Connect with us

Dakshina Kannada

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್ 1) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಭಾರೀ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ನಾಳೆ, ಆಗಸ್ಟ್ 01, 2026 ರಂದು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿದ ಮುನ್ಸೂಚನೆಯಂತೆ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಈ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಜೆ ಘೋಷಿಸಲಾದ ಸಂಸ್ಥೆಗಳು:

  • ಜಿಲ್ಲೆಯ ಎಲ್ಲಾ ಅಂಗನವಾಡಿಗಳು
  • ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು (ವಸತಿ ಶಾಲೆಗಳು ಸೇರಿದಂತೆ)
  • ಎಲ್ಲಾ ಪದವಿ ಪೂರ್ವ ಕಾಲೇಜುಗಳು – 12ನೇ ತರಗತಿಯವರೆಗೆ (ವಸತಿ ಕಾಲೇಜುಗಳು ಸೇರಿದಂತೆ)
  • ಎಲ್ಲಾ ITI ಮತ್ತು ಡಿಪ್ಲೊಮಾ ಕಾಲೇಜುಗಳು (ವಸತಿ ಕಾಲೇಜುಗಳು ಸೇರಿದಂತೆ)

ಸೂಚನೆ: ಈ ರಜೆ ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ‘ವಿಪತ್ತು ನಿರ್ವಹಣಾ ಕಾಯ್ದೆ, 2005’ ರ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಸಾರ್ವಜನಿಕರು ಹಾಗೂ ಪೋಷಕರಿಗೆ ಮುನ್ನೆಚ್ಚರಿಕೆ:

  • ಮಕ್ಕಳ ಜಾಗ್ರತೆ: ತಗ್ಗು ಪ್ರದೇಶಗಳು, ಕೆರೆ, ನದೀತೀರ ಹಾಗೂ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪೋಷಕರು ಕಟ್ಟುನಿಟ್ಟಿನ ಜಾಗ್ರತೆ ವಹಿಸಬೇಕು.
  • ಮೀನುಗಾರರು ಹಾಗೂ ಪ್ರವಾಸಿಗರಿಗೆ: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಪ್ರವಾಸಿಗರು/ಸಾರ್ವಜನಿಕರು ನದೀತೀರ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.

ಅಧಿಕಾರಿಗಳಿಗೆ ನಿರ್ದೇಶನ:

  • ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಬೇಕು.
  • ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತುರ್ತು ಸಹಾಯವಾಣಿ (Helpline):

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಸಾರ್ವಜನಿಕರು ತಕ್ಷಣ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • ಟೋಲ್ ಫ್ರೀ ಸಂಖ್ಯೆ: 1077
  • ದೂರವಾಣಿ ಸಂಖ್ಯೆ: 0824-2442590
ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಭಾರಿ ಮಳೆ ಹಿನ್ನೆಲೆ: ಆಗಸ್ಟ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಆಗಸ್ಟ್ 3, 2026 ರಂದು ಜಿಲ್ಲೆಯ ಪ್ರಮುಖ ತಾಲೂಕುಗಳ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಈ ತುರ್ತು ಕ್ರಮ ಕೈಗೊಂಡಿದ್ದಾರೆ.

ಎಲ್ಲೆಲ್ಲಿ ರಜೆ ಅನ್ವಯ?

ಮಂಗಳೂರು ಉಪವಿಭಾಗ: ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ಮತ್ತು ಉಳ್ಳಾಲ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಹಾಗೂ ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (10 ನೇ ತರಗತಿವರೆಗೆ) ರಜೆ ಇರಲಿದೆ (ಎಲ್ಲಾ ವಸತಿ ಶಾಲೆಗಳೂ ಸೇರಿದಂತೆ).ಪುತ್ತೂರು ಉಪವಿಭಾಗ: ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ಪದವಿ ಪೂರ್ವ (PUC), ITI ಮತ್ತು ಡಿಪ್ಲೊಮಾ ಕಾಲೇಜುಗಳಿಗೆ (12 ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ.

ಎಚ್ಚರಿಕೆ: ಈ ರಜೆ ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮುಖ್ಯ ಸೂಚನೆಗಳು:

  1. ಮಕ್ಕಳ ಸುರಕ್ಷತೆ: ನೀರಿರುವ ತಗ್ಗು ಪ್ರದೇಶ, ಕೆರೆ, ನದಿತೀರ ಹಾಗೂ ಸಮುದ್ರತೀರಕ್ಕೆ ಮಕ್ಕಳು ತೆರಳದಂತೆ ಪೋಷಕರು ಜಾಗ್ರತೆ ವಹಿಸಬೇಕು.
  2. ಮೀನುಗಾರರಿಗೆ ತಡೆ: ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
  3. ಸಾರ್ವಜನಿಕರಿಗೆ ಮನವಿ: ನದಿತೀರ ಮತ್ತು ಸಮುದ್ರತೀರಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಭೇಟಿ ನೀಡಬಾರದು.
  4. ಅಧಿಕಾರಿಗಳ ಸಜ್ಜು: ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ತಕ್ಷಣ ಸ್ಪಂದಿಸಲು ಸೂಚಿಸಲಾಗಿದೆ. ಅಲ್ಲದೆ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧರಾಗಿರಲು ಆದೇಶಿಸಲಾಗಿದೆ.

ತುರ್ತು ಸಹಾಯವಾಣಿ (Emergency Helpline)

ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ತುರ್ತು ಸಮಸ್ಯೆಗಳಿಗೆ ಸಾರ್ವಜನಿಕರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • ಉಚಿತ ಟೋಲ್ ಫ್ರೀ ಸಂಖ್ಯೆ: 1077
  • ದೂರವಾಣಿ ಸಂಖ್ಯೆ: 0824-2442590
Continue Reading

Bantawala

ಕರಾವಳಿಯಲ್ಲಿ ಭೋರ್ಗರೆಯುತ್ತಿರುವ ಮುಂಗಾರು: ನದಿಗಳ ಆರ್ಭಟಕ್ಕೆ ಕಂಗೆಟ್ಟ ದಕ್ಷಿಣ ಕನ್ನಡ, ರೈತರಲ್ಲಿ ಹರ್ಷ – ಜನರಲ್ಲಿ ನೆರೆ ಆತಂಕ

Published

on

ದಕ್ಷಿಣ ಕನ್ನಡ: ಕರಾವಳಿ ಹಾಗೂ ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆ ಧಾರೆ ಎರೆಯುತ್ತಿರುವುದರಿಂದ ನದಿ, ಕಳೆಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಒಂದೆಡೆ ದೀರ್ಘಾವಧಿಯ ನಂತರ ನದಿಗಳು ತುಂಬಿ ಹರಿಯುತ್ತಿರುವುದು ಕೃಷಿಕರಲ್ಲಿ ಹರ್ಷ ತಂದಿದ್ದರೆ, ಇನ್ನೊಂದೆಡೆ ಪ್ರವಾಹ, ಸೇತುವೆ ಕೊಚ್ಚಿಹೋಗಿರುವುದು ಹಾಗೂ ಮನೆ ಹಾನಿಯಂತಹ ಸಾಲು ಸಾಲು ದುರಂತಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ.

1. ಸುಬ್ರಹ್ಮಣ್ಯ: ಕುಮಾರಧಾರಾ ಆರ್ಭಟ, ಮುಳುಗಿದ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ.

ಸ್ನಾನಘಟ್ಟ ಮುಳುಗಡೆ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಪರ್ಯಾಯ ವ್ಯವಸ್ಥೆ: ಭಕ್ತರು ನದಿಗೆ ಇಳಿಯದಂತೆ ಪೊಲೀಸರು ಹಾಗೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕಾವಲು ಕಾಯುತ್ತಿದ್ದು, ಪ್ರವಾಸಿಗರ ಭದ್ರತೆಗಾಗಿ ದೊಡ್ಡ ಡ್ರಮ್‌ಗಳಲ್ಲಿ ನೀರು ತುಂಬಿಸಿ ಪರ್ಯಾಯ ಸ್ನಾನದ ವ್ಯವಸ್ಥೆ ಕಲ್ಪಿಸಲಾಗಿದೆ.

2. ಜೀವ ಕಳೆ ಪಡೆದ ನೇತ್ರಾವತಿ

ಬಂಟ್ವಾಳ ಹಾಗೂ ಧರ್ಮಸ್ಥಳ ಭಾಗದಲ್ಲಿ ನೇತ್ರಾವತಿ ನದಿ ಈ ವರ್ಷದಲ್ಲಿಯೇ ಮೊದಲ ಬಾರಿಗೆ ಭಾರೀ ಮಟ್ಟದಲ್ಲಿ ಏರಿಕೆ ಕಂಡಿದೆ.

ಬಂಟ್ವಾಳದ ಕಂಚಿಕಾರಪೇಟೆಯಲ್ಲಿ ನದಿಯ ಮಟ್ಟ 5.6 ರಿಂದ 5.88 ಮೀಟರ್‌ಗೆ ಏರಿಕೆಯಾಗಿದ್ದು (ಅಪಾಯದ ಮಟ್ಟ: 8.5 ರಿಂದ 9.0 ಮೀ), ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬಂಟ್ವಾಳದ ಎಎಂಆರ್ (AMR) ಡ್ಯಾಂ ಗರಿಷ್ಠ ಮಟ್ಟ (18.90 ಮೀ) ತಲುಪಿದ್ದು, ತುಂಬೆ ಡ್ಯಾಂನ 8 ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಉಪ್ಪಿನಂಗಡಿ ಸಂಗಮಕ್ಕೆ ಇನ್ನೆರಡು ದಿನ ಬೇಕು

ಪ್ರಸಿದ್ಧ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ, ಕುಮಾರಧಾರಾದಲ್ಲಿ ನೀರು ಕಡಿಮೆಯಿರುವುದರಿಂದ ‘ಸಂಗಮ’ಕ್ಕೆ ಇನ್ನು ಎರಡು ದಿನಗಳ ನಿರಂತರ ಮಳೆಯ ಅಗತ್ಯವಿದೆ. ಈಗ ಸುರಿಯುತ್ತಿರುವಂತೆಯೇ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದರೆ ಇನ್ನೆರಡು ದಿನಗಳಲ್ಲಿ ಸಂಗಮದ ಸೂಚನೆ ಸಿಗಬಹುದು.

3. ಬೆಳ್ತಂಗಡಿಯಲ್ಲಿ ನೆರೆ ಅಭಯ: ಮುಳುಗಿದ ದೇವಾಲಯಗಳು, ಕಡಿತಗೊಂಡ ಸಂಪರ್ಕ

ಬೆಳ್ತಂಗಡಿ ತಾಲೂಕಿನಲ್ಲಿ ಮುಂಗಾರಿನ ಆರ್ಭಟ ತೀವ್ರವಾಗಿದ್ದು, ಕಪಿಲ, ಫಲ್ಗುಣಿ, ಮೃತ್ಯುಂಜಯ ಹಾಗೂ ಸೋಮವತಿ ನದಿಗಳು ಉಕ್ಕಿ ಹರಿಯುತ್ತಿವೆ.

ದೇವಸ್ಥಾನಗಳು ಜಲಾವೃತ: ಕಪಿಲ ನದಿ ಉಕ್ಕಿ ಹರಿದ ಪರಿಣಾಮ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನ ಹಾಗೂ ಅಮ್ಮುಂಜೆ ದೇವಸ್ಥಾನಗಳು ಜಲಾವೃತಗೊಂಡಿವೆ.

ಸೇತುವೆ ಕೊಚ್ಚಿ ಸಾವು-ನೋವಿನ ಭೀತಿ: ಉಜಿರೆ-ಕನ್ಯಾಡಿ ವ್ಯಾಪ್ತಿಯ ಅಂಬಡಬೆಟ್ಟದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಾಕಷ್ಟು ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಮಾಲಾಡಿ ಸೊಣಂದೂರಿನಲ್ಲಿ ಕಿರು ಸೇತುವೆ ಕುಸಿದಿದೆ.

ಅಣೆಕಟ್ಟು ಹಲಗೆ ತೆರವು ಮಾಡದೆ ಅನಾಹುತ: ಪಜಿರಡ್ಕ ಕಿಂಡಿ ಅಣೆಕಟ್ಟಿನಲ್ಲಿ ಹಲಗೆಗಳನ್ನು ಸರಿಯಾದ ಸಮಯಕ್ಕೆ ತೆರವುಗೊಳಿಸದ ಕಾರಣ 5 ಕಿ.ಮೀ ವ್ಯಾಪ್ತಿಯಲ್ಲಿ ಕಾಯರ್ತೋಡಿ, ಕುಡೆಂಚಿ, ಆನಂಗಳ್ಳಿ ಸೇರಿದಂತೆ ಹಲವು ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ವೇಣೂರಿನಲ್ಲಿ ಹಲವು ಬಸ್‌ಗಳು ನೆರೆ ನೀರಿನಲ್ಲಿ ಸಿಲುಕಿಕೊಂಡರೆ, ಗಾಳಿ-ಮಳೆಗೆ ನೂರಾರು ಅಡಕೆ, ರಬ್ಬರ್ ಮರಗಳು ಧರಾಶಾಹಿಯಾಗಿವೆ.

4. ಸಾಲು ಸಾಲು ಮನೆ ಕುಸಿತ, ವಿದ್ಯುತ್ ವ್ಯತ್ಯಯ

ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರಿನ ಜಯ ಸಪಲ್ಯ, ರಾಯಿ ಗ್ರಾಮದ ಸೀತಾವತಿ ವಿಶ್ವನಾಥ ಪೂಜಾರಿ ಹಾಗೂ ನರಿಕೊಂಬುವಿನ ಪ್ರಶಾಂತ್ ಎಂಬುವವರ ಮನೆಗಳ ಮೇಲೆ ಚಾವಣಿ ಮತ್ತು ತೆಂಗಿನ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿದೆ. ಸುदैವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

🚨 ಭಾರೀ ಮಳೆ ಮುನ್ಸೂಚನೆ: ತುರ್ತು ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಕಟ್ಟುನಿಟ್ಟಿನ ಸೂಚನೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, ಎಲ್ಲ ತಾಲೂಕು ಆಡಳಿತಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೂಚಿಸಿದ್ದಾರೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡ,ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್‌ ಆಲರ್ಟ್‌ ಘೋಷಿಸಿದೆ

ಶನಿವಾರ (ಆಗಸ್ಟ್ 1) ಅಧಿಕಾರಿಗಳೊಂದಿಗೆ ಆನ್‌ಲೈನ್ ಮೂಲಕ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.

🚨 ಜಿಲ್ಲಾಧಿಕಾರಿಗಳು ನೀಡಿದ ಪ್ರಮುಖ ಅಭಯ ಹಾಗೂ ಕಟ್ಟುನಿಟ್ಟಿನ ಸೂಚನೆಗಳು:

24 ಗಂಟೆ ಕಂಟ್ರೋಲ್ ರೂಂ ಸಕ್ರಿಯ: ಮಳೆ ಅನಾಹುತಗಳನ್ನು ನಿವರ್ಹಿಸಲು ಜಿಲ್ಲೆಯ ಎಲ್ಲ ತಾಲೂಕು ಆಡಳಿತಗಳು ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಕಂಟ್ರೋಲ್ ರೂಂಗಳು ದಿನಪೂರ್ತಿ ಕಾರ್ಯನಿರ್ವಹಿಸಬೇಕು.

ಗುಡ್ಡ ಕುಸಿತ ಸ್ಥಳಗಳಲ್ಲಿ ನಿಗಾ – ಜನರ ಸ್ಥಳಾಂತರ: ಜಿಲ್ಲೆಯಲ್ಲಿ ಗುಡ್ಡ ಕುಸಿತ ಮತ್ತು ಮಣ್ಣು ಜರಿತ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಗುರುತಿಸಿರುವ ಸಂಭಾವ್ಯ ಕುಸಿತ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಬೇಕು. ಅಪಾಯದ ಸಾಧ್ಯತೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.

ತಾತ್ಕಾಲಿಕ ತಡೆಗೋಡೆ ವ್ಯವಸ್ಥೆ: ಮಣ್ಣು ಜರಿಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಖಾಸಗಿ ಜಮೀನುಗಳಲ್ಲೂ ಇಂತಹ ತುರ್ತು ಕ್ರಮಗಳನ್ನು ಕೈಗೊಳ್ಳಬಹುದು.

24 ಗಂಟೆಯೊಳಗೆ ಪರಿಹಾರ ವಿತರಣೆ: ಪ್ರಾಕೃತಿಕ ವಿಕೋಪದಿಂದ ಸಾವುನಪ್ಪಿದವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಚೆಕ್ ನೀಡಬೇಕು. ಮಳೆ ಅನಾಹುತದಿಂದ ಸ್ಥಳಾಂತರಗೊಂಡ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗಮನಹರಿಸಬೇಕು.

ಹೆದ್ದಾರಿ ತಡೆ ತೆರವಿಗೆ ಜೆಸಿಬಿ/ಯಂತ್ರೋಪಕರಣ ಸಿದ್ಧ: ಚಾರ್ಮಾಡಿ, ಸಂಪಾಜೆ, ಶಿರಾಡಿ ಸೇರಿದಂತೆ ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಪ್ರಕರಣಗಳು ಸಂಭವಿಸಿದಲ್ಲಿ ತಕ್ಷಣವೇ ರಸ್ತೆ ತೆರವುಗೊಳಿಸಲು ಅಗತ್ಯ ಯಂತ್ರೋಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. (ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಯಾದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಡಿಸಿ ತಿಳಿಸಿದ್ದಾರೆ).

ರಕ್ಷಣಾ ಪಡೆಗಳು ಹೈ ಅಲರ್ಟ್: ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ (SDRF) ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು.

ರಕ್ಷಣಾ ಪಡೆ ರಂಗಕ್ಕೆ: ಮುಳುಗು ತಜ್ಞರು, NDRF ಹಾಗೂ SDRF ನ 65 ಸಿಬ್ಬಂದಿಗಳನ್ನು 28 ಬೋಟ್‌ಗಳೊಂದಿಗೆ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಎಚ್ಚರಿಕೆ ಸಂದೇಶ: ನದಿ ತೀರದ ನಿವಾಸಿಗಳು, ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರ ಹಾಗೂ ಜಲಾಶಯದ ಕಡೆಗೆ ತೆರಳದಂತೆ ಕಟ್ಟುನಿಟ್ಟಿನ ಆಡಳಿತಾತ್ಮಕ ಸೂಚನೆ ನೀಡಲಾಗಿದೆ.

ಮುನ್ಸೂಚನೆ: ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಸಭೆಯಲ್ಲಿ ಉಪಸ್ಥಿತಿ: ಈ ಆನ್‌ಲೈನ್ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ , ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

Continue Reading

Dakshina Kannada

ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ

Published

on

ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ | ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿ ಜೊತೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ಕಡಬ ತಾಲೂಕಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಅಡಿಕೆ ಮರ ಮುರಿದು ಬಿದ್ದು ಕೃಷಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮನೆಗೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ರಸ್ತೆಗೆ ಮರ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಧರೆಗುರುಳಿದ ಅಡಿಕೆ ಮರ!

ಕಡಬ ತಾಲೂಕಿನ ಕುಂತೂರು ಗ್ರಾಮದ ‘ಗುತ್ತುಪಾಲು’ ಎಂಬಲ್ಲಿ ಶುಕ್ರವಾರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ದಿಢೀರ್ ಬೀಸಿದ ಭಾರಿ ಬಿರುಗಾಳಿಗೆ ಅಡಿಕೆ ಮರವೊಂದು ಮುರಿದುಬಿದ್ದಿದೆ. ತೋಟದಲ್ಲಿದ್ದ ಕೃಷಿ ಕಾರ್ಮಿಕ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (೬೬) ಅವರ ಮೈಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಮೂವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮನೆ ಮೇಲೆ ಬಿದ್ದ ಬೃಹತ್ ಮರ: ಸೀತಮ್ಮ ಗಂಭೀರ

ಇನ್ನೊಂದೆಡೆ ಬಳ್ಪ ಗ್ರಾಮದ ನೇರ್ಪು ಎಂಬಲ್ಲಿ ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಶುಕ್ರವಾರ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಅವರ ಪತ್ನಿ ಸೀತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೈಕ್ ಸವಾರನಿಗೆ ಗಾಯ: ಜೀವಭಯದಲ್ಲೇ ಸಾರ್ವಜನಿಕರ ಸಂಚಾರ!

ಶುಕ್ರವಾರ ಸಂಜೆ ವೇಳೆ ಪೆರಾಬೆ ಗ್ರಾಮದ ಸುರುಳಿ ಕಲ್ಲಡ್ಕ (ಮಾಪಲ) ಬಳಿ ರಸ್ತೆಗೆ ಬೃಹತ್ ಮರ ಬಿದ್ದು, ಆ ಹಾದಿಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಚ್ಚೂರು ನಿವಾಸಿ ಗೀತೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾರ್ವಜನಿಕರ ಆಕ್ರೋಶ:

ಸುರುಳಿ ಮಾಪಲ ಮೂಲಕ ನೆಲ್ಯಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

‘ಎಕ್ಸ್’ನಲ್ಲಿ ಸಾಂತ್ವನ: ಶೀಘ್ರ ಪರಿಹಾರಕ್ಕೆ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ ತಾಲೂಕಿನಲ್ಲಿ ಸಂಭವಿಸಿದ ಈ ಸಾಲು ಸಾಲು ಅವಘಡಗಳ ಕುರಿತು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆತಂಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.

ಶೀಘ್ರ ಪರಿಹಾರಕ್ಕೆ ಆದೇಶ: ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಸಚಿವರು, ನೊಂದ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ತಕ್ಷಣವೇ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಆದಷ್ಟು ಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮರಗಳ ತೆರವುಗೊಳಿಸಿ – ಸಚಿವರ ಕರೆ: ಮಳೆ-ಬಿರುಗಾಳಿ ತೀವ್ರವಾಗಿರುವ ಈ ಸಮಯದಲ್ಲಿ ಮನೆಯ ಸುತ್ತಮುತ್ತ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವಾಗ ಮರದ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಡಬ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.

Continue Reading

Trending

Copyright © 2025 Deevatige

error: Content is protected !!