Dakshina Kannada
ತುಳು ಸಾಹಿತ್ಯ ಅನುವಾದ ವ್ಯಾಪಿಸಲಿ : ಪ್ರೊ.ವಿವೇಕ ರೈ;ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲಿಷ್ ಅನುವಾದ ಬಿಡುಗಡೆ
ಮಹಾನಗರ: ಅಮೃತ ಸೋಮೇಶ್ವರ ಅವರಂತಹ ಮೇರು ಬರಹಗಾರರ ತುಳು ಕೃತಿಗಳು ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದಗೊಂಡಾಗ ತುಳುವಿನ ಸತ್ವ ಹಾಗೂ ಕಂಪು ತುಳುನಾಡಿನ ಆಚೆಗೂ ಪಸರಿಸುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು ಹೇಳಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಇಂಗ್ಲಿಷ್, ಕನ್ನಡ ಹಾಗೂ ತುಳು ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅಮೃತ ಸೋಮೇಶ್ವರ ಅವರ ಇಂಗ್ಲಿಷ್ ಗೆ ಅನುವಾದಗೊಂಡ ಗೋಂದೋಳು ಮತ್ತು ಇತರ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದೇ ಕೃತಿಯ ಅನುವಾದ ವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪಶ್ಚಿಮ ದೇಶಗಳಲ್ಲಿ ಒಂದು ಪುಸ್ತಕದ 10ರಿಂದ 20 ಬೇರೆ ಬೇರೆ ಮಾದರಿಯ ಅನುವಾದಗಳು ಪ್ರಕಟವಾಗುತ್ತಿವೆ, ನಮ್ಮಲ್ಲಿಯೂ ಅನುವಾದವನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕಿದೆ ಎಂದು ವಿವೇಕ ರೈ ಅವರು ಹೇಳಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿಯೂ ಅನುವಾದ ಕೇಂದ್ರ ಆರಂಭವಾಗಲಿ ಎಂದು ವಿವೇಕ ರೈ ಅವರು ಆಶಯ ವ್ಯಕ್ತಪಡಿಸಿದರು.
ನಮ್ಮನ್ನು ಅಗಲಿರುವ ಹಿರಿಯ ಸಾಹಿತಿ, ಸಾಂಸ್ಕೃತಿಕ ಚೇತನಗಳ ಬರಹವನ್ನು ಓದುವುದು, ತರ್ಜುಮೆ ಮಾಡುವುದು, ಅವರ ನಾಟಕಗಳ ಪ್ರಯೋಗಗಳನ್ನು ಆಗಾಗ್ಗೆ ಮಾಡುವ ಮೂಲಕ ಜನಮಾನಸದಲ್ಲಿ ಹಿರಿಯರ ನೆನಪುಗಳನ್ನು ನಿರಂತರವಾಗಿ ಉಳಿಸಬೇಕಾಗಿದೆ ಎಂದು ವಿವೇಕ ರೈ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ| ಡಾ| ಪ್ರವೀಣ್ ಮಾರ್ಟಿಸ್ ಅವರು ಮಾತನಾಡಿ, ವಿ.ವಿಯಲ್ಲಿ ಈಗಾಗಲೇ ತುಳು ವಿಭಾಗ ಆರಂಭಿಸಲಾಗಿದೆ. ತುಳು ಪೀಠ ಕೂಡ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ಮುದ್ದು ಮೂಡುಬೆಳ್ಳೆ ಅವರು ಅಮೃತರ ನಾಟಕಗಳ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.
ಕಲಾವಿದ ಗೋಪಿ ಅವರು 1994ರಲ್ಲಿ ರಚಿಸಿರುವ ತುಳು ಅಕಾಡೆಮಿಯ ಲಾಂಛನವನ್ನು ಅವರೇ ವರ್ಣಮಯವಾಗಿ ಮರು ವಿನ್ಯಾಸಗೊಳಿಸಿದ್ದು, ಈ ವರ್ಣಮಯ ಲಾಂಛನವನ್ನು ಪ್ರೊ. ವಿವೇಕ ರೈ ಅವರು ಅನಾವರಣಗೊಳಿಸಿದರು.
ಕೃತಿಗಳ ಅನುವಾದಕಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ| ಸಿಲ್ವಿಯಾ ರೇಗೊ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಡಾ| ಚೇತನ್ ಸೋಮೇಶ್ವರ, ಅಲೋಷಿಯಸ್ ವಿ.ವಿಯ ಭಾಷಾ ನಿಕಾಯದ ಡೀನ್ ಡಾ.ಮಹಾಲಿಂಗ ಭಟ್ ಉಪಸ್ಥಿತರಿದ್ದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಗಳು ಗೊಂದೋಳು ತುಳು ಹಾಡನ್ನು ಪ್ರಸ್ತುತಪಡಿಸಿದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಡಾ.ಮೆಲಿಶಾ ಗೋವಿಯಸ್ ಸ್ವಾಗತಿಸಿದರು, ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು.
court
ವಕೀಲರ ರಕ್ಷಣೆಗಾಗಿ ಆಗ್ರಹ: ನಾಳೆ (ನವೆಂಬರ್ 3) ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ದೂರ ಉಳಿಯಲು ಕರೆ.
ಬೆಂಗಳೂರು: ವಕೀಲರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆಗಳು ಮತ್ತು ಕೊಲೆಗಳನ್ನು ಖಂಡಿಸಿ ಹಾಗೂ ಕಟ್ಟುನಿಟ್ಟಿನ ‘ವಕೀಲರ ರಕ್ಷಣಾ ಕಾಯ್ದೆ’ (Advocates Protection Act) ಜಾರಿಗೆ ಒತ್ತಾಯಿಸಿ, ದಿ ವಕೀಲರ ಅಸೋಸಿಯೇಷನ್ ಬೆಂಗಳೂರು (The Advocates’ Association, Bengaluru) ವತಿಯಿಂದ ನಾಳೆ ಅಂದರೆ ನವೆಂಬರ್ 3, 2026ರ ಮಂಗಳವಾರ ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ವಕೀಲರು ಸಂಪೂರ್ಣವಾಗಿ ದೂರ ಉಳಿದು (Abstain from work) ಪ್ರತಿಭಟಿಸಲು ಕರೆ ನೀಡಲಾಗಿದೆ.

ಇತ್ತೀಚೆಗೆ ವೈಟ್ಫೀಲ್ಡ್ನ ವಕೀಲರಾದ ಮಂಜುನಾಥ್ ಮತ್ತು ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಅವರ ಬರ್ಬರ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕಿ ಅವರ ಮೇಲಿನ ಹತ್ಯೆ ಯತ್ನದ ಘಟನೆಗಳನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ವಕೀಲರಿಗೆ ವೃತ್ತಿಯಲ್ಲಿ ಸೂಕ್ತ ಭದ್ರತೆ ಇಲ್ಲದಿರುವುದನ್ನು ವಿರೋಧಿಸಿ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಬಲಪಡಿಸುವಂತೆ ಒತ್ತಾಯಿಸಿ ಅಕ್ಟೋಬರ್ 29ರಂದು ನಡೆದ ಸರ್ವಸಭೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ನವೆಂಬರ್ 3ರಂದು ಮಂಗಳವಾರದಂದು ಕರ್ತವ್ಯದಿಂದ ದೂರ ಉಳಿಯುವಂತೆ ನಿರ್ಧರಿಸಲಾಗಿದ್ದು, ರಾಜ್ಯದ ಎಲ್ಲಾ ವಕೀಲರ ಸಂಘಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ, ಉಪಾಧ್ಯಕ್ಷ ಗಿರೀಶ್ ಕುಮಾರ್ ಸಿ.ಎಸ್. ಹಾಗೂ ಖಚಾಂಚಿ ಶ್ವೇತಾ ರವಿಶಂಕರ್ ಮನವಿ ಮಾಡಿದ್ದಾರೆ
Bantawala
ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.
CONGRESS
ಕಸ್ತೂರಿ ರಂಗನ್ ವರದಿ: ಜನರ ಆತಂಕ ಸಂಸದರ ಗಮನಕ್ಕೆ ತರದಿರುವುದು ಕಳವಳಕಾರಿ – ಎಂ. ವೆಂಕಪ್ಪ ಗೌಡ
ಸುಳ್ಯ: ಕಸ್ತೂರಿ ರಂಗನ್ ವರದಿಯಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜನರ ಬದುಕಿನ ಅಳಿವು-ಉಳಿವಿನ ಈ ಗಂಭೀರ ವಿಚಾರವನ್ನು ಸಂಬಂಧಪಟ್ಟ ಸಂಸದರ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹೇಳಿದ್ದಾರೆ.
ವರದಿಯಿಂದ ಬಾಧಿತವಾಗಿರುವ ಪ್ರದೇಶಗಳ ಜನರು ಹಲವು ವರ್ಷಗಳಿಂದ ಭಯದಲ್ಲೇ ಜೀವನ ನಡೆಸುತ್ತಿದ್ದು, ಇದರ ವಿರುದ್ಧ ಈಗಾಗಲೇ ಹಲವು ಹಂತದ ಹೋರಾಟಗಳು ನಡೆದಿವೆ. ಜನರ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಏಳು ಬಾರಿ ತಿರಸ್ಕರಿಸಿ ವಾಪಸ್ ಕಳುಹಿಸಿದೆ. ಆದರೆ, ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರುವುದರಿಂದ, ಬಾಧಿತ ಗ್ರಾಮಗಳ ಜನರ ಭವಿಷ್ಯ ಕೇಂದ್ರದ ನಿರ್ಧಾರದ ಮೇಲೆ ನಿಂತಿದೆ. ಆದ್ದರಿಂದ, ಸ್ಥಳೀಯ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ಇತ್ತೀಚೆಗೆ ಸುಳ್ಯ ತಾಲೂಕಿಗೆ ಆಗಮಿಸಿದ್ದ ಸಂಸದರು ವರದಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಸ್ಥಳದಲ್ಲಿದ್ದ ಹೋರಾಟಗಾರರು ಅವರಿಗೆ ಜನರ ಸಮಸ್ಯೆಗಳನ್ನು ವಿವರಿಸುವ ಮನವಿ ಸಲ್ಲಿಸದಿರುವುದು ಮತ್ತು ಒತ್ತಡ ಹೇರದಿರುವುದು ಬೇಸರದ ಸಂಗತಿ. ಈ ಹೋರಾಟ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಕಸ್ತೂರಿ ರಂಗನ್ ವರದಿಯ ವಿಷಯವು ಕೇಂದ್ರ ప్రభుత్వದ ನಿರ್ಧಾರಕ್ಕೆ ಸಂಬಂಧಿಸಿದ ಮಹತ್ವದ ವಿಚಾರವಾಗಿರುವುದರಿಂದ, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೇಂದ್ರದ ಮೇಲೆಯೂ ಒತ್ತಡ ತರಬೇಕು. ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಲುಪಿಸುವ ಜವಾಬ್ದಾರಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
