Connect with us

accident

ಕೇರಳ: ಭೀಕರ ರಸ್ತೆ ಅಪಘಾತ; ಸುಳ್ಯದ ಯುವಕ ಸೇರಿದಂತೆ ಮೂವರು ದುರ್ಮರಣ

Published

on

ಸುಳ್ಯ: ಕೇರಳದ ನೆಡುಂಬಸ್ಸೇರಿ ಸಮೀಪದ ಮೂಝಿಯಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಸುಳ್ಯದ ಯುವಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಸುಳ್ಯದ ಯುವಕ ಇಲ್ಯಾಸ್ (22), ವಯನಾಡಿನ ದೇವಿಕಾ ಹಾಗೂ ಪಾಕ್ಕಾಡ್‌ನ ಗೋಪಿಕಾ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅಪಘಾತಕ್ಕೆ ಮೂವರೂ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಈ ಮೂವರೂ ಕೊಚ್ಚಿಯ ಕಕ್ಕನಾಡ್ ನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿ ಮುಗಿಸಿ ಚಹಾ ಕುಡಿಯಲು ವಿಮಾನ ನಿಲ್ದಾಣದ ಪ್ರದೇಶದತ್ತ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಘಟನೆಯ ವಿವರ: ಭಾನುವಾರ ಮುಂಜಾನೆ 1.45ರ ಸುಮಾರಿಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಮೂವರು ಸವಾರರಿಗೂ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಇವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪೊಲೀಸರ ಎಫ್‌ಐಆರ್ ಪ್ರಕಾರ, 19 ವರ್ಷದ ಸುಹೈಲ್ ಸಜೀವ್ ಎಂಬ ಯುವಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲನೆ ಮಾಡುತ್ತಿದ್ದು, ಮುಂದೆ ಹೋಗುತ್ತಿದ್ದ ಮೂವರು ಇದ್ದ ಸ್ಕೂಟರ್‌ಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ.

ಪೊಲೀಸರ ಎಫ್‌ಐಆರ್ ಪ್ರಕಾರ, 19 ವರ್ಷದ ಸುಹೈಲ್ ಸಜೀವ್ ಎಂಬ ಯುವಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಾಲನೆ ಮಾಡುತ್ತಿದ್ದು, ಮುಂದೆ ಹೋಗುತ್ತಿದ್ದ ಮೂವರು ಇದ್ದ ಸ್ಕೂಟರ್‌ಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿಯ ರಭಸಕ್ಕೆ ಮೂವರು ಸವಾರರು ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರವೂ ನಿಲ್ಲದ ಕಾರು, ಸ್ಕೂಟರ್ ಅನ್ನು ಸುಮಾರು 100 ಮೀಟರ್‌ಗಳಷ್ಟು ದೂರದವರೆಗೆ ಎಳೆದುಕೊಂಡು ಹೋಗಿ ನಿಂತಿದೆ.

ಬಾರ್‌ನಲ್ಲಿ ಕುಡಿದು ಬಂದಿದ್ದ ಆರೋಪಿ
ತನಿಖೆಯಲ್ಲಿ ಆಘಾತಕಾರಿ ವಿಚಾರ ಬಯಲಾಗಿದೆ. ಅಪಘಾತಕ್ಕೂ ಮುನ್ನ ಆರೋಪಿ ಸುಹೈಲ್ ಹಲವು ಬಾರ್‌ಗಳಲ್ಲಿ ಮದ್ಯಪಾನ ಮಾಡಿದ್ದನೆಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕೇರಳದಲ್ಲಿ ಮದ್ಯಪಾನಕ್ಕೆ ಕಾನೂನುಬದ್ಧ ವಯೋಮಿತಿ 23 ವರ್ಷ ಆಗಿದ್ದು, 19 ವರ್ಷದ ಯುವಕನಿಗೆ ಮದ್ಯವನ್ನು ನೀಡಿರುವುದು ಕಾನೂನು ಬಾಹಿರವಾಗಿದೆ. ಯಾವ ಬಾರ್‌ಗಳು ಆತನಿಗೆ ಮದ್ಯ ನೀಡಿದವು ಎಂಬ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿಯ ಉಡಾಫೆ ಮಾತಿಗೆ ಜನಾಕ್ರೋಶ
ಅಪಘಾತದ ನಂತರ ಆರೋಪಿಯ ವರ್ತನೆ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಪ್ರಕಾರ, ಘಟನೆಯ ನಂತರ ಸುಹೈಲ್‌ನಲ್ಲಿ ಪಶ್ಚಾತ್ತಾಪದ ಲವಲೇಶವೂ ಕಂಡುಬಂದಿಲ್ಲ. ಬದಲಿಗೆ ಆತ ಪೊಲೀಸರ ಬಳಿ “ರಸ್ತೆಗಳು ಇರುವುದೇ ವಾಹನ ಚಲಾಯಿಸಲು ತಾನೇ?” ಎಂದು ಪ್ರಶ್ನಿಸಿದ್ದಾನೆ. ಅಲ್ಲದೆ “ಈ ವಿಷಯವನ್ನು ನನ್ನ ತಂದೆಯೇ ನೋಡಿಕೊಳ್ಳುತ್ತಾರೆ” ಎಂದು ಹೇಳಿ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ.

ಈ ಮಾತುಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡ ನಂತರ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ದುರ್ಘಟನೆ ಕುರಿತು ನೆಡುಂಬಸ್ಸೇರಿ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಇಲ್ಯಾಸ್‌ ಅವರು ಸುಳ್ಯ ತಾಲೂಕು ಕನಕಮಜಲು ಪೆಲ್ತಡ್ಕ ಇಬ್ರಾಹಿಂ ಅವರ ಪುತ್ರ, ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:
ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ

Continue Reading

accident

ಕುಂದಾಪುರ: ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ದುರಂತ ಸಾವು

Published

on

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಶಾಲಾ ಬಾಲಕಿಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಕೊಪ್ಪರಿಗೆ ಗುಡ್ಡೆ ಕಡುಬಿನ ಕೆರೆಯಲ್ಲಿ ಭಾನುವಾರ ಸಂಭವಿಸಿದೆ.

ಮೃತರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುದ್ದಿನಕೊಪ್ಪ ಮೂಲದ, ಪ್ರಸ್ತುತ ಮುಳ್ಳಿಕಟ್ಟೆ ಟೆಂಟ್ ಹೌಸ್‌ನಲ್ಲಿ ವಾಸವಾಗಿದ್ದ ಚಂದ್ರು ಬಸವರಾಜ ವೇಷಗಾರ ಎಂಬುವರ ಪುತ್ರಿ ಸುನೀತಾ (13) ಹಾಗೂ ಅವರ ಸಂಬಂಧಿ ದಿ. ಮಂಜುನಾಥ್ ಅವರ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಬ್ಬರೂ ಹೊಸಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಘಟನೆಯ ವಿವರ: ಭಾನುವಾರ ಸಂಜೆ ಟೆಂಟ್ ಹೌಸ್ ನಿವಾಸಿಗಳಾದ 5 ಮಕ್ಕಳು ಬಟ್ಟೆ ತೊಳೆಯಲು ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ತೆರಳಿದ್ದರು. ಕೆರೆಯ ದಡದಲ್ಲಿ ಸುನೀತಾ ಹಾಗೂ ವೈಶಾಲಿ ಬಟ್ಟೆ ಒಗೆಯುತ್ತಿದ್ದಾಗ, ಸುನೀತಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ವೈಶಾಲಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜೊತೆಯಲ್ಲಿದ್ದ ಇತರ ಮಕ್ಕಳು ಕೂಡಲೇ ವಿಷಯ ತಿಳಿಸಿದ್ದು, ಪಾಲಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ, ಸಂಜೆ 5.15ರ ಅಂದಾಜಿಗೆ ಇಬ್ಬರೂ ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.

ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಶವ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತ ಸುನೀತಾಳ ತಂದೆ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

accident

ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ

Published

on

ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ

ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ, ಸ್ಥಳೀಯ RSS ಮುಖಂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಕೋಟ ಮಣೂರು ನಿವಾಸಿ, ಆರ್‌ಎಸ್‌ಎಸ್ ಮುಖಂಡ ಗುರುದಾಸ್ ಶೆಣೈ ಮೃತಪಟ್ಟವರು. ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರ ಗಾಯಗೊಂಡ ಕಾರು ಚಾಲಕ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಿಗ್ಗೆ ಗುರುದಾಸ್ ಶೆಣೈ ಅವರು ಕೋಟ ಜಂಕ್ಷನ್ ಬಳಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿ ಕಡೆಯಿಂದ ಕುಂದಾಪುರದತ್ತ ಅತಿವೇಗವಾಗಿ ಧಾವಿಸಿ ಬಂದ ಕಾರು ಸೈಕಲ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭರಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇತ್ತ ಸೈಕಲ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಗುರುದಾಸ್ ಶೆಣೈ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಚಾಲಕ ಪ್ರದೀಪ್ ಕಾಂಚನ್ ಅವರಿಗೂ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!