Bantawala
ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.
Bantawala
75 ವರ್ಷಗಳ ರಸ್ತೆ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು – ಉಕ್ಕುಡ ಕಲ್ಲಜರಿಯಲ್ಲಿ ಅಕ್ರಮ ಗೇಟ್ ತೆರವು.
ವಿಟ್ಲ : ಕಸಬಾ ಗ್ರಾಮದ ಉಕ್ಕುಡ ಕಲ್ಲಜರಿ ಪ್ರದೇಶದಲ್ಲಿ ಕಳೆದ 75 ವರ್ಷಗಳಿಂದ ಸಂಪರ್ಕ ರಸ್ತೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಮೂರು ಬಡ ಕುಟುಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸರ್ಕಾರಿ ಜಮೀನಿನಲ್ಲಿ ಹಾದುಹೋಗುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಗೇಟ್ ಅಳವಡಿಸಿ ತಡೆಯೊಡ್ಡಿದ್ದ ಗೇಟನ್ನು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. ದೂರಿನ ಹಿನ್ನೆಲೆ:ಸ್ಥಳೀಯ ನಿವಾಸಿ ಶ್ರೀಮತಿ ಜಯಂತಿ ಎಂಬುವರು ಈ ಅಕ್ರಮ ತಡೆಯ ತೆರವಿಗಾಗಿ ವಿಟ್ಲ ಪಟ್ಟಣ ಪಂಚಾಯತಿಗೆ ಅಗತ್ಯ ದಾಖಲೆಗಳ ಸಹಿತ ದೂರು ನೀಡಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿದ ಪಟ್ಟಣ ಪಂಚಾಯತ್ ಆಡಳಿತವು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ವಿನಂತಿಸಿತ್ತು.
ತಹಶೀಲ್ದಾರ್ ಆದೇಶ ಮತ್ತು ಪರಿಶೀಲನೆ:ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಅಕ್ರಮ ಗೇಟ್ ತೆರವುಗೊಳಿಸುವಂತೆ ವಿಟ್ಲ ಕಂದಾಯ ನಿರೀಕ್ಷಕರಿಗೆ ಹಾಗೂ ಭೂ ಮಾಪಕರಿಗೆ ಅಧಿಕೃತ ಆದೇಶ ನೀಡಿದ್ದರು. ಅಧಿಕಾರಿಗಳು ನಡೆಸಿದ ಸಮೀಕ್ಷೆ ಹಾಗೂ ಕಂದಾಯ ನಿರೀಕ್ಷಕರ ವರದಿಯ ಪ್ರಕಾರ, ಸರ್ವೇ ನಂ. 727/1ರಲ್ಲಿ ಬರುವ ರಸ್ತೆಯು ಸರ್ಕಾರಿ ಜಮೀನಿನಲ್ಲಿದೆ ಎಂಬುದು ದೃಢಪಟ್ಟಿದೆ. ರಸ್ತೆ ಅಭಿವೃದ್ಧಿಗೆ ಮಾತ್ರ ಅವಕಾಶ:ಈ ಜಮೀನನ್ನು ರಸ್ತೆಯನ್ನು ಅಭಿವೃದ್ಧಿಪಡಿಸಲು ಮತ್ತು ಸಾರ್ವಜನಿಕರ ರಸ್ತೆ ಸಂಪರ್ಕಕ್ಕಾಗಿ ಮಾತ್ರ ಬಳಸಿಕೊಳ್ಳಲು ತಹಶೀಲ್ದಾರ್ ಕಚೇರಿಯಿಂದ ಸ್ಪಷ್ಟ ಆದೇಶ ನೀಡಲಾಗಿದೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಈ ಸರ್ಕಾರಿ ಜಮೀನನ್ನು ಬಳಸಲು ಅವಕಾಶವಿರುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಕ್ರಮ ಗೇಟ್ ತೆರವು – ಕುಟುಂಬಗಳ ಕೃತಜ್ಞತೆ:ತಹಶೀಲ್ದಾರ್ ಆದೇಶದಂತೆ ಇಂದು ಕಂದಾಯ ಅಧಿಕಾರಿಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಅರ್ಜಿದಾರರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ದಶಕಗಳಿಂದ ಅನುಭವಿಸುತ್ತಿದ್ದ ನರಕಯಾತನೆಗೆ ಮುಕ್ತಿ ದೊರೆತಿದ್ದರಿಂದ ಹರ್ಷ ವ್ಯಕ್ತಪಡಿಸಿರುವ ಬಡ ಕುಟುಂಬಗಳು, ಸಕಾಲದಲ್ಲಿ ಸ್ಪಂದಿಸಿ ನ್ಯಾಯ ಒದಗಿಸಿದ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಆಡಳಿತಕ್ಕೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿವೆ.
Bantawala
ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!
ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.
ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.
Bantawala
ಫರಂಗಿಪೇಟೆ ಸ್ಟುಡಿಯೋ ಮಾಲೀಕರ ಮೇಲೆ ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, ದಂಡ
ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕರೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು ₹88,000 ದಂಡ ವಿಧಿಸಿ ತೀರ್ಪು ನೀಡಿದೆ.
ಮಹಮ್ಮದ್ ಸೈಫುದಿನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ ಅಲಿಯಾಸ್ ಮುನ್ನಿ ಹಾಗೂ ಮಹಮ್ಮದ್ ಸವಾದ್ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಘಟನೆಯ ವಿವರ:
2020ರ ಅಕ್ಟೋಬರ್ 28ರಂದು ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಈ ಘಟನೆ ನಡೆದಿತ್ತು. ಸ್ಥಳೀಯ ಸ್ಟುಡಿಯೋ ಮಾಲೀಕ ದಿನೇಶ್ ಅವರು ತಮ್ಮ ಅಂಗಡಿಯಲ್ಲಿದ್ದ ವೇಳೆ, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದ ಆರೋಪಿಗಳು ಕತ್ತಿಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2020ರ ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಕಲಂ 307 (ಕೊಲೆಯತ್ನ), 324, 326, 504, 506 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಮತ್ತು ನ್ಯಾಯಾಲಯದ ತೀರ್ಪು:
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ (PSI) ಪ್ರಸನ್ನ ಎಂ.ಎಸ್. ಅವರು ನಾಲ್ವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 28ರಂದು ತೀರ್ಪು ಪ್ರಕಟಿಸಿದ್ದು, ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ₹88 ಸಾವಿರ ದಂಡ ವಿಧಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ಅವರು ವಾದ ಮಂಡಿಸಿದ್ದರು.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
