Connect with us

Dakshina Kannada

ಕರಾವಳಿಯಲ್ಲಿ ಮಳೆಗಾಲದ “ನಿತ್ಯ ನರಕ ದರ್ಶನ”: ಹೆದ್ದಾರಿಯೇ ಚರಂಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆ ಬದಿಯ ಮರಗಳು!

Published

on

ವಿಟ್ಲ/ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡ ಬೆನ್ನಲ್ಲೇ ವಾಹನ ಸವಾರರು ಹಾಗೂ ಸಾರ್ವಜನಿಕರ ಬದುಕು ದುಸ್ತರವಾಗಿದೆ. ಮಳೆಗಾಲ ಆರಂಭವಾಗಿ ಹಲವು ದಿನಗಳು ಕಳೆದರೂ ರಸ್ತೆ ಬದಿಯ ಚರಂಡಿಗಳನ್ನು ತೆರವುಗೊಳಿಸದ ಲೋಕೋಪಯೋಗಿ ಇಲಾಖೆಯ (PWD) ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚರಂಡಿಯಲ್ಲಿ ಹರಿಯಬೇಕಾದ ಕೊಚ್ಚೆ ನೀರೆಲ್ಲಾ ಇಂದು ಹೆದ್ದಾರಿಯ ಮೇಲೆಯೇ ಹರಿಯುತ್ತಿದ್ದು, ರಸ್ತೆಗಳು ತೋಡು (ಹೊಳೆ)ಗಳಾಗಿ ಮಾರ್ಪಟ್ಟಿವೆ.

ಹೆದ್ದಾರಿಯೇ ಚರಂಡಿ; ವಾಹನ ಸವಾರರ ನಿತ್ಯ ನರಕ!

ಸಾಲೆತ್ತೂರಿನಿಂದ ವಿಟ್ಲ ಮೂಲಕ ಕಬಕ ಸಂಪರ್ಕಿಸುವ ಮಾಣಿ-ಮೈಸೂರು ರಾಜ್ಯ ಹೆದ್ದಾರಿ, ಮಂಗಳೂರಿನಿಂದ ಸಾಗುವ ರಾಷ್ಟ್ರೀಯ ಹೆದ್ದಾರಿ ಹಾಗೂ ಕಲ್ಲಡ್ಕದಿಂದ ಕಡೂರು ಸಾಗುವ ಹೆದ್ದಾರಿಗಳ ದೃಶ್ಯಗಳು ಅಧಿಕಾರಿಗಳ ನಿಷ್ಕ್ರಿಯತೆಗೆ ಕೈಗನ್ನಡಿಯಾಗಿವೆ.

ರಸ್ತೆಯೇ ಹಳ್ಳ: ಮಳೆ ನೀರು ರಸ್ತೆಯಲ್ಲೇ ಶೇಖರಣೆಯಾಗುತ್ತಿರುವುದರಿಂದ ರಸ್ತೆಯಲ್ಲಿರುವ ಹೊಂಡ-ಗುಂಡಿಗಳ ಆಳ ಮತ್ತು ಅಗಲ ಅರಿಯಲಾಗದೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸವಾರರು ಪ್ರತಿದಿನ ಅಪಘಾತಕ್ಕೆ ಈಡಾಗುತ್ತಿದ್ದಾರೆ. ( ಚಿತ್ರಗಳಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು)

ನಾಪತ್ತೆಯಾದ ಚರಂಡಿಗಳು: ಮಾರ್ಗದ ಇಕ್ಕೆಲಗಳಲ್ಲಿ ಬಹುತೇಕ ಕಡೆ ಚರಂಡಿಗಳೇ ಇಲ್ಲದಂತಾಗಿದೆ. ಇದ್ದ ಕಡೆಯೂ ಹೂಳು ತುಂಬಿ ನೀರು ಸರಾಗವಾಗಿ ಹೋಗಲು ಹಾದಿಯಿಲ್ಲದೆ ರಸ್ತೆಯೇ ನದಿಯಂತಾಗುತ್ತಿದೆ.

“ಪ್ರತಿ ವರ್ಷ ಮಳೆಗೆ ರಸ್ತೆ ಹಾಳಾಗುವುದು, ಜನ ಶಾಪ ಹಾಕುತ್ತಾ ಸಾಗುವುದು ಕರಾವಳಿಯ ಜನಜೀವನದ ಭಾಗವೇ ಆಗಿಹೋಗಿದೆ. ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.” ಎಂದು ಸ್ಥಳೀಯ ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.

ಬಲಿಗಾಗಿ ಕಾಯುತ್ತಿವೆ ರಸ್ತೆ ಬದಿಯ ಅಪಾಯಕಾರಿ ಮರಗಳು!

ಮಳೆ ನೀರಿನ ಅವ್ಯವಸ್ಥೆ ಒಂದೆಡೆಯಾದರೆ, ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಹಾಗೂ ವಾಹನಗಳ ಮೇಲಕ್ಕೆ ವಾಲಿರುವ ಅಪಾಯಕಾರಿ ಮರಗಳು ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿವೆ.

ಸೂಕ್ತ ಸಮಯಕ್ಕಾಗಿ ಕಾದು ಕುಳಿತಿರುವ ಈ ಮರಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇಂದಿನವರೆಗೂ ಯಾವುದೇ ಎಚ್ಚರಿಕೆ ಕ್ರಮ ಕೈಗೊಂಡಿಲ್ಲ.

ಗಾಳಿ-ಮಳೆಗೆ ಮರಗಳು ರಸ್ತೆಗೆ ಉರುಳಿಬಿದ್ದರೆ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸುವ ಆತಂಕ ಎದುರಾಗಿದೆ.

ಸಾರ್ವಜನಿಕರ ಆಗ್ರಹವೇನು?

ಜಿಲ್ಲೆಯ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿ ವರ್ಗ ಇನ್ನಾದರೂ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

ತಕ್ಷಣವೇ ರಸ್ತೆ ಬದಿಯ ಎಲ್ಲಾ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು.

ಜಿಲ್ಲೆಯ ಬಹುತೇಕ ರಸ್ತೆ ಬದಿಯ ಚರಂಡಿಗಳನ್ನು ಯುದ್ಧೋಪಾದಿಯಲ್ಲಿ ಶುಚಿಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅನಾಹುತಗಳು ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

Published

on


​ಮಂಗಳೂರು: ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
​ಕಾರ್ಯಾಚರಣೆಯ ವಿವರ:
​ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಒಟ್ಟು ₹25,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
​ಈ ಪೈಕಿ ಈಗಾಗಲೇ ₹15,000 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಬಳಿಕ ಹೆಚ್ಚುವರಿಯಾಗಿ ಮತ್ತೊಮ್ಮೆ ₹5,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಬೇಸತ್ತ ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.
​ದೂರಿನ ಅನ್ವಯ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.


​ಹಿನ್ನೆಲೆ ಮತ್ತು ಹಳೆಯ ಆರೋಪಗಳು:
​ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರ ಮೇಲೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು:
​ಕಳ್ಳತನ ಪ್ರಕರಣದಲ್ಲಿ ಲಂಚ: ಉಳ್ಳಾಲದ ಮನೆಯೊಂದರಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಳ್ಳುವಾಗಲೂ ಲಂಚ ಪಡೆದ ಆರೋಪವಿತ್ತು.

​ ಪ್ರಕರಣ ಮುಚ್ಚಿಹಾಕಲು ದಂಧೆ:
ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಿಂದ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ರೂಪಾಯಿ ಪೀಕಿಸಿದ್ದಲ್ಲದೆ, ಮಗನ ಚಿನ್ನಾಭರಣ ಎಗರಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಅಂದಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಗ, ಇಲಾಖಾ ವಿಚಾರಣೆ ವೇಳೆ ದೂರುದಾರ ಮಹಿಳೆಗೆ ₹4.5 ಲಕ್ಷ ರೂಪಾಯಿ ನೀಡಿ ಕೇಸ್ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.


​ವರ್ಗಾವಣೆ ನಾಟಕ: ಉಳ್ಳಾಲದ ಮರಳು ದಂಧೆಕೋರರ ಸಾಲಿಗೆ ಸಿಲುಕಿ ವರ್ಗಾವಣೆಯಾಗಿದ್ದ ಇವರು, ಬಳಿಕ ಪಾಂಡೇಶ್ವರ ಮಹಿಳಾ ಠಾಣೆಗೆ ಸೇರಿ, ಪ್ರಸ್ತುತ ಬಜ್ಜೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮುಖ್ಯಮಂತ್ರಿ ಪದಕದ ವಿವಾದ.! ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇತರೆ ತಂಡಗಳು ಶ್ರಮವಹಿಸಿ ಆರೋಪಿಗಳನ್ನು ಬಂಧಿಸಿದ್ದರೂ, ಅದರ ನೆಪದಲ್ಲಿ ಅಂದಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Continue Reading

award

ಮುಂಬೈನಲ್ಲಿ ಸಾರ್ವಜನಿಕ ಸೇವೆ ಮತ್ತು ಫಿಟ್ನೆಸ್ ಸಾಧನೆಯ ಹೈರಾಕ್ಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಯಶಸ್ಸು

Published

on

ಮುಂಬೈ: ಆಡಳಿತದ ಬಿಡುವಿಲ್ಲದ ಜವಾಬ್ದಾರಿಗಳ ನಡುವೆಯೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ‘ಹೈರಾಕ್ಸ್’ (HYROX) ಫಿಟ್ನೆಸ್ ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

ಮುಂಬೈನ ಎನ್‌ಇಎಸ್‌ಸಿಒ (NESCO) ಹಾಲ್‌ನಲ್ಲಿ ಆಯೋಜನೆಗೊಂಡಿದ್ದ ಈ ಕಠಿಣ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ಸಾವಿರಾರು ಫಿಟ್ನೆಸ್ ಉತ್ಸಾಹಿಗಳು ಭಾಗವಹಿಸಿದ್ದರು. ಈ ಸಾಹಸಮಯ ರೇಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಮಂಗಳೂರಿನ ಖ್ಯಾತ ಫಿಟ್ನೆಸ್ ತರಬೇತುದಾರ ಹಾಗೂ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಕೂಡ ಸಾಥ್ ನೀಡಿ ಯಶಸ್ಸು ಸಾಧಿಸಿದ್ದಾರೆ.

ಏನಿದು ಹೈರಾಕ್ಸ್ (HYROX)?

ವಿಶ್ವದ ಅತಿದೊಡ್ಡ ಫಿಟ್ನೆಸ್ ರೇಸ್ ಎಂದು ಖ್ಯಾತಿ ಪಡೆದಿರುವ ಹೈರಾಕ್ಸ್, ಅತ್ಯಂತ ಕಠಿಣ ಹಾಗೂ ಸವಾಲಿನ ಸ್ಪರ್ಧೆಯಾಗಿದೆ. ಇದು ಒಟ್ಟು 8 ಕಿ.ಮೀ. ಓಟ ಮತ್ತು 8 ವಿವಿಧ ಫಂಕ್ಷನಲ್ ವರ್ಕೌಟ್ ಸ್ಟೇಷನ್‌ಗಳನ್ನು ಒಳಗೊಂಡಿರುತ್ತದೆ.

ಈ ಸವಾಲಿನಲ್ಲಿ ಸ್ಪರ್ಧಾಳುಗಳು ಸ್ಕೀ ಎರ್ಗ್ (SkiErg), ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪಿ ಬ್ರಾಡ್ ಜಂಪ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲುಂಜಸ್ ಮತ್ತು ವಾಲ್ ಬಾಲ್‌ನಂತಹ ಕಠಿಣ ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಂಡಿರುವ ಈ ರೇಸ್, 2025ರ ಮೇ ತಿಂಗಳಲ್ಲಿ ಮುಂಬೈ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿತ್ತು.

ಆಡಳಿತದ ಜೊತೆ ಫಿಟ್ನೆಸ್‌ಗೆ ಒತ್ತು

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ದರ್ಶನ್ ಎಚ್.ವಿ. ಅವರು 2025ರ ಜೂನ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ 134ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ದೈನಂದಿನ ಕಚೇರಿ ಕೆಲಸಗಳು, ಸಾರ್ವಜನಿಕ ಸಮಸ್ಯೆಗಳ ನಿವಾರಣೆ ಹಾಗೂ ಆಡಳಿತಾತ್ಮಕ ಬಿಡುವಿಲ್ಲದ ಒತ್ತಡದ ನಡುವೆಯೂ ಫಿಟ್ನೆಸ್ ಕಾಯ್ದುಕೊಂಡಿರುವ ಇವರ ಹೈರಾಕ್ಸ್ ಸಾಧನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಇವರೊಂದಿಗೆ ಹೆಜ್ಜೆಹಾಕಿದ ಪ್ರದೀಪ್ ಕುಮಾರ್ ಆಚಾರ್ಯ ಅವರು ಮಂಗಳೂರಿನ ಹೆಸರಾಂತ ಪವರ್‌ಲಿಫ್ಟರ್ ಆಗಿದ್ದು, ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಪ್ರಸ್ತುತ ಮಂಗಳೂರಿನಲ್ಲಿ ನೂರಾರು ಯುವಕರಿಗೆ ಫಿಟ್ನೆಸ್ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಜಿಲ್ಲಾ ಆಡಳಿತದ ಚುಕ್ಕಾಣಿ ಹಿಡಿದು ಆರೋಗ್ಯಕರ ಬದುಕಿಗೆ ಮುಂಚೂಣಿಯಲ್ಲಿ ನಿಂತಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಈ ಸಾಧನೆ, ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆಗೆ ಫಿಟ್ನೆಸ್ ಮತ್ತು ಶಿಸ್ತಿನ ಬಗ್ಗೆ ದೊಡ್ಡ ಮಟ್ಟದ ಪ್ರೇರಣೆ ನೀಡಿದೆ

Continue Reading

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

Trending

Copyright © 2025 Deevatige