Connect with us

accident

ಅಪ್ರಾಪ್ತರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Published

on

ಪುತ್ತೂರು: ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಶಿಫ್ಟ್ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಾಜ ಸಮೀಪದ ತಾರಿಪಡ್ಪು ಎಂಬಲ್ಲಿ ನಡೆದಿದೆ.

ಘಟನೆಯ ವಿವರ: ಬೆಳಿಯೂರುಕಟ್ಟೆಯಿಂದ ಗುಮ್ಮಟಗದ್ದೆ ಕಡೆಗೆ ಸಾಗುವ ಮಾರ್ಗ ಮಧ್ಯೆ ತಾರಿಪಡ್ಪು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಬೆಳಿಯೂರುಕಟ್ಟೆ ಬೀಡು ಸರಕಾರಿ ಕಾಲೇಜಿನ ವಿದ್ಯಾರ್ಥಿ ನಂದನ್ ದ್ವಿಚಕ್ರ ವಾಹನ (KA 21 E 3589) ಚಲಾಯಿಸುತ್ತಿದ್ದು, ಪುತ್ತೂರು ಫಿಲೋಮಿನಾ ಹೈಸ್ಕೂಲ್ ವಿದ್ಯಾರ್ಥಿ ವಿಶಾಲ್ ಹಿಂಬದಿ ಸವಾರನಾಗಿದ್ದನು. ಇಂದು ರಜಾ ದಿನವಾಗಿದ್ದರಿಂದ ಇಬ್ಬರೂ ಸಾಜ ಕಡೆಗೆ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಎದುರಿನಿಂದ ಬರುತ್ತಿದ್ದ ಕೌಡಿಚಾರ್ ಮೂಲದ ಲೈನ್ ಸೇಲ್ಸ್‌ನ ಶಿಫ್ಟ್ ಕಾರಿಗೆ (KA 09 MG 1933) ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ಭೀಕರತೆಗೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗುರುತು ಸಿಗದಂತಾಗಿದೆ. ಇತ್ತ ಕಾರಿನ ಮುಂಭಾಗ ಜಖಂಗೊಂಡಿದ್ದು, ಏರ್ ಬ್ಯಾಗ್ ತೆರೆದುಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದ ತೀವ್ರತೆಯಿಂದಾಗಿ ಇಬ್ಬರೂ ಅಪ್ರಾಪ್ತರ ಕೈ ಮತ್ತು ಕಾಲುಗಳು ಮುರಿತಕ್ಕೊಳಗಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪ್ರಗತಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ನಂದನ್ ಮತ್ತು ವಿಶಾಲ್ ಇಬ್ಬರೂ ದೊಡ್ಡಡ್ಕ ಸಮೀಪದ ಬಂಗಾರಡ್ಕದ ನೆರೆಕರೆಯ ನಿವಾಸಿಗಳಾಗಿದ್ದಾರೆ.

ಹೆಲ್ಮೇಟ್ ಇಲ್ಲ, ಮಿತಿಮೀರಿದ ವೇಗ: ಅಪ್ರಾಪ್ತರು ಬೆಳಿಯೂರುಕಟ್ಟೆಯಿಂದ ಹೊರಡುವಾಗಲೇ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದರು ಮತ್ತು ಇಬ್ಬರೂ ಹೆಲ್ಮೇಟ್ ಧರಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಂದನ್ ಅವರ ಸಹೋದರನಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 96-20262, ಕಲಂ: 281,125(a) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸದ್ರಿ ದ್ವಿಚಕ್ರ ಸವಾರ ಹಾಗೂ ಸಹಸವಾರ ಇಬ್ಬರೂ ಅಪ್ರಾಪ್ತರೆಂದು ತಿಳಿದುಬಂದಿರುತ್ತದೆ. ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಕೊಳ್ಳಲಾಗುವುದು

ಮಾಧ್ಯಮ ಜಾಗೃತಿ ಪ್ರಕಟಣೆ: ಪೋಷಕರೇ ಎಚ್ಚರ.. ಎಚ್ಚರ..!

“ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಆಪತ್ತಿಗೆ ಕಾರಣವಾಗದಿರಲಿ”

ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕರು (ಡ್ರೈವಿಂಗ್ ಲೈಸೆನ್ಸ್ ಇಲ್ಲದವರು) ರಸ್ತೆಗಿಳಿದು ಮಿತಿಮೀರಿದ ವೇಗದಲ್ಲಿ ಬೈಕ್ ಚಲಾಯಿಸುವುದು ಮತ್ತು ಆ ಮೂಲಕ ಭೀಕರ ಅಪಘಾತಗಳಿಗೆ ಈಡಾಗುವುದು ಹೆಚ್ಚಾಗುತ್ತಿದೆ. ಇಂದಿನ ಘಟನೆಯೂ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಪೋಷಕರ ಜವಾಬ್ದಾರಿ ಮುಖ್ಯ: ಮಕ್ಕಳಿಗೆ ಕಾನೂನುಬದ್ಧವಾಗಿ ಲೈಸೆನ್ಸ್ ಸಿಗುವ ಮುನ್ನ ಯಾವುದೇ ಕಾರಣಕ್ಕೂ ವಾಹನಗಳನ್ನು ನೀಡಬೇಡಿ. ನಿಮ್ಮ ಸಣ್ಣ ನಿರ್ಲಕ್ಷ್ಯ ಮಕ್ಕಳ ಜೀವಕ್ಕೆ ಕಂಟಕವಾಗಬಹುದು.

ಕಾನೂನು ಕ್ರಮ ಕಠಿಣ: ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಅಥವಾ ವಾಹನ ಮಾಲೀಕರ ಮೇಲೆಯೂ ಈಗ ಕಾನೂನು ರೀತ್ಯಾ ಕಠಿಣ ಕರಾರು ಮತ್ತು ದಂಡ ವಿಧಿಸಲು ಅವಕಾಶವಿದೆ.

ಹೆಲ್ಮೇಟ್ ಕಡ್ಡಾಯವಾಗಿರಲಿ: ದ್ವಿಚಕ್ರ ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ನಿಮ್ಮ ಮಕ್ಕಳ ಭವಿಷ್ಯ ಮತ್ತು ಜೀವ ಅಮೂಲ್ಯವಾದದ್ದು. ಅವರಿಗೆ ವಾಹನ ನೀಡುವ ಮುನ್ನ ನೂರು ಬಾರಿ ಯೋಚಿಸಿ




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:
ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ

Continue Reading

accident

ಕುಂದಾಪುರ: ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ದುರಂತ ಸಾವು

Published

on

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಶಾಲಾ ಬಾಲಕಿಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಕೊಪ್ಪರಿಗೆ ಗುಡ್ಡೆ ಕಡುಬಿನ ಕೆರೆಯಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುದ್ದಿನಕೊಪ್ಪ ಮೂಲದ, ಪ್ರಸ್ತುತ ಮುಳ್ಳಿಕಟ್ಟೆ ಟೆಂಟ್ ಹೌಸ್‌ನಲ್ಲಿ ವಾಸವಾಗಿದ್ದ ಚಂದ್ರು ಬಸವರಾಜ ವೇಷಗಾರ ಎಂಬುವರ ಪುತ್ರಿ ಸುನೀತಾ (13) ಹಾಗೂ ಅವರ ಸಂಬಂಧಿ ದಿ. ಮಂಜುನಾಥ್ ಅವರ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಬ್ಬರೂ ಹೊಸಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಘಟನೆಯ ವಿವರ: ಭಾನುವಾರ ಸಂಜೆ ಟೆಂಟ್ ಹೌಸ್ ನಿವಾಸಿಗಳಾದ 5 ಮಕ್ಕಳು ಬಟ್ಟೆ ತೊಳೆಯಲು ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ತೆರಳಿದ್ದರು. ಕೆರೆಯ ದಡದಲ್ಲಿ ಸುನೀತಾ ಹಾಗೂ ವೈಶಾಲಿ ಬಟ್ಟೆ ಒಗೆಯುತ್ತಿದ್ದಾಗ, ಸುನೀತಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ವೈಶಾಲಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜೊತೆಯಲ್ಲಿದ್ದ ಇತರ ಮಕ್ಕಳು ಕೂಡಲೇ ವಿಷಯ ತಿಳಿಸಿದ್ದು, ಪಾಲಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ, ಸಂಜೆ 5.15ರ ಅಂದಾಜಿಗೆ ಇಬ್ಬರೂ ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.

ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಶವ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತ ಸುನೀತಾಳ ತಂದೆ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

accident

ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ

Published

on

ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ, ಸ್ಥಳೀಯ RSS ಮುಖಂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಕೋಟ ಮಣೂರು ನಿವಾಸಿ, ಆರ್‌ಎಸ್‌ಎಸ್ ಮುಖಂಡ ಗುರುದಾಸ್ ಶೆಣೈ ಮೃತಪಟ್ಟವರು. ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರ ಗಾಯಗೊಂಡ ಕಾರು ಚಾಲಕ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಿಗ್ಗೆ ಗುರುದಾಸ್ ಶೆಣೈ ಅವರು ಕೋಟ ಜಂಕ್ಷನ್ ಬಳಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿ ಕಡೆಯಿಂದ ಕುಂದಾಪುರದತ್ತ ಅತಿವೇಗವಾಗಿ ಧಾವಿಸಿ ಬಂದ ಕಾರು ಸೈಕಲ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭರಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇತ್ತ ಸೈಕಲ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಗುರುದಾಸ್ ಶೆಣೈ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಚಾಲಕ ಪ್ರದೀಪ್ ಕಾಂಚನ್ ಅವರಿಗೂ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!