Connect with us

crime

ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯ ಭೀಕರ ಹೈವೇ ದರೋಡೆ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು: ಪ್ರಮುಖ ಆರೋಪಿ ಸೇರಿ ಮೂವರ ಬಂಧನ, 10 ದಿನ ಪೊಲೀಸ್ ಕಸ್ಟಡಿಗೆ

Published

on

ಮಂಗಳೂರು: ಕಳೆದ ಸೋಮವಾರ (ಜೂನ್ 29) ನಸುಕಿನ ಜಾವ ಬೈಕಂಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದ ಸಿನೆಮಾ ಶೈಲಿಯ ಭೀಕರ ಡಕಾಯಿತ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಅತ್ಯಂತ ಯಶಸ್ವಿಯಾಗಿ ಬೆನ್ನಟ್ಟಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಹಾಗೂ ಆತನಿಗೆ ಆಶ್ರಯ, ವಾಹನ ನೀಡಿ ಸಹಕರಿಸಿದ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಸಾಹಸಮಯ ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಜುಲೈ 3 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಇವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಆ ಭೀಕರ ಕೃತ್ಯವೇನು?

ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ (KL-59-R-9450) ತೆರಳುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ (44 ವರ್ಷ) ಎಂಬುವವರನ್ನು ಜೂನ್ 29ರ ಮುಂಜಾನೆ ಸುಮಾರು 2:45 ಗಂಟೆಗೆ ಮಂಗಳೂರಿನ ಬೈಕಂಪಾಡಿ ಸಮೀಪ ದರೋಡೆಕೋರರ ತಂಡ ಅಡ್ಡಗಟ್ಟಿತ್ತು.

ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಮುಸುಕುಧಾರಿ ದರೋಡೆಕೋರರು, ವಿಕಾಸ್ ಅವರ ಕಾರನ್ನು ತಡೆದು ತಲವಾರು ತೋರಿಸಿ ಜೀವಬೆದರಿಕೆ ಹಾಕಿದ್ದರು. ದೂರುದಾರರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಲ್ಲದೆ, ಅವರ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಅಪಹರಿಸಿ ಕೆಲವು ಕಿಲೋಮೀಟರ್ ದೂರದವರೆಗೆ ಕರೆದೊಯ್ದು ಬಳಿಕ ಬಿಟ್ಟುಹೋಗಿದ್ದರು. ದೂರುದಾರರ ಕಾರು, ಕಾರಿನೊಳಗಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ. 20 ಲಕ್ಷ), ಎರಡು ಮೊಬೈಲ್ ಫೋನ್‌ಗಳು ಹಾಗೂ ಕಾರು ಸೇರಿದಂತೆ ಒಟ್ಟು ರೂ. 23,10,000 ಮೌಲ್ಯದ ಸೊತ್ತನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗುಡ್ಡಗಾಡಿನಲ್ಲಿ ಪತ್ತೆಯಾದ ನಂಬರ್ ಪ್ಲೇಟ್ ಇಲ್ಲದ ಕಾರು!

ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆ ಚುರುಕುಗೊಳಿಸಿದರು. ಜೂನ್ 30ರಂದು ಬೆಳಿಗ್ಗೆ 11:30 ಗಂಟೆಗೆ ದರೋಡೆಕೋರರು ಕದ್ದು ಒಯ್ದಿದ್ದ ಪಿರ್ಯಾದುದಾರರ ಮಾರುತಿ ಡಿಝೈರ್ ಕಾರನ್ನು ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ಎಂಬಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಆರೋಪಿಗಳು ಬಿಟ್ಟುಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡರು. ಇದು ತನಿಖೆಯ ಮುಂದಿನ ಹಾದಿಗೆ ಪ್ರಮುಖ ಸುಳಿವಾಯಿತು.

ಕೇರಳ ಮತ್ತು ಕೊಡಗಿನಲ್ಲಿ ಪೊಲೀಸರ ಭರ್ಜರಿ ಜಾಲ: ಮೂವರ ಹೆಡೆಮುರಿ

ಆರೋಪಿಗಳ ಪತ್ತೆಗಾಗಿ ನೆರೆರಾಜ್ಯ ಕೇರಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿದವು:

ಪ್ರಮುಖ ಆರೋಪಿಯ ಬಂಧನ: ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಕಣ್ಣೂರು ಜಿಲ್ಲೆಯ ತಲಶ್ಚೇರಿ ತಾಲೂಕಿನ ಕಾಯಲೋಡೆ ನಿವಾಸಿ ನಿಮಿಲ್ ಆರ್.ಕೆ (37 ವರ್ಷ) ಎಂಬಾತನನ್ನು ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕರಾದ ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿ ಜುಲೈ 2 ರಂದು ಕೇರಳದ ಕಣ್ಣೂರಿನ ‘ಆಸ್ಟರ್ ಮಿಮ್ಸ್’ (ASTER MIMS) ಆಸ್ಪತ್ರೆಯ ಬಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಆಶ್ರಯ ನೀಡಿದವನ ಬಂಧನ: ಆರೋಪಿಗಳಿಗೆ ಕೃತ್ಯ ಎಸಗಲು ಸಹಕರಿಸಿ ಆಶ್ರಯ ನೀಡಿದ್ದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಕ್ಕತ್ತೂರು ನಿವಾಸಿ ಇರ್ಷಾದ್ (40 ವರ್ಷ) ಎಂಬಾತನನ್ನು ಪಣಂಬೂರು ಪಿ.ಎಸ್.ಐ ಜ್ಞಾನ ಶೇಖರ್ ಮತ್ತು ತಂಡ ಜುಲೈ 2ರ ಸಾಯಂಕಾಲ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದಿದೆ.

ವಾಹನ ಒದಗಿಸಿದವನ ಬಂಧನ: ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿಗಳಿಗೆ ಕಾರನ್ನು ಒದಗಿಸಿಕೊಟ್ಟು ಆಶ್ರಯ ನೀಡಿದ್ದ ಮಡಿಕೇರಿ ಮಾರ್ಕೆಟ್ ಬಳಿಯ ನಿವಾಸಿ ಮುಸ್ತಾಫ (49 ವರ್ಷ) ಎಂಬಾತನನ್ನು ಜುಲೈ 2ರ ರಾತ್ರಿ ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್‌ನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಒಟ್ಟು 16 ಆರೋಪಿಗಳ ದರೋಡೆ ಸ್ಕೆಚ್: ಇನ್ನೂ 13 ಜನರಿಗೆ ತಲಾಶ್!

ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ಈ ದರೋಡೆ ಕೃತ್ಯದಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು, ಇಬ್ಬರು ಆರೋಪಿಗಳು ಇವರಿಗೆ ಆಶ್ರಯ ಮತ್ತು ವಾಹನ ನೀಡಿ ಸಹಕರಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ಈ ಇಡೀ ಜಾಲದಲ್ಲಿ ಒಟ್ಟು 16 ದರೋಡೆಕೋರರಿದ್ದು, ಸದ್ಯ 3 ಜನ ಸಿಕ್ಕಿಬಿದ್ದಿದ್ದಾರೆ. ಇನ್ನುಳಿದ ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 13 ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಆರೋಪಿಗಳೆಲ್ಲರೂ ಕೊಡಗು (ಮಡಿಕೇರಿ) ಮತ್ತು ಕೇರಳ ರಾಜ್ಯದವರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳು: ದರೋಡೆಗೊಳಗಾಗಿದ್ದ ಮಾರುತಿ ಡಿಝೈರ್ ಕಾರು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ 4 ಕಾರುಗಳ ಪೈಕಿ 1 ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ಸದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬಳಸಿದ ಉಳಿದ 3 ಕಾರುಗಳು, ದೋಚಲಾದ 180 ಗ್ರಾಂ ಚಿನ್ನಾಭರಣ ಮತ್ತು 2 ಮೊಬೈಲ್ ಫೋನ್‌ಗಳ ಪತ್ತೆ ಕಾರ್ಯ ಬಾಕಿ ಇದೆ.

ಸಾಹಸಮಯ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಈ ಹೈವೇ ದರೋಡೆ ಪ್ರಕರಣವನ್ನು ಅತಿ ಶೀಘ್ರದಲ್ಲಿ ಭೇದಿಸುವಲ್ಲಿ ಪೊಲೀಸರ ಸಾಹಸಮಯ ಕೆಲಸ ಶ್ಲಾಘನೀಯವಾಗಿದೆ. ಈ ಯಶಸ್ವಿ ಕಾರ್ಯಾಚರಣೆಯು ಉತ್ತರ ವಿಭಾಗದ ಎಸಿಪಿ ಶ್ರೀ ಶ್ರೀಕಾಂತ ಕೆ. ಮತ್ತು ಮಂಗಳೂರು ನಗರ ಸಿಸಿಬಿ (CCB) ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ಜಂಟಿ ನೇತೃತ್ವದಲ್ಲಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಪಣಂಬೂರು ಪಿಎಸ್ಐಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಕಾವೂರು, ಮುಲ್ಕಿ, ಕಂಕನಾಡಿ, ಉರ್ವ ಪೊಲೀಸ್ ಠಾಣೆಗಳ ಮತ್ತು ಸಿಸಿಬಿ ಘಟಕದ ಪಿಎಸ್ಐಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಬೆಳ್ತಂಗಡಿ: ಅಕ್ರಮ ಕೋಳಿಅಂಕ ಜೂಜಾಟದ ಅಡ್ಡೆಗೆ ಪೋಲಿಸ್ ದಾಳಿ – ಇಬ್ಬರ ಬಂಧನ, ಸೊತ್ತುಗಳು ಜಪ್ತಿ

Published

on

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದ ನಿರ್ಮಡ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿಅಂಕ ಜೂಜಾಟದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಸಂಭವಿಸಿದೆ.

ಧರ್ಮಪ್ಪ ಗೌಡ (38) (ಬಂದಾರು ಗ್ರಾಮದ ನಿರ್ಮಡ ನಿವಾಸಿ) ಮತ್ತು ಹರೀಶ್ ಎಸ್. (30) (ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಬೆಳ್ಳೂರು ನಿವಾಸಿ) ಬಂಧಿತ ಆರೋಪಿಗಳು.

ದಾಳಿಯ ವಿವರ:

ಆಗಸ್ಟ್ 3ರಂದು ಸಂಜೆ ಸುಮಾರು 5:15ರ ವೇಳೆಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಅವರ ನೇತೃತ್ವದ ಪೊಲೀಸ್ ತಂಡ ನಿರ್ಮಡ ಪ್ರದೇಶಕ್ಕೆ ದಾಳಿ ನಡೆಸಿತು. ಈ ವೇಳೆ ಆರೋಪಿಗಳು ಕೋಳಿಗಳ ಕಾಲಿಗೆ ಬಾಳು (ಸಣ್ಣ ಕತ್ತಿ) ಕಟ್ಟಿ, ಪರಸ್ಪರ ಕಾದಾಟಕ್ಕೆ ಬಿಟ್ಟು ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ.

ಪೊಲೀಸರನ್ನು ಕಂಡ ತಕ್ಷಣವೇ ಸ್ಥಳದಲ್ಲಿದ್ದ ಕೆಲವರು ಕಾಲ್ಕಿತ್ತಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳು:

ದಾಳಿಯ ವೇಳೆ ಪೊಲೀಸರು ಜೂಜಾಟಕ್ಕೆ ಬಳಸಿದ್ದ ₹350 ನಗದು, 2 ಬಾಳುಗಳು (ಸಣ್ಣ ಕತ್ತಿ), ವಿವಿಧ ತಳಿಯ 4 ಕೋಳಿಗಳು ಹಾಗೂ 3 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹74,370 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣ ದಾಖಲು:

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ – 1960ರ ಕಲಂ 11(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ\

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

arrest

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ: ಮಂಗಳೂರು ಪೊಲೀಸರ ಕಾರ್ಯಾಚರಣೆ

Published

on

ಮಂಗಳೂರು: ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 30ಕ್ಕೂ ಹೆಚ್ಚು ವಾರಂಟ್ ಹಾಗೂ 13ಕ್ಕೂ ಅಧಿಕ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ಪಡೆ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲ ತಾಲೂಕಿನ ಮಾರ್ಗತಲೆ ಮೂಲದ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಡಪ್ಪು ನಿವಾಸಿ ಉಮ್ಮರ್ ನವಾಫ್ (33) ಬಂಧಿತ ಆರೋಪಿ.

30ಕ್ಕೂ ಹೆಚ್ಚು ವಾರಂಟ್, ಪ್ರೋಕ್ಲಮೇಷನ್ ಜಾರಿ

ಬಂಧಿತ ಉಮ್ಮರ್ ನವಾಫ್ ವಿರುದ್ಧ ಕೊಲೆ ಯತ್ನ, ಅಪಹರಣ, ದರೋಡೆ, ಹಫ್ತಾ ವಸೂಲಿ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಉಳ್ಳಾಲ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಘನ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಹೊರಡಿಸಿತ್ತು. ಅಲ್ಲದೆ, ಉಳ್ಳಾಲ ಠಾಣೆಯ ಮೂರು ಪ್ರಕರಣಗಳಲ್ಲಿ ಈತನ ವಿರುದ್ಧ ನ್ಯಾಯಾಲಯದ ಆದೇಶದಂತೆ ‘ಪ್ರೋಕ್ಲಮೇಷನ್’ ಜಾರಿಗೊಳಿಸಲಾಗಿತ್ತು ಹಾಗೂ ಒಂದು ಪ್ರಕರಣದಲ್ಲಿ ಎಲ್.ಪಿ.ಸಿ (LPC) ಮಾಡಲಾಗಿತ್ತು.

ಆರೋಪಿ ಉಮ್ಮರ್ ನವಾಫ್ ಮೇಲಿರುವ ಪ್ರಕರಣಗಳ ವಿವರಗಳು:

  1. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 222/17):
    • ಕಲಂಗಳು: 143, 147, 148 (ಕಾನೂನುಬಾಹಿರ ಗುಂಪುಗಾರಿಕೆ, ಗಲಭೆ), 341 (ಅಕ್ರಮ ತಡೆ), 504, 506 (ಶಾಂತಿ ಭಂಗ, ಜೀವ ಬೆದರಿಕೆ), 324 (ಹಾಕಾಹಾಕಿ/ಹೊಡೆದಾಟ) ಮತ್ತು 307 (ಕೊಲೆ ಯತ್ನ).
  2. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 23/17):
    • ಕಲಂಗಳು: 427 IPC (ಆಸ್ತಿಗೆ ಹಾನಿ) ಮತ್ತು KPDLP ಕಾಯ್ದೆಯ 2(a), 2(b) (ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ).
  3. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 247/14):
    • ಕಲಂಗಳು: 448 (ಅಕ್ರಮ ಪ್ರವೇಶ) ಮತ್ತು 395 (ದರೋಡೆ).
  4. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 289/17):
    • ಕಲಂಗಳು: 504, 506, 364(a) (ಅಪಹರಣ ಮತ್ತು ಕಪ್ಪಕ್ಕೆ ಬೇಡಿಕೆ), 387 (ಹಫ್ತಾ ವಸೂಲಿಗೆ ಬೆದರಿಕೆ), 395 (ದರೋಡೆ), 149 IPC.
  5. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 276/15) – (ನ್ಯಾಯಾಲಯದಿಂದ LPC ಮಾಡಲಾದ ಪ್ರಕರಣ):
    • ಕಲಂಗಳು: 143, 144, 148, 448, 451, 452 (ಅಕ್ರಮ ಮನೆ ಪ್ರವೇಶ), 326, 307 (ಕೊಲೆ ಯತ್ನ), 397 (ಮಾರಕ ಆಯುಧದೊಂದಿಗೆ ದರೋಡೆ/ಕಳವು), 506, 149 IPC.
  6. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 206/2012) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 143, 147, 148, 323, 427, 504, 506, 149 IPC.
  7. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 27/2017) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 387 IPC (ಭಯ ಹುಟ್ಟಿಸಿ ಹಣ/ಆಸ್ತಿ ವಸೂಲಿ ಮಾಡುವುದು).
  8. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 103/2021):
    • ಕಲಂಗಳು: 364 IPC (ಕೊಲೆ ಮಾಡುವ ಉದ್ದೇಶದಿಂದ ಅಪಹರಣ).
  9. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 71/23):
    • ಕಲಂಗಳು: 504, 506, 307 (ಕೊಲೆ ಯತ್ನ), 324, 427 IPC.
  10. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 183/17) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
    • ಕಲಂಗಳು: 143, 147, 148, 448, 504, 324, 323, 506, 427 R/w 149 IPC.
  11. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 159/23):
    • ಕಲಂಗಳು: 341, 394 (ಕಳವು ಮಾಡುವಾಗ ಗಾಯಗೊಳಿಸುವುದು), 307 (ಕೊಲೆ ಯತ್ನ) R/w 34 IPC.
  12. ಪಣಂಬೂರು ಪೊಲೀಸ್ ಠಾಣೆ (PNB ಮೊ.ನಂ 158/2012):
    • ಕಲಂಗಳು: 379 IPC (ಕಳವು).
  13. ಬರ್ಕೆ ಪೊಲೀಸ್ ಠಾಣೆ (ಮೊ.ನಂ 04/15):
    • ಕಲಂಗಳು: 353 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ), 427 R/w 34 IPC.

ಪೊಲೀಸರ ಸಕಾಲಿಕ ಕಾರ್ಯಾಚರಣೆ

ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ಮಾರ್ಗದರ್ಶನದಲ್ಲಿ, ದಕ್ಷಿಣ ಉಪವಿಭಾಗ ಕಚೇರಿಯ ವಿಶೇಷ ಕರ್ತವ್ಯ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಾಂಕ 02-08-2026 ರಂದು ಸುಳಿವು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Continue Reading

Trending

Copyright © 2025 Deevatige

error: Content is protected !!