manglore police
ASI ಆಗಿ ಪದೋನ್ನತಿ: ಮದನ್ ಅಯ್ಯಪ್ಪ ಹಾಗೂ ದೇವದಾಸ್ ಪೀಲ್ಯಡ್ಕ ಅವರಿಗೆ ಹೊಸ ಠಾಣೆಗೆ ವರ್ಗಾವಣೆ
ಮಂಗಳೂರು / ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮದನ್ ಅಯ್ಯಪ್ಪ ಹಾಗೂ ದೇವದಾಸ್ ಪೀಲ್ಯಡ್ಕ ಅವರು ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಆಗಿ ಪದೋನ್ನತಿ (ಭಡ್ತಿ) ಪಡೆದು ನೂತನ ಠಾಣೆಗಳಿಗೆ ವರ್ಗಾವಣೆಗೊಂಡಿದ್ದಾರೆ.

ಮದನ್ ಅಯ್ಯಪ್ಪ (ಮಂಗಳೂರು ಟ್ರಾಫಿಕ್ ದಕ್ಷಿಣ ಠಾಣೆಗೆ): ಮಡಿಕೇರಿ ಮೂಲದ ಮದನ್ ಅಯ್ಯಪ್ಪ ಅವರು ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಎಎಸ್‌ಐ ಆಗಿ ಬಡ್ತಿ ಪಡೆದಿರುವ ಅವರು ಮಂಗಳೂರು ಟ್ರಾಫಿಕ್ ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಬಂದರ್ ಠಾಣೆಯ ಸೇವಾವಧಿಯಲ್ಲಿ ಸಹಕರಿಸಿದ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಮುಂದೆಯೂ ಇದೇ ರೀತಿಯ ಸಹಕಾರವನ್ನು ಆಶಿಸಿದ್ದಾರೆ.

ದೇವದಾಸ್ ಪೀಲ್ಯಡ್ಕ (ಪುತ್ತೂರು ಗ್ರಾಮಾಂತರ ಠಾಣೆಗೆ): ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪೀಲ್ಯಡ್ಕ ನಿವಾಸಿ, ಕೃಷ್ಣ ಗೌಡ ಹಾಗೂ ಎಲ್ಯಕ್ಕ ದಂಪತಿಯ ಪುತ್ರ, ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾದ ಕಂಬಳ ಕೋಣಗಳ ಮಾಲಿಕರಾದ ದೇವದಾಸ್ ಪೀಲ್ಯಡ್ಕ ಅವರು ಎಎಸ್‌ಐ ಆಗಿ ಭಡ್ತಿ ಪಡೆದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
1997ರಲ್ಲಿ ಸುಳ್ಯ ಠಾಣೆಯಲ್ಲಿ ಸೇವೆ ಆರಂಭಿಸಿದ್ದ ದೇವದಾಸ್ ಅವರು ಮಂಗಳೂರು ಪೂರ್ವ ಸಂಚಾರ, ಪುತ್ತೂರು ನಗರ, ಉಪ್ಪಿನಂಗಡಿ ಹಾಗೂ ಬಂಟ್ವಾಳ ಸಂಚಾರ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚಿನವರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರಿಗೆ ಇದೀಗ ಬಡ್ತಿ ದೊರೆತಿದೆ.
ಪದೋನ್ನತಿ ಪಡೆದು ಹೊಸ ಜವಾಬ್ದಾರಿಗೆ ಹೆಜ್ಜೆ ಇಡುತ್ತಿರುವ ಇಬ್ಬರೂ ಅಧಿಕಾರಿಗಳಿಗೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.
crime
ಮಂಗಳೂರಿನಲ್ಲಿ ಫಿಲ್ಮಿ ದರೋಡೆ: ಬಸ್ ಇಳಿದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ₹1.15 ಕೋಟಿ ದರೋಡೆ!
ಮಂಗಳೂರು, ಅ.29: ಶಿವಮೊಗ್ಗದಿಂದ ಮಂಗಳೂರಿಗೆ ತರಲಾಗುತ್ತಿದ್ದ ₹1.15 ಕೋಟಿ ನಗದು ಹಣವನ್ನು ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಇಳಿದ ಕೂಡಲೇ ವ್ಯಕ್ತಿಯನ್ನು ಅಪಹರಿಸಿ ನಗರದಾದ್ಯಂತ ಸುತ್ತಾಡಿಸಿ ಹಣ ಕಿತ್ತುಕೊಂಡು ಕಾವೂರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವರ ಕೆಲಸದಾಳು ಸತ್ಯನಾರಾಯಣ ಅವರು ಅ.23ರಂದು 2 ಬ್ಯಾಗ್‌ಗಳಲ್ಲಿ ₹1 ಕೋಟಿ 15 ಲಕ್ಷ ಹಣವನ್ನು ಮಂಗಳೂರಿಗೆ ತರಲು ದಾವಣಗೆರೆಯಿಂದ ಹೊರಟಿದ್ದರು. ಅ.27ರ ರಾತ್ರಿ ದಾವಣಗೆರೆಯಿಂದ ಬಸ್ ಹತ್ತಿದ್ದ ಅವರು, ಅ.28ರ ಬೆಳಿಗ್ಗೆ 6 ಗಂಟೆಗೆ ಲಾಲ್‌ಬಾಗ್ ಬಳಿ ಬಸ್ ಇಳಿದಿದ್ದಾರೆ.
ಈ ವೇಳೆ ಕಪ್ಪು ಕಾರಿನಲ್ಲಿ ಮುಖಕ್ಕೆ ಮಫ್ಲರ್ ಕಟ್ಟಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಅಪಹರಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮಂಗಳೂರು ನಗರದಾದ್ಯಂತ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿ ಇದ್ದ 2 ಬ್ಯಾಗ್ ಹಣ ಮತ್ತು 2 ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.
ನಂತರ ಬೆಳಿಗ್ಗೆ 8 ಗಂಟೆಗೆ ಕಾವೂರು ಬಸ್ ನಿಲ್ದಾಣದ ಬಳಿಯ ಗುಡ್ಡದ ಮೇಲೆ ಅವರನ್ನು ತಳ್ಳಿ, “ಪೊಲೀಸರಿಗೆ ಹೇಳಿದರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮಂಗಳೂರು ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಅಪಹರಣ, ದರೋಡೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಕಪ್ಪು ಕಾರು ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈ ದೊಡ್ಡ ಮೊತ್ತದ ಹಣದ ಸಾಗಾಟದ ಮಾಹಿತಿ ದರೋಡೆಕೋರರಿಗೆ ಮೊದಲೇ ಹೇಗೆ ಗೊತ್ತಾಯಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
arrest
ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಕಾರಾವಾಸ ಶಿಕ್ಷೆ ಪ್ರಕಟಿಸಿದ ಮಂಗಳೂರು ನ್ಯಾಯಾಲಯ
ಮಂಗಳೂರು: ಪ್ರೀತಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ: 2019ರ ಜನವರಿ 3ರಂದು ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿ ಈ ಘಟನೆ ನಡೆದಿತ್ತು. ಪ್ರಕರಣದ 1ನೇ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಕೌಟಿ ಎಂಬುವವನ ತಂಗಿಯನ್ನು ರಾಕೇಶ್ ಎಂಬ ಯುವಕ ಪ್ರೀತಿಸುತ್ತಿದ್ದನೆಂಬ ದ್ವೇಷದಿಂದ, ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿಕೊಂಡು ರಾಕೇಶನ್‌ನನ್ನು ತಲವಾರ್‌ಗಳಿಂದ ಭೀಕರವಾಗಿ ಕೊಲೆ ಮಾಡಿದ್ದರು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ 02/2019) ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್. ನಾಯ್ಕ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು: ಸುದೀರ್ಘ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ರಾಜೇಶ್ ಮಾರುತಿ ಕಮಟೆ ಅವರು ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ್ದಾರೆ.
1ರಿಂದ 3ನೇ ಆರೋಪಿಗಳಿಗೆ: ಕಲಂ 302, 120(ಬಿ) ಜೊತೆಗೆ 34 ಐ.ಪಿ.ಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ.
1ರಿಂದ 4ನೇ ಆರೋಪಿಗಳಿಗೆ: ಸಾಕ್ಷ್ಯ ನಾಶಪಡಿಸಿದ (ಕಲಂ 201 ರ/ವಿ 34 ಐ.ಪಿ.ಸಿ) ಆರೋಪಕ್ಕೆ 3 ವರ್ಷಗಳ ಕಾರಾವಾಸ ಹಾಗೂ ತಲಾ ₹5,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ 1 ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.
4ನೇ ಆರೋಪಿಗೆ: ಆರೋಪಿಗಳಿಗೆ ಆಶ್ರಯ ನೀಡಿದ (ಕಲಂ 212 ರ/ವಿ 34 ಐ.ಪಿ.ಸಿ) ಆರೋಪಕ್ಕಾಗಿ 3 ವರ್ಷಗಳ ಕಾರಾವಾಸ ಮತ್ತು ₹5,000 ದಂಡ (ಪಾವತಿಸದಿದ್ದಲ್ಲಿ 1 ತಿಂಗಳು ಹೆಚ್ಚುವರಿ ಶಿಕ್ಷೆ) ವಿಧಿಸಲಾಗಿದೆ.
ಆರೋಪಿಗಳಿಂದ ವಸೂಲಾಗುವ ಒಟ್ಟು ₹70,000 ದಂಡದ ಮೊತ್ತದಲ್ಲಿ ₹20,000 ಸರ್ಕಾರಕ್ಕೆ ಹಾಗೂ ₹50,000 ಹಣವನ್ನು ಮೃತ ರಾಕೇಶನ್ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಶ್ರೀ ಮೋತೀಲಾಲ್ ಚೌದರಿ ಅವರು ವಾದ ಮಂಡಿಸಿದ್ದರು.
DEATH
ಸುಳ್ಳು ಪ್ರಕರಣದ ಆರೋಪದಿಂದ ಮನನೊಂದು ಯುವಕ ಆತ್ಮಹತ್ಯೆ: ಸುರತ್ಕಲ್ ಠಾಣೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
ಮಂಗಳೂರು: ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಬೇಸರದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರ ನಡೆ ಹಾಗೂ ಆತನ ಆತ್ಮಹತ್ಯೆಗೆ ಕಾರಣವಾದ ಯುವ ಜೋಡಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಯ ಮುಂದೆ ಮೃತದೇಹವಿಟ್ಟು ಮಂಗಳವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿದರು.
ಘಟನೆಯ ಹಿನ್ನೆಲೆ:
ಮೃತ ಯುವಕನನ್ನು ಹೊಸಬೆಟ್ಟು ನಿವಾಸಿ ಸೋಮನಾಥ ಎಂದು ಗುರುತಿಸಲಾಗಿದೆ. ಅಕ್ಟೋಬರ್ 25ರಂದು ಹೊಸಬೆಟ್ಟು ಬಳಿಯ ಮೀನುಗಾರಿಕಾ ಜೆಟ್ಟಿಯಲ್ಲಿ ಕಾಸರಗೋಡು ಮೂಲದ ಯುವಕ ಹಾಗೂ ದೆಹಲಿ ಮೂಲದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಸ್ಥಳೀಯರೊಂದಿಗೆ ವಾಗ್ವಾದ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋಮನಾಥ ಅವರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಈ ಬೆಳವಣಿಗೆಯಿಂದ ತೀವ್ರ ಮನನೊಂದ ಸೋಮನಾಥ ಸೋಮವಾರ ಬೆಳಿಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮುನ್ನ ಅವರು ಡೆತ್‌ನೋಟ್ ಬರೆದಿಟ್ಟಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಠಾಣೆಯ ಎದುರು ಸಾರ್ವಜನಿಕರ ಆಕ್ರೋಶ:
ವಿಚಾರಣೆಯ ನೆಪದಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಹಾಗೂ ಯುವ ಜೋಡಿಯ ದೂರಿನ ಆಧಾರದಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ನೂರಾರು ಮೊಗವೀರ ಯುವಕರು ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದರು. ಪೋಸ್ಟ್‌ಮಾರ್ಟಂ ಬಳಿಕ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯುವ ಸಂದರ್ಭದಲ್ಲಿ, ಮೃತದೇಹವನ್ನು ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಠಾಣೆಯು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಅಲ್ಲದೆ, ರಾತ್ರಿ ವೇಳೆ ಬೀಚ್ ಪ್ರದೇಶದಲ್ಲಿ ಯುವ ಜೋಡಿಗಳು ಅನುಮಾನಾಸ್ಪದವಾಗಿ ತಿರುಗಾಡುವುದು, ಮಾದಕ ವಸ್ತುಗಳ ಸೇವನೆ ಹಾಗೂ ಅತಿರೇಕದ ವರ್ತನೆಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಬೀಚ್ ಭಾಗದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಶಾಸಕರ ಭೇಟಿ, ಪರಿಸ್ಥಿತಿ ತಿಳಿ:
ಘಟನಾ ಸ್ಥಳಕ್ಕೆ ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಪೊಲೀಸರನ್ನು ಪ್ರಶ್ನಿಸಿದ ಶಾಸಕರು, ಸಾರ್ವಜನಿಕರ ದೂರಿನನ್ವಯ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವ ಜೋಡಿಯ ವಿರುದ್ಧವೂ ದೂರು ನೀಡುವಂತೆ ಪ್ರತಿಭಟನಾಕಾರರಿಗೆ ತಿಳಿಸಲಾಯಿತು. ದೂರು ಸ್ವೀಕರಿಸಿದ ಬಳಿಕ ಸೂಕ್ತ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ, ಸಾರ್ವಜನಿಕರು ಮೃತದೇಹವನ್ನು ಅಲ್ಲಿಂದ ಕೊಂಡೊಯ್ದರು. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಹೆದ್ದಾರಿಯಲ್ಲಿ ಸಂಚಾರವನ್ನು ಸಹಜ ಸ್ಥಿತಿಗೆ ತರಲಾಯಿತು. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
