Connect with us

murder

ಪ್ರಿಯಕರನ ಜೊತೆ ಸಂಸಾರ, ವಿಮೆ ಹಣದ ಆಸೆ: ಹಾವಿನಿಂದ ಕಚ್ಚಿಸಿ ಪತಿಯ ಹತ್ಯೆಗೈದ ಪತ್ನಿ ಬಂಧನ!

Published

on

ಪ್ರಿಯಕರನೊಂದಿಗೆ ಬದುಕು ಕಟ್ಟಿಕೊಳ್ಳಲು ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡುವುದು ನಡೆಯುತ್ತಲೇ ಇದೆ. ಇದೀಗ ಇನ್ನಷ್ಟು ಬೆಚ್ಚಿ ಬೀಳಿಸುವ ಹೊಸ ಸಂಚಿನಿಂದ ಮಾಡಿದ ಆಘಾತಕಾರಿ ಕೊಲೆಯೊಂದನ್ನು ಪತ್ನಿ ಮಾಡಿರುವುದು ಬೆಳಕಿಗೆ ಬಂದಿದೆ.

ಮೀರತ್: ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ದುರಾಸೆ ಹಾಗೂ ಪತಿಯ ಹೆಸರಲ್ಲಿದ್ದ ಜೀವ ವಿಮೆ (Life Insurance) ಹಣಕ್ಕೆ ಕಣ್ಣಿಟ್ಟು, ಪತಿಯನ್ನೇ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ್ದ ಕೌರ್ಯದ ಘಟನೆಯೊಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅತುಲ್ ಕೊಲೆಯಾದ ದುರದೃಷ್ಟಕರ ಪತಿ. ಘಟನೆಗೆ ಸಂಬಂಧಿಸಿದಂತೆ ಆತನ ಪತ್ನಿ ದಾಮಿನಿ, ಪ್ರಿಯಕರ ತುಷಾರ್ ಹಾಗೂ ಆತನಿಗೆ ಸಹಕರಿಸಿದ ಸೋನು ಮತ್ತು ಉದಯ್ ಎಂಬವರನ್ನು ಪೊಲೀಸರು ಕಷ್ಟಡಿಗೆ ಪಡೆದಿದ್ದಾರೆ.

ಹಾಲಿನಲ್ಲಿ ನಿದ್ರೆ ಮಾತ್ರೆ, ಬಳಿಕ ಹಾವಿನಿಂದ ಕಚ್ಚಿಸಿ ಕೊಲೆ!

ಪೋಲಿಸರ ತನಿಖೆಯ ಪ್ರಕಾರ, ಮೃತ ಅತುಲ್ ಪತ್ನಿ ದಾಮಿನಿ ‘ಕೃಷ್ಣ ಕಿಡ್ಸ್ ಸ್ಕೂಲ್’ ಎಂಬ ಪ್ಲೇ-ಸ್ಕೂಲ್ ನಡೆಸುತ್ತಿದ್ದರು. ಅಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ತುಷಾರ್ ಎಂಬಾತನೊಂದಿಗೆ ದಾಮಿನಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಪತಿಯನ್ನು ದಾರಿಯಿಂದ ತಪ್ಪಿಸಿ, ಪ್ರಿಯಕರನೊಂದಿಗೆ ಬಾಳುವ ಉದ್ದೇಶ ಹಾಗೂ ಪತಿಯ ಜೀವ ವಿಮೆ ಹಣವನ್ನು ಗಿಟ್ಟಿಸಿಕೊಳ್ಳಲು ಇಬ್ಬರೂ ಸೇರಿ ಅತುಲ್‌ನನ್ನು ಕೊಲ್ಲಲು ಸ್ಕೆಚ್ ಹಾಕಿದ್ದರು.

ಯೋಜನೆಯಂತೆ, ದಾಮಿನಿ ಪತಿ ಅತುಲ್ ಅವರಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು. ಅತುಲ್ ಗಾಢ ನಿದ್ರೆಗೆ ಜಾರುತ್ತಿದ್ದಂತೆ, ಪ್ರಿಯಕರ ತುಷಾರ್ ವಿಷಪೂರಿತ ಹಾವನ್ನು ತಂದುಕೊಟ್ಟಿದ್ದ. ಆ ಹಾವಿನಿಂದ ಅತುಲ್ ಅವರಿಗೆ ಕಚ್ಚಿಸಿ, ಕೊಲೆ ಮಾಡಲಾಗಿತ್ತು. ಹಾವಿನ ಕಡಿತದಿಂದಲೇ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ಸಾವನ್ನು ಸಹಜ ಘಟನೆಯಂತೆ ತೋರಿಸುವುದು ಆರೋಪಿಗಳ ತಂತ್ರವಾಗಿತ್ತು.

24 ಗಂಟೆಯಲ್ಲೇ ಬಲೆಗೆ ಬಿದ್ದ ಆರೋಪಿಗಳು

ಅತುಲ್ ಅವರ ಸಾವಿನ ಕುರಿತು ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಪತ್ನಿ ದಾಮಿನಿ ಮತ್ತು ಪ್ರಿಯಕರ ತುಷಾರ್ ಅವರ ಅಸಲಿ ಬಣ್ಣ ಬಯಲಾಗಿದೆ.

ವಿಷಪೂರಿತ ಹಾವನ್ನು ತರಲು ತುಷಾರ್‌ಗೆ ಸೋನು ಹಾಗೂ ಉದಯ್ ಎಂಬುವವರು ನೆರವಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ನಾಲ್ವರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಕೊಲೆ ಮಾಡಿದ ಸ್ನೇಹಿತನೇ ಕನಸಿನಲ್ಲಿ ದೆವ್ವವಾಗಿ ಕಾಡಿದ! ಭಯ ತಾಳಲಾರದೆ ಪೊಲೀಸರಿಗೆ ಶರಣಾದ ಆರೋಪಿ

Published

on

ಮದ್ಯದ ಪಾರ್ಟಿ ವೇಳೆ ಸ್ನೇಹಿತನನ್ನೇ ಹೊಡೆದು ಕೊಂದಿದ್ದ ಯುವಕ; 15 ದಿನಗಳ ಕಾಲ ನಿದ್ರೆಯಲ್ಲೂ ಕಾಡಿದ ಮೃತ ಸ್ನೇಹಿತನ ನೆನಪು – ಕೊನೆಗೆ ಕೊಲೆ ರಹಸ್ಯ ಬಯಲು

ಮುಂಬೈ: ಮದ್ಯದ ಪಾರ್ಟಿ ವೇಳೆ ಉಂಟಾದ ಜಗಳದಲ್ಲಿ ಸ್ನೇಹಿತನನ್ನೇ ಹೊಡೆದು ಕೊಲೆಗೈದು, ಮೃತದೇಹವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಕೊನೆಗೆ ಮೃತ ಸ್ನೇಹಿತ ಕನಸಿನಲ್ಲಿ ಪದೇಪದೇ ಬಂದು ಕಾಡುತ್ತಿದ್ದಾನೆಂಬ ಭಯದಿಂದ ಪೊಲೀಸರ ಮುಂದೆ ಶರಣಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬವರ ಮೃತದೇಹ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪ್ರಭು ನೀಡಿದ ಹೇಳಿಕೆಯ ಪ್ರಕಾರ, ಸ್ನೇಹಿತ ಕದಮ್ ಅವರ ಮನೆಯಲ್ಲೇ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಪ್ರಭು, ಕದಮ್ ಅವರನ್ನು ಹೊಡೆದು ಕೊಲೆ ಮಾಡಿದ್ದಾನೆ.ಆತ ಮೃತಪಟ್ಟಿದ್ದ. ಸ್ನೇಹಿತ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡ ಪ್ರಭು, ತಕ್ಷಣ ತನ್ನ ಬಾಡಿಗೆ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಎಂಬಾತನ ಸಹಾಯ ಕೋರಿದ್ದಾನೆ. ಅವರಿಬ್ಬರೂ ಸೇರಿ ವಿಶಾಲ್ ಅವರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ರಾತ್ರೋರಾತ್ರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಬಳಿಕ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಆರಾಮವಾಗಿದ್ದ ಪ್ರಭುವಿಗೆ ಕೆಲವೇ ದಿನಗಳಲ್ಲಿ ಭಯ ಶುರುವಾಗಿದೆ. ಮೃತಪಟ್ಟ ಸ್ನೇಹಿತ ವಿಶಾಲ್ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದ. ಸುಮಾರು 15 ದಿನಗಳ ಕಾಲ ಸರಿಯಾಗಿ ನಿದ್ರೆ ಮಾಡಲೂ ಸಾಧ್ಯವಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಕನಸಿನ ಭಯ ಹಾಗೂ ಪಶ್ಚಾತ್ತಾಪದಿಂದ ಕಂಗೆಟ್ಟ ಪ್ರಭು, ಕೊನೆಗೆ ತಾನಾಗಿಯೇ ಪೊಲೀಸರ ಬಳಿಗೆ ತೆರಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.

ಈ ಸಂಬಂಧ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

arrest

ಬಂಟ್ವಾಳ ವಗ್ಗದಲ್ಲಿ ಕೌಟುಂಬಿಕ ಕಲಹ: ಹೆಂಡತಿಯನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ; ಗಂಡನ ಬಂಧನ

Published

on

ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಬಂಧಿತ ಆರೋಪಿ. ಬೆಳಗಾವಿ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ಎಂಬವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಪಿರ್ಯಾದಿದಾರರ ಸಹೋದರಿಯಾದ ಸುನೀತಾ ಮಹಾದೇವ್ ದೇಸಂಗಿ (34) ಎಂಬವರನ್ನು ಜಮಖಂಡಿ ನಿವಾಸಿ ಸಂಜೀವಕುಮಾರ್‌ಗೆ ಮದುವೆ ಮಾಡಿಕೊಡಲಾಗಿದ್ದು, ದಂಪತಿಗಳು ಬಂಟ್ವಾಳದ ವಗ್ಗದಲ್ಲಿ ವಾಸವಾಗಿದ್ದರು. ದಂಪತಿಗಳ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದು, ಈ ಹಿಂದೆ ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿದ್ದರು.

ಪ್ರಸವದ ಬಳಿಕ ತವರು ಮನೆಯಲ್ಲಿದ್ದ ಸುನೀತಾರವರನ್ನು ಆರೋಪಿ ಸಂಜೀವಕುಮಾರ್ ಕಳೆದ ಅಕ್ಟೋಬರ್ 4ರಂದು ಬಂಟ್ವಾಳದ ತನ್ನ ಮನೆಗೆ ಕರೆತಂದಿದ್ದನು. ಬಳಿಕ ಅಕ್ಟೋಬರ್ 22ರಂದು ಸುನೀತಾರವರು ತಮ್ಮ ಸಹೋದರನಿಗೆ (ಪಿರ್ಯಾದಿದಾರರಿಗೆ) ಕರೆ ಮಾಡಿ, ಗಂಡನು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು.

ಮುಂದುವರಿದು, ಅಕ್ಟೋಬರ್ 23ರಂದು ಮುಂಜಾನೆ ಆರೋಪಿ ಸಂಜೀವಕುಮಾರ್ ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ, ಸುನೀತಾರವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾನೆ. ತಕ್ಷಣವೇ ಪಿರ್ಯಾದಿದಾರರು ಬಂದು ನೋಡಿದಾಗ ಸುನೀತಾ ಮೃತಪಟ್ಟಿರುವುದು ಕಂಡುಬಂದಿದೆ. ಮೃತಳ ಶರೀರವನ್ನು ಪರಿಶೀಲಿಸಿದಾಗ ಹಲ್ಲೆ ನಡೆಸಿದ ಗಾಯಗಳು ಹಾಗೂ ರಕ್ತದ ಗುರುತುಗಳು ಪತ್ತೆಯಾಗಿವೆ.

ಪೊಲೀಸ್ ತನಿಖೆ ಮತ್ತು ಬಂಧನ: ಆರೋಪಿ ಸಂಜೀವಕುಮಾರ್ ಕೌಟುಂಬಿಕ ಕಲಹದ ಕಾರಣದಿಂದ ಅಕ್ಟೋಬರ್ 22ರ ರಾತ್ರಿಯಿಂದ ಅಕ್ಟೋಬರ್ 23ರ ಮುಂಜಾನೆ ಸಮಯದೊಳಗೆ ಸುನೀತಾರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ: 103 BNS 2023 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಸಂಜೀವಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶೀಘ್ರವೇ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

jail

ಮೈಸೂರು ದಸರಾ ವೇಳೆ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಅಪರಾಧಿ ಕಾರ್ತಿಕ್ ದೋಷಿ ಎಂದು ಸಾಬೀತು, ಇಂದು ಶಿಕ್ಷೆ ಪ್ರಕಟ

Published

on

ಮೈಸೂರು: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೇ ನಡೆದಿದ್ದ ಅತ್ಯಂತ ಭೀಕರ ಮತ್ತು ಮನುಕುಲವೇ ತಲೆತಗ್ಗಿಸುವಂತಹ ಘಟನೆಯಲ್ಲಿ, 9 ವರ್ಷದ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ತಿಕ್ (32) ದೋಷಿ ಎಂದು ಮೈಸೂರು ಶೀಘ್ರಗತಿ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ವರ್ಷ ಗುಲ್ಬರ್ಗಾದಿಂದ (ಕಲಬುರಗಿ) ಬಡ ಕುಟುಂಬವೊಂದು ಮೈಸೂರಿಗೆ ಬಲೂನ್ ಮಾರಾಟ ಮಾಡಲು ಬಂದಿತ್ತು. ದಸರಾ ವಸ್ತುಪ್ರದರ್ಶನದ (Exhibition) ಬಳಿ ಟೆಂಟ್ ಹಾಕಿಕೊಂಡು ವಾಸವಿದ್ದ ಈ ಕುಟುಂಬದ 9 ವರ್ಷದ ಬಾಲಕಿಯನ್ನು ಆರೋಪಿ ಕಾರ್ತಿಕ್ ಮಧ್ಯರಾತ್ರಿ ಎಳೆದೊಯ್ದು, ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ್ದನು.

ಈ ಘಟನೆಯು ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಹಾಗೂ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ನಜರಬಾದ್ ಠಾಣೆಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೇವಲ 24 ಗಂಟೆಗಳ ಒಳಗಾಗಿ ಆರೋಪಿ ಕಾರ್ತಿಕ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೈಸೂರಿನ ಸಿದ್ದಲಿಂಗಪುರದ ನಿವಾಸಿಯಾಗಿರುವ ಈತ, ಮೈಸೂರು-ಕೊಳ್ಳೇಗಾಲ ಮಾರ್ಗದ ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರು ಶೀಘ್ರಗತಿ ವಿಶೇಷ ನ್ಯಾಯಾಲಯವು ಆರೋಪಿ ವಿರುದ್ಧದ ಅಪರಾಧ ಕೃತ್ಯ ಸಾಬೀತುಗೊಂಡಿರುವುದಾಗಿ ತೀರ್ಪು ನೀಡಿದೆ. ವಿಶೇಷವೆಂದರೆ, ಕಳೆದ ವರ್ಷ ದಸರಾ ಸಮಯದಲ್ಲೇ ಈ ಹೀನಾಯ ಕೃತ್ಯ ಜರುಗಿತ್ತು, ಈಗ ಮತ್ತೊಮ್ಮೆ ದಸರಾ ಮಹೋತ್ಸವದ ಸಂಭ್ರಮವಿರುವ ವೇಳೆಯಲ್ಲೇ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವ ಹಾದಿಯಲ್ಲಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!