Connect with us

arrest

ನಕಲಿ NCIB ಅಧಿಕಾರಿ, ಅಂತರರಾಷ್ಟ್ರೀಯ ವಂಚಕ ಸ್ಯಾಮ್ ಪೀಟರ್ ಸಿಸಿಬಿ ಪೊಲೀಸರ ಬಲೆಗೆ!

Published

on

ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಕುಖ್ಯಾತ ಅಂತರರಾಷ್ಟ್ರೀಯ ವಂಚಕ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ (64) ಎಂಬಾತನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಜಾಮೀನು ಪಡೆದು ಸುಮಾರು 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಕೊನೆಗೂ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರೋಪಿ ಸ್ಯಾಮ್ ಪೀಟರ್ ತನ್ನದೇ ಆದ ಗ್ಯಾಂಗ್ ರಚಿಸಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುತ್ತಿದ್ದ. ಬ್ಯಾಂಕ್ ವಂಚನೆ, ಹಣಕಾಸು ವಿವಾದ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಅವರ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಸುಲಿಗೆ ಮಾಡುತ್ತಿದ್ದ.

ಈ ಸಂಬಂಧ 2019ರ ಆಗಸ್ಟ್ 16 ರಂದು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಿದ್ದ ಕದ್ರಿ ಪೊಲೀಸರು, ಸ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗ್‌ನ 8 ಮಂದಿಯನ್ನು ಬಂಧಿಸಿದ್ದರು. ತದನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಈತ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

11ಕ್ಕೂ ಹೆಚ್ಚು ನಕಲಿ ಹೆಸರುಗಳು!

ಒಂದು ಕಡೆ ಅಪರಾಧ ಎಸಗಿ ತಕ್ಷಣವೇ ಮತ್ತೊಂದು ರಾಜ್ಯಕ್ಕೆ ಕಾಲು ಕೀಳುತ್ತಿದ್ದ ಈತ, ಅಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡು ವಾಸಿಸುವ ಪ್ರವೃತ್ತಿ ಹೊಂದಿದ್ದ. ತನಿಖೆಯ ವೇಳೆ ಈತ ನಿಜ ಗುರುತನ್ನು ಮರೆಮಾಚಲು ಡ್ಯಾನಿ ತಾರಕನ್, ರಾಹುಲ್ ಪೀಟರ್, ಆಂಟನಿ, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ಶಾರೂನ್ ಪ್ರಾನ್ಸಿಸ್, ಆಂಟೋನಿ ಪ್ರಾನ್ಸಿಸ್ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ಹೆಸರುಗಳನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್:

ಬಂಧಿತ ಸ್ಯಾಮ್ ಪೀಟರ್ ಕುಖ್ಯಾತ ವಂಚಕನಾಗಿದ್ದು, ಈತನ ವಿರುದ್ಧ ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿ 2001 ರಿಂದಲೇ ಇಂಟರ್‌ಪೋಲ್ (Interpol) ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ ಎಂಬುದು ತಿಳಿದುಬಂದಿದೆ.

ವಿವಿಧ ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಪ್ರಕರಣ:

ಆರೋಪಿಯ ವಿರುದ್ಧ ಕರ್ನಾಟಕದ ಮಂಗಳೂರು (ಪೂರ್ವ, ಉಳ್ಳಾಲ, ಕೊಣಾಜೆ ಠಾಣೆಗಳು), ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ ಹಾಗೂ ಕುಶಾಲನಗರ ಮಾತ್ರವಲ್ಲದೆ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವಂಚನೆ ಹಾಗೂ ಮೋಸದ ಸುಮಾರು 17 ಪ್ರಕರಣಗಳು ದಾಖಲಾಗಿವೆ.

ಮಂಗಳೂರಿನ ಉಳ್ಳಾಲ ಠಾಣೆ ಪ್ರಕರಣದಲ್ಲಿ ಈತನ ವಿರುದ್ಧ 17 ಬಾರಿ ವಾರೆಂಟ್ ಹಾಗೂ ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಹೊರಡಿಸಿ, ಉದ್ಘೋಷಣೆ (Proclamation) ಹೊರಡಿಸಲಾಗಿತ್ತು.

ಸದ್ಯ ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿಂದೆ 2019 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈತನನ್ನು ಬಂಧಿಸಲಾಗಿತ್ತು. ಈತನ ಬಂಧನದ ನಂತರ ಈತನ ವಿರುದ್ಧ ಹೊರಡಿಸಲಾಗಿದ್ದ ರೆಡ್ ಕಾರ್ನರ್ ನೋಟಿಸ್ (RCN) ಅನ್ನು ರದ್ದುಗೊಳಿಸಲಾಗಿತ್ತು. ಆದರೂ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ ಈತ, ಸೆಪ್ಟೆಂಬರ್ 2023 ರಲ್ಲಿ ಜಾಮೀನು ಪಡೆದು ಹೊರಬಂದ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಮತ್ತೆ ತಲೆಮರೆಸಿಕೊಂಡಿದ್ದನು.

ವಿವಿಧ ಹೆಸರುಗಳಲ್ಲಿ ನಿರಂತರವಾಗಿ ಜಾಗ ಬದಲಾಯಿಸುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಡೇಂಜರಸ್ ಅಪರಾಧಿಯನ್ನು ಜಾಲ ಬೀಸಿ ಹಿಡಿಯುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಅತ್ಯುತ್ತಮ ಕಾರ್ಯಾಚರಣೆ ನಡೆಸಿ, ಶ್ಲಾಘನೀಯ ಕೆಲಸ ಮಾಡಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

6 ವರ್ಷಗಳಿಂದ ವಿದೇಶದಲ್ಲಿದ್ದ ವಾರೆಂಟ್ ಆರೋಪಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್: ಬಂಟ್ವಾಳ ಪೊಲೀಸರ ಕಾರ್ಯಾಚರಣೆ

Published

on

ಮಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಬಜಾಲ್‌ನಂತೂರು ನಿವಾಸಿ ಮಹಮ್ಮದ್ ನೌಫಲ್ @ ಸಫಾರಿ ನೌಫಲ್ (34) ದಸ್ತಗಿರಿಯಾದ ಆರೋಪಿ.

ಪ್ರಕರಣದ ವಿವರ: ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಅ.ಕ್ರ: 24/2020, ಐಪಿಸಿ ಕಲಂ: 143, 147, 148, 504, 323, 324, 506, 427 r/w 149 ಮತ್ತು ಕಾವಲು ಕಾಯ್ದೆ) ಸಂಬಂಧಿಸಿದಂತೆ ಈಾತನು ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ. ಈತನ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು.

ಸೆಪ್ಟೆಂಬರ್ 15, 2026ರಂದು ವಿದೇಶದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಸಹಾಯದಿಂದ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆಪ್ಟೆಂಬರ್ 29, 2026ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

arrest

ಬೆಳ್ತಂಗಡಿ: ದಲಿತ ಕುಟುಂಬದ ಜಮೀನಿಗೆ ಅಕ್ರಮ ಪ್ರವೇಶಿಸಿ ಅಶ್ಲೀಲ ಪ್ರದರ್ಶನ – ಆರೋಪಿ ಬಂಧನ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿ ಕೃತ್ಯವೆಸಗಿ, ದಲಿತ ಕುಟುಂಬದ ಮಹಿಳೆಯರ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಟ್ಟಾಡಿ ಮನೆಯ ಅಬ್ದುಲ್ ಹನೀಫ್ ಹುಸೇನ್ (50) ಎಂದು ಗುರುತಿಸಲಾಗಿದೆ.

ಘಟನೆ ವಿವರ:

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬದ ಸ್ವಾಧೀನದ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿ ಹಾಕಿ ಕುಟುಂಬ ಕೃಷಿ ಕಾರ್ಯದಲ್ಲಿ ತೊಡಗಿತ್ತು.

ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಏಕಾಏಕಿ ಆ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಡ ಕುಟುಂಬ ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಯನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯರು ದಾಂಧಲೆಯ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆರೋಪಿ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆಯನ್ನು ಎತ್ತಿ ಒಳ ಉಡುಪನ್ನು ಜಾರಿಸಿ ತನ್ನ ಗುಪ್ತಾಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದಿದ್ದಾನೆ. “ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ, ಈ ಜಾಗ ಬಿಟ್ಟು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಮತ್ತು ಬಂಧನ:

ಈತನ ವಿಕೃತಿಯಿಂದ ಭಯಗೊಂಡ ಬಡ ಕುಟುಂಬವು ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣದ ದೃಶ್ಯಾವಳಿ ಸಾಕ್ಷ್ಯಾಧಾರಗಳೊಂದಿಗೆ ಸೆ.8 ರಂದು ದೂರು ನೀಡಿದೆ.

ದೂರಿನ ಅನ್ವಯ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ಎಸ್ 329(3), 352, 351(2), 75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

40 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಬಡ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದ್ದು, ಈ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

arrest

ಕರಿಕೆ: ಕೇರಳ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; ಓರ್ವನ ಬಂಧನ, 40 ಕೆಜಿ ಮಾಂಸ ವಶ

Published

on

ಕರಿಕೆ ಸಮೀಪದ ಕೇರಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕರಿಕೆ ತೋಟಮ್ ನಿವಾಸಿ ಸಿದ್ದು (35) ಬಂಧಿತ ಆರೋಪಿ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಆರೋಪಿಗಳಾದ ಜಿ.ಎಸ್. ವಿನೀಶ್ ಮತ್ತು ವಿಮಲ್ ರಾಜ್ ಪರಾರಿಯಾಗಿದ್ದಾರೆ.

ಕರಿಕೆ ಸಮೀಪದ ತೋಟಮ್ ಬಳಿಯ ಕೇರಳ ಮೀಸಲು ಅರಣ್ಯದ ಗೇರು ತೋಟಿನ ಕಾಟೂರ್ ಕೊಪ್ಪು ಎಂಬಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಆರೋಪಿಯಿಂದ ಒಂದು ನಾಡ ಬಂದೂಕು, ಸುಮಾರು 40 ಕೆಜಿ ಕಡವೆ ಮಾಂಸ ಹಾಗೂ ಬೇಟೆಗೆ ಬಳಸಿದ್ದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಸರಗೋಡು ವಲಯದ ಅರಣ್ಯ ಅಧಿಕಾರಿಗಳಾದ ರಾಜು ಎಂ.ಪಿ., ಪ್ರಕಾಶ್ ವಿ.ಪಿ. ಹಾಗೂ ಪ್ರವೀಣ್ ಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿತ್ತು

Continue Reading

Trending

Copyright © 2025 Deevatige

error: Content is protected !!