Connect with us

arrest

ಬಂಟ್ವಾಳ ನ್ಯಾಯಾಲಯದ ಆದೇಶಕ್ಕೆ ಮಂಗಳೂರು ಜಿಲ್ಲಾ ನ್ಯಾಯಾಲಯದಿಂದ ಮಧ್ಯಂತರ ತಡೆ: ಆಟೋ ಚಾಲಕನ ಬಿಡುಗಡೆಗೆ ಆದೇಶ

Published

on

ಮಂಗಳೂರು / ಬಂಟ್ವಾಳ: ಬಂಟ್ವಾಳದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯ ನೀಡಿದ್ದ ನ್ಯಾಯಾಂಗ ಬಂಧನದ ಆದೇಶಕ್ಕೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಧ್ಯಂತರ ತಡೆ ನೀಡಿದ್ದು, ಆರೋಪಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಮಹತ್ವದ ಆದೇಶ ಹೊರಡಿಸಿದೆ.

ಅರ್ಜಿದಾರರ (ಆರೋಪಿ) ಪರವಾಗಿ ಹಿರಿಯ ವಕೀಲರಾದ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಏನಿದು ಪ್ರಕರಣ?

ಘಟನೆಯ ವಿವರ: ಸೆಪ್ಟೆಂಬರ್ 2025ರಲ್ಲಿ ಆಲಡ್ಕ-ಪಾಣೆಮಂಗಳೂರು ರಸ್ತೆಯಲ್ಲಿ ಬಂಟ್ವಾಳ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಸಮವಸ್ತ್ರ ಧರಿಸದೆ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ಮೊಹಮ್ಮದ್ ಜಾಫರ್ ಎಂಬಾತನಿಗೆ ವಾಹನ ನಿಲ್ಲಿಸಲು ಸೂಚಿಸಲಾಗಿತ್ತು. ಆದರೆ, ಚಾಲಕ ಆಟೋವನ್ನು ಅಪಾಯಕಾರಿ ರೀತಿಯಲ್ಲಿ ತಿರುಗಿಸಿ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಾಲು ಮತ್ತು ಭುಜಕ್ಕೆ ತಾಗಿಸಿ ಸ್ಥಳದಿಂದ ಪರಾರಿಯಾಗಿದ್ದ ಎಂಬ ಆರೋಪ ಕೇಳಿಬಂದಿತ್ತು.

ಪ್ರಕರಣ ದಾಖಲು: ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 103/2025ರಂತೆ BNS ಕಲಂ 110, 281 ಹಾಗೂ IMV ಕಾಯ್ದೆಯ ವಿವಿಧ ಕಲಂ (184, 177, 179, 134 a, b r/w 187) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಆರಂಭಿಕ ಬಿಡುಗಡೆ: ಆರೋಪಿ ಮೊಹಮ್ಮದ್ ಜಾಫರ್‌ನನ್ನು ಅಂದಿನ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಅವರ ಮುಂದೆ ಹಾಜರುಪಡಿಸಿದಾಗ, ಬಂಧನ ಪ್ರಕ್ರಿಯೆಯಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ನ್ಯಾಯಾಲಯವು ಆತನನ್ನು ಬಿಡುಗಡೆ ಮಾಡಿತ್ತು.

ಬಂಟ್ವಾಳ ಜಡ್ಜ್ ಆದೇಶ ಮತ್ತು ರಿವಿಷನ್ ಪಿಟಿಷನ್

ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಖಾತರಿ ಪಟ್ಟಿ/ಚಾರ್ಜ್‌ಶೀಟ್) ಸಲ್ಲಿಸಿದ್ದರು. ಇದನ್ನು ಸ್ವೀಕರಿಸಿದ ನ್ಯಾಯಾಲಯವು ಆರೋಪಿಗೆ ಸಮನ್ಸ್ ಜಾರಿ ಮಾಡಿತ್ತು.

ಅದರಂತೆ ಆಗಸ್ಟ್ 5, 2026 ರಂದು ಆರೋಪಿ ಬಂಟ್ವಾಳ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದನು. ಆದರೆ, ಪ್ರಸ್ತುತ ನ್ಯಾಯಾಧೀಶರಾದ ಸೌಂದರ್ಯ ಎಂ. ಅವರು, ಆರೋಪವು ಜಾಮೀನು ರಹಿತ ಹಾಗೂ ಸೆಷನ್ಸ್ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣ ನೀಡಿ, ಆರೋಪಿಯನ್ನು ಆಗಸ್ಟ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು.

ಜಿಲ್ಲಾ ನ್ಯಾಯಾಲಯದ ಪ್ರಮುಖ ಆದೇಶ

ಬಂಟ್ವಾಳ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಪರ ವಕೀಲರು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ (Crl. Revision Petition No. 109/2026) ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಗೌರವಾನ್ವಿತ ಮಂಗಳೂರು ಸೆಷನ್ಸ್ ನ್ಯಾಯಾಲಯವು:

ಬಂಟ್ವಾಳ ನ್ಯಾಯಾಲಯ ನೀಡಿದ್ದ ನ್ಯಾಯಾಂಗ ಬಂಧನದ ಆದೇಶಕ್ಕೆ ಮಧ್ಯಂತರ ತಡೆ (Interim Stay) ನೀಡಿದೆ.

ಆರೋಪಿಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11, 2026 ಕ್ಕೆ ಮುಂದೂಡಿದೆ.

ವಾದ ಮಂಡನೆ: ಅರ್ಜಿದಾರರ (ಆರೋಪಿ) ಪರವಾಗಿ ಹಿರಿಯ ವಕೀಲರಾದ ಶಿವಾನಂದ ಎಂ. ವಕ್ಕೆತ್ತಿರಿ ವಿಟ್ಲ ಹಾಗೂ ಉಮೇಶ್ ಕುಮಾರ್ ವೈ. ಅವರು ನ್ಯಾಯಾಲಯದಲ್ಲಿ ಸಬಲ ವಾದ ಮಂಡಿಸಿದ್ದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

6 ವರ್ಷಗಳಿಂದ ವಿದೇಶದಲ್ಲಿದ್ದ ವಾರೆಂಟ್ ಆರೋಪಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್: ಬಂಟ್ವಾಳ ಪೊಲೀಸರ ಕಾರ್ಯಾಚರಣೆ

Published

on

ಮಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಬಜಾಲ್‌ನಂತೂರು ನಿವಾಸಿ ಮಹಮ್ಮದ್ ನೌಫಲ್ @ ಸಫಾರಿ ನೌಫಲ್ (34) ದಸ್ತಗಿರಿಯಾದ ಆರೋಪಿ.

ಪ್ರಕರಣದ ವಿವರ: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಅ.ಕ್ರ: 24/2020, ಐಪಿಸಿ ಕಲಂ: 143, 147, 148, 504, 323, 324, 506, 427 r/w 149 ಮತ್ತು ಕಾವಲು ಕಾಯ್ದೆ) ಸಂಬಂಧಿಸಿದಂತೆ ಈಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ. ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಸೆಪ್ಟೆಂಬರ್ 15, 2026ರಂದು ವಿದೇಶದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಸಹಾಯದಿಂದ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 29, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

arrest

ಬೆಳ್ತಂಗಡಿ: ದಲಿತ ಕುಟುಂಬದ ಜಮೀನಿಗೆ ಅಕ್ರಮ ಪ್ರವೇಶಿಸಿ ಅಶ್ಲೀಲ ಪ್ರದರ್ಶನ – ಆರೋಪಿ ಬಂಧನ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿ ಕೃತ್ಯವೆಸಗಿ, ದಲಿತ ಕುಟುಂಬದ ಮಹಿಳೆಯರ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಟ್ಟಾಡಿ ಮನೆಯ ಅಬ್ದುಲ್ ಹನೀಫ್ ಹುಸೇನ್ (50) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬದ ಸ್ವಾಧೀನದ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿ ಹಾಕಿ ಕುಟುಂಬ ಕೃಷಿ ಕಾರ್ಯದಲ್ಲಿ ತೊಡಗಿತ್ತು.

ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಏಕಾಏಕಿ ಆ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಡ ಕುಟುಂಬ ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಯನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯರು ದಾಂಧಲೆಯ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆರೋಪಿ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆಯನ್ನು ಎತ್ತಿ ಒಳ ಉಡುಪನ್ನು ಜಾರಿಸಿ ತನ್ನ ಗುಪ್ತಾಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದಿದ್ದಾನೆ. “ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ, ಈ ಜಾಗ ಬಿಟ್ಟು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಮತ್ತು ಬಂಧನ:

ಈತನ ವಿಕೃತಿಯಿಂದ ಭಯಗೊಂಡ ಬಡ ಕುಟುಂಬವು ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣದ ದೃಶ್ಯಾವಳಿ ಸಾಕ್ಷ್ಯಾಧಾರಗಳೊಂದಿಗೆ ಸೆ.8 ರಂದು ದೂರು ನೀಡಿದೆ.

ದೂರಿನ ಅನ್ವಯ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ಎಸ್ 329(3), 352, 351(2), 75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

40 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಬಡ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದ್ದು, ಈ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

arrest

ಕರಿಕೆ: ಕೇರಳ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; ಓರ್ವನ ಬಂಧನ, 40 ಕೆಜಿ ಮಾಂಸ ವಶ

Published

on

ಕರಿಕೆ ಸಮೀಪದ ಕೇರಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕರಿಕೆ ತೋಟಮ್ ನಿವಾಸಿ ಸಿದ್ದು (35) ಬಂಧಿತ ಆರೋಪಿ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳಾದ ಜಿ.ಎಸ್. ವಿನೀಶ್ ಮತ್ತು ವಿಮಲ್ ರಾಜ್ ಪರಾರಿಯಾಗಿದ್ದಾರೆ.

ಕರಿಕೆ ಸಮೀಪದ ತೋಟಮ್ ಬಳಿಯ ಕೇರಳ ಮೀಸಲು ಅರಣ್ಯದ ಗೇರು ತೋಟಿನ ಕಾಟೂರ್ ಕೊಪ್ಪು ಎಂಬಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಆರೋಪಿಯಿಂದ ಒಂದು ನಾಡ ಬಂದೂಕು, ಸುಮಾರು 40 ಕೆಜಿ ಕಡವೆ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಸರಗೋಡು ವಲಯದ ಅರಣ್ಯ ಅಧಿಕಾರಿಗಳಾದ ರಾಜು ಎಂ.ಪಿ., ಪ್ರಕಾಶ್ ವಿ.ಪಿ. ಹಾಗೂ ಪ್ರವೀಣ್ ಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿತ್ತು

Continue Reading

Trending

Copyright © 2025 Deevatige

error: Content is protected !!