Kadaba
ನೂಜಿಬಾಳ್ತಿಲ: ಬಾಲೆಮಾರು-ಕುರ್ನೂಜಿಯಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಪರದಾಟ; ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ
ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ಇಚ್ಲಂಪಾಡಿ ಸಂಪರ್ಕಿಸುವ ರಸ್ತೆಯ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಹರಿಯುವ ಹೊಳೆ ದಾಟಲು ಗ್ರಾಮಸ್ಥರು ಮಳೆಗಾಲದಲ್ಲಿ ತೀವ್ರ ಪರದಾಟ ನಡೆಸುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರ ದಶಕಗಳ ಸಂಕಷ್ಟವನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ರಾಮಕುಂಜ ಅವರು ಆಃ 2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇತುವೆ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ತೆಪ್ಪವೇ ಆಸರೆ: ಗ್ರಾಮಸ್ಥರ ಮುಗಿಯದ ಸಂಕಷ್ಟ!
ಬೇಸಿಗೆ ಕಾಲದಲ್ಲಿ ಗ್ರಾಮಸ್ಥರೇ ಸ್ವತಃ ಪಾಲ (ಕಾಲುಸಂಕ) ರಚಿಸಿಕೊಂಡು ಹೊಳೆ ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಗುಂಡ್ಯ ಹೊಳೆಯು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾದಾಗ, ಈ ಹೊಳೆಯಲ್ಲೂ ನೀರು ಆವರಿಸಿ ಪಾಲ ಮುಳುಗಡೆಯಾಗುತ್ತದೆ. ಇದರಿಂದ ಸುತ್ತಮುತ್ತಲಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ.
ತೆಪ್ಪವೇ ಆಸರೆ: ಪಾಲ ಮುಳುಗಡೆಯಾದಾಗ ಅಪಾಯಕಾರಿ ರೀತಿಯಲ್ಲಿ ತೆಪ್ಪವನ್ನೇ ಬಳಸಿಕೊಂಡು ಗ್ರಾಮಸ್ಥರು ಹೊಳೆ ದಾಟಬೇಕಾದ ದುಸ್ಥಿತಿ ಇದೆ.

ಸಾಕಷ್ಟು ಕುಟುಂಬಗಳಿಗೆ ತೊಂದರೆ: ಈ ಭಾಗದಲ್ಲಿ 25ಕ್ಕೂ ಹೆಚ್ಚು ಮನೆಗಳಿದ್ದು, ದಿನನಿತ್ಯ ಶಾಲಾ-ಕಾಲೇಜು ಮಕ್ಕಳು ಹಾಗೂ ಗ್ರಾಮಸ್ಥರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಈ ಹೊಳೆ ದಾಟಿಯೇ ತಮ್ಮ ದೈನಂದಿನ ಕೆಲಸಗಳಿಗೆ ತೆರಳಬೇಕಾಗಿದೆ.
ಹಲವು ವರ್ಷಗಳ ಬೇಡಿಕೆ: ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಭರವಸೆಗಳು ಸಿಕ್ಕಿವೆಯೇ ಹೊರತು ಸೇತುವೆ ಭಾಗ್ಯ ಮಾತ್ರ ಇಂದಿಗೂ ಸಿಕ್ಕಿಲ್ಲ ಎಂಬುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಜಿ.ಕೃಷ್ಣಪ್ಪ ಭೇಟಿ, ಪರಿಶೀಲನೆ
ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಕಾಂಗ್ರೆಸ್ ಮುಖಂಡ ಕರುಣಾಕರ ಗೌಡ ದೊಡ್ಡಉರ್ಕ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಜಿ.ಕೃಷ್ಣಪ್ಪ ರಾಮಕುಂಜ ಅವರು ಕರುಣಾಕರ ಗೌಡ ಅವರೊಂದಿಗೆ ಬಾಲೆಮಾರು-ಕುರ್ನೂಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಿಡಬ್ಲ್ಯುಡಿ ಇಂಜಿನಿಯರ್ಗೆ ಸೂಚನೆ:
ಸ್ಥಳೀಯರೊಂದಿಗೆ ಸಂಕಷ್ಟ ಆಲಿಸಿದ ಜಿ.ಕೃಷ್ಣಪ್ಪ ಅವರು, ಸೇತುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಅಲ್ಲದೆ, ಸ್ಥಳದಿಂದಲೇ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣವೇ ಸೇತುವೆ ನಿರ್ಮಾಣಕ್ಕೆ ಅಂದಾಜುಪಟ್ಟಿ (Estimate) ತಯಾರಿಸುವಂತೆ ಸೂಚನೆ ನೀಡಿದರು.
ಭೇಟಿ ವೇಳೆಯಲ್ಲಿದ್ದ ಪ್ರಮುಖರು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶೀನಪ್ಪ ಗೌಡ ಕುರ್ನೂಜಿ, ಶೇಖರ ಗೌಡ ಬಾಲೆಮಾರು, ಧನಂಜಯ ಗೌಡ ಬಳ್ಳೇರಿ, ಪ್ರಮೋದ್ ಗೌಡ ಬಳ್ಳೇರಿ, ಚಂದ್ರಶೇಖರ ಗೌಡ ಬಳ್ಳೇರಿ, ಚೇತನ್ ಬಳ್ಳೇರಿ, ಬಾಲಕೃಷ್ಣ ಬಳ್ಳೇರಿ, ಬಾಲಕ್ಕ ಕುರ್ನೂಜಿ, ನಳಿನಿ ಕುರ್ನೂಜಿ, ರಾಮಕ್ಕ ಬಾಲೆಮಾರು, ದೇಜಪ್ಪ ಗೌಡ ಬಾಲೆಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

crime
ರೆಖ್ಯದಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕ ಬಲಿ
- ರೆಖ್ಯದ ಮುಚ್ಚಿರಡ್ಡ ಎಂಬಲ್ಲಿ ಘಟನೆ
- ದಾರಿಯಲ್ಲಿ ರೈನ್ಕೋಟ್, ಆನೆ ಹೆಜ್ಜೆ ಪತ್ತೆ
- ಕಣಿವೆಯಲ್ಲಿ ಸಿಕ್ಕ ಮೃತದೇಹ
ನೆಲ್ಯಾಡಿ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ದಿನಗೂಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ನಡೆದಿದೆ.
ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (55) ಮೃತಪಟ್ಟವರು.
ನೆಡೆಯದ್ದೇನು?: ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಾತ್ರಿಯಾದರೂ ಅವರು ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಅವರು ಧರಿಸಿದ್ದರೆನ್ನಲಾದ ಪ್ಲಾಸ್ಟಿಕ್ ರೈನ್ಕೋಟ್ ದಾರಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಅಷ್ಟೇ ಅಲ್ಲದೆ, ಅದರ ಪಕ್ಕದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳೂ ಪತ್ತೆಯಾಗಿದ್ದರಿಂದ ಆನೆ ದಾಳಿ ನಡೆಸಿರುವ ಅನುಮಾನ ಬಲಗೊಂಡಿತ್ತು. ಬಳಿಕ ಸ್ಥಳೀಯರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಶೋಧ ಮುಂದುವರಿಸಿದಾಗ ಸಮೀಪದ ಕಣಿವೆಯಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಗಿದೆ.
ಅಧಿಕಾರಿಗಳ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಭಾನುವಾರ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಉಪವಲಯ ಅರಣ್ಯಾಧಿಕಾರಿಗಳು, ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಅರಸಿನಮಕ್ಕಿ-ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ ಹಾಗೂ ಸದಸ್ಯರು, ಸ್ಥಳೀಯ ಸಾರ್ವಜನಿಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಸ್ಥಳದಲ್ಲೇ ಮೃತದೇಹದ ಮಹಜರು ನಡೆಸಿದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Dakshina Kannada
ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ
ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ | ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿ ಜೊತೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ಕಡಬ ತಾಲೂಕಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಅಡಿಕೆ ಮರ ಮುರಿದು ಬಿದ್ದು ಕೃಷಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮನೆಗೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ರಸ್ತೆಗೆ ಮರ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.
ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಧರೆಗುರುಳಿದ ಅಡಿಕೆ ಮರ!
ಕಡಬ ತಾಲೂಕಿನ ಕುಂತೂರು ಗ್ರಾಮದ ‘ಗುತ್ತುಪಾಲು’ ಎಂಬಲ್ಲಿ ಶುಕ್ರವಾರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ದಿಢೀರ್ ಬೀಸಿದ ಭಾರಿ ಬಿರುಗಾಳಿಗೆ ಅಡಿಕೆ ಮರವೊಂದು ಮುರಿದುಬಿದ್ದಿದೆ. ತೋಟದಲ್ಲಿದ್ದ ಕೃಷಿ ಕಾರ್ಮಿಕ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (೬೬) ಅವರ ಮೈಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಮೂವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಮನೆ ಮೇಲೆ ಬಿದ್ದ ಬೃಹತ್ ಮರ: ಸೀತಮ್ಮ ಗಂಭೀರ
ಇನ್ನೊಂದೆಡೆ ಬಳ್ಪ ಗ್ರಾಮದ ನೇರ್ಪು ಎಂಬಲ್ಲಿ ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಶುಕ್ರವಾರ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಅವರ ಪತ್ನಿ ಸೀತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೈಕ್ ಸವಾರನಿಗೆ ಗಾಯ: ಜೀವಭಯದಲ್ಲೇ ಸಾರ್ವಜನಿಕರ ಸಂಚಾರ!
ಶುಕ್ರವಾರ ಸಂಜೆ ವೇಳೆ ಪೆರಾಬೆ ಗ್ರಾಮದ ಸುರುಳಿ ಕಲ್ಲಡ್ಕ (ಮಾಪಲ) ಬಳಿ ರಸ್ತೆಗೆ ಬೃಹತ್ ಮರ ಬಿದ್ದು, ಆ ಹಾದಿಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಇಚ್ಚೂರು ನಿವಾಸಿ ಗೀತೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಾರ್ವಜನಿಕರ ಆಕ್ರೋಶ:
ಸುರುಳಿ ಮಾಪಲ ಮೂಲಕ ನೆಲ್ಯಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.
‘ಎಕ್ಸ್’ನಲ್ಲಿ ಸಾಂತ್ವನ: ಶೀಘ್ರ ಪರಿಹಾರಕ್ಕೆ ಡಾ. ಜಿ. ಪರಮೇಶ್ವರ್ ಸೂಚನೆ
ಕಡಬ ತಾಲೂಕಿನಲ್ಲಿ ಸಂಭವಿಸಿದ ಈ ಸಾಲು ಸಾಲು ಅವಘಡಗಳ ಕುರಿತು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆತಂಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.
ಶೀಘ್ರ ಪರಿಹಾರಕ್ಕೆ ಆದೇಶ: ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಸಚಿವರು, ನೊಂದ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ತಕ್ಷಣವೇ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಆದಷ್ಟು ಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮರಗಳ ತೆರವುಗೊಳಿಸಿ – ಸಚಿವರ ಕರೆ: ಮಳೆ-ಬಿರುಗಾಳಿ ತೀವ್ರವಾಗಿರುವ ಈ ಸಮಯದಲ್ಲಿ ಮನೆಯ ಸುತ್ತಮುತ್ತ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವಾಗ ಮರದ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಡಬ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
INCIDENT
ಪ್ರೇಮಿಗಳ ಜಗಳ: ಚರಂಡಿ ಪಾಲಾಯ್ತು ಕಾರಿನ ಕೀ! 4 ಗಂಟೆ ಹುಡುಕಾಡಿದರೂ ಸಿಗದ ಕೀಲಿ, ವೀಡಿಯೊ ವೈರಲ್
ಕಡಬ: ಸಣ್ಣ ವಿಷಯಕ್ಕೆ ಶುರುವಾದ ಮಾತಿನ ಚಕಮಕಿ ಕೊನೆಗೆ ಕಾರಿನ ಕೀಲಿ ಚರಂಡಿ ಸೇರುವಂತೆ ಮಾಡಿದ ಸ್ವಾರಸ್ಯಕರ ಘಟನೆಯೊಂದು ಶುಕ್ರವಾರ ಕಡಬದ ಸಂತೆಕಟ್ಟೆ ಬಳಿ ನಡೆದಿದೆ.

ಘಟನೆಯ ಹಿನ್ನೆಲೆ:
ಸ್ಥಳೀಯರು ನೀಡಿದ ಮಾಹಿತಿಯಂತೆ, ಈಶ್ವರಮಂಗಲ ಮೂಲದ ಯುವಕನೊಬ್ಬ ತನ್ನ ಸ್ನೇಹಿತನ ಕಾರಿನಲ್ಲಿ ಕಡಬಕ್ಕೆ ಆಗಮಿಸಿದ್ದ. ಸಂತೆಕಟ್ಟೆ ಸಮೀಪದ ಖಾಸಗಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದ ಯುವತಿಗೆ ಜನ್ಮದಿನದ ಶುಭಾಶಯ ತಿಳಿಸಲು ಆತ ಕಚೇರಿಯ ಮೊದಲ ಮಹಡಿಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಶುರುವಾಗಿದೆ.

ಕೋಪದಲ್ಲಿ ಚರಂಡಿಗೆ ಎಸೆದ ಯುವತಿ!
ಮಾತಿನ ಚಕಮಕಿ ತಾರಕಕ್ಕೇರಿದಾಗ ಕೋಪಗೊಂಡ ಯುವತಿ, ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದುಕೊಂಡು ಮೊದಲ ಮಹಡಿಯಿಂದಲೇ ಕೆಳಗಿದ್ದ ಚರಂಡಿಗೆ ತೂರಿದ್ದಾಳೆ. ಕೀಲಿ ನೇರವಾಗಿ ಕೊಳಚೆ ನೀರು ಮತ್ತು ಹೂಳು ತುಂಬಿದ್ದ ಚರಂಡಿಗೆ ಬಿದ್ದು ಮಾಯವಾಗಿದೆ.
ಸ್ಥಳೀಯರ ನೆರವು ಪಡೆದರೂ ಫಲ ಸಿಗಲಿಲ್ಲ: ಕಾರು ಅನ್ಲಾಕ್ ಮಾಡಲು ಸಾಧ್ಯವಾಗದೆ ಕಂಗಾಲಾದ ಯುವಕ, ಸ್ಥಳೀಯರ ನೆರವಿನೊಂದಿಗೆ ಚರಂಡಿ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸುಮಾರು 4 ಗಂಟೆಗಳ ಕಾಲ ಸತತ ಹುಡುಕಾಟ ನಡೆಸಿದ್ದಾನೆ.

ಜನರ ಕುತೂಹಲ, ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಜನನಿಬಿಡ ಸಂತೆಕಟ್ಟೆ ಪ್ರದೇಶದಲ್ಲಿ ಯುವಕ ಚರಂಡಿಯಲ್ಲಿ ಕೀ ಹುಡುಕುತ್ತಿದ್ದ ದೃಶ್ಯ ಕಂಡು ನೂರಾರು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಕೊನೆಗೆ ಸಂಜೆ 7.30 ಆದರೂ ಕೀ ಪತ್ತೆಯಾಗದ ಕಾರಣ, ಯುವಕ ಕಾರನ್ನು ಸ್ಥಳದಲ್ಲೇ ಬಿಟ್ಟು ಆಟೋ ರಿಕ್ಷಾ ಹಿಡಿದು ಮನೆಗೆ ತೆರಳಿದ್ದಾನೆ.
ಪ್ರಸ್ತುತ ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರ ವಲಯದಲ್ಲಿ ತರಹೇವಾರಿ ಚರ್ಚೆಗೆ ಗ್ರಾಸವಾಗಿದೆ.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
