Bantawala
ಸಹಕಾರಿ ಸಂಘದ ದಲಿತ ಮಹಿಳಾ ಉದ್ಯೋಗಿಗೆ ಮುಂದುವರಿದ ಕಿರುಕುಳ ಆರೋಪ; ಜಿಲ್ಲಾಧಿಕಾರಿಗೆ ದೂರು; ಹೋರಾಟಕ್ಕೆ ಸಜ್ಜಾಗಲು ಬೆದ್ರಕಾಡು ಕರೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದಲಿತ ಸಮುದಾಯದ ಮಹಿಳಾ ಉದ್ಯೋಗಿಯೊಬ್ಬರಿಗೆ ಆಡಳಿತ ಮಂಡಳಿಯಿಂದ ನಿರಂತರ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ಈ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಒತ್ತಾಯಿಸಿದೆ.

ಘಟನೆಯ ಹಿನ್ನೆಲೆ ಮತ್ತು ದೂರಿನ ವಿವರ:
ನೇರಳಕಟ್ಟೆ ನಿವಾಸಿಯಾಗಿರುವ ಶ್ರೀಮತಿ ಸೇಸಮ್ಮ ಅವರು ಕಳೆದ 24 ವರ್ಷಗಳಿಂದ ಈ ಸಂಘದ ಮಾಣಿ ಶಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಕಾರ್ಯ ನಿರ್ವಾಹಣಾಧಿಕಾರಿ ಯಶೋಧಾ ಹಾಗೂ ಆಡಳಿತ ಮಂಡಳಿಯವರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿದ್ದು, ಆರೋಪಿಗಳು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನಲಾಗಿದೆ.

ವರ್ಗಾವಣೆಯಲ್ಲೂ ಮುಂದುವರಿದ ಕಿರುಕುಳ:
ದಲಿತ ಸಂಘಟನೆಗಳ ಪ್ರತಿಭಟನೆಯ ನಂತರ ಸೇಸಮ್ಮ ಅವರನ್ನು ಕೆಲಸಕ್ಕೆ ಮರುಸೇರ್ಪಡೆಗೊಳಿಸಿ ಅನಂತಾಡಿ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅಲ್ಲಿಯೂ ಅವರಿಗೆ ಕೆಲಸ ನಿರ್ವಹಿಸಲು ಅಗತ್ಯವಿರುವ ಕಂಪ್ಯೂಟರ್ ಪಾಸ್ವರ್ಡ್ ನೀಡದೆ ಸತಾಯಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಅವರ ಸೇವೆಯಲ್ಲಿ ತಪ್ಪು ಹುಡುಕುವ ಮತ್ತು ಅವರು ಕೆಲಸ ಬಿಟ್ಟು ಹೋಗುವಂತಹ ವಾತಾವರಣ ನಿರ್ಮಿಸುವ ಹಿತಾಸಕ್ತಿಯಿಂದ ಇಂತಹ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ದಿನೇಶ್ ಮೂಳೂರು ಆರೋಪಿಸಿದ್ದಾರೆ. ಈ ವಿಚಾರವಾಗಿ ಸಹಕಾರಿ ಸಂಘಗಳ ಉಪ ನಿಬಂಧಕರು (DRCS) ಮತ್ತು ಸಹಾಯಕ ನಿಬಂಧಕರು (ARCS) ಅವರಿಗೂ ದೂರು ನೀಡಲಾಗಿದೆ.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಬಿ.ಕೆ. ಸೇಸಪ್ಪ ಬೆದ್ರಕಾಡು ಆಕ್ರೋಶ:
ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನ್ಯಾಯ ಸಿಗದ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಾವು ಸಿಡಿದೇಳಬೇಕಿದೆ. ಸಂಘದ ಆಡಳಿತ ಮಂಡಳಿಯಲ್ಲಿ ದಲಿತ ಸಮುದಾಯದ ಸದಸ್ಯರಿದ್ದರೂ ಸ್ವಜಾತಿಯ ಮಹಿಳೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೌನ ವಹಿಸಿರುವುದು ದುರದೃಷ್ಟಕರ” ಎಂದು ಅವರು ಕಿಡಿಕಾರಿದ್ದಾರೆ.

ಇಲಾಖೆಗಳ ವೈಫಲ್ಯಕ್ಕೆ ಆಕ್ರೋಶ – ಹೋರಾಟದ ಕರೆ:
ದಲಿತರ ರಕ್ಷಣೆಗಾಗಿ ಇರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (CRE Cell) ಒಬ್ಬ ಮಹಿಳೆಗೆ ನ್ಯಾಯ ಒದಗಿಸಲು ವಿಫಲವಾಗಿದೆ ಎಂದು ದೂರಿದ ಸೇಸಪ್ಪ ಅವರು, ಇಂತಹ ನಿರ್ಲಕ್ಷ್ಯ ವಹಿಸುವ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ನ್ಯಾಯವನ್ನು ನಾವೇ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸೇಸಮ್ಮ ಅವರಿಗೆ ನ್ಯಾಯ ಒದಗಿಸಲು ಜಿಲ್ಲೆಯ ಎಲ್ಲಾ ಸ್ವಾಭಿಮಾನಿ ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಒಟ್ಟಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಬೇಕಿದೆ” ಎಂದು ಅವರು ಕರೆ ನೀಡಿದ್ದಾರೆ.
ಈ ಪ್ರಕರಣವು ಇದೀಗ ಜಿಲ್ಲಾಧಿಕಾರಿಗಳ ಅಂಗಳದಲ್ಲಿದ್ದು, ಸಂಘದ ಆಡಳಿತ ಮಂಡಳಿಯ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Bantawala
75 ವರ್ಷಗಳ ರಸ್ತೆ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು – ಉಕ್ಕುಡ ಕಲ್ಲಜರಿಯಲ್ಲಿ ಅಕ್ರಮ ಗೇಟ್ ತೆರವು.
ವಿಟ್ಲ : ಕಸಬಾ ಗ್ರಾಮದ ಉಕ್ಕುಡ ಕಲ್ಲಜರಿ ಪ್ರದೇಶದಲ್ಲಿ ಕಳೆದ 75 ವರ್ಷಗಳಿಂದ ಸಂಪರ್ಕ ರಸ್ತೆಯಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಮೂರು ಬಡ ಕುಟುಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಸರ್ಕಾರಿ ಜಮೀನಿನಲ್ಲಿ ಹಾದುಹೋಗುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಗೇಟ್ ಅಳವಡಿಸಿ ತಡೆಯೊಡ್ಡಿದ್ದ ಗೇಟನ್ನು ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ. ದೂರಿನ ಹಿನ್ನೆಲೆ:ಸ್ಥಳೀಯ ನಿವಾಸಿ ಶ್ರೀಮತಿ ಜಯಂತಿ ಎಂಬುವರು ಈ ಅಕ್ರಮ ತಡೆಯ ತೆರವಿಗಾಗಿ ವಿಟ್ಲ ಪಟ್ಟಣ ಪಂಚಾಯತಿಗೆ ಅಗತ್ಯ ದಾಖಲೆಗಳ ಸಹಿತ ದೂರು ನೀಡಿದ್ದರು. ದೂರಿನ ಗಂಭೀರತೆಯನ್ನು ಪರಿಗಣಿಸಿದ ಪಟ್ಟಣ ಪಂಚಾಯತ್ ಆಡಳಿತವು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ವಿನಂತಿಸಿತ್ತು.
ತಹಶೀಲ್ದಾರ್ ಆದೇಶ ಮತ್ತು ಪರಿಶೀಲನೆ:ಮನವಿಗೆ ತಕ್ಷಣ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಅಕ್ರಮ ಗೇಟ್ ತೆರವುಗೊಳಿಸುವಂತೆ ವಿಟ್ಲ ಕಂದಾಯ ನಿರೀಕ್ಷಕರಿಗೆ ಹಾಗೂ ಭೂ ಮಾಪಕರಿಗೆ ಅಧಿಕೃತ ಆದೇಶ ನೀಡಿದ್ದರು. ಅಧಿಕಾರಿಗಳು ನಡೆಸಿದ ಸಮೀಕ್ಷೆ ಹಾಗೂ ಕಂದಾಯ ನಿರೀಕ್ಷಕರ ವರದಿಯ ಪ್ರಕಾರ, ಸರ್ವೇ ನಂ. 727/1ರಲ್ಲಿ ಬರುವ ರಸ್ತೆಯು ಸರ್ಕಾರಿ ಜಮೀನಿನಲ್ಲಿದೆ ಎಂಬುದು ದೃಢಪಟ್ಟಿದೆ. ರಸ್ತೆ ಅಭಿವೃದ್ಧಿಗೆ ಮಾತ್ರ ಅವಕಾಶ:ಈ ಜಮೀನನ್ನು ರಸ್ತೆಯನ್ನು ಅಭಿವೃದ್ಧಿಪಡಿಸಲು ಮತ್ತು ಸಾರ್ವಜನಿಕರ ರಸ್ತೆ ಸಂಪರ್ಕಕ್ಕಾಗಿ ಮಾತ್ರ ಬಳಸಿಕೊಳ್ಳಲು ತಹಶೀಲ್ದಾರ್ ಕಚೇರಿಯಿಂದ ಸ್ಪಷ್ಟ ಆದೇಶ ನೀಡಲಾಗಿದೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಈ ಸರ್ಕಾರಿ ಜಮೀನನ್ನು ಬಳಸಲು ಅವಕಾಶವಿರುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಕ್ರಮ ಗೇಟ್ ತೆರವು – ಕುಟುಂಬಗಳ ಕೃತಜ್ಞತೆ:ತಹಶೀಲ್ದಾರ್ ಆದೇಶದಂತೆ ಇಂದು ಕಂದಾಯ ಅಧಿಕಾರಿಗಳು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಅರ್ಜಿದಾರರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ದಶಕಗಳಿಂದ ಅನುಭವಿಸುತ್ತಿದ್ದ ನರಕಯಾತನೆಗೆ ಮುಕ್ತಿ ದೊರೆತಿದ್ದರಿಂದ ಹರ್ಷ ವ್ಯಕ್ತಪಡಿಸಿರುವ ಬಡ ಕುಟುಂಬಗಳು, ಸಕಾಲದಲ್ಲಿ ಸ್ಪಂದಿಸಿ ನ್ಯಾಯ ಒದಗಿಸಿದ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಆಡಳಿತಕ್ಕೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿವೆ.
Bantawala
ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!
ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.
ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.
Bantawala
ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
