health
ಡಯಾಲಿಸಿಸ್ ರೋಗಿಯ ವಾಹನ ತಡೆದು ಕಿರುಕುಳ – ಸಾರ್ವಜನಿಕ ಆಕ್ರೋಶ ಕಮೀಷನರ್ ಹೇಳಿದ್ದೇನು ? ಮಾನವೀಯತೆ ಮತ್ತು ಕಾನೂನಿನ ನಡುವೆ ಪೊಲೀಸರ ಕರ್ತವ್ಯ ನಿಷ್ಠೆ…
ಮಂಗಳೂರು: ಗಡಿಭಾಗದ ಜಿಲ್ಲೆಗಳಲ್ಲಿ ಸೌಹಾರ್ದತೆ ಮತ್ತು ಪರಸ್ಪರ ಸಹಕಾರ ಮುಖ್ಯವಾಗಿರಬೇಕಾದ ಹೊತ್ತಿನಲ್ಲಿ, ಮಂಗಳೂರಿನ ದೇರಳಕಟ್ಟೆ ಸಮೀಪ ಟ್ರಾಫಿಕ್ ಪೊಲೀಸರು ನಡೆದುಕೊಂಡ ರೀತಿ ಅಮಾನವೀಯತೆಯ ಪರಮಾವಧಿಯಾಗಿದೆ ಮತ್ತು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ರೋಗಿಯಿದ್ದ ವಾಹನವನ್ನು ತಡೆದು, ದಂಡದ ಹೆಸರಿನಲ್ಲಿ ಕಿರುಕುಳ ನೀಡಿದ್ದಾರೆ ಎಂದು ಸಾರ್ವಜನಿಕವಾಗಿ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿರುವಾಗಲೇ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಗರದ ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ವಾಹನಗಳ ಕಾರ್ಯಾಚರಣೆಯ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇರಳ ನೋಂದಣಿಯ ಖಾಸಗಿ ವಾಹನವೊಂದನ್ನು ಬಾಡಿಗೆಗೆ ಬಳಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ತಡೆದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕಾನೂನು ಮತ್ತು ಮಾನವೀಯತೆಯ ದೃಷ್ಟಿಕೋನದ ವಿಶ್ಲೇಷಣೆಯನ್ನು ಪೊಲೀಸರು ನೀಡಿದ್ದಾರೆ.
ಕೇರಳ ನೋಂದಣಿಯ ಖಾಸಗಿ ರಿಕ್ಷಾವೊಂದು ಮಂಗಳೂರು ನಗರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಎಎಸ್ಐ (ASI) ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ರೋಗಿಗಳಿರುವುದು ಕಂಡುಬಂದಿದೆ. ಆದರೆ, ಈ ಸಂದರ್ಭವನ್ನು ಬಳಸಿಕೊಂಡು ಕಾನೂನು ಉಲ್ಲಂಘನೆಯನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ.
ಖಾಸಗಿ ವಾಹನ – ವಾಣಿಜ್ಯ ಬಳಕೆ: ವಾಹನವು ಖಾಸಗಿ ನೋಂದಣಿ (White Board) ಹೊಂದಿದ್ದರೂ ಅದನ್ನು ಬಾಡಿಗೆಗೆ ಪ್ರಯಾಣಿಕರನ್ನು ಸಾಗಿಸಲು ಬಳಸಲಾಗುತ್ತಿದೆ ಎಂದು ಚಾಲಕನೇ ಒಪ್ಪಿಕೊಂಡಿದ್ದಾನೆ. ಇದು ಮೋಟಾರು ವಾಹನ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.
ರೋಗಿಗಳ ನೆಪದಲ್ಲಿ ನಿಯಮ ಉಲ್ಲಂಘನೆ: ವಾಹನದಲ್ಲಿ ರೋಗಿಗಳಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ತುರ್ತು ಸಂದರ್ಭಗಳಲ್ಲಿ ಮಾನವೀಯತೆ ಮುಖ್ಯವಾದರೂ, ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಪರವಾನಗಿಯಂತೆ ಬಳಸಬಾರದು.
ಸ್ಥಳೀಯ ಆಟೋ ಚಾಲಕರ ಸಂಕಷ್ಟ: ಮಂಗಳೂರಿನ ಸ್ಥಳೀಯ ಆಟೋ ಚಾಲಕರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಪರವಾನಗಿ (Permit) ಪಡೆದು, ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊರ ರಾಜ್ಯದ ಅಕ್ರಮ ರಿಕ್ಷಾಗಳಿಗೆ ಅವಕಾಶ ನೀಡುವುದು ಸ್ಥಳೀಯ ಚಾಲಕರ ಜೀವನೋಪಾಯಕ್ಕೆ ಹೊಡೆತ ನೀಡಿದಂತಾಗುತ್ತದೆ.
ಪೊಲೀಸರ ವಿವೇಚನಾ ಅಧಿಕಾರ: ವಾಹನ ತಡೆಯುವ ಮೊದಲು ಅದರಲ್ಲಿ ರೋಗಿಗಳಿದ್ದಾರೆ ಎಂದು ಪೊಲೀಸರಿಗೆ ತಿಳಿದಿರುವುದಿಲ್ಲ. ನಿಯಮ ಉಲ್ಲಂಘನೆಯ ಶಂಕೆಯ ಮೇಲೆ ತಪಾಸಣೆ ನಡೆಸಿದ ಎಎಸ್ಐ, ನಂತರ ಮಾನವೀಯ ಆಧಾರದ ಮೇಲೆ ದಂಡ ವಿಧಿಸದೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದು ಅವರ ಕರ್ತವ್ಯ ನಿಷ್ಠೆ ಮತ್ತು ವಿವೇಚನೆಯನ್ನು ತೋರಿಸುತ್ತದೆ.
ಸಾರ್ವಜನಿಕರ ಗಮನಕ್ಕೆ:
ನಗರದ ಸಂಚಾರ ವ್ಯವಸ್ಥೆ ಸುಗಮವಾಗಿರಲು ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ರಿಯಾಯಿತಿಗಳನ್ನು ಗೌರವದಿಂದ ಕೋರಬೇಕೇ ಹೊರತು, ಅದನ್ನು ಹಕ್ಕಿನಂತೆ ಪ್ರತಿಪಾದಿಸುವುದು ಸರಿಯಲ್ಲ. ಅಕ್ರಮ ಆಟೋಗಳ ಪರವಾಗಿ ಧ್ವನಿ ಎತ್ತುವ ಮೊದಲು, ನಿಯಮ ಪಾಲಿಸುವ ಸ್ಥಳೀಯ ಚಾಲಕರ ಹಿತದೃಷ್ಟಿಯನ್ನು ಗಮನಿಸಬೇಕಿದೆ. ಎಂದು ಕಮೀಷನರ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಕೇರಳ ನೋಂದಣಿಯ (KL-14) ಖಾಸಗಿ ಎಲೆಕ್ಟ್ರಿಕ್ ಆಟೋವೊಂದರಲ್ಲಿ ರೋಗಿಯೊಬ್ಬರನ್ನು ಡಯಾಲಿಸಿಸ್ ಚಿಕಿತ್ಸೆಗಾಗಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ, “ಕೇರಳದ ವಾಹನ ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲ” ಎಂದು ಐದು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶ ಮಾಡಿದ ಬಗ್ಗೆ ಸಾರ್ವಜನಿಕವಾಗಿ ಪೊಲೀಸರಿಗೆ ಮಾನವೀಯತೆಯೇ ಇಲ್ಲ ಎಂಬಂತೆ ಪ್ರಕರಣದ ವಿಡಿಯೋ ವೈರಲ್ ಆಗಿತ್ತು.

crime
ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿದ್ದೇ ಜೀವದಾನ!
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮೊಸಳೆ ದಾಳಿಯಿಂದ ಭಯಗೊಂಡು ಚೀರಾಟ – ಸ್ಥಳೀಯರ ಸಮಯಪ್ರಜ್ಞೆಯಿಂದ ಸುರಕ್ಷಿತ ರಕ್ಷಣೆ
ಮಂಗಳೂರು: ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರು ಮೊಸಳೆಯ ದಾಳಿಯಿಂದಾಗಿ ಜೀವ ಉಳಿಸಿಕೊಂಡಿರುವ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆ ಬಳಿ ನವೆಂಬರ್ 4ರ ತಡರಾತ್ರಿ ನಡೆದಿದೆ.
ಉಡುಪಿ ಮೂಲದ ಮಹಿಳೆಯೊಬ್ಬರು ಕೌಟುಂಬಿಕ ವಿಚಾರಗಳಿಂದ ಮನನೊಂದು ನವೆಂಬರ್ 4ರ ತಡರಾತ್ರಿ ಕುಮಾರಧಾರ ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದಾರೆ. ಆದರೆ, ನೀರಿಗೆ ಧುಮುಕಿದ ತಕ್ಷಣವೇ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದೆ ಎನ್ನಲಾಗಿದೆ. ಮೊಸಳೆಯ ದಾಳಿಯಿಂದ ತೀವ್ರ ಭಯ ಹಾಗೂ ನೋವಿನಿಂದ ಕಂಗಾಲಾದ ಮಹಿಳೆ ನದಿಯ ಮಧ್ಯದಲ್ಲೇ ಜೋರಾಗಿ ಚೀರಾಡಲು ಆರಂಭಿಸಿದ್ದಾರೆ.
ಮಹಿಳೆಯ ಕಿರುಚಾಟ ಕೇಳಿದ ಸೇತುವೆ ಸಮೀಪದ ವಸತಿಗೃಹದ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್ ಹಿಡಿದು ನದಿಯ ದಂಡೆಯತ್ತ ಧಾವಿಸಿದ್ದಾರೆ. ಮಹಿಳೆಯ ನಿರಂತರ ಚೀರಾಟ ಹಾಗೂ ಜನರ ಆಗಮನದಿಂದ ಗಾಬರಿಗೊಂಡ ಮೊಸಳೆ ಆಕೆಯನ್ನು ಬಿಟ್ಟು ನೀರಿನಲ್ಲಿ ಮರೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ನೀರಿನಿಂದ ಹೊರತೆಗೆದು ದಂಡೆಗೆ ಕರೆತಂದಿದ್ದಾರೆ.
ವಿಶೇಷವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನದಿಗೆ ಹಾರಿದ್ದ ಮಹಿಳೆ ಮೊಸಳೆಯ ದಾಳಿಯಿಂದ ಭಯಭೀತರಾಗಿ ಚೀರಾಡಿದ್ದೇ ಸ್ಥಳೀಯರ ಗಮನ ಸೆಳೆಯಲು ಕಾರಣವಾಗಿದೆ. ಹೀಗಾಗಿ ಮೊಸಳೆಯ ದಾಳಿಯೇ ಆಕೆಯ ಜೀವ ಉಳಿಸಲು ಪರೋಕ್ಷವಾಗಿ ಕಾರಣವಾಯಿತು ಎಂಬ ಅಚ್ಚರಿ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೌಟುಂಬಿಕ ಮನಸ್ತಾಪದಿಂದ ಬೇಸತ್ತು ಉಡುಪಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನದಿಗೆ ಹಾರಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಬಳಿಕ ಪೊಲೀಸರು ಉಡುಪಿಯಲ್ಲಿದ್ದ ಮಹಿಳೆಯ ಕುಟುಂಬಸ್ಥರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಹಿಳೆಗೆ ಸೂಕ್ತ ಸಮಾಲೋಚನೆ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿ, ಕುಟುಂಬಸ್ಥರೊಂದಿಗೆ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ.
ಸಾವಿನ ದವಡೆಯಿಂದ ಪಾರಾದ ಮಹಿಳೆ! ಮೊಸಳೆಯ ದಾಳಿ, ಮಹಿಳೆಯ ಚೀರಾಟ, ಸ್ಥಳೀಯರ ಸಮಯಪ್ರಜ್ಞೆ ಹಾಗೂ ಪೊಲೀಸರ ಮಧ್ಯಸ್ಥಿಕೆಯಿಂದಾಗಿ ಕೊನೆಗೂ ಮಹಿಳೆಯ ಜೀವ ಉಳಿದಿದೆ.
Bantawala
ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಟ್ಲದ ಖ್ಯಾತ ವೈದ್ಯ, ಪುಷ್ಪಾಕ್ ಹೆಲ್ತ್ ಸೆಂಟರ್ ಸಂಸ್ಥಾಪಕ *ಡಾ. ವಿ.ಕೆ. ಹೆಗ್ಡೆ* ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1987 ರಿಂದ ವಿಟ್ಲದಲ್ಲಿ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ವಿ.ಕೆ. ಹೆಗ್ಡೆ ಅವರ ವೃತ್ತಿಪರ ಪಯಣವು ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದ ಪ್ರಾಥಮಿಕ ಆರೋಗ್ಯ ಸೇವೆಯ ನಿರಂತರ ಅಧ್ಯಾಯವಾಗಿದೆ.ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೆ, ಜನರ ಆರೋಗ್ಯದ ಅಗತ್ಯಗಳಿಗೆ ಸ್ಪಂದಿಸುವ ಮಾನವೀಯ ಸೇವೆಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ಅರೆನಗರ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ, ವೈಯಕ್ತಿಕ ವೈದ್ಯಕೀಯ ಕಾಳಜಿ ಮತ್ತು ಮಾನವೀಯ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ.ವೈದ್ಯಕೀಯ ವೃತ್ತಿಯ ಜೊತೆಗೆ ರೋಟರಿ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿಯೂ ದೀರ್ಘಕಾಲದ ಕೊಡುಗೆ ನೀಡಿದ್ದಾರೆ.ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಸಂಕಷ್ಟದ ಅವಧಿಯಲ್ಲಿ ವೈದ್ಯಕೀಯ ಸೇವೆಯ ನಿರಂತರತೆಯನ್ನು ಕಾಪಾಡಿ, ಅಗತ್ಯವಿರುವ ರೋಗಿಗಳಿಗೆ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ಮತ್ತು ಸೂಕ್ತ ರೆಫರಲ್ ನೆರವು ನೀಡಿದ ಅವರ ಸೇವಾ ಬದ್ಧತೆಯು ಈ ನಾಮನಿರ್ದೇಶನದ ಪ್ರಮುಖ ಅಂಶವಾಗಿದೆ.
Bantawala
ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ: ಶಾಲೆಯಿಂದ ಸಂತಾಪ
ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಒಕ್ಕೆತ್ತೂರು ಕೊಣಾಜೆ ನಿವಾಸಿ ಯುಮುನಾ (59) ಅವರು ಇಂದು ಮಧ್ಯಾಹ್ನ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ನಿಧನ: ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಒಕ್ಕೆತ್ತೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ನಿಯುಕ್ತಿಗೊಂಡಿದ್ದ ಯಮುನಾ ಅವರು, ತದನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಸಮಯಗಳಿಂದ ಅನಾರೋಗ್ಯದ ನಿಮಿತ್ತ ಕರ್ತವ್ಯಕ್ಕೆ ಗೈರುಹಾಜರಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೇವಾ ವಿವರ: ಉತ್ತಮ ಶಿಕ್ಷಕಿಯಾಗಿ ಹೆಸರಾಗಿದ್ದ ಇವರು ಈ ಹಿಂದೆ ಕಡಂಬು, ಅನಿಲಕಟ್ಟೆ ಸರಕಾರಿ ಶಾಲೆಗಳಲ್ಲಿ ಹಾಗೂ ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ 2026ರ ಎಪ್ರಿಲ್ 19 ರಂದು ಒಕ್ಕೆತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಗೊಂಡು ಬಂದಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರಿಗೆ ಪೂರ್ಣಾವಧಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ.
ಪರಿವಾರ ಹಾಗೂ ಗಣ್ಯರ ಸಂತಾಪ: ಮೃತರು ಪತಿ, ನಿವೃತ್ತ ಶಿಕ್ಷಕರಾದ ದಾಮೋದರ ಮಾಸ್ಟ್ರು, ಇಬ್ಬರು ಪ್ರತಿಭಾನ್ವಿತ ಮಕ್ಕಳು ಮತ್ತು ಅಪಾರ ಬಂಧು-ಬಳಗ, ವಿದ್ಯಾರ್ಥಿವೃಂದ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ. ಶಿಕ್ಷಕಿಯ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ C. H. ಮಹಮ್ಮದ್ ಹಾರೀಸ್ ಮತ್ತು ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಶಾಲೆಗೆ ಮಧ್ಯಾಹ್ನದ ಬಳಿಕ ರಜೆ ಮತ್ತು ಅಂತಿಮ ಸಂಸ್ಕಾರ: ಶಿಕ್ಷಕಿಯ ಅಂತಿಮ ಕಾರ್ಯಕ್ರಮದ ನಿಮಿತ್ತ ಪ್ರಭಾರ ಮುಖ್ಯ ಶಿಕ್ಷಕರಾದ ಜಯಪ್ರಕಾಶ್ ಅವರು ಮಧ್ಯಾಹ್ನದ ನಂತರ ಶಾಲೆಗೆ ರಜೆ ಘೋಷಿಸಿದ್ದರು. ಮೃತರ ಅಂತಿಮ ಸಂಸ್ಕಾರವು ಅವರ ತಾಯಿ ಮನೆಯಾದ ಮೂಡಬಿದ್ರೆಯಲ್ಲಿ ನಡೆಯಲಿದ್ದು, ಪಾರ್ಥಿವ ಶರೀರವನ್ನು ಅಲ್ಲಿಗೆ ರವಾನಿಸಲಾಗಿದೆ. ಶಾಲಾ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯವರು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ತೆರಳಿದ್ದಾರೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
