Connect with us

Puttur

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹5 ಕೋಟಿ ಅನುದಾನ ಮಂಜೂರು!

Published

on

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಬರೋಬ್ಬರಿ ₹5 ಕೋಟಿ ಅನುದಾನ ಮಂಜೂರು ಮಾಡಿದೆ.

2026-27ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಈ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಸೆಪ್ಟೆಂಬರ್ 18, 2026ರಂದು ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ‘ಎ’ ವರ್ಗದ ದೇವಸ್ಥಾನವಾಗಿದ್ದು, ಸುಮಾರು 8.88 ಕೋಟಿ ರೂ. ಆದಾಯ ಹೊಂದಿದೆ. ದೇವಸ್ಥಾನವು ಪ್ರಸ್ತುತ 34.82 ಎಕರೆ ಭೂಮಿಯನ್ನು ಹೊಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನಕ್ಕೆ ನಿತ್ಯ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಉದ್ದೇಶದಿಂದ ಅನುದಾನ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ‘CM Special Grants’ ಅಡಿಯಲ್ಲಿ ಅನುದಾನ ಒದಗಿಸಲು ಅನುಮೋದನೆ ನೀಡಿದ್ದರು.

ಇದೀಗ ಸರ್ಕಾರದ ಆದೇಶ ಸಂಖ್ಯೆ ಕಂಇ 146 ಮುಅಬಿ 2026, ದಿನಾಂಕ 18-09-2026ರಂತೆ ಒಟ್ಟು ₹500 ಲಕ್ಷ (ಐದು ಕೋಟಿ ರೂಪಾಯಿ) ಅನುದಾನಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಅನುದಾನವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅಂದಾಜು ಪಟ್ಟಿ, ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ, ಮುಂಗಡ ರಸೀದಿ ಮತ್ತು ಕಾಮಗಾರಿಗಳ ಪ್ರಗತಿ ವರದಿ ಸೇರಿದಂತೆ ವಿವಿಧ ಷರತ್ತುಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನ ಮಂಜೂರಾಗಿರುವುದು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ಅನುದಾನದಡಿ ಯಾವೆಲ್ಲ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದು ಭಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

CONGRESS

​ ಪುತ್ತೂರಿನಲ್ಲಿ ನವೆಂಬರ್ 22ಕ್ಕೆ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನ “ಅಶೋಕ ಜನಮನ” ಕಾರ್ಯಕ್ರಮ – ಶಾಸಕ ಅಶೋಕ್ ಕುಮಾರ್ ರೈ.

Published

on

​ ಪುತ್ತೂರು : ಅಶೋಕ್ ನೇತೃತ್ವದ ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ವರ್ಷದಂತೆ ಆಯೋಜಿಸಲಾಗುವ ಬೃಹತ್ ವಸ್ತ್ರ ವಿತರಣಾ ಕಾರ್ಯಕ್ರಮ “ಅಶೋಕ ಜನಮನ” ಈ ಬಾರಿ ನವೆಂಬರ್ 22 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಪುತ್ತೂರಿನ ಅಶ್ವಿನಿ ಹೋಟೇಲಿನ ಸಭಾಂಗಣದಲ್ಲಿ ​ಶನಿವಾರ ಅಶೋಕ ಜನಮನ ಕಾರ್ಯಕ್ರಮ ಸಂಬಂಧ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಷಯದ ಬಗ್ಗೆ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳ ಜೊತೆ ಹಂಚಿಕೊಂಡರು.​

ದಿನಾಂಕ ಬದಲಾವಣೆ:

​ಹವಾಮಾನ ವೈಪರೀತ್ಯ ಹಾಗೂ ಮಳೆಯ ಮುನ್ಸೂಚನೆ ಇದ್ದುದರಿಂದ, ಈ ಮೊದಲು ನವೆಂಬರ್ 8 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನವೆಂಬರ್ 22 ಕ್ಕೆ ಮುಂದೂಡಲಾಗಿದೆ. ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕರು ಹೇಳಿದರು.​

ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು.

​₹4 ಕೋಟಿ ವೆಚ್ಚದಲ್ಲಿ 1 ಲಕ್ಷ ಜನರಿಗೆ ಕೊಡುಗೆ.

ಈ ಬಾರಿ ಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಒಟ್ಟು 4 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೀಪಾವಳಿ ವಸ್ತ್ರಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ಬೃಹತ್ ಗುರಿ ಹೊಂದಲಾಗಿದೆ.

​ಉಡುಗೊರೆ ಆಯ್ಕೆಯ ಅವಕಾಶ:

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆ ನೀಡಲಾಗುವುದು. ಈ ಬಾರಿ ಸಾರ್ವಜನಿಕರ ಆಯ್ಕೆಗೆ ಮೂರು ಬಗೆಯ ಉಡುಗೊರೆಗಳನ್ನು ನೀಡಲಾಗುತ್ತಿದ್ದು; ತಟ್ಟೆ, ಸೀರೆ ಮತ್ತು ಬೆಡ್‌ಶೀಟ್‌ಗಳಲ್ಲಿ ಯಾವುದಾದರೂ ಒಂದನ್ನು ಪಡೆದುಕೊಳ್ಳಬಹುದು.​

ಪಕ್ಷಾತೀತ ಕಾರ್ಯಕ್ರಮ:

ಇದು ಯಾವುದೇ ಕಾಂಗ್ರೆಸ್ ಪಕ್ಷದ ಸಮಾವೇಶವಲ್ಲ, ಬದಲಿಗೆ ಇದು ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ವಸ್ತ್ರ ವಿತರಣಾ ಕಾರ್ಯಕ್ರಮ. ಇದಕ್ಕೆ ಎಲ್ಲಾ ಪಕ್ಷದವರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಎಲ್ಲರೂ ಭಾಗವಹಿಸಬಹುದು” ಎಂದು ಶಾಸಕರು ಮನವಿ ಮಾಡಿದರು.​

ಮನೆ ಮನೆಗೆ ಆಹ್ವಾನ:

ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಮನೆಗೂ ಟ್ರಸ್ಟ್‌ನ ಸದಸ್ಯರು ಖುದ್ದಾಗಿ ತೆರಳಿ ಆಮಂತ್ರಣ ನೀಡಲಿದ್ದಾರೆ.​ಉಚಿತ ಆಹಾರ ವ್ಯವಸ್ಥೆ (1 ಲಕ್ಷ ದೋಸೆ & ಊಟ): ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬಿಸಿಬಿಸಿ ದೋಸೆಗಳನ್ನು ವಿತರಿಸಲಾಗುವುದು (1 ಲಕ್ಷಕ್ಕೂ ಹೆಚ್ಚು ದೋಸೆಗಳ ಗುರಿ). ಅಲ್ಲದೆ, ಮಧ್ಯಾಹ್ನ 12:30 ರಿಂದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.​

ವಿಶೇಷ ಆಕರ್ಷಣೆಗಳು:

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಇದರೊಂದಿಗೆ ಗೂಡುದೀಪ ಸ್ಪರ್ಧೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ಕ್ರೀಡಾಂಗಣದಲ್ಲಿ ನೆರವೇರಲಿದ ಎಂದು ಸ್ಪಷ್ಟಪಡಿಸಿದರು. ​

Continue Reading

crime

ಪುತ್ತೂರು: ಶಾಸಕರ ಕಚೇರಿ ನೆಪದಲ್ಲಿ ಯುವತಿಯ ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನ; ಆರೋಪಿ ಜಯರಾಮ ವಿರುದ್ಧ ಪ್ರಕರಣ ದಾಖಲು

Published

on

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಹಾಗೂ ಶಾಸಕರ ಕಚೇರಿಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ, ಮಾನಭಂಗಕ್ಕೆ ಯತ್ನಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಲ್ನಾಡು ನಿವಾಸಿ ಜಯರಾಮ ಎಂಬಾತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಸಂತ್ರಸ್ತ ಯುವತಿಯು ಮಂಗಳೂರಿನ ವೆನ್‌ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಡಬದಿಂದ ಪ್ರತಿದಿನ ಮಂಗಳೂರಿಗೆ ಪ್ರಯಾಣಿಸುವುದು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ, ಜೂನ್ ತಿಂಗಳಿನಿಂದ ಮಂಗಳೂರಿನ ಕೊಟ್ಟಾರಚೌಕಿಯಲ್ಲಿರುವ ತಮ್ಮ ಸಹಪಾಠಿ ಮಮತಾ ಎಂಬುವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ (PG) ಆಗಿ ವಾಸವಾಗಿದ್ದರು.

ಈ ವೇಳೆ ಯುವತಿಯು ತಮ್ಮ ಮನೆಯ ಜಮೀನಿನ ದಾಖಲೆಗಳಲ್ಲಿ ತೊಡಕಿರುವ ವಿಚಾರವನ್ನು ಮಮತಾ ಅವರ ಬಳಿ ಹಂಚಿಕೊಂಡಿದ್ದರು. ಮಮತಾ ಅವರ ಪತಿ ಜಯರಾಮ, ತಾವು ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಆಗಸ್ಟ್ 17ರಂದು ಯುವತಿಯ ಮನೆಯ ಎಲ್ಲಾ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಪುತ್ತೂರು ಶಾಸಕರ ಕಚೇರಿಗೆ ಕರೆದೊಯ್ದಿದ್ದರು. ಆದರೆ ಅಂದು ಕಚೇರಿಯಲ್ಲಿ ಶಾಸಕರು ಇಲ್ಲದ ಕಾರಣ ಇಬ್ಬರೂ ವಾಪಸ್ ಮಂಗಳೂರಿಗೆ ತೆರಳಿದ್ದರು.

ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ:

ಬಳಿಕ ಆಗಸ್ಟ್ 23ರಂದು ಯುವತಿಗೆ ಕರೆ ಮಾಡಿದ ಜಯರಾಮ, ಮರುದಿನ (ಆಗಸ್ಟ್ 24) ಪುತ್ತೂರಿಗೆ ಒಬ್ಬಳೇ ಬರುವಂತೆ ತಿಳಿಸಿದ್ದರು. ಅದರಂತೆ ಯುವತಿ ಪುತ್ತೂರಿಗೆ ತಲುಪಿದಾಗ, ಶಾಸಕರು ಕಚೇರಿಯಲ್ಲಿ ಇಲ್ಲವೆಂಬ ನೆಪ ಹೇಳಿ ಜಯರಾಮ ತನ್ನ ಸ್ಕೂಟಿಯಲ್ಲಿ ಯುವತಿಯನ್ನು ಪುತ್ತೂರು ಕಸಬಾ ಗ್ರಾಮದ ನೆಲ್ಲಿಗುಂಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಯುವತಿಯನ್ನು ಒಳಗಡೆ ಕರೆದು ಬಾಗಿಲು ಲಾಕ್ ಮಾಡಿದ್ದಾನೆ. ಬಳಿಕ ತನ್ನ ಅಂಗಿಯ ಬಟನ್‌ಗಳನ್ನು ಬಿಚ್ಚಿಕೊಂಡು ಏಕಾಏಕಿ ಯುವತಿಯ ಸೊಂಟವನ್ನು ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಜೋರಾಗಿ ಬೊಬ್ಬೆ ಹೊಡೆದು, ಬಾಗಿಲು ತೆರೆದು ಅಲ್ಲಿಂದ ತಕ್ಷಣವೇ ತಪ್ಪಿಸಿಕೊಂಡು ಹೊರಬಂದಿದ್ದಾರೆ.

ಜೀವ ಬೆದರಿಕೆ ಮತ್ತು ನಿರಂತರ ಕಿರುಕುಳ:

ಘಟನೆಯ ಬಳಿಕ, “ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ” ಎಂದು ಜಯರಾಮ ಯುವತಿಗೆ ಬೆದರಿಕೆ ಹಾಕಿದ್ದನು. ಅಷ್ಟಕ್ಕೇ ನಿಲ್ಲದೆ, ಮಂಗಳೂರಿನ ತನ್ನ ಮನೆಯಲ್ಲಿಯೂ ಪದೇಪದೇ ಯುವತಿಗೆ ಕಿರುಕುಳ ನೀಡುತ್ತಾ ತನ್ನ ಅನೈತಿಕ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯ ಬೆದರಿಕೆಗೆ ಹೆದರಿ ಹಾಗೂ ತಮ್ಮ ಕುಟುಂಬಸ್ಥರಿಗೆ ತೊಂದರೆಯಾಗಬಹುದೆಂಬ ಭಯದಿಂದ ಯುವತಿ ಇಷ್ಟು ದಿನ ಸುಮ್ಮನಿದ್ದರು. ಆದರೆ ಆರೋಪಿಯ ಕಿರುಕುಳ ಮಿತಿಮೀರಿದಾಗ ಧೈರ್ಯ ಮಾಡಿ ಇತ್ತೀಚೆಗೆ ತಮ್ಮ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯರಾಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading

crime

ಬೆಳ್ತಂಗಡಿ: ಕೊಕ್ಕಡದಲ್ಲಿ ಅಂಗಡಿ ವಿವಾದ – ಪರಸ್ಪರ ದೂರು, ಎರಡು ಪ್ರಕರಣ ದಾಖಲು

Published

on

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಅಂಗಡಿ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕಡೆಯಿಂದ ಹಲ್ಲೆ, ನಿಂದನೆ ನಡೆದಿದೆ ಎಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪರಸ್ಪರ ಎರಡು ಪ್ರಕರಣಗಳು ದಾಖಲಾಗಿವೆ.

ಮೊದಲ ಪ್ರಕರಣ (ಅ.ಕ್ರ: 78/2026):
ದೂರುದಾರ ಬೆಳ್ತಂಗಡಿ ಕೊಕ್ಕಡ ನಿವಾಸಿ ಕೃಷ್ಣ ಭಟ್ ಅವರು ನೀಡಿದ ದೂರಿನಂತೆ, ದಿನಾಂಕ 18-10-2026 ರಂದು ಬೆಳಿಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸದವರು ವ್ಯಾಪಾರ ಮಾಡುತ್ತಿದ್ದಾಗ, ಅದೇ ಅಂಗಡಿಯಲ್ಲಿ ಈ ಹಿಂದೆ ವ್ಯಾಪಾರ ನಡೆಸುತ್ತಿದ್ದ ಆರೋಪಿ ಹರೀಶ್ ಮತ್ತು ಅವರ ಹೆಂಡತಿ, ಮಕ್ಕಳು ಹಾಗೂ ಇತರರು ಏಕಾಏಕಿ ಅಂಗಡಿಯ ಒಳಗೆ ನುಗ್ಗಿ ಅಂದಾಜು ರೂ. 25,000 ಮೌಲ್ಯದ ಕಟ್ಟಡ ಹಾಗೂ ಸ್ವತ್ತುಗಳನ್ನು ಹಾನಿಗೊಳಿಸಿ, ರಾಘವ ಭಂಡಾರಿ ಮತ್ತು ಕೆಲಸದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 78/2026, ಕಲಂ 115(2), 118(1), 324(4), 329(4), 351(2), 352 R/W 190 BNS-2023 ರಂತೆ ಪ್ರಕರಣ ದಾಖಲಾಗಿದೆ.

ಎರಡನೇ ಪ್ರಕರಣ (ಅ.ಕ್ರ: 79/2026):
ಇದರ ಬೆನ್ನಲ್ಲೇ ಸೌತಡ್ಕ ದೇವಸ್ಥಾನದ ಬಳಿಯ ಅಂಗಡಿಯಲ್ಲಿ ಹರಿಶ್ಚಂದ್ರ ಅವರು ವ್ಯಾಪಾರ ಮಾಡುತ್ತಿದ್ದಾಗ ಆರೋಪಿಗಳಾದ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್, ಚೇತನ್ ಎಂಬವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ, ಅಂಗಡಿಯ ಸೊತ್ತುಗಳನ್ನು ಹೊರಗೆ ಬಿಸಾಡಿ, ಹರಿಶ್ಚಂದ್ರ, ಅವರ ಪತ್ನಿ ಮತ್ತು ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಹರಿಶ್ಚಂದ್ರ ಅವರ ಪತ್ನಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 79/2026, ಕಲಂ 329(4), 324(4), 352, 74, 118(1), 115(2), 351(2) R/W 3(5) BNS-2023 ರಂತೆ ಪ್ರಕರಣ ದಾಖಲಾಗಿದೆ.

ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!