Connect with us

Bantawala

ಬಂಟ್ವಾಳದಲ್ಲಿ ಸಿಡಿಲ ಅಬ್ಬರ: ಕೇವಲ 25 ನಿಮಿಷಗಳ ಅಂತರದಲ್ಲಿ ಎರಡು ಪ್ರಸಿದ್ಧ ದೇವಸ್ಥಾನಗಳಿಗೆ ಸಿಡಿಲು ಬಡಿತ; ಕೋಟ್ಯಂತರ ರೂ. ಹಾನಿ!

Published

on

ಬಂಟ್ವಾಳ: ತಾಲೂಕಿನಲ್ಲಿ ಇಂದು (ಮೇ 16) ಸಂಜೆ ಸುರಿದ ಭಾರೀ ಗಾಳಿ-ಮಳೆಯ ಜೊತೆಗಿನ ಸಿಡಿಲಿನ ಆರ್ಭಟಕ್ಕೆ ಕೇವಲ 25 ನಿಮಿಷಗಳ ಅಂತರದಲ್ಲಿ ಎರಡು ಪ್ರಸಿದ್ಧ ದೇವಸ್ಥಾನಗಳು ತುತ್ತಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಮಣಿನಾಲ್ಕೂರಿನ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರ ಛಿದ್ರಗೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದ್ದರೆ, ಇತ್ತ ಇತಿಹಾಸ ಪ್ರಸಿದ್ದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೂ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆ 1: ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಗರ್ಭಗುಡಿ ಪ್ರಾಕಾರ ಛಿದ್ರ – 1 ಕೋಟಿ ರೂ.ಗೂ ಅಧಿಕ ನಷ್ಟ!

ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಎಂಬಲ್ಲಿ ಇಂದು ಸಂಜೆ ಸುಮಾರು 4.30 ರ ವೇಳೆಗೆ ಸುರಿದ ಭಾರೀ ಗಾಳಿ-ಮಳೆಗೆ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ನೇರವಾಗಿ ಸಿಡಿಲು ಬಡಿದಿದೆ.

ಸಿಡಿಲಿನ ತೀವ್ರತೆಗೆ ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದ ಶಿಲಾ ಕಂಬಗಳು ಮತ್ತು ಮೇಲ್ಛಾವಣಿಯ ಕಲ್ಲುಗಳು ಸಂಪೂರ್ಣವಾಗಿ ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಕಲ್ಲಿನ ಕಂಬಗಳು ಬಿರುಕು ಬಿಟ್ಟು ಕುಸಿದಿದ್ದು, ಮೇಲ್ಛಾವಣಿಯ ಮರದ ತೊಲೆಗಳು ಹೊರಗಾಣಿಸುವಂತೆ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 1 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.

ವಿಶೇಷವೆಂದರೆ, ಕಳೆದ 4 ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ ಮತ್ತೆ ಗರ್ಭಗುಡಿಗೆ ಅಪಾರ ಹಾನಿಯಾಗಿದ್ದು, ಪುನರ್ ನವೀಕರಣಕ್ಕೆ ಭಾರಿ ಮೊತ್ತದ ವೆಚ್ಚ ತಗಲಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಘಟನೆ 2: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿತ; ತಪ್ಪಿದ ಭಾರಿ ಅನಾಹುತ!

ಇದೇ ತಾಲೂಕಿನ ಕಾವಳ ಮೂಡೂರು ಗ್ರಾಮದ ಪುಣ್ಯಕ್ಷೇತ್ರ, ಬೃಹತ್ ಬಂಡೆಯ ಮೇಲೆ ನೆಲೆಸಿರುವ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಇಂದು ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿದೆ.

ಸಂಜೆ ವೇಳೆ ಸುರಿದ ಗಾಳಿ-ಮಳೆಯ ನಡುವೆ ಭೀಕರ ಸಿಡಿಲಿನ ಅಬ್ಬರ ಕೇಳಿಬಂದಿದ್ದು, ಅದು ದೇವಸ್ಥಾನಕ್ಕೆ ಅಪ್ಪಳಿಸಿದೆ. ಘಟನೆಯ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾನಿಯ ನಿಖರ ವಿವರಗಳ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪರಿಶೀಲನೆ ನಡೆಸುತ್ತಿದೆ.


ಭಕ್ತಾದಿಗಳಲ್ಲಿ ಆತಂಕ: ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು

ಕೇವಲ 25 ನಿಮಿಷಗಳ ಅಂತರದಲ್ಲಿ ಬಂಟ್ವಾಳ ತಾಲೂಕಿನ ಇವೆರಡೂ ಪ್ರಮುಖ ದೇವಸ್ಥಾನಗಳಿಗೆ ಸಿಡಿಲು ಬಡಿದಿರುವುದು ಭಕ್ತಾದಿಗಳಲ್ಲಿ ಮತ್ತು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾನಿಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಪಾರ ಸಂಖ್ಯೆಯ ಭಕ್ತರು ಹಾಗೂ ಗ್ರಾಮಸ್ಥರು ದೌಡಾಯಿಸುತ್ತಿದ್ದಾರೆ. ಇಳಿಯೂರು ದೇವಸ್ಥಾನದ ಆಡಳಿತ ಮಂಡಳಿಯು ಮುಂದಿನ ಪುನರ್ನಿರ್ಮಾಣ ಹಾಗೂ ಧಾರ್ಮಿಕ ಕ್ರಮಗಳ ಕುರಿತು ತುರ್ತು ಚರ್ಚೆ ಆರಂಭಿಸಿದೆ.
ಸಿಡಿಲಿನ ತೀವ್ರ ಬಡಿತಕ್ಕೆ ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದ ಶಿಲಾ ಕಂಬಗಳು ಮತ್ತು ಮೇಲ್ಛಾವಣಿಯ ಕಲ್ಲುಗಳು ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಚಿತ್ರದಲ್ಲಿ ಕಾಣುವಂತೆ, ಕಲ್ಲಿನ ಕಂಬಗಳು ಬಿರುಕು ಬಿಟ್ಟು ಕುಸಿದಿದ್ದು, ಮೇಲ್ಛಾವಣಿಯ ಮರದ ತೊಲೆಗಳು ಕಾಣಿಸುತ್ತಿವೆ. ಸುಮಾರು 1 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ಅಪಾರ ಹಾನಿಯಿಂದ ಭಕ್ತಾದಿಗಳಲ್ಲಿ ಆತಂಕ ಮನೆಮಾಡಿದ್ದು, ದೇವಸ್ಥಾನ ಆಡಳಿತ ಮಂಡಳಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುತ್ತಿದೆ




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪಣೋಳಿಬೈಲು ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಅಗೇಲು ಸೇವೆ ಸಮರ್ಪಣೆ!

Published

on

ಬಂಟ್ವಾಳ: ತುಳುನಾಡಿನ ಇತಿಹಾಸ ಪ್ರಸಿದ್ಧ, ಪರಮ ಕಾರಣೀಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಪಣೋಳಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಗರಿಷ್ಠ ಪ್ರಮಾಣದ ಅಗೇಲು ಸೇವೆ ನಡೆದಿದೆ. ಅಂದು ಒಂದೇ ದಿನ ಭಕ್ತರಿಂದ ಬರೋಬ್ಬರಿ 4,180 ಅಗೇಲು ಸೇವೆಗಳು ಸಂದಾಯವಾಗುವ ಮೂಲಕ ಕ್ಷೇತ್ರದ ಕಾರಣೀಕ ಶಕ್ತಿಗೆ ಸಾಕ್ಷಿಯಾಯಿತು .

ಇಷ್ಟೊಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಏಕದಿನದಲ್ಲಿ ಅಗೇಲು ಸೇವೆ ಸಲ್ಲಿಸುತ್ತಿರುವುದು ಕಲ್ಲುರ್ಟಿ ದೈವದ ಮೇಲಿನ ಅವರ ಅಚಲ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಇದು ಈ ವರ್ಷದಲ್ಲಿ ಸಂದಾಯವಾದ ಅತ್ಯಂತ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ.

ಶೈಕ್ಷಣಿಕ ವರ್ಷದ ಆರಂಭ: ಪ್ರಾರ್ಥನೆ ಸಲ್ಲಿಸಿದ ಭಕ್ತರ ದಂಡು

ಪ್ರಸ್ತುತ ಶಾಲಾ-ಕಾಲೇಜುಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುರ್ಟಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಭಕ್ತರು ಮುಗಿಬಿದ್ದಿದ್ದರು. ಮಕ್ಕಳ ಉತ್ತಮ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಸಂಸ್ಥೆಗಳ ಆಯ್ಕೆ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಹಾಗೂ ವಿದೇಶಕ್ಕೆ ತೆರಳುವ ಭಕ್ತರ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರಾವಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಸನ್ನಿಧಿಗೆ ಭೇಟಿ ನೀಡಿ ಅಗೇಲು ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಶಾಲಾ-ಕಾಲೇಜು ರಜೆ ಅಥವಾ ವಿಶೇಷ ಹಬ್ಬಗಳ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸುವುದು ಕ್ಷೇತ್ರದ ವಿಶೇಷತೆಯಾಗಿದೆ.

ನಿರಂತರವಾಗಿ ಸಾಗಿದ ಪ್ರಸಾದ ವಿತರಣೆ

ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1:30ರ ಬಳಿಕ ಅಗೇಲು ಸೇವೆಯ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ಆದರೆ ಭಾನುವಾರ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಸೇವೆಗಳು ಇದ್ದ ಕಾರಣ ಪ್ರಕ್ರಿಯೆ ಸ್ವಲ್ಪ ತಡವಾಗಿ ಆರಂಭಗೊಂಡು, ಸಂಜೆಯ ನಂತರವೂ ನಿರಂತರವಾಗಿ ಸಾಗಿತು. ಕ್ಷೇತ್ರಕ್ಕೆ ಹರಿದುಬಂದಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೈವದ ಪ್ರಸಾದ ಸ್ವೀಕರಿಸಿದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹಾಗೂ ಸೇವೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ ವರ್ಷ ಜೂನ್ 22ರಂದು ಆ ವರ್ಷದ ಗರಿಷ್ಠ ಅಂದರೆ 3,871 ಅಗೇಲು ಸೇವೆಗಳು ಸಂದಾಯವಾಗಿದ್ದವು.

ಅದಕ್ಕೂ ಮುನ್ನ, 2024ರ ಜೂನ್ 2ರಂದು 3,908 ಅಗೇಲು ಸೇವೆಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಾರಿ ಭಾನುವಾರ 4,180 ಸೇವೆಗಳು ಸಲ್ಲಿಕೆಯಾಗಿದೆ.

ಪಣೋಳಿಬೈಲು ಕ್ಷೇತ್ರದ ಪ್ರಮುಖ ವಿಶೇಷತೆಗಳು:

  • ಸಜೀಪ ಮೂಡದ ಪುಣ್ಯಕ್ಷೇತ್ರ: ಈ ಪ್ರಸಿದ್ಧ ಕಾರಣೀಕ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಂದರ ಪರಿಸರದಲ್ಲಿದೆ.
  • ವಿಶೇಷ ಸೇವೆಗಳ ದಿನ: ಈ ದೈವಸ್ಥಾನದಲ್ಲಿ ವಾರದ ಮೂರು ದಿನಗಳು ಅಂದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾತ್ರ ವಿಶೇಷ ಅಗೇಲು ಸೇವೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಕೋಲ ಸೇವೆ ಜರುಗುತ್ತದೆ.
  • ಭಾವೈಕ್ಯತೆಯ ಸನ್ನಿಧಿ: ಪಣೋಳಿಬೈಲು ಕ್ಷೇತ್ರವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲಾ ಧರ್ಮದವರೂ ಮುಕ್ತವಾಗಿ ಬಂದು ದೈವಕ್ಕೆ ಹರಕೆ ಸಲ್ಲಿಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳುವ ಅಪೂರ್ವ ಭಾವೈಕ್ಯತೆಯ ಕೇಂದ್ರವಾಗಿದೆ.
Continue Reading

accident

ಪೆರುವಾಯಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದ ಕೋಳಿ ಸಾಗಾಟದ ಪಿಕಪ್; ಚಾಲಕ ಅದೃಷ್ಟವಶಾತ್ ಪಾರು!

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಪೆರುವಾಯಿ ಗ್ರಾಮದ ಮುಖ್ಯ ಸೇತುವೆ ಬಳಿ ಶುಕ್ರವಾರ ಮುಂಜಾನೆ ಭೀಕರ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಪಲ್ಟಿ ಹೊಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಂಜಾನೆ ಸಂಭವಿಸಿದ ಅವಘಡ:

ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು ಪೆರುವಾಯಿ ಸೇತುವೆ ತಲುಪುತ್ತಿದ್ದಂತೆ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ನಿಯಂತ್ರಣ ಕಳೆದುಕೊಂಡು ನೇರವಾಗಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಸ್ಥಳೀಯರು ತಕ್ಷಣ ಧಾವಿಸಿ ಚಾಲಕನನ್ನು ರಕ್ಷಿಸಿದ್ದಾರೆ.

ಕಿರಿದಾದ ಸೇತುವೆ, ಪಕ್ಕದಲ್ಲೇ ಟ್ರಾನ್ಸ್‌ಫಾರ್ಮರ್: ಹೆಚ್ಚಿದ ಅಪಘಾತಗಳ ಭೀತಿ

ಪೆರುವಾಯಿ ಸೇತುವೆಯು ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಜೋಡಿಸುವ ಅಂತರರಾಜ್ಯ ಗಡಿಭಾಗದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಕೇರಳದ ಬೆರಿಪದವು, ಉಪ್ಪಳ ಮುಂತಾದ ಭಾಗಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ.

ಆದರೆ, ಈ ಸೇತುವೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಇದರ ಜೊತೆಗೆ ಸೇತುವೆಯ ತೀರಾ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಇದು ಅಪಘಾತಗಳಿಗೆ ನೇರ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ತಿರುವಿನಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಕ್ರಮ ಕೆಂಪುಕಲ್ಲು ಸಾಗಾಟದ ಹಾವಳಿ:

ಕೇರಳ ಕಡೆಯಿಂದ ಪ್ರತಿನಿತ್ಯ ಈ ಮಾರ್ಗವಾಗಿ ಕೆಂಪುಕಲ್ಲಿನ ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದು ಕೂಡ ಇಲ್ಲಿನ ಸರಣಿ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದು ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮಸ್ಥರ ಆಕ್ರೋಶ – ಅಭಿವೃದ್ಧಿಗೆ ಬಿಗಿ ಪಟ್ಟು:

“ಇದು ಅಂತರರಾಜ್ಯ ಸಂಪರ್ಕದ ಪ್ರಮುಖ ರಸ್ತೆಯಾಗಿದ್ದರೂ, ಯಾವುದೇ ಸರ್ಕಾರಗಳು ಈ ಸೇತುವೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿಲ್ಲ. ಸೇತುವೆಯನ್ನು ಅಗಲಗೊಳಿಸದೆ, ಅಪಾಯಕಾರಿ ತಿರುವನ್ನು ಸರಿಪಡಿಸದೆ ಮತ್ತು ಇಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸದ ಹೊರತು ಈ ಭಾಗದಲ್ಲಿ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಪೆರುವಾಯಿ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ (PWD) ಎಚ್ಚೆತ್ತುಕೊಂಡು, ತಕ್ಷಣವೇ ಮಧ್ಯಪ್ರವೇಶಿಸಿ ಸೇತುವೆಯನ್ನು ವಿಸ್ತರಿಸಬೇಕು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆಗಳನ್ನು (Crash Barriers) ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.




Continue Reading

Bantawala

ಪಂಚಾಯತ್ ರಾಜ್ ಬಲಪಡಿಸಿದ್ದು ಕಾಂಗ್ರೆಸ್; ದುರ್ಬಲಗೊಳಿಸಲು ಬಿಜೆಪಿ ಯತ್ನ: ಮಾಜಿ ಸಚಿವ ರಮಾನಾಥ ರೈ

Published

on

ಬಂಟ್ವಾಳ: ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಂಡಿಸಿದ್ದ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಗೆ ಬಿಜೆಪಿ ಅಡ್ಡಿಪಡಿಸಿತ್ತು. ಬಳಿಕ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಜನರಿಗೆ ಅಧಿಕಾರ ಹಂಚಿಕೆಯಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ದುರ್ಬಲ ವರ್ಗಗಳ ಸಬಲೀಕರಣಕ್ಕೆ ನೆರವಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಸುಳ್ಳು ಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಬಂಟ್ವಾಳ ಕ್ಷೇತ್ರದಲ್ಲಿಯೇ ಸುಮಾರು 5,000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಕರರಾಗಿ ಮಾತನಾಡಿದ ಸುಧೀರ್ ಕುಮಾರ್ ಮರೋಳಿ, ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೀಟ್ ಪರೀಕ್ಷೆಯ ನಿರ್ವಹಣೆ ಕುರಿತು ಉದ್ಭವಿಸಿರುವ ಪ್ರಶ್ನೆಗಳು ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ತಾಂತ್ರಿಕ ಲೋಪಗಳಿಂದ ಅರ್ಹ ಮತದಾರರ ಹೆಸರುಗಳು ಕೈಬಿಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿ ಶೃಂಗೇರಿಯ ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆಯಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಗೇರು ನಿಗಮದ ಅದ್ಯಕ್ಷರಾದ ಮಮತಾ ಎಸ್. ಗಟ್ಟಿ, ಪ್ರವಾಸೋದ್ಯಮ ನಿಗಮದ ಅದ್ಯಕ್ಷೆ ಶಾಲೆಟ್ ಪಿಂಟೋ,ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತಾಡಿದರು.

ಈ ಸಂಧರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬಿ. ಪದ್ಮಶೇಖರ್ ಜೈನ್, ಪಿ.ಪಿ. ವರ್ಗೀಸ್, ಶಾಹುಲ್ ಹಮೀದ್, ಸರ್ವೋತ್ತಮ ಗೌಡ ನೆಲ್ಯಾಡಿ, ದಿನೇಶ್ ಮೂಳೂರು, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಅರುಣ್ ಕುಮಾರ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ರಾಧಾಕೃಷ್ಣ ಬೊಲ್ಲೂರು, ಅಭಿಲಾಷ್ ಪಿ.ಕೆ., ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ, ಕುಮಾರಿ ಅಪ್ಪಿ, ಉಷಾ ಅಂಚನ್, ಜಯಂತಿ ಪೂಜಾರಿ, ಸುಧೀರ್ ಕುಮಾರ್ ಶೆಟ್ಟಿ, ಐಡಾ ಸುರೇಶ್, ಶೈಲಜಾ ರಾಜೇಶ್ ಹಾಗೂ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಜಗದೀಶ್ ಕೊಯಿಲ ಸ್ವಾಗತಿಸಿದರು. ಕುಳಾಲು ಸುಭಾಷ್ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೃಂದಾ ಪೂಜಾರಿ ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.




Continue Reading

Trending

Copyright © 2025 Deevatige

error: Content is protected !!