Connect with us

crime

ಮಾರುವೇಷದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳಾ ಐಪಿಎಸ್‌ಗೆ 3 ಗಂಟೆಯಲ್ಲಿ 40ಕ್ಕೂ ಹೆಚ್ಚು ಯುವಕರಿಂದ ಕಿರುಕುಳ

Published

on

ಹೈದರಾಬಾದ್: ಮಹಿಳೆಯರ ರಾತ್ರಿ ಸುರಕ್ಷತೆಯ ನೈಜ ಸ್ಥಿತಿಯನ್ನು ತಿಳಿಯಲು ಮೆಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ವಿ. ಸುಮತಿ ಅವರು ಕೈಗೊಂಡ ದಿಟ್ಟ ಕಾರ್ಯಾಚರಣೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮಾರುವೇಷದಲ್ಲಿ 3 ಗಂಟೆ ಕಾರ್ಯಾಚರಣೆ:
ಮಧ್ಯರಾತ್ರಿ ಏಕಾಂಗಿಯಾಗಿ ಸಂಚರಿಸುವ ಮಹಿಳೆಯರು ಎದುರಿಸುವ ಸವಾಲುಗಳನ್ನು ಅರಿಯಲು ಕಮಿಷನರ್ ಸುಮತಿ ಅವರು ಮೇ 6 ರಂದು ಮಧ್ಯರಾತ್ರಿ 12:30 ರಿಂದ ಮುಂಜಾನೆ 3:30 ರವರೆಗೆ ದಿಲ್‌ಸುಖ್ ನಗರ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕೆಯ ಸೋಗಿನಲ್ಲಿ ಒಬ್ಬರೇ ಕಾಯುತ್ತಿದ್ದರು.

ಅವರ ರಕ್ಷಣೆ ಮತ್ತು ಕಿಡಿಗೇಡಿಗಳನ್ನು ಹಿಡಿಯಲು ನಾಗರಿಕರ ವೇಷದಲ್ಲಿ ವಿಶೇಷ ಪೊಲೀಸ್ ತಂಡಗಳು ಹತ್ತಿರದಲ್ಲೇ ಬೀಡು ಬಿಟ್ಟಿದ್ದವು.

3 ಗಂಟೆಯಲ್ಲಿ 40ಕ್ಕೂ ಹೆಚ್ಚು ಕಿರುಕುಳ:
ಕಾರ್ಯಾಚರಣೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳ ಆಟ ಶುರುವಾಯಿತು. ಮೂರು ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಪುರುಷರು ಅಧಿಕಾರಿಯ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ.
ಬಂದವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪನಿ ಉದ್ಯೋಗಿಗಳು ಇದ್ದರು. ಹೆಚ್ಚಿನವರು ಮದ್ಯ ಮತ್ತು ಗಾಂಜಾ ಅಮಲಿನಲ್ಲಿ ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಕ್ಷಣ ಬಂಧನ, ಕೌನ್ಸಿಲಿಂಗ್:
ಅಸಭ್ಯವಾಗಿ ವರ್ತಿಸಿದ ಮತ್ತು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ವಶಕ್ಕೆ ಪಡೆದರು. ಅವರ ವಿರುದ್ಧ ಕಿರುಕುಳ ಮತ್ತು ಸಾರ್ವಜನಿಕ ಶಾಂತಿ ಭಂಗ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ವಶಕ್ಕೆ ಪಡೆದವರಿಗೆ ಮಹಿಳಾ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಕೌನ್ಸಿಲಿಂಗ್ ಸೆಷನ್‌ ನಡೆಸಲಾಯಿತು.

ಕಾರ್ಯಾಚರಣೆಯ ಉದ್ದೇಶ:
“ರಾತ್ರಿ ವೇಳೆ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ವಾಸ್ತವವನ್ನು ಅರಿಯುವುದು ಮತ್ತು ಪೊಲೀಸ್ ಗಸ್ತಿನ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಹೈದರಾಬಾದ್‌ನಂತಹ ಮಹಾನಗರಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಎದುರಿಸುತ್ತಿರುವ ಗಂಭೀರ ಸುರಕ್ಷತಾ ಭೀತಿಯನ್ನು ಮತ್ತೆ ಎತ್ತಿ ತೋರಿಸಿದೆ.
ಐ.ಪಿ.ಎಸ್.ಅಧಿಕಾರಿ ವಿ.ಸುಮತಿಯವರ ಕಾರ್ಯಾಚರಣೆ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿದ್ದೇ ಜೀವದಾನ!

Published

on

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೊಸಳೆ ದಾಳಿಯಿಂದ ಭಯಗೊಂಡು ಚೀರಾಟ – ಸ್ಥಳೀಯರ ಸಮಯಪ್ರಜ್ಞೆಯಿಂದ ಸುರಕ್ಷಿತ ರಕ್ಷಣೆ

ಮಂಗಳೂರು: ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಮೊಸಳೆಯ ದಾಳಿಯಿಂದಾಗಿ ಜೀವ ಉಳಿಸಿಕೊಂಡಿರುವ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ.

ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ವಿಚಾರಗಳಿಂದ ಮನನೊಂದು ನವೆಂಬರ್ 4ರ ತಡರಾತ್ರಿ ಕುಮಾರಧಾರ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದಾರೆ. ಆದರೆ, ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ ಎನ್ನಲಾಗಿದೆ. ಮೊಸಳೆಯ ದಾಳಿಯಿಂದ ತೀವ್ರ ಭಯ ಹಾಗೂ ನೋವಿನಿಂದ ಕಂಗಾಲಾದ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಲು ಆರಂಭಿಸಿದ್ದಾರೆ.

ಮಹಿಳೆಯ ಕಿರುಚಾಟ ಕೇಳಿದ ಸೇತುವೆ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್‌ ಹಿಡಿದು ನದಿಯ ದಂಡೆಯತ್ತ ಧಾವಿಸಿದ್ದಾರೆ. ಮಹಿಳೆಯ ನಿರಂತರ ಚೀರಾಟ ಹಾಗೂ ಜನರ ಆಗಮನದಿಂದ ಗಾಬರಿಗೊಂಡ ಮೊಸಳೆ ಆಕೆಯನ್ನು ಬಿಟ್ಟು ನೀರಿನಲ್ಲಿ ಮರೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರತೆಗೆದು ದಂಡೆಗೆ ಕರೆತಂದಿದ್ದಾರೆ.

ವಿಶೇಷವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆ ಮೊಸಳೆಯ ದಾಳಿಯಿಂದ ಭಯಭೀತರಾಗಿ ಚೀರಾಡಿದ್ದೇ ಸ್ಥಳೀಯರ ಗಮನ ಸೆಳೆಯಲು ಕಾರಣವಾಗಿದೆ. ಹೀಗಾಗಿ ಮೊಸಳೆಯ ದಾಳಿಯೇ ಆಕೆಯ ಜೀವ ಉಳಿಸಲು ಪರೋಕ್ಷವಾಗಿ ಕಾರಣವಾಯಿತು ಎಂಬ ಅಚ್ಚರಿ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಉಡುಪಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನದಿಗೆ ಹಾರಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಬಳಿಕ ಪೊಲೀಸರು ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಹಿಳೆಗೆ ಸೂಕ್ತ ಸಮಾಲೋಚನೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿ, ಕುಟುಂಬಸ್ಥರೊಂದಿಗೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.

ಸಾವಿನ ದವಡೆಯಿಂದ ಪಾರಾದ ಮಹಿಳೆ! ಮೊಸಳೆಯ ದಾಳಿ, ಮಹಿಳೆಯ ಚೀರಾಟ, ಸ್ಥಳೀಯರ ಸಮಯಪ್ರಜ್ಞೆ ಹಾಗೂ ಪೊಲೀಸರ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಹಿಳೆಯ ಜೀವ ಉಳಿದಿದೆ.

Continue Reading

arrest

ಪೆರ್ಡೂರು ಪ್ರದೀಪ್ ಪೂಜಾರಿ ಹಲ್ಲೆ, ಆತ್ಮಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಮಧ್ಯಪ್ರದೇಶದಲ್ಲಿ ಬಂಧನ..

Published

on

​ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ (28) ಅವರ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ​

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು, ವಶಕ್ಕೆ ಪಡೆದಿರುವ ಆರೋಪಿಗಳನ್ನು ಉಡುಪಿಗೆ ಕರೆತರಲಾಗುತ್ತಿದೆ. ಬಂಧನಕ್ಕೆ ಸಂಬಂಧಿಸಿದ ಅಧಿಕೃತ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆರೋಪಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ​

ಪ್ರಕರಣದ ಹಿನ್ನೆಲೆ:​

ಪೆರ್ಡೂರಿನ ಪ್ರದೀಪ್ ಪೂಜಾರಿ ಅವರ ಮೇಲೆ ಅಕ್ಟೋಬರ್ 27ರ ರಾತ್ರಿ ಶ್ರಾವ್ಯಾ ಶೆಟ್ಟಿ ಕುಟುಂಬದವರು ಮೂರು ಕಾರುಗಳಲ್ಲಿ ಬಂದು ಅಡ್ಡಗಟ್ಟಿ ಭೀಕರವಾಗಿ ಹಲ್ಲೆ ನಡೆಸಿದ್ದರು ಎಂದು ಪ್ರದೀಪ್ ಅವರ ಸಹೋದರ ದಿಲೀಪ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಪ್ರದೀಪ್ ಅಕ್ಟೋಬರ್ 28ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಕ್ಟೋಬರ್ 30ರ ಸಂಜೆ 5:30ರ ಸುಮಾರಿಗೆ ಆಸ್ಪತ್ರೆಯ ಶೌಚಾಲಯದಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದರು. ​ಈ ಘಟನೆಗೆ ಸಂಬಂಧಿಸಿದಂತೆ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.

ವಿಶೇಷ ತಂಡಗಳ ರಚನೆ:

ಪ್ರಕರಣದ ತನಿಖೆಗಾಗಿ ಹಾಗೂ ಆರೋಪಿಗಳ ಪತ್ತೆಗೆ ಎಸ್‌ಪಿ ಅವರು 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ​ಅಧಿಕಾರಿ ಅಮಾನತು: ಪ್ರದೀಪ್ ಅವರ ಮೇಲೆ ಹಲ್ಲೆ ನಡೆದಾಗ ಆರಂಭದಲ್ಲಿ ಎಫ್‌ಐಆ‌ರ್ (FIR) ದಾಖಲಿಸದೆ ಕೇವಲ ಎನ್‌ಸಿ (NC) ದಾಖಲಿಸಿದ್ದ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಕರ್ತವ್ಯದಿಂದ ತೆರವುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ​ಪೂರ್ವ ದೂರುಗಳು ಹಾಗೂ ಚಾರ್ಜ್‌ಶೀಟ್:​ಇನ್ನೊಂದೆಡೆ, ಮೃತ ಪ್ರದೀಪ್ ಪೂಜಾರಿ ವಿರುದ್ಧವೂ ಯುವತಿ ಈ ಹಿಂದೆ 3 ಬಾರಿ ದೂರು ನೀಡಿದ್ದರು: ​2025 ನವೆಂಬರ್ 10: ಬೆದರಿಕೆ ಕರೆ ಹಾಕಿದ ಆರೋಪ. ​ನವೆಂಬರ್ 29: ಅತ್ಯಾಚಾರ ಆರೋಪ. ​ಅಕ್ಟೋಬರ್ 28: ಖಾರದ ಪುಡಿ ಎರಚಿ ಕೊಲೆಯತ್ನ ನಡೆಸಿದ ಆರೋಪ. ​ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ​ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.​

Continue Reading

arrest

ಕೊಲೆ ಮಾಡಿದ ಸ್ನೇಹಿತನೇ ಕನಸಿನಲ್ಲಿ ದೆವ್ವವಾಗಿ ಕಾಡಿದ! ಭಯ ತಾಳಲಾರದೆ ಪೊಲೀಸರಿಗೆ ಶರಣಾದ ಆರೋಪಿ

Published

on

ಮದ್ಯದ ಪಾರ್ಟಿ ವೇಳೆ ಸ್ನೇಹಿತನನ್ನೇ ಹೊಡೆದು ಕೊಂದಿದ್ದ ಯುವಕ; 15 ದಿನಗಳ ಕಾಲ ನಿದ್ರೆಯಲ್ಲೂ ಕಾಡಿದ ಮೃತ ಸ್ನೇಹಿತನ ನೆನಪು – ಕೊನೆಗೆ ಕೊಲೆ ರಹಸ್ಯ ಬಯಲು

ಮುಂಬೈ: ಮದ್ಯದ ಪಾರ್ಟಿ ವೇಳೆ ಉಂಟಾದ ಜಗಳದಲ್ಲಿ ಸ್ನೇಹಿತನನ್ನೇ ಹೊಡೆದು ಕೊಲೆಗೈದು, ಮೃತದೇಹವನ್ನು ಚೀಲದಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ಯುವಕನೊಬ್ಬ, ಕೊನೆಗೆ ಮೃತ ಸ್ನೇಹಿತ ಕನಸಿನಲ್ಲಿ ಪದೇಪದೇ ಬಂದು ಕಾಡುತ್ತಿದ್ದಾನೆಂಬ ಭಯದಿಂದ ಪೊಲೀಸರ ಮುಂದೆ ಶರಣಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವ್ಲಿ ನಿವಾಸಿ, ಹೌಸ್‌ಕೀಪಿಂಗ್ ಕೆಲಸಗಾರ ಪ್ರಭು ಕಾರ್ಕಡೆ (24) ಬಂಧಿತ ಆರೋಪಿ. ಎರಡು ವಾರಗಳ ಹಿಂದೆ ಡೊಂಬಿವ್ಲಿ ಸಮೀಪದ ಮೋಥಾ ಗ್ರಾಮದಲ್ಲಿ ಪಲ್ಲವ್ ಅಲಿಯಾಸ್ ವಿಶಾಲ್ ಮಧುಕರ್ ಕದಮ್ (43) ಎಂಬವರ ಮೃತದೇಹ ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಫುಲ್ಲ ಜಾಧವ್ ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಪ್ರಭು ನೀಡಿದ ಹೇಳಿಕೆಯ ಪ್ರಕಾರ, ಸ್ನೇಹಿತ ಕದಮ್ ಅವರ ಮನೆಯಲ್ಲೇ ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಪ್ರಭು, ಕದಮ್ ಅವರನ್ನು ಹೊಡೆದು ಕೊಲೆ ಮಾಡಿದ್ದಾನೆ.ಆತ ಮೃತಪಟ್ಟಿದ್ದ. ಸ್ನೇಹಿತ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡ ಪ್ರಭು, ತಕ್ಷಣ ತನ್ನ ಬಾಡಿಗೆ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಎಂಬಾತನ ಸಹಾಯ ಕೋರಿದ್ದಾನೆ. ಅವರಿಬ್ಬರೂ ಸೇರಿ ವಿಶಾಲ್ ಅವರ ಮೃತದೇಹವನ್ನು ಚೀಲವೊಂದರಲ್ಲಿ ತುಂಬಿ, ರಾತ್ರೋರಾತ್ರಿ ಹತ್ತಿರದ ನಿರ್ಜನ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಬಳಿಕ ಪರಾರಿಯಾಗಿದ್ದಾನೆ.

ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಆರಾಮವಾಗಿದ್ದ ಪ್ರಭುವಿಗೆ ಕೆಲವೇ ದಿನಗಳಲ್ಲಿ ಭಯ ಶುರುವಾಗಿದೆ. ಮೃತಪಟ್ಟ ಸ್ನೇಹಿತ ವಿಶಾಲ್ ಪದೇಪದೇ ಕನಸಿನಲ್ಲಿ ಬಂದು ಕಾಡುತ್ತಿದ್ದ. ಸುಮಾರು 15 ದಿನಗಳ ಕಾಲ ಸರಿಯಾಗಿ ನಿದ್ರೆ ಮಾಡಲೂ ಸಾಧ್ಯವಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಕನಸಿನ ಭಯ ಹಾಗೂ ಪಶ್ಚಾತ್ತಾಪದಿಂದ ಕಂಗೆಟ್ಟ ಪ್ರಭು, ಕೊನೆಗೆ ತಾನಾಗಿಯೇ ಪೊಲೀಸರ ಬಳಿಗೆ ತೆರಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಸೋಮವಾರ ಆತನನ್ನು ಬಂಧಿಸಲಾಗಿದೆ. ಅಲ್ಲದೆ, ಮೃತದೇಹ ಎಸೆದಿದ್ದ ಸ್ಥಳವನ್ನೂ ಪೊಲೀಸರಿಗೆ ತೋರಿಸಿದ್ದಾನೆ.

ಈ ಸಂಬಂಧ ವಿಷ್ಣು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!