drugs
ವಿಟ್ಲ ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಮತ್ತು ಜಾಗೃತಿ ಜಾಥಾ
ವಿಟ್ಲ ಪೊಲೀಸರಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ: ಅಡ್ಯನಡ್ಕದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಜಾಗೃತಿ ಜಾಥಾ
ವಿಟ್ಲ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ಕೇಪು ಗ್ರಾಮದ ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಗುರುವಾರ (ಜೂನ್ 25) ಬೃಹತ್ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಅಡ್ಯನಡ್ಕ ಪೇಟೆಯಿಂದ ಕರ್ಣಾಟಕ ಬ್ಯಾಂಕ್ ಶಾಖೆಯವರೆಗೆ ನಡೆದ ಈ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಯುವ ಸಮುದಾಯವನ್ನು ಮಾದಕ ವಸ್ತುಗಳಿಂದ ದೂರವಿಡಲು ಮತ್ತು ಮಾದಕ ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ “ಡ್ರಗ್ಸ್ ಮುಕ್ತ ಭಾರತ”, “ಮಾದಕ ವಸ್ತುಗಳ ವಿರುದ್ಧ ಕರ್ನಾಟಕ” ಎಂಬ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಕಾನೂನು ಮಾಹಿತಿ ನೀಡಲಾಯಿತು. ವ್ಯಸನ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪಾತ್ರ ಅತ್ಯಂತ ದೊಡ್ಡದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಬಾರ್ ಮತ್ತು ವೈನ್ ಶಾಪ್ ಮಾಲಿಕರ ಸಭೆ

ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ: ವಿಟ್ಲದಲ್ಲಿ ಬಾರ್, ವೈನ್ ಶಾಪ್ ಮಾಲಿಕರಿಗೆ ಪೊಲೀಸರ ಖಡಕ್ ಎಚ್ಚರಿಕೆ
ವಿಟ್ಲ: ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಅವರ ಪ್ರವೇಶಕ್ಕೆ ಅವಕಾಶ ನೀಡುವುದು ಕಂಡುಬಂದಲ್ಲಿ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಟ್ಲ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜೂನ್ 25ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ ಬಾರ್ ಎಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್ ಮಾಲಿಕರ ಮಹತ್ವದ ಸಭೆಯನ್ನು ನಡೆಸಲಾಯಿತು. ವಿಟ್ಲ ಪೊಲೀಸ್ ನಿರೀಕ್ಷಕರಾದ (ಪಿಐ) ಪ್ರಕಾಶ್ ದೇವಾಡಿಗ ರವರ ಮಾರ್ಗದರ್ಶನದಲ್ಲಿ, ಉಪನಿರೀಕ್ಷಕರಾದ (ಪಿಎಸ್ ಐ) ರಾಮಕೃಷ್ಣ ರವರ ನೇತೃತ್ವದಲ್ಲಿ ಈ ಸಭೆ ಜರುಗಿತು.
ಸಭೆಯಲ್ಲಿ ಮಾಲಿಕರಿಗೆ ಪ್ರಮುಖವಾಗಿ ಈ ಕೆಳಗಿನ ಸೂಚನೆಗಳನ್ನು ನೀಡಲಾಯಿತು:
ಅಪ್ರಾಪ್ತ ವಯಸ್ಕರಿಗೆ ಮದ್ಯದ ಅಂಗಡಿಗಳಿಗೆ ಪ್ರವೇಶ ನೀಡುವುದನ್ನು ಹಾಗೂ ಮದ್ಯ ಸೇವನೆ ಒದಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸರ್ಕಾರದಿಂದ ವಿತರಿಸಿರುವ ಅಧಿಕೃತ ವಯಸ್ಸಿನ ಪುರಾವೆ ಅಥವಾ ಗುರುತಿನ ಚೀಟಿ (ID Card) ಇಲ್ಲದೆ ಯಾವುದೇ ಸಂಶಯಾಸ್ಪದ ವ್ಯಕ್ತಿಯನ್ನು ಮದ್ಯ ಮಾರಾಟ ಮಾಡುವ ಸಂಸ್ಥೆ ಅಥವಾ ಜಾಗಗಳಿಗೆ ಪ್ರವೇಶಿಸಲು ಅನುಮತಿಸಬಾರದು.
ನಿಯಮಗಳನ್ನು ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ಪೂರೈಸುವುದು ಅಥವಾ ಅದಕ್ಕೆ ಬೆಂಬಲ ನೀಡುವುದು ಕಂಡುಬಂದಲ್ಲಿ ಮಾಲಿಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ವಿವರವಾಗಿ ತಿಳಿಸಿದರು.



arrest
ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.
ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್ವೆಲ್ ಉಜ್ಜೋಡಿ ಬಳಿಯ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
arrest
ಮಂಗಳೂರು: ಕೋರಿಯರ್ ಮೂಲಕ ಎಂಡಿಎಂಎ ಸಾಗಾಟ; ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ, ಮೂವರ ಬಂಧನ!
ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಸಂಚು ರೂಪಿಸಿದ್ದ ದೊಡ್ಡ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ₹1.58 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಪ್ರಮಾಣದ ಎಂಡಿಎಂಎ (MDMA) ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯ ವಿವರ:
ಮಂಗಳೂರು ನಗರದಲ್ಲಿ ಸಾರ್ವಜನಿಕರನ್ನು, ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ನಿಷೇಧಿತ ಎಂಡಿಎಂಎ ಮಾದಕವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಅಕ್ಟೋಬರ್ 08, 2026ರ ರಾತ್ರಿ 10:00 ಗಂಟೆಗೆ ಉಳ್ಳಾಲ ತಾಲೂಕು ಕುಂಪಲದ ಡಿಮಾರ್ಟ್ (D-Mart) ಬಳಿ ದಾಳಿ ನಡೆಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ವಿವರ:
ಅಪರಾಧ ವಸ್ತು: 1 ಕೆಜಿ 796.96 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹ 1,58,34,000/-)
ಇತರೆ ವಸ್ತುಗಳು: 3 ಮೊಬೈಲ್ ಫೋನ್ಗಳು, ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಹಾಗೂ ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಬಾಕ್ಸ್ ಮತ್ತು ವಾಟರ್ ಪ್ಯೂರಿಫೈಯರ್.
ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ: ₹ 1,63,84,000/-
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಅಬ್ದುಲ್ ಹಾಪೀಲ್ (25 ವರ್ಷ): ಅನೀಸಾ ಮಂಜಿಲ್, ಬೈದಲಾ ಪೋಸ್ಟ್, ಮಂಗಳ್ಪಾಡಿ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. (ಈತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣ ದಾಖಲಾಗಿದೆ).
ಜಿಯಾವುಲ್ ಹಕ್ (30 ವರ್ಷ): ವಾಸ: # 1-12/1, ಎಂ.ಜೆ.ಎಂ.156, ಪಿ.ಬಾವ ಹೌಸ್, ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು. (ಈತನ ವಿರುದ್ಧ ದುಬೈ ದೇಶದ ರಸ್-ಅಲ್-ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ವಾಪಸಾಗಿರುವ ಹಿನ್ನೆಲೆಯಿದೆ).
ಅಲ್ತಾಫ್ (28 ವರ್ಷ): ಹಾಲಿ ವಾಸ: ಫ್ಲ್ಯಾಟ್ ನಂ. 201, ಆಯಿಷಾ ಅಪಾರ್ಟಮೆಂಟ್, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು (ಸ್ವಂತ ವಿಳಾಸ: ಸಿರಿಸೀಮೆ ನರ್ಸರಿ ಹತ್ತಿರ, ಫೈಸಲ್ ನಗರ, ಬಜಾಲ್ ಗ್ರಾಮ, ಜಲ್ಲಿಗುಡ್ಡೆ ಪೋಸ್ಟ್, ಮಂಗಳೂರು). (ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಪ್ರಕರಣವಿದೆ).
ವಿನೂತನ ಕೃತ್ಯ – ಪಂಜಾಬ್ನಿಂದ ವಾಟರ್ ಪ್ಯೂರಿಫೈಯರ್ ಒಳಗೆ ಸಾಗಾಟ!
ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸುತ್ತಿದ್ದರು. ಸಿಕ್ಕಿಬೀಳದಂತೆ ತಡೆಯಲು, ವಾಟರ್ ಪ್ಯೂರಿಫೈಯರ್ನ ನೀರು ಸಂಗ್ರಹವಾಗುವ ಒಳಭಾಗದಲ್ಲಿ ಎಂಡಿಎಂಎ ಅನ್ನು ಅತ್ಯಂತ ಸುರಕ್ಷಿತವಾಗಿ ಭದ್ರಪಡಿಸಿ, ಬಳಿಕ ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸುತ್ತಿದ್ದರು.
ನಂತರ ಈ ಮಾದಕವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ, ಪೊಲೀಸರು ಆರಂಭಿಕ ಹಂತದಲ್ಲೇ ಕಾರ್ಯಾಚರಣೆ ನಡೆಸಿ ಈ ಅಂತರರಾಜ್ಯ ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
arrest
ಅರಬ್ಬಿ ಸಮುದ್ರದಲ್ಲಿ ಭಾರಿ ಡ್ರಗ್ಸ್ ಬೇಟೆ: 3,000 ಕೋಟಿ ಮೌಲ್ಯದ ಹೆರಾಯಿನ್ ವಶ, 5 ಪಾಕ್ ಪ್ರಜೆಗಳ ಬಂಧನ!
ಮಂಗಳೂರು: ಅರಬ್ಬೀ ಸಮುದ್ರದ ಮೂಲಕ ಭಾರತಕ್ಕೆ ಭಾರೀ ಪ್ರಮಾಣದ ಡ್ರಗ್ಸ್ ಪೂರೈಸಲು ಯತ್ನಿಸಿದ ಅಂತರರಾಷ್ಟ್ರೀಯ ನಾರ್ಕೋ ಟೆರರಿಸಂ ಜಾಲವನ್ನು ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ಗುಜರಾತ್ ಎಂಟಿ ಟೆರರಿಸ್ಟ್ ಸ್ಕ್ವಾಡ್ (ATS) ಜಂಟಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಭೇದಿಸಿದೆ. ಸುಮಾರು 3 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದ್ದು, ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯ ಪ್ರಮುಖ ವಿವರಗಳು:
ದಾಳಿಯ ದಿನಾಂಕ: ಸೆಪ್ಟೆಂಬರ್ 25
ಸ್ಥಳ: ಅರಬ್ಬಿ ಸಮುದ್ರದಲ್ಲಿ ಲಕ್ಷದ್ವೀಪದ ಪಶ್ಚಿಮ ಭಾಗ
ವಶಪಡಿಸಿಕೊಂಡ ವಸ್ತುಗಳು: 526 ಕೆಜಿ ತೂಕದ ಹೆರಾಯಿನ್ ಮತ್ತು ಮೆಥಾಂಫೆಟಮೈನ್
ಅಂದಾಜು ಮೌಲ್ಯ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3,000 ಕೋಟಿ ರೂ.
ಬಂಧಿತರು: ಶಸ್ತ್ರಾಸ್ತ್ರ ಸಜ್ಜಿತ 5 ಪಾಕಿಸ್ತಾನಿ ಪ್ರಜೆಗಳು (ಇರಾನಿ ಬೋಟ್ ಮೂಲಕ ಸಾಗಿಸುತ್ತಿದ್ದರು)

ಕಾರ್ಯಾಚರಣೆಯ ಹಿನ್ನೆಲೆ:
ಪಾಕಿಸ್ತಾನ ಕಡೆಯಿಂದ ಗುಜರಾತ್ ಮೂಲಕ ನಡೆಯುತ್ತಿದ್ದ ಡ್ರಗ್ಸ್ ಕಳ್ಳಸಾಗಣೆಯ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ದಕ್ಷಿಣ ರಾಜ್ಯಗಳ ಕಡೆಗೂ ಡ್ರಗ್ಸ್ ಸಾಗಿಸುವ ಸಂಶಯವಿತ್ತು. ಗುಜರಾತ್ ಎಟಿಎಸ್ ನೀಡಿದ ಖಚಿತ ಸೂಚನೆಯಂತೆ, ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯು ಅರಬ್ಬಿ ಸಮುದ್ರದ ಜಲಮಾರ್ಗದಲ್ಲಿ ತೀವ್ರ ಕಣ್ಗಾವಲು ವಹಿಸಿತ್ತು.
ಮೀನುಗಾರಿಕೆಯ ನೆಪದಲ್ಲಿ ಇರಾನಿ ಬೋಟ್ ಮೂಲಕ ಲಕ್ಷದ್ವೀಪಕ್ಕೆ ಡ್ರಗ್ಸ್ ತಲುಪಿಸಲು ಪಾಕಿಸ್ತಾನದ ಕಳ್ಳಸಾಗಣೆದಾರರು ನಡೆಸಿದ ಸಂಚನ್ನು ಕೋಸ್ಟ್ ಗಾರ್ಡ್ ವಿಫಲಗೊಳಿಸಿದೆ.
ಮುಂದಿನ ಕ್ರಮ:
ಬಂಧಿತ ಐವರು ಪಾಕಿಸ್ತಾನಿ ಪ್ರಜೆಗಳನ್ನು ಮತ್ತು ವಶಪಡಿಸಿಕೊಂಡ ಬೋಟನ್ನು ಮುಂಬೈಗೆ ಕರೆತರಲಾಗಿದ್ದು, ವಿವಿಧ ತನಿಖಾ ಏಜೆನ್ಸಿಗಳ ವಿಚಾರಣೆಗೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರದ ‘ನಶಾ ಮುಕ್ತ ಭಾರತ’ ಅಭಿಯಾನದ ಭಾಗವಾಗಿ ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಕೋಸ್ಟ್ ಗಾರ್ಡ್ ನಡೆಸಿರುವ ಅತ್ಯಂತ ದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ಕೋಸ್ಟ್ ಗಾರ್ಡ್ ಪಡೆಯ ಚೀಫ್ ಪಿಆರ್ಒ ಕಮಾಂಡೆಂಟ್ ಅಮಿತ್ ಉನಿಯಾಲ್ ತಿಳಿಸಿದ್ದಾರೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
