Connect with us

Kadaba

ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ, ಸವಣೂರು, ಮರ್ದಾಳ ಗ್ರಾ.ಪಂ.ಗಳಿಗೆ ಲೋಕಾಯುಕ್ತ ದಿಢೀರ್ ದಾಳಿ: ಕಡತಗಳ ತೀವ್ರ ಪರಿಶೀಲನೆ

Published

on

ನೆಲ್ಯಾಡಿ / ಕಡಬ: ರಾಜ್ಯ ಲೋಕಾಯುಕ್ತರ ಆದೇಶದಂತೆ ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ, ಸವಣೂರು ಹಾಗೂ ಬಂಟ್ರ ಮರ್ದಾಳ ಗ್ರಾಮ ಪಂಚಾಯತ್ ಕಚೇರಿಗಳಿಗೆ ನಿನ್ನೆ (ಸೆ. 1) ಲೋಕಾಯುಕ್ತ ಪೊಲೀಸರ ಪ್ರತ್ಯೇಕ ತಂಡಗಳು ದಿಢೀರ್ ಭೇಟಿ ನೀಡಿ ಕಡತ ಹಾಗೂ ದಾಖಲೆಗಳ ತೀವ್ರ ಪರಿಶೀಲನೆ ನಡೆಸಿವೆ.

ನೆಲ್ಯಾಡಿ ಹಾಗೂ ಶಿರಾಡಿ ಗ್ರಾ.ಪಂ.ನಲ್ಲಿ ಪರಿಶೀಲನೆ: ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ನಾಗರಾಜ್, ಪ್ರಸನ್ನ, ಸುದೀಪ್ ಹಾಗೂ ಜಲಾಲ್ ಅವರನ್ನೊಳಗೊಂಡ ತಂಡವು ನಿನ್ನೆ ಬೆಳಿಗ್ಗೆ 10.30ಕ್ಕೆ ನೆಲ್ಯಾಡಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ ರಾತ್ರಿ 7.45ರ ವರೆಗೆ ಸುದೀರ್ಘ ಪರಿಶೀಲನೆ ನಡೆಸಿತು. ಹಾಗೆಯೇ ಮಂಗಳೂರಿನ ಲೋಕಾಯುಕ್ತ ಪೊಲೀಸರ ತಂಡವು ಶಿರಾಡಿ ಗ್ರಾಮ ಪಂಚಾಯತ್ ಕಚೇರಿಗೆ ಬೆಳಿಗ್ಗೆ 10.30ಕ್ಕೆ ಆಗಮಿಸಿ ರಾತ್ರಿ 7.30ರ ವರೆಗೆ ಕಡತಗಳನ್ನು ತಪಾಸಣೆಗೊಳಪಡಿಸಿತು.

ಸವಣೂರು ಮತ್ತು ಮರ್ದಾಳ ಗ್ರಾ.ಪಂ. ಮೇಲೆಯೂ ದಾಳಿ: ಇತ್ತ ಸವಣೂರು ಗ್ರಾಮ ಪಂಚಾಯತ್‌ನಲ್ಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿತು. ಪಂಚಾಯತ್ ಆಡಳಿತದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ (Suo Moto) ದೂರು ದಾಖಲಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಬಂಟ್ರ ಮರ್ದಾಳ ಗ್ರಾಮ ಪಂಚಾಯತ್‌ಗೆ 10 ಜನರ ಲೋಕಾಯುಕ್ತ ಪೊಲೀಸರ ತಂಡ ಭೇಟಿ ನೀಡಿ ಬೆಳಿಗ್ಗೆ 10.30ರಿಂದ ರಾತ್ರಿ ಸುಮಾರು 8 ಗಂಟೆಯವರೆಗೆ ದಾಖಲೆಗಳನ್ನು ತಡಕಾಡಿದೆ.

ಪರಿಶೀಲಿಸಿದ ಪ್ರಮುಖ ದಾಖಲೆಗಳು: ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಳಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಿಲ್ ಪಾವತಿ, ಸಾರ್ವಜನಿಕ ಅರ್ಜಿಗಳ ವಿಲೇವಾರಿ, ಕಟ್ಟಡ ನಿರ್ಮಾಣ ಪರವಾನಗಿ, 9/11 ಹಾಗೂ ಖಾತಾ ಬದಲಾವಣೆ, ನಗದು ವ್ಯವಹಾರ ಮತ್ತು ಕಚೇರಿ ಹಾಜರಾತಿ ಪುಸ್ತಕಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ತನಿಖೆಗೆ ಒಳಪಡಿಸಿದರು.

ಪರಿಶೀಲನೆ ವೇಳೆ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಅಗತ್ಯ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ಒದಗಿಸಿದರು. ಎಲ್ಲ ದಾಖಲೆಗಳನ್ನು ಕ್ಲಪ್ತ ಸಮಯದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದ್ದಾರೆ. ಲೋಕಾಯುಕ್ತರ ಈ ದಿಢೀರ್ ಭೇಟಿಯಿಂದ ಪಂಚಾಯತ್‌ಗಳಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಕಡಬ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ರೌಡಿಶೀಟರ್‌ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ

Published

on

ಪುತ್ತೂರು: ಅಪ್ರಾಪ್ತ ಬಾಲಕಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದು, ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪುತ್ತೂರು) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ, ರೌಡಿಶೀಟರ್ ಸದ್ದಾಂ (34) ಶಿಕ್ಷೆಗೆ ಒಳಗಾದ ಆರೋಪಿ.

ಪ್ರಕರಣದ ವಿವರ: 2019ರಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ (ಅ.ಕ್ರ: 24/2019) ದಾಖಲಾಗಿತ್ತು. ಅಂದಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕರಾಗಿದ್ದ ನಾಗೇಶ್ ಕೆ. ಅವರು ಸಮಗ್ರ ತನಿಖೆ ನಡೆಸಿ, ಆರೋಪಿ ಸದ್ದಾಂ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ ಅವರು ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ಪರಿಗಣಿಸಿ ಈ ಕೆಳಗಿನಂತೆ ಶಿಕ್ಷೆ ಪ್ರಕಟಿಸಿದ್ದಾರೆ:

ಪೋಕ್ಸೋ ಕಾಯ್ದೆ ಅಡಿ: ಪೋಕ್ಸೋ ಕಾಯ್ದೆಯ ಸೆಕ್ಷನ್ 5(l) ಮತ್ತು 5 (j)(ii) ನೊಂದಿಗೆ ಓದಲಾದ ಸೆಕ್ಷನ್ 6 ರ ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ವರ್ಷ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಐಪಿಸಿ ಸೆಕ್ಷನ್ 506 ಅಡಿ: ಕ್ರಿಮಿನಲ್ ಹೆದರಿಕೆ (IPC 506) ಆರೋಪದಡಿಯಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿ 1 ವರ್ಷ ಶಿಕ್ಷೆ ವಿಧಿಸಲಾಗಿದೆ.

ಎರಡೂ ಶಿಕ್ಷೆಗಳು ಏಕಕಾಲದಲ್ಲಿ (Concurrently) ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಪಿ ರೌಡಿಶೀಟರ್: ಶಿಕ್ಷೆಗೆ ಗುರಿಯಾದ ಸದ್ದಾಂ ಕಡಬ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು (ಅ.ಕ್ರ: 59/2011, 62/2020, 27/2021, 105/2021) ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ (ಅ.ಕ್ರ: 101/2022) ದಾಖಲಾಗಿವೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪರಾಜ್ ಅಡಂತ್ಯಾಯ ಅವರು ವಾದ ಮಂಡಿಸಿದ್ದರು.

Continue Reading

accident

ಸವಣೂರು: ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬದ ಸ್ಟೇ ವಯರ್‌ಗೆ ಡಿಕ್ಕಿ – ಕೃಷಿಕ ಯುವಕ ಸ್ಥಳದಲ್ಲೇ ಸಾವು

Published

on

ಸವಣೂರು ಗ್ರಾಮದ ಕನ್ನಡಕುಮೇರು ಎಂಬಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬದ ಸ್ಟೇ ವಯರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಅಕ್ಟೋಬರ್ 20 ರ ತಡರಾತ್ರಿ ಸಂಭವಿಸಿದೆ. ಕುದ್ಮಾರ್ ಗ್ರಾಮದ ದೇವಗುಡ್ಡೆ ನಿವಾಸಿ ವೆಂಕಪ್ಪ ಗೌಡ ಅವರ ಪುತ್ರ ಧನಂಜಯ್ (27) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಅವಿವಾಹಿತ ಯುವಕ ಧನಂಜಯ್ ಅವರು ಚಾಲನಾ ಪರವಾನಗಿ ಹೊಂದಿದ್ದರು. ಇವರ ಸಹೋದರ ಪುರುಷೋತ್ತಮ ಅವರು ಬರೆಪ್ಪಾಡಿಯಲ್ಲಿರುವ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ದೂರು ನೀಡಿದ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಕ್ಟೋಬರ್ 20ರಂದು ರಾತ್ರಿ ಧನಂಜಯ್ ಅವರು ತಮ್ಮ ಸ್ನೇಹಿತ, ಕುವೆತ್ತೋಡಿ ನಿವಾಸಿ ರೋಷನ್ (33) ಎಂಬವರೊಂದಿಗೆ ಬೆಳ್ಳಾರೆಗೆ ಬಂದಿದ್ದರು. ಬಳಿಕ ರೋಷನ್ ಅವರನ್ನು ಮೋಟಾರ್ ಸೈಕಲ್‌ನಲ್ಲಿ (KA 19 HK 0323) ಸಹಸವಾರನಾಗಿ ಕುಳ್ಳಿರಿಸಿಕೊಂಡು ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಬರುತ್ತಿದ್ದಾಗ, ರಾತ್ರಿ ಸುಮಾರು 12:30 ರ ವೇಳೆಗೆ ಕನ್ನಡಕುಮೇರಿ ಎಂಬಲ್ಲಿ ಬೈಕ್ ಚಾಲನೆಯ ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವಯರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಧನಂಜಯ್ ಅವರು ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಹಸವಾರ ರೋಷನ್ ಕೂಡ ಗಾಯಗೊಂಡಿದ್ದಾರೆ.

ಘಟನೆಯ ವಿಷಯವು ಮೃತನ ಸಹೋದರನಿಗೆ ಅಕ್ಟೋಬರ್ 21ರ ಬೆಳಗಿನ ಜಾವ ಸುಮಾರು 3:00 ಗಂಟೆಗೆ ತಿಳಿದುಬಂದಿದೆ. ಆರಂಭದಲ್ಲಿ ಕೊಲೆ ಶಂಕೆ ವ್ಯಕ್ತವಾಗಿದ್ದ ಕಾರಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಳಿಕ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಅಪಘಾತ ಎಂಬುದು ಸ್ಪಷ್ಟವಾಗಿದೆ. ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ಬೆಳ್ಳಾರೆ ಠಾಣಾ ಉಪನಿರೀಕ್ಷಕ ಈರಯ್ಯ ಡಿ.ಎನ್. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 2023ರ ಕಲಂ 281, 125(a), 106 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ.

Continue Reading

accident

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ; ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವು

Published

on

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಕರ್ಬಸಂಕದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ನೆಲ್ಯಾಡಿಯಲ್ಲಿ ಕಾರ್ಯಚರಿಸುತ್ತಿರುವ ಫ್ಲವರ್ಸ್‌ ಹೋಟೆಲ್ ಮಾಲಕ ಜೋಜೋ ಟಿ ಜೋರ್ಜ್ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಆಲ್ವಿನ್‌ ಜೋಜೋ ಜೋರ್ಜ್ (16) ಎಂದು ಗುರುತಿಸಲಾಗಿದೆ.

ಗುರುವಾರ ಮುಂಜಾನೆ ಸುಮಾರು 1 ಗಂಟೆಯ ವೇಳೆಗೆ ನೆಲ್ಯಾಡಿ ಕರ್ಬಸಂಕದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಆಲ್ವಿನ್‌ ಜೋಜೋ ಜೋಸ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ನೆಲ್ಯಾಡಿ ಹೊರಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!