Connect with us

Bantawala

ವಿಟ್ಲದ ಅನಿಕೇತ್ ನೀರಿನಲ್ಲಿ ಮುಳುಗಿ ಸಾವು; ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿ

Published

on

ಜಯಪುರ: ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಪ್ಪ ಜಯಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಯು ವಿಟ್ಲದ ಬಾಲಕನಾಗಿದ್ದಾನೆ.

ಘಟನೆಯ ವಿವರ: ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕೇತ್ (14) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದನು. ತಕ್ಷಣವೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಕುಟುಂಬದ ಹಿನ್ನೆಲೆ:ಮೃತ ಅನಿಕೇತ್ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು,ವಿಟ್ಲ ಖಾಸಗೀ ಬಸ್ಸು ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಹಿಂದೂ ಸಂಘಟನೆಗಳು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಗನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಈಗಾಗಲೇ ನಡೆಸಲಾಗಿದ್ದು ಇಂದು ರಾತ್ರಿಯೇ ಜಯಪುರದಿಂದ ವಿಟ್ಲಕ್ಕೆ ಮೃತದೇಹ ತರಲಾಗುವುದು. ನಾಳೆ(ಸೋಮವಾರ) ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಖಚಿತ ಮೂಲಗಳು ತಿಳಿಸಿವೆ.

ಈ ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಬಂಟ್ವಾಳ: ಪುಣಚದಲ್ಲಿ ಯುವಕ ನೇಣಿಗೆ ಶರಣು

Published

on

ಪುಣಚ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರಿಬೆಟ್ಟು ನಿವಾಸಿ ಕುಂಞಣ್ಣ ಮಣಿಯಾಣಿ ಅವರ ಪುತ್ರ ಹರ್ಷಿತ್ ಮಣಿಯಾಣಿ (29) ಶನಿವಾರ ಬೆಳಿಗ್ಗೆ ತಮ್ಮ ಮನೆಯ ಹಿಂಭಾಗದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಘಟನೆಯ ವಿವರ: ಮೃತ ಹರ್ಷಿತ್ ಕಳೆದ ಐದಾರು ವರ್ಷಗಳಿಂದ ಪುಣಚ ಗ್ರಾಮದ ಬೈಲುಗುತ್ತು ಜಗನ್ನಾಥ ರೈ ಅವರ ಪುತ್ರಿ ಶುಕ್ಲಾ ವಿಜಯ ರೈ ಅವರ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪುತ್ತೂರಿನಲ್ಲಿರುವ ಅವರ ಜಮೀನಿಗೆ ಕೆಲಸದಾಳುಗಳನ್ನು ಕರೆದುಕೊಂಡು ಹೋಗುವ ಮತ್ತು ಇತರೆ ಕೆಲಸಗಳನ್ನು ಇವರು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದರು. ಒಂದೆರಡು ಗೆಳೆಯರನ್ನು ಬಿಟ್ಟರೆ ಯಾರ ಸಂಪರ್ಕದಲ್ಲಿಯೂ ಇರಲಿಲ್ಲ. ಶುಕ್ರವಾರ ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಹೊರಾಂಗಣದಲ್ಲಿ ಮಲಗಿದ್ದ ಹರ್ಷಿತ್, ಶನಿವಾರ ಬೆಳಿಗ್ಗೆ ಮನೆಯವರು ನೋಡುವಾಗ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಹಿಂಭಾಗದ ಗುಡ್ಡದ ಮರವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಯಾರೊಂದಿಗೂ ಅತಿಯಾಗಿ ಮಾತನಾಡದ ಸಾಧು ಸ್ವಭಾವದವರಾಗಿದ್ದ ಹರ್ಷಿತ್, ಕಳೆದ ಒಂದು ವಾರದಿಂದ ಇನ್ನಷ್ಟು ಮೌನವಾಗಿ ಯಾರಲ್ಲೂ ಮಾತನಾಡದೆ ಯಾವುದೋ ಬೇಸರದಲ್ಲಿ ಬಳಲುತ್ತಿದ್ದರು ಎನ್ನಲಾಗಿದೆ. ತಾಯಿಯ ಅನಾರೋಗ್ಯದ ಬಗ್ಗೆಯೂ ಅತಿಯಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ. ಆದರೆ, ಇವರ ಈ ಸಾವಿಗೆ ಯಾರಾದರೂ ಬೆದರಿಕೆ ಹಾಕಿರಬಹುದೇ ಎಂಬ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬೆದರಿಕೆಗೆ ಹೆದರಿ ಹರ್ಷಿತ್ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕುಟುಂಬದಲ್ಲಿ ಶೋಕದ ಛಾಯೆ: ಮೃತ ಯುವಕ ತಂದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯೊಂದಿಗೆ ವಾಸವಾಗಿದ್ದರು. ಇಬ್ಬರು ಸಹೋದರಿಯರಿಗೆ ಈಗಾಗಲೇ ವಿವಾಹವಾಗಿದೆ. ಆಘಾತದ ಮೇಲೆ ಆಘಾತವೆಂಬಂತೆ, ಹರ್ಷಿತ್ ಅವರ ತಂದೆಯ ಸಹೋದರಿಯ ಪುತ್ರ ಕೂಡ ಹಲವಾರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದೇ ಏಪ್ರಿಲ್ 23ರಂದು ಅವರ ತಂದೆಯ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ನಿಗದಿಯಾಗಿದ್ದು, ಈಗಾಗಲೇ ಗೊನೆ ಮುಹೂರ್ತವೂ ನೆರವೇರಿತ್ತು. ಶುಭ ಕಾರ್ಯದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಗನ ಸಾವು ಬರಸಿಡಿಲು ಬಡಿದಂತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

Continue Reading

Article

ಪೆರುವಾಯಿ: ಅಂಗನವಾಡಿ ಮಕ್ಕಳಿಗೆ ಕಲುಷಿತ ನೀರು ಪೂರೈಕೆ, ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ

Published

on

ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ/ಗ್ರಾಮ ಪಂಚಾಯತ್ ಕಛೇರಿ/ಭಜನಾ ಮಂದಿರಕ್ಕೆ ಕಳೆದ 6 ತಿಂಗಳಿಂದ ಕಲುಷಿತ ಕುಡಿಯುವ ನೀರು ಪೂರೈಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮಕ್ಕಳ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜು ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:
ಪೆರುವಾಯಿ ಅಂಗನವಾಡಿ, ಗ್ರಾಮ ಪಂಚಾಯತ್ ಕಛೇರಿ ಹಾಗೂ ಭಜನಾ ಮಂದಿರಕ್ಕೆ ಸರಬರಾಜಾಗುತ್ತಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಯಲ್ಲಿನ ನೀರಿನ ಮಾದರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಪಂಚಾಯತ್ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ, ಅದು ತೀವ್ರವಾಗಿ ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಲ್ಲ ಎಂದು 29-10-2025 ರಂದು ಪೆರುವಾಯಿ ಗ್ರಾಮ ಪಂಚಾಯತ್‌ಗೆ ವರದಿ ನೀಡಲಾಗಿತ್ತು.

ಜೊತೆಗೆ ಆ ನೀರನ್ನು ಬಳಸದಂತೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿತ್ತು. ಆದರೂ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ದಿನಾಂಕ 13-04-2026 ರಂದು ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮತ್ತೆ ನೀರಿನ ಮಾದರಿ ಪರೀಕ್ಷಿಸಿದಾಗಲೂ ಅದೇ ತೆರೆದ ಬಾವಿಯ ನೀರು ಕಲುಷಿತವಾಗಿದೆ ಎಂಬ ವರದಿ ಬಂದಿದೆ.

ಮಕ್ಕಳ/ಗ್ರಾಮಸ್ಥರ ಆರೋಗ್ಯಕ್ಕೆ ಗಂಡಾಂತರ:
ಕಲುಷಿತ ಎಂದು ಆರು ತಿಂಗಳಲ್ಲಿ ಎರಡು ಬಾರಿ ವರದಿ ಬಂದಿದ್ದರೂ ಇಂದಿಗೂ ಅದೇ ಕಲುಷಿತ ನೀರನ್ನು ಪೆರುವಾಯಿ ಅಂಗನವಾಡಿ ಕೇಂದ್ರಕ್ಕೆ ಹಾಗೂ ಗ್ರಾಮದ ವಿವಿಧ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಎಳೆಯ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ನಿರ್ಲಕ್ಷ್ಯ ಅತ್ಯಂತ ಗಂಭೀರ ಮತ್ತು ಖಂಡನೀಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಆಗ್ರಹ:
ಇಂತಹ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಎಸಗಿದ ಪಿಡಿಒ ದೀಪಕ್ ರಾಜು ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ತುರ್ತಾಗಿ ಶುದ್ಧ, ಸುರಕ್ಷಿತ ಹಾಗೂ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Continue Reading

Bantawala

ಆಕಸ್ಮಿಕ ಬೆಂಕಿ.. ಹೊತ್ತಿ ಉರಿದ ಗುಡ್ಡ..

Published

on

ವಿಟ್ಲ: ಕಂಬಳಬೆಟ್ಟು ಜನಪ್ರಿಯ ವಿದ್ಯಾಸಂಸ್ಥೆ ಹಿಂಭಾಗದಲ್ಲಿರುವ ಗುಡ್ಡ ಆಕಸ್ಮಿಕ ಬೆಂಕಿ ದುರಂತದಿಂದಾಗಿ ಹೊತ್ತಿ ಉರಿಯುತ್ತಿದೆ. ಬದನಾಜೆ ಎಂಬಲ್ಲಿನ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಗಿಡಮರಗಳು ಬೆಂಕಿಯ ಕೆನ್ನಾಲೆಗೆಗೆ ಭಸ್ಮವಾಗಿವೆ.

ವಿಟ್ಲ-ಪುತ್ತೂರು ಮುಖ್ಯ ರಸ್ತೆಗೆ ತಾಗಿಕೊಂಡಿರುವ ಬದನಾಜೆ ಎಂಬಲ್ಲಿನ ಗುಡ್ಡದಲ್ಲಿ ಸಂಜೆಯ ಹೊತ್ತಿಗೆ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ಜರೂ ಯಾರೊಬ್ಬರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕತ್ತಲಾಗುತ್ತಿದ್ದಂತೆ ಬೆಂಕಿ ಮತ್ತಷ್ಟು ಪಸರಿಸಿದ ಕಾರಣ ಭಾರಿ ಪ್ರಮಾಣದಲ್ಲಿ ಗಿಡ-ಮರಗಳು ಹೊತ್ತಿ ಉರಿದಿವೆ‌. ಆ ಬಳಿಕ ಅಪಾಯವನ್ನರಿತ ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!