Connect with us

award

600ಕ್ಕೆ 600 ಅಂಕ; ದುಃಖದ ನಡುವೆಯೂ ದಿಟ್ಟ ಸಾಧನೆ – ತಾಯಿಯನ್ನು ಕಳೆದುಕೊಂಡ ದಿಶಾ ರಾಜ್ಯಕ್ಕೆ ಪ್ರಥಮ

Published

on

ಅಪಾರ ದುಃಖದ ನಡುವೆಯೂ ಅಸಾಧಾರಣ ಧೈರ್ಯ ಮತ್ತು ಸಂಕಲ್ಪದೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಪರೀಕ್ಷೆಗಳ ನಡುವೆ ದಿಶಾ ಅವರ ಜೀವನದಲ್ಲಿ ಅನಿರೀಕ್ಷಿತ ದುರ್ಘಟನೆ ಸಂಭವಿಸಿತು. ಒಂದು ದಿನ ಅವರು ಮತ್ತು ಅವರ ತಂಗಿ ಓದುತ್ತಿದ್ದಾಗ, ಅವರ ತಾಯಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು. ಮೊದಲಿಗೆ ಸಾಮಾನ್ಯ ಗಾಯ ಎಂದು ಭಾವಿಸಿದರೂ, ಮರುದಿನ ಬೆಳಿಗ್ಗೆ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಅದೇ ದಿನ ದಿಶಾ ಅವರಿಗೆ ಗಣಿತ ಪರೀಕ್ಷೆ ಇದ್ದುದರಿಂದ, ತಾಯಿಯ ಸ್ಥಿತಿ ಕಂಡು ಅವರು ಪರೀಕ್ಷೆಗೆ ಹಾಜರಾಗಲು ಮನಸ್ಸಿಲ್ಲದೆ, “ನಾನು ಪರೀಕ್ಷೆ ಬರೆಯುವುದಿಲ್ಲ” ಎಂದು ತಂದೆಯ ಬಳಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಕರು ದಿಶಾ ಅವರಿಗೆ ಧೈರ್ಯ ತುಂಬಿ, “ನೀನು 600ಕ್ಕೆ 600 ಅಂಕ ಪಡೆಯುವ ಸಾಮರ್ಥ್ಯ ಹೊಂದಿದ್ದೀಯ” ಎಂದು ಪ್ರೋತ್ಸಾಹಿಸಿದರು. ಅವರ ಮಾತುಗಳಿಂದ ಪ್ರೇರಿತಳಾದ ದಿಶಾ, ಕಠಿಣ ಮನಸ್ಥಿತಿಯಲ್ಲಿಯೇ ಪರೀಕ್ಷೆ ಬರೆಯಲು ನಿರ್ಧರಿಸಿದರು.

ಪರೀಕ್ಷಾ ಕೇಂದ್ರದಲ್ಲಿಯೂ ದಿಶಾ ಆತಂಕ ಮತ್ತು ಭಯದ ನಡುವೆ ಪರೀಕ್ಷೆ ಎದುರಿಸಿದರು. ಪರೀಕ್ಷೆ ಅರ್ಧದಲ್ಲೇ ಬಿಟ್ಟು ಮನೆಗೆ ಹೋಗಬೇಕೆಂಬ ಭಾವನೆ ಬಂದರೂ, ತಮ್ಮ ಗುರಿಯನ್ನು ನೆನಪಿಸಿಕೊಂಡು ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಗಣಿತ ಪರೀಕ್ಷೆಯ ನಂತರ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಎಕನಾಮಿಕ್ಸ್ ಪರೀಕ್ಷೆಯ ದಿನವೇ ತಾಯಿ ವಿಧಿವಶರಾದರು.

ತಾಯಿಯ ಅಗಲಿಕೆಯ ನೋವಿನ ನಡುವೆಯೂ ದಿಶಾ ಧೃತಿಗೆಡದೆ ಉಳಿದ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಫಲವಾಗಿ, ಆರು ವಿಷಯಗಳಲ್ಲೂ ತಲಾ 100 ಅಂಕಗಳನ್ನು ಪಡೆದು 600/600 ಅಂಕಗಳ ಅಪೂರ್ವ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಇಂಗ್ಲಿಷ್ ವಿಷಯದಲ್ಲಿ ಪೂರ್ಣ ಅಂಕ ಗಳಿಸುವುದು ಕಷ್ಟ ಎಂಬ ಭಯವಿದ್ದರೂ, ಅದನ್ನೂ ಮೀರಿ ಸಾಧನೆ ಮಾಡಿದ್ದಾರೆ.

ದಿಶಾ ಅವರ ಸಾಧನೆಯಲ್ಲಿ ಅವರ ತಂದೆಯ ಬೆಂಬಲ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಾಪಕರ ಮಾರ್ಗದರ್ಶನ ಪ್ರಮುಖ ಪಾತ್ರವಹಿಸಿದೆ. ಕಠಿಣ ಸಮಯದಲ್ಲಿ ಶಿಕ್ಷಕರು ನೀಡಿದ ಕೌನ್ಸೆಲಿಂಗ್ ಮತ್ತು ಪ್ರೋತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಭವಿಷ್ಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗುವ ಕನಸಿನೊಂದಿಗೆ ದಿಶಾ ಮುಂದುವರೆಯುತ್ತಿದ್ದಾರೆ. ಮೇ ತಿಂಗಳಲ್ಲಿ ನಡೆಯಲಿರುವ ಸಿಎ ಫೌಂಡೇಶನ್ ಪರೀಕ್ಷೆಗೆ ಅವರು ಸಿದ್ಧತೆ ನಡೆಸುತ್ತಿದ್ದಾರೆ.

ದುಃಖದ ನಡುವೆ ಧೈರ್ಯ ಕಳೆದುಕೊಳ್ಳದೇ ಗುರಿ ಸಾಧಿಸಿದ ದಿಶಾ ಅವರ ಕಥೆ, ಯಾವುದೇ ಸವಾಲು ಬಂದರೂ ದೃಢಸಂಕಲ್ಪ ಇದ್ದರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.

ಅಭಿನಂದನೆಗಳು ದಿಶಾ – ನಿಮ್ಮ ಭವಿಷ್ಯ ಉಜ್ವಲವಾಗಿರಲಿ!

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿಗೆ ಪ್ರತಿಷ್ಠಿತ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

Published

on

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹೆಸರಾಂತ ಸಂಸ್ಕೃತಿ ಚಿಂತಕರಾದ ಚಾಮರಾಜನಗರದ ಸುರೇಶ್ ಎನ್. ಋಗ್ವೇದಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ರವೀಂದ್ರ ಬಾದಾಮಿಕರ್, ಚಂದನ ದೂರದರ್ಶನದ ಮಾಜಿ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್ ಜೋಶಿ, ಪ್ರಸಿದ್ಧ ವಿದ್ವಾಂಸರಾದ ಅರಳುಮಲ್ಲಿಗೆ ಪ್ರಕಾಶ್ (ಡಾ. ಪಾರ್ಥಸಾರಥಿ) ಹಾಗೂ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಎಚ್.ಎಲ್.ಎನ್. ರಾವ್ ಅವರು ಸುರೇಶ್ ಋಗ್ವೇದಿ ಅವರಿಗೆ ಪ್ರಶಸ್ತಿ ವಿತರಿಸಿ, ಸನ್ಮಾನಿಸಿದರು.

ಸಾಧನೆಯ ಹಾದಿ ಮತ್ತು ಹಿನ್ನೆಲೆ:

ಪರಿಚಯ: ಚಾಮರಾಜನಗರದ ಶಂಕರಪುರದ ನಿವಾಸಿಯಾದ ಸುರೇಶ್ ಎನ್. ಋಗ್ವೇದಿ ಅವರು ಎಸ್. ನಾಗರಾಜು ಮತ್ತು ಸುಲೋಚನಮ್ಮ ದಂಪತಿಯ ಪುತ್ರ.ಶಿಕ್ಷಣ ಮತ್ತು ವೃತ್ತಿ: ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರು ಎಂ.ಎ. (ಇತಿಹಾಸ), ಬಿ.ಎಡ್. ಹಾಗೂ ಡಿಪ್ಲೋಮಾ ಇನ್ ಜರ್ನಲಿಸಂ ಪದವಿ ಪಡೆದಿದ್ದಾರೆ. ಪ್ರಸ್ತುತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅಪಾರ ಶಿಷ್ಯಬಳಗವನ್ನು ಹೊಂದಿದ್ದಾರೆ.ಸಂಘಟನಾ ಚತುರ: ಕಳೆದ 34 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ‘ಚಾಮರಾಜನಗರ ವಿದ್ಯಾರ್ಥಿ ಬಳಗ’ ಸ್ಥಾಪಿಸುವ ಮೂಲಕ ಇವರ ಸಂಘಟನಾ ಪಯಣ ಆರಂಭವಾಯಿತು.

ಪ್ರಮುಖ ಸೇವೆಗಳು:

ಶಿಕ್ಷಣ, ಆಧ್ಯಾತ್ಮ, ಸಾಹಿತ್ಯ, ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ಕನ್ನಡ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸುರೇಶ್ ಋಗ್ವೇದಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷರಾಗಿ, ವಲಯ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಶೃಂಗೇರಿ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದಲ್ಲಿ ದಶಕಗಳ ಕಾಲ ಜಿಲ್ಲಾ ಪ್ರಧಾನರಾಗಿ ಕಾರ್ಯನಿರ್ವಹಿಸಿದ್ದಾರೆ.

ವಿಕಾಸ ವೇದಿಕೆ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ತು, ಜೈ ಹಿಂದ್ ಪ್ರತಿಷ್ಠಾನ, ಶ್ರೀ ಕೃಷ್ಣ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್‌ ಸೇರಿದಂತೆ ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಜನಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಕಳೆದ 51 ವರ್ಷಗಳಿಂದ ನಿರಂತರವಾಗಿ ಕಲೆ, ಸಂಸ್ಕೃತಿ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು, ಸುರೇಶ್ ಎನ್. ಋಗ್ವೇದಿ ಅವರ ಈ ಸುದೀರ್ಘ ಹಾಗೂ ಅನನ್ಯ ಸೇವೆಯನ್ನು ಪರಿಗಣಿಸಿ ಈ ಬಾರಿಯ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಹಲವು ಗಣ್ಯರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.




Continue Reading

award

ಬಯ್ಯಮಲ್ಲಿಗೆ ಖ್ಯಾತಿಯ ಹಿರಿಯ ನಾಟಕಕಾರ ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

Published

on

ಬೆಂಗಳೂರು: ಕಳೆದ ಬಾರಿ ಸುವರ್ಣ ಸಂಭ್ರಮವನ್ನಾಚರಿಸಿದ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026 ಮೇ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ದೀಪ ಬೆಳಗಿ ಉದ್ಘಾಟಿಸಿದರು.


ಸಮಾರಂಭದಲ್ಲಿ ತುಳು ರಂಗಭೂಮಿ ಸಿನಿಮಾರಂಗ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಬಯ್ಯಮಲ್ಲಿಗೆ ಖ್ಯಾತಿಯ ಹಿರಿಯ ನಾಟಕಕಾರ ಡಾ.ಸಂಜೀವ ದಂಡಕೇರಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ದಂಡಕೇರಿಯವರ ಪತ್ನಿ ಶ್ರೀಮತಿ ಜಲಜಾಕ್ಷಿ ದಂಡಕೇರಿ ಮತ್ತು ಕುಟುಂಬ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡರು.


ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್. ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ, ಖ್ಯಾತ ವಿದ್ವಾಂಸ, ವಿದ್ಯಾ ವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಡಾ. ಕೆ.ಎನ್ ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಸುಮಾ, ವಿ.ನಾಗೇಂದ್ರ, ಸಂಸ್ಥೆಯ ಮಂಗಳೂರು ಪ್ರತಿನಿಧಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.


ಆರ್ಯಭಟ ನೃತ್ಯೋತ್ಸವದೊಂದಿಗೆ ಜರಗಿದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 72ಮಂದಿ ಹಿರಿಯ ಸಾಧಕರಿಗೆ 2025 – 26 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎಲ್.ಯನ್.ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ.ಬಸವರಾಜು ವಂದಿಸಿದರು. ಸಾರ್ಥವಳ್ಳಿ ನಾರಾಯಣಸ್ವಾಮಿ ಮತ್ತು ಆರ್.ವೆಂಕಟರಾಜು ಕಾರ್ಯಕ್ರಮ ನಿರೂಪಿಸಿದರು.

Continue Reading

Article

ದಯಾನಂದ ಕುಂತೂರು ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕರಾವಳಿಯ ಕಲಾಭಿಮಾನಿಗಳ ಹೃದಯ ಗೆದ್ದ ಸ್ತ್ರೀ ವೇಷಧಾರಿಗೆ ಸಂದ ಗೌರವ

Published

on

ರಂಗಭೂಮಿಯ ‘ಕಲಾರತ್ನ ಮಣಿ’ ದಯಾನಂದ ಕುಂತೂರು: ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಅನಭಿಷಿಕ್ತ ಕಲಾ ಸಾಮ್ರಾಟನಿಗೆ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ
ತುಳು-ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ಕಲಾ ಸೇವೆಯನ್ನೇ ಕಾಯಕವಾಗಿಸಿಕೊಂಡು ಯಶಸ್ಸಿನ ಶಿಖರವೇರಿದ ಧೀಮಂತ ಕಲಾವಿದ ಶ್ರೀ ದಯಾನಂದ ಕುಂತೂರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯ ವಿವಿಧ ಮಜಲುಗಳಲ್ಲಿ ಪಯಣಿಸಿ, ಸುಮಾರು 2500ಕ್ಕೂ ಅಧಿಕ ನಾಟಕಗಳಲ್ಲಿ ಅದ್ಭುತವಾಗಿ ಸ್ತ್ರೀ ವೇಷಧಾರಿಯಾಗಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಅವರ ಸಾಂಸ್ಕೃತಿಕ ಸಾಧನೆಯ ಮುಕುಟಕ್ಕೆ ಅತ್ಯುನ್ನತ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯ ಜಗದಗಲದ ಗರಿ ಸೇರ್ಪಡೆಯಾಗಿದೆ. ಇದು ಇಡೀ ಕರಾವಳಿ ಹಾಗೂ ಕನ್ನಡಿಗರು ಹೆಮ್ಮೆಪಡುವಂತಹ ಕ್ಷಣವಾಗಿದೆ.

ಬಾಲ್ಯ ಮತ್ತು ಕಲಾ ಪ್ರವೇಶದ ಹೆಜ್ಜೆಗಳು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂತೂರಿನ ಶ್ರೀಯುತ ಶೀನಪ್ಪ ಪೂಜಾರಿ ಅಲೆಕ್ಕಾಡಿ ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಏಳನೇ ಮಗನಾಗಿ 07-06-1969 ರಲ್ಲಿ ದಯಾನಂದ ಕುಂತೂರು ಜನಿಸಿದರು. ಕುಂತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಉಪ್ಪಿನಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದರು.

ಶಾಲಾ ದಿನಗಳಲ್ಲೇ ಬಣ್ಣದ ಪ್ರಪಂಚದ ಕಡೆಗೆ ಆಕರ್ಷಿತರಾಗಿದ್ದ ದಯಾನಂದರು, ತಮ್ಮ ಎಂಟನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ಅವರು ವೃತ್ತಿಪರವಾಗಿ ಬಣ್ಣ ಹಚ್ಚಿದ ಮೊದಲ ತುಳು ನಾಟಕ ‘ನೇತ್ತರ್ದ ಕಾಣಿಕೆ’. ಅಲ್ಲಿಂದ ಆರಂಭವಾದ ಇವರ ಕಲಾ ಯಾನ ಇಂದಿಗೂ ದಣಿವರಿಯದ ಜಲಪಾತದಂತೆ ಮುನ್ನಡೆಯುತ್ತಿದೆ.

ಸ್ತ್ರೀ ಪಾತ್ರಗಳ ಮೂಲಕ ಅಪಾರ ಜನಮನ್ನಣೆ:
ತುಳು ಹಾಗೂ ಕನ್ನಡ ನಾಟಕ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಅಷ್ಟೇ ಸಹಜವಾಗಿ, ಆಕರ್ಷಕವಾಗಿ ಮತ್ತು ತನ್ಮಯತೆಯಿಂದ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಆದರೆ ದಯಾನಂದ ಕುಂತೂರು ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಸ್ತ್ರೀ ಸಹಜ ಭಾವನೆಗಳಾದ ನವರಸಗಳನ್ನು ರಂಗದ ಮೇಲೆ ಅತ್ಯಂತ ಮನೋಜ್ಞವಾಗಿ ಉಣಬಡಿಸಿದ್ದಾರೆ.

ಇವರು ನಟಿಸಿದ ಪ್ರಮುಖ ನಾಟಕಗಳಾದ ಬೈಯ ಮಲ್ಲಿಗೆ, ಗಂಗಾರಾಮು, ಗಂಗೆ ಗೌರಿ, ಸರಸ್ವತಿ, ತುಂಗಭದ್ರಾ, ಮೇಘ ಮುರಾರಿ, ಅಜ್ಜಿಗೆ ಎರ್ಲಾ ಇಜ್ಜಿ, ಗುತ್ತುದ ಇಲ್ಲ್, ಭೈರನ ಕುರಲ್, ಎನ್ನ ಕಥೆ ಬರೆಪರ, ಎರ್ಲಾ ಉಲ್ಲೇರ ಈ ಇಲ್ಲಾ, ತೆಲಿಪೆರಲಾ ಅತ್ತ್ ಬುಲಿಪೆರಲಾ ಅತ್ತ್, ದೇವತೆ, ಬದುಕು ಒಂಜಿ ನಾಟಕ, ಉಡಲ್ ಮೊಕೆದ ಕಡಲು, ಸಂಸಾರ ದೊಂಜಿ ಅಪಸ್ವರ, ಮಲ್ದೇದಿ, ಪೊನ್ನು ಒಂಜಿ ಪುದೆ, ಗಗ್ಗರೆ, ನಾಗ ನೆರೆಲ್, ನಾಗಬನ, ನಾಗನಿಧಿ, ಈರ್ ಎರ್ ಇಂಬೇರೆ, ದಾರೇದ ಸಿರಿ, ಕುಂಕುಮ, ಶನೇಶ್ವರ ಮಹಾತ್ಮೆ ಮುಂತಾದ ನೂರಾರು ಯಶಸ್ವಿ ನಾಟಕಗಳಲ್ಲಿ ಪ್ರಮುಖ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಅಲ್ಲದೆ, ಖ್ಯಾತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಕಲಾ ಸಂಗಮ ತಂಡದ ಸೂಪರ್ ಹಿಟ್ ನಾಟಕಗಳಾದ ‘ಒರಿಯರ್ದೊರಿ ಅಸಲ್ ಭಾಗ-2’ ಮತ್ತು ‘ಕೊಲ್ಯೂರು ಮೂಕಾಂಬಿಕೆ’ ನಾಟಕಗಳಲ್ಲಿನ ಇವರ ಅಭಿನಯ ರಂಗಭೂಮಿಯ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ. ಹತ್ತು ನಿಮಿಷದಲ್ಲಿ ಬರೋಬ್ಬರಿ 12 ಸೀರೆಗಳನ್ನು ಒಂದು ನೃತ್ಯದಲ್ಲಿ ಬದಲಾಯಿಸಿ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ಜನರನ್ನು ಚಕಿತಗೊಳಿಸಿದ ಕೀರ್ತಿ ಇವರದ್ದಾಗಿದೆ. ಕಿರುತೆರೆಯಲ್ಲೂ ಹೆಜ್ಜೆ ಇಟ್ಟಿರುವ ಇವರು ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಧಾರಾವಾಹಿ ‘ಫಿಫ್ಟಿ ಫಿಫ್ಟಿ ಕನ್ನಡ’ ಮತ್ತು ಕನ್ನಡ ಚಲನಚಿತ್ರ ‘ಲಕ್ಷ್ಮಣ’ ದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕರಾವಳಿಯ ಹೆಮ್ಮೆಯ ಕಲಾ ರಾಯಭಾರಿ:
ದಯಾನಂದ ಕುಂತೂರು ಅವರ ಕಲಾ ಪ್ರೌಢಿಮೆ ಕೇವಲ ಕರಾವಳಿ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇವರು ಕರ್ನಾಟಕ ಸಾಂಸ್ಕೃತಿಕ ಇಲಾಖೆಯ ವತಿಯಿಂದ ರಾಜ್ಯದ ಅಧಿಕೃತ ಪ್ರತಿನಿಧಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ನಾಡಿನ ಕೀರ್ತಿಯನ್ನು ದೇಶದ ಗಡಿಯಲ್ಲಿ ಹೆಚ್ಚಿಸಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಾದ ದುಬೈ, ಅಬುಧಾಬಿ, ಮತ್ತು ಓಮನ್ ದೇಶಗಳಲ್ಲೂ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯ ರಾಯಭಾರಿಯಾಗಿದ್ದಾರೆ. ಇಂದಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಗಳ ಟ್ಯಾಬ್ಲೋಗಳಲ್ಲಿ (ಸ್ತಬ್ಧಚಿತ್ರ) ಇವರ ಸ್ತ್ರೀ ವೇಷಧಾರಿಯ ರೂಪಕ್ಕೆ ಅತ್ಯಂತ ಅಪಾರ ಬೇಡಿಕೆಯಿದೆ. ಯಕ್ಷಗಾನ ರಂಗದಲ್ಲೂ ಇವರು ತಮ್ಮ ಚತುರತೆಯನ್ನು ತೋರಿದ್ದಾರೆ.

ಹುಡುಕಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು:
ದಯಾನಂದ ಕುಂತೂರು ಅವರ ಸುದೀರ್ಘ 4 ದಶಕಗಳ ಕಲಾ ಸೇವೆಯನ್ನು ಗುರುತಿಸಿ ನೂರಾರು ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ:

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2022): ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುನ್ನತ ನಾಗರಿಕ ಗೌರವ.

ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಜಾಗತಿಕ ಮಟ್ಟದ ಸಾಧನೆಗಾಗಿ ಸಂದ ಪ್ರತಿಷ್ಠಿತ ಪುರಸ್ಕಾರ.

ರಂಗಭೂಮಿ ಕಲಾ ಸೇವಾರತ್ನ ಪ್ರಶಸ್ತಿ: ಕನ್ನಡ ಫಿಲಂ ಚೇಂಬರ್ (ರಿ) ಬೆಂಗಳೂರು ಇವರಿಂದ ರಾಜ್ಯ ಮಟ್ಟದ ಗೌರವ.

ರಾಜ್ಯಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ: ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಇವರಿಂದ ಸನ್ಮಾನ.

ಸಾಯಿ ಕಲಾವಿದೆರ್‌ ಸಂಸ್ಥೆ (ರಿ) ಕುಡ್ಲ ಇವರಿಂದ ಸಾಯಿ ಕಲಾಶ್ರೀ ಪ್ರಶಸ್ತಿ

ಬಿರುದು ಸನ್ಮಾನಗಳು:

ಬಾಲ್ಯ ಮೂಕಾಂಬಿಕೆ ಕ್ಷೇತ್ರ ಪಾಲ್ತಿಮಾರ್ ಇವರಿಂದ “ತುಳುನಾಡ ಅಭಿನೇತ್ರಿ” ಬಿರುದು.

ಜಾತ್ಯತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರಿಂದ “ನಾಟ್ಯಮಯೂರಿ” ಬಿರುದು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ನಾಟಕ ರಂಗದ ಮಿನುಗುತಾರೆ” ಗೌರವ.

ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರಿಂದ “ಕಲಾರತ್ನ ಮಣಿ” ಬಿರುದು.

ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ಇವರಿಂದ “ಅಗ್ನಿದುರ್ಗೆ ಪುರಸ್ಕಾರ”.

ದ.ಕ.ಜ.ಪಂ. ಉ.ಹಿ.ಪ್ರಾ. ಶಾಲೆ ಕುಂತೂರು ಇವರಿಂದ “ಕಲಾರತ್ನ ಮಗ” ಗೌರವ.

ಮಂಗಳೂರಿನ ಪ್ರಸಿದ್ಧ ನಾಟಕ ತಂಡಗಳಾದ ಧರಿತ್ರಿ ಕಲಾವಿದೆರ್, ತುಳುವೇರ್ ತುಡರ್, ಕಲಾ ಸಂಗಮ, ತುಳುವೇರ್ ಉಡಲ್ ಜೋಡುಕಲ್ಲು, ಸಾಯಿ ಕಲಾವಿದರ್ ಕುಡ್ಲ, ತ್ರಿನೇತ್ರ ಕಲಾವಿದರ್ ಕುಡ್ಲ ಸೇರಿದಂತೆ ಹಲವಾರು ಪ್ರತಿಷ್ಠಿತ ಕಲಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಅಪ್ಪಟ ರಂಗ ಕಾಯಕ ಯೋಗಿಯಾಗಿ, ಅಹರ್ನಿಷಿ ಕಲೆಯನ್ನೇ ಉಸಿರಾಡುತ್ತಿರುವ ಶ್ರೀ ದಯಾನಂದ ಕುಂತೂರು ಅವರಿಗೆ ಲಭಿಸಿರುವ ಈ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯು ಅವರ ಕಠಿಣ ಪರಿಶ್ರಮ ಮತ್ತು ಕಲಾ ಭಕ್ತಿಗೆ ಸಂದ ನೈಜ ಗೌರವವಾಗಿದೆ. ಕಲಾಮಾತೆಯ ಕೃಪೆ ಇವರ ಮೇಲೆ ಸದಾ ಇರಲಿ, ದೇವರು ಇವರಿಗೆ ಆಯುಷ್ಯ, ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ, ಇವರಿಂದ ರಂಗಭೂಮಿಗೆ ಮತ್ತಷ್ಟು ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದು ನಾಡಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.




Continue Reading

Trending

Copyright © 2025 Deevatige

error: Content is protected !!