Belthangady
ಬೆಳ್ತಂಗಡಿಯಲ್ಲಿ ‘ನ್ಯಾಯದ ನಡಿಗೆ’ ಅಬ್ಬರ : ಪೊಲೀಸ್ ಇಲಾಖೆಯೇ ಸಾಕ್ಷ್ಯ ನಾಶ ಮಾಡಿದೆ, 14 ವರ್ಷದ ಹಿಂದೆ ಕಂಡ ಸತ್ಯವನ್ನೇ ಈಗಲೂ ಹೇಳ್ತಿದ್ದೇನೆ – ಮಹೇಶ್ ಶೆಟ್ಟಿ ತಿಮರೋಡಿ ಗುಡುಗು
ಬೆಳ್ತಂಗಡಿ: ಧರ್ಮಸ್ಥಳದ ಬಳಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ನಂತರವೂ ನ್ಯಾಯಕ್ಕಾಗಿ ಹೋರಾಟ ಮುಂದುವರೆದಿದೆ. ಬೆಳ್ತಂಗಡಿಯಲ್ಲಿ ನಡೆದ ‘ನ್ಯಾಯದ ನಡಿಗೆ’ ಸಮಾವೇಶದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಪೊಲೀಸ್ ಇಲಾಖೆ ಮತ್ತು ರಾಜಕೀಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಕರಣದ ಹಲವು ಸ್ಫೋಟಕ ಸಂಗತಿಗಳನ್ನು ಜನರ ಮುಂದಿಟ್ಟಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ 14 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯಾ ಪರ ನ್ಯಾಯಕ್ಕಾಗಿ ಆಗ್ರಹಿಸಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆ ನೇತೃತ್ವದಲ್ಲಿ ಶನಿವಾರ ಬೆಳ್ತಂಗಡಿ ತನಕ ನಡೆದ ‘ನ್ಯಾಯದ ನಡಿಗೆ’ ಮೌನ ಮೆರವಣಿಗೆ ಮತ್ತು ಬೃಹತ್ ಸಮಾವೇಶದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆರೋಪಗಳ ಸುರಿಮಳೆಗೈದರು.

ಅಂಬೇಡ್ಕರ್ ಮೈದಾನದಲ್ಲಿ ನಡೆದ ಸಮಾವೇಶವನ್ನು ಸೌಜನ್ಯಾ ತಾಯಿ ಕುಸುಮಾವತಿ ಚಂದಪ್ಪ ಗೌಡ ಉದ್ಘಾಟಿಸಿದರು.
ತಿಮರೋಡಿ ಹೇಳಿಕೆಯ ಪ್ರಮುಖ ಹೈಲೈಟ್ಸ್:
1. ಪೊಲೀಸ್ ಮತ್ತು ರಾಜಕೀಯ ನಾಯಕರಿಗೆ ಅಭಿನಂದನೆಗಳ ವ್ಯಂಗ್ಯ:
“ನಮ್ಮನ್ನು ಈ ಹೋರಾಟಕ್ಕೆ ಪ್ರತಿಸ್ಪರ್ಧಿಗಳ ರೀತಿ ಬಿಂಬಿಸಿದ ಪೊಲೀಸ್ ಇಲಾಖೆ ಮತ್ತು ಅತ್ಯಾಚಾರಿಗಳನ್ನ ರಕ್ಷಣೆ ಮಾಡಿದ ರಾಜಕೀಯ ನಾಯಕರಿಗೆ ಅಭಿನಂದನೆಗಳು. ಎಲ್ಲದಕ್ಕೂ ತಯಾರಾಗಿಯೇ ನಿಂತವರು ನಾವು. 14 ವರ್ಷಗಳ ಹಿಂದೆ ಕಂಡಿದ್ದನ್ನು ಕಂಡ ಹಾಗೆ ಹೇಳಿದ್ದೇನೆ. ದಕ್ಷ ಅಧಿಕಾರಿಗಳಿಗೆ ಇದು ಕಿವಿಮಾತು ಹಾಗೂ ಎಚ್ಚರಿಕೆ.” ರಾಜಕೀಯ ಪಕ್ಷಗಳ ಕೈಗೊಂಬೆಗಳಂತೆ ಕಪಟಿಗಳ ಜೊತೆ ಸೇರಿ ನೀವು ಸಾಕ್ಷಿಗಳನ್ನು ನಾಶ ಮಾಡಿದ್ದೀರಿ ಎಂದು ಅವರು ಆರೋಪಿಸಿದರು.
2. ಸಾಕ್ಷ್ಯ ನಾಶ ಮತ್ತು ಕಾಣೆಯಾದ CCTV ಫುಟೇಜ್:
“ಪೊಲೀಸ್ ಇಲಾಖೆ ಸೌಜನ್ಯ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ. ನನ್ನ ಧಿಕ್ಕಾರ ಇದೆ. ಪೊಲೀಸರು ಇಲ್ಲಿ ಇವತ್ತು ಮಾಡುವ ವಿಡಿಯೋ, ಅವತ್ತು ಮಾಡಬೇಕಿತ್ತು. 2012 ರಲ್ಲಿ ಸೌಜನ್ಯಾ ಅಪಹರಣದ ಎರಡು CCTV ವಿಡಿಯೋ ಫುಟೇಜ್ ಇದೆ ಎಂದು ಆಗಿನ ಎಸ್ಪಿ ಅಭಿಷೇಕ್ ಗೋಯಲ್ ಅವರೇ ಹೇಳಿದ್ದರು. ಆ ಎರಡು ವಿಡಿಯೋಗಳು ಈಗ ಎಲ್ಲಿ ಹೋಗಿವೆ? ಆ ವಿಡಿಯೋದಲ್ಲಿ ಸೌಜನ್ಯಳನ್ನು ಅಪಹರಣ ಮಾಡಿದ ದೃಶ್ಯವೇ ಇದೆ. ಈಗಿನ SIT ಅದನ್ನು ತನಿಖೆ ಮಾಡಬೇಕು” ಎಂದು ಒತ್ತಾಯಿಸಿದರು.
3. ಈಗಿನ SIT ಬಗ್ಗೆ ಅನುಮಾನ – ಸಿಎಂ ಬಳಿ ನ್ಯಾಯದ ಮೊರೆ:
“SIT ಯಲ್ಲಿ ಇರುವ ಅಧಿಕಾರಿಗಳ ಬಗ್ಗೆ ಪೋಷಕರಿಗೆ ಅನುಮಾನವಿದೆ. SIT ಅಧಿಕಾರಿಗಳ ಹತ್ತಿರ ನಾವು ನ್ಯಾಯ ಕೇಳುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳ ಬಳಿ ನ್ಯಾಯ ಕೇಳುತ್ತೇವೆ. ಮಾಹಿತಿ ಬೇಕಾದರೆ, ಸತ್ಯ ಬೇಕಾದರೆ ನಾವೇ ನೀಡುತ್ತೇವೆ. ಯಾರನ್ನು ತನಿಖೆ ಮಾಡಬೇಕು ಎಂದು ಹೇಳುತ್ತೇವೆ” ಎಂದರು.
4. ಬುರುಡೆ ಗ್ಯಾಂಗ್, ಸುಳ್ಳು ಕೇಸ್ ಮತ್ತು ಗಡಿಪಾರು:
“ನಮ್ಮನ್ನು ಬುರುಡೆ ಗ್ಯಾಂಗ್ ಎಂದು ಬಿಂಬಿಸುವ ಕೆಲಸ ಆಯಿತು. ಚಿನ್ನಯ್ಯನನ್ನು ಹೆದರಿಸಿ ಬೆದರಿಸಿ ಹೇಳಿಕೆ ಬದಲಾಯಿಸಲಾಯಿತು. 13 ಹೊಂಡದಲ್ಲಿ ಹೆಣ ಸಿಗದಾಗ ಅದು ಷಡ್ಯಂತ್ರ ಎಂದರು, ಅದೇ ಹೊಂಡದಲ್ಲಿ ಹೆಣ ಸಿಕ್ಕಿದೆ ಎಂದಾಗ ಕಾರ್ಯಾಚರಣೆ ನಿಲ್ಲಿಸಿದರು. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿಸಿ ಗಡಿಪಾರಿಗೆ ಆದೇಶ ಮಾಡಿಸಿದ್ದು ಇಲ್ಲಿಯ ಡಿವೈಎಸ್ಪಿ ವಿಜಯ ಪ್ರಸಾದ್. ನಾನು ಗಡಿಪಾರು ಆಗಿ ವಾಪಸ್ ಬರುವಾಗ ಅದೇ ವ್ಯಕ್ತಿ ಅಮಾನತಾಗಿ ಮನೆಗೆ ಹೋಗಿದ್ದ. ಇದು ಅಣ್ಣಪ್ಪ ಸ್ವಾಮಿ, ಸೌಜನ್ಯಳ ಶಕ್ತಿ!” ಎಂದು ಕಿಡಿಕಾರಿದರು.
5. ತನಿಖಾಧಿಕಾರಿ ಯೋಗೀಶ್ ಬಗ್ಗೆ ಸ್ಫೋಟಕ ಹೇಳಿಕೆ:
“ಸೌಜನ್ಯ ತಾಯಿ ಹೇಳಿದ ಆಧಾರದಲ್ಲಿ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ. ಆಗಿನ ತನಿಖಾಧಿಕಾರಿ ಯೋಗೀಶ್ ನನ್ನ ನೇತು ಹಾಕಿದರೆ ಸತ್ಯ ಹೊರಬರುತ್ತದೆ. ಯೋಗೀಶ್ 5 ಮಂದಿಯನ್ನು ನಾನೇ ಬಚಾವ್ ಮಾಡಿದ್ದು ಎಂದು ದೈವಗಳ ಮುಂದೆ ಪ್ರಮಾಣ ಮಾಡಿ ಹೇಳಿದ್ದಾನೆ. SIT ಮೊದಲು ಯೋಗೀಶನನ್ನು ನೇತಾಕಬೇಕು” ಎಂದು ಆಗ್ರಹಿಸಿದರು.
6. ಸರ್ಕಾರಕ್ಕೆ ಎಚ್ಚರಿಕೆ ಮತ್ತು ಬೇಡಿಕೆ:
“ಧರ್ಮಸ್ಥಳದಲ್ಲಿ ಅತ್ಯಾಚಾರ ಮಾಡುವ ಹೆಗ್ಗಣಗಳನ್ನು ಹಿಡಿಯಿರಿ ಎನ್ನುವುದು ತಪ್ಪಾ? ಸುಪ್ರೀಂ ಕೋರ್ಟ್ ಕೂಡ ಒಂದು ವರ್ಷದ ಹಿಂದೆಯೇ ಪೊಲೀಸರಿಗೆ ಚಾಟಿ ಬೀಸಿದೆ. ಒಂದು ಶಕ್ತಿ ಈ ಹೋರಾಟವನ್ನು ಕಾಪಾಡುತ್ತಿದೆ. ಇದು ಒಂದು ಹೆಣ್ಣಿನ ವಿಷಯವಲ್ಲ, ಇಲ್ಲಿ ಸಾವಿರಾರು ಹೆಣ್ಣು ಮಕ್ಕಳ ಮಾರಣಹೋಮವಾಗಿದೆ. ಈ ಕೈಯಲ್ಲಿ ರಕ್ತ ಅಂಟಿಕೊಳ್ಳಲು ಬಿಡಬೇಡಿ. ಸರ್ಕಾರ ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ಶುರು ಮಾಡಬೇಕು. ಯಾವ ಹೆಣ್ಣಿನ ತಾಯಿಯೂ ಮುಂದೆ ಕಣ್ಣೀರು ಹಾಕಬಾರದು.”
“ಈ ಬಾರಿ ನಮಗೆ ನ್ಯಾಯ ಸಿಗದೇ ಹೋದರೆ, ಮುಂದಿನ ದಿನ ಮಂಗಳೂರಿನ ನೆಹರು ಮೈದಾನದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ರಾಜ್ಯಮಟ್ಟದ ಹೋರಾಟ ಮಾಡುತ್ತೇವೆ. ಕೊನೆಯ ಉಸಿರಿನವರೆಗೂ ಹೋರಾಟ ನಡೆಸುತ್ತೇವೆ” ಎಂದು ಗುಡುಗಿದರು.

ಸಮಾವೇಶದಲ್ಲಿ ಕುಸುಮಾವತಿ ಅವರು ಮಾತನಾಡಿ ಇವತ್ತಿನ ದಿನ ನನ್ನ ಮಗಳನ್ನು ಕಳೆದುಕೊಂಡ ದಿನ… “ನ್ಯಾಯಕ್ಕಾಗಿ 14 ವರ್ಷಗಳಿಂದ ಕಾಯುತ್ತಿದ್ದೇವೆ. ಈವರೆಗೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ನ್ಯಾಯ ಸಿಕ್ಕಿಲ್ಲ, ನಾನು ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ. ಈ ಬಾರಿಯಾದರೂ ನೂತನವಾಗಿ ನೇಮಕವಾದ ಅಧಿಕಾರಿಗಳು ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ವೇದಿಕೆಯಲ್ಲಿ ಸೆರಗೊಡ್ಡಿ ಬೇಡುತ್ತಾ, ಗಳಗಳನೆ ಅತ್ತುಬಿಟ್ಟರು.
ಪ್ರಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಅಂತರ ಈ ಬಾರಿ ಸುಪ್ರೀಂ ಕೋರ್ಟ್ ಸುಪರ್ಧಿಯಲ್ಲಿ ನಡೆಯುವ ತನಿಖೆಯ ಮೇಲೆ ಭರವಸೆ ಇಟ್ಟಿದ್ದೇವೆ, ನ್ಯಾಯ ಸಿಕ್ಕಿಲ್ಲ ಎಂದಾದರೆ ತಪ್ಪೆಸಗುವ ತಂಡದ ಪ್ರತಿಯೊಬ್ಬ ಅಧಿಕಾರಿಗಳ ಮನೆ ಮುಂದೆಯೇ ಪ್ರತಿಭಟಿಸಿ ನ್ಯಾಯ ಪಡೆಯುತ್ತೇವೆ ಎಂದರು.
ಇನ್ನೋರ್ವ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾತನಾಡುತ್ತಾ, ಇಲ್ಲಿ ಸೇರಿರುವವರೆಲ್ಲ ಧರ್ಮಸ್ಥಳ ಕ್ಷೇತ್ರದ ವಿರೋಧಿಗಳಲ್ಲ ಎಂದು ಹೇಳಿ, ಮಾದ್ಯಮದವರಿಗೆ ತೋರಿಸುತ್ತಾ ಇಲ್ಲಿ ಸೇರಿರುವ ಹೋರಾಟಗಾರರೆಲ್ಲರೂ ಎರಡೂ ಕೈಗಳನ್ನು ಮೇಲೆತ್ತುವ ಮೂಲಕ ನಾವೆಲ್ಲ ಧರ್ಮಸ್ಥಳದ ಕ್ಷೇತ್ರದ ಭಕ್ತರು ಎಂಬುವುದನ್ನು ರುಜುವಾತು ಮಾಡಿಸಿದರು. ನಾವು ಹೋರಾಟಗಾರರು ಲೆಪ್ಟಿಸ್ಟ್ಗಳಲ್ಲ, ರೈಟಿಸ್ಟ್ಗಳಲ್ಲ ಬದಲಾಗಿ ನಾವು ರೇಪಿಸ್ಟ್ಗಳ ವಿರೋಧಿಗಳು ಎಂದರು.
ಹೈಕೋರ್ಟ್ ವಕೀಲರಾದ ಮೋಹಿತ್ ಕುಮಾರ್ ಮಾತನಾಡಿ, ಉಜಿರೆಯಿಂದ ಬರುತ್ತಿರುವಾಗ ಪೊಲೀಸಿನವರು ಎಲ್ಲಾ ವಿಡಿಯೋ ಮಾಡುತ್ತಿದ್ದರು. ಉತ್ತಮವಾದ ಕೆಲಸ,ಕಾನೂನು ರೀತಿಯಲ್ಲಿ ಮಾಡಬೇಕಾದದ್ದು,ಮಾಡಿದ್ದೀರಿ.. ಆದರೆ ಅದೇ ವಿಡಿಯೋವನ್ನು 14 ವರ್ಷಗಳ ಹಿಂದೆ ಮಾಡಿರುತ್ತಿದ್ದರೆ ಇಷ್ಟು ಜನ ಹೋರಾಟಗಾರರ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿರುವುದು ಇರ್ತಿರಲಿಲ್ಲ ಎಂಬುವುದಾಗಿ ಪೊಲೀಸರ ಪ್ರಥಮ ಲೋಪದ ಬಗ್ಗೆ ಚಾಟಿ ಬೀಸಿದ ವಕೀಲರು ವಿಡಿಯೋ ಮಾಡುವುದು ಬಿಡಿ ರೆಕಾರ್ಡ್ ಆದ ವಿಡಿಯೋವನ್ನೂ ಕೂಡಾ ಕಲೆಕ್ಟ್ ಮಾಡಲಿಲ್ಲ ನೀವು…ಈ ಎಂಟೈರ್ ಹೋರಾಟಕ್ಕೆ ಹೊಣೆ ಪೊಲೀಸ್ ಡಿಪಾರ್ಟ್ಮೆಂಟ್ ಎಂದರು.
ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಪ್ರಸನ್ನ ರವಿ ಮತ್ತು ದೈವಾರಾಧಕ ಮತ್ತು ಧರ್ಮ ಸೇನಾನಿ ತಮ್ಮಣ್ಣ ಶೆಟ್ಟಿ, ಮಾತನಾಡಿ ಇದು ಸತ್ಯ ಧರ್ಮದ ಮೂಲಕ ನ್ಯಾಯ ಪಡೆಯುವ ಹೋರಾಟವಾಗಿದೆ. ಕಾನೂನಿಗೆ ಗೌರವ ನೀಡುತ್ತೇವೆ ಆದರೆ ಈ ಹೋರಾಟದಿಂದ ವಿರಮಿಸುವುದಿಲ್ಲ ಎಂದರು.ನ್ಯಾಯವಾದಿಗಳಾದ ವಾಸು ಪೂಜಾರಿ, ಹೋರಾಟಗಾರ ಜಯಂತ್ ಟಿ, ದಿನೇಶ್ ಗಾಣಿಗ ಸೇರಿದಂತೆ ಹಲವು ಹೋರಾಟಗಾರ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
arrest
ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.
ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್ವೆಲ್ ಉಜ್ಜೋಡಿ ಬಳಿಯ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Belthangady
ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.
ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.
ತಿದ್ದುಪಡಿ ಆದೇಶದ ಪ್ರಕಾರ:
- ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
- ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ
ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.
Belthangady
ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!
ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.
ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.
ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.
ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
