Connect with us

crime

ಅಯೋಧ್ಯೆರಾಮಮಂದಿರಕ್ಕೆ ದೇಣಿಗೆ ನೀಡಿದ್ದ ₹5 ಕೋಟಿ ಮೌಲ್ಯದ ಚಿನ್ನದ ‘ರಾಮಚರಿತಮಾನಸ’ ನಾಪತ್ತೆ: ಮಾಜಿ ಐಎಎಸ್ ಅಧಿಕಾರಿಯಿಂದ ಗಂಭೀರ ಆರೋಪ, SIT ತನಿಖೆಯಲ್ಲಿ ಆಘಾತಕಾರಿ ಮಾಹಿತಿ!

Published

on

ಅಯೋಧ್ಯೆ: ದೇಶದ ಕೋಟ್ಯಂತರ ಭಕ್ತರ ಆರಾಧ್ಯ ದೈವ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಹರಿದುಬಂದಿರುವ ದೇಣಿಗೆಯ ದುರುಪಯೋಗದ ವಿವಾದ ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಮಂದಿರದ ಆಸ್ತಿ ಮತ್ತು ಆಭರಣಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಎದುರಾಗಿರುವ ಬೆನ್ನಲ್ಲೇ, ಮಂದಿರಕ್ಕೆ ಕಾಣಿಕೆಯಾಗಿ ನೀಡಲಾಗಿದ್ದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ಪವಿತ್ರ ‘ರಾಮಚರಿತಮಾನಸ’ ಗ್ರಂಥವನ್ನು ಅಲ್ಲಿಂದ ನಿಗೂಢವಾಗಿ ಬೇರೆಡೆಗೆ ಸಾಗಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೇಂದ್ರದ ಮಾಜಿ ಐಎಎಸ್ ಅಧಿಕಾರಿ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣನ್ ಅವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿರುದ್ಧ ಈ ಸ್ಫೋಟಕ ಆರೋಪ ಮಾಡಿದ್ದಾರೆ.

5 ಕೋಟಿ ಮೌಲ್ಯದ ಚಿನ್ನದ ಗ್ರಂಥಕ್ಕೆ ಸಿಗದ ಗೌರವ?

ಕಳೆದ 2024ರ ಏಪ್ರಿಲ್‌ನಲ್ಲಿ ಎಸ್. ಲಕ್ಷ್ಮೀನಾರಾಯಣನ್ ಅವರು ತಮ್ಮ ಕುಟುಂಬದ ವತಿಯಿಂದ ಈ ಅಪರೂಪದ ಹಾಗೂ ಪವಿತ್ರ ಗ್ರಂಥವನ್ನು ರಾಮಮಂದಿರ ಟ್ರಸ್ಟ್‌ಗೆ ಭಕ್ತಿಯಿಂದ ದೇಣಿಗೆಯಾಗಿ ನೀಡಿದ್ದರು. ಸುಮಾರು 147 ಕೆಜಿ ತೂಕದ ಈ ಕೃತಿಯನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರವನ್ನು ಬಳಸಿ ಅತ್ಯಂತ ಕಲಾತ್ಮಕವಾಗಿ ಸಿದ್ಧಪಡಿಸಲಾಗಿತ್ತು. ಒಟ್ಟು 522 ಪುಟಗಳ ಈ ಭವ್ಯ ಗ್ರಂಥದಲ್ಲಿ ಗೋಸ್ವಾಮಿ ತುಳಸಿದಾಸರ 10,902 ಶ್ಲೋಕಗಳನ್ನು ಚಿನ್ನದ ಅಕ್ಷರಗಳಲ್ಲಿ ಕೆತ್ತಲಾಗಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮೀನಾರಾಯಣನ್, “ಸುಮಾರು ಐದು ತಿಂಗಳುಗಳ ಕಾಲ ಈ ಪವಿತ್ರ ಗ್ರಂಥವನ್ನು ಭಕ್ತರ ದರ್ಶನಕ್ಕಾಗಿ ರಾಮಲಲ್ಲಾನ ಗರ್ಭಗುಡಿಯ ಬಳಿ ಇಡಲಾಗಿತ್ತು. ಆದರೆ, ಇತ್ತೀಚೆಗೆ ಅದನ್ನು ಅಲ್ಲಿಂದ ಏಕಾಏಕಿ ತೆರವುಗೊಳಿಸಲಾಗಿದೆ. ಈ ಬಗ್ಗೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಪ್ರಶ್ನಿಸಿದರೆ, ‘ಮಂದಿರಕ್ಕೆ ಬರುವ ಪ್ರತಿಯೊಂದು ಕಾಣಿಕೆಯನ್ನೂ ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಸಾಧ್ಯವಿಲ್ಲ’ ಎಂದು ಅತ್ಯಂತ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ,” ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸ್ವತಂತ್ರ ಆಡಿಟ್‌ಗೆ ಸಿಎಂ ಯೋಗಿ, ಮೋಹನ್ ಭಾಗವತ್‌ಗೆ ಪತ್ರ

ಮಂದಿರದ ಆಡಳಿತ ಮಂಡಳಿಯ ಈ ನಿಗೂಢ ನಡೆ ಮತ್ತು ಬೇಜವಾಬ್ದಾರಿತನದಿಂದ ಬೇಸತ್ತಿರುವ ಮಾಜಿ ಐಎಎಸ್ ಅಧಿಕಾರಿ, ಈ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತುರ್ತು ಪತ್ರ ಬರೆದಿದ್ದಾರೆ. ಮಂದಿರಕ್ಕೆ ಬರುತ್ತಿರುವ ಕೋಟ್ಯಂತರ ರೂಪಾಯಿ ದೇಣಿಗೆ, ಚಿನ್ನಾಭರಣ ಹಾಗೂ ಕಾಣಿಕೆಗಳ ಬಗ್ಗೆ ಪಾರದರ್ಶಕತೆ ಕಾಪಾಡಲು ತಕ್ಷಣವೇ ಸ್ವತಂತ್ರ ಆಡಿಟ್ (ಲೆಕ್ಕಪರಿಶೋಧನೆ) ನಡೆಸಬೇಕು ಎಂದು ಅವರು ಪತ್ರದಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ.

SIT ತನಿಖೆಯಲ್ಲಿ ಭೀತಿ: ಕರಗಿತೇ ರಾಮನ ಒಡವೆಗಳು?

ಮತ್ತೊಂದೆಡೆ, ರಾಮಮಂದಿರದಲ್ಲಿ ನಡೆದಿರುವ ದೇಣಿಗೆ ಕಳ್ಳತನ ಮತ್ತು ದುರುಪಯೋಗದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ಅತ್ಯಂತ ಆಘಾತಕಾರಿ ಸುಳಿವುಗಳು ಲಭ್ಯವಾಗಿವೆ.

ಬಿಸ್ಕೆಟ್ ರೂಪಕ್ಕೆ ಬದಲಾಯಿಸಿದ ಶಂಕೆ: ಮಂದಿರದಿಂದ ಕಾಣೆಯಾಗಿರುವ ಅಪಾರ ಮೌಲ್ಯದ ಚಿನ್ನದ ಆಭರಣಗಳನ್ನು ಆರೋಪಿಗಳು ಈಗಾಗಲೇ ಕರಗಿಸಿ, ಗುರುತು ಸಿಗದಂತೆ ‘ಚಿನ್ನದ ಬಿಸ್ಕೆಟ್’ಗಳನ್ನಾಗಿ ಪರಿವರ್ತಿಸಿರುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಅಧಿಕಾರಿಗಳು ತೀವ್ರವಾಗಿ ಶಂಕಿಸಿದ್ದಾರೆ.

ವೈಫಲ್ಯ ಕಂಡ ದಾಳಿಗಳು: ಕಳವಾಗಿರುವ ಒಡವೆಗಳ ಪತ್ತೆಗಾಗಿ ಎಸ್‌ಐಟಿ ತಂಡ ಹಲವು ಪ್ರಮುಖ ಸ್ಥಳಗಳು ಮತ್ತು ಶಂಕಿತರ ನೆಲೆಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದೆಯಾದರೂ, ಯಾವುದೇ ಆಭರಣಗಳು ಮೂಲ ರೂಪದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಒಡವೆಗಳನ್ನು ಕರಗಿಸಿ ಮಾರಾಟ ಮಾಡಿರುವ ಅಥವಾ ಅಡಗಿಸಿಟ್ಟಿರುವ ಅನುಮಾನ ದಟ್ಟವಾಗಿದೆ.

ಭಕ್ತ ವಲಯದಲ್ಲಿ ತೀವ್ರ ಆಕ್ರೋಶ

ವಿಶ್ವದಾದ್ಯಂತ ಇರುವ ಸನಾತನ ಧರ್ಮದ ಭಕ್ತರು ತಮ್ಮ ಕಷ್ಟದ ಹಣವನ್ನು ಶ್ರೀರಾಮನ ಪಾದಕ್ಕೆ ಸಮರ್ಪಿಸುತ್ತಿದ್ದಾರೆ. ಆದರೆ, ಮಂದಿರದ ಒಳಗಡೆಯೇ ಇಂತಹ ಬೃಹತ್ ಅಕ್ರಮ ಹಾಗೂ ಪವಿತ್ರ ವಸ್ತುಗಳ ನಾಪತ್ತೆ ಪ್ರಕರಣಗಳು ಕೇಳಿಬರುತ್ತಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ತನಿಖೆ ಚುರುಕುಗೊಂಡು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ರಾಮಮಂದಿರದ ಆಸ್ತಿಯ ಸಂಪೂರ್ಣ ಲೆಕ್ಕ ಸಾರ್ವಜನಿಕರಿಗೆ ಸಿಗಬೇಕು ಎಂಬ ಆಗ್ರಹ ಈಗ ದೇಶಾದ್ಯಂತ ಕೇಳಿಬರುತ್ತಿದೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಪೆರ್ಡೂರು ಪ್ರದೀಪ್ ಪೂಜಾರಿ ಹಲ್ಲೆ, ಆತ್ಮಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಮಧ್ಯಪ್ರದೇಶದಲ್ಲಿ ಬಂಧನ..

Published

on

​ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ (28) ಅವರ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ​

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು, ವಶಕ್ಕೆ ಪಡೆದಿರುವ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದೆ. ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಪಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ:​

ಪೆರ್ಡೂರಿನ ಪ್ರದೀಪ್ ಪೂಜಾರಿ ಅವರ ಮೇಲೆ ಅಕ್ಟೋಬರ್ 27ರ ರಾತ್ರಿ ಶ್ರಾವ್ಯಾ ಶೆಟ್ಟಿ ಕುಟುಂಬದವರು ಮೂರು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಭೀಕರವಾಗಿ ಹಲ್ಲೆ ನಡೆಸಿದ್ದರು ಎಂದು ಪ್ರದೀಪ್ ಅವರ ಸಹೋದರ ದಿಲೀಪ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಪ್ರದೀಪ್ ಅಕ್ಟೋಬರ್ 28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಕ್ಟೋಬರ್ 30ರ ಸಂಜೆ 5:30ರ ಸುಮಾರಿಗೆ ಆಸ್ಪತ್ರೆಯ ಶೌಚಾಲಯದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ​ಈ ಘಟನೆಗೆ ಸಂಬಂಧಿಸಿದಂತೆ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.

ವಿಶೇಷ ತಂಡಗಳ ರಚನೆ:

ಪ್ರಕರಣದ ತನಿಖೆಗಾಗಿ ಹಾಗೂ ಆರೋಪಿಗಳ ಪತ್ತೆಗೆ ಎಸ್‌ಪಿ ಅವರು 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ​ಅಧಿಕಾರಿ ಅಮಾನತು: ಪ್ರದೀಪ್ ಅವರ ಮೇಲೆ ಹಲ್ಲೆ ನಡೆದಾಗ ಆರಂಭದಲ್ಲಿ ಎಫ್‌ಐಆ‌ರ್ (FIR) ದಾಖಲಿಸದೆ ಕೇವಲ ಎನ್‌ಸಿ (NC) ದಾಖಲಿಸಿದ್ದ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಕರ್ತವ್ಯದಿಂದ ತೆರವುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ​ಪೂರ್ವ ದೂರುಗಳು ಹಾಗೂ ಚಾರ್ಜ್‌ಶೀಟ್:​ಇನ್ನೊಂದೆಡೆ, ಮೃತ ಪ್ರದೀಪ್ ಪೂಜಾರಿ ವಿರುದ್ಧವೂ ಯುವತಿ ಈ ಹಿಂದೆ 3 ಬಾರಿ ದೂರು ನೀಡಿದ್ದರು: ​2025 ನವೆಂಬರ್ 10: ಬೆದರಿಕೆ ಕರೆ ಹಾಕಿದ ಆರೋಪ. ​ನವೆಂಬರ್ 29: ಅತ್ಯಾಚಾರ ಆರೋಪ. ​ಅಕ್ಟೋಬರ್ 28: ಖಾರದ ಪುಡಿ ಎರಚಿ ಕೊಲೆಯತ್ನ ನಡೆಸಿದ ಆರೋಪ. ​ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ​ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.​

Continue Reading

arrest

ಕೊಲೆ ಮಾಡಿದ ಸ್ನೇಹಿತನೇ ಕನಸಿನಲ್ಲಿ ದೆವ್ವವಾಗಿ ಕಾಡಿದ! ಭಯ ತಾಳಲಾರದೆ ಪೊಲೀಸರಿಗೆ ಶರಣಾದ ಆರೋಪಿ

Published

on

ಮದ್ಯದ ಪಾರ್ಟಿ ವೇಳೆ ಸ್ನೇಹಿತನನ್ನೇ ಹೊಡೆದು ಕೊಂದಿದ್ದ ಯುವಕ; 15 ದಿನಗಳ ಕಾಲ ನಿದ್ರೆಯಲ್ಲೂ ಕಾಡಿದ ಮೃತ ಸ್ನೇಹಿತನ ನೆನಪು – ಕೊನೆಗೆ ಕೊಲೆ ರಹಸ್ಯ ಬಯಲು

ಮುಂಬೈ: ಮದ್ಯದ ಪಾರ್ಟಿ ವೇಳೆ ಉಂಟಾದ ಜಗಳದಲ್ಲಿ ಸ್ನೇಹಿತನನ್ನೇ ಹೊಡೆದು ಕೊಲೆಗೈದು, ಮೃತದೇಹವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಕೊನೆಗೆ ಮೃತ ಸ್ನೇಹಿತ ಕನಸಿನಲ್ಲಿ ಪದೇಪದೇ ಬಂದು ಕಾಡುತ್ತಿದ್ದಾನೆಂಬ ಭಯದಿಂದ ಪೊಲೀಸರ ಮುಂದೆ ಶರಣಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬವರ ಮೃತದೇಹ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪ್ರಭು ನೀಡಿದ ಹೇಳಿಕೆಯ ಪ್ರಕಾರ, ಸ್ನೇಹಿತ ಕದಮ್ ಅವರ ಮನೆಯಲ್ಲೇ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಪ್ರಭು, ಕದಮ್ ಅವರನ್ನು ಹೊಡೆದು ಕೊಲೆ ಮಾಡಿದ್ದಾನೆ.ಆತ ಮೃತಪಟ್ಟಿದ್ದ. ಸ್ನೇಹಿತ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡ ಪ್ರಭು, ತಕ್ಷಣ ತನ್ನ ಬಾಡಿಗೆ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಎಂಬಾತನ ಸಹಾಯ ಕೋರಿದ್ದಾನೆ. ಅವರಿಬ್ಬರೂ ಸೇರಿ ವಿಶಾಲ್ ಅವರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ರಾತ್ರೋರಾತ್ರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಬಳಿಕ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಆರಾಮವಾಗಿದ್ದ ಪ್ರಭುವಿಗೆ ಕೆಲವೇ ದಿನಗಳಲ್ಲಿ ಭಯ ಶುರುವಾಗಿದೆ. ಮೃತಪಟ್ಟ ಸ್ನೇಹಿತ ವಿಶಾಲ್ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದ. ಸುಮಾರು 15 ದಿನಗಳ ಕಾಲ ಸರಿಯಾಗಿ ನಿದ್ರೆ ಮಾಡಲೂ ಸಾಧ್ಯವಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಕನಸಿನ ಭಯ ಹಾಗೂ ಪಶ್ಚಾತ್ತಾಪದಿಂದ ಕಂಗೆಟ್ಟ ಪ್ರಭು, ಕೊನೆಗೆ ತಾನಾಗಿಯೇ ಪೊಲೀಸರ ಬಳಿಗೆ ತೆರಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.

ಈ ಸಂಬಂಧ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

crime

ಮಂಗಳೂರಿನಲ್ಲಿ ಫಿಲ್ಮಿ ದರೋಡೆ: ಬಸ್ ಇಳಿದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ₹1.15 ಕೋಟಿ ದರೋಡೆ!

Published

on

ಮಂಗಳೂರು, ಅ.29: ಶಿವಮೊಗ್ಗದಿಂದ ಮಂಗಳೂರಿಗೆ ತರಲಾಗುತ್ತಿದ್ದ ₹1.15 ಕೋಟಿ ನಗದು ಹಣವನ್ನು ದರೋಡೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಇಳಿದ ಕೂಡಲೇ ವ್ಯಕ್ತಿಯನ್ನು ಅಪಹರಿಸಿ ನಗರದಾದ್ಯಂತ ಸುತ್ತಾಡಿಸಿ ಹಣ ಕಿತ್ತುಕೊಂಡು ಕಾವೂರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವರ ಕೆಲಸದಾಳು ಸತ್ಯನಾರಾಯಣ ಅವರು ಅ.23ರಂದು 2 ಬ್ಯಾಗ್‌ಗಳಲ್ಲಿ ₹1 ಕೋಟಿ 15 ಲಕ್ಷ ಹಣವನ್ನು ಮಂಗಳೂರಿಗೆ ತರಲು ದಾವಣಗೆರೆಯಿಂದ ಹೊರಟಿದ್ದರು. ಅ.27ರ ರಾತ್ರಿ ದಾವಣಗೆರೆಯಿಂದ ಬಸ್ ಹತ್ತಿದ್ದ ಅವರು, ಅ.28ರ ಬೆಳಿಗ್ಗೆ 6 ಗಂಟೆಗೆ ಲಾಲ್‌ಬಾಗ್ ಬಳಿ ಬಸ್ ಇಳಿದಿದ್ದಾರೆ.

ಈ ವೇಳೆ ಕಪ್ಪು ಕಾರಿನಲ್ಲಿ ಮುಖಕ್ಕೆ ಮಫ್ಲರ್ ಕಟ್ಟಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಅಪಹರಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮಂಗಳೂರು ನಗರದಾದ್ಯಂತ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿ ಇದ್ದ 2 ಬ್ಯಾಗ್ ಹಣ ಮತ್ತು 2 ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.

ನಂತರ ಬೆಳಿಗ್ಗೆ 8 ಗಂಟೆಗೆ ಕಾವೂರು ಬಸ್ ನಿಲ್ದಾಣದ ಬಳಿಯ ಗುಡ್ಡದ ಮೇಲೆ ಅವರನ್ನು ತಳ್ಳಿ, “ಪೊಲೀಸರಿಗೆ ಹೇಳಿದರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಈ ಸಂಬಂಧ ಮಂಗಳೂರು ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಅಪಹರಣ, ದರೋಡೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಕಪ್ಪು ಕಾರು ಮತ್ತು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈ ದೊಡ್ಡ ಮೊತ್ತದ ಹಣದ ಸಾಗಾಟದ ಮಾಹಿತಿ ದರೋಡೆಕೋರರಿಗೆ ಮೊದಲೇ ಹೇಗೆ ಗೊತ್ತಾಯಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!