘ಸಮುದಾಯ ಸೇವೆ’ ಮಾಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಐತಿಹಾಸಿಕ ತೀರ್ಪು ನೀಡಿದೆ.

ಘಟನೆಯ ಸಾರಾಂಶ
ಸುಳ್ಯದ ನಿವಾಸಿಯಾದ ರಕ್ಷಿತ್ ಜಿ. ಎಂಬಾತ ಕಳೆದ ಮಾರ್ಚ್ 12ರಂದು ಪಟ್ಟಣದ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದನು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿಪಿ ಅವರು ಐ ಎಮ್‌ ವಿ ಆ್ಯಕ್ಟ್ ಅಡಿಯಲ್ಲಿ ಕಲಂ 119 R/w 177, 184, 194(C) ರಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ನ್ಯಾಯಾಲಯದ ‘ಜಾಗೃತಿ’ಯ ಪಾಠ!
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು, ಆರೋಪಿತನ ನಡವಳಿಕೆಯಲ್ಲಿ ಬದಲಾವಣೆ ತರಲು ಒಟ್ಟು 3,000 ರೂಪಾಯಿ ನಗದು ದಂಡ ವಿಧಿಸಿದೆ. ಚಾಲನಾ ಪರವಾನಿಗೆಯನ್ನು (Driving License) ಮೂರು ತಿಂಗಳ ಕಾಲ ರದ್ದುಗೊಳಿಸಿದೆ. ಮಾತ್ರವಲ್ಲದೆ ಮಾರ್ಚ್ 15 ರಿಂದ 29 ರವರೆಗೆ ಒಟ್ಟು 15 ದಿನಗಳ ಕಾಲ ಸುಳ್ಯ ಪಟ್ಟಣದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಜಾಗೃತಿಯ ಫಲಕ ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂಬ ಸಮುದಾಯ ಸೇವೆ (ವಿಶಿಷ್ಟ ಶಿಕ್ಷೆ)ಯನ್ನು ವಿಧಿಸಿದೆ.

ಇದೇ ಮೊದಲಲ್ಲ ! ರಾಜ್ಯದ ಇತರ ಜಿಲ್ಲೆಗಳಲ್ಲೂ ಇಂತಹ ಮಾದರಿ ಶಿಕ್ಷೆ!
ಸುಳ್ಯದಲ್ಲಿ ನಡೆದ ಈ ಘಟನೆಯು ಅಪರೂಪದ್ದಾಗಿದ್ದರೂ, ಕರ್ನಾಟಕದ ಇತರ ನ್ಯಾಯಾಲಯಗಳು ಈ ಹಿಂದೆ ಇಂತಹದ್ದೇ ‘ಸಮುದಾಯ ಸೇವೆ’ಯ ತೀರ್ಪುಗಳನ್ನು ನೀಡಿ ಸಾರ್ವಜನಿಕರ ಗಮನ ಸೆಳೆದಿವೆ: ಕಳೆದ ವರ್ಷ ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ, ನ್ಯಾಯಾಲಯವು ಒಂದು ವಾರ ಕಾಲ ನಗರದ ಪ್ರಮುಖ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಹಕರಿಸುವಂತೆ ಆದೇಶ ನೀಡಿತ್ತು. ಬೆಂಗಳೂರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಅಥವಾ ತೀವ್ರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ, ನಗರದ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (TMC) ಕುಳಿತು ಸಂಚಾರ ನಿಯಮಗಳ ಕುರಿತ ವಿಡಿಯೋಗಳನ್ನು ವೀಕ್ಷಿಸುವ ಅಥವಾ ಪಾರ್ಕ್‌ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಶಿಕ್ಷೆಯನ್ನು ವಿಧಿಸಿದ ಉದಾಹರಣೆಗಳಿವೆ. ಮೈಸೂರುನಲ್ಲಿ ಹೆಲ್ಮೆಟ್ ರಹಿತ ಚಾಲನೆ ಮತ್ತು ಅತೀ ವೇಗದ ಚಾಲನೆಗೆ ಸಂಬಂಧಿಸಿದಂತೆ, ಯುವಕರಿಗೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ (Trauma Center) ಅಪಘಾತಕ್ಕೊಳಗಾದವರಿಗೆ ನೆರವಾಗುವ ಮೂಲಕ ‘ರಸ್ತೆ ಸುರಕ್ಷತೆಯ ಬೆಲೆ’ ಏನೆಂದು ತಿಳಿಯುವಂತೆ ಆದೇಶಿಸಿದ ನಿದರ್ಶನಗಳಿವೆ.

ಸಾರ್ವಜನಿಕ ವಲಯದಲ್ಲಿ ಶ್ಲಾಘನೆ
ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಿ ಕೈತೊಳೆದುಕೊಳ್ಳುವವರೇ ಹೆಚ್ಚು. ಆದರೆ, “ದುಡ್ಡಿನ ದಂಡಕ್ಕಿಂತ ನೈತಿಕ ದಂಡ ದೊಡ್ಡದು” ಎಂಬ ತತ್ವದಡಿ ನ್ಯಾಯಾಲಯ ನೀಡುವ ಇಂತಹ ಶಿಕ್ಷೆಗಳು ತಪ್ಪಿತಸ್ಥರಲ್ಲಿ ಪಶ್ಚಾತ್ತಾಪ ಮೂಡಿಸುತ್ತವೆ. ಪೊಲೀಸ್ ಇಲಾಖೆಯ ಚುರುಕಾದ ಕ್ರಮ ಮತ್ತು ನ್ಯಾಯಾಲಯದ ಈ ಸಮಾಜಮುಖಿ ತೀರ್ಪು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆ ಸುರಕ್ಷತೆ ಎಂಬುದು ಕೇವಲ ಕಾನೂನಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸುಳ್ಯದ ಈ ಘಟನೆಯು ಇಡೀ ರಾಜ್ಯಕ್ಕೆ ‘ಸಂಸ್ಕಾರಯುತ ಸಂಚಾರ’ದ ಸಂದೇಶ ರವಾನಿಸಿದೆ. “ಕೇವಲ ದಂಡ ವಿಧಿಸುವುದಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ನ್ಯಾಯಾಲಯವು ಈ ‘ಸಮುದಾಯ ಸೇವೆ’ಯ ಆದೇಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.”

Continue Reading

Article

ಕಟುಕರ ಕೈಸೇರಿ ಬಚಾವಾದ ಹಾಲು ಕೊಡುವ ಹಸುಗಳು..ವಿಟ್ಲ ಪೊಲೀಸರ ಸಹಕಾರದಲ್ಲಿ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರು ಜನ್ಮ ಪಡೆದ ಗೋವುಗಳು.

Published

on

ಕರಾವಳಿಯಲ್ಲಂತೂ ಅಕ್ರಮ ಗೋಸಾಗಾಟ ರಾಜಕೀಯ ಬೆಳವಣಿಗೆಗೆ ಪೌಷ್ಟಿಕಾಂಶವೆಂದೇ ಹೇಳಬೇಕು. ಅಕ್ರಮ ದನ ಸಾಗಾಟವನ್ನು ತಡೆಹಿಡಿದು ಕಾನೂನಾತ್ಮಕವಾಗಿ ಅಕ್ರಮ ಸಾಗಾಟಗಾರನ್ನು ಪೊಲೀಸರಿಗೊಪ್ಪಿಸುವ ಮಂದಿ ಕೆಲವರಾದರೆ, ಅಕ್ರಮ ಗೋಸಾಗಾಟವನ್ನು ತಡೆಹಿಡಿದು ಸಾಗಾಟಗಾರರೊಡನೆ ಡೀಲು ಕುದುರಿಸಿ ಹಣ ಪಡೆದು ಗೋವು ಸಾಗಾಟಕ್ಕೆ ದಾರಿ ಮಾಡಿಕೊಡುವ ಗೋಪ್ರೇಮಿಗಳು ಕತ್ತಲಿನಲ್ಲಿ ಅಗಾಗ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಯಾವಾಗ ಪೊಲೀಸರ ವಶಕ್ಕೆ ಸಿಕ್ಕಿತೋ ಈ ಗೋವುಗಳನ್ನು ಏನು ಮಾಡುವುದು ಎಂಬಲ್ಲಿಗೆ ಪೊಲೀಸರು ತಲೆಕೆರೆದು ಕೊಂಡಾಗ ಗೋಪ್ರೇಮಿಗಳ ಫೋನುಗಳು ಪೊಲೀಸರ ಕಿವಿ ತಟ್ಟುತ್ತದೆ. ನಮಗೆ ಗೋವುಗಳನ್ನು ಕೊಡಿ ನಾವು ಮನೆಯಲ್ಲಿ ಆರಾಮವಾಗಿ ಸಾಕುತ್ತೇವೆ ಎಂದು..ಮತ್ತೆ ಅದು ಹೋಗುವುದು ಕಟುಕರ ಕೈಗೆ ಎಂಬುವುದು ಪೊಲೀಸರಿಗೂ ಗೊತ್ತು.! ಅದಕ್ಕಾಗಿ ಅಧಿಕೃತ ಗೋಶಾಲೆಗಳ ಕದ ಬಡಿಯುವುದು ಪೊಲೀಸರ ಸಾಹಸವೇ ಸರಿ. ಚುನಾವಣಾ ಸಂದರ್ಭದಲ್ಲಿ ಗೋ ರಕ್ಷಣೆಯ ಹೆಸರಲ್ಲಿ ಮತ ಬೇಡುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಗ್ರಾಮಕ್ಕೊಂದು ಗೋಶಾಲೆ ನಿರ್ಮಾಣ ಮಾಡುವ ವಾಗ್ದಾನ ನೀಡಿತ್ತು. ಆದರೆ ಅಧಿಕಾರ ದಕ್ಕಿದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆ ಕಸದ ತೊಟ್ಟಿ ಸೇರಿಕೊಂಡಿದೆ. ಗೋವುಗಳು ಭಕ್ಷಕರ ಹೊಟ್ಟೆ ಸೇರಲು ದಾರಿ ಸುಗಮವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಂಡ್ಯ ಮೂಲದ ಹಿಂದೂ ಯುವಕರಿಬ್ಬರು ಸಾಲೆತ್ತೂರಿನ ಶಾಫಿ ಎಂಬಾತನಿಗೆ ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೋಸಾಗಾಟ ತಡೆಯಲು ಸಂಘಟನೆಗಳ ಕಾರ್ಯಕರ್ತರು ರೆಡಿಯಾಗಿದ್ದಾರೆಯೇ ವಿನಹ ಆ ಬಳಿಕ ಗೋವುಗಳಿಗೆ ಯಾರು ಗತಿ ಎಂಬುದನ್ನು ಈವರೆಗೂ ಯಾವುದೇ ಸಂಘಟನೆಗಳಾಗಲೀ.. ಗೋರಕ್ಷಣೆ ಬಗ್ಗೆ ವೇದಿಕೆಯಲ್ಲಿ ಮೈಕ್ ಹಿಡಿದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷದ ಮುಖಂಡರಾಗಲೀ ಯೋಚಿಸುತ್ತೂ ಇಲ್ಲ..ಸಹಕಾರ ನೀಡುತ್ತಲೂ ಇಲ್ಲ ಎಂಬುದು ನೂರರಷ್ಟು ಸತ್ಯ.

ನೋಡಲಾಗುತ್ತಿಲ್ಲ ಮೂಕ ಪ್ರಾಣಿಗಳ ವೇದನೆ.
ಮೂರು ದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಪತ್ತೆ ಹಚ್ಚಿದ ಗೋವುಗಳ ಪರಿಸ್ಥಿತಿಯೂ ಇದೇ ಆಗಿದೆ. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಎರಡು ಗೋವುಗಳು ಸಾಕಷ್ಟು ಪ್ರಮಾಣದಲ್ಲಿ ದೈಹಿಕವಾಗಿ ಗಾಯಗೊಂಡಿತ್ತು‌. ಪೊಲೀಸರು ವಶಕ್ಕೆ ಪಡೆದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ರಸ್ತೆಯಲ್ಲಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಗೋಪ್ರೇಮಿ ಕಾರ್ಯಕರ್ತರ ಜವಾಬ್ದಾರಿ ಮುಗಿಯಿತೇ.? ಗೋವುಗಳಿಗೆ ನೀರು, ಆಹಾರ ನೀಡುವುದು ಪೊಲೀಸರ ಜವಾಬ್ದಾರಿಯೇ.? ಪೊಲೀಸ್ ಠಾಣೆಗಳಲ್ಲಿ ಹುಲ್ಲು, ಹಿಂಡಿ ಸೇರಿದಂತೆ ಇನ್ನಿತರ ಪಶುಗಳ ಆಹಾರ ದಾಸ್ತಾನು ಇದೆಯೇ.? ಕಾನೂನು ಪ್ರಕ್ರಿಯೆ ಮುಗಿಯುವ ತನಕ ಗೋವುಗಳನ್ನು ಕಟ್ಟಿಹಾಕಲು ಪೊಲೀಸ್ ಠಾಣೆಯಲ್ಲಿ ಹಟ್ಟಿ ವ್ಯವಸ್ಥೆ ಇದೆಯೇ.? ಇದೆಲ್ಲವನ್ನೂ ಮಾಡಬೇಕಾದವರು ಯಾರು ಎಂಬ ಬಗ್ಗೆ ಈವರೆಗೂ ಯಾರೊಬ್ಬರೂ ಚಿಂತಿಸದಿರುವುದು ಗೋಪ್ರೇಮಿಗಳ ನಕಲಿ ಹಿಂದುತ್ವ ಎಂಬುದನ್ನು ಬಿಡಿಸಿ ಹೇಳಬೇಕೇ.?

ಗೋವುಗಳ ಪಡೆಯಲು ಗೋಶಾಲೆಗಳ ನಕಾರ..
ಪೊಲೀಸರು ವಶಕ್ಕೆ ಪಡೆದ ಗೋವುಗಳನ್ನು ಪಡೆಯಲು ಯಾವುದೇ ಖಾಸಗಿ ಗೋಶಾಲೆಗಳ ವ್ಯವಸ್ಥಾಪಕರು ಮುಂದೆ ಬರುತ್ತಿಲ್ಲ. ಗೋಶಾಲೆಗಳಿಗೆ ಯಾವುದೇ ಸರಕಾರ ಈವರೆಗೂ ಪುಡಿಗಾಸೂ ನೀಡುತ್ತಿಲ್ಲ. ಗೋಶಾಲೆ ನಡೆಸುವವರೂ ಅವುಗಳ ಪಾಲನೆ ಮಾಡಲು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಕ್ರಮ ಗೋಸಾಗಾಟ ತಡೆಯುವ ಸಂಘಟನೆಗಳು, ಗೋಪ್ರೇಮಿ ರಾಜಕೀಯ ಪುಢಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗೋಶಾಲೆಗಳ ಬಗ್ಗೆ ಸ್ಪಂದಿಸುವುದು ಬಿಡಿ ಅತ್ತ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬುದು ನೂರರಷ್ಟು ಸತ್ಯ. ಪ್ರತಿಯೊಂದು ಗೋಶಾಲೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ತುಂಬಿಹೋಗಿದ್ದು ಅವುಗಳ ಪಾಲನೆಗಾಗಿ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ ಎಂಬುದೇ ಗೋಶಾಲೆಗಳು ಗೋವುಗಳ ಪಡೆಯಲು ನಿರಾಕರಿಸಲು ಮುಖ್ಯ ಕಾರಣವಾಗಿದೆ.

ಗ್ರಾಮ ಪಂ, ಪ.ಪಂಚಾಯತ್ ಗೋಶಾಲೆ ನಿರ್ಮಿಸಲಿ..
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನಾದರೂ ತಮ್ಮ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಲು ಜನಪ್ರತಿನಿಧಿಗಳು ಒತ್ತಾಯಿಸಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಸಂದರ್ಭದಲ್ಲಿ ಸಿಕ್ಕಿದ ಗೋವುಗಳನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ತಮ್ಮ ಗೋಶಾಲೆಗಳಲ್ಲಿ ಸಲಹುವಂತಾಗಬೇಕು. ಇಲ್ಲವಾದರೆ ಗೋವುಗಳು ಪತ್ತೆಯಾದ ತಕ್ಷಣ ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಾಕುವ ನೆಪದಲ್ಲಿ ಠಾಣೆಯಿಂದ ಪಡೆಯುವ ಖಾಸಗಿ ವ್ಯಕ್ತಿಗಳು ಒಂದೆರಡು ದಿನ ಮನೆಯಲ್ಲಿರಿಸಿ ಮತ್ತೆ ಕುಟುಕರಿಗೆ ಸಾವಿರಾರು ರೂಪಾಯಿಗಳಿಗೆ ನೀಡುವ ಮೂಲಕ ದಂಧೆ ನಡೆಸುತ್ತಿದ್ದಾರೆ.

ಅನಾಥವಾದ ಗೋವುಗಳು.
ಸಾಲೆತ್ತೂರು ಕರೈ ಬಳಿ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ವಶಕ್ಕೆ ಪಡೆದ ಎರಡು ದೊಡ್ಡ ಗಾತ್ರದ ಹಾಲು ಕರೆಯುವ ಹಸುಗಳು ಮೂರು ದಿನಗಳಿಂದ ವಿಟ್ಲ ಠಾಣೆಯಲ್ಲಿ ಆಶ್ರಯ ಪಡೆದಿತ್ತು. ವಿಟ್ಲ ಪರಿಸರದ ಗೋಶಾಲೆಗಳು ಸ್ಥಳಾವಕಾಶ ಮತ್ತು ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಗೋವುಗಳ ಪಡೆಯಲು ನಿರಾಕರಿಸಿದ್ದವು. ಈ ಮಧ್ಯೆ ಮೂರ್ನಾಲ್ಕು ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ಬೇಕೆಂದು ಹೇಳುತ್ತಾ ಗೋವುಗಳ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ಕಾನೂನು ಚೌಕಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋವುಗಳನ್ನು ನೀಡುವಂತಿಲ್ಲ. ಅದರಿಂದಾಗಿ ನಕಲಿ ಗೋಪ್ರೇಮಿಗಳ ಕಸರತ್ತು ವಿಫಲವಾಗಿದೆ.

ಗೋವುಗಳಿಗೆ ಮರು ಜನ್ಮ ನೀಡಿದ ದೈಗೋಳಿ ಸೇವಾಶ್ರಮ..
ಹಲವು ವರ್ಷಗಳಿಂದ ನೂರಾರು ಅನಾಥ ಬಡ ಜೀವಗಳಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದ ಅದೆಷ್ಟೋ ಜೀವಗಳ ಪಾಲಿಗೆ ಮಂಜೇಶ್ವರ ತಾಲೂಕಿನ ದೈಗೋಳಿಯ ಡಾ.ಉದಯಕುಮಾರ್-ಶಾರದಮ್ಮ ದಂಪತಿಗಳ ನೇತೃತ್ವದ ಶ್ರೀಸಾಯಿ ನಿಕೇತನ ಸೇವಾಶ್ರಮ ಮರು ಜನ್ಮ ನೀಡುತ್ತಿದೆ. ಇದರ ಜೊತೆಗೆ ಅಲ್ಲಿನ ಕಾಮಧೇನು ಗೋಶಾಲೆಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಅಲ್ಲೂ ಸ್ಥಳಾವಕಾಶ ದ ಕೊರತೆ ಎದ್ದು ಕಾಣುತ್ತಿದೆ. ಆದರೆ ಗಾಯಗೊಂಡ ಗೋವುಗಳ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಆಶ್ರಯ ನೀಡಲು ವೈದ್ಯ ದಂಪತಿಗಳು ಮುಂದೆ ಬಂದಿರುವುದು ತಮ್ಮ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಪತ್ರಕರ್ತ ವಿ.ಟಿ.ಪ್ರಸಾದ್ ಅವರ ಬೇಡಿಕೆಗೆ ಸ್ಪಂದಿಸಿದ ದೈಗೋಳಿ ಸೇವಾಶ್ರಮದ ವೈದ್ಯ ದಂಪತಿಗಳು ತಮ್ಮ ಕಾಮಧೇನು ಗೋಶಾಲೆಗೆ ವಿಟ್ಲ ಪೊಲೀಸರ ಸಹಕಾರದಲ್ಲಿ ಕರೆದೊಯ್ದ ಎರಡು ಗೋವುಗಳನ್ನು ದಾಖಲಿಸುವ ಮೂಲಕ ಮರು ಜನ್ಮ ನೀಡಿದ್ದಾರೆ.

ಇನ್ನಾದರೂ ಗೋಸಾಗಾಟ ತಡೆಯುವ ಗೋಪ್ರೇಮಿಗಳು ಆ ಬಳಿಕ ಗೋವುಗಳ ಮುಂದಿನ ಜೀವನದ ಬಗ್ಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಅಸಲಿ ಗೋಪ್ರೇಮಿಗಳಾಗಿ ಸಮಾಜದಲ್ಲಿ ಬದುಕಲಿ ಎಂಬುದು ಹಾರೈಕೆಯಾಗಿದೆ.

ವಿ.ಟಿ.ಪ್ರಸಾದ್‌ ಹಿರಿಯ ಪತ್ರಕರ್ತರು

ಈ ವೀಡಿಯೋ ನೋಡಿ Watch the video

ಕಟುಕರ ಕೈಯಿಂದ ಬಚಾವಾದ ಗೋವುಗಳಿಗೆ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರುಜನ್ಮ

ಈ ನ್ಯೂಸನ್ನೂ ಓದಿ

Continue Reading

Trending

Copyright © 2025 Deevatige