Connect with us

accident

ಕಾಪುವಿನಲ್ಲಿ ಎರಡು ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ಉದ್ದೇಶಪೂರ್ವಕ ಡಿಕ್ಕಿ – ಪ್ರಯಾಣಿಕರಲ್ಲಿ ಆತಂಕ

Published

on

ಪ್ರಯಾಣಿಕರು ತುಂಬಿದ್ದಾಗಲೇ ಟೈಮಿಂಗ್ ವಿವಾದಕ್ಕೆ ಎರಡು ಬಸ್‌ಗಳ ಡಿಕ್ಕಿ: ಕಾಪು ಸರ್ವಿಸ್ ರಸ್ತೆಯಲ್ಲಿ 15 ನಿಮಿಷ ಟ್ರಾಫಿಕ್ ಜಾಮ್

ಕಾಪು ಬಸ್ ಡಿಕ್ಕಿ ಪ್ರಕರಣ: ಚಾಲಕರು, ಕಂಡಕ್ಟರ್‌ಗಳು ಸೇರಿ ನಾಲ್ವರ ಬಂಧನ; ಎರಡೂ ಬಸ್‌ಗಳು ಪೊಲೀಸ್‌ ವಶಕ್ಕೆ!

ಕಾಪು: ಕಾಪು ಬಸ್ ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ನಡೆದ ಉದ್ದೇಶಪೂರ್ವಕ ಡಿಕ್ಕಿ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ, ಘಟನೆಗೆ ಕಾರಣವಾದ ಎರಡೂ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಬಸ್ ಚಾಲಕರಾದ ರಮೇಶ್ ಮತ್ತು ಅಭಿಷೇಕ್ ಹಾಗೂ ಕಂಡಕ್ಟರ್‌ಗಳಾದ ವಿಜಯಕುಮಾರ್ ಮತ್ತು ಹರೀಶ್ ಬಿ. ಹೆಗ್ಡೆ ಎಂದು ಗುರುತಿಸಲಾಗಿದೆ.

ಸಮಯಾವಕಾಶದ ಪೈಪೋಟಿ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಉಡುಪಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಸಂದೇಶ ಟ್ರಾವೆಲ್ಸ್ ಬಸ್, ಕಾಪು ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ನಿಂತಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಆನಂದ್‌ ಟ್ರಾವೆಲ್‌ ಬಸ್ ಚಾಲಕ, ನೇರವಾಗಿ ಸಂದೇಶ ಟ್ರಾವೆಲ್ಸ್ ಬಸ್ಸಿನ ಹಿಂಭಾಗದ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಮೂಲಗಳ ಪ್ರಕಾರ, ಉದ್ಯಾವರದಿಂದಲೇ ಈ ಎರಡೂ ಬಸ್‌ಗಳ ನಡುವೆ ಸಮಯ (Timing) ಮತ್ತು ಓವರ್‌ಟೇಕ್ ಮಾಡುವ ವಿಚಾರಕ್ಕೆ ತೀವ್ರ ವಾಗ್ವಾದ ಹಾಗೂ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈ ರೋಷದಿಂದಲೇ ಆನಂದ್ ಟ್ರಾವೆಲ್ಸ್ ಚಾಲಕ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಪ್ರಯಾಣಿಕರಲ್ಲಿ ಆತಂಕ:

ದಿಢೀರ್ ನಡೆದ ಈ ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ನಡುಗಿ ಹೋಗಿದ್ದು, ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ. ಅದೃಷ್ಟವಶಾತ್, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ ಹಾಗೂ ಪ್ರಯಾಣಿಕರು ಗಂಭೀರ ಗಾಯಗಳಿಂದ ಪಾರಾಗಿದ್ದಾರೆ.

ರಸ್ತೆಯಲ್ಲೇ ಜಗಳ; 15 ನಿಮಿಷ ಸಂಚಾರ ಅಸ್ತವ್ಯಸ್ತ:

ಘಟನೆಯ ನಂತರವೂ ಎರಡೂ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ರಸ್ತೆಯಲ್ಲೇ ಪರಸ್ಪರ ಜಗಳವಾಡುತ್ತಾ ವಾಹನಗಳನ್ನು ಪಕ್ಕಕ್ಕೆ ಸರಿಸಲು ನಿರಾಕರಿಸಿದರು. ಸ್ಥಳೀಯ ನಿವಾಸಿಗಳು ಮತ್ತು ಆಟೋರಿಕ್ಷಾ ಚಾಲಕರು ಸರ್ವಿಸ್ ರಸ್ತೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ಕಿವಿಕೊಡಲಿಲ್ಲ. ಇದರಿಂದಾಗಿ ಸರ್ವಿಸ್ ರಸ್ತೆಯಲ್ಲಿ ಸುಮಾರು 15 ನಿಮಿಷಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.

ಪೊಲೀಸರ ತಕ್ಷಣದ ಕ್ರಮ:

ವಿಷಯ ತಿಳಿದ ಕೂಡಲೇ ಕಾಪು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಸಂಚಾರಕ್ಕೆ ಅಡ್ಡಿಪಡಿಸಿದ ಎರಡೂ ಬಸ್‌ಗಳನ್ನು ಕಾಪು ಪೊಲೀಸ್ ಠಾಣೆಗೆ ಕರೆದೊಯ್ದು ವಶಪಡಿಸಿಕೊಂಡಿದ್ದಾರೆ. ಸಮಯದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ.

ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್ ನಿಷೇಧಕ್ಕೆ ಆಗ್ರಹ:

ಈ ಘಟನೆಯು ಕಾಪು ಸರ್ವಿಸ್ ರಸ್ತೆಯಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ಅಜಾಗರೂಕ ಕಾರ್ಯಾಚರಣೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ನಿರಂತರ ಪೈಪೋಟಿ, ಅತಿವೇಗದ ಚಾಲನೆ ಮತ್ತು ಸಿಬ್ಬಂದಿಗಳ ಗಲಾಟೆಯಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು, ಸರ್ವಿಸ್ ರಸ್ತೆಯಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುವುದನ್ನು ತಕ್ಷಣವೇ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.

 

ಇತ್ತೀಚೆಗೆ ಖಾಸಗಿ ಬಸ್‌ಗಳ ನಡುವಿನ ಟೈಮಿಂಗ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕನೊಬ್ಬ ಕಬ್ಬಿಣದ ರಾಡ್ ಹಿಡಿದುಕೊಂಡು ( ಲಿವರ್) ಇನ್ನೊಂದು ಬಸ್ಸಿನೊಳಗೆ ನುಗ್ಗಿ, ಪ್ರಯಾಣಿಕರ ಕಣ್ಣೆದುರಲ್ಲೇ ಚಾಲಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿತ್ತು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ವಿಟ್ಲ: ಸರ್ಕಾರಿ ಬಸ್ ನಿರ್ವಾಹಕನಿಗೆ ಇನ್ನೋವಾ ಡಿಕ್ಕಿ – ಗಂಭೀರ ಗಾಯ

Published

on

ವಿಟ್ಲ: ಮಂಗಳೂರು-ವಿಟ್ಲ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಸಿನ ನಿರ್ವಾಹಕನಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಲಪದವು ಜಂಕ್ಷನ್‌ನಲ್ಲಿ ನಡೆದಿದೆ.

ಮಂಗಳೂರಿನಿಂದ ವಿಟ್ಲಕ್ಕೆ ಬರುತ್ತಿದ್ದ ಬಿ.ಸಿ.ರೋಡ್ ಡಿಪೋಗೆ ಸೇರಿದ KA 19 F 3176 ಸಂಖ್ಯೆಯ ಸರ್ಕಾರಿ ಬಸ್ ಮಂಗಲಪದವು ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬಸ್ ನಿರ್ವಾಹಕ ಕರೀಮುಲ್ಲಾ (41) ಅವರು ರಸ್ತೆಯ ಇನ್ನೊಂದು ಬದಿಯ ಅಂಗಡಿಗೆ ಬಾಳೆಹಣ್ಣು ತರಲು ಹೋಗಿದ್ದರು. ಮರಳಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ KL 65 K 6381 ಸಂಖ್ಯೆಯ ಇನ್ನೋವಾ ಕಾರು ನಿರ್ವಾಹಕನಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಕರೀಮುಲ್ಲಾ ಅವರಿಗೆ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಅವರನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತ ನಡೆದ ತಕ್ಷಣ ಜನ ಜಮಾಯಿಸುತ್ತಿದ್ದಂತೆ ಇನ್ನೋವಾ ಚಾಲಕ ಕಾರು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ಕಾರು ಚಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

Continue Reading

accident

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:
ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ

Continue Reading

accident

ಕುಂದಾಪುರ: ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ದುರಂತ ಸಾವು

Published

on

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಶಾಲಾ ಬಾಲಕಿಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಕೊಪ್ಪರಿಗೆ ಗುಡ್ಡೆ ಕಡುಬಿನ ಕೆರೆಯಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುದ್ದಿನಕೊಪ್ಪ ಮೂಲದ, ಪ್ರಸ್ತುತ ಮುಳ್ಳಿಕಟ್ಟೆ ಟೆಂಟ್ ಹೌಸ್‌ನಲ್ಲಿ ವಾಸವಾಗಿದ್ದ ಚಂದ್ರು ಬಸವರಾಜ ವೇಷಗಾರ ಎಂಬುವರ ಪುತ್ರಿ ಸುನೀತಾ (13) ಹಾಗೂ ಅವರ ಸಂಬಂಧಿ ದಿ. ಮಂಜುನಾಥ್ ಅವರ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಬ್ಬರೂ ಹೊಸಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಘಟನೆಯ ವಿವರ: ಭಾನುವಾರ ಸಂಜೆ ಟೆಂಟ್ ಹೌಸ್ ನಿವಾಸಿಗಳಾದ 5 ಮಕ್ಕಳು ಬಟ್ಟೆ ತೊಳೆಯಲು ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ತೆರಳಿದ್ದರು. ಕೆರೆಯ ದಡದಲ್ಲಿ ಸುನೀತಾ ಹಾಗೂ ವೈಶಾಲಿ ಬಟ್ಟೆ ಒಗೆಯುತ್ತಿದ್ದಾಗ, ಸುನೀತಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ವೈಶಾಲಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜೊತೆಯಲ್ಲಿದ್ದ ಇತರ ಮಕ್ಕಳು ಕೂಡಲೇ ವಿಷಯ ತಿಳಿಸಿದ್ದು, ಪಾಲಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ, ಸಂಜೆ 5.15ರ ಅಂದಾಜಿಗೆ ಇಬ್ಬರೂ ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.

ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಶವ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತ ಸುನೀತಾಳ ತಂದೆ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!