Connect with us

manglore police

ನೀಟ್ ಪರೀಕ್ಷೆ: ಮಂಗಳೂರಿನ 12 ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಣೆ, ಜೆರಾಕ್ಸ್ ಅಂಗಡಿ ಬಂದ್ ಮಾಡಲು ಆದೇಶ

Published

on

ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನಾಂಕ 21-06-2026 ರಂದು ನಡೆಯಲಿರುವ ನೀಟ್ (NEET UG-2026) ಪರೀಕ್ಷೆಯು ಸುಗಮವಾಗಿ, ನ್ಯಾಯಯುತವಾಗಿ ಮತ್ತು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮಂಗಳೂರು ನಗರದ ಒಟ್ಟು 12 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.

ಈ ಕುರಿತು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು (DCP) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀ ಕೆ. ರವಿಶಂಕರ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಮುಂಜಾಗ್ರತಾ ಕ್ರಮಗಳು ಮತ್ತು ನಿರ್ಬಂಧಗಳು:

  • ಜೆರಾಕ್ಸ್, ಕಂಪ್ಯೂಟರ್ ಅಂಗಡಿಗಳು ಬಂದ್: ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿರುವ ಎಲ್ಲಾ ಜೆರಾಕ್ಸ್ ಮತ್ತು ಕಂಪ್ಯೂಟರ್ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಗುಂಪು ಸೇರುವಿಕೆಗೆ ನಿಷೇಧ: ಪರೀಕ್ಷೆಗೆ ಸಂಬಂಧಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಸಾರ್ವಜನಿಕರು ಐದು ಅಥವಾ ಐದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತ ತಿರುಗಾಡುವುದನ್ನು ನಿಷೇಧಿಸಲಾಗಿದೆ.
  • ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧ: ಪರೀಕ್ಷಾ ಕೇಂದ್ರದ ಆವರಣದಲ್ಲಿ ಮೊಬೈಲ್ ದೂರವಾಣಿ, ಬ್ಲೂಟೂತ್, ಪೇಜರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಸಂಪರ್ಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
  • ನಕಲು ಹಾಗೂ ಅಕ್ರಮಗಳಿಗೆ ತಡೆ: ನಿಷೇಧಿತ ವಲಯದಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು/ರವಾನಿಸುವುದು ಹಾಗೂ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳಿಗಾಗಿ ಸಂಜ್ಞೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
  • ಆಯುಧಗಳ ಸಾಗಾಟ ನಿಷೇಧ: ಈ ಪ್ರದೇಶದಲ್ಲಿ ಯಾವುದೇ ರೀತಿಯ ಕ್ಷಾರಕ (ಆಸಿಡ್), ಸ್ಫೋಟಕ ವಸ್ತುಗಳು ಅಥವಾ ಇನ್ನಿತರ ಮಾರಕ ಆಯುಧಗಳನ್ನು ಕೊಂಡುಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಗಮನಿಸಿ: ಈ ನಿಷೇಧಾಜ್ಞೆಯು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ, ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕ್ ಭದ್ರತಾ ಸಿಬ್ಬಂದಿಯ ಭದ್ರತಾ ಉಪಕರಣಗಳ ಬಳಕೆಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವ 12 ಪರೀಕ್ಷಾ ಕೇಂದ್ರಗಳು:

  1. ಗೌರ್ಮೆಂಟ್ ಪಿಯು ಕಾಲೇಜ್ ಫಾರ್ ಗರ್ಲ್ಸ್, ಬಲ್ಮಠ, ಮಂಗಳೂರು
  2. ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್ ಫಾರ್ ವುಮೆನ್, ಬಲ್ಮಠ, ಮಂಗಳೂರು
  3. ಸೆಂಟ್ ಆಗ್ನೆಸ್ ಪಿಯು ಕಾಲೇಜ್, ಬೆಂದೂರ್, ಮಂಗಳೂರು
  4. ಸೆಂಟ್ ಅಲೋಶಿಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಎಲ್.ಹೆಚ್.ಹೆಚ್ ರೋಡ್, ಮಂಗಳೂರು
  5. ಡಾ. ದಯಾನಂದ ಪೈ-ಸತೀಶ್ ಪೈ ಗೌರ್ಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜ್, ರಥಬೀದಿ, ಮಂಗಳೂರು
  6. ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-A), ಕೊಡಿಯಾಲ್‌ಬೈಲ್, ಮಂಗಳೂರು
  7. ಸೆಂಟ್ ಅಲೋಶಿಯಸ್ ಪಿಯು ಕಾಲೇಜ್ (ಬ್ಲಾಕ್-B), ಕೊಡಿಯಾಲ್‌ಬೈಲ್, ಮಂಗಳೂರು
  8. ವಿದ್ಯಾಡಾಯಿನಿ ಹೈಸ್ಕೂಲ್, ಸುರತ್ಕಲ್
  9. ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-2, ಎಕ್ಕೂರು, ಮಂಗಳೂರು
  10. ಯೂನಿವರ್ಸಿಟಿ ಕಾಲೇಜ್, ಯು.ಪಿ. ಮಲ್ಯ ರೋಡ್, ಹಂಪನಕಟ್ಟೆ, ಮಂಗಳೂರು
  11. ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ನಂ-1, ಪಣಂಬೂರು, ಮಂಗಳೂರು
  12. ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ, ಮುಡಿಪು, ಕುರ್ನಾಡು, ದಕ್ಷಿಣ ಕನ್ನಡ

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಆಯಾ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ!

Published

on


​ಮಂಗಳೂರು: ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಜ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
​ಕಾರ್ಯಾಚರಣೆಯ ವಿವರ:
​ಬಜ್ಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ದೂರುದಾರರಿಗೆ ಬಿಡುಗಡೆ ಮಾಡಲು ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ಒಟ್ಟು ₹25,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
​ಈ ಪೈಕಿ ಈಗಾಗಲೇ ₹15,000 ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದ ಇನ್ಸ್‌ಪೆಕ್ಟರ್, ಬಳಿಕ ಹೆಚ್ಚುವರಿಯಾಗಿ ಮತ್ತೊಮ್ಮೆ ₹5,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಬೇಸತ್ತ ಫಿರ್ಯಾದುದಾರರು ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.
​ದೂರಿನ ಅನ್ವಯ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.


​ಹಿನ್ನೆಲೆ ಮತ್ತು ಹಳೆಯ ಆರೋಪಗಳು:
​ಈ ಹಿಂದೆ ಉಳ್ಳಾಲ ಠಾಣೆಯಲ್ಲಿದ್ದಾಗಲೂ ಬಾಲಕೃಷ್ಣ ಅವರ ಮೇಲೆ ಭ್ರಷ್ಟಾಚಾರದ ಸಾಲು ಸಾಲು ಆರೋಪಗಳು ಕೇಳಿಬಂದಿದ್ದವು:
​ಕಳ್ಳತನ ಪ್ರಕರಣದಲ್ಲಿ ಲಂಚ: ಉಳ್ಳಾಲದ ಮನೆಯೊಂದರಲ್ಲಿ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಪ್ರಕರಣದಲ್ಲಿ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಳ್ಳುವಾಗಲೂ ಲಂಚ ಪಡೆದ ಆರೋಪವಿತ್ತು.

​ ಪ್ರಕರಣ ಮುಚ್ಚಿಹಾಕಲು ದಂಧೆ:
ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿಯಿಂದ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ರೂಪಾಯಿ ಪೀಕಿಸಿದ್ದಲ್ಲದೆ, ಮಗನ ಚಿನ್ನಾಭರಣ ಎಗರಿಸಿದ ಆರೋಪ ಕೇಳಿಬಂದಿತ್ತು. ಈ ಕುರಿತು ಅಂದಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾಗ, ಇಲಾಖಾ ವಿಚಾರಣೆ ವೇಳೆ ದೂರುದಾರ ಮಹಿಳೆಗೆ ₹4.5 ಲಕ್ಷ ರೂಪಾಯಿ ನೀಡಿ ಕೇಸ್ ಹಿಂಪಡೆಯುವಂತೆ ಮಾಡಿದ್ದರೆನ್ನಲಾಗಿದೆ.


​ವರ್ಗಾವಣೆ ನಾಟಕ: ಉಳ್ಳಾಲದ ಮರಳು ದಂಧೆಕೋರರ ಸಾಲಿಗೆ ಸಿಲುಕಿ ವರ್ಗಾವಣೆಯಾಗಿದ್ದ ಇವರು, ಬಳಿಕ ಪಾಂಡೇಶ್ವರ ಮಹಿಳಾ ಠಾಣೆಗೆ ಸೇರಿ, ಪ್ರಸ್ತುತ ಬಜ್ಜೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮುಖ್ಯಮಂತ್ರಿ ಪದಕದ ವಿವಾದ.! ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇತರೆ ತಂಡಗಳು ಶ್ರಮವಹಿಸಿ ಆರೋಪಿಗಳನ್ನು ಬಂಧಿಸಿದ್ದರೂ, ಅದರ ನೆಪದಲ್ಲಿ ಅಂದಿನ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ಹೆಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Continue Reading

AWARNESS

ಮಂಗಳೂರು: ಸಚಿವ ಸಂಪುಟ ಸಭೆ ಹಿನ್ನೆಲೆ – ನಗರದಲ್ಲಿ ಸಂಚಾರ ವ್ಯತ್ಯಯ; ಪ್ರಮುಖ ರಸ್ತೆಗಳಲ್ಲಿ ಬದಲಿ ಮಾರ್ಗ ವ್ಯವಸ್ಥೆ

Published

on

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯು ಸೆಪ್ಟೆಂಬರ್ 18, 2026 ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ (ಪ್ರಜಾಸೌಧ)ಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರು ಮಂಗಳೂರಿಗೆ ಆಗಮಿಸುತ್ತಿದ್ದು, ಗಣ್ಯರ ಭದ್ರತೆ ಮತ್ತು ನಗರದ ಸುಗಮ ಸಂಚಾರದ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯು ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಹಾಗೂ ನಿಷೇಧವನ್ನು ಜಾರಿಗೊಳಿಸಿದೆ.

ಯಾವ ದಿನ ಯಾವ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ?

ಸೆಪ್ಟೆಂಬರ್ 17 (ಸಂಜೆ) ಮತ್ತು ಸೆಪ್ಟೆಂಬರ್ 19 (ಬೆಳಿಗ್ಗೆ): ಬಜಪೆ ವಿಮಾನ ನಿಲ್ದಾಣದಿಂದ ಕಾವೂರು, ಬೋಂದೆಲ್, ಮೇರಿಹಿಲ್, ಕೆ.ಪಿ.ಟಿ., ಕದ್ರಿ ಕಂಬಳ, ಬಂಟ್ಸ್ಹಾಸ್ಟೆಲ್, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಹಂಪನಕಟ್ಟೆ, ಕ್ಲಾಕ್ ಟವರ್ ಮೂಲಕ ಹ್ಯಾಮಿಲ್ಟನ್ ಜಂಕ್ಷನ್‌ವರೆಗೆ ಗಣ್ಯರ ಸಂಚಾರವಿರುವುದರಿಂದ ಈ ಮಾರ್ಗದಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕು.

ಸೆಪ್ಟೆಂಬರ್ 18 (ಬೆಳಿಗ್ಗೆ): ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಆರಂಭವಾಗಿ ಕ್ಲಾಕ್ ಟವರ್, ಹಂಪನಕಟ್ಟೆ, ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್, ಕೆ.ಪಿ.ಟಿ., ನಂತೂರು ವೃತ್ತ, ಪಂಪುವೆಲ್, ನಾಗುರಿ, ಬಜಾಲ್ ಕ್ರಾಸ್ (ಪ್ರಜಾಸೌಧ) ಮೂಲಕ ಪಡೀಲ್ ಜಂಕ್ಷನ್‌ವರೆಗೆ ಗಣ್ಯರ ಓಡಾಟವಿರುತ್ತದೆ.

ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳು:

ಬದ್ರಿಯಾ ಜಂಕ್ಷನ್ – ಹ್ಯಾಮಿಲ್ಟನ್ ಜಂಕ್ಷನ್: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದ್ರಿಯಾ ಜಂಕ್ಷನ್ – ನಿಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಹಾಗೂ ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.

ಪಂಪುವೆಲ್ – ಪಡೀಲ್: ಪಂಪುವೆಲ್‌ನಿಂದ ಪಡೀಲ್‌ಗೆ ತೆರಳುವವರು ನಂತೂರು ವೃತ್ತ – ಕೈಕಂಬ – ಮರೋಳಿ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮಾರ್ಗವನ್ನು ಬಳಸಬಹುದು.

ಬಜಾಲ್ ಕ್ರಾಸ್ ಮತ್ತು ಕಂಕನಾಡಿ: ಪ್ರಜಾಸೌಧದ ಬಳಿಯ ಬಜಾಲ್ ಕ್ರಾಸ್ ಮುಚ್ಚಿರುವ ಕಾರಣ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಜಪ್ಪಿನಮೊಗರು ದ್ವಾರ – ಬಜಾಲ್ ಮಾರ್ಗವಾಗಿ ಸಂಚರಿಸಬೇಕು.

ತೊಕ್ಕೊಟ್ಟು ಕಡೆಯಿಂದ: ತೊಕ್ಕೊಟ್ಟಿನಿಂದ ಬರುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರ ಪ್ರವೇಶಿಸಬೇಕು.

ವಿಶೇಷ ಸೂಚನೆಗಳು:

  • ಗಣ್ಯರ ಸಂಚಾರವಿರುವ ರಸ್ತೆಗಳ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶವಿಲ್ಲ.
  • ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
  • ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ನಿಗದಿತ ಪರ್ಯಾಯ ಮಾರ್ಗಗಳನ್ನು ಬಳಸಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Continue Reading

cyber crime

ಮಂಗಳೂರು: ಇನ್‌ಸ್ಟಾಗ್ರಾಮ್ ಸ್ನೇಹ ಬಲೆಗೆ ಬಿದ್ದ 19ರ ಯುವಕನಿಗೆ ಮಾರ್ಫ್ ಫೋಟೋ ತೋರಿಸಿ 5.24 ಲಕ್ಷ ರೂ. ಸುಲಿಗೆ!

Published

on

ಮಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿ, ಯುವಕನ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ (Morph) ಮಾಡಿ ಬ್ಲ್ಯಾಕ್‌ಮೇಲ್ ಮಾಡಿ ಒಟ್ಟು 5.24 ಲಕ್ಷ ರೂ. ಗೂ ಅಧಿಕ ಹಣವನ್ನು ಸೈಬರ್ ವಂಚಕರು ಸುಲಿಗೆ ಮಾಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

19 ವರ್ಷದ ಪಿಯು ವಿದ್ಯಾರ್ಥಿಯೊಬ್ಬರು ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಾಗ ‘ಜಮ್‌ಶೇದ್’ ಎಂಬ ಹೆಸರಿನ ಖಾತೆಯಿಂದ ವ್ಯಕ್ತಿಯೊಬ್ಬ ಕಮೆಂಟ್ ಮೂಲಕ ಪರಿಚಯವಾಗಿದ್ದಾನೆ. ಬಳಿಕ ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ನಂಬರ್ ಪಡೆದುಕೊಂಡಿದ್ದಾನೆ.

ಜೂನ್ 19, 2026ರಂದು ವಾಟ್ಸಾಪ್ ಚಾಟ್ ಆರಂಭವಾದಾಗ, ಆರೋಪಿಯು ಮೊದಲು 300 ರೂ. ಹಣ ನೀಡುವಂತೆ ಕೇಳಿದ್ದಾನೆ. ಯುವಕ ನಿರಾಕರಿಸಿದರೂ, ಆರೋಪಿ ಪದೇ ಪದೇ ಫೋನ್ ಮಾಡಿ ಗೋಗರೆದಿದ್ದರಿಂದ ಆತ ಕಳುಹಿಸಿದ ಕ್ಯೂಆರ್ ಕೋಡ್‌ಗೆ 300 ರೂ. ಫೋನ್‌ಪೇ ಮಾಡಲಾಗಿದೆ.

ಬ್ಲ್ಯಾಕ್‌ಮೇಲ್ ಮತ್ತು ಹಣ ಸುಲಿಗೆ:

300 ರೂ. ಪಡೆದ ಬಳಿಕ ಆರೋಪಿಯ ಬೇಡಿಕೆ ಹೆಚ್ಚಾಗಿದ್ದು, ವಿವಿಧ ವಾಟ್ಸಾಪ್ ನಂಬರ್‌ಗಳಿಂದ ನಿರಂತರವಾಗಿ ಹಣಕ್ಕಾಗಿ ಪೀಡಿಸಲು ಶುರು ಮಾಡಿದ್ದಾನೆ. ಯುವಕ ಹಣ ನೀಡಲು ಒಪ್ಪದಿದ್ದಾಗ, ಆತನ ಮುಖದ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಮಾರ್ಫ್ ಮಾಡಿ ಯುವಕನಿಗೆ ಕಳುಹಿಸಿ ಬೆದರಿಕೆ ಹಾಕಲಾಗಿದೆ.

“ಹೇಳಿದಷ್ಟು ಹಣ ನೀಡದಿದ್ದರೆ ಈ ಅಶ್ಲೀಲ ಫೋಟೋಗಳನ್ನು ನಿನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗೆ ಕಳುಹಿಸಿ ಸಮಾಜದಲ್ಲಿ ಮಾನ ಹರಾಜು ಹಾಕುತ್ತೇನೆ” ಎಂದು ವಂಚಕರು ಬೆದರಿಸಿದ್ದಾರೆ.

ಮಾನಹಾನಿಗೆ ಹೆದರಿ ಕಂಗೆಟ್ಟ ವಿದ್ಯಾರ್ಥಿ, ಜೂನ್ 19 ರಿಂದ ಜುಲೈ 23, 2026ರವರೆಗೆ ವಂಚಕರು ಸೂಚಿಸಿದ ವಿವಿಧ ಕ್ಯೂಆರ್ ಕೋಡ್‌ಗಳಿಗೆ ತನ್ನ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,24,712 ರೂ. ಹಣವನ್ನು ವರ್ಗಾಯಿಸಿದ್ದಾನೆ. ಇಷ್ಟೆಲ್ಲಾ ಹಣ ನೀಡಿದರೂ ವಂಚಕರ ಬ್ಲ್ಯಾಕ್‌ಮೇಲ್ ನಿಲ್ಲದ ಕಾರಣ, ಅಂತಿಮವಾಗಿ ಯುವಕ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

Trending

Copyright © 2025 Deevatige