Connect with us

arrest

ವಿಟ್ಲ: 12 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಸರಣಿ ಲೈಂಗಿಕ ದೌರ್ಜನ್ಯ – ಮೂವರು ಆರೋಪಿಗಳ ಬಂಧನ

Published

on

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ಜಿಲ್ಲೆಯೇ ತಲೆತಗ್ಗಿಸುವಂತಹ ಅಮಾನವೀಯ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 12 ವರ್ಷದ ಅಪ್ರಾಪ್ತ ಬಾಲಕನಿಗೆ ಹದಿನೈದಕ್ಕೂ ಹೆಚ್ಚು ಯುವಕರು ಆಮಿಷವೊಡ್ಡಿ ಹಾಗೂ ಪುಸಲಾಯಿಸಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಪ್ರತ್ಯೇಕ-ಪ್ರತ್ಯೇಕವಾಗಿ ಸರಣಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕ ತೀವ್ರ ಅಸ್ವಸ್ಥಗೊಂಡು ಆತನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಾಗ ಪೋಷಕರು ವಿಚಾರಿಸಿದ್ದು, ಈ ವೇಳೆ ದುರಂತ ಘಟನೆ ಹೊರಬಿದ್ದಿದೆ. ತಕ್ಷಣವೇ ಜಾಗೃತರಾದ ಪೋಷಕರು ಮಕ್ಕಳ ಸಹಾಯವಾಣಿ (1098)ಗೆ ದೂರು ನೀಡಿದ್ದಾರೆ. ಸಹಾಯವಾಣಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಬಾಲಕನ ಹೇಳಿಕೆ ಪಡೆದು ನೀಡಿದ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (POCSO Act 2012) ಅಡಿಯಲ್ಲಿ ಪ್ರತ್ಯೇಕ FIRಗಳನ್ನು ದಾಖಲಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದರು. ಆದರೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಳ್ನಾಡು ಗ್ರಾಮದ ಕಾಡುಮಠ ಅಲ್ಲಿಕಂಡೆ ನಿವಾಸಿ ಜವಾದ್ (32), ಸಾಲೆತ್ತೂರು ಕಟ್ಟೆ ಕಾಲೋನಿ ನಿವಾಸಿ ಸಾಹಿದ್ (32) ಹಾಗೂ ಸಾಲೆತ್ತೂರು ಕಟ್ಟೆ ನಿವಾಸಿ ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ (42) ಬಂಧಿತ ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ 12ಕ್ಕೂ ಹೆಚ್ಚು ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

  • ಅ.ಕ್ರ 185/2026: ಕೊಳ್ನಾಡು ಗ್ರಾಮದ ಕಾಡುಮಠ ಅಲ್ಲಿಕಂಡೆ ನಿವಾಸಿ ಜವಾದ್ (32) ತಂದೆ ಅಬ್ದುಲ್ ಖಾದರ್
  • ಅ.ಕ್ರ 187/2026: ಸಾಲೆತ್ತೂರು ಕಟ್ಟೆ ಕಾಲೋನಿ ನಿವಾಸಿ ಸಾಹಿದ್ (32) ತಂದೆ ಹಮೀದ್
  • ಅ.ಕ್ರ 188/2026: ಸಾಲೆತ್ತೂರು ಕಟ್ಟೆ ನಿವಾಸಿ ರಿಯಾಝ್ @ ಅಬ್ದುಲ್ ಗಫೂರ್ (42) ತಂದೆ ಸುಲೈಮಾನ್

ಈ ಘಟನೆಯಿಂದ ವಿಟ್ಲ-ಸಾಲೆತ್ತೂರು ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಮತ್ತು ಪೋಷಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಅಪ್ರಾಪ್ತರನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳನ್ನು ಎಸಗುವ ಜಾಲವೇ ಸಕ್ರಿಯವಾಗಿರುವ ಸಂಶಯವಿದ್ದು, ರಾತ್ರಿ ವೇಳೆ ಬಸ್ ತಂಗುದಾಣ ಹಾಗೂ ಅಂಗಡಿ ಜಗುಲಿಗಳಲ್ಲಿ ಅನುಮಾನಾಸ್ಪದವಾಗಿ ಗುಂಪು ಸೇರುವವರ ಮೇಲೆ ಪೊಲೀಸರು ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಸ್ತುತ ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ (CWC) ಉಸ್ತುವಾರಿಯಲ್ಲಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪೆರ್ಡೂರು ಪ್ರದೀಪ್ ಪೂಜಾರಿ ಹಲ್ಲೆ, ಆತ್ಮಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಮಧ್ಯಪ್ರದೇಶದಲ್ಲಿ ಬಂಧನ..

Published

on

​ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ (28) ಅವರ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ​

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು, ವಶಕ್ಕೆ ಪಡೆದಿರುವ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದೆ. ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಪಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ:​

ಪೆರ್ಡೂರಿನ ಪ್ರದೀಪ್ ಪೂಜಾರಿ ಅವರ ಮೇಲೆ ಅಕ್ಟೋಬರ್ 27ರ ರಾತ್ರಿ ಶ್ರಾವ್ಯಾ ಶೆಟ್ಟಿ ಕುಟುಂಬದವರು ಮೂರು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಭೀಕರವಾಗಿ ಹಲ್ಲೆ ನಡೆಸಿದ್ದರು ಎಂದು ಪ್ರದೀಪ್ ಅವರ ಸಹೋದರ ದಿಲೀಪ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಪ್ರದೀಪ್ ಅಕ್ಟೋಬರ್ 28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಕ್ಟೋಬರ್ 30ರ ಸಂಜೆ 5:30ರ ಸುಮಾರಿಗೆ ಆಸ್ಪತ್ರೆಯ ಶೌಚಾಲಯದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ​ಈ ಘಟನೆಗೆ ಸಂಬಂಧಿಸಿದಂತೆ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.

ವಿಶೇಷ ತಂಡಗಳ ರಚನೆ:

ಪ್ರಕರಣದ ತನಿಖೆಗಾಗಿ ಹಾಗೂ ಆರೋಪಿಗಳ ಪತ್ತೆಗೆ ಎಸ್‌ಪಿ ಅವರು 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ​ಅಧಿಕಾರಿ ಅಮಾನತು: ಪ್ರದೀಪ್ ಅವರ ಮೇಲೆ ಹಲ್ಲೆ ನಡೆದಾಗ ಆರಂಭದಲ್ಲಿ ಎಫ್‌ಐಆ‌ರ್ (FIR) ದಾಖಲಿಸದೆ ಕೇವಲ ಎನ್‌ಸಿ (NC) ದಾಖಲಿಸಿದ್ದ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಕರ್ತವ್ಯದಿಂದ ತೆರವುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ​ಪೂರ್ವ ದೂರುಗಳು ಹಾಗೂ ಚಾರ್ಜ್‌ಶೀಟ್:​ಇನ್ನೊಂದೆಡೆ, ಮೃತ ಪ್ರದೀಪ್ ಪೂಜಾರಿ ವಿರುದ್ಧವೂ ಯುವತಿ ಈ ಹಿಂದೆ 3 ಬಾರಿ ದೂರು ನೀಡಿದ್ದರು: ​2025 ನವೆಂಬರ್ 10: ಬೆದರಿಕೆ ಕರೆ ಹಾಕಿದ ಆರೋಪ. ​ನವೆಂಬರ್ 29: ಅತ್ಯಾಚಾರ ಆರೋಪ. ​ಅಕ್ಟೋಬರ್ 28: ಖಾರದ ಪುಡಿ ಎರಚಿ ಕೊಲೆಯತ್ನ ನಡೆಸಿದ ಆರೋಪ. ​ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ​ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.​

Continue Reading

arrest

ಕೊಲೆ ಮಾಡಿದ ಸ್ನೇಹಿತನೇ ಕನಸಿನಲ್ಲಿ ದೆವ್ವವಾಗಿ ಕಾಡಿದ! ಭಯ ತಾಳಲಾರದೆ ಪೊಲೀಸರಿಗೆ ಶರಣಾದ ಆರೋಪಿ

Published

on

ಮದ್ಯದ ಪಾರ್ಟಿ ವೇಳೆ ಸ್ನೇಹಿತನನ್ನೇ ಹೊಡೆದು ಕೊಂದಿದ್ದ ಯುವಕ; 15 ದಿನಗಳ ಕಾಲ ನಿದ್ರೆಯಲ್ಲೂ ಕಾಡಿದ ಮೃತ ಸ್ನೇಹಿತನ ನೆನಪು – ಕೊನೆಗೆ ಕೊಲೆ ರಹಸ್ಯ ಬಯಲು

ಮುಂಬೈ: ಮದ್ಯದ ಪಾರ್ಟಿ ವೇಳೆ ಉಂಟಾದ ಜಗಳದಲ್ಲಿ ಸ್ನೇಹಿತನನ್ನೇ ಹೊಡೆದು ಕೊಲೆಗೈದು, ಮೃತದೇಹವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಕೊನೆಗೆ ಮೃತ ಸ್ನೇಹಿತ ಕನಸಿನಲ್ಲಿ ಪದೇಪದೇ ಬಂದು ಕಾಡುತ್ತಿದ್ದಾನೆಂಬ ಭಯದಿಂದ ಪೊಲೀಸರ ಮುಂದೆ ಶರಣಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬವರ ಮೃತದೇಹ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪ್ರಭು ನೀಡಿದ ಹೇಳಿಕೆಯ ಪ್ರಕಾರ, ಸ್ನೇಹಿತ ಕದಮ್ ಅವರ ಮನೆಯಲ್ಲೇ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಪ್ರಭು, ಕದಮ್ ಅವರನ್ನು ಹೊಡೆದು ಕೊಲೆ ಮಾಡಿದ್ದಾನೆ.ಆತ ಮೃತಪಟ್ಟಿದ್ದ. ಸ್ನೇಹಿತ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡ ಪ್ರಭು, ತಕ್ಷಣ ತನ್ನ ಬಾಡಿಗೆ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಎಂಬಾತನ ಸಹಾಯ ಕೋರಿದ್ದಾನೆ. ಅವರಿಬ್ಬರೂ ಸೇರಿ ವಿಶಾಲ್ ಅವರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ರಾತ್ರೋರಾತ್ರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಬಳಿಕ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಆರಾಮವಾಗಿದ್ದ ಪ್ರಭುವಿಗೆ ಕೆಲವೇ ದಿನಗಳಲ್ಲಿ ಭಯ ಶುರುವಾಗಿದೆ. ಮೃತಪಟ್ಟ ಸ್ನೇಹಿತ ವಿಶಾಲ್ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದ. ಸುಮಾರು 15 ದಿನಗಳ ಕಾಲ ಸರಿಯಾಗಿ ನಿದ್ರೆ ಮಾಡಲೂ ಸಾಧ್ಯವಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಕನಸಿನ ಭಯ ಹಾಗೂ ಪಶ್ಚಾತ್ತಾಪದಿಂದ ಕಂಗೆಟ್ಟ ಪ್ರಭು, ಕೊನೆಗೆ ತಾನಾಗಿಯೇ ಪೊಲೀಸರ ಬಳಿಗೆ ತೆರಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.

ಈ ಸಂಬಂಧ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

arrest

ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Published

on

ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!