Connect with us

crime

ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತು ; “ನಮಗೆ ಭಯ ಶುರುವಾಗಿದೆ, ನ್ಯಾಯಾಲಯ ದಯವಿಟ್ಟು ಜಾಮೀನು ರದ್ದುಗೊಳಿಸಬೇಕು” ಸಂತ್ರಸ್ತೆ ಮನವಿ

Published

on

ದೇಶವನ್ನೇ ಬೆಚ್ಚಿ ಬೀಳಿಸಿದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತಿನಲ್ಲಿಟ್ಟಿದೆ.

ನ್ಯಾಯಾಲಯದ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಇಂಡಿಯಾ ಗೇಟ್ ಬಳಿ ಪ್ರಕರಣದ ಸಂತ್ರಸ್ತೆ, ಆಕೆಯ ತಾಯಿ ಪ್ರತಿಭಟನೆ ನಡೆಸಿ “ನ್ಯಾಯಾಲಯದ ಆದೇಶದಿಂದ ನಾವು ಭಯದಲ್ಲಿ ಬದುಕುವಂತಾಗಿದೆ. ವ್ಯವಸ್ಥೆ ನಮಗೆ ದ್ರೋಹ ಬಗೆದಿದೆ” ಎಂದು ಪ್ರತಿಭಟನೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ಇವರಿಗೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯೋಗಿತಾ ಭಯನಾ ಸಾಥ್ ನೀಡಿದರು.

ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಆಕೆ, “ಜಾಮೀನು ನೀಡಿದ ಸಮಯವು ರಾಜಕೀಯ ಪ್ರೇರಿತವಾಗಿದ್ದು. ಇದಕ್ಕೂ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಸಂಬoಧವಿದೆ ಎಂದಿದ್ದಾರೆ.

“ನಮಗೆ ಅನ್ಯಾಯ ಮಾಡಲಾಗಿದೆ. ಚುನಾವಣೆ ಬರುತ್ತಿದೆ. ಕುಲದೀಪ್ ಸಿಂಗ್ ಸೆಂಗಾರ್ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ. “ಇಂತಹ ಅತ್ಯಾಚಾರ ಆರೋಪಿ ಹೊರಬಂದರೆ, ನಾವು ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು? ಪ್ರಶ್ನಿಸಿದ್ದಾರೆ.

“ದೆಹಲಿ ನ್ಯಾಯಾಲಯದಿಂದ ಶಿಕ್ಷೆ ಅಮಾನತಿನಲ್ಲಿಟ್ಟ ಆದೇಶ ಹೊರಬಿದ್ದ ಬಳಿಕ ನಮಗೆ ಭಯ ಶುರುವಾಗಿದೆ. ನ್ಯಾಯಾಲಯ ದಯವಿಟ್ಟು ಜಾಮೀನು ರದ್ದುಗೊಳಿಸಬೇಕು” ಎಂದು ಸಂತ್ರಸ್ತೆ ಮನವಿ ಮಾಡಿದ್ದು, ನೋವಿನ ನಡುವೆಯೂ ಆಕೆ, “ನನಗೆ ನ್ಯಾಯಾಂಗದ ಮೇಲೆ ಇನ್ನೂ ನಂಬಿಕೆ ಇದೆ” ಎಂದು ಹೇಳಿದ್ದು, ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಮೂವರನ್ನೂ ಸ್ಥಳದಿಂದ ಕರೆದೊಯ್ದರು. ಪೊಲೀಸರು ಅವರನ್ನು ತಮ್ಮ ವಾಹನಕ್ಕೆ ಹತ್ತಿಸಿದ ಮತ್ತು ಪ್ರತಿಭಟನೆಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿದ ವಿಡಿಯೋಗಳನ್ನು ಮಾಧ್ಯಮಗಳು ತೋರಿಸಿವೆ.

ಹೋರಾಟಗಾರ್ತಿ ಯೋಗಿತಾ ಅವರು, ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ನೀಡಿದ ಕಾರಣವನ್ನು ಪ್ರಶ್ನಿಸಿದ್ದಾರೆ. ಕಾನೂನು ಹೋರಾಟದ ವೇಳೆ ಪೂರ್ತಿಯಾಗಿ ಸಂತ್ರಸ್ತೆ ಮತ್ತು ಆಕೆಯ ತಾಯಿ ಪ್ರತ್ಯೇಕವಾಗಿ (ಏಕಾಂಗಿಯಾಗಿ) ಇದ್ದರು ಎಂದಿದ್ದಾರೆ.

ಸoತ್ರಸ್ತೆ ಮತ್ತು ಆಕೆಯ ತಾಯಿ ತುಂಬಾ ಕಷ್ಟಗಳನ್ನು ಎದುರಿಸಿ ಕಾನೂನು ಹೋರಾಟ ನಡೆಸುವ ಮೂಲಕ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರು. ಆದರೆ, ಈಗ ಏನಾಯಿತು? ಅಪರಾಧಿಗೆ ಜಾಮೀನು ಸಿಕ್ಕಿತು. ದೇಶದಲ್ಲಿ ಅತ್ಯಾಚಾರಿಗಳು ಜಾಮೀನು ಪಡೆಯುತ್ತಿದ್ದಾರೆ, ಅಮಾಯಕರು ಜೈಲಲ್ಲಿದ್ದಾರೆ. ಹೈಕೋರ್ಟ್ ಆದೇಶದ ಬಳಿಕ ಸಂತ್ರಸ್ತೆ ಮತ್ತು ಆಕೆಯ ತಾಯಿ ಭಯದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಸಂತ್ರಸ್ತೆಯ ಸಹೋದರಿ ಕೂಡ ಜಾಮೀನು ದೊರೆತಿರುವ ಕುರಿತು ಮಾತನಾಡಿದ್ದು, “ಅಪರಿಚಿತ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ, ನಮಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಅವನು ಸೆಂಗಾರ್ ಮೊದಲು ನನ್ನ ಚಿಕ್ಕಪ್ಪನನ್ನು ಕೊಂದ, ಬಳಿಕ ನನ್ನ ಅಪ್ಪನನ್ನು ಕೊಂದ. ನಂತರ ನನ್ನ ಸಹೋದರಿ ಮೇಲೆ ದೌರ್ಜನ್ಯ ನಡೆಯಿತು. ಎಲ್ಲಾ ಪ್ರಕರಣಗಳು ಆತನಿಗೆ ಸಂಬoಧಿಸಿದೆ. ಆದರೆ, ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾವು ಇನ್ನೂ ಭಯದಲ್ಲಿದ್ದೇವೆ. ಕೊನೆಪಕ್ಷ ನಾವು ಜೈಲಲ್ಲಿ ಇದ್ದರೆ ಜೀವಂತ ಇರಬಹುದು” ಎಂದು ಆತಂಕ, ನೋವು ತೋಡಿಕೊಂಡಿದ್ದಾರೆ. “ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ” ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದೆಹಲಿಯ ಇಂಡಿಯಾ ಗೇಟ್ ಎದುರು ನೋವಿನಿಂದ ಹೇಳಿದ ಮಾತು.

ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯವು 2019ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ವಿರುದ್ದ ಸೆಂಗಾರ್ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೇಲ್ಮನವಿ ವಿಚಾರಣೆ ಮುಗಿಯುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿದೆ.

ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠವು 15 ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಸಲ್ಲಿಸಬೇಕೆಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

ಆದಾಗ್ಯೂ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬoಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಸೆಂಗಾರ್‌ಗೆ ಜಾಮೀನು ಸಿಗದ ಕಾರಣ ಆತ ಸದ್ಯಕ್ಕೆ ಬಂಧನದಲ್ಲೇ ಇರುತ್ತಾರೆ. ಆ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದಿಗೆ ಅವರ ಮೇಲ್ಮನವಿ ಇನ್ನೂ ದೆಹಲಿ ಹೈಕೋರ್ಟ್ನಲ್ಲಿ ಬಾಕಿ ಇದೆ.

ಬೆಚ್ಚಿ ಬೀಳಿಸಿದ ಪ್ರಕರಣ ಬಾಲಕಿಗೆ ನಿರಂತರ ಅತ್ಯಾಚಾರ; ಉನ್ನಾವೋ ಅತ್ಯಾಚಾರ ಪ್ರಕರಣ
17 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಿ ವಿಚಾರಣಾ ನ್ಯಾಯಾಲ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಮೇಲ್ಮನವಿ ಸಲ್ಲಿಸಿದ್ದಾರೆ.

ಸೆಂಗಾರ್ 17 ವರ್ಷದ ಬಾಲಕಿಯನ್ನು ಅಪಹರಿಸಿ 2017ರ ಜೂನ್ 11ರಿಂದ 20 ನಡುವೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಕೊನೆಗೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದರು.

ಈ ನಡುವೆ ಸೆಂಗಾರ್‌ನ ಅನತಿಯಂತೆ ಪೊಲೀಸರು ಬಾಲಕಿಗೆ ನಿರಂತರ ಬೆದರಿಕೆ ಹಾಕಿದ್ದರು. ದೌರ್ಜನ್ಯದ ವಿರುದ್ದ ಮಾತನಾಡದಂತೆ ಬಾಯಿ ಮುಚ್ಚಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಅoತಿಮವಾಗಿ ಅಲಹಾಬಾದ್ ಹೈಕೋರ್ಟ್ನ ಆದೇಶದ ಬಳಿಕ ಪೊಲೀಸರು ಸೆಂಗಾರ್ ವಿರುದ್ದ ಅಪಹರಣ, ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಆಗಸ್ಟ್ 2019ರಲ್ಲಿ, ಘಟನೆಗೆ ಸಂಬoಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿ, ದಿನನಿತ್ಯದ ವಿಚಾರಣೆ ನಡೆಸಿ 45 ದಿನಗಳಲ್ಲಿ ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.

ಡಿಸೆಂಬರ್ 2019ರಲ್ಲಿ, ವಿಚಾರಣಾ ನ್ಯಾಯಾಲಯವು ಸೆಂಗಾರ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲದೆ, ಕುಟುಂಬ ಬಯಸಿದರೆ ಸುರಕ್ಷಿತ ಮನೆ ಮತ್ತು ಗುರುತಿನ ಬದಲಾವಣೆಯ ಮೂಲಕ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಜೀವನ ಮತ್ತು ಸ್ವಾತಂತ್ರ‍್ಯವನ್ನು ರಕ್ಷಿಸಲು ಸಿಬಿಐ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯವು ನಿರ್ದೇಶಿಸಿತು.

ಸೆಂಗಾರ್‌ಗೆ ಗರಿಷ್ಠ ಶಿಕ್ಷೆ ವಿಧಿಸುವಾಗ, ವಿಚಾರಣಾ ನ್ಯಾಯಾಲಯವು ಆತನಿಗೆ ಶಿಕ್ಷೆ ಕಡಿತಗೊಳಿಸುವ ಯಾವುದೇ ಅಗತ್ಯತೆ ಇಲ್ಲ ಎಂದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೇವಕನಾಗಿದ್ದ ಸೆಂಗಾರ್ ಜನರ ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.

ನ್ಯಾಯಾಲಯ ಸೆಂಗಾರ್‌ಗೆ ಶಿಕ್ಷೆ ವಿಧಿಸುವ ಮುನ್ನ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು.

ಈ ಸಂಬoಧ ಸೆಂಗಾರ್ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ 2021ರಲ್ಲಿ, ಅಪಘಾತವನ್ನು ಸೆಂಗಾರ್ ಅವರೇ ಆಯೋಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳು ದೊರೆಯದ ಕಾರಣ ದೆಹಲಿ ನ್ಯಾಯಾಲಯವು ಅವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

Published

on


​ಮಂಗಳೂರು: ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
​ಕಾರ್ಯಾಚರಣೆಯ ವಿವರ:
​ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಒಟ್ಟು ₹25,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
​ಈ ಪೈಕಿ ಈಗಾಗಲೇ ₹15,000 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಬಳಿಕ ಹೆಚ್ಚುವರಿಯಾಗಿ ಮತ್ತೊಮ್ಮೆ ₹5,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಬೇಸತ್ತ ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.
​ದೂರಿನ ಅನ್ವಯ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.


​ಹಿನ್ನೆಲೆ ಮತ್ತು ಹಳೆಯ ಆರೋಪಗಳು:
​ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರ ಮೇಲೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು:
​ಕಳ್ಳತನ ಪ್ರಕರಣದಲ್ಲಿ ಲಂಚ: ಉಳ್ಳಾಲದ ಮನೆಯೊಂದರಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಳ್ಳುವಾಗಲೂ ಲಂಚ ಪಡೆದ ಆರೋಪವಿತ್ತು.

​ ಪ್ರಕರಣ ಮುಚ್ಚಿಹಾಕಲು ದಂಧೆ:
ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಿಂದ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ರೂಪಾಯಿ ಪೀಕಿಸಿದ್ದಲ್ಲದೆ, ಮಗನ ಚಿನ್ನಾಭರಣ ಎಗರಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಅಂದಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಗ, ಇಲಾಖಾ ವಿಚಾರಣೆ ವೇಳೆ ದೂರುದಾರ ಮಹಿಳೆಗೆ ₹4.5 ಲಕ್ಷ ರೂಪಾಯಿ ನೀಡಿ ಕೇಸ್ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.


​ವರ್ಗಾವಣೆ ನಾಟಕ: ಉಳ್ಳಾಲದ ಮರಳು ದಂಧೆಕೋರರ ಸಾಲಿಗೆ ಸಿಲುಕಿ ವರ್ಗಾವಣೆಯಾಗಿದ್ದ ಇವರು, ಬಳಿಕ ಪಾಂಡೇಶ್ವರ ಮಹಿಳಾ ಠಾಣೆಗೆ ಸೇರಿ, ಪ್ರಸ್ತುತ ಬಜ್ಜೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮುಖ್ಯಮಂತ್ರಿ ಪದಕದ ವಿವಾದ.! ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇತರೆ ತಂಡಗಳು ಶ್ರಮವಹಿಸಿ ಆರೋಪಿಗಳನ್ನು ಬಂಧಿಸಿದ್ದರೂ, ಅದರ ನೆಪದಲ್ಲಿ ಅಂದಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Continue Reading

court

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮರುತನಿಖೆಗೆ ಐತಿಹಾಸಿಕ ಆದೇಶ

Published

on

ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಮತ್ತು ದಶಕಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆದಿದ್ದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಹಾಗೂ ಐತಿಹಾಸಿಕ ಆದೇಶ ಹೊರಡಿಸಿದೆ. ಪ್ರಕರಣವನ್ನು ಮರುತನಿಖೆ ನಡೆಸುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ, ಹೊಸದಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ನಿರ್ದೇಶಿಸಿದೆ. ಅಲ್ಲದೆ, ಕೇವಲ ಮೂರು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಗಡುವು ವಿಧಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರನ್ನು ಹೊಸ ಎಸ್‌ಐಟಿ ಮರುತನಿಖೆ ಮಾಡುವಂತಿಲ್ಲ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ

ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಮುಖ್ಯಾಂಶಗಳು:

ಘಟನೆಯ ಹಿನ್ನೆಲೆ: 2012ರ ಅಕ್ಟೋಬರ್‌ನಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಕಾಲೇಜಿನಿಂದ ಮನೆಗೆ ಮರಳುವಾಗ ನಾಪತ್ತೆಯಾಗಿದ್ದರು. ಅಕ್ಟೋಬರ್ 10ರಂದು ಧರ್ಮಸ್ಥಳದ ಮಣ್ಣಸಂಕ ಎಂಬಲ್ಲಿ ಆಕೆಯ ಅರ್ಧನಗ್ನ ಮೃತದೇಹ ಪತ್ತೆಯಾಗಿತ್ತು.

ತನಿಖಾ ವೈಫಲ್ಯ ಮತ್ತು ಆಕ್ರೋಶ: ಸ್ಥಳೀಯ ಪೊಲೀಸರು ಮಾನಸಿಕ ಅಸ್ವಸ್ಥ ಸಂತೋಷ್‌ ರಾವ್‌ ಎಂಬಾತನನ್ನು ಬಂಧಿಸಿದ್ದರು. ಆದರೆ ಇದು ಪ್ರಭಾವಿಗಳನ್ನು ರಕ್ಷಿಸಲು ನಡೆಸಿದ ನಾಟಕ ಎಂದು ಸಾರ್ವಜನಿಕರು ಮತ್ತು ಸೌಜನ್ಯಾ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸಾರ್ವಜನಿಕ ಪ್ರತಿಭಟನೆಯ ಬಳಿಕ ಪ್ರಕರಣವು ಸಿಐಡಿ ಹಾಗೂ ನಂತರ ಸಿಬಿಐ ತನಿಖೆಗೆ ಹಸ್ತಾಂತರಗೊಂಡಿತ್ತು. ಆದರೆ ಸಿಬಿಐ ಕೂಡ ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಹೈಕೋರ್ಟ್ ಆದೇಶ ಹಾಗೂ ಸುಪ್ರೀಂ ಮೆಟ್ಟಿಲು: ಸಿಬಿಐ ತೀರ್ಪನ್ನು ಪ್ರಶ್ನಿಸಿ ಹಾಗೂ ಮರುತನಿಖೆಗೆ ಕೋರಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (SLP) ದಾಖಲಿಸಿದ್ದರು.

ಸಿಬಿಐ ತನಿಖೆಗೆ ತೀವ್ರ ತರಾಟೆ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಹಾಗೂ ನ್ಯಾಯಮೂರ್ತಿ ಸಂಜೀವ್‌ ಸಚ್‌ದೇವ್‌ ಅವರನ್ನೊಳಗೊಂಡ ಪೀಠವು, ಸಿಬಿಐ ತನಿಖೆಯ ಕಳಪೆ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. “ಸಿಬಿಐ ತನಿಖಾಧಿಕಾರಿ ನ್ಯಾಯಾಧೀಶರಂತೆ ವರ್ತಿಸಿದ್ದು, ಯಾವುದೇ ಸ್ವತಂತ್ರ ತನಿಖೆ ನಡೆಸದೆ ಹಿಂದಿನ ತನಿಖೆಯನ್ನೇ ಆಧರಿಸಿ ವರದಿ ಸಲ್ಲಿಸಿದ್ದಾರೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿತ್ತು.

ಹೊಸ ತಿರುವು ಹಾಗೂ ಮುಂದಿನ ಹೆಜ್ಜೆಗಳು:

ಹೊಸ ತನಿಖೆ: 2012ರ ಧರ್ಮಸ್ಥಳದ 17 ವರ್ಷದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ಎಸ್‌ಐಟಿ (SIT) ರಚನೆ: ಈ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಮತ್ತು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಲಾಗಿದೆ.

ಸಿಬಿಐ ಹಾಗೂ ಹಳೇ ಸಿಬ್ಬಂದಿಗೆ ನಿರ್ಬಂಧ: ಈ ಹಿಂದೆ ತನಿಖೆ ನಡೆಸಿದ್ದ ಸಿಬಿಐ (CBI) ಅಥವಾ ಹಿಂದಿನ ತನಿಖಾ ತಂಡದಲ್ಲಿದ್ದ ಯಾವುದೇ ಪೊಲೀಸರನ್ನು ಹೊಸ ಎಸ್‌ಐಟಿಗೆ ನೇಮಿಸುವಂತಿಲ್ಲ.

ಸಂತೋಷ್ ರಾವ್ ವಿಚಾರಣೆಗೆ ತಡೆ: ಈ ಪ್ರಕರಣದಲ್ಲಿ ಈಗಾಗಲೇ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರನ್ನು ಹೊಸ ಎಸ್‌ಐಟಿ ಮರುತನಿಖೆ ಮಾಡುವಂತಿಲ್ಲ ಅಥವಾ ವಿಚಾರಣೆಗೆ ಒಳಪಡಿಸುವಂತಿಲ್ಲ.

3 ತಿಂಗಳ ಡೆಡ್‌ಲೈನ್: ಹೊಸ ಎಸ್‌ಐಟಿ ತಂಡವು ಪ್ರಕರಣದ ಮರುತನಿಖೆಯನ್ನು ಪೂರ್ಣಗೊಳಿಸಿ, ಆದೇಶದಂತೆ ನಿಗದಿತ ಮೂರು ತಿಂಗಳೊಳಗೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ.

ಹಿನ್ನೆಲೆ: ಸೌಜನ್ಯಾ ತಾಯಿ ಕುಸುಮಾವತಿ ಅವರು ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರ ಪೀಠ ಈ ಆದೇಶ ನೀಡಿದೆ. ಒಂದು ದಶಕದ ಬಳಿಕ ಈ ಹೊಸ ತನಿಖಾ ಚೌಕಟ್ಟು ರೂಪುಗೊಂಡಿದೆ.

ಈ ಮಹತ್ವದ ತೀರ್ಪಿನಿಂದಾಗಿ ಕಳೆದ 14 ವರ್ಷಗಳಿಂದ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಸೌಜನ್ಯಾ ಕುಟುಂಬಕ್ಕೆ ಹಾಗೂ ಮೃತ್ಯುವಿಗೆ ನ್ಯಾಯ ಸಿಗುವ ಭರವಸೆ ಮತ್ತು ನಿರೀಕ್ಷೆಗಳು ಗರಿಗೆದರಿವೆ

Continue Reading

crime

ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

Published

on

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

  • ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
  • ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
  • ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:

ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

Continue Reading

Trending

Copyright © 2025 Deevatige