Connect with us

AWARNESS

ದಕ್ಷಿಣ ಕನ್ನಡದ ಗಲ್ಫ್‌ ವಾಸಿಗಳಿಗೆ ಚುನಾವಣಾ ಆಯೋಗದಿಂದ ಸಿಕ್ತು ದೊಡ್ಡ ರಿಲೀಫ್: ಯು.ಟಿ. ಖಾದರ್‌ ಯತ್ನಕ್ಕೆ ಯಶಸ್ಸು

Published

on

ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಮಂದಿಗೆ ಹಾಗೂ ಅವರ ಕುಟುಂಬಗಳಿಗೆ ಕರ್ನಾಟಕ ಚುನಾವಣಾ ಆಯೋಗವು ಮಹತ್ವದ ನಿರಾಳತೆಯನ್ನು ನೀಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR-2026) ಸಂದರ್ಭದಲ್ಲಿ ಅನಿವಾಸಿ ಭಾರತೀಯ ಮತದಾರರಿಗೆ ನೀಡಲಾಗುತ್ತಿದ್ದ ನೋಟೀಸ್‌ ನಿಯಮಗಳಲ್ಲಿ ವಿನಾಯಿತಿ ಕೋರಿ ವಿಧಾನಸಭಾ ಸ್ಪೀಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನಡೆಸಿದ ಪ್ರಯತ್ನಕ್ಕೆ ಅಧಿಕೃತ ಯಶಸ್ಸು ಸಿಕ್ಕಿದೆ.

ಸಮಸ್ಯೆಯ ಹಿನ್ನೆಲೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಗಲ್ಫ್‌ನಲ್ಲಿರುವ ಅನಿವಾಸಿ ಮತದಾರರಿಗೆ ನೋಟೀಸ್‌ಗಳನ್ನು ಜಾರಿಗೊಳಿಸಲಾಗುತ್ತಿತ್ತು. ನಿಯಮದ ಪ್ರಕಾರ, ನೋಟೀಸ್‌ ಪಡೆದವರು ಸ್ವತಃ ಚುನಾವಣಾ ನೋಂದಣಾಧಿಕಾರಿ (ERO) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಮುಂದೆ ಖುದ್ದಾಗಿ ಹಾಜರಾಗಬೇಕಿತ್ತು. ಅನಿವಾರ್ಯವಾಗಿ ಗಲ್ಫ್‌ ದೇಶಗಳಲ್ಲಿ ಉದ್ಯೋಗದಲ್ಲಿರುವವರು ಕೇವಲ ಈ ಕಾರಣಕ್ಕಾಗಿಯೇ ತುರ್ತಾಗಿ ಊರಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದು ಸ್ಥಳೀಯ ಕುಟುಂಬಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

ಸಚಿವರ ಸ್ಪಂದನೆ ಮತ್ತು ಆಯೋಗದ ಆದೇಶ: ಈ ಗಂಭೀರ ಸಮಸ್ಯೆಯನ್ನು ಮನಗಂಡ ಸ್ಥಳೀಯರು ಮತ್ತು ಪ್ರಮುಖರು ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಸಚಿವರು ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು, ಗಲ್ಫ್‌ನಲ್ಲಿರುವ ಅನಿವಾಸಿಗಳು ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ಬಲವಾದ ಕೋರಿಕೆ ಸಲ್ಲಿಸಿದ್ದರು.

ಸಚಿವರ ಈ ಮನವಿಗೆ ಸ್ಪಂದಿಸಿರುವ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಇದೀಗ ಮಹತ್ವದ ಜ್ಞಾಪನ ಪತ್ರವನ್ನು ಹೊರಡಿಸಿದೆ. ನೂತನ ಆದೇಶದ ಪ್ರಕಾರ, ಅನಿವಾಸಿ (ಗಲ್ಫ್) ಮತದಾರರಿಗೆ ನೋಟೀಸ್ ಬಂದ ಸಂದರ್ಭದಲ್ಲಿ, ಅವರು ಸ್ವತಃ ಬರುವ ಬದಲಿಗೆ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ಖುದ್ದಾಗಿ ERO/AERO ಮುಂದೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅಧಿಕೃತ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರಿಂದ ಹರ್ಷ ಹಾಗೂ ಶ್ಲಾಘನೆ: ಚುನಾವಣಾ ಆಯೋಗದ ಈ ನಿರ್ಧಾರದಿಂದಾಗಿ ಗಲ್ಫ್‌ನಲ್ಲಿ ದುಡಿಯುತ್ತಿರುವ ದಕ್ಷಿಣ ಕನ್ನಡದ ಸಾವಿರಾರು ಕುಟುಂಬಗಳಿಗೆ ದೊಡ್ಡ ಆರ್ಥಿಕ ಹಾಗೂ ಮಾನಸಿಕ ಹೊರೆ ತಪ್ಪಿದಂತಾಗಿದೆ. ಕೇವಲ ನೋಟೀಸ್ ಉತ್ತರ ನೀಡಲು ಸಾವಿರಾರು ರೂಪಾಯಿ ಖರ್ಚು ಮಾಡಿ ಗಲ್ಫ್‌ನಿಂದ ಊರಿಗೆ ವಿಮಾನ ಹತ್ತಿ ಬರಬೇಕಿದ್ದ ಕಷ್ಟಕ್ಕೆ ಈಗ ತೆರೆ ಬಿದ್ದಿದೆ. ಜನರ ನಾಡಿಮಿಡಿತ ಅರಿತು ತಕ್ಷಣವೇ ಸ್ಪಂದಿಸಿದ ಸಚಿವ ಯು.ಟಿ. ಖಾದರ್ ಅವರ ಈ ಜನಪರ ಕಾಳಜಿ ಮತ್ತು ತ್ವರಿತ ಕಾರ್ಯವೈಖರಿಯನ್ನು ಜಿಲ್ಲೆಯ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಮುಕ್ತಕಂಠದಿಂದ ಶ್ಲಾಘಿಸಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

AWARNESS

ಗೋಕರ್ಣ ಬೀಚಿನಲ್ಲಿ ರಜೆಯ ಮೋಜು..ಬೆಂಗಳೂರಿನ ಮೂವರು ಟೆಕ್ಕಿಗಳ ದುರ್ಮರಣ..

Published

on

ಉತ್ತರ ಕನ್ನಡ :
ಗೋಕರ್ಣದ ದುಬ್ಬಣಶಶಿ (ಡಬ್ಬನಶಶಿ) ಕಡಲತೀರದಲ್ಲಿ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪನಿಯ ಮೂವರು ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತರ ವಿವರ:
ಮೃತರನ್ನು ಬೆಂಗಳೂರಿನ ಬೆಳ್ಳಂದೂರಿನ ‘ಅಲೋರಿಕಾ’ ಕಂಪನಿಯ ಉದ್ಯೋಗಿಗಳಾದ ಶೋಭಾ ದಾಸ್ (22) (ಮೂಲತಃ ಜಾರ್ಖಂಡ್), ಮಹಮ್ಮದ್ ಅಕ್ರಮ್ (27) ಮತ್ತು ಸಮುದ್ರದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ವಿಶ್ವೇಶ್ ಎ.ಕೆ. (24) ಎಂದು ಗುರುತಿಸಲಾಗಿದೆ. ಸೋಮವಾರದ ಹುಡುಕಾಟದ ಬಳಿಕ ವಿಶ್ವೇಶ್ ಅವರ ಮೃತದೇಹವೂ ಪತ್ತೆಯಾಗಿದೆ.

ಘಟನೆ ನಡೆದ ಹಿನ್ನೆಲೆ.
ಕಂಪನಿಯಿಂದ ಸಿಕ್ಕ ಬೋನಸ್ ಪಾರ್ಟಿ ಆಚರಿಸಲು ಈ ತಂಡ ಗೋಕರ್ಣಕ್ಕೆ ಪ್ರವಾಸ ಬಂದಿತ್ತು. ಭಾನುವಾರ ಬೆಳಿಗ್ಗೆ ಸುಮಾರು 7:30 ರ ಸುಮಾರಿಗೆ ತಂಡದ ಐವರು ಸದಸ್ಯರು ಸಮುದ್ರದಲ್ಲಿ ಈಜಲು ಇಳಿದಾಗ ಏಕಾಏಕಿ ಅಪ್ಪಳಿಸಿದ ಬಲವಾದ ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ರಕ್ಷಣೆ ಮತ್ತು ಚಿಕಿತ್ಸೆ:
ಘಟನೆಯನ್ನು ಗಮನಿಸಿದ ರೆಸಾರ್ಟ್‌ನ ಜೀವರಕ್ಷಕ (ಲೈಫ್‌ಗಾರ್ಡ್) ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ತಂದಿದ್ದರು. ಆದರೆ ಶೋಭಾ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರೆ, ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.

ಬದುಕುಳಿದವರು.
ಇದೇ ಘಟನೆಯಲ್ಲಿ ಸಿಲುಕಿದ್ದ ನಿಶಾಂತ್ ಡಿ.ವಿ. (26) ಮತ್ತು ಮಹಮದ್ ಖಾಸಿಂ ಎಂಬ ಇಬ್ಬರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading

AWARNESS

ಧರ್ಮಸ್ಥಳ ಸೌಜನ್ಯ ಪ್ರಕರಣ: ಸಂತೋಷ್ ರಾವ್ ವಿರುದ್ಧ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ – ವಕೀಲರ ಎಚ್ಚರಿಕೆ

Published

on

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರ ವಿರುದ್ಧ ಯಾವುದೇ ಆಧಾರರಹಿತ ಆರೋಪ, ಅಪಪ್ರಚಾರ ಅಥವಾ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಅವರ ಪರ ವಕೀಲ ಮೋಹಿತ್ ಕುಮಾರ್ ಕೆ. ಅವರು ಕಟ್ಟುನಿಟ್ಟಿನ ಕಾನೂನು ಎಚ್ಚರಿಕೆ ನೀಡಿದ್ದಾರೆ.

ಸೆಪ್ಟೆಂಬರ್ 24, 2026ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಎಚ್ಚರಿಕೆ ನೀಡಲಾಗಿದ್ದು, ಸುಪ್ರೀಂ ಕೋರ್ಟ್‌ನ Special Leave Petition (Criminal) No.5763 of 2026 ಹಾಗೂ 2023ರ Spl.CC No.203/2016 ಪ್ರಕರಣದ ತೀರ್ಪು ಮತ್ತು 2026ರ ಆದೇಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖಾಂಶಗಳು:

ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖ: ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ವಿರುದ್ಧ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರರಹಿತ ಆರೋಪ, ನಿಂದನೆ ಅಥವಾ ಸುಳ್ಳು ಮಾಹಿತಿ ಹರಡುವುದನ್ನು ನಿಷೇಧಿಸಲಾಗಿದೆ.

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ: ಮುದ್ರಣ ಮಾಧ್ಯಮ (Print Media), ವಿದ್ಯುನ್ಮಾನ ಮಾಧ್ಯಮ (Electronic Media), ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ಇವರ ವಿರುದ್ಧ ನೇರವಾಗಿ ಅಥವಾ ಪರೋಕ್ಷವಾಗಿ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವುದು ಅಥವಾ ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ತಪ್ಪಿಸುವಂತೆ ಸೂಚಿಸಲಾಗಿದೆ.

ಕಾನೂನು ಕ್ರಮದ ಎಚ್ಚರಿಕೆ: ಈ ಎಚ್ಚರಿಕೆಯನ್ನು ಮೀರಿ ಯಾರಾದರೂ ಅಪಪ್ರಚಾರ ಅಥವಾ ಮಾನಹಾನಿಕರ ಪ್ರಕಟಣೆಗಳನ್ನು ಮುಂದುವರಿಸಿದರೆ, ಯಾವುದೇ ಹೆಚ್ಚಿನ ನೋಟಿಸ್ ನೀಡದೆ ಮಾನಹಾನಿ ಮೊಕದ್ದಮೆ ಸೇರಿದಂತೆ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಕೀಲರು ಎಚ್ಚರಿಸಿದ್ದಾರೆ.

ಸಂಬಂಧಪಟ್ಟ ವ್ಯಕ್ತಿಗಳು, ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಇಂತಹ ಸುಳ್ಳು ಸುದ್ದಿ ಹಾಗೂ ಹೇಳಿಕೆಗಳಿಂದ ದೂರವಿರಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

Continue Reading

AWARNESS

ಮಂಗಳೂರು: ಸಚಿವ ಸಂಪುಟ ಸಭೆ ಹಿನ್ನೆಲೆ – ನಗರದಲ್ಲಿ ಸಂಚಾರ ವ್ಯತ್ಯಯ; ಪ್ರಮುಖ ರಸ್ತೆಗಳಲ್ಲಿ ಬದಲಿ ಮಾರ್ಗ ವ್ಯವಸ್ಥೆ

Published

on

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯು ಸೆಪ್ಟೆಂಬರ್ 18, 2026 ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ (ಪ್ರಜಾಸೌಧ)ಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರು ಮಂಗಳೂರಿಗೆ ಆಗಮಿಸುತ್ತಿದ್ದು, ಗಣ್ಯರ ಭದ್ರತೆ ಮತ್ತು ನಗರದ ಸುಗಮ ಸಂಚಾರದ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಹಾಗೂ ನಿಷೇಧವನ್ನು ಜಾರಿಗೊಳಿಸಿದೆ.

ಯಾವ ದಿನ ಯಾವ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ?

ಸೆಪ್ಟೆಂಬರ್ 17 (ಸಂಜೆ) ಮತ್ತು ಸೆಪ್ಟೆಂಬರ್ 19 (ಬೆಳಿಗ್ಗೆ): ಬಜಪೆ ವಿಮಾನ ನಿಲ್ದಾಣದಿಂದ ಕಾವೂರು, ಬೋಂದೆಲ್, ಮೇರಿಹಿಲ್, ಕೆ.ಪಿ.ಟಿ., ಕದ್ರಿ ಕಂಬಳ, ಬಂಟ್ಸ್ಹಾಸ್ಟೆಲ್, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಹಂಪನಕಟ್ಟೆ, ಕ್ಲಾಕ್ ಟವರ್ ಮೂಲಕ ಹ್ಯಾಮಿಲ್ಟನ್ ಜಂಕ್ಷನ್‌ವರೆಗೆ ಗಣ್ಯರ ಸಂಚಾರವಿರುವುದರಿಂದ ಈ ಮಾರ್ಗದಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕು.

ಸೆಪ್ಟೆಂಬರ್ 18 (ಬೆಳಿಗ್ಗೆ): ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಆರಂಭವಾಗಿ ಕ್ಲಾಕ್ ಟವರ್, ಹಂಪನಕಟ್ಟೆ, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಕೆ.ಪಿ.ಟಿ., ನಂತೂರು ವೃತ್ತ, ಪಂಪುವೆಲ್, ನಾಗುರಿ, ಬಜಾಲ್ ಕ್ರಾಸ್ (ಪ್ರಜಾಸೌಧ) ಮೂಲಕ ಪಡೀಲ್ ಜಂಕ್ಷನ್‌ವರೆಗೆ ಗಣ್ಯರ ಓಡಾಟವಿರುತ್ತದೆ.

ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳು:

ಬದ್ರಿಯಾ ಜಂಕ್ಷನ್ – ಹ್ಯಾಮಿಲ್ಟನ್ ಜಂಕ್ಷನ್: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದ್ರಿಯಾ ಜಂಕ್ಷನ್ – ನಿಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಹಾಗೂ ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.

ಪಂಪುವೆಲ್ – ಪಡೀಲ್: ಪಂಪುವೆಲ್‌ನಿಂದ ಪಡೀಲ್‌ಗೆ ತೆರಳುವವರು ನಂತೂರು ವೃತ್ತ – ಕೈಕಂಬ – ಮರೋಳಿ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮಾರ್ಗವನ್ನು ಬಳಸಬಹುದು.

ಬಜಾಲ್ ಕ್ರಾಸ್ ಮತ್ತು ಕಂಕನಾಡಿ: ಪ್ರಜಾಸೌಧದ ಬಳಿಯ ಬಜಾಲ್ ಕ್ರಾಸ್ ಮುಚ್ಚಿರುವ ಕಾರಣ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಜಪ್ಪಿನಮೊಗರು ದ್ವಾರ – ಬಜಾಲ್ ಮಾರ್ಗವಾಗಿ ಸಂಚರಿಸಬೇಕು.

ತೊಕ್ಕೊಟ್ಟು ಕಡೆಯಿಂದ: ತೊಕ್ಕೊಟ್ಟಿನಿಂದ ಬರುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರ ಪ್ರವೇಶಿಸಬೇಕು.

ವಿಶೇಷ ಸೂಚನೆಗಳು:

  • ಗಣ್ಯರ ಸಂಚಾರವಿರುವ ರಸ್ತೆಗಳ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶವಿಲ್ಲ.
  • ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
  • ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ನಿಗದಿತ ಪರ್ಯಾಯ ಮಾರ್ಗಗಳನ್ನು ಬಳಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!