Connect with us

Uncategorized

ಭಾರತೀಯ ಸೇನೆಯಲ್ಲಿ 23 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳುತ್ತಿರುವ ಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 13ರಂದು ಅದ್ಧೂರಿ ‘ಹುಟ್ಟೂರ ಸ್ವಾಗತ’

Published

on

ಪೆರುವಾಯಿ: ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ನಿಷ್ಠಾವಂತ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಮರಳುತ್ತಿರುವ ಹೆಮ್ಮೆಯ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ (ಕಲ್ಲಡ್ಕ – ಪೆರುವಾಯಿ) ಅವರಿಗೆ ಸೆಪ್ಟೆಂಬರ್ 13, 2026 ರಂದು ಅದ್ಧೂರಿ ‘ಹುಟ್ಟೂರ ಸ್ವಾಗತ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ, ಪೆರುವಾಯಿ ಹಾಗೂ ಗ್ರಾಮದ ಸಮಸ್ತ ದೇಶಭಕ್ತರ ಸಂಯುಕ್ತ ಆಶ್ರಯದಲ್ಲಿ ಈ ಸ್ವಾಗತ ಕಾರ್ಯಕ್ರಮ ನಡೆಯಲಿದೆ.

ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಅತ್ಯುತ್ತಮ ಹಾಗೂ ಶಿಸ್ತಿನ ಸೇವೆಗಾಗಿ ಎರಡು ಬಾರಿ ಸೇನಾ ಹಿರಿಯ ಅಧಿಕಾರಿಗಳ ಪ್ರಶಂಸಾ ಪತ್ರಕ್ಕೆ ಭಾಜನರಾಗಿರುವ ಚಂದ್ರಶೇಖರ ಪೂಜಾರಿ ಅವರು, ದೇಶದ ಗಡಿ ಭಾಗದಲ್ಲಿ ಶೌರ್ಯ ಮತ್ತು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ ಊರಿಗೆ ಕೀರ್ತಿ ತಂದಿದ್ದಾರೆ.

ಬೃಹತ್ ವಾಹನ ಜಾಥಾ ಮತ್ತು ಮೆರವಣಿಗೆಯ ವಿವರ:

  • ದಿನಾಂಕ: ಸೆಪ್ಟೆಂಬರ್ 13, 2026 (ಭಾನುವಾರ)
  • ಸಮಯ: ಸಂಜೆ 4:00 ಗಂಟೆಗೆ
  • ಮಾರ್ಗ: ಕುದ್ದುಪದವಿನಿಂದ ಬೃಹತ್ ವಾಹನ ಜಾಥಾ ಆರಂಭಗೊಂಡು, ಅಲ್ಲಿಂದ ಪೆರುವಾಯಿ ಜಂಕ್ಷನ್ ಮೂಲಕ ಸಾಗಿ ಪೆರುವಾಯಿ ಗ್ರಾಮದ ಕಲ್ಲಡ್ಕದಲ್ಲಿರುವ ಯೋಧರ ನಿವಾಸದವರೆಗೆ ಅದ್ಧೂರಿ ಮೆರವಣಿಗೆ ಜರುಗಲಿದೆ.

ದೇಶಕ್ಕಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಹಗಲಿರುಳು ಶ್ರಮಿಸಿದ ವೀರ ಯೋಧನ ತ್ಯಾಗ ಮತ್ತು ಸೇವೆಗೆ ಗೌರವ ಸಲ್ಲಿಸುವ ಈ ದೇಶಭಕ್ತಿಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ರಾಷ್ಟ್ರಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Uncategorized

ಅಂತರ್ರಾಜ್ಯ ಹೆದ್ದಾರಿಯನ್ನೇ ಅತಿಕ್ರಮಿಸಿ ತಲೆ ಎತ್ತಿದ ಅಕ್ರಮ ಕಟ್ಟಡ..ಅತಿಕ್ರಮಣಕಾರರ ವಿರುದ್ಧ ಪತ್ರಕರ್ತ ದೂರು.

Published

on

ವಿಟ್ಲ: ವಿಟ್ಲದ ಮೂಲಕ ಹಾದುಹೋಗುವ ಕಲ್ಲಡ್ಕ-ಕಾಂಞಂಗಾಡ್ ಅಂತರ್ರಾಜ್ಯ ಹೆದ್ದಾರಿಯ ವಿಟ್ಲ ಬೊಬ್ಬೆಕೇರಿ ಎಂಬಲ್ಲಿ ಹೆದ್ದಾರಿಯನ್ನೇ ಅತಿಕ್ರಮಣ ಮಾಡಿ ಅಕ್ರಮ ಕಟ್ಟಡವೊಂದು ತಲೆಎತ್ತಿರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪತ್ರಕರ್ತ ವಿ. ಟಿ. ಪ್ರಸಾದ್ ಅವರು ಕಂದಾಯ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್‌ಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ವಿಟ್ಲದ ಬೊಬ್ಬೆಕೇರಿಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪತ್ರಕರ್ತರು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪಟ್ಟಣ ಪಂಚಾಯತ್ ಸ್ಪಷ್ಟನೆ

ಈ ಅಕ್ರಮ ನಿರ್ಮಾಣದ ಕುರಿತು ಪ್ರತಿಕ್ರಿಯೆ ನೀಡಿರುವ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ್ ಹಾಗೂ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ಅವರು, “ನಾವು ಯಾವುದೇ ರೀತಿಯಲ್ಲೂ ಈ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿಲ್ಲ. ಸಾರ್ವಜನಿಕ ಜಾಗ ಮತ್ತು ಹೆದ್ದಾರಿ ಅತಿಕ್ರಮಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕಂದಾಯ ಅಧಿಕಾರಿಗಳ ಪ್ರತಿಕ್ರಿಯೆ

ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ರವಿ ಎಂ. ಎನ್. ಅವರು ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, “ಸದ್ರಿ ಅತಿಕ್ರಮಣದ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಲ್ಲದೇ, ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಅತಿಕ್ರಮಣ ನಡೆದಿರುವುದು ಸ್ಪಷ್ಟವಾಗಿದೆ. ಹೆದ್ದಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದೂರು ನೀಡಿದ ಬಳಿಕ, ಹೆದ್ದಾರಿ ಇಲಾಖೆ ಹಾಗೂ ತಹಶೀಲ್ದಾರರ ಆದೇಶದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.

Continue Reading

complaint

ಧರ್ಮಸ್ಥಳ: ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಆರೋಪ – ಎಸ್‌ಪಿಗೆ ದೂರು ಸಲ್ಲಿಕೆ

Published

on

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಲು ತೆರಳಿದ್ದ ಯೂಟ್ಯೂಬ್ ಚಾನೆಲ್ ಪತ್ರಕರ್ತನೊಬ್ಬರ ಮೇಲೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಗುಂಪು ಹಲ್ಲೆ ನಡೆಸಿ, ಜಾತಿ ಆಧಾರಿತ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವುದಲ್ಲದೆ ಮೊಬೈಲ್ ಕಸಿದು ವೀಡಿಯೊ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ದೂರಿನ ಪ್ರಕಾರ, ಅಭಿಷೇಕ್ ಅವರು ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಧರ್ಮಸ್ಥಳ ಪ್ರಕರಣಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ವಿಡಿಯೋಗಳನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ. ಧರ್ಮಸ್ಥಳ ಭಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ Crime No.39/2025 ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ, 2025ರ ಆಗಸ್ಟ್ 6ರಂದು ತಮ್ಮ ಮೇಲೆ ನಡೆದ ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ Crime No.46/2025 ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ತಾವು ದೂರುದಾರರಾಗಿರುವುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್ 20ರಂದು ಮತ್ತೆ ಹಲ್ಲೆ ಆರೋಪ
2026ರ ಸೆಪ್ಟೆಂಬರ್ 20ರಂದು ತಮ್ಮ ಮೇಲೆ ಮತ್ತೊಮ್ಮೆ ಹಲ್ಲೆ ನಡೆದಿರುವುದಾಗಿ ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ. ಬಂಗ್ಲೆಗುಡ್ಡ ಅರಣ್ಯ ಪ್ರದೇಶಕ್ಕೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ/ಘಟನೆಗಳ ಕುರಿತು ವಿಡಿಯೋ ಚಿತ್ರೀಕರಿಸಲು ತೆರಳಿದ್ದ ಸಂದರ್ಭದಲ್ಲಿ ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿನ್ನೆ ದಿನಾಂಕ 20.09.2026ರಂದು ‘ಯುನೈಟೆಡ್ ಮೀಡಿಯಾ’ ಯೂಟ್ಯೂಬ್ ಚಾನೆಲ್‌ನ ಪತ್ರಕರ್ತ ಅಭಿಷೇಕ್ ಎಂ. ಮತ್ತು ಬೆಂಗಳೂರಿನ ಡಿಜಿಟಲ್‌ ವೆಬ್‌ ನ ಶ್ರೇಯಸ್‌ ಎಂಬವರು ಬಂಗ್ಲೆಗುಡ್ಡೆಯ ಪ್ರದೇಶಕ್ಕೆ ವರದಿಗಾರಿಕೆಗಾಗಿ ತೆರಳಿದ್ದರು. ಈ ಸಂದರ್ಭ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಅವರಿಬ್ಬರ ಇರುವಿಕೆಯನ್ನು ಆಕ್ಷೇಪಿಸಿ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದರು.

ಪ್ರಮುಖಾಂಶಗಳು ಮತ್ತು ದೂರಿನ ವಿವರಗಳು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ‘ಯುನೈಟೆಡ್ ಮೀಡಿಯಾ’ ಯೂಟ್ಯೂಬ್ ಚಾನೆಲ್‌ನ ಪತ್ರಕರ್ತರಾದ ಅಭಿಷೇಕ್ ಎಂ. ಅವರು ನೀಡಿರುವ ದೂರಿನ ಮೇರೆಗೆ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. 2026ರ ಸೆಪ್ಟೆಂಬರ್ 20ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವರದಿಗಾರಿಕೆಗಾಗಿ ತೆರಳಿದ್ದ ವೇಳೆ ಸುಮಾರು 20ಕ್ಕೂ ಹೆಚ್ಚು ಸ್ಥಳೀಯ ವ್ಯಕ್ತಿಗಳು ಏಕಾಏಕಿ ಅವರನ್ನು ಸುತ್ತುವರಿದಿದ್ದಾರೆ. ಈ ವೇಳೆ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಿದ್ದರೂ ಸಹ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಗುಂಪಿನಲ್ಲಿದ್ದ 4 ರಿಂದ 5 ಮಂದಿ ವ್ಯಕ್ತಿಗಳು ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಪ್ರಮುಖ ಆರೋಪಗಳನ್ನು ಮಾಡಲಾಗಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು

ಪೂರ್ವ ವಿವಾದದ ಹಿನ್ನೆಲೆ: ಅಭಿಷೇಕ್ ಅವರು ಕಳೆದ 1.5 ವರ್ಷದಿಂದ ಧರ್ಮಸ್ಥಳ ಪ್ರಕರಣದ ವರದಿ ಮಾಡುತ್ತಿದ್ದು, ಈ ಹಿಂದೆ 2025ರ ಆಗಸ್ಟ್ 6ರಂದೂ ತಮ್ಮ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರ ಕುರಿತು ಧರ್ಮಸ್ಥಳ ಠಾಣೆಯಲ್ಲಿ (Crime No.46/2025) ಪ್ರಕರಣ ದಾಖಲಾಗಿದೆ. ಈಗಿನ ಕೃತ್ಯದಲ್ಲೂ ಅದೇ ಪ್ರಕರಣದ ಕೆಲವರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಕ್ಷ್ಯ ನಾಶ ಆರೋಪ: ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಬಲವಂತವಾಗಿ ತಮ್ಮ ವಾಹನದಲ್ಲಿ ಪತ್ರಕರ್ತರನ್ನು ಪೊಲೀಸ್ ಠಾಣೆ ಕಡೆ ಕರೆದೊಯ್ದಿದ್ದಾರೆ. ಈ ವೇಳೆ ಮೊಬೈಲ್ ಫೋನ್ ಕಸಿದುಕೊಂಡು, ಅಂದು ಚಿತ್ರೀಕರಿಸಿದ್ದ ವಿಡಿಯೋಗಳನ್ನು ಅಳಿಸಿಹಾಕಲಾಗಿದ್ದು, ಪತ್ರಿಕಾ ಕೆಲಸದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ನಾಶವಾಗಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಪೊಲೀಸರಿಗೆ ಸಲ್ಲಿಸಿರುವ ಬೇಡಿಕೆಗಳು:

ಪತ್ರಕರ್ತ ಅಭಿಷೇಕ್ ಎಂ. ಅವರ ಮೇಲೆ ನಡೆದಿರುವ ಹಲ್ಲೆ ಮತ್ತು ದೌರ್ಜನ್ಯದ ಗಂಭೀರ ಪ್ರಕರಣದಲ್ಲಿ, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳು ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಘಟನಾ ಸ್ಥಳದಲ್ಲಿ ಭಾಗಿಯಾದವರನ್ನು ಗುರುತಿಸಲು ತ್ವರಿತವಾಗಿ ಆರೋಪಿಗಳ ಗುರುತು ಪರೇಡ್ (Identification Parade) ನಡೆಸುವುದು ಹಾಗೂ ಘಟನೆಗೆ ಸಂಬಂಧಿಸಿದ ಎಲ್ಲಾ ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಭದ್ರಪಡಿಸಿ ಸಂರಕ್ಷಿಸುವುದು ತನಿಖೆಗೆ ಅತ್ಯಗತ್ಯವಾಗಿದೆ. ಇದರೊಂದಿಗೆ, ಹಿಂದಿನ ಪ್ರಕರಣಗಳ ಹಿನ್ನೆಲೆ ಹಾಗೂ ಪ್ರಸ್ತುತ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು, ದೂರುದಾರರಾದ ಅಭಿಷೇಕ್ ಎಂ. ಹಾಗೂ ಅವರ ಕುಟುಂಬದ ಸುರಕ್ಷತೆಗೆ ಸೂಕ್ತ ಪೊಲೀಸ್ ರಕ್ಷಣೆಯನ್ನು ಒದಗಿಸಿಕೊಡಬೇಕೆಂದು ವಿನಂತಿಸಲಾಗಿದೆ.

ಈ ದೂರಿನ ಪ್ರತಿಯನ್ನು ಬೆಳ್ತಂಗಡಿ ಉಪ ಪೊಲೀಸ್ ಅಧೀಕ್ಷಕರು (DySP), ಧರ್ಮಸ್ಥಳ ಠಾಣಾಧಿಕಾರಿ, ಎಸ್‌ಐಟಿ (SIT), ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಪರಿಶಿಷ್ಟ ಜಾತಿ/ವರ್ಗಗಳ ರಕ್ಷಣಾ ಘಟಕಕ್ಕೂ ಕಳುಹಿಸಿಕೊಡಲಾಗಿದೆ.

ಪೊಲೀಸ್ ಇಲಾಖೆಯ ಸ್ಪಷ್ಟನೆ ಮತ್ತು ಪತ್ರಿಕಾ ಮಾಹಿತಿ

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆಯು ಈ ಕೆಳಗಿನಂತೆ ಸ್ಪಷ್ಟನೆ ನೀಡಿದೆ:

“ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸ್ಥಳೀಯರು ಅವರುಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಪೂರ್ವಾನುಮತಿ ಪಡೆಯದೇ ರಕ್ಷಿತಾರಣ್ಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಅರಣ್ಯ ಇಲಾಖೆಯು ದೂರರ್ಜಿ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದೆ.

ಸದರಿ ಇಬ್ಬರು ಯುವಕರು ಠಾಣೆಗೆ ಬಂದಾಗ ಅವರ ಮೇಲೆ ಯಾವುದೇ ಹಲ್ಲೆ ಅಥವಾ ತೊಂದರೆಯಾಗಿದ್ದಲ್ಲಿ ದೂರು ನೀಡಲು ಸೂಚಿಸಲಾಗಿತ್ತು. ಆಗ ಯುವಕರು ತಾವುಗಳು ಈ ಬಗ್ಗೆ ಚರ್ಚಿಸಿ ಅಗತ್ಯವಿದ್ದಲ್ಲಿ ದೂರು ನೀಡುವುದಾಗಿ ತಿಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆ ಸಮಯದಲ್ಲಿ ಯಾವುದೇ ದೂರು ದಾಖಲಾಗಿರುವುದಿಲ್ಲ.” ಎಂದು ಎಸ್‌ಪಿಯವರು ಮಾಹಿತಿ ನೀಡಿದ್ದರು.

ಪ್ರಸ್ತುತ ಪತ್ರಕರ್ತ ಅಭಿಷೇಕ್ ಅವರು ಲಿಖಿತ ದೂರು ನೀಡಿರುವುದರಿಂದ ಈ ಪ್ರಕರಣವು ಮುಂದಿನ ಗಂಭೀರ ಕಾನೂನು ತನಿಖೆಗೆ ಒಳಪಡುವ ಸಾಧ್ಯತೆಯಿದೆ

Continue Reading

Bantawala

ಬಂಟ್ವಾಳದ ಏಮಾಜೆ ಸರ್ಕಾರಿ ಶಾಲೆ: ಗ್ರಾಮೀಣ ಶಿಕ್ಷಣ ರಂಗದ ವಿಶಿಷ್ಟ ಯಶೋಗಾಥೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದಲ್ಲಿರುವ ಏಮಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇಂದು ಕೇವಲ ಒಂದು ಶಿಕ್ಷಣ ಸಂಸ್ಥೆಯಷ್ಟೇ ಅಲ್ಲ, ಬದಲಿಗೆ ರಾಜ್ಯದ ಇಡೀ ಸರ್ಕಾರಿ ಶಾಲಾ ವ್ಯವಸ್ಥೆಗೆ ದಾರಿದೀಪವಾಗಿರುವ ಒಂದು ಅದ್ಭುತ ಮಾದರಿಯಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳೆಂದರೆ ಮೂಲಸೌಕರ್ಯಗಳ ಕೊರತೆ ಮತ್ತು ಮಕ್ಕಳ ಸಂಖ್ಯೆ ಇಳಿಕೆ ಎಂಬ ನಕಾರಾತ್ಮಕ ಧೋರಣೆಯನ್ನು ಈ ಶಾಲೆ ತನ್ನ ಸೃಜನಶೀಲ ಹೆಜ್ಜೆಗಳಿಂದ ಸುಳ್ಳಾಗಿಸಿದೆ.

ಶಾಲೆಯ ಪ್ರಮುಖ ಮೈಲುಗಲ್ಲುಗಳು ಮತ್ತು ವಿಶೇಷತೆಗಳು

ಭದ್ರವಾದ ಬುನಾದಿ: 1982-83ರಲ್ಲಿ ಸ್ಥಾಪನೆಗೊಂಡ ಈ ಶಾಲೆ, ಇಂದು ಎಲ್‌ಕೆಜಿಯಿಂದ (LKG) 5ನೇ ತರಗತಿಯವರೆಗೆ ಒಟ್ಟು 104 ವಿದ್ಯಾರ್ಥಿಗಳನ್ನು ಒಳಗೊಂಡು ಹೆಮ್ಮೆಯಿಂದ ಬೆಳೆದು ನಿಂತಿದೆ.

ಗುಣಮಟ್ಟದ ಬೋಧನೆ: ಇಲ್ಲಿ 2 ಜನ ಸಮರ್ಪಿತ ಸರ್ಕಾರಿ ಶಿಕ್ಷಕರು ಹಾಗೂ 3 ಜನ ಗೌರವ ಶಿಕ್ಷಕಿಯರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.

ಉಚಿತ ಆಟೋ ಸಾರಿಗೆ ಸೇವೆ: ದೂರದ ಊರುಗಳಿಂದ ಬರುವ ಪುಟಾಣಿ ಮಕ್ಕಳ ಅನುಕೂಲಕ್ಕಾಗಿ 2013-14ನೇ ಸಾಲಿನಿಂದಲೇ ಸ್ವಂತ ಶಾಲಾ ಆಟೋ ಮೂಲಕ ಸಂಪೂರ್ಣ ಉಚಿತ ಸಾರಿಗೆ ವ್ಯವ ಕಲ್ಪಿಸಲಾಗಿದೆ. ಇದು ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕೃಷಿ ಮತ್ತು ಪರಿಸರ ಪಾಠ: ಶಾಲೆಯ ಹೆಸರಿನಲ್ಲಿ 2 ಎಕರೆ ಕೃಷಿ ಜಮೀನಿದ್ದು, ನೂರಕ್ಕೂ ಅಧಿಕ ತೆಂಗಿನ ಮರಗಳು, ಔಷಧೀಯ ಗಿಡಗಳು, ಹಣ್ಣು-ಹಂಪಲು ಮತ್ತು ತರಕಾರಿಗಳನ್ನು ಬೆಳೆಸಲಾಗಿದೆ. ಇದು ಮಕ್ಕಳಿಗೆ ಪ್ರಾಯೋಗಿಕ ಕೃಷಿ ಜ್ಞಾನ ನೀಡುತ್ತದೆ.

ತಂತ್ರಜ್ಞಾನ ಮತ್ತು ನಾವೀನ್ಯತೆ: ಇನ್ಫೋಸಿಸ್ ಸಂಸ್ಥೆಯ ಕೊಡುಗೆಯಾದ ಕಂಪ್ಯೂಟರ್‌ಗಳ ಮೂಲಕ 1ನೇ ತರಗತಿಯಿಂದಲೇ ಗಣಕಯಂತ್ರ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಮಳೆ ಕೊಯ್ಲು, ಇಂಗು ಗುಂಡಿ ಮತ್ತು ಎರೆಹುಳ ಗೊಬ್ಬರ ಘಟಕಗಳನ್ನು ಅಳವಡಿಸಲಾಗಿದೆ.

ಪ್ರಶಸ್ತಿ ಹಾಗೂ ಗೌರವಗಳ ಗರಿ

ಶಾಲೆ ಮತ್ತು ಸಮಿತಿಯ ನಿರಂತರ ಪರಿಶ್ರಮಕ್ಕೆ ಸರಕಾರ ಹಾಗೂ ಪ್ರತಿಷ್ಠಿತ ಸಂಸ್ಥೆಗಳಿಂದ ಹಲವು ಪ್ರಮುಖ ಪ್ರಶಸ್ತಿಗಳು ಒಲಿದುಬಂದಿವೆ:

  1. ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ: ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಅವರಿಗೆ 2019-20ರಲ್ಲಿ ಲಭಿಸಿದೆ.
  2. ರಾಜ್ಯ ಮಟ್ಟದ ಉತ್ತಮ SDMC ಪ್ರಶಸ್ತಿ: ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗೆ 2024-25ರಲ್ಲಿ ಸಂದಿದೆ.
  3. ಹಸಿರು ನೈರ್ಮಲ್ಯ ಶಾಲಾ ಪ್ರಶಸ್ತಿ: 2024ರಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ಇದು ಲಭಿಸಿದೆ.

ಮುಂದಿನ ಕನಸುಗಳು ಮತ್ತು ದಾನಿಗಳ ಸಹಕಾರದ ಅಪೇಕ್ಷೆ

ಹಳೆ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ (SDMC), ಪೋಷಕರು ಹಾಗೂ ನೇರಳಕಟ್ಟೆ ಸಹಕಾರಿ ಸಂಘದ ಜಂಟಿ ಸಹಕಾರದಿಂದ ಮುನ್ನಡೆಯುತ್ತಿರುವ ಈ ಶಾಲೆಗೆ ಪ್ರಸ್ತುತ ಕೆಲವು ತುರ್ತು ಅವಶ್ಯಕತೆಗಳಿವೆ. ಮಕ್ಕಳ ಸುರಕ್ಷಿತ ಪ್ರಯಾಣಕ್ಕಾಗಿ ಒಂದು ಶಾಲಾ ವಾಹನ ಹಾಗೂ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಸುಸಜ್ಜಿತ ಸಭಾಂಗಣದ (Auditorium) ಕೊರತೆ ಇದೆ.

ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಈ ಮಾದರಿ ಶಾಲೆಗೆ ಸಹೃದಯಿ ದಾನಿಗಳು ಹಾಗೂ ವಿದ್ಯಾಭಿಮಾನಿಗಳು ಕೈಜೋಡಿಸಿ, ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಹಕರಿಸಬೇಕಾಗಿ ವಿನಂತಿ.

Continue Reading

Trending

Copyright © 2025 Deevatige