Connect with us

Belthangady

ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ, ಮರುತನಿಖೆಗೆ ಹಸಿರು ನಿಶಾನೆ?

Published

on

ನವದೆಹಲಿ: ಕಳೆದ 13 ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಇಂದು (ಏಪ್ರಿಲ್ 29, 2026) ಮಹತ್ವದ ತಿರುವು ಸಿಕ್ಕಿದೆ. ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ವಿಳಂಬ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುವುದರ ಜೊತೆಗೆ ಮರುತನಿಖೆಯ ಸಾಧ್ಯತೆಗಳ ಬಗ್ಗೆ ಸ್ಪಷ್ಟನೆ ಕೇಳಿದೆ.

ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಕಟು ಪ್ರಶ್ನೆಗಳು

ವಿಚಾರಣೆ ವೇಳೆ ನ್ಯಾಯಪೀಠವು ರಾಜ್ಯ ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದರೂ ಕೌಂಟರ್ ಅಫಿಡವಿಟ್ ಸಲ್ಲಿಸದಿದ್ದಕ್ಕೆ ಕಿಡಿ ಕಾರಿದ ನ್ಯಾಯಾಧೀಶರು, “ಇಂತಹ ಗಂಭೀರ ಪ್ರಕರಣವನ್ನು ನೀವು ಇಷ್ಟು ಹಗುರವಾಗಿ ಪರಿಗಣಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಸರ್ಕಾರದ ನಿರಾಸಕ್ತಿಯು ತನಿಖೆಯ ಹಾದಿಯ ಬಗ್ಗೆ ಅನುಮಾನ ಮೂಡಿಸುವಂತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಕಲಾಪದ ಪ್ರಮುಖ ಮುಖ್ಯಾಂಶಗಳು:

ಸಾಕ್ಷಿಗಳ ಸಾವು ಮತ್ತು ಆತಂಕ: ಪ್ರಕರಣದಲ್ಲಿ ಪ್ರಮುಖವಾಗಿದ್ದ ಸುಮಾರು 5 ಮಂದಿ ಸಾಕ್ಷಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂಬ ಅಂಶವನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದು ತನಿಖೆಯ ದಿಕ್ಕನ್ನು ಬದಲಿಸುವ ಪ್ರಮುಖ ಅಂಶವಾಗಿ ಚರ್ಚೆಯಾಯಿತು.

ಸಾಕ್ಷಿಗಳಿಗೆ ತಕ್ಷಣದ ರಕ್ಷಣೆ: ಪ್ರಸ್ತುತ ಲಭ್ಯವಿರುವ ಸಾಕ್ಷಿಗಳಿಗೆ ಯಾವುದೇ ಅಪಾಯ ಉಂಟಾಗದಂತೆ ತಕ್ಷಣವೇ ಸೂಕ್ತ ರಕ್ಷಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.

ಮರುತನಿಖೆ ಮತ್ತು SIT ರಚನೆ: ಪ್ರಕರಣದಲ್ಲಿ ಹೊಸ ಸಾಕ್ಷ್ಯಗಳು ಅಥವಾ ಡಿಎನ್‌ಎ (DNA) ಪುರಾವೆಗಳ ಲಭ್ಯತೆಯ ಸಾಧ್ಯತೆ ಇರುವುದರಿಂದ, ವಿಶೇಷ ತನಿಖಾ ತಂಡ (SIT) ಮೂಲಕ ಮರುತನಿಖೆ ನಡೆಸುವ ಕುರಿತು ಸರ್ಕಾರದ ನಿಲುವು ತಿಳಿಸಲು ಸೂಚಿಸಲಾಗಿದೆ.

CBI ವೈಫಲ್ಯದ ಪ್ರಸ್ತಾಪ: ಈ ಹಿಂದೆ ಸಿಬಿಐ ನಡೆಸಿದ ತನಿಖೆಯಲ್ಲಿ ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡದ ಗಂಭೀರ ಲೋಪದ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸಿತು.

“ಸತ್ಯಕ್ಕೆ ಸಾವಿಲ್ಲ”: ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಹರ್ಷ

ಸುಪ್ರೀಂ ಕೋರ್ಟ್‌ನ ಈ ಬೆಳವಣಿಗೆಯನ್ನು “ಸೌಜನ್ಯ ಹೋರಾಟಕ್ಕೆ ಸಂದ ಜಯ” ಎಂದು ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಬಣ್ಣಿಸಿದ್ದಾರೆ. ದೆಹಲಿಯಿಂದ ಹೇಳಿಕೆ ಬಿಡುಗಡೆ ಮಾಡಿದ ಅವರು: “13 ವರ್ಷಗಳ ಕಠಿಣ ಹಾದಿಯಲ್ಲಿ ಎದೆಗುಂದದೆ ನಿಂತ ಪ್ರತಿ ಧ್ವನಿಗೆ ಇಂದು ಮನ್ನಣೆ ಸಿಕ್ಕಿದೆ. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ನ್ಯಾಯವಾದಿಗಳ ಸತತ ಪರಿಶ್ರಮ ಇಂದು ಆಶಾದಾಯಕ ಕಿರಣವನ್ನು ಮೂಡಿಸಿದೆ. ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿರುವುದು ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ಮಾಡಿದೆ,” ಎಂದು ತಿಳಿಸಿದರು.

ಮುಂದಿನ ಹಾದಿ ಏನು?

ಸುಪ್ರೀಂ ಕೋರ್ಟ್ ಮುಂದಿನ ಎರಡು ವಾರಗಳ ಒಳಗೆ ಮರುತನಿಖೆಯ ಬಗ್ಗೆ ತನ್ನ ನಿಲುವನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಸೂಚಿಸಿದೆ. ಜುಲೈ 14 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಪ್ರಕರಣವು ಸಂಪೂರ್ಣವಾಗಿ ಮರುತನಿಖೆಗೆ ಒಳಪಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶೋಭಾ ಗುಪ್ತ, ಶೇಖರ್ ದೇವಸ, ನೂಲವಿ, ಅಶುತೋಷ್ ದುಬೆ ಹಾಗೂ ಸಂತೋಷ್ ರಾವ್ ಪರವಾಗಿ ಗುರುರಾಜ್ ಅವರು ವಾದ ಮಂಡಿಸಿದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Published

on

ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

Belthangady

ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ

Published

on

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ತಿದ್ದುಪಡಿ ಆದೇಶದ ಪ್ರಕಾರ:

  1. ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
  2. ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ

ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.

Continue Reading

Belthangady

ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!

Published

on

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.

ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.

ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್‌ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!